ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ವಿವೇಕದ ದೀಪ

Last Updated 2 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಧರ್ಮಸಂಕಟದಿ ಮನ ತಲ್ಲಣಿಸುತಿರುವಂದು |
ನಿರ್ಮಥಿಸು ನಿನ್ನಾತ್ಮವನೆ ಮಮತೆ ಬಿಟ್ಟು ||
ನಿರ್ಮಮದ ಸದ್ವಿವೇಕದ ದೀಪಕಿಂತ ನೀಂ |
ನೆಮ್ಮಲಿನ್ನೇನಿಹುದೊ ? – ಮಂಕುತಿಮ್ಮ || 555 ||

ಪದ-ಅರ್ಥ: ನಿರ್ಮಥಿಸು=ಮಥನ ಮಾಡು, ನಿನ್ನಾತ್ಮವನೆ=ನಿನ್ನ+ಆತ್ಮವನೆ, ನಿರ್ಮಮದ=ಮಮಕಾರರಹಿತವಾದ, ನೆಮ್ಮಲಿನ್ನೇನಿಹುದೊ= ನೆಮ್ಮಲು(ನಂಬಲು)+ಇನ್ನೇನು+ಇಹುದೊ.

ವಾಚ್ಯಾರ್ಥ: ಧರ್ಮಸಂಕಟದಲ್ಲಿ ಮನಸ್ಸು ತಲ್ಲಣಗೊಂಡಾಗ, ಮೋಹವನ್ನು ಬಿಟ್ಟು ನಿನ್ನ ಆತ್ಮವನ್ನೇ ಮಥನಮಾಡು. ಮೋಹರಹಿತವಾದ ವಿವೇಕದ ಬೆಳಕಿಗಿಂತ ನಂಬಲು ಅರ್ಹವಾದದ್ದು ಮತ್ತಾವುದು?

ವಿವರಣೆ: ನಮ್ಮೆಲ್ಲರ ಬದುಕಿನಲ್ಲಿ ಆಗಾಗ ಧರ್ಮಸಂಕಟಗಳು ಮುಂದೆ ಬಂದು ನಿಲ್ಲುತ್ತವೆ. ಯಾವುದು ಸರಿಯಾದ ದಾರಿ ಎಂಬುದು ತಿಳಿಯದಂತಾಗುತ್ತದೆ. ದಾರಿ ಕಾಣದಂತೆ ಮಾಡುವುದು ಮೋಹದ ಪರದೆ. ತಲ್ಲಣ ಹೆಚ್ಚಾಗುವುದು ಮೋಹ ಬಲಿತಾಗ. ನ್ಯಾಯಾಧೀಶ ಕಠಿಣ ನ್ಯಾಯ ಕೊಡಬಲ್ಲ. ಯಾಕೆಂದರೆ ಅಲ್ಲಿ ತನ್ನ ಮೋಹವಿಲ್ಲ. ಆದರೆ ಅದೇ ತನ್ನ ಮಗನ ಬಗ್ಗೆ, ಹೆಂಡತಿಯ ಬಗ್ಗೆ ತೀರ್ಮಾನ ಕೊಡಬೇಕಾದರೆ ಮನಸ್ಸು ಬೆಂದು ಹೋಗುತ್ತದೆ. ಇಲ್ಲಿ ತೀರ್ಮಾನ ಕಷ್ಟವಲ್ಲ, ಯಾರ ವಿರುದ್ಧ ತೀರ್ಮಾನ ಎಂಬುದು ಕಷ್ಟ. ಅಲ್ಲಿ ನಾನು, ನನ್ನದು ಎಂಬ ಮೋಹ ಬಿಗಿದಾಗ ಯಾವ ತೀರ್ಮಾನವೂ ತಲ್ಲಣವನ್ನುಂಟು ಮಾಡುತ್ತದೆ.

ಲಕ್ಷ್ಮಣ ಅಣ್ಣನೊಂದಿಗೆ ಕಾಡಿಗೆ ಹೊರಟ. ಸುಲಭವಾಯಿತೇ ತೀರ್ಮಾನ? ಅವನು ಕಾಡಿಗೆ ಹೋಗುವುದು ತಂದೆಯ ಅಪ್ಪಣೆಯಾಗಿರಲಿಲ್ಲ. ಅದು ತನ್ನ ಸ್ವಂತದ ತೀರ್ಮಾನ. ಒಂದೆಡೆಗೆ ಹೊಸ ಹೆಂಡತಿ, ಭೋಗ ಭಾಗ್ಯಗಳು, ಮತ್ತೊಂದೆಡೆಗೆ ಅಣ್ಣ-ಅತ್ತಿಗೆಯರ ಸೇವೆ, ಕಾಡಿನಲ್ಲಿ, ಅದೂ ಹದಿನಾಲ್ಕು ವರ್ಷ! ಲಕ್ಷ್ಮಣ ತನ್ನ ಮೋಹ, ಮಮತೆಗಳನ್ನು ಬದಿಗಿಟ್ಟು ತನ್ನ ಜವಾಬ್ದಾರಿಯನ್ನು ಚಿಂತಿಸಿ, ಲೋಕಕ್ಕೆ ಸುಲಭವೆನ್ನಿಸುವಂತೆ ತೀರ್ಮಾನ ತೆಗೆದುಕೊಂಡು ಅಣ್ಣನನ್ನು ಹಿಂಬಾಲಿಸಿದ. ಇದೇ ಮಮತೆಯನ್ನು ಬಿಟ್ಟು ತನ್ನ ಆತ್ಮವನ್ನು ಮಂಥನ ಮಾಡಿದ ಕ್ರಿಯೆ. ಆಗ ಬಂದ ವಿವೇಕದ ದೀಪವನ್ನು ನಂಬಿ ಆತ ಹೊರಟ.

ವಲ್ಲಭಭಾಯಿ ಪಟೇಲ ಒಬ್ಬ ಯಶಸ್ವಿ ಬ್ಯಾರಿಸ್ಟರ್. ಅಹಮದಾಬಾದಿನಲ್ಲಿ ಒಳ್ಳೆಯ ಪ್ರಾಕ್ಟೀಸ್ ಇತ್ತು. ಸಂಜೆ ಕ್ಲಬ್‌ನಲ್ಲಿ ಕುಳಿತು, ಆಗ ತಾನೇ ದಕ್ಷಿಣ ಆಫ್ರಿಕೆಯಿಂದ ಬಂದಿದ್ದ ಮೋಹನದಾಸ ಗಾಂಧಿಯ ಉಪನ್ಯಾಸ ಕೇಳಿ ತಮಾಷೆ ಮಾಡಿದ್ದುಂಟು. ಈತ ಏನು ಬದಲಾವಣೆ ಮಾಡಿಯಾನು? ಒಂದೆರಡು ಬಾರಿ ಅವರೊಂದಿಗೆ ಕಾಲ ಕಳೆದ ಮೇಲೆ ಚಿಂತನೆ ಬದಲಾಯಿತು. ಈ ಮನುಷ್ಯ ಹೇಳುವುದರಲ್ಲಿ ಏನೋ ಸತ್ಯವಿದೆ. ಸ್ವಂತಕ್ಕೆ ಏನನ್ನೂ ಬಯಸದೆ ದೇಶಕ್ಕೋಸ್ಕರ ಪ್ರಯತ್ನ ಮಾಡುತ್ತಿದ್ದಾನೆ ಎನ್ನಿಸಿತು. ತನ್ನ ಕರ್ತವ್ಯವೇನು? ಒಂದೆಡೆಗೆ ಬ್ಯಾರಿಸ್ಟರ್ ಪದವಿ, ಅದರಿಂದ ಬರುವ ಗೌರವ, ಹಣ, ಅಂತಸ್ತು, ಸುಖ. ಮತ್ತೊಂದೆಡೆಗೆ ಗಾಂಧಿಯೊಡನೆ ಸೇರಿದರೆ ಅನಿಶ್ಚಿತತೆ, ಜೈಲುವಾಸ. ಇದೇ ಧರ್ಮಸಂಕಟದ ಕ್ಷಣಗಳಲ್ಲಿ ವಲ್ಲಭಭಾಯಿ ಚಿಂತಿಸಿದರು. ತನ್ನ ಸ್ವಂತದ, ಮೋಹದ ಆಕರ್ಷಣೆಗಳನ್ನು ಬದಿಗೆ ಸರಿಸಿ, ಆದರ್ಶದ ದೀಪವನ್ನು ಕೈಯಲ್ಲಿ ಹಿಡಿದು ಮೋಹನದಾಸರನ್ನು ಹಿಂಬಾಲಿಸಿದರು. ಈ ನಂಬಿಕೆಯ ದೀಪ ಅವರನ್ನು ಕಾಯ್ದಿತು. ಭಾರತದ ಇತಿಹಾಸದ ಪುಟಗಳಲ್ಲಿ ಅಮರರನ್ನಾಗಿಸಿತು.

ಈ ಕ್ಷಣಗಳು ಕೇವಲ ಮಹಾತ್ಮರ ಜೀವನದಲ್ಲಿ ಮಾತ್ರ ಬರುವವಲ್ಲ. ನಮ್ಮೆಲ್ಲರ ಬದುಕಿನಲ್ಲೂ ಬರುತ್ತವೆ. ಯಾರು ಮಮತೆಯನ್ನು ದೂರವಿಟ್ಟು, ಆತ್ಮವನ್ನು ಮಂಥಿಸಿ ತೀರ್ಮಾನ ತೆಗೆದುಕೊಳ್ಳುತ್ತಾರೋ ಅವರು ಮಹಾತ್ಮರಾಗುತ್ತಾರೆ, ಮೋಹದ ಜಾಲದಲ್ಲಿ ಸಿಕ್ಕು ಪಾರಾಗದವರು ಕಳೆದು ಹೋಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT