ಸೋಮವಾರ, ಜೂನ್ 14, 2021
22 °C

ಬೆರಗಿನ ಬೆಳಕು: ಸುರಂಗದ ವೈಭವ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಮಹೋಷಧಕುಮಾರನ ಬುದ್ಧಿಶಕ್ತಿಗೆ, ಕರ್ತೃತ್ವ ಶಕ್ತಿಗೆ ಮರುಳಾದ ಬ್ರಹ್ಮದತ್ತ ರಾಜ, ‘ಈ ಸುರಂಗದ ಮತ್ತೇನಾದರೂ ವಿಶೇಷಗಳಿವೆಯೇ?’ ಎಂದು ಕೇಳಿದ. ‘ಮಹಾರಾಜಾ, ಅಕಸ್ಮಾತ್ ಸುರಂಗದಲ್ಲಿ ಬರುವಾಗ ಯಾರಿಗಾದರೂ ಸಂಶಯ ಬಂದರೆ ಅಥವಾ ತಮ್ಮ ಬುದ್ಧಿವಂತ ಗೂಢಚಾರರು ಅದನ್ನು ಕಂಡುಹಿಡಿಯಲು ಬಂದರೆ ಅವರಿಗೆ ಏನೂ ತಿಳಿಯದಂತೆ ಮಾಡಿದ್ದೇನೆ. ತೋರಿಸುತ್ತೇನೆ ಬನ್ನಿ’ ಎಂದು ಕುಮಾರ ರಾಜನನ್ನು ಮುಂದೆ ಕರೆದೊಯ್ದ. ಮುಂದೆ ಅಲಂಕೃತವಾದ ಸುರಂಗ ಮಾರ್ಗದಲ್ಲಿ ಒಳಗೆ ಬಂದರೆ, ಎಂಭತ್ತು ಮಹಾದ್ವಾರಗಳು, ಅರವತ್ನಾಲ್ಕು ಚಿಕ್ಕ ಬಾಗಿಲುಗಳು, ನೂರು ಶಯನಾಗಾರಗಳಿದ್ದವು. ಎಲ್ಲವೂ ಬೆಳಕಿನಿಂದ ಹೊಳೆಯುತ್ತಿದ್ದವು. ಕುಮಾರ ರಾಜನಿಗೆ ನೂರು ಶಯನಾಗಾರಗಳನ್ನು ತೋರಿಸಿದ. ಒಂದು ಮುಖ್ಯ ಶಯನಾಗಾರದ ಬಾಗಿಲು ಮುಚ್ಚಿಕೊಂಡರೆ ಎಲ್ಲ ಶಯನಾಗಾರಗಳ ಬಾಗಿಲುಗಳು ಮುಚ್ಚಿ ಹೋಗುತ್ತಿದ್ದವು. ಅದನ್ನು ತೆರೆದರೆ ಮಾತ್ರ ಉಳಿದವು ತೆರೆಯುತ್ತಿದ್ದವು. ‘ಇದು ಯಾಕೆ ಹೀಗೆ?’ ಎಂದು ರಾಜ ಕೇಳಿದಾಗ, ‘ರಾಜಾ, ನಿನ್ನವರು, ನಮ್ಮ ಮೇಲೆ ದಾಳಿ ಮಾಡಲು ಬಂದರೆ ಅವರೆಲ್ಲರನ್ನು ಈ ಕೊಠಡಿಗಳಲ್ಲಿ ಕೂಡಿ ಹಾಕಿ ಮುಖ್ಯ ಒಂದು ಬಾಗಿಲನ್ನು ಮುಚ್ಚಿದರೆ, ಅವರೆಲ್ಲ ಬಂದಿಗಳಾಗುತ್ತಾರೆ. ಆಗ ಆ ಕೋಣೆಗಳಲ್ಲಿ ಒಂದು ಚೂರೂ ಬೆಳಕಿರುವುದಿಲ್ಲ. ಅವರು ಗಾಳಿ, ಬೆಳಕಿಲ್ಲದೆ, ಎದೆಯೊಡೆದು ಸಾಯುತ್ತಾರೆ’ ಎಂದು ಉತ್ತರಿಸಿದ ಕುಮಾರ.

ಈಗಾಗಲೇ ರಾಜನ ಅನೇಕ ಹಿಂಬಾಲಕರು ಬಂದು ಬೇರೆ ಬೇರೆ ಕೋಣೆಗಳನ್ನು ನೋಡುತ್ತ ನಿಂತಿದ್ದರು. ಕುಮಾರ ಪ್ರಧಾನ ಶಯನಾಗಾರದ ಬಾಗಿಲು ಹಾಕಿದೊಡನೆ ಎಲ್ಲಾ ಮಾರ್ಗಗಳು ಮುಚ್ಚಿಕೊಂಡವು. ಒಳಗಿದ್ದವರು ಕಂಗಾಲಾದರು. ಬಾಗಿಲುಗಳು ಎಷ್ಟು ಭದ್ರವಾಗಿದ್ದವೆಂದರೆ ಒಳಗಿನವರ ಕೂಗಾಟ ಸ್ವಲ್ಪವೂ ಹೊರಗೆ ಕೇಳಿಸುತ್ತಿರಲಿಲ್ಲ. ಅದೇ ಕ್ಷಣದಲ್ಲಿ ನೂರು ಜನ ಅತ್ಯಂತ ಬಲಿಷ್ಠರಾದ, ಆಯುಧಗಳಿಂದ ಸಜ್ಜಾದ ಸೈನಿಕರು, ಖಡ್ಗಗಳನ್ನು ಹಿಡಿದುಕೊಂಡು ಹಾರಿ ಮುಂದೆ ಬಂದರು. ರಾಜ ಗಾಬರಿಯಾದ. ಕುಮಾರ ನಕ್ಕು ಹೇಳಿದ, ‘ಮಹಾರಾಜಾ, ಭಯಬೇಡ. ಇದೊಂದು ರಕ್ಷಣೆಯ ವ್ಯವಸ್ಥೆ. ಬಾಗಿಲುಗಳು ಹಾಕಿದೊಡನೆ ಹೊರಗಿನವರು ಯಾರೋ ಬಂದಿದ್ದಾರೆಂದು ಈ ಸೈನಿಕರು ಹಾರಿಬರುತ್ತಾರೆ, ಬಂದವರನ್ನು ಕೊಂದು ಹಾಕುತ್ತಾರೆ. ಇದೇ ತರಹ ಮುಂದೆ ಕೂಡ ಐದು ನೂರು ಜನ ಸೈನಿಕರಿದ್ದಾರೆ’. ಮತ್ತೆ ಶಯನಾಗಾರದ ಬಾಗಿಲುಗಳನ್ನು ತೆರೆಸಿದ.

ಮುಂದೆ ಹಾಗೆಯೇ ಸಾಗಿ ಬಂದಾಗ ಎದುರಿಗೆ ಒಂದು ವಿಶಾಲವಾದ ಸಭಾಂಗಣ. ಅಲ್ಲಿ ನೂರು ಜನ ರಾಜರು ಕುಳಿತಿದ್ದರು. ಅಮಾತ್ಯ ಕೇವಟ್ಟ ಯಾರಿಗೆ ಸುರೆಯಲ್ಲಿ ವಿಷ ಹಾಕಿ ಕೊಲ್ಲಬೇಕೆಂದು ಮಾಡಿದ್ದನೋ, ಅವರೇ ಇವರು. ಈ ರಾಜರು ಕೂಡ ಕುಮಾರನ ಅತಿಥಿಗಳಂತೆ ಬಂದು ಬಂಧಿಯಾದವರೇ. ರಾಜರುಗಳು ಹೇಳಿದರು, ‘ಮಹೋಷಧಕುಮಾರ ಅಂದು ಬುದ್ಧಿವಂತಿಕೆಯಿಂದ ಸೈನಿಕರನ್ನು ಕಳುಹಿಸಿ ಸುರೆಯ ಮಡಕೆಗಳನ್ನು ಒಡಿಸದಿದ್ದರೆ ನಾವೆಲ್ಲ ಸತ್ತೇ ಹೋಗುತ್ತಿದ್ದೆವು’. ಆಗ ಬ್ರಹ್ಮದತ್ತ ರಾಜ ಅವರ ಕ್ಷಮೆ ಕೇಳಿದ, ‘ನಾನು ಈ ದುಷ್ಟ ಕೇವಟ್ಟನ ಮಾತು ಕೇಳಿ ಆ ತಪ್ಪು ಮಾಡಿದ್ದೆ. ದಯವಿಟ್ಟು ಕ್ಷಮಿಸಿ’ ಎಂದ.

ಇದನ್ನೆಲ್ಲ ಕಂಡು ಆಶ್ಚರ್ಯಪಟ್ಟ ರಾಜ ಕೇಳಿದ, ‘ಕುಮಾರ ಇಷ್ಟು ಬುದ್ಧಿ ಇರುವ ನೀನೇ ಯಾಕೆ ರಾಜ್ಯವನ್ನು ವಶಪಡಿಸಿಕೊಳ್ಳಲಿಲ್ಲ? ನಿನ್ನಂತಹವನಿಗೆ ಮತ್ತೊಬ್ಬ ರಾಜನ ಕೆಳಗೆ ಆಳಾಗಿರುವುದು ಶೋಭೆಯಲ್ಲ’. ಅದಕ್ಕೆ ಮಹೋಷಧಕುಮಾರ ನೀಡಿದ ಉತ್ತರ ಮಾರ್ಮಿಕವಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು