ಮಂಗಳವಾರ, ಸೆಪ್ಟೆಂಬರ್ 28, 2021
21 °C

ಬೆರಗಿನ ಬೆಳಕು: ಬೊಮ್ಮನ ಆಕರ್ಷಣೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಸುಂದರತೆಯೆನುವುದೇಂ? ಜನಕೆ ಮೈಮರೆಯಿಪಾ - |
ನಂದದೊಳಮರುಮವೇಂ ? ವಿಶ್ವ ಚೇತನದಾ ||
ಸ್ಪಂದನವೆ ಸೌಂದರ್ಯಮದುವೆ ಜೀವನ ಮೂಲ |
ಬಂಧುರತೆ ಬೊಮ್ಮನದು – ಮಂಕುತಿಮ್ಮ || 446 ||

ಪದ-ಅರ್ಥ: ಸುಂದರತೆಯೆನುವುದೇಂ= ಸುಂದರತೆ+ಎನುವುದು+ಏಂ(ಏನು), ಮೈಮರೆಯಿಪಾನಂದದೊಳಮರುಮವೇಂ=ಮೈ ಮರೆಯಿಪ (ಮೈ ಮರೆಸುವ)+ಆನಂದದ+ಒಳಮರುಮವೇಂ(ಒಳ ಮರ್ಮವೇನು), ವಿಶ್ವಚೇತನದಾಸ್ಪಂದನವೆ=ವಿಶ್ವಚೇತನದ+ಆಸ್ಪಂದನವೆ
(ಮಿಡಿಯುವಿಕೆ), ಬಂಧುರತೆ=ಆಕರ್ಷಣೆ.

ವಾಚ್ಯಾರ್ಥ: ಸುಂದರತೆ ಎಂದರೇನು? ಜನರು ಮೈಮರೆಯುವಂತೆ ಮಾಡುವ ಆನಂದದ ಒಳಗುಟ್ಟು ಏನು? ವಿಶ್ವ ಚೈತನ್ಯದ ಮಿಡಿತವೇ ಸೌಂದರ್ಯ, ಅದೇ ಜೀವನದ ಮೂಲ. ಅದರ ಅಕರ್ಷಣೆ ಬ್ರಹ್ಮನದು.

ವಿವರಣೆ: ಸೌಂದರ್ಯ ಎಂದರೇನು? ಅದು ಇರುವುದೆಲ್ಲಿ? ಅದು ಭೌತಿಕವೇ ಅಥವಾ ಕೇವಲ ಕಲ್ಪನೆಯೇ? ಒಬ್ಬರಿಗೆ ಅತ್ಯಂತ ಸುಂದರವೆಂದು ಎನ್ನಿಸಿದ್ದು ಮತ್ತೊಬ್ಬರಿಗೆ ಅವಲಕ್ಷಣ ಎನ್ನಿಸೀತು. ನನ್ನ ಪರಿಚಯದ ಹುಡುಗನೊಬ್ಬ ಎರಡು ವರ್ಷ ಹುಡುಗಿಯೊಬ್ಬಳನ್ನು ಪ್ರೀತಿಸಿ ಮದುವೆಯಾದ. ಮದುವೆಗೆ ಹೋದವರಲ್ಲಿ ಬಹುತೇಕರು, ‘ಅಯ್ಯೋ, ಆ ಹುಡುಗಿಯಲ್ಲಿ ಏನು ಕಂಡು ಮದುವೆಯಾದನೋ? ಹುಡುಗ ಅಷ್ಟು ಸುರದ್ರೂಪಿಯಾಗಿದ್ದಾನೆ. ಆದರೆ ಆಕೆಯನ್ನು ಯಾವುದೋ ಕಾಡಿನಿಂದ ಹಿಡಿದು ತಂದಂತಿದೆ’ ಎಂದರು. ಆ ಹುಡುಗನಿಗೆ ಆಕೆ ರಂಭೆಯಂತೆ ಕಂಡಿರಬೇಕಲ್ಲವೆ? ಇಲ್ಲದಿದ್ದರೆ ಆಕೆಯನ್ನು ಯಾಕೆ ಪ್ರೀತಿಸಿ ಮದುವೆಯಾಗುತ್ತಿದ್ದ? ಅದಕ್ಕೇ ಆಂಗ್ಲ ಕವಿಯೊಬ್ಬ ಹೇಳುತ್ತಾನೆ, ‘ಸೌಂದರ್ಯ, ನೋಡುವವರ ಕಣ್ಣಲ್ಲಿದೆ’.

ತಾವು ನಮ್ಮ ದೇಶದಲ್ಲಿ ಯಾವುದೇ ಬೆಟ್ಟದ ಅಥವಾ ಪರ್ವತದ ಶಿಖರ ಪ್ರದೇಶಕ್ಕೆ ಹೋದರೆ ಅಲ್ಲೊಂದು ದೇವಸ್ಥಾನ ಕಾಣುತ್ತದೆ. ಹೊರಗೆ ನಿಂತು ನೋಡಿದರೆ ಪ್ರಕೃತಿಯ ಉಕ್ಕುವ ಸೌಂದರ್ಯ ಹೃದಯ ತಟ್ಟುತ್ತದೆ. ಎಲ್ಲಿ ನೋಡಿದರೂ ಹಸಿರು, ಭೂಮಿಯ ಏರಿಳಿತ. ಅದು ಮೂಕನಿಸರ್ಗದ ವಾಗ್ವೈಭವ. ಅಲ್ಲಿ ಕಿವಿಗೆ ನಿರುದ್ಯೋಗ ಆದರೆ ಕಣ್ಣಿಗೆ ಪ್ರಿಯೋದ್ಯೋಗ. ಈ ದೃಷ್ಟಿ ಅದ್ಭುತಸೌಂದರ್ಯರಸದ ಆಕರಸ್ಥಾನ. ಆ ಗುಡಿಯ ಒಳಗೆ ಕಾಲಿಟ್ಟರೆ, ಗೋಪುರದ, ನವರಂಗದ, ಶಿಲ್ಪಗಳ, ಮೂಲವಿಗ್ರಹದ ಸೌಂದರ್ಯ, ಮಂತ್ರಘೋಷ, ಹೂವು ಹಣ್ಣುಗಳ ರಾಶಿ, ಭಕ್ತಜನರ ಭಕ್ತಿಯ ಉದ್ಗಾರಗಳು ಇವೆಲ್ಲ ಮನಸ್ಸನ್ನು ಬೆರಗುಗೊಳಿಸುವ ಸೌಂದರ್ಯ. ಇದರ ಮೂಲ ಮನುಷ್ಯನ ಭಕ್ತಿಯ ಸೆಲೆ. ಈ ಎರಡೂ ತರಹದ ಸೌಂದರ್ಯದ ಸಂಗಮದಿಂದ ಹುಟ್ಟುವುದು ಮೂರನೇ ಸೌಂದರ್ಯ. ಅದು ಜೀವ-ದೈವದ ಸಮಾಗಮದ ಸೌಂದರ್ಯ. ಮನುಷ್ಯ ಜೀವ, ತನಗಿಂತ ಹಿರಿದಾದದ್ದು, ಉನ್ನತವಾದದ್ದು ಮತ್ತೊಂದಿದೆ ಎಂದು ಕೈ ಎತ್ತಿ ಪಾರ್ಥಿವ ಪ್ರಪಂಚದಿಂದ ಮೇಲೆ ನೆಗೆಯುತ್ತದೆ. ಈ ಶ್ರದ್ಧೆಯಿಂದ ಪ್ರೇರಿತವಾದ ಜೀವದ ಪ್ರಯತ್ನವೇ ಸೌಂದರ್ಯದ ಪೂರ್ಣಾನುಭವ.

ಸೌಂದರ್ಯದ ಮುಖ್ಯ ಕಾರ್ಯ ಜೀವೋತ್ಕರ್ಷ, ಅಹಂಭಾವವಿಲಯನ. ಆಗ ನೆಲೆನಿಲ್ಲುವುದು ವಿಶ್ವಚೇತನದ ಆಸ್ಪಂದನ. ಇದೆಲ್ಲಕ್ಕೂ ಮೂಲವಾಗಿರುವುದು ಭಗವತ್‌ಶಕ್ತಿಯ ಆಕರ್ಷಣೆ. ಅದಕ್ಕೇ ಸುಂದರವಾದದ್ದನ್ನು ಕಂಡಾಗ ಮೈಮರೆಯುತ್ತದೆ. ಮೈಮರೆಯದೆ, ದೇಹವನ್ನು ಮೀರಿದ ದಿವ್ಯಾನುಭವ ಕಷ್ಟಸಾಧ್ಯವಾದದ್ದು. ಇದೇ ಪರಮಾನಂದದ ಮರ್ಮ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು