ಭಾನುವಾರ, ಮೇ 29, 2022
23 °C

ಬೆರಗಿನ ಬೆಳಕು: ಧರ್ಮದ ಮರ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಸೆರೆಬಿದ್ದು ಧರ್ಮಪಾದಪ ನಿಲದು ಮತಗಳಲಿ |
ಜರೆಯಿಂದ ಬರಡಹುದು ಮಠದ ನೆರಳಿನಲಿ ||
ಪರಸತ್ತ್ವರಸ ವಿಶ್ವಜೀವನದ ಬೇರ್ಗಳಿಂ |
ನೆರೆಯಲಾ ತರು ಸೊಂಪು – ಮಂಕುತಿಮ್ಮ || 526||

ಪದ-ಅರ್ಥ: ಸೆರೆಬಿದ್ದು=ಕೈದಿಯಾಗಿ, ಧರ್ಮಪಾದಪ=ಧರ್ಮ+ಪಾದಪ(ಮರ), ಜರೆ=ಮುದಿತನ, ವೃದ್ಧಾಪ್ಯ, ಬರಡಹುದು=
ಬರಡು(ಸೊರಗು, ಒಣಗು)+ಅಹುದು, ಬೇರ್ಗಳಿಂ=ಬೇರುಗಳಿಂದ, ನೆರೆಯಲಾ= ನೆರೆಯಲು (ಸೇರಲು)+ಆ.

ವಾಚ್ಯಾರ್ಥ: ಧರ್ಮವೆಂಬ ಮರ, ಮತಗಳ ಸೆರೆಯಲ್ಲಿ ಬಿದ್ದು ನಿಲ್ಲಲಾರದು. ಮಠದ ಬಿಗಿ ನೆರಳಿನಲ್ಲಿ ಅದು ಮುದಿಯಾಗಿ, ಬರಡಾಗುತ್ತದೆ. ಪರಸತ್ವದ ರಸ ವಿಶ್ವಜೀವನವೆಂಬ ಬೇರುಗಳಲ್ಲಿ ಸೇರಿದಾಗ ಧರ್ಮದ ಮರ ಸೊಂಪಾಗಿ ಬೆಳೆಯುತ್ತದೆ.

ವಿವರಣೆ: ಈ ನಾಲ್ಕು ಸಾಲಿನ ಚೌಪದಿ ನಮ್ಮನ್ನು ಬಹಳ ಚಿಂತನೆಗೆ ಹಚ್ಚುತ್ತದೆ, ಹಚ್ಚಬೇಕು. ಮೊದಲನೆಯ ಎರಡು ಸಾಲುಗಳು, ಬೆರಗು ಹುಟ್ಟಿಸುತ್ತವೆ. ಧರ್ಮವೆಂಬ ಮರ ಮತಗಳ ಸೆರೆಯಲ್ಲಿ ಸಿಕ್ಕು ಹಾಕಿಕೊಂಡು ನಿಲ್ಲಲಾರದು. ಹೌದು, ಮರ ಬಂಧನದಲ್ಲಿ ಹೇಗೆ ಬೆಳೆದೀತು? ಯಾವುದು ಈ ಬಂಧನ? ದಯವಿಟ್ಟು ಈ ಚಿಂತನೆಯನ್ನು ಗಮನಿಸಿ. ನನಗೆ ಒಂದು ವಿಷಯದ ಬಗ್ಗೆ ನಂಬಿಕೆ ಬಂದಿತು. ಅದು ನನ್ನ ವೈಯಕ್ತಿಕ ನಂಬಿಕೆ. ಮುಂದೆ ಕೆಲದಿನಗಳ ನಂತರ ಅದೇ ನಂಬಿಕೆಯನ್ನು ಹೊಂದಿದ ಮತ್ತೊಬ್ಬರು ಸಿಕ್ಕರು. ನಾವು ಸ್ನೇಹಿತರಾದೆವು. ಹೀಗೆಯೇ ನಾಲ್ಕಾರು ಜನರ ಗುಂಪಾದ ಮೇಲೆ, ನಮಗೊಂದು ವಿಚಾರ ಬಂದಿತು. ನಮ್ಮ ನಂಬಿಕೆ ತುಂಬ ಉದಾತ್ತವಾದದ್ದರಿಂದ ಅದನ್ನು ಎಲ್ಲರಿಗೂ ತಿಳಿಸಬೇಕು, ಅದನ್ನು ಪ್ರಸಾರಗೊಳಿಸಬೇಕು. ಈ ಪ್ರಯತ್ನದಲ್ಲಿ ಬೇರೆ ನಂಬಿಕೆಯುಳ್ಳವರು, ಅದರಲ್ಲೂ, ನಮ್ಮ ನಂಬಿಕೆಗೆ ವಿರುದ್ಧವಾದ ನಂಬಿಕೆಯುಳ್ಳವರನ್ನು ಕಂಡಾಗ ಕಸಿವಿಸಿಯಾಯಿತು, ಅವರನ್ನು ಖಂಡಿಸಿದೆವು. ನಮ್ಮ ಮತವೇ ಶ್ರೇಷ್ಠವಾದ್ದರಿಂದ ಉಳಿದವುಗಳು ಕನಿಷ್ಠ. ನಮ್ಮದೇ ಒಂದು ಮಠವನ್ನೋ ವ್ಯವಸ್ಥೆಯನ್ನೋ ಕಟ್ಟಿಕೊಂಡೆವು. ನಮಗೀಗ ಎರಡು ಕಾರ್ಯಗಳು-ಮೊದಲನೆಯದು ನಮ್ಮ ಮತವನ್ನು ಉಳಿಸಿಕೊಳ್ಳುವುದು ಮತ್ತು ಎರಡನೆಯದು ಉಳಿದ ಮತಗಳನ್ನು ಖಂಡಿಸುವುದು. ಹೀಗೆ ಒಂದು ಮತಕ್ಕೇ ಜೋತುಬಿದ್ದು ನಾವು ಬಂಧಿಗಳಾದೆವು. ಹೊಸಮತದ ಚಿಂತನೆಗಳು ನಮ್ಮ ಹೃದಯವನ್ನು ಸೇರದಂತೆ ಗಟ್ಟಿಯಾಗಿ ಬಾಗಿಲು ಭದ್ರಪಡಿಸಿ ಅದನ್ನೊಂದು ಜೈಲನ್ನಾಗಿ ಮಾಡಿಕೊಂಡೆವು. ವೈಯಕ್ತಿಕ ನಂಬಿಕೆ ಸಮುದಾಯದ ನಂಬಿಕೆಯಾದಾಗ ಅದು ಉಗ್ರವಾಗುತ್ತದೆ. ಸಾಮ್ರಾಜ್ಯಶಾಹಿಯಾಗುತ್ತದೆ, ನಕರಾತ್ಮಕವಾಗುತ್ತದೆ, ಬಂಧಿಯಾಗುತ್ತದೆ. ಹೀಗೆ ಚಿಂತನೆ ಬಂಧಿಯಾದಾಗ ಹೊರಗಿನ ಚಿಂತನೆಗಳ ಪುಷ್ಠಿ ದೊರೆಯದೆ ಸೊರಗುತ್ತದೆ, ಬೇಗನೆ ಮುದಿಯಾಗುತ್ತದೆ. ಅದನ್ನೇ ಕಗ್ಗ ಹೇಳುತ್ತದೆ, ‘ಮಠಗಳ ನೆರಳಿನಲ್ಲಿ ಧರ್ಮ ಬರಡಾಗಿ ಮುದಿಯಾಗುತ್ತದೆ!’.

ಹಾಗಾದರೆ ಪರಿಹಾರವೇನು? ಯಾವುದೇ ಮತದ ಅಂಚುಗಳಿಲ್ಲದ, ಎಲ್ಲವನ್ನು ತೆಕ್ಕೆ ಹಾಕಿ ಪ್ರೀತಿಸುವ ಪರಸತ್ವದ ರಸ ನಮ್ಮ ಲೋಕಜೀವನದಲ್ಲಿ ಓತಪ್ರೋತವಾಗಿ ಹರಿಯಬೇಕು. ಅಲ್ಲಿ ಜಾತಿ ಇಲ್ಲ, ಮತ ಇಲ್ಲ, ನಾವೇ ಸರಿ ಎಂಬ ಹಮ್ಮು ಇಲ್ಲ, ಮೇಲು-ಕೀಳು ಇಲ್ಲ. ಅಂಥ ರಸ ಜೀವನದಲ್ಲಿ ಹರಿದರೆ ಧರ್ಮದ ಮರದ ಬೇರಿಗೆ ಸತ್ವ ದೊರೆತು, ಆ ಮರ ಸೊಂಪಾಗಿ ಹರಡಿ, ಎಲ್ಲರಿಗೂ ಶಾಂತಿಯ ನೆರಳು ಕೊಡುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.