ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಶಾಶ್ವತ ಸಂತೋಷದ ನೆಲೆ

Last Updated 23 ಜೂನ್ 2020, 19:30 IST
ಅಕ್ಷರ ಗಾತ್ರ

ಹಿಂದೆ ಬ್ರಹ್ಮದತ್ತ ವಾರಾಣಸಿಯಲ್ಲಿ ರಾಜ್ಯಭಾರ ಮಾಡುತ್ತಿದ್ದಾಗ ಅಲ್ಲಿಂದ ಸ್ವಲ್ಪ ದೂರದ ನಗರದಲ್ಲಿ ಸಾವಿರ ಪರಿವಾರದ ಬಡಗಿಗಳಿದ್ದರು. ನಗರದ ಜನ ಅವರಿಂದ ಮರದ ವಸ್ತುಗಳನ್ನು ಮಾಡಿಸಿಕೊಳ್ಳಲು ಬಂದಾಗ ಇವರು ಒಪ್ಪಿ ಅವರಿಂದ ಮುಂಚಿತವಾಗಿಯೇ ಹಣವನ್ನು ಪಡೆಯುತ್ತಿದ್ದರು. ಆದರೆ ಅವರ ಕೆಲಸಗಳನ್ನು ಮಾಡಿ ಕೊಡಲಿಲ್ಲ. ಹೀಗಾಗಿ ಹಣವನ್ನು ಕೊಟ್ಟವರು ಪೀಡಿಸತೊಡಗಿದರು. ಅದಕ್ಕೆ ಬಡಗಿಗಳು ಯಾರಿಗೂ ತಿಳಿಯದಂತೆ ಕಾಡಿನಿಂದ ಮರ ತಂದು ದೊಡ್ಡ ಹಡಗನ್ನು ನಿರ್ಮಿಸಿದರು. ಒಂದು ರಾತ್ರಿ ತಮ್ಮ ಪರಿವಾರದವರನ್ನೆಲ್ಲ ಕರೆದುಕೊಂಡು ಹಡಗಿನಲ್ಲಿ ಕುಳಿತು ಸಮುದ್ರದಲ್ಲಿ ಹೊರಟುಬಿಟ್ಟರು. ನಾಲ್ಕಾರು ದಿನ ಪ್ರಯಾಣ ಮಾಡುತ್ತ ಒಂದು ದ್ವೀಪಕ್ಕೆ ಬಂದು ನಿಂತರು. ಅದೊಂದು ಸಮೃದ್ಧವಾದ ದ್ವೀಪ. ಅಲ್ಲಿ ಮಾವು, ಹಲಸು, ಕಬ್ಬು, ತೆಂಗು ಮುಂತಾದ ಮರಗಳಿಂದ ಶ್ರೀಮಂತವಾಗಿತ್ತು. ಇವರು ಅಲ್ಲಿ ಸೇರುವುದರೊಳಗೆ ಒಬ್ಬ ಮನುಷ್ಯ ತನ್ನ ಹಡಗು ಒಡೆದದ್ದರಿಂದ ಅಲ್ಲಿ ಬಂದು ಸೇರಿದ್ದ. ಅವನನ್ನು ಕಂಡು ಬಡಗಿಗಳಿಗೆ ಆಶ್ಚರ್ಯವಾಯಿತು. ಆತ ‘ಈ ದ್ವೀಪದಲ್ಲಿ ಯಾರೂ ಇಲ್ಲ. ನೀವು ಸುಖವಾಗಿರಬಹುದು. ಆದರೆ ಈ ದ್ವೀಪದ ಒಡೆಯರು ಅಮನುಷ್ಯರು. ಅವರು ಮನುಷ್ಯರ ಮಲ-ಮೂತ್ರಗಳನ್ನು ಕಂಡರೆ ಕೋಪ ಮಾಡಿಕೊಳ್ಳುತ್ತಾರೆ. ಆದ್ದರಿಂದ ನೀವು ಮಲ-ಮೂತ್ರಗಳನ್ನು ಮಣ್ಣಿನಿಂದ ಮುಚ್ಚಿಬಿಡಿ. ಆಗ ನಿಮಗೆ ಅವರು ಯಾವ ತೊಂದರೆಯನ್ನು ಕೊಡುವುದಿಲ್ಲ’ ಎಂದ.

ಬಡಗಿಗಳು ಅಲ್ಲಿಯೇ ಸಂತೋಷವಾಗಿದ್ದರು. ಆದರೆ ತಾವೇ ಮಾಡಿದ ಮದಿರೆಯನ್ನು ಕುಡಿದು ಉನ್ಮತ್ತರಾದರು, ಕೆಲಸವಿಲ್ಲದೆ ಸುಮ್ಮನೆ ತಿಂದುಂಡು ಸ್ಥೂಲಕಾಯರಾದರು. ಕಂಡಕಂಡಲ್ಲಿ ಮಲಮೂತ್ರಗಳನ್ನು ವಿಸರ್ಜಿಸಿದರು. ಇದರಿಂದ ಒಡೆಯರಾದ ಅಮನುಷ್ಯರಿಗೆ ಕೋಪ ಬಂದು ಮುಂದಿನ ಹುಣ್ಣಿಮೆಯ ದಿನ ಇಡೀ ದ್ವೀಪವನ್ನು ಸಮುದ್ರದಲ್ಲಿ ಮುಳುಗಿಸಬೇಕೆಂದು ತೀರ್ಮಾನಿಸಿದರು. ಆ ಅಮನುಷ್ಯರಲ್ಲಿ ಒಬ್ಬಾತ ಕರುಣಿ. ಒಂದು ಸಂಜೆ ಹೊರಗೆ ಬಂದು ಹುಣ್ಣಿಮೆಯ ದಿನ ದ್ವೀಪ ಮುಳುಗುವುದನ್ನು ಘೋಷಿಸಿದ. ಮತ್ತೊಬ್ಬ ಅಮನುಷ್ಯ ಕಠೋರಿ. ಈ ಪ್ರಮಾದಿಗಳು ತಪ್ಪಿಸಿಕೊಂಡು ಹೋಗಬಾರದೆಂದು ಅವನೂ ಘೋಷಣೆ ಮಾಡಿದ, ‘ಯಾರೂ ಭಯಪಡಬೇಕಿಲ್ಲ. ನೀವು ನಿಶ್ಚಿಂತರಾಗಿ ಇರಬಹುದು’.

ಈ ಬಡಗಿಗಳಿಗೆ ಇಬ್ಬರು ನಾಯಕರು. ಒಬ್ಬ ತನ್ನ ತಂಡವನ್ನು ಕರೆದು ಹೇಳಿದ, ‘ಒಬ್ಬ ದೇವತೆ ದ್ವೀಪ ಮುಳುಗುತ್ತದೆ ಎಂದ. ಮತ್ತೊಬ್ಬ ಮುಳುಗುವುದಿಲ್ಲವೆಂದ. ಆದ್ದರಿಂದ ನಾವೊಂದು ಒಳ್ಳೆಯ ನಾವೆಯನ್ನು ಮಾಡಿ ಇಡೋಣ. ದ್ವೀಪ ಮುಳುಗುವಂತೆ ಕಂಡರೆ ಹೊರಟು ಬಿಡೋಣ, ಇಲ್ಲದೆ ಹೋದರೆ ನಾವೆಯನ್ನು ಕಟ್ಟಿ ಇಲ್ಲಿಯೇ ಇರೋಣ’. ಮತ್ತೊಬ್ಬ ನಾಯಕ ದ್ವೀಪ ಮುಳುಗುವುದಿಲ್ಲವೆಂಬ ಭರವಸೆಯಲ್ಲಿ ನಿರಾಳವಾಗಿ ಇದ್ದುಬಿಟ್ಟ. ಹುಣ್ಣಿಮೆಯ ದಿನ ಸಮುದ್ರ ಹಿಂದೆ ಹಿಂದೆ ಸರಿಯತೊಡಗಿತು. ಕುಡಿತದಲ್ಲಿ ಮುಳುಗಿದ್ದ ನಾಯಕ, ಸಮುದ್ರ ತಮಗೆ ಹೆದರಿ ಹಿಂದಕ್ಕೆ ಹೋಗುತ್ತಿದೆ ಎಂದು ನಕ್ಕ. ಮತ್ತೊಬ್ಬ ಬುದ್ಧಿವಂತ ನಾಯಕ ತನ್ನ ಗುಂಪಿನ ಎಲ್ಲರನ್ನು ಹೊರಡಿಸಿ ನಾವೆಯಲ್ಲಿ ಕೂರಿಸಿಕೊಂಡು ಹೊರಡಿಸಿಯೇ ಬಿಟ್ಟ. ಮುಂದೆ ಒಂದು ತಾಸಿನಲ್ಲಿ ರಭಸದಿಂದ ನುಗ್ಗಿ ಬಂದ ಸಮುದ್ರ ದ್ವೀಪವನ್ನು ಮತ್ತು ಅದರಲ್ಲಿದ್ದ ವಿಲಾಸಿ ಬಡಿಗರನ್ನು ಮುಳುಗಿಸಿಬಿಟ್ಟಿತು. ಬುದ್ಧಿವಂತ ಬಡಗಿ ಮತ್ತವನ ಪರಿವಾರ ಮತ್ತೆ ತಮ್ಮ ನಗರಕ್ಕೆ ಬಂದು ಪ್ರಾಮಾಣಿಕವಾಗಿ, ಪರಿಶ್ರಮದಿಂದ ದುಡಿಯುತ್ತ ಸಂತೋಷದಿಂದ ಬದುಕಿದರು.

ಬರೀ ಸಂತೋಷ ಎಂದಿಗೂ ದೊರಕಲಾರದು. ಅದು ಬುದ್ಧಿವಂತಿಕೆ ಮತ್ತು ಪರಿಶ್ರಮದ ಆಧಾರದ ಮೇಲಿದ್ದಾಗ ಮಾತ್ರ ಶಾಶ್ವತವಾಗಿ ನೆಲೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT