ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ದೃಷ್ಟಿ ಸೂಕ್ಷ್ಮ 

Published 23 ಜುಲೈ 2023, 21:30 IST
Last Updated 23 ಜುಲೈ 2023, 21:30 IST
ಅಕ್ಷರ ಗಾತ್ರ

ಕಷ್ಟ ಜೀವದ ಪಾಕ, ಕಷ್ಟ ಧರ್ಮವಿವೇಕ |
ಎಷ್ಟೆಷ್ಟು ನೀತಿಯುಕ್ತಿಗಳ ಬಗೆದಡೆಯುಂ ||
ಇಷ್ಟಷ್ಟು ನಿನ್ನೊಳ್ ಒಳತಿಳಿವಿಲ್ಲದಿರೆ ನಷ್ಟ |
ದೃಷ್ಟಿ ಸೂಕ್ಷ್ಮವೆ ಗತಿಯೊ – ಮಂಕುತಿಮ್ಮ || 933 ||

ಪದ-ಅರ್ಥ: ಬಗೆದಡೆಯುಂ=ಅರಿತದೆಯೂ, ನಿನ್ನೊಳ್=ನಿನ್ನಲ್ಲಿ, ಒಳತಿಳಿವಿಲ್ಲದಿರೆ=ಒಳತಿಳಿವು+ಇಲ್ಲದಿರೆ.

ವಾಚ್ಯಾರ್ಥ: ಜೀವ ಪಕ್ಷತೆಯನ್ನು ಪಡೆಯುವುದು ಕಷ್ಟ, ಧರ್ಮದ ವಿವೇಕ ಅರ್ಥವಾಗುವುದು ಕಷ್ಟ. ಎಷ್ಟೇ ನೀತಿ ಯುಕ್ತಿಗಳನ್ನು ಓದಿ, ಕೇಳಿ ತಿಳಿದರೂ, ನಿನ್ನಲ್ಲಿ ಆಂತರ್ಯದ ತಿಳಿವು ಇಲ್ಲದಿದ್ದರೆ ವ್ಯರ್ಥ. ದೃಷ್ಟಿಯಲ್ಲಿ ಸೂಕ್ಷ್ಮತೆಯೇ  ಬಾಳಿಗೆ ಗತಿ.

ವಿವರಣೆ: ಜೀವ ಕಷ್ಟದ ಬೆಂಕಿಯಲ್ಲಿ ಹಾದು ಬಂದಾಗ ಪಕ್ಷವಾಗುತ್ತದೆ ಎಂದು ಹೇಳುತ್ತಾರೆ. ಅದು ಸರಿಯಲ್ಲ. ಪ್ರಪಂಚದಲ್ಲಿ ಲಕ್ಷಾಂತರ ಜನ ನಿತ್ಯ ಬದುಕಿನ ಬೆಂಕಿಯಲ್ಲಿ ಬೇಯುತ್ತಾರೆ. ಆದರೆ ಎಲ್ಲರೂ ದೊಡ್ಡವರಾಗುವುದಿಲ್ಲ. ಸಾಮಾನ್ಯವಾಗಿ ಡಾ. ದ.ರಾ ಬೇಂದ್ರೆಯವರನ್ನು ಪರಿಚಯಿಸುವಾಗ, “ಬೆಂದರೆ ಬೇಂದ್ರೆಯಾಗುತ್ತಾರೆ” ಎಂದು ಹೇಳುವುದು ಕ್ಲೀಷೆಯಾಗಿತ್ತು.

ಆ ಮಾತಿಗೆ ಕಾರಣ ಅವರು ಬದುಕಿನುದ್ದಕ್ಕೂ ಕಂಡ ಸಮಸ್ಯೆಗಳ, ದುಃಖದ ಸರಪಳಿ. ಹಾಗೆ ಅವರು ಬೆಂದು ಬಂದದ್ದರಿಂದ ಅವರೊಬ್ಬ ವರಕವಿಗಳಾದರು ಎನ್ನುವುದು ಆ ಮಾತಿನ ಅರ್ಥ. ಅವರಿಗೂ ಆ ಮಾತು ಕೇಳಿ ಕೇಳಿ ಬೇಸರವಾಗಿದ್ದಿರಬೇಕು. ಒಂದು ಕಾರ್ಯಕ್ರಮದಲ್ಲಿ ಒಬ್ಬರು ಅದೇ ಮಾತು ಹೇಳಿದರು, ಬೆಂದರೆ ಬೇಂದ್ರೆಯಾಗ್ತಾರೆ”.

ತಕ್ಷಣ ಬೇಂದ್ರೆ ಸಿಡಿದೆದ್ದರು. “ನಿನ್ನ ತಲೀ. ಒಳಗ ಹಸಿ ಇದ್ದರ ಬೇಯತಾರ. ಇಲ್ಲದಿದ್ದರ ಸುಟ್ಟು ಬೂದಿಯಾಗ್ತಾರ”. ಎಂಥ ಸರಿಯಾದ ಮಾತು! ಒಳಗೆ ಹಸಿ ಇದ್ದರೆ, ಅಂದರೆ ಒಳಗೆ ಶಕ್ತಿ ಇದ್ದರೆ, ತಿಳಿವಿದ್ದರೆ ಬದುಕು ಬೆಂದು ಪಾಕವಾಗುತ್ತದೆ. ಅದಿಲ್ಲದಿದ್ದರೆ ಸುಟ್ಟು ಬೂದಿಯಾಗುತ್ತದೆ. ಕಗ್ಗದ ಮಾತು ಅದು. ಜೀವ ಪಾಕವಾಗುವುದು ಕಷ್ಟ.

ಧರ್ಮ ವಿವೇಕವಂತೂ ಇನ್ನೂ ಕಷ್ಟ. ಯಾವುದು ತಪ್ಪು ಎಂದು ತಿಳಿದುಕೊಂಡು, ತಮ್ಮ ಮನಸ್ಸನ್ನು ತಾವೇ ನಿಯಂತ್ರಿಸಿಕೊಳ್ಳುವ ಸಾಮರ್ಥ್ಯವೇ ವಿವೇಕ. ಈ ವಿವೇಕ ಗ್ರಂಥಗಳ ಓದಿನಿಂದ, ಕೇಳಿದ ಪ್ರವಚನಗಳಿಂದ ಬರುವುದಲ್ಲ. ರಾವಣನೇನು ಸಾಮಾನ್ಯ ಜ್ಞಾನಿಯೇ? ಸರ್ವಶಾಸ್ತ್ರಗಳನ್ನು ತಿಳಿದವನು. ಆದರೆ ವಿವೇಕವಿಲ್ಲದೆ ನಾಶವಾದ. ದುರ್ಯೋಧನನಿಗೆ ಧರ್ಮದ ಜ್ಞಾನ ಇರಲಿಲ್ಲವೆ? ಇತ್ತು, ಆದರೆ ವಿವೇಕವಿರಲಿಲ್ಲ. ಅದಕ್ಕೇ ಹೇಳಿದ, “ಜಾನಾಮಿ ಧರ್ಮಂ ನ ಚ ಮೇ ಪ್ರವೃತ್ತಿ, ಜಾನಾಮಿ ಅಧರ್ಮಂ ನ ಚ ಮೇ ನಿವೃತ್ತಿ”. ಧರ್ಮ ಯಾವುದು ಎಂಬುದು ತಿಳಿದಿದೆ ಆದರೆ ಅದು ನನ್ನ ಪ್ರವೃತ್ತಿಯಲ್ಲ. ಅಧರ್ಮ ಯಾವುದೆಂಬುದೂ ಗೊತ್ತಿದೆ ಆದರೆ ನನಗೆ ಅದರಿಂದ ಬಿಡುಗಡೆ ಇಲ್ಲ. ಅದಕ್ಕೇ ಕಗ್ಗ ಹೇಳುತ್ತದೆ, ಎಷ್ಟು ನೀತಿಪಾಠಗಳನ್ನು ಕೇಳಿ ಕಲಿತಿದ್ದರೂ, ವಿವೇಕದೃಷ್ಟಿ ಸೂಕ್ಷ್ಮವಾಗಿಲ್ಲದಿದ್ದರೆ  ಬದುಕಿಗೆ ಶ್ರೇಯಸ್ಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT