ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಸದ ತಾತ್ಕಾಲಿಕ ಲಾಭ

Last Updated 25 ಅಕ್ಟೋಬರ್ 2019, 7:18 IST
ಅಕ್ಷರ ಗಾತ್ರ

ಹಿಂದೆ ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ತನ್ನ ಪೂರ್ವ ಜನ್ಮದ ಪುಣ್ಯವಿಶೇಷದಿಂದ ತ್ರಯ-ತ್ರಿಂಶ ದೇವಲೋಕದಲ್ಲಿ ದೇವಪುತ್ರನಾಗಿ ಜನಿಸಿದ್ದ.

ಒಂದು ಬಾರಿ ವಾರಾಣಸಿಯಲ್ಲಿ ಮಹೋತ್ಸವವಾಯಿತು. ಆ ಸುಂದರ ಉತ್ಸವವನ್ನು ನೋಡಲು ಎಲ್ಲ ಲೋಕಗಳಿಂದ ವ್ಯಕ್ತಿಗಳು ಬಂದರು. ತ್ರಯ-ತ್ರಿಂಶ ದೇವಲೋಕದಿಂದಲೂ ನಾಲ್ಕು ದೇವತೆಗಳು ಹೊರಟರು. ಹೊರಡುವ ಮುನ್ನ ದೇವಲೋಕದ ವಿಶೇಷ ಪುಷ್ಪವಾದ ಕಕ್ಕರುವಿನ ದಿವ್ಯಮಾಲೆಯನ್ನು ಧರಿಸಿದರು. ಅವರು ವಾರಣಾಸಿಗೆ ಬಂದೊಡನೆ ಆ ಪುಷ್ಪಗಳ ಸುಗಂಧ ಇಡೀ ನಗರವನ್ನು ಆವರಿಸಿಬಿಟ್ಟಿತು. ಈ ಪರಿಮಳ ಬಂದದ್ದು ಎಲ್ಲಿಂದ ಎಂಬ ಕುತೂಹಲ ಎಲ್ಲ ನಾಗರಿಕರನ್ನು ಕಾಡತೊಡಗಿತು. ತಮ್ಮನ್ನು ಜನ ಕಾಣಬಯಸುತ್ತಾರೆ ಎಂಬುದು ಈ ದೇವತೆಗಳಿಗೆ ತಿಳಿದು ಅವರು ಎಲ್ಲರಿಗೂ ಕಾಣುವಂತೆ ರಾಜನ ಅರಮನೆಯ ಮುಂದೆ ಆಕಾಶಕ್ಕೇರಿ ನಿಂತರು. ರಾಜ, ಯುವರಾಜ, ಪುರೋಹಿತ ಮತ್ತೆಲ್ಲ ರಾಜ ಪರಿವಾರದವರು ನೆರೆದು ಅವರನ್ನು ಗಮನಿಸಿದರು.

ರಾಜ ಕೇಳಿದ, ‘ಸ್ವಾಮಿ, ತಾವು ಯಾರು? ಯಾವ ಲೋಕದಿಂದ ಬಂದದ್ದು?’
‘ನಾವು ಬಂದದ್ದು ತ್ರಯ-ತ್ರಿಂಶ ದೇವಲೋಕದಿಂದ, ವಾರಣಾಸಿಯ ಉತ್ಸವ ನೋಡುವ ಆಸೆಯಿಂದ ಬಂದಿದ್ದೇವೆ’
‘ನೀವು ಹಾಕಿಕೊಂಡಿರುವ ಮಾಲೆ ಯಾವ ಪುಷ್ಪದ್ದು? ಅವುಗಳ ವಾಸನೆ ಅಪರೂಪದ್ದು’
‘ಇದು ದೇವಲೋಕದ ವಿಶೇಷ ಪುಷ್ಪ ಕಕ್ಕರು’
‘ಅದರ ವಾಸನೆ ನಮಗೆಲ್ಲ ತುಂಬ ಇಷ್ಟವಾಗಿದೆ. ದಯವಿಟ್ಟು ಈ ಮಾಲೆಗಳನ್ನು ನಮಗೆ ಕೊಟ್ಟು ಹೋಗಿ ಹೇಗಿದ್ದರೂ ನಿಮ್ಮಲ್ಲಿ ಈ ಪುಷ್ಪ ಸಿಕ್ಕೇ ಸಿಗುತ್ತದೆ’ ಎಂದ ರಾಜ.
‘ಇದು ಸಾಮಾನ್ಯ ಪುಷ್ಪವಲ್ಲ. ಇದು ದೇವತೆಗಳಿಗೆ ಮಾತ್ರ ಯೋಗ್ಯ. ಅದನ್ನು ಧರಿಸಿದ ವ್ಯಕ್ತಿಯಲ್ಲಿ ಯಾವುದಾದರೂ ತುಚ್ಛ ಗುಣಗಳಿದ್ದರೆ ಇದು ಹೊಂದಲಾರದು. ಮತ್ತೊಬ್ಬರ ಯಾವ ವಸ್ತುವನ್ನು ಅಪಹರಿಸುವವನು, ಸುಳ್ಳು ಹೇಳುವವನು, ಶ್ರೀಮಂತಿಕೆಯಲ್ಲಿ ಪ್ರಮಾದಿಯಾದವನು ಇದನ್ನು ಧರಿಸಲಾರ. ನಿಮ್ಮಲ್ಲಿ ಅಂತಹ ಕೆಟ್ಟ ಗುಣಗಳಿಲ್ಲದವರು ಯಾರಾದರೂ ಇದ್ದರೆ ಈ ಮಾಲೆ ಕೊಡುತ್ತೇವೆ’ ಎಂದರು ದೇವತೆಗಳು.

ಇದನ್ನು ಕೇಳುತ್ತಿದ್ದ ಪುರೋಹಿತ ಯೋಚಿಸಿದ. ನನ್ನಲ್ಲಿ ಅನೇಕ ಕೆಟ್ಟ ಗುಣಗಳಿವೆ. ಆದರೆ ಇಲ್ಲವೆಂದು ಸುಳ್ಳು ಹೇಳಿ ಮಾಲೆ ಪಡೆದರೆ ನಾನು ಅತ್ಯಂತ ಶ್ರೇಷ್ಠ ವ್ಯಕ್ತಿಯೆಂದು ಜನ ನಂಬುತ್ತಾರೆ, ನನ್ನ ಗೌರವ ಹೆಚ್ಚುತ್ತದೆ. ಹೀಗೆ ಚಿಂತಿಸಿ, ‘ಸ್ವಾಮೀ, ನನ್ನಲ್ಲಿ ಯಾವ ದುರ್ಗುಣವೂ ಇಲ್ಲ’ ಎಂದು ಕೂಗಿದ.

ದೇವತೆಗಳು ಅವನಿಗೆ ಹೂಮಾಲೆಗಳನ್ನು ಕೊಟ್ಟು ತಮ್ಮ ಲೋಕಕ್ಕೆ ಹೋದರು ಅವರು ಹೋದ ಮೇಲೆ ಪುರೋಹಿತನಿಗೆ ಸಿಡಿದುಹೋಗುವಷ್ಟು ತಲೆನೋವು ಪ್ರಾರಂಭವಾಯಿತು. ಸ್ವಲ್ಪ ಹೊತ್ತಿನ ನಂತರ ಯಾರೋ ಕರಗಸದಿಂದ ಕತ್ತನ್ನು ಕೊಯ್ಯುತ್ತಿರುವಂತೆ, ಕಬ್ಬಿಣದ ಪಟ್ಟಿಯನ್ನು ಬಿಗಿಯಾಗಿ ಕಟ್ಟಿ ಎಳೆಯುತ್ತಿದ್ದಂತೆ ಭಾಸವಾಯಿತು. ಕ್ಷಣ-ಕ್ಷಣಕ್ಕೂ ಆ ನೋವು, ಸಂಕಟ ಹೆಚ್ಚಾಗುತ್ತ ಬಂದಿತು. ಪುರೋಹಿತನಿಗೆ ಅದನ್ನು ತಡೆದುಕೊಳ್ಳುವುದು ಅಸಾಧ್ಯವಾಗಿ ನೆಲದ ಮೇಲೆ ಬಿದ್ದು ಹೊರಳಾಡತೊಡಗಿದ. ಎಲ್ಲರೂ ಸೇರಿದರು. ಆತ ಗೋಗರೆದ, ‘ನನ್ನಲ್ಲಿ ಯಾವ ದುರ್ಗುಣವೂ ಇಲ್ಲವೆಂದು ಸುಳ್ಳು ಹೇಳಿ ಮಾಲೆಗಳನ್ನು ಪಡೆದೆ. ಅದರಿಂದ ಈ ಯಾತನೆಯಾಗಿದೆ. ದಯವಿಟ್ಟು ಅವುಗಳನ್ನು ತೆಗೆದುಬಿಡಿ’. ಏನು ಮಾಡಿದರೂ ಮಾಲೆಗಳನ್ನು ತೆಗೆಯಲಾಗಲಿಲ್ಲ. ಅವು ದೇಹಕ್ಕೆ ಹೊಲಿ
ದಂತೆ ಬಲವಾಗಿ ಅಂಟಿಕೊಂಡಿದ್ದವು. ಇಡೀ ದಿನ ಆತ ಒದ್ದಾಡಿ ಸತ್ತು ಹೋದ.

ಸುಳ್ಳು ಹೇಳಿ ಮೋಸ ಮಾಡಿ ತಾತ್ಕಾಲಿಕ ಲಾಭ ಪಡೆಯಬಹುದು. ಆದರೆ ಅದೇ ಸುಳ್ಳು, ಮೋಸ ಮುಂದೆ ನಮ್ಮನ್ನು ಬಿಡದ ಪಾಶವಾಗಿ ಸೆಳೆಯುತ್ತದೆ, ಶಕ್ತಿಯನ್ನು ಹೀರುತ್ತದೆ, ನಿರ್ವೀಯರನ್ನಾಗಿ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT