ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಸಾರ್ಥಕವಾದ ಅನುಭವ

Last Updated 13 ಡಿಸೆಂಬರ್ 2021, 21:55 IST
ಅಕ್ಷರ ಗಾತ್ರ

ಅರ್ಥವುಂಟನುಭವಕ್ಕಾದೊಡದು ಮಿತದರ್ಥ: |
ಸ್ವಾರ್ಥ ಮಿತವಾದಂತೆ ವಿಸ್ತರಿಪುದರ್ಥ ||
ಸಾರ್ಥಕವದಪ್ಪುದಾರ್ಷೇಯಾರ್ಥದೊಡವೆರೆಯೆ |
ಪಾರ್ಥನನುಭವದಂತೆ – ಮಂಕುತಿಮ್ಮ || 518 ||

ಪದ-ಅರ್ಥ: ಅರ್ಥವುಂಟನುಭವಕ್ಕಾದೊಡದು=ಅರ್ಥವುಂಟು+ಅನುಭವಕ್ಕೆ+ಆದೊಡೆ+ಅದು, ಮಿತದರ್ಥ=ಮಿತದ(ಮಿತವಾದ)+ಅರ್ಥ, ವಿಸ್ತರಿಪುದರ್ಥ=ವಿಸ್ತರಿಪುದು(ವಿಸ್ತರಿಸುವುದು)+ಅರ್ಥ,ಸಾರ್ಥಕವದಪ್ಪುದಾರ್ಷೇಯಾರ್ಥದೊಡವೆರೆಯೆ=ಸಾರ್ಥಕವಪ್ಪುದು(ಸಾರ್ಥಕವಾಗುವುದು)+ಆರ್ಷೇಯ (ಋಷಿ-ಮುನಿಗಳಿಂದ ಬಂದ ಜ್ಞಾನ)+ಅರ್ಥದೊಡವೆರೆಯೆ=ಅರ್ಥದೊಡನೆ ಮಿಳಿತವಾದರೆ.

ವಾಚ್ಯಾರ್ಥ: ಅನುಭವದಿಂದ ದೊರೆತ ಅರ್ಥ ಮಿತಿಯಾದದ್ದು. ಸ್ವಾರ್ಥ ಕಡಿಮೆಯಾಗುತ್ತ ಹೋದಂತೆ ಅನುಭವದ ಅರ್ಥ ವಿಸ್ತಾರವಾಗುತ್ತದೆ. ಅದು ನಮ್ಮ ಆರ್ಷೇಯರು ನೀಡಿದ ಜ್ಞಾನದೊಡನೆ ಸಮ್ಮಿಳಿತವಾದಾಗ ಸಾರ್ಥಕವಾಗುತ್ತದೆ. ಅರ್ಜುನನ ಅನುಭವವೂ ಅದೇ.

ವಿವರಣೆ: ಬಾಳುವುದು ಎಂದರೆ ಬೆಳೆಯುವುದು. ಹಲವಾರು ಆಯಾಮಗಳಲ್ಲಿ ವ್ಯಕ್ತಿ ಬೆಳೆಯುತ್ತಾನೆ. ಬೆಳವಣಿಗೆಗೆ ಮುಖ್ಯ ಆಧಾರ ಅನುಭವ. ಬಾಲ್ಯದಲ್ಲಿ ಮಗುವಿಗೆ ಪ್ರತಿಯೊಂದು ಘಟನೆಯೂ ಅನುಭವವೇ. ಮನುಷ್ಯ ಬೆಳೆದಂತೆ ಅನುಭವಗಳನ್ನು ಅರಗಿಸಿಕೊಳ್ಳುವ ಸಾಮರ್ಥ್ಯವೂ ಕಡಿಮೆಯಾಗುತ್ತ ಹೋಗುತ್ತದೆ. ಒಂದು ಮಗುವಿಗೆ ವಸ್ತುವೊಂದು ದೊರೆತರೆ ಅದು ಅದನ್ನು ಗಮನಿಸುವುದರಲ್ಲಿ ಮಗ್ನವಾಗಿ ಹೋಗುತ್ತದೆ. ಅದನ್ನು ಪೂರ್ತಿಯಾಗಿ ಅನುಭವಿಸುತ್ತದೆ. ಅದೇ ವಸ್ತು ಹಿರಿಯನೊಬ್ಬನಿಗೆ ದೊರೆತರೆ, ಅದು ಯಾವುದರಿಂದ ಮಾಡಲಾದದ್ದು, ಯಾವ ದೇಶದ್ದು, ಅದಕ್ಕೆಷ್ಟು ಬೆಲೆ ಇದ್ದೀತು, ಅದರ ಗುಣಮಟ್ಟ ಯಾವುದು ಎಂದು ಲೆಕ್ಕಾಚಾರ ಮಾಡುತ್ತ ವಸ್ತುವನ್ನು ಸಂಪೂರ್ಣವಾಗಿ ಅನುಭವಿಸಲಾಗುವುದಿಲ್ಲ. ಆದ್ದರಿಂದ ಅನುಭವದಿಂದ ಬರುವ ಅರ್ಥ ಮಿತವಾದದ್ದು. ಅದು ವೈಯಕ್ತಿಕವಾದದ್ದು. ಅದೇ ವಸ್ತು ಮತ್ತೊಬ್ಬರಲ್ಲಿ ಅದೇ ಅನುಭವವನ್ನು ಉಂಟುಮಾಡಲಾರದು. ಅದಕ್ಕೇ ಕಗ್ಗ ಅದನ್ನು ಮಿತದ ಅರ್ಥ ಎನ್ನುತ್ತದೆ. ಅಲ್ಲಿ ಪ್ರತಿಯೊಂದು ಅನುಭವವೂ ‘ನಾನು’, ‘ನನ್ನದು’ ಎಂಬುದರ ಸುತ್ತಲೇ ತಿರುಗುತ್ತದೆ. ಮುಂದೆ ಅನುಭವದಲ್ಲಿ ಸ್ವಾರ್ಥ ಕಡಿಮೆಯಾದಂತೆ ಅನುಭವದ ಅರ್ಥ ವಿಸ್ತರಿಸುತ್ತದೆ. ಸ್ವಾಮಿ ವಿವೇಕಾನಂದರು ಶಿಷ್ಯರಿಗೆ ಹೇಳಿದರು, ‘ನಾನೀಗ ತುಂಬ ವಿಸ್ತಾರವಾಗುತ್ತಿದ್ದೇನೆ ಎನ್ನಿಸುತ್ತಿದೆ. ಪ್ರಪಂಚದ ಯಾವುದೇ ಮೂಲೆಯಲ್ಲಾದ ನೋವು ನನ್ನದೇ ಎಂದು ಭಾಸವಾಗುತ್ತದೆ, ತಟ್ಟುತ್ತದೆ’. ಅದು ಅತ್ಯಂತ ಸ್ವಾರ್ಥರಹಿತವಾದ ಅನುಭವ.

ಕಗ್ಗ ಹೇಳುತ್ತದೆ, ಈ ಅನುಭವ ನಮ್ಮ ಋಷಿ-ಮುನಿಗಳು, ತಮ್ಮ ತಪಸ್ಸನ್ನು, ತಿಳಿವಳಿಕೆಯನ್ನು ಘನೀಕರಿಸಿ ನೀಡಿದ ತತ್ವಜ್ಞಾನದೊಡನೆ, ಬೆರೆಸಿದಾಗ ಅದು ಸಾರ್ಥಕವಾಗುತ್ತದೆ. ಅದಕ್ಕೊಂದು ಸುಂದರ ಉದಾಹರಣೆಯಾಗಿ ಪಾರ್ಥನ ಅನುಭವವನ್ನು ನೀಡುತ್ತದೆ. ಅರ್ಜುನ ಶೂರ, ತಿಳಿವಳಿಕೆಯುಳ್ಳವನು. ಯುದ್ಧವನ್ನು ತಾನೇ ಮಾಡುತ್ತೇನೆ, ತನ್ನಿಂದಲೇ ಎಲ್ಲರೂ ಹತರಾಗುತ್ತಾರೆ, ಅದರಿಂದ ಸ್ವಜನಹತ್ಯೆಯ ಪಾಪ ಬರುತ್ತದೆ ಎಂದುಕೊಂಡಿದ್ದ. ಅದು ‘ಅರ್ಜುನ’ ಕೇಂದ್ರಿತವಾದ್ದರಿಂದ ಸ್ವಾರ್ಥದ್ದಾಗಿ ಮಿತವಾಗಿತ್ತು. ಶ್ರೀಕೃಷ್ಣ ಆರ್ಷೇಯ ಜ್ಞಾನವನ್ನು ಅವನಿಗೆ ಬೋಧಿಸಿದಾಗ ಅವನ ದೃಷ್ಟಿ ನಿರ್ಮಲವಾಯಿತು. ತಾನು ಕೇವಲ ಒಂದು ಉಪಕರಣ ಮಾತ್ರ ಎಂಬುದನ್ನು ಅರಿತಾಗ ಅವನ ಯತ್ನ ಸಾರ್ಥಕವಾಯಿತು. ಸ್ವಂತ ಅನುಭವ ಮತ್ತು ಆರ್ಷೇಯ ಜ್ಞಾನದ ಸೇರುವಿಕೆಯಿಂದ ಸಾರ್ಥಕತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT