ಬುಧವಾರ, ಫೆಬ್ರವರಿ 19, 2020
23 °C

ಮಂಕುತಿಮ್ಮನ ಕಗ್ಗ | ಪ್ರಪಂಚದಲ್ಲಿ ಸಾಮರಸ್ಯ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಪ್ರೇಮಬೀಜಗಳಿಹವು ವೈರಬೀಜಗಳವೊಲೆ |
ಸೌಮ್ಯಮುಂ ಸಂಕ್ಷೋಭೆಯಂತೆ ಪ್ರಕೃತಿಯಲಿ ||
ಭ್ರಾಮಕದ ಸೃಷ್ಟಿಯಾ ವಿಷಮ ಲಕ್ಷಣಗಳಲಿ |
ಸಾಮರಸ್ಯವನರಸೊ – ಮಂಕುತಿಮ್ಮ || 246 ||

ಪದ-ಅರ್ಥ: ವೈರಬೀಜಗಳವೊಲೆ=ವೈರಬೀಜಗಳ ಹಾಗೆ, ಸಂಕ್ಷೋಭೆ=ಗದ್ದಲ, ಕಲಕುವಿಕೆ, ಭ್ರಾಮಕ=ಭ್ರಮೆಯನ್ನು ಹುಟ್ಟಿಸುವ, ಸಾಮರಸ್ಯ ಹೊಂದಾಣಿಕೆ.

ವಾಚ್ಯಾರ್ಥ: ವೈರದ ಬೀಜಗಳಿದ್ದಂತೆ ಪ್ರೇಮದ ಬೀಜಗಳೂ ಇವೆ. ಪ್ರಕೃತಿಯಲ್ಲಿ ಸೌಮ್ಯತೆ ಇದ್ದಂತೆ ಗದ್ದಲವೂ ಇದೆ. ಈ ವಿಭಿನ್ನ, ಪರಸ್ಪರ ವಿರೋಧದ ಲಕ್ಷಣಗಳನ್ನು ಕಂಡಾಗ ಪ್ರಕೃತಿಯ ಬಗ್ಗೆ ಭ್ರಮೆ ಹುಟ್ಟುತ್ತದೆ. ಈ ವಿಷಮಗುಣಗಳಲ್ಲಿಯೇ ಹೊಂದಾಣಿಕೆಯನ್ನು ಅರಸು.

ವಿವರಣೆ: ಪ್ರಪಂಚವನ್ನು ಸೂಕ್ಷ್ಮವಾಗಿ ಗಮನಿಸಿದರೆ ಪರಸ್ಪರ ವಿರೋಧವೆನ್ನಿಸುವ ಗುಣಗಳು ಹರಡಿಕೊಂಡಿವೆ. ವೈರತ್ವವನ್ನು ಹರಡುವ ಶಕ್ತಿಗಳು ಕೆಲವಿದ್ದರೆ ಪ್ರೇಮವನ್ನು ಬಿತ್ತುವ ಕೇಂದ್ರಗಳೂ ಅನೇಕವಿವೆ. ಹಿಂಸೆಗಾಗಿ, ಯುದ್ಧಕ್ಕಾಗಿ ಹಾತೊರೆಯುವ ಕೆಲವು ಸಂಘಟನೆಗಳು ಪ್ರಪಂಚವನ್ನು ಛಿದ್ರಮಾಡುವುದಕ್ಕೆ ನೋಡುತ್ತಿವೆ. ಅದೇ ಸಮಯಕ್ಕೆ ವಿಶ್ವಶಾಂತಿಗಾಗಿ, ಭ್ರಾತೃತ್ವಕ್ಕಾಗಿ ಹೋರಾಡುವ ಸಂಸ್ಥೆಗಳೂ ಇವೆ. ಇದು ಇಂದಲ್ಲ, ಎಂದೆಂದಿಗೂ ಹೀಗೆಯೇ ಇದ್ದುದು.

ಕ್ರೂರಿಯಾದ ದುರ್ಯೋಧನನಿದ್ದಾಗಲೇ ಶಾಂತಿಪ್ರಿಯನಾದ ಧರ್ಮರಾಜನೂ ಇದ್ದನಲ್ಲ. ಹಿಟ್ಲರ್ ತನ್ನ ಹಿಂಸಾತ್ಮಕತೆಯನ್ನು ಹರಡಿ ಜಗತ್ತನ್ನು ತಲ್ಲಣಗೊಳಿಸುತ್ತಿದ್ದಾಗ ಪ್ರೇಮದ ಅವಶ್ಯಕತೆಯನ್ನು ಬದುಕಿನುದ್ದಕ್ಕೂ ಸಾರಿದ ಗಾಂಧೀಜಿಯವರೂ ಇದ್ದರು.

ಕೆಲವೊಂದೆಡೆ ಪ್ರಕೃತಿ ಅತ್ಯಂತ ಮನೋಹರವಾಗಿ, ಸಂತೋಷ ನೀಡುವಂತೆ ಸಿಂಗಾರವಾಗಿ ನಿಂತಿದೆ. ಹಿಮಾಚಲ ಪ್ರದೇಶದಲ್ಲಿ ಕಾಣುವ ಹೂಗಳ ಕಣಿವೆಯನ್ನು ಯಾರಾದರೂ ಮರೆಯುವುದು ಸಾಧ್ಯವೇ? ಅದೇ ಕಣಿವೆಯಲ್ಲಿ ಭೂಕಂಪವಾಗಿ ನೆಲ ತಲ್ಲಣಿಸಿದಾಗ ಅದು ಭಯಂಕರವಾದದ್ದು ಉಂಟು. ನಾವು ಬದರಿನಾಥ ಯಾತ್ರೆಗೆ ಹೋಗಿದ್ದೆವು. ನಮ್ಮ ಯೋಜನೆಯಂತೆ ಸಂಜೆ ಆರು ಗಂಟೆಗೆ ಬದರಿನಾಥ ದೇವಸ್ಥಾನವನ್ನು ತಲುಪಬೇಕಿತ್ತು, ದಾರಿಯಲ್ಲಿ ನಿಂತು ಸೃಷ್ಟಿಯ ಸೌಂದರ್ಯವನ್ನು, ಅಲ್ಲಲ್ಲಿ ಬೆಟ್ಟದ ಬದಿಗಳಲ್ಲಿ ಧುಮುಕುವ ಝರಿಗಳನ್ನು ನೋಡುತ್ತ ಛಾಯಾಚಿತ್ರಗಳನ್ನು ತೆಗೆಯುತ್ತ ಸಂತೋಷಪಡುತ್ತಿದ್ದೆವು. ಮುಂದೆ ನಾಲ್ಕು ಕಿಲೋಮೀಟರ್ ಹೋಗುವ ಹೊತ್ತಿಗೆ ಕಾರಿನ ಟೈರು ಢಂ ಎಂದು ಒಡೆದು ಅದನ್ನು ಬದಲಿಸಿ ಹೊರಡುವಾಗ ಒಂದೂವರೆ ಗಂಟೆ ತಡವಾಯಿತು. ಮುಂದಿನ ಪ್ರವಾಸ ಎದೆ ನಡುಗಿಸುವಂಥದ್ದು.

ಏನೇನೂ ಕಾಣಲಾರದಷ್ಟು ಗಾಢಕತ್ತಲೆ. ಎಲ್ಲಿ ತಿರುವು ಎಂಬುದೂ ಕಾಣುತ್ತಿರಲಿಲ್ಲ. ಒಂದೆಡೆಗೆ ಕಾರು ನಿಂತುಬಿಟ್ಟಿತು. ಕಾರಿನ ಕೆಳಗಡೆ ನೀರು ಜೋರಾಗಿ ಹರಿಯುವ ಶಬ್ದ. ನಾವು ರಸ್ತೆಯ ಅಂಚಿನಲ್ಲಿದ್ದೇವೆಯೋ, ಪ್ರಪಾತಕ್ಕೆ ಹತ್ತಿರವಾಗಿದ್ದೇವೆಯೋ ತಿಳಿಯಲಿಲ್ಲ. ಕೆಲಗಂಟೆಗಳ ಹಿಂದೆ ಅತ್ಯಂತ ರಮಣೀಯವಾದ ಪ್ರದೇಶವೇ ಈಗ ಭಯಂಕರವಾಗಿತ್ತು. ಬಹುಶ: ಬೆಳಕಿದ್ದರೆ ಇದೇ ಸುಂದರವಾಗಿರುತ್ತಿತ್ತು. ಆಗಲೇ ಈ ಕಗ್ಗದ ಅರ್ಥ ಹೊಳೆದದ್ದು.

ಪ್ರಪಂಚದ ವಿಷಮಲಕ್ಷಣಗಳು ಬೇರೆಬೇರೆಯೆಂಬ ಭ್ರಮೆಯನ್ನು ಹುಟ್ಟಿಸುತ್ತವೆ. ಆದರೆ ಅವೆರಡೂ ಒಂದೇ. ಅವು ಬೇರೆಯಾಗಿ ಕಾಣುವುದು ಆ ಕ್ಷಣದ ನಮ್ಮ ಪರಿಸ್ಥಿತಿಯಿಂದ. ಈ ಹೊಂದಾಣಿಕೆಯನ್ನು ಅರಿತಾಗ ಪ್ರಪಂಚ ಕೆಟ್ಟದೂ ಅಲ್ಲ, ಒಳ್ಳೆಯದೂ ಅಲ್ಲ. ಅದು ಅವೆರಡರ ಮಿಶ್ರಣ. ಈ ಸತ್ಯವನ್ನು ಅರಿತಾಗ ಬದುಕು ಸುಂದರ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)