ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಒಂದು ಶಾಂತಿ ಮಂತ್ರ

Published 7 ಆಗಸ್ಟ್ 2023, 23:32 IST
Last Updated 7 ಆಗಸ್ಟ್ 2023, 23:32 IST
ಅಕ್ಷರ ಗಾತ್ರ

ತಮ್ಮೆಲ್ಲ ಹಸಿವುಗಳ ತಣಿಯಿಪನಿತನ್ಯೋನ್ಯ |
ಹೊಮ್ಮುಗೌದಾರ್ಯ ಜನಜನಪದಂಗಳಲಿ ||
ಬೊಮ್ಮನೆಲ್ಲರನಾಳ್ಪನಿಹನೆನುವ ನೆನಪಿನಲಿ |
ನೆಮ್ಮದಿಯ ಪಡೆಗೆ ಜಗ – ಮಂಕುತಿಮ್ಮ || 944 ||

ಪದ-ಅರ್ಥ: ತಣಿಯಿಪನಿತನ್ಯೋನ್ಯ=ತಣಿಯಿಪ

(ತಣಿಸುವ)+ಅನಿತ(ಕೊಂಚ)+ಅನೋನ್ಯ
ಹೊಮ್ಮುಗೌದಾರ್ಯ=ಹೊಮ್ಮುಗೆ
(ಹೊಮ್ಮಲಿ)+ಔದಾರ್ಯ,ಜನಜನಪದಗಳಲಿ=ಜನ+ಜನಪದಗಳಲಿ(ಜನಪದಗಳಲಿ), ಬೊಮ್ಮನೆಲ್ಲರನಾಳ್ಪನಿಹನೆನುವ=ಬೊಮ್ಮನು(ಪರಬ್ರಹ್ಮನು) +ಎಲ್ಲರನು+ಆಳ್ಪನು+ಇಹನು(ಇದ್ದಾನೆ)+ಎನುವ, ಪಡೆಗೆ=ಪಡೆಯಲಿ.

ವಾಚ್ಯಾರ್ಥ: ಜನ ಜನಪದಗಳಲ್ಲಿ, ತಮ್ಮೆಲ್ಲರ ಹಸಿವು, ಅಪೇಕ್ಷೆಗಳನ್ನು ಅನ್ಯೋನ್ಯವಾಗಿ ತಣಿಸಿಕೊಳ್ಳುವ ಔದಾರ್ಯ ಹೊಮ್ಮಲಿ. ಭಗವಂತನು ಎಲ್ಲರನ್ನೂ ಕಾಪಾಡಲು ಇರುವನೆಂಬ ನೆನಪಿನಲ್ಲಿ, ಜಗತ್ತು ನೆಮ್ಮದಿಯನ್ನು ಪಡೆಯಲಿ.
ವಿವರಣೆ: ಪ್ರಪಂಚದಲ್ಲಿ ಸುಖ-ಸಮೃದ್ಧಿ ನೆಲೆಸುವಂತೆ ಆಶಿಸಲು ಅನೇಕ ಮಾರ್ಗಗಳಿವೆ. ಪೂಜೆ, ಭಜನೆ, ಅರ್ಚನೆ, ಜಪ, ಮಂತ್ರಪಠಣ ಹೀಗೆ ಯಾವುದಾದರೂ ಆಗಬಹುದು. ಅದರಂತೆ ಒಂದು ವಿಧಾನ ಶಾಂತಿಮಂತ್ರಗಳ ಪಠಣ. ಈ ಮಂತ್ರಗಳನ್ನು ಹೇಳುವುದರಿಂದ ಮನಸ್ಸಿಗೆ ಶಾಂತಿ ದೊರಕಿ ಹೃದಯ ವಿಶಾಲವಾಗುತ್ತದೆ. ಈ ಮಂತ್ರಗಳು ಪ್ರಪಂಚದ ಎಲ್ಲ ಜೀವಿಗಳ ಕ್ಷೇಮವನ್ನೇ ಬಯಸುತ್ತವೆ.
ಓಂ ಸಹನಾವವತು ಸಹನೌಭುನಕ್ತು |
ಸಹವೀರ್ಯಂ ಕರವಾವಹೈ ತೇಜಸ್ವಿನಾವಧೀತಮಸ್ತು
ಮಾವಿದ್ಪಷಾವಹೈ ||
ಓಂ ಶಾಂತಿ: ಶಾಂತಿ: ಶಾಂತಿ:

‘ಭಗವಂತನ ಕೃಪೆ ನಮ್ಮೆಲ್ಲರನ್ನು ಜೊತೆಯಲ್ಲಿ ರಕ್ಷಿಸಲಿ, ಜೊತೆಯಲ್ಲಿ ಪೋಷಿಸಲಿ. ಜೊತೆಯಲ್ಲಿಯೇ ನಾವು ಸಮರ್ಥವಾದಕಾರ್ಯಗಳನ್ನು ಮಾಡುವಂತಾಗಲಿ. ನಮ್ಮ ಅಧ್ಯಯನ ತೇಜಸ್ವಿಯಾಗಲಿ, ನಾವು ದ್ವೇಷಿಸದೆ ಇರುವಂತಾಗಲಿ. ಎಲ್ಲೆಲ್ಲಿಯೂ ಶಾಂತಿ ನೆಲೆಸಲಿ’.

ನನ್ನ ಪ್ರಕಾರ, ಈ ಕಗ್ಗ ಕೂಡ ಯಾವ ಶಾಂತಿಮಂತ್ರಕ್ಕೂ ಕಡಿಮೆಯಿಲ್ಲದ್ದು. ಇದರಲ್ಲಿರುವುದು ಇಡೀ ಪ್ರಪಂಚಕ್ಕೆ ಕಲ್ಯಾಣವಾಗಲಿ ಎಂಬ ಆಶಯ. ಜಗತ್ತಿನಲ್ಲಿಯ ಎಲ್ಲ ಜನರು, ಜನಪದಗಳು ತಮ್ಮೆಲ್ಲ ಹಸಿವು, ಅಪೇಕ್ಷೆಗಳನ್ನು ತಣಿಸಿಕೊಳ್ಳಲಿ. ಅಲ್ಲೊಂದು ವಿಶೇಷವಾದ ಮಾತಿದೆ. ತಮ್ಮ ಅಪೇಕ್ಷೆಗಳನ್ನು ಪೂರೈಸಿಕೊಳ್ಳುವಾಗ ಅನ್ಯೋನ್ಯತೆ ಇರಲಿ. ಅಲ್ಲಿ ಔದಾರ್ಯ ಹೊಮ್ಮಲಿ. ಮತ್ತೊಬ್ಬರಿಗೆ ಹಾನಿಮಾಡಿ, ನೋವುಂಟು ಮಾಡಿ ತಣಿಸಿಕೊಂಡ ಅಪೇಕ್ಷೆ ಸಂಪೂರ್ಣ ಸ್ವಾರ್ಥ. ಇನ್ನೊಂದು ಬಹುದೊಡ್ಡ ಶ್ರದ್ಧೆಯ ಮಾತಿದೆ. ಮೇಲೆ ನಮ್ಮೆಲ್ಲರನ್ನೂ ಕಾಪಿಡುವ, ನಿಗ್ರಹಿಸುವ ಶಕ್ತಿಯೊಂದಿದೆ ಎಂಬುದು ನೆನಪಿರಲಿ. ಈ ನೆನಪು ಮನುಷ್ಯರಲ್ಲಿ ಅಹಂಕಾರ ಮೊಳೆಯದಂತೆ ನೋಡುವುದಲ್ಲದೆ, ಕಷ್ಟ ಬಂದು ಮೊಣಕಾಲೂರಿ ಕುಳಿತಾಗ, ಆ ಶಕ್ತಿ ಕಾಪಾಡುತ್ತದೆಂಬ ಭರವಸೆ ಆತ್ಮವಿಶ್ವಾಸವನ್ನು ತುಂಬುತ್ತದೆ. ಹೀಗೆ ಜಗತ್ತು ನೆಮ್ಮದಿಯನ್ನು ಪಡೆಯಲಿ ಎಂದು ಕಗ್ಗ ಆಶಿಸುತ್ತದೆ. ಪರಸ್ಪರ ಅನ್ಯೋನ್ಯತೆ ಮತ್ತು ಭಗವಂತನಲ್ಲಿ ಶ್ರದ್ಧೆ ಇವೆರಡೂ ನೆಮ್ಮದಿಯ ತಾಣಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT