ಶುಕ್ರವಾರ, ಜುಲೈ 1, 2022
28 °C

ಕಾಮ-ಮೋಹಗಳ ಮೇಲೆ ಜಯ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಮೂರನಂ ದಂಡಿಸಿರೆ ಗೌರಿಯಿಂ ಭಯವೇನು? |
ಚಾರುಸಹಕಾರಿಯವಳೆಂದು ಶಿವನೊಲಿದನ್ ||
ಮೀರೆ ಮೋಹವನು ಸಂಸಾರದಿಂ ಭಯವೇನು ? |
ದಾರಿ ಕೆಳೆಯದು ನಿನಗೆ – ಮಂಕುತಿಮ್ಮ || 614 ||

ಪದ-ಅರ್ಥ: ಮಾರ=ಕಾಮ, ದಂಡಿಸಿರೆ=ದಂಡಿಸಿರುವಾಗ, ಗೌರಿಯಿಂ=ಗೌರಿಯಿಂದ, ಚಾರುಸಹಕಾರಿಯವಳೆಂದು=ಚಾರು(ಮನೋಹರ, ಸುಂದರ)+ಸಹಕಾರಿಯವಳು+ಎಂದು, ಮೀರೆ=ಗೆದ್ದ ಮೇಲೆ, ಕೆಳೆಯದು=ಸ್ನೇಹಿತನದು, ಮಾರ್ಗದರ್ಶಿಯದು.

ವಾಚ್ಯಾರ್ಥ: ಮನ್ಮಥನನ್ನೇ ಕೊಂದ ಮೇಲೆ ಗೌರಿಯಿಂದ ಯಾವ ಭಯ? ಆಕೆ ಮನೋಹರಳಾದ ಸಹಭಾಗಿನಿ ಎಂದು ಶಿವ ಒಲಿದಿದ್ದಾನೆ. ಮೋಹವನ್ನು ಮೀರಿದ ಮೇಲೆ ಸಂಸಾರದಿಂದ ಯಾವ ಭಯ. ಇದು ನಿನಗೆ ಮಾರ್ಗದರ್ಶಿಯಾದದ್ದು.

ವಿವರಣೆ: ಭಿಕ್ಷುಕ ಭಿಕ್ಷಾಪಾತ್ರೆ ಹಿಡಿದುಕೊಂಡು ಊರು ದಾಟಿ ಮರುಭೂಮಿಯಲ್ಲಿ ನಡೆದಿದ್ದ. ಅಲ್ಲಿ ಒಂದೆಡೆಗೆ ತುಂಬ ಜನ. ನೂರಾರು ಸೇವಕರು. ಅಲ್ಲೊಂದು ಡೇರೆ. ಅದನ್ನು ನೆಲಕ್ಕೆ ಊರಲು ಬಳಸಿದ ಗೂಡು ಚಿನ್ನದ್ದು. ಡೇರೆಯ ಸುತ್ತ ಒಂದು ಸಮೃದ್ಧ ಪರಿಸರವೇ ನಿಂತಿದೆ. ಭಿಕ್ಷುಕ ಕೇಳಿದ. ‘ಯಾರು ಆ ಡೇರೆಯಲ್ಲಿ ಇರುವವರು’. ‘ಅವರೊಬ್ಬ ಸೂಫೀ ಸಂತರು’ ಎಂಬ ಉತ್ತರ ಬಂತು. ಸಂತರೇ? ಈ ಪರಿಯ ಶ್ರೀಮಂತಿಕೆ ಬೇಕೇ ಸಂತರಿಗೆ. ಭಿಕ್ಷುಕ ಡೇರೆಯೊಳಗೆ ಹೋದ. ಎಲ್ಲೆಲ್ಲೂ ಸಂಪತ್ತು ಸೂರೆಯಾಗಿದೆ. ಅದೇನು ಚೆಂದದ ಆಭರಣಗಳು! ಚೆಂದದ ಬೆಡಗಿಯರು! ತರತರಹದ ಶ್ರೀಮಂತಿಕೆಯ ಭಕ್ಷ್ಯ, ಭೋಜ್ಯಗಳು! ಮತ್ತೊಂದು ಆವರಣದಲ್ಲಿ ಹಂಸತೂಲಿಕಾ ತಲ್ಪದ ಮೇಲೆ ಒಬ್ಬ ಮನುಷ್ಯ ಮಲಗಿದ್ದಾನೆ. ಅವನ ಮೈಮೇಲೆ ಅತ್ಯಂತ ಬೆಲೆಬಾಳುವ ಆಭರಣಗಳು, ಬಟ್ಟೆಗಳು: ಭಿಕ್ಷುಕ ಕೇಳಿದ, ‘ನೀವು ಸಂತರೇ? ಸಂತರಾದರೆ ಏಕಿಷ್ಟು ಮೋಹ? ನನ್ನ ಜೊತೆಗೆ ಬರುತ್ತೀರಾ?’. ಸಂತ ಎದ್ದ, ‘ನಡೆ ಹೋಗೋಣ’, ಎಂದ. ಸರಸರನೇ ತನ್ನ ಆಭರಣಗಳು, ಬೆಲೆಬಾಳುವ ವಸ್ತುಗಳನ್ನು ಕಳೆದು ನಡೆದೇ ಬಿಟ್ಟ. ಭಿಕ್ಷುಕನಿಗೆ ಆಶ್ಚರ್ಯ! ಒಂದು ಮೈಲಿ ಹೋದ ಮೇಲೆ ಭಿಕ್ಷುಕ ಗಾಬರಿಯಿಂದ ಹೇಳಿದ, ‘ಮತ್ತೇ ನಿಮ್ಮ ಡೇರೆಗೆ ಹೋಗೋಣ ನಡೆಯಿರಿ. ನನ್ನ ಭಿಕ್ಷಾ ಪಾತ್ರೆಯನ್ನು ಅಲ್ಲಿಯೇ ಮರೆತು ಬಂದಿದ್ದೇನೆ’. ಸಂತ ನಕ್ಕ. ‘ನೋಡಿದೆಯಾ? ನೀನು ಭಿಕ್ಷಾ ಪಾತ್ರೆಯನ್ನು ಬಿಡಲಾರೆ. ನಾನು ಆ ಎಲ್ಲ ಐಶ್ವರ್ಯವನ್ನು ಬಿಟ್ಟು ನಿರುಮ್ಮಳವಾಗಿ ಬಂದಿದ್ದೇನೆ’. ಭಿಕ್ಷುಕ ಕೇಳಿದ, ‘ಇದು ಹೇಗೆ ಸಾಧ್ಯ?’. ಸಂತ, ‘ಒಂದು ಸಲ ವಸ್ತುಗಳ ಬಗೆಗಿನ ಮೋಹ ಹೊರಟುಹೋದರೆ, ಸುತ್ತ ರಾಶಿ ಬಿದ್ದಿದ್ದರೂ ಅವು ನಮ್ಮನ್ನು ಸೆಳೆಯಲಾರವು. ವಸ್ತುಗಳು ನಮ್ಮನ್ನು ಸೆಳೆಯುವುದಿಲ್ಲ, ಮೋಹ ಸೆಳೆಯುತ್ತದೆ’.  ಭಿಕ್ಷುಕ ಆ ಮಾತನ್ನು ಒಪ್ಪಿದ.

ಇದರ ಹಾಗೆ ಒಂದು ಸಲ ಕಾಮವನ್ನು ಜಯಿಸಿಬಿಟ್ಟರೆ, ಯಾವ ಅಪೇಕ್ಷೆಯೂ, ತೊಂದರೆ ಕೊಡಲಾರದು. ಕಗ್ಗದ ಮೊದಲ ಮಾತೇ ಅದು. ಮನ್ಮಥನನ್ನೇ ಗೆದ್ದ ಮೇಲೆ ಹೆಣ್ಣೆಂಬ ಮಾಯೆ ಶಿವನನ್ನು ಕಾಡೀತೇ? ಅದರಲ್ಲೂ ಗೌರಿ ಕೇವಲ ಒಬ್ಬ ಸ್ತ್ರೀಯಲ್ಲ. ಆಕೆ ಅವನ ಕಾರ್ಯದಲ್ಲಿ ಸಹಕಾರಿಯಾದವಳು, ಸಮಾನಮನಸ್ಕಳಾದವರು. ಅದಕ್ಕೇ ಆಕೆಗೆ ಒಲಿದ.

ಸಂಸಾರದ ಸಂಕಟ ಇರುವುದೇ ಮೋಹದಲ್ಲಿ, ಅತಿಯಾದ ಆಸೆಯಲ್ಲಿ,

ಸಂಸಾರವೆಂಬ ಅರಣ್ಯದೊಳು ಬಿದ್ದೆನು
ಮೋಹವೆಂಬ ಹುಲಿ ಬಂದು ಹಿಡಿಯಿತ್ತಯ್ಯ ಎನ್ನ
ನಿಮ್ಮ ಮಹಾಜ್ಞಾನ ಶಸ್ತ್ರದಲ್ಲಿ,
ಈ ಮೋಹವೆಂಬ ಹುಲಿಯ ಕೊಂದು ನಿಮ್ಮತ್ತ ತೆಗೆದುಕೊಳ್ಳಾ
ಅಪ್ರಮಾಣ ಕೂಡಲಸಂಗಮದೇವಾ.

ವಚನಕಾರ ಬಾಲಸಂಗಯ್ಯ ಹೇಳಿದಂತೆ ಜ್ಞಾನದಿಂದ ಮೋಹವನ್ನು ಗೆದ್ದರೆ ಸಂಸಾರದಿಂದ ಯಾವ ತೊಂದರೆಯೂ ಇಲ್ಲ. ಆಗ ಸಂಸಾರದ ಭಯವೇಕೆ? ಈ ದಾರಿ ಮಾರ್ಗದರ್ಶಿಯಾದದ್ದು. ಕಾಮವನ್ನು ಗೆದ್ದ ಶಿವ, ಮೋಹವನ್ನು ಜ್ಞಾನದಿಂದ ಗೆದ್ದ ಸಾಧಕರ ಮಾರ್ಗ ನಮಗೆ ಮಾರ್ಗದರ್ಶಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು