ಶನಿವಾರ, ಜುಲೈ 2, 2022
23 °C

ಬೆರಗಿನ ಬೆಳಕು: ಹಿರಿದಾದ ಜೀವಿತ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಪಿರಿದೆಲ್ಲ ಮತನೀತಿಗಳಿಗಿಂತ ಜೀವಿತವು |
ನೆರೆಬಂದ ನದಿ ದಡಕೆ ಬಾಗಿ ಪರಿಯುವುದೇಂ ? ||
ಧರುಮಸೂಕ್ಷ್ಮದ ತಿಳಿವೆ ಲೋಕಸೂತ್ರದ ಸುಳುವು |
ಅರಸು ಜೀವಿತ ಹಿತವ – ಮಂಕುತಿಮ್ಮ || 524 ||

ಪದ-ಅರ್ಥ: ಪಿರಿದೆಲ್ಲ=ಪಿರಿದ (ಹಿರಿದಾದ)+ಎಲ್ಲ, ಪರಿಯುವುದೇಂ=ಹರಿಯುವುದೆ, ಧರುಮ=ಧರ್ಮ, ಅರಸು=ಹುಡುಕಾಡು

ವಾಚ್ಯಾರ್ಥ: ಎಲ್ಲ ಮತನೀತಿಗಳಿಗಿಂತ ಜೀವಿತ ದೊಡ್ಡದು. ಪ್ರವಾಹ ಬಂದಾಗ ನದಿ ತನ್ನ ದಂಡೆಗಳನ್ನು ಗೌರವಿಸಿ ಹರಿಯುವುದೇ? ಧರ್ಮಸೂಕ್ಷ್ಮದ ತಿಳಿವಿನಲ್ಲಿ ಲೋಕಸೂತ್ರದ ಅರಿವಿದೆ. ಜೀವಿತದ ಹಿತವನ್ನು ಹುಡುಕಾಡು.

ವಿವರಣೆ: ದೀರ್ಘಕಾಲದಿಂದ ಇರುವ ಈ ಲೋಕದಲ್ಲಿ ಮನುಷ್ಯ ಕೇವಲ ಮೂರು ಮಿಲಿಯನ್ ವರ್ಷಗಳ ಈಚೆಗೆ ಕಾಣಿಸಿಕೊಂಡ. ಅವನಿಗೆ ಬದುಕುವ ಛಲ ಎಂಥದ್ದು ಎಂದರೆ, ಎಂಥ ಪರಿಸ್ಥಿತಿಯಲ್ಲೂ, ಹೇಗೋ ಜೀವನ ನಡೆಸಿ ತನ್ನ ಪರಂಪರೆಯನ್ನು ಉಳಿಸಿಕೊಂಡ. ಅಸಾಧ್ಯವಾದ ಪ್ರತಿಕೂಲ ಪರಿಸ್ಥಿತಿಗಳಲ್ಲೂ, ಎಲ್ಲವನ್ನೂ ಗೆದ್ದು ಬದುಕತೊಡಗಿದ, ಇಂದಿಗೂ ಬದುಕಿದ್ದಾನೆ.

ಮನುಷ್ಯ ತನ್ನ ಭಾವನಾ ವೈಖರಿಯಿಂದ, ಬುದ್ಧಿಯ ಎಟುಕಿನಿಂದ, ಹಲವಾರು ಅಸಾಧ್ಯ ಕಾರ್ಯಗಳನ್ನು ಮಾಡಿದ್ದಾನೆ. ನೆಲದಲ್ಲಿ ಹುಟ್ಟಿ, ಅದಕ್ಕೆ ಅಂಟಿ ಬಾಳಿದ ಮನುಷ್ಯ ಅಂತರಿಕ್ಷಗಾಮಿಯಾಗಿದ್ದಾನೆ. ಇದರಿಂದಾಗಿ ಅವನ ಜನ್ಮ ದೊಡ್ಡದು ಎನ್ನಬೇಕು. ಅದಕ್ಕೇ ದಾಸರು ಹಾಡಿದರು, ‘ಮಾನವ ಜನ್ಮ ದೊಡ್ಡದು, ಅದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ’. ಮನುಷ್ಯನ ಬದುಕನ್ನು ಪುರಾತನರು ಅಶ್ವತ್ಥವೃಕ್ಷಕ್ಕೆ ಹೋಲಿಸಿದ್ದಾರೆ. ಮಾನವನ ಜೀವನ ಪರಂಪರೆ ಅಶ್ವತ್ಥ ವೃಕ್ಷದಂತೆ ಬಹುಕಾಲ ಬಾಳುವಂಥದ್ದು. ಅದು ಒಂದು ದಿನ ಇದ್ದಂತೆ ಮರುದಿನ ಇರುವುದಿಲ್ಲ. ಒಂದೆಡೆಗೆ ಚಿಗುರುತ್ತದೆ. ಮತ್ತೊಂದೆಡೆಗೆ ಬಾಡಿದಂತೆ ತೋರುತ್ತದೆ. ಬಾಡಿದ ಕೊಂಬೆಯನ್ನು ಕೆಲದಿನ ಬಿಟ್ಟು ನೋಡಿದರೆ ಮತ್ತೆ ಹೊಸ ಚಿಗುರು ಕಾಣುತ್ತದೆ! ಮನುಷ್ಯನ ಜನಾಂಗದ ಜೀವಿತವೂ ಹಾಗೆಯೇ. ಒಂದು ಕಡೆಗೆ ಪ್ರಗತಿಯನ್ನು ಉಂಟು ಮಾಡುವ ವಿವೇಕ, ಯುಕ್ತಿ, ಅಭಿವೃದ್ಧಿ, ಉತ್ಸಾಹಗಳು ಕಾಣುತ್ತವೆ. ಮತ್ತೊಂದು ಕಡೆಗೆ ನಿರಾಸೆ, ಅನ್ಯಾಯ, ಅತ್ಯಾಚಾರ. ಭ್ರಷ್ಟಾಚಾರ, ನಿಸರ್ಗ ಹಾನಿಗಳು ಕಂಡು ಪ್ರಗತಿವಿರೋಧವಾದಂತೆ ತೋರುತ್ತದೆ. ಒಟ್ಟು ನೋಡಿದರೆ ಎಲ್ಲಿಯೂ ಅತಿ ಆಸೆಗೆ ಸ್ಥಳವಿಲ್ಲ, ನಿರಾಸೆಗೂ ಕಾರಣವಿಲ್ಲ. ಹೇಗೋ ಒಂದು ಬಗೆಯಾಗಿ ಮನುಷ್ಯ ಜೀವನವೆಂಬ ನದಿ ಹರಡುತ್ತ, ವಿಸ್ತಾರಗೊಳ್ಳುತ್ತ, ಸರ್ವಕಾಲಗಳಲ್ಲಿಯೂ ಹರಿಯುತ್ತಲೇ ಇದೆ.

ಮತ ನೀತಿಗಳು ಅನೇಕವಿವೆ. ಅವುಗಳಿಗಿಂತ ಬದುಕು ದೊಡ್ಡದು. ಬದುಕಿನ ಹದಕ್ಕೆ ಈ ಮತನೀತಿಗಳು ಬೇಕು. ಮತನೀತಿಗಳಿಗಾಗಿ ಬದುಕು ಕುಗ್ಗಬೇಕಿಲ್ಲ. ಆದರೆ ಅವುಗಳನ್ನು ಮೀರುವ ಹಟದ ಪ್ರಮತ್ತತೆಯೂ ಬೇಡ. ಅವುಗಳನ್ನು ಬದುಕಿನ ಸೊಗಕ್ಕಾಗಿ ಅಳವಡಿಸಿಕೊಳ್ಳಬೇಕು. ನದಿಯ ದಂಡೆಗಳು ಅದರ ಪ್ರವಾಹವನ್ನು ನಿರ್ದೇಶಿಸುತ್ತವೆ. ಆದರೆ ನೆರೆ ಬಂದಾಗ ಪ್ರವಾಹ ದಂಡೆಗಳನ್ನು ಮೀರಿ ಸಾಗೀತು. ಹಾಗೆಯೇ ಮತನೀತಿಗಳು ನಿರ್ದೇಶ ಮಾಡಬೇಕೇ ವಿನಃ ನಿಗ್ರಹ ಮಾಡಬಾರದು. ಇದೇ ಧರ್ಮಸೂಕ್ಷ್ಮ. ಅದರ ಸ್ಪಷ್ಟ ಅರಿವಾದಾಗ ಲೋಕಜೀವನ ಸುಸೂತ್ರವಾಗುತ್ತದೆ. ಸರಿಯಾಗಿ ಯೋಚಿಸಿದರೆ, ಧರ್ಮತತ್ವಗಳಿಗೂ, ಲೌಕಿಕ ವ್ಯವಹಾರಕ್ಕೂ ಅತಿಯಾದ ವಿರೋಧವೇನೂ ಇಲ್ಲ ಎಂಬುದಕ್ಕೆ ಮಹಾನ್ ಸಾಧಕರ, ಸಂತರ ಜೀವನಗಳೇ ಸಾಕ್ಷಿಯಾಗಿವೆ. ಅವರ ಧರ್ಮಚಿಂತನೆ ಲೋಕವ್ಯವಹಾರಕ್ಕೆ ಎಂದೂ ಅಡ್ಡಿಯಾಗಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು