ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಬೊಮ್ಮನಾಟದ ವೈಭವ

Last Updated 24 ಆಗಸ್ಟ್ 2020, 20:55 IST
ಅಕ್ಷರ ಗಾತ್ರ

ಸುಮ್ಮನಿರಲೊಲದೆ ತನಗೊಡನಾಡಿಯೊರ್ವಳನು |
ನಿರ್ಮಿಸಿ ನಿಜಾಂಶದಿಂ ಮಾಯೆಯೆಂಬವಳಿಂ - ||
ದುಣ್ಮಿದ ಜಗಜ್ಜಾಲಗಳಲಿ ವಿಹರಿಸುತಿರುವ |
ಬೊಮ್ಮನಾಟವ ಮೆರಸೊ– ಮಂಕುತಿಮ್ಮ ||326 ||
ಪದ-ಅರ್ಥ: ಸುಮ್ಮನಿರಲೊಲದೆ=ಸುಮ್ಮನಿರಲು+ಒಲ್ಲದೆ, ತನಗೊಡನಾಡಿಯೋರ್ವಳನು=ತನಗೆ+ಒಡನಾಡಿ+ಒರ್ವಳನು, ಮಾಯೆಯೆಂಬವಳಿಂದುಣ್ಮಿದ=ಮಾಯೆ+ಎಂಬವಳಿಂದ+ಉಣ್ಮಿದ(ಹುಟ್ಟಿದ, ಸೃಜಿಸಿದ), ಜಗಜ್ಜಾಲ=ಜಗತ್ತಿನ ಜಾಲಗಳು

ವಾಚ್ಯಾರ್ಥ: ಬೊಮ್ಮ ಸುಮ್ಮನಿರಲಾರದೆ ತನಗೆ ಒಡನಾಡಿಯೊಬ್ಬಳು ಬೇಕೆಂದು ತನ್ನ ಅಂಶದಿಂದಲೇ ಮಾಯೆಯನ್ನು ನಿರ್ಮಿಸಿ, ಅವಳಿಂದ ಸೃಷ್ಟಿಯಾದ ಈ ಜಗತ್ತಿನ ಜಾಲದಲ್ಲಿ ವಿಹರಿಸುತ್ತಿದ್ದಾನೆ. ಅವನ ಆಟವನ್ನು ಮೆರೆಸು.

ವಿವರಣೆ: ಇಲ್ಲೊಂದು ಪುಟ್ಟ ಕಥೆಯೊಂದನ್ನು ಕಟ್ಟುತ್ತಾರೆ ಡಿ.ವಿ.ಜಿ. ಭಗವಂತ ಒಬ್ಬನೇ ಇದ್ದ. ಆತ ಸುಮ್ಮನಿರಲಾರದೆ ತನಗೊಬ್ಬ ಜೊತೆಗಾರ್ತಿ ಬೇಕೆಂದು ಅಪೇಕ್ಷಿಸಿ ಮಾಯೆಯನ್ನು ಸೃಷ್ಟಿ ಮಾಡಿದ. ಆಕೆಯಿಂದ ಪ್ರಪಂಚದ ಕಾಣ್ಕೆಗಳನ್ನೆಲ್ಲ ಸೃಷ್ಟಿಸಿದ. ಆಕೆಯದೇ ಸೃಷ್ಟಿಯಾದ ಪ್ರಪಂಚದ ಜಾಲಗಳಲ್ಲಿ ವಿಹರಿಸುತ್ತ ಸಂತೋಷಪಡುತ್ತಿದ್ದಾನೆ.

ನಾವು ವಾಸಿಸುವ ಜಗತ್ತು ಒಂದು ಮಾಯಾ ಪ್ರಪಂಚ ಎಂದು ಹೇಳುತ್ತಾರೆ. ಈ ಪ್ರಪಂಚ ನಿಜವೊ, ಸುಳ್ಳೋ ಎಂಬುದು ಮನುಷ್ಯನ ಚಿಂತನೆಯಲ್ಲಿ ನಿರಂತರವಾದ ಪ್ರಶ್ನೆ. ಮಾಯೆ ಪ್ರಕೃತಿಕಾರ್ಯದಲ್ಲಿಯ ಒಂದು ತಂತ್ರ ವಿಶೇಷ. ಮಾಯೆ ಸುಳ್ಳಲ್ಲ. ಆದರೆ ಸತ್ಯವೂ ಅಲ್ಲ. ಅದೊಂದು ದೀರ್ಘವಾದ ಭ್ರಮೆ. ಖ್ಯಾತ ವಿಜ್ಞಾನಿ ಅಲ್ಬರ್ಟ ಐನಸ್ಟಿನ್ ಹೇಳುತ್ತಾರೆ, ‘Reality is merely an illusion, albeit a very persistent one’ ‘ಇಂದಿನ ವಾಸ್ತವಿಕೆ, ಒಂದು ದೀರ್ಘಸಮಯದವರೆಗೆ ತೋರುವ ಭ್ರಮೆ’.

ಮಾಯೆ ಎಂಬುದು ಒಂದು ಸಂಕೀರ್ಣವಾದ ಕಲ್ಪನೆ. ಈ ಮಾಯೆ ಸ್ವತಂತ್ರವಲ್ಲ. ಅದೂ ಹುಟ್ಟಿದ್ದು ಸೃಷ್ಟಿಯಿಂದಲೇ. ಅಂದರೆ ಈ ಭ್ರಮೆಯನ್ನು ಹುಟ್ಟು ಹಾಕಿದ್ದು ಸೃಷ್ಟಿಕರ್ತ, ಭಗವಂತ. ಭ್ರಮೆಗೆ ಕಾರಣ ಪರಮಸತ್ಯ. ಪರಮಸತ್ಯದ ನೆರಳು ಈ ಭ್ರಮೆ! ಹಾಗಾದರೆ ಇಲ್ಲಿ ಬದುಕುವ ನಮಗೆ ಪ್ರಪಂಚ ಸತ್ಯವೇ ಎಂದೇಕೆ ತೋರುತ್ತದೆ? ಅದೊಂದು ಭ್ರಮೆ ಎಂದು ಮರೆಯುವುದು ಸಾಧ್ಯವಿಲ್ಲವಲ್ಲ, ಯಾಕೆ? ಭಗವದ್ಗೀತೆಯಲ್ಲಿ ದೊರೆಯುವ ವಿವರಣೆ ಹೀಗೆ; ಮಾಯಯಾ ಅಪಹೃತಜ್ಞಾನಾ:||

ಈ ಮಾಯೆ ಜನರ ತತ್ವಜ್ಞಾನ ಸಾಮರ್ಥ್ಯವನ್ನು ಅಪಹರಿಸಿಬಿಟ್ಟಿದೆ. ಅದಕ್ಕೆ ಅಕ್ಕಮಹಾದೇವಿ, “ನೀನೊಡ್ಡುವ ಮಾಯೆಯನಾರೂ ಗೆಲ್ಲಲಾಗದು” ಎನ್ನುತ್ತಾಳೆ. ಮಾಯಾ ಪ್ರಪಂಚದಲ್ಲಿ ಅವಿತಿರುವ ಭಗವಂತನನ್ನು ಹೊಂದಿ ಮೆರೆಸುವುದು ಹೇಗೆ? ಬಸವಣ್ಣನವರು ಹೇಳುತ್ತಾರೆ, “ಜಗತ್ತನ್ನು ನಿನ್ನ ಮಾಯೆ ಸುತ್ತಿದೆ, ನನ್ನ ಮನಸ್ಸು ನಿನ್ನನ್ನು ಸುತ್ತಿದೆ. ಪುಟ್ಟ ಕನ್ನಡಿಯೊಳಗೆ ದೊಡ್ಡ ಆನೆ ಕಾಣುವಂತೆ ಎನ್ನೊಳಗೆ, ನೀನು ಅಡಗಿದ್ದೀಯಾ”. ವಿಷಯಾದಿಗಳ ಬಯಕೆ ಮರೆಯಾದರೆ ಮಾಯೆಯ ಹಾವಳಿ ಕಡಿಮೆಯಾಗುತ್ತದೆ, ಮಾಯೆಯ ಹಿಂದಿನ ಸತ್ವ ಮನದಲ್ಲಿ ಇಳಿಯುತ್ತದೆ. ಮಾಯೆ ಸೃಷ್ಟಿಸುವ ಬದುಕಿನ ಸೆಳೆತಗಳನ್ನು ಪಾಶಗಳನ್ನಾಗಿಸಿಕೊಳ್ಳದೆ, ಅವುಗಳನ್ನು ಜೀವನೋತ್ಸಾಹದ ಕುದುರೆಗಳ ಲಗಾಮನ್ನಾಗಿ ಮಾಡಿಕೊಂಡಾಗ ಭಗವಂತನ ಸೃಷ್ಟಿಯನ್ನು ಮೆರೆಸಿದಂತೆ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT