ಸೋಮವಾರ, ಸೆಪ್ಟೆಂಬರ್ 20, 2021
21 °C

ಜಡೆ ಕೋಲಾಟ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಓರರ‍್ಪನಿಚ್ಛೆಗುಣವೊಂದೊಂದು ಬಗೆ ಜಗದಿ |

ಭಾರಮೋರರ‍್ಪನಿಂಗೊಂದೊಂದು ತೆರದಿ ||
ದಾರಗಳಿನವರ ವಿಧಿ ಪಿಡಿದು ಕುಣಿದಾಡಿಸಲು |
ನೂರಜಡೆ ಕೋಲಾಟ – ಮಂಕುತಿಮ್ಮ || 334 ||

ಪದ-ಅರ್ಥ: ಓರರ‍್ಪನಿಚ್ಛೆಗುಣ
ವೊಂದೊಂದು=ಓರರ‍್ಪನ(ಒಬ್ಬೊಬ್ಬನ)+
ಇಚ್ಛೆ+ಗುಣ+ಒಂದೊಂದು, ಭಾರಮೋರರ‍್ಪನಿಂಗೊಂದೊಂದು=ಭಾರ(ಜವಾಬ್ದಾರಿ)+ಓರರ‍್ಪನಿಗೆ(ಒಬ್ಬೊಬ್ಬನಿಗೆ)+ಒಂದೊಂದು, ದಾರಗಳಿ
ನವರ=ದಾರಗಳಿಂ(ದಾರಗಳಿಂದ)+ಅವರ,

ವಾಚ್ಯಾರ್ಥ: ಈ ಜಗತ್ತಿನಲ್ಲಿ ಒಬ್ಬೊಬ್ಬನ ಇಚ್ಛೆ, ಗುಣಗಳು ಒಂದೊಂದು ರೀತಿಯಾಗಿವೆ. ಅದರಂತೆ ಒಬ್ಬೊಬ್ಬನಿಗೆ ಅವನವನ ಜವಾಬ್ದಾರಿಗಳೂ ಬೇರೆ ತೆರನಾಗಿವೆ. ದಾರದಲ್ಲಿ ಅವರನ್ನು ಹಿಡಿದು ಕುಣಿದಾಡಿಸುತ್ತಿರೆ ಬದುಕೊಂದು ನೂರು ಜಡೆ ಕೋಲಾಟವಿದ್ದಂತೆ.

ವಿವರಣೆ: ಈ ಜಗತ್ತು ಒಂದು ಅದ್ಭುತ ಮಾಯಾಜಾಲ. ಇಲ್ಲಿ ಏನೇನು ನಡೆದೀತು ಎಂಬುದರ ಕಲ್ಪನೆಯನ್ನು ಮಾಡುವುದು ಅಸಾಧ್ಯ. ಇಲ್ಲಿರುವ ಪ್ರತಿಯೊಬ್ಬ ವ್ಯಕ್ತಿ ಒಂದು ವಿಶೇಷ. ಅವನು ಇಡೀ ಪ್ರಪಂಚದಲ್ಲಿ ಏಕಮೇವಾದ್ವಿತೀಯ. ಅವನ ಹಾಗೆ ಮತ್ತೆ ಯಾರೂ ಇಲ್ಲ. ಅವನ ಹಾಗೆ ದೇಹ, ಮನಸ್ಸು, ಬುದ್ಧಿ, ಕುಶಲತೆಯನ್ನು ಹೊಂದಿದ ಮತ್ತೊಂದು ಜೀವಿ ಇರುವುದು ಸಾಧ್ಯವೇ ಇಲ್ಲ. ಪ್ರತಿಯೊಬ್ಬನಿಗೂ ಅವನಿಗೇ ಆದ ಗುಣಗಳಿವೆ, ಇಚ್ಛೆಗಳಿವೆ, ಕನಸುಗಳಿವೆ, ಆದರ್ಶಗಳಿವೆ. ಈ ವಿವಿಧತೆಯಿಂದಲೇ ಪ್ರಪಂಚಕ್ಕೆ ಮೆರಗು.

ಇದರಂತೆಯೇ ಪ್ರತಿಯೊಬ್ಬ ವ್ಯಕ್ತಿಗೆ ಅವನದೇ ಆದ ಜವಾಬ್ದಾರಿ ಇದೆ. ಅದು ದೊಡ್ಡದು, ಸಣ್ಣದು ಎಂಬುದು ಅಪ್ರಸ್ತುತ. ಆ ವ್ಯಕ್ತಿಗೆ ತನ್ನ ಜವಾಬ್ದಾರಿ ಮುಖ್ಯವೇ. ಮುಖ್ಯಮಂತ್ರಿಗೆ ತನ್ನ ಕೆಲಸ ಬಹಳ ಮುಖ್ಯವೆನ್ನಿಸಿದರೆ ಅವರ ಕಾರಿನ ಚಾಲಕನಿಗೆ ತನ್ನ ಬದುಕಿನ ಕಾರು ನಡೆಸುವ ಜವಾಬ್ದಾರಿಯೊಂದಿಗೆ ಮುಖ್ಯಮಂತ್ರಿಯನ್ನು ಕಾಪಾಡುವ ಜವಾಬ್ದಾರಿಯೂ ಸೇರಿದೆ. ಪ್ರಪಂಚದಲ್ಲಿ ಇಷ್ಟೊಂದು ಬಗೆಯ ಗುಣಗಳು, ಇಚ್ಛೆಗಳು, ಗುರಿಗಳು ಮತ್ತು ಜವಾಬ್ದಾರಿಗಳು ಸೇರಿಕೊಂಡಿವೆಯಲ್ಲ, ಇದು ನಡೆದೀತಾದರೂ ಹೇಗೆ? ಇದಿಷ್ಟೇ ಸಾಲದೆಂಬಂತೆ ವಿಧಿ ಅವರನ್ನೆಲ್ಲ ಒಂದೊಂದು ದಾರದಲ್ಲಿ ಬಿಗಿದು ಅವುಗಳನ್ನು, ಮೇಲಕ್ಕೆ ಎತ್ತಿ ಕಟ್ಟಿ ತನಗೆ ಮನಬಂದಂತೆ ತಿರುಗಾಡಿಸುತ್ತದೆ. ಹಾಗೆ ತಿರುಗುವಾಗ ದಾರಗಳು ಗೋಜಲಾಗಿ ಒಮ್ಮೆ ನಿಂತೇ ಹೋಗಬಹುದೆ? ಹಾಗೆ ಯಾವಾಗಲೂ ಆಗಿಲ್ಲ. ಪ್ರಪಂಚ ನಡೆದೇ ಇದೆ. ಆದ್ದರಿಂದ ಹೀಗೆ ಗೋಜಲಾದಂತೆ ಕಾಣುವುದು ನಂತರ ಗೋಜಲಿನಿಂದ ಬಿಡಿಸಿಕೊಳ್ಳುವುದು ನಡೆದೇ ಇದೆ. ಈ ಆಟವನ್ನು ಡಿ.ವಿ.ಜಿ ನೂರುಜಡೆ ಕೋಲಾಟ ಎಂದು ವರ್ಣಿಸಿದ್ದಾರೆ.

ಕರ್ನಾಟಕದ ಅತ್ಯಂತ ಜನಪ್ರಿಯ ಜನಪದ ಕಲೆಗಳಲ್ಲಿ ಕೋಲಾಟವೂ ಒಂದು. ಅದರಲ್ಲಿ ಹಲವು ಬಗೆಗಳು. ಮರಗಾಲು ಕೋಲಾಟ, ಚಕ್ರಾಟ, ಮಂಡಿಕೋಲಾಟ, ಕಿಕ್ಕಾಲ ಕೋಲಾಟ, ಮಲಕನ ಕೋಲಾಟ, ಒನಕೆ ಕೋಲಾಟ, ತೊಟ್ಟಿಲು ಕೋಲಾಟ, ಜಡೆ ಕೋಲಾಟ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ರಂಗಮಂಚದ ಮೇಲೆ ಮಧ್ಯದಲ್ಲಿ ಒಂದು ಕೇಂದ್ರದಿಂದ ಅನೇಕ ಹಗ್ಗಗಳನ್ನೋ, ಬಟ್ಟೆಗಳನ್ನೋ ಇಳಿಬಿಡುತ್ತಾರೆ. ಒಬ್ಬೊಬ್ಬರು ಒಂದೊಂದು ಹಗ್ಗವನ್ನು ಕೈಗೆ ಕಟ್ಟಿಕೊಂಡು ಕೋಲಾಟದ ಹಾಡಿನ ತಾಳಕ್ಕೆ ಸರಿಯಾಗಿ ನೃತ್ಯ ಮಾಡುತ್ತ, ಕೋಲು ಹಾಕುತ್ತ ಒಬ್ಬರನ್ನೊಬ್ಬರು ದಾಟುವ ಮೂಲಕ ಕಲಾತ್ಮಕವಾಗಿ ಗಂಟು ಹಾಕುತ್ತಾರೆ. ಜಡೆಯಂತೆ ಹೆಣೆದುಕೊಂಡ ಹಗ್ಗವನ್ನು, ಮತ್ತೆ ಸರಿಯಾದ ವಿರುದ್ಧ ಕ್ರಮದಲ್ಲಿ ಚಲಿಸಿ, ಬಿಡಿಸುತ್ತಾರೆ.

ವಿಧಿ ನಮಗೆ ಕಟ್ಟಿದ ಪ್ರಪಂಚವೆಂಬ ಹಗ್ಗವನ್ನು ಹಿಡಿದುಕೊಂಡು ನಾವೂ ಅಲ್ಲಿ ಸುತ್ತಾಡುತ್ತ, ಗಂಟು ಹಾಕಿಕೊಳ್ಳುತ್ತ, ಬಿಡಿಸಿಕೊಳ್ಳುತ್ತ, ಬದುಕುವುದೆ ಕರ್ತವ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು