ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಕೊಳಕಾಗುವ ವಿವೇಕ

Last Updated 12 ಜನವರಿ 2022, 19:30 IST
ಅಕ್ಷರ ಗಾತ್ರ

ನರವಿವೇಕವದೇನು ಬರಿಯ ಮಳೆ ನೀರಲ್ಲ |
ಕೆರೆಯ ನೀರ್ ಊರ ಮೈಸೋಂಕುಗಳ ಬೆರಕೆ ||
ಧರೆಯ ರಸವಾಸನೆಗಳಾಗಸದ ನಿರ್ಮಲದ |
ವರವ ಕದಡಾಗಿಪುವು – ಮಂಕುತಿಮ್ಮ || 540 ಪದ-ಅರ್ಥ: ನರವಿವೇಕವದೇನು=ನರವಿವೇಕವು+ಅದೇನು, ಬೆರಕೆ=ಮಿಶ್ರಣ, ರಸವಾಸನೆಗಳಾಗಸದ=ರಸ+ವಾಸನೆಗಳು+ಆಗಸದ, ಕದಡಾಗಿಪುವು=ಕೊಳಕಾಗಿಸುವವು.
ವಾಚ್ಯಾರ್ಥ: ಮನುಷ್ಯನ ವಿವೇಕವೆನ್ನುವುದು ಶುದ್ಧ ಮಳೆಯ ನೀರಲ್ಲ. ಅದು ಕೆರೆಯಲ್ಲಿ ಬಿದ್ದು, ಊರ ಜನರ ಮೈಸೋಂಕನ್ನು ಪಡೆದು ಬೆರಕೆಯಾಗುತ್ತದೆ. ಭೂಮಿಯ ರಸ, ವಾಸನೆಗಳೆಲ್ಲ ಸೇರಿ ಆಕಾಶದ ನಿರ್ಮಲ ವರವಾದ ನೀರನ್ನು ಕೊಳಕುಮಾಡುತ್ತವೆ.

ವಿವರಣೆ: ಯಾವ ಮನುಷ್ಯನೂ ಹುಟ್ಟಿದಾಗ ಕೆಟ್ಟವನಾಗಿರುವುದಿಲ್ಲ. ಆದರೆ ಬೆಳೆದಂತೆ ಮನುಷ್ಯನ ಮನಸ್ಸು ಕಲುಷಿತವಾಗುತ್ತ ಹೋಗುತ್ತದೆ. ವಿವೇಕವೆಂದರೆ ಸಾಮಾನ್ಯವಾಗಿ ಭಾಷೆಯಲ್ಲಿ ಬಳಸುವ, ಆಂಗ್ಲಭಾಷೆಯಲ್ಲಿ intelligence ಎನ್ನುವ ಬುದ್ಧಿಯಲ್ಲ. ಇದು ವೈಚಾರಿಕ ಮನಸ್ಸೂ ಅಲ್ಲ. ವಿಚಾರವಂತರನ್ನು ಬುದ್ಧಿವಂತರೆಂದು ಹೇಳುತ್ತೇವೆ. ಇದು ಆ ಬುದ್ಧಿಯೂ ಅಲ್ಲ. ವಿವೇಕವೆನ್ನುವುದು ತಾರ್ಕಿಕತೆಯನ್ನು ಬಳಸಿ ತನ್ನನ್ನು ತಾನೇ ನಿಯಂತ್ರಿಸಿಕೊಳ್ಳುವ ಸಾಮಥ್ರ್ಯ. ಇದು ನೈತಿಕ ಮತ್ತು ಅನೈತಿಕ ಕ್ರಿಯೆಗಳ ನಡುವಿನ ವ್ಯತ್ಯಾಸವನ್ನು ತಿಳಿದು ನಿರ್ಣಯಿಸುವ ವಿವೇಚನಾ ಶಕ್ತಿ.

ಮನುಷ್ಯನ ವಿವೇಕ ಮಳೆ ನೀರಿನಂತೆ ಶುದ್ಧವಾದುದಲ್ಲ. ನಾವು ಒಂದು ವಸ್ತುವನ್ನು ನೋಡುತ್ತೇವೆ ಅಥವಾ ಒಂದು ವಿಚಾರವನ್ನು ಕೇಳುತ್ತೇವೆ. ಆ ವಸ್ತು ಅಥವಾ ವಿಷಯಕ್ಕೆ ಸಂಬಂಧಪಟ್ಟ ಸಂವೇದನೆಗಳು ಇಂದ್ರಿಯಗಳ ಮೂಲಕ ಮನಸ್ಸಿಗೆ ಹೋಗುತ್ತವೆ. ಆಗ ರಾಗ, ದ್ವೇಷ, ಪ್ರೀತಿ, ಸುಖ, ದು:ಖಗಳೆಂಬ ಭಾವೋದ್ವೇಗಗಳು ಕಾರ್ಯನಡೆಸುತ್ತವೆ. ಅವುಗಳ ಪ್ರಭಾವದಿಂದ ಆ ವಸ್ತು ಅಥವಾ ವಿಷಯಕ್ಕೆ ಸಂಬಂಧಪಟ್ಟಂತೆ ಚಿತ್ತವೃತ್ತಿಗಳು ಏಳುತ್ತವೆ. ಆಗ ಬುದ್ಧಿಯ ಪ್ರವೇಶವಾಗುತ್ತವೆ, ಭಾವೋದ್ವೇಗಗಳು ಈಗಾಗಲೇ ಸಾಕಷ್ಟು ಕೆಲಸ ಮಾಡಿರುವುದರಿಂದ ಬುದ್ಧಿ ಅವುಗಳಿಗೆ ಅನುಗುಣವಾಗಿಯೇ ತೀರ್ಮಾನವನ್ನು ಮಾಡುತ್ತದೆ. ಭಾವೋದ್ವೇಗದ ಪ್ರಭಾವಕ್ಕೆ ಒಳಗಾಗದೆ ಬುದ್ಧಿ ಕೆಲಸ ಮಾಡುವಂತಿದ್ದರೆ ಅದು ನಿರ್ಮಲವಾಗಿರುತ್ತದೆ.

ಇದನ್ನೇ ಕಗ್ಗ ಬಹು ಸುಂದರವಾಗಿ ಹೇಳುತ್ತದೆ. ಮನುಷ್ಯನ ವಿವೇಕ ಮಳೆಯ ನೀರಿನಂತೆ ಶುದ್ಧವಲ್ಲ. ಅದೊಂದು ರೀತಿಯ ಕೆರೆಯ ನೀರು. ಅದು ನಿಂತ ನೀರು. ಹೊಸ ನೀರು ಬರುತ್ತಿದ್ದರೆ, ಹಳೆಯ ನೀರು ಕೊಚ್ಚಿ ಹೋಗಿ ಶುದ್ಧವಾಗುತ್ತದೆ. ಮನುಷ್ಯನ ಮನಸ್ಸೂ ಹಾಗೆಯೇ ಹೊಸ ಹೊಸ ಚಿಂತನೆಗಳನ್ನು ಮಾಡುತ್ತಿದ್ದರೆ, ಹಳೆಯ, ಕೀಳಾದ ಚಿಂತನೆಗಳು ಕಳೆದುಹೋಗುತ್ತವೆ. ನೀರು ಹಳೆಯದಾಗಿರುವುದರ ಜೊತೆಗೆ ಊರ ಜನ ಕೆರೆಯ ನೀರಿನಲ್ಲಿ ತಮ್ಮ ದನ-ಕರುಗಳನ್ನು, ತಮ್ಮನ್ನು ತೊಳೆದುಕೊಂಡು ಬಟ್ಟೆ-ಬರೆ, ಪಾತ್ರೆಗಳನ್ನು ತೊಳೆದು, ಎಲ್ಲ ಸೋಂಕುಗಳನ್ನು ಸೇರಿಸಿ ಮತ್ತಷ್ಟು ಕೊಳೆ ಮಾಡುತ್ತಾರೆ. ಇದರಂತೆ ರಾಗದ್ವೇಷಗಳು ಮನಸ್ಸನ್ನು ಮಲಿನ ಮಾಡುವ ಇಂಥ ವಿಷಪದಾರ್ಥಗಳು. ಭೂಮಿಯ ರಸಗಳು, ವಾಸನೆಗಳು ಆಕಾಶದಿಂದ ಭಗವಂತನ ವರದಂತೆ ಬರುವ ನಿರ್ಮಲವಾದ ಮಳೆಯ ನೀರನ್ನು ಕೊಳಕುಮಾಡುತ್ತವೆ. ಇದೇ ರೀತಿ ಭಗವಂತ ನಮಗೆ ಶುದ್ಧ ಬುದ್ಧಿಯನ್ನು ನೀಡುತ್ತಾನೆ. ಆ ಬುದ್ಧಿಯಿಂದ ತನ್ನ ದರ್ಶನವನ್ನು ಪಡೆಯಲಿ ಎಂದು ಆಶಿಸುತ್ತಾನೆ. “ದದಾಮಿ ಬುದ್ಧಿಯೋಗಂ ತಂ ಯೇನ ಮಾಮುಪಯಾಂತಿ ತೇ” ಎಂದರೆ “ನನ್ನ ಭಕ್ತರಿಗೆ ಈ ಬುದ್ಧಿಯನ್ನು ನೀಡುತ್ತೇನೆ. ಅದರ ಮೂಲಕ ಅವರು ನನ್ನನ್ನು ಪಡೆಯುತ್ತಾರೆ”. ಆದರೆ ನಮ್ಮ ಭಾವೋದ್ವೇಗಗಳು ಭಗವಂತನ ವರದಂತೆದೊರೆತ ಶುದ್ಧಬುದ್ಧಿಯನ್ನು, ವಿವೇಕವನ್ನು ಕದಡಿ ರಾಡಿ ಮಾಡಿ ಬಿಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT