ಸೋಮವಾರ, ಜೂನ್ 27, 2022
25 °C

ಬೆರಗಿನ ಬೆಳಕು: ಪ್ರೀತಿಯ ಚಟ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

Prajavani

ಮಾತೆವೊಲೊ ಪಿತನವೊಲೊ ಪತಿಯವೊಲೊ ಸತಿಯವೊಲೊ |
ಭ್ರಾತಸುತಸಖರವೊಲೊ ಪಾತ್ರವೊಂದಕೆ ತಾಂ ||
ಕಾತರಿಸುತಿಹುದು ತನ್ನೆಲ್ಲವನು ಮುಡುಪುಕುಡೆ |
ಪ್ರೀತಿಯಾ ಹುಟ್ಟು ಚಟ – ಮಂಕುತಿಮ್ಮ || 427 ||

ಪದ-ಅರ್ಥ: ಮಾತೆವೊಲೊ=ತಾಯಿಯ ಹಾಗೆಯೋ, ಭ್ರಾತಸುತಸಖರವೊಲೊ=ಭ್ರಾತ(ಸಹೋದರ)+ಸುತ+ಸಖರವೊಲೊ(ಗೆಳೆಯರ ಹಾಗೆಯೇ), ಮುಡುಪುಕುಡೆ=ಮೀಸಲಾಗಿಸು.

ವಾಚ್ಯಾರ್ಥ: ಪ್ರೀತಿಯ ಹುಚ್ಚು ಚಟವೆಂದರೆ, ತಾಯಿ, ತಂದೆ, ಗಂಡ, ಹೆಂಡತಿ, ಸಹೋದರ, ಮಗ, ಸ್ನೇಹಿತ ಹೀಗೆ ಯಾವುದಾದರೂ ಪಾತ್ರವೊಂದನ್ನು ವಹಿಸಿಕೊಂಡು, ತನ್ನೆಲ್ಲವನ್ನು ಮೀಸಲಿಡುವುದಕ್ಕೆ ಕಾತರಿಸುವುದು.

ವಿವರಣೆ: ಪ್ರೀತಿ ಎನ್ನುವುದೊಂದು ಅತ್ಯದ್ಭುತವಾದ ಭಾವನೆ. ಇದೊಂದು ಭಾವನೆ ಇಲ್ಲದಿದ್ದರೆ ಇಡೀ ಪ್ರಪಂಚವೇ ನಿರರ್ಥಕ ಎನ್ನಿಸುತ್ತದೆ. ಅದೊಂದು ಹೃದಯದಾಳದ ತುಡಿತ. ಈ ಪ್ರೀತಿಗೆ ಹಲವಾರು ಮುಖಗಳು. ಸ್ನೇಹ, ವಿಶ್ವಾಸ, ಗೌರವ, ಕರುಣೆ, ಪ್ರೇಮ, ಕಾಮ, ಅನುರಾಗ, ಮಮತೆ ಎಂಬೆಲ್ಲ ಭಾವಗಳೂ ಪ್ರೀತಿಯ ಹಲವು ನೆಲೆಗಳು. ಪ್ರಾಚೀನ ಗ್ರೀಕ್ ತತ್ವಜ್ಞಾನಿಗಳು ಈ ಪ್ರೀತಿಯ ಆರು ಮುಖಗಳನ್ನು ಗುರುತಿಸಿದ್ದಾರೆ. ಅವು ಕೌಟಂಬಿಕ ಪ್ರೀತಿ, ಸ್ನೇಹಪರ ಪ್ರೀತಿ ಅಥವಾ ಪ್ಲಾಟೋನಿಕ್ ಪ್ರೀತಿ, ಪ್ರಣಯ ಪ್ರೀತಿ, ಸ್ಪ-ಪ್ರೀತಿ, ಅತಿಥಿ ಪ್ರೀತಿ ಮತ್ತು ದೈವಿಕ ಪ್ರೀತಿ.

ಒಂದು ಅಮೂರ್ತ ಪರಿಕಲ್ಪನೆಯಾಗಿರುವ ಪ್ರೀತಿ, ಬೇರೊಬ್ಬ ವ್ಯಕ್ತಿಯ ಮೇಲೆ ತೋರುವ ನಯವಾದ ಕಾಳಜಿಯ, ಆಳವಾದ ಮತ್ತು ಅವರ್ಚನೀಯವಾದ ಭಾವನೆಗಳನ್ನು ಸೂಚಿಸುತ್ತದೆ. ಸಮಾನ ನೆಲೆಯಿಂದ ಪ್ರೀತಿ ಒಂದು ಮೆಟ್ಟಿಲು ಮೇಲೆ ಏರಿದರೆ ಅದು ಗೌರವವಾಗುತ್ತದೆ, ಇನ್ನೆರಡು ಮೆಟ್ಟಿಲು ಹಾರಿದರೆ ಭಕ್ತಿಯಾದೀತು. ನಮ್ಮ ನೆಲೆಯಿಂದ ಸ್ವಲ್ಪ ಕೆಳಗಿಳಿದರೆ ಅವು ಮಮತೆ, ಕರುಣೆ, ವಾತ್ಸಲ್ಯ, ದಯೆಗಳಾಗುತ್ತದೆ. ನಮ್ಮ ನೆಲೆಯಲ್ಲೇ ಉಳಿದರೆ ಅದು ಸ್ನೇಹ, ನಂಬಿಕೆ, ವಿಶ್ವಾಸವಾಗುತ್ತದೆ.

ಈ ಪ್ರೀತಿಗೆ, ಕಾಲದ ಚೌಕಟ್ಟಿಲ್ಲ. ಅದು ದೇಶ, ಜಾತಿ, ಭಾಷೆ, ಮತ, ಅಂತಸ್ತುಗಳನ್ನು ಮೀರಿದ್ದು. ಅದಕ್ಕೇ ಮನುಷ್ಯ ಒಂದು ಕ್ಷಣದ ಪ್ರೀತಿಗಾಗಿ, ಪ್ರೀತಿಯ ಸ್ಪರ್ಶಕ್ಕಾಗಿ, ಕರುಣೆಯ ನೋಟಕ್ಕಾಗಿ, ಭರವಸೆಯ ಮಾತಿಗಾಗಿ, ಮತ್ತೊಂದು ಮನುಷ್ಯ ಪ್ರಾಣಿಯನ್ನು ಬಯಸುತ್ತಾನೆ. ಆ ಪ್ರೀತಿಗಾಗಿ ಒದ್ದಾಡುತ್ತಾನೆ. ಇದೊಂದು ಗುಣವಿಲ್ಲದಿದ್ದರೆ ಪ್ರಪಂಚ ಹೇಗಿರಬಹುದಿತ್ತು ಎಂದು ಚಿಂತಿಸುವುದೂ ಕಷ್ಟ. ತಾಯಿ-ತಂದೆಯರ ಪ್ರೀತಿ, ಸಹೋದರರ ಒಲವು, ಸ್ನೇಹಿತರ ಆಪ್ತ ನುಡಿ, ಗಂಡ-ಹೆಂಡಿರ ಆಪ್ತತೆ ಇವು ಯಾವುವೂ ಇಲ್ಲದಿದ್ದರೆ ನಾವು ಸೂತ್ರ ಕಿತ್ತ ಗಾಳಿಪಟವಾಗುತ್ತೇವೆ. ನಮ್ಮನ್ನು ಹಿಡಿದಿಡುವ ಶಕ್ತಿಯೇ ಇಲ್ಲದಾಗುತ್ತದೆ. ಪ್ರೀತಿ ಒಂದು ಅಕ್ಷಯಪಾತ್ರೆ. ಪ್ರತಿಯೊಬ್ಬನಲ್ಲಿ ಇದ್ದೇ ಇರುವ ಈ ಅಕ್ಷಯ ಪಾತ್ರೆ ಸದಾ ತುಂಬುತ್ತಲೇ ಇದ್ದರೂ, ಎಂದಿಗೂ ತುಂಬುವುದಿಲ್ಲ. ಅದು ಹಂಚಿದಷ್ಟೂ ಬೆಳೆಯುತ್ತದೆ. ಹೀಗೆ ಸತತವಾಗಿ ಕೊಡುತ್ತ, ಸ್ವೀಕರಿಸುತ್ತ ಹೋಗುವುದೇ ಪ್ರೀತಿಯ ಹುಚ್ಚು ಚಟ.

ಈ ಪ್ರೀತಿ, ತಾಯಿಯಾಗಿಯೋ, ತಂದೆಯಾಗಿಯೋ, ಗಂಡನಾಗಿಯೋ, ಹೆಂಡತಿಯಾಗಿಯೋ, ಮಗ, ಬಂಧು, ಸ್ನೇಹಿತನಾಗಿಯೋ, ಒಂದು ಪಾತ್ರವನ್ನು ಬದುಕಿನಲ್ಲಿ ವಹಿಸಿಕೊಂಡು ಅದನ್ನು ಹಂಚಿ, ಬಾಚಿ ತಬ್ಬಿಕೊಳ್ಳಲು ಪ್ರಯತ್ನಿಸುತ್ತದೆ. ಅದೊಂದು ಗುಣದಿಂದಲೇ ಜಗತ್ತು ಮಾನವೀಯವಾಗಿರುವುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು