ಶನಿವಾರ, ಅಕ್ಟೋಬರ್ 31, 2020
27 °C

ಬುದ್ಧನ ಜಾತಕ ಕಥೆಗಳು: ರಾಜನ ತೀರ್ಮಾನ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಹಿಂದೆ ಕುರುದೇಶದಲ್ಲಿ ರೇಣು ಎಂಬ ರಾಜ ಆಡಳಿತ ನಡೆಸುತ್ತಿದ್ದ. ಒಂದು ವರ್ಷ ಮಳೆಗಾಲ ಪ್ರಾರಂಭ ಕಾಲದಲ್ಲಿ ಹಿಮಾಲಯದಿಂದ ಮಹಾರಕ್ಷಿತ ಎಂಬ ತಪಸ್ವಿ ತನ್ನ ಐದು ನೂರು ಜನ ಶಿಷ್ಯರೊಂದಿಗೆ ಅಲ್ಲಿಗೆ ಬಂದ. ಮಳೆಗಾಲ ಮುಗಿಯುವವರೆಗೆ ಅಲ್ಲಿರುವುದು ಅವನ ಚಿಂತನೆ. ಈ ವಿಷಯವನ್ನು ಕೇಳಿ ರಾಜ ಅವರನ್ನು ರಾಜೋದ್ಯಾನಕ್ಕೆ ಕರೆದೊಯ್ದು ಅವರಿಗೆ ಅಲ್ಲಿರಲು ತಕ್ಕ ವ್ಯವಸ್ಥೆ ಮಾಡಿ, ನಾಲ್ಕು ತಿಂಗಳುಗಳ ಕಾಲ ಅವರನ್ನು ಚೆನ್ನಾಗಿ ನೋಡಿಕೊಂಡ. ಮಳೆಗಾಲ ಮುಗಿದ ಮೇಲೆ ಗುರು ಮಹಾರಕ್ಷಿತ ಮತ್ತೆ ಹಿಮಾಲಯಕ್ಕೆ ಹೊರಟು ನಿಂತ. ಅವರನ್ನು ಕಳಿಸಲು ಬಂದ ರಾಜ-ರಾಣಿಯರನ್ನು ಆಶೀರ್ವದಿಸಿದ.

ರಾಜನಿಗೆ ಮಕ್ಕಳಿರಲಿಲ್ಲ. ರಾಜ-ರಾಣಿಯರು ಯಾವ ವ್ರತಗಳನ್ನು ಮಾಡಿದರೂ ಪುತ್ರ ಸಂತಾನವಾಗಿರಲಿಲ್ಲ. ಈ ವಿಷಯ ಮಹಾರಕ್ಷಿತನಿಗೆ ತಿಳಿದಿತ್ತು. ರಾಜನಿಂದ ಬೀಳ್ಕೊಟ್ಟು ಹೊರಟಾಗ ದಾರಿಯಲ್ಲಿ ವಿಶ್ರಾಂತಿಗಾಗಿ ಮರದ ಕೆಳಗೆ ಕುಳಿತಿದ್ದರು. ಆಗ ಒಬ್ಬ ಋಷಿ, ‘ಗುರುಗಳೇ ರಾಜನಿಗೆ ಮಕ್ಕಳಿಲ್ಲವೆಂಬ ಚಿಂತೆ ಇದೆ. ಅವರಿಗೆ ಮಕ್ಕಳಾಗುವ ಯೋಗವಿಲ್ಲವೇ?’ ಎಂದು ಕೇಳಿದ. ಗುರುಗಳು ಒಂದು ಕ್ಷಣ ಕಣ್ಣುಮುಚ್ಚಿ ಧ್ಯಾನಿಸಿ, ‘ಇಂದು ಬೆಳಗಿನ ಜಾವದಲ್ಲೇ ದೇವಪುತ್ರ ದೇವಲೋಕದಿಂದ ಇಳಿದು ಪಟ್ಟಮಹಿಷಿಯ ಗರ್ಭವನ್ನು ಸೇರಿದ್ದಾನೆ’ ಎಂದರು.

ಇದನ್ನು ಕೇಳಿದ ಒಬ್ಬ ಸನ್ಯಾಸಿಗೆ ಆಸೆ ಹುಟ್ಟಿತು. ಆತ ಅನಾರೋಗ್ಯದ ನೆಪ ಹೇಳಿ ಆ ಋಷಿಗಳೊಂದಿಗೆ ಮುಂದೆ ಸಾಗದೆ ಮರಳಿ ರಾಜನ ಬಳಿಗೆ ಓಡಿ ಬಂದ. ರಾಜ ಆಶ್ಚರ್ಯದಿಂದ ಮರಳಿ ಬಂದ ಕಾರಣವನ್ನು ಕೇಳಿದ. ಆಗ ಆ ಕಪಟ ಋಷಿ. ‘ನಾನು ಧ್ಯಾನದಲ್ಲಿ ನೋಡಿ ತಿಳಿದಾಗ ದೇವಪುತ್ರ ಮಹಾರಾಣಿಯ ಗರ್ಭ ಸೇರಿದ್ದನ್ನು ಕಂಡೆ. ನಿಮಗೆ ಸುಪುತ್ರ ಜನಿಸುತ್ತಾನೆ’ ಎಂದು ಹೇಳಿದ. ರಾಜನಿಗೆ ಅತ್ಯಂತ ಹರ್ಷವಾಗಿ ಅವನಿಗೆ ಇಡೀ ರಾಜೋದ್ಯಾನವನ್ನೇ ಕೊಟ್ಟು ಮರ್ಯಾದೆ ಮಾಡಿ ಇಟ್ಟುಕೊಂಡು ಅವನಿಗೆ ‘ದಿವ್ಯಚಕ್ಷ’ ಎಂಬ ಬಿರುದುಕೊಟ್ಟ.


ಗುರುರಾಜ ಕರಜಗಿ

ಕಪಟ ಸನ್ಯಾಸಿಗೆ ತುಂಬ ಅನುಕೂಲವೇ ಆಯಿತು. ಆಗ ಇಡೀ ಉದ್ಯಾನವನ್ನು ತೋಟದಂತೆ ಮಾಡಿಕೊಂಡು ಸೇವಕರಿಂದ ತರಕಾರಿ ಬೆಳೆಸಿ, ಮಾರಿ, ದುಡ್ಡು ಮಾಡುತ್ತಿದ್ದ. ರಾಜನಿಗೆ ಮಗ ಹುಟ್ಟಿದ. ಅವನನ್ನು ಸೋಮನಸ್ವ ಕುಮಾರ ಎಂದು ಕರೆದರು. ಅವನು ಏಳೆಂಟು ವರ್ಷದವನಾದಾಗ ಒಂದು ದಿನ ರಾಜೋದ್ಯಾನಕ್ಕೆ ಹೋದಾಗ ಕಪಟ ಸನ್ಯಾಸಿಯ ನಡೆಯನ್ನು ಕಂಡು ಅವನಿಗೆ ಎಚ್ಚರಿಕೆ ನೀಡಿದ.

ಕಪಟ ಋಷಿಗೆ ಚಿಂತೆಯಾಯಿತು. ಈಗಲೇ ಹೀಗಿರುವ ಈತ ದೊಡ್ಡವನಾದ ಮೇಲೆ ನನ್ನನ್ನು ಓಡಿಸಿಯೇ ಬಿಡುತ್ತಾನೆ. ಈಗಲೇ ಇವನನ್ನು ಕೊಲ್ಲಿಸಿ ಬಿಡಬೇಕು ಎಂದು ತೀರ್ಮಾನಿಸಿದ. ಸಂಜೆಯ ಹೊತ್ತಿಗೆ ತನ್ನ ಬಟ್ಟೆಯನ್ನು ಹರಿದುಕೊಂಡು, ಕೂದಲು ಹರಡಿಕೊಂಡು ನೆಲದ ಮೇಲೆ ಬಿದ್ದು ಒದ್ದಾಡತೊಡಗಿದ. ರಾಜನಿಗೆ ಸುದ್ದಿ ತಿಳಿದು ಓಡಿ ಬಂದ. ಋಷಿ ಅಳುತ್ತ, ‘ರಾಜಕುಮಾರ ತನ್ನನ್ನು ಹೊಡೆದು ಅಪಮಾನ ಮಾಡಿದ’ ಎಂದು ಹೇಳಿದ. ಸಿಟ್ಟಿನ ಭರದಲ್ಲಿ, ತನಗೆ ಈ ಕಪಟ ಋಷಿಯ ಮೇಲಿದ್ದ ಶ್ರದ್ಧೆಯಿಂದ ಸೈನಿಕರಿಗೆ ಹೇಳಿದ, ‘ರಾಜಕುಮಾರನನ್ನು ಎಳೆದುಕೊಂಡು ಬಂದು ನನ್ನ ಮುಂದೆಯೇ ಕತ್ತರಿಸಿಬಿಡಿ’. ಅವರು ರಾಜಕುಮಾರನನ್ನು ಕರೆತಂದರು. ಆಗ ರಾಜಕುಮಾರ ಕಪಟ ಋಷಿಯ ನಡೆಯನ್ನು ಸಾಕ್ಷಿಗಳ ಮೂಲಕ ಪ್ರಸ್ತುತಪಡಿಸಿದ. ನಂತರ ತಂದೆಗೆ ಹೇಳಿದ, ‘ತಂದೆ, ನಾನಿನ್ನು ರಾಜ್ಯದಲ್ಲಿ ಇರಲಾರೆ. ಹಿಮಾಲಯಕ್ಕೆ ಹೋಗಿ ಪ್ರವ್ರಜಿತನಾಗುತ್ತೇನೆ’. ರಾಜ-ರಾಣಿಯರು ಎಷ್ಟು ಬೇಡಿದರೂ ಕೇಳಲಿಲ್ಲ.

‘ಯಾವ ರಾಜ ಎಲ್ಲವನ್ನೂ ಯೋಚಿಸದೆ ತೀರ್ಮಾನ ತೆಗೆದುಕೊಳ್ಳುತ್ತಾನೋ, ಅವನ ರಾಜ್ಯದಲ್ಲಿರುವುದು ಕ್ಷೇಮವಲ್ಲ’ ಹೀಗೆ ಹೇಳಿ ಹೊರಟುಹೋದ. ಆ ಮಾತು ಇಂದಿಗೂ ಸರಿಯೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.