ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆನ್ನೈಯ ತರಬೇತಿ ಶಿಬಿರದತ್ತ ಪಯಣ

ಸೇನಾನಿಯ ಸ್ವಗತ
Last Updated 27 ಫೆಬ್ರುವರಿ 2019, 10:18 IST
ಅಕ್ಷರ ಗಾತ್ರ

ಚುಶುಲ್‌ನಿಂದ ನನ್ನನ್ನು ಚೆನ್ನೈಯಲ್ಲಿರುವ ಆಫೀಸರ್ಸ್‌ ಟ್ರೈನಿಂಗ್‌ ಅಕಾಡೆಮಿ(ಒಟಿಎ)ಗೆ ತರಬೇತುದಾರರನ್ನಾಗಿ ನೇಮಿಸಿ ಕಳುಹಿಸಿದರು. ನೂರಾರು ಸೈನಿಕರ ತಂಡಕ್ಕೆ ತರಬೇತಿ ನೀಡುವ ಈ ಕೆಲಸ ಸೈನಿಕನೊಬ್ಬನ ಪಾಲಿಗೆ ಒದಗಿದೆ ಎಂದರೆ ಅದು ಗೌರವದ ಕೆಲಸ. ನಾನು ಚೆನ್ನೈಗೆ ಪ್ರಯಾಣ ಬೆಳೆಸಿದೆ. ಆದರೆ ನಾನು ಕರ್ತವ್ಯ ನಿರ್ವಹಿಸುತ್ತಿದ್ದ ಬೆಟಾಲಿಯನ್‌ ಚುಶುಲ್‌ನಲ್ಲಿಯೇ ಮತ್ತೂ ಒಂದೂವರೆ ವರ್ಷ ಕಾರ್ಯಾಚರಣೆ ನಡೆಸಿ ಬಳಿಕ ಸಿಯಾಚಿನ್‌ಗೆ ತೆರಳಿತು. 18 ಸಾವಿರ ಅಡಿಗಳಿಂದ ಅವರನ್ನು 20 ಸಾವಿರ ಅಡಿ ಎತ್ತರಕ್ಕೆ ಕಳುಹಿಸಲಾಯಿತು. ಆ ಬೆಟಾಲಿಯನ್‌ 1986–87ರಲ್ಲಿ ಮತ್ತೆ ಪಾಕ್‌ ಸೈನಿಕರ ಜೊತೆ ಹೋರಾಡಿ ಎರಡು ಪಾಕ್‌ ಪೋಸ್ಟ್‌ಗಳನ್ನು ತೆರವು ಮಾಡಿ ಶೌರ್ಯ ಮೆರೆದಿದ್ದರು. ಅದಕ್ಕಾಗಿ ಅವರಿಗೆ ಅನೇಕ ಪುರಸ್ಕಾರ, ಬಹುಮಾನಗಳು ಬಂದವು. ಆ ತಂಡದ ನೇತೃತ್ವ ವಹಿಸಿದ್ದ ಸೆಕೆಂಡ್‌ ಕಮಾಂಡರ್‌ ಆಗಿದ್ದ ಲೆಫ್ಟಿನೆಂಟ್‌ ಜನರಲ್‌ ದೇವರಾಜ್‌ ಅನ್ಬು. ಆ ಹುಡುಗನೇ ಇಂದು ಭಾರತೀಯ ಸೇನೆಯ ಉಪಮುಖ್ಯ ಸೇನಾಧಿಕಾರಿ ಆಗಿದ್ದಾನೆ. ನಾನಿದ್ದಾಗ ಎಳೆ ಹುಡುಗನಾಗಿದ್ದ. ಮಕ್ಕಳಂತೆ ಅವರನ್ನೆಲ್ಲ ಕಾಳಜಿ ಮಾಡಿದ್ದೆವು. ಈಗ ಅವರು ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವುದನ್ನು ನೋಡಲು ತುಂಬ ಖುಷಿ ಆಗುತ್ತದೆ.

ಪಾಕಿಸ್ತಾನದ ಸೈನಿಕರ ಪೋಸ್ಟ್‌ ಸಿಯಾಚಿನ್‌ನಲ್ಲಿ 20 ಸಾವಿರ ಅಡಿ ಎತ್ತರದಲ್ಲಿತ್ತು. ಕಡಿದಾದ ಆ ಹಿಮ ಬೆಟ್ಟವನ್ನು ಏಳು ರಾತ್ರಿ ಏಳು ಹಗಲುಗಳ ಕಾಲ ಕೊರೆದು ಕೊರೆತು ಈ ದೇವರಾಜ್‌ ಮೆಟ್ಟಿಲುಗಳನ್ನು ಮಾಡಿ ಏಳನೇ ದಿನ ಪಾಕ್‌ ಪೋಸ್ಟ್‌ ಇರುವ ಜಾಗ ತಲುಪಿದ್ದ. ಅಂತಹ ಹಿಮಬೆಟ್ಟಕ್ಕೆ ಮೆಟ್ಟಿಲು ಕೊರೆದು ಭಾರತೀಯ ಸೈನಿಕರು ಏರಿ ಬರಬಹುದು ಎಂದು ಪಾಕ್‌ ಸೈನಿಕರು ಕನಸಿನಲ್ಲಿಯೂ ಯೋಚಿಸಿರಲಿಲ್ಲ ಅನಿಸುತ್ತದೆ. ಒಟ್ಟಿನಲ್ಲಿ ವೀರನಂತೆ ಹೋರಾಡಿ ಪಾಕ್‌ ಸೈನಿಕರನ್ನು ಹೊಡೆದಟ್ಟುವಲ್ಲಿ ದೇವರಾಜ್‌ ಮತ್ತು ತಂಡದವರು ಯಶಸ್ವಿಯಾಗಿದ್ದರು. ಅದಕ್ಕಾಗಿ ಅವರಿಗೆ ಗೌರವ, ಪ್ರಶಸ್ತಿಗಳು ಲಭಿಸಿದವು. ಅರ್ಹವೇ ಅದು.

20 ಸಾವಿರ ಅಡಿ ಎತ್ತರದಲ್ಲಿ ಮನುಷ್ಯ 30 ದಿನ ಮಾತ್ರ ಇರುವುದು ಸಾಧ್ಯ. ದೇಹವು ಪ್ರತಿಕೂಲ ಹವಾಮಾನದಲ್ಲಿ ಪ್ರತಿಭಟಿಸಲು ಶುರು ಮಾಡುತ್ತದೆ. ಹಾಗಾಗಿ ಅಲ್ಲಿನ ತಂಡವನ್ನು ಬದಲಾಯಿಸುತ್ತ ಇರುವುದು ಅನಿವಾರ್ಯ. ಜಗತ್ತಿನ ಅತೀ ಎತ್ತರದ ಯುದ್ಧಭೂಮಿ ಎಂದು ಸಿಯಾಚಿನ್‌ ಅನ್ನು ಗುರುತಿಸುತ್ತಾರೆ. ಅಂತಹ ಕಡೆಯಲ್ಲಿ ನಾನು ಕೆಲಸ ಮಾಡಲಿಲ್ಲವಲ್ಲಾ ಎಂದು ನನಗೆ ಆಗಾಗ ಬೇಸರವಾಗುತ್ತಿತ್ತು. ಆದರೆ ಚೆನ್ನೈ ಒಟಿಎಯಲ್ಲಿ ಕೆಲಸ ಮಾಡುವ ಗೌರವವನ್ನೂ ನಾನು ಸಂತೋಷದಿಂದ ಸ್ವೀಕರಿಸಿದ್ದೆ.

ನಾನು ಒಟಿಎಯಲ್ಲಿ ಕೆಲಸ ಮಾಡುತ್ತಿದ್ದಾಗ ಸಿಯಾಚಿನ್‌ನ ಬೆಟಾಲಿಯನ್‌ ಅನ್ನು ವಿಶ್ರಾಂತಿಗಾಗಿ ಹೈದರಾಬಾದ್‌ಗೆ ಕಳಿಸಿದರು. ಆದರೆ ಅವರು ಒಂದಿಷ್ಟು ಹೊತ್ತಾದರೂ ವಿರಮಿಸಿದ್ದರೋ ಇಲ್ಲವೋ ಶ್ರೀಲಂಕಾದಲ್ಲಿ ಎಲ್‌ಟಿಟಿಇ ಸಮಸ್ಯೆ ತುಂಬಾ ಹೆಚ್ಚಾಯಿತು. ಹಾಗಾಗಿ ಹೈದರಾಬಾದ್‌ನ ವಿಭಾಗವನ್ನೇ ಶ್ರೀಲಂಕಾಕ್ಕೆ ಕಳುಹಿಸುವ ನಿರ್ಧಾರವನ್ನು ಸೇನೆ ತೆಗೆದುಕೊಂಡಿತು. ಈ ಹೊತ್ತಿಗೆ ತರಬೇತು ನೀಡುವ ನನ್ನ ಅವಧಿಯೂ ಮುಗಿದು, ನಾನು ನನ್ನ ಮೂಲ ತಂಡಕ್ಕೆ ಸೇರಿಕೊಳ್ಳುವಂತೆ ಸೂಚನೆ ದೊರೆಯಿತು. ಅಂದರೆ ನಾನೂ ಶ್ರೀಲಂಕಾಕ್ಕೆ ತೆರಳಬೇಕಾಗಿತ್ತು. ಹಾಗಾಗಿ ಪತ್ನಿಯನ್ನು ಚೆನ್ನೈಯಲ್ಲಿಯೇ ಬಿಟ್ಟು ನಾನು ವಿಮಾನದಲ್ಲಿ ಶ್ರೀಲಂಕಾಕ್ಕೆ ಹೊರಟೆ.

ಅಲ್ಲಿನ ಜಾಫ್ನಾ ಕೊಲಂಬೊ ಹೈವೇಯಲ್ಲಿ ನಮ್ಮಸೇನಾ ನೆಲೆ ಇತ್ತು. ವಿವಿಧೆಡೆಗಳಲ್ಲಿ ಸೇನಾ ರೈಫಲ್‌ ಕಂಪೆನಿಗಳನ್ನು ನೇಮಿಸಿದ್ದರು. ಅಲ್ಲಿನ ಮುಲೈತಿವ್‌ ಎಂಬ ಪ್ರದೇಶದಲ್ಲಿ ಒಬ್ಬರು ಮೇಜರ್‌ ಮತ್ತು 120 ಮಂದಿ ಸೈನಿಕರ ತಂಡವನ್ನು ಇರಿಸಲಾಗಿತ್ತು. ಮುಲೈತಿವ್‌ ಎಂದರೆ ಎಲ್‌ಟಿಟಿಇ ನಾಯಕ ಪ್ರಭಾಕರನ್‌ನ ಕಾರ್ಯಾಚರಣೆಯ ಕೇಂದ್ರ ಸ್ಥಾನ. ಆದರೆ ಅಲ್ಲಿರುವಾಗ ಸೈನಿಕರಿಗಾಗಲೀ ನನಗಾಗಲೀ ಇದರ ಮಾಹಿತಿಯೇ ಇರಲಿಲ್ಲ. ಎಲ್‌ಟಿಟಿಇ ಮತ್ತು ಸೇನಾಪಡೆ ನಡುವೆ ಚಿಕ್ಕಪುಟ್ಟ ಘರ್ಷಣೆ ಮತ್ತು ಎನ್‌ಕೌಂಟರ್‌ಗಳು ನಡೆದವು. ಎಲ್‌ಟಿಟಿಇ ತಂಡವು ನಮ್ಮ ಸೇನಾ ಪೋಸ್ಟ್‌ನ್ನು ಸುತ್ತಲು ಆವರಿಸಿ ದಾಳಿಮಾಡಲು ಶುರು ಮಾಡಿದಾಗ ಕಾಳಗ ತುಸು ತೀವ್ರವಾಗಿಬಿಟ್ಟಿತು. ಸತತ 19 ನಿಮಿಷಗಳ ನೇರ ಯುದ್ಧವೂ ನಡೆಯಿತು. ಒಬ್ಬ ಸೈನಿಕನಿಗೆ ಕಣ್ಣಿಗೆ ಹಾನಿಯಾಗಿ ಅವನನ್ನು ಕಳಿಸಲಾಯಿತು. ಈತನ ಬಗ್ಗೆ ಇನ್ನಷ್ಟು ಬರೆಯುವುದಿದೆ.

ಎಲ್‌ಟಿಟಿಇಯನ್ನು ಹಿಮ್ಮೆಟ್ಟಿಸುವುದು ಸುಲಭದ ಕೆಲಸವೂ ಆಗಿರಲಿಲ್ಲ. ಅವರು ಅಲ್ಲಲ್ಲಿ ’ಐಇಡ’ (ಇಂಪ್ರೂವೈಸ್ಡ್‌ ಎಕ್ಸ್‌ಪ್ಲೋಸಿವ್‌ ಡಿವೈಸ್‌) ಅನ್ನು ಅಲ್ಲಲ್ಲಿ ಹೂತಿಡಲಾಗಿದೆ ಎಂಬ ಮಾಹಿತಿ ಬಂತು. ಇದರಲ್ಲಿ ನಟ್‌ ಬೋಲ್ಟ್‌ ಕಬ್ಬಿಣದ ತುಂಡುಗಳನ್ನು ಸೇರಿಸಿದ ಸ್ಫೋಟಕ. ನಮ್ಮ ಘಟಕದ ಬಳಿ ಅದನ್ನು ಇರಿಸಲಾಗಿದೆ ಎಂಬುದು ಗೊತ್ತಾಯಿತು. ನನಗೆ ಈ ಐಇಡಿಯನ್ನು ಡಿಫ್ಯೂಸ್‌ ಮಾಡಿ ಎಲ್‌ಟಿಟಿ ತಂಡವನ್ನು ಹಿಮ್ಮೆಟ್ಟಿಸಲು ಸೂಚನೆ ಬಂತು.

ನಮ್ಮ ತಂಡ ಅಲ್ಲಿ ಕಾಡಿನೊಳಗೆ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಹೋದರೆ ಅಲ್ಲಿ ಏನೂ ಸಿಗಲಿಲ್ಲ.ನಮ್ಮನ್ನು ಸುಖಾಸುಮ್ಮನೆ ದಾರಿ ತಪ್ಪಿಸಲು ಎಲ್‌ಟಿಟಿಇ ಈ ಯೋಜನೆ ರೂಪಿಸಿತ್ತು. ಅಥವಾ ಅವರಿಗೆ ನಮ್ಮನ್ನು ಕೊಲ್ಲುವ ಇರಾದೆ ಇದ್ದರೂ ನಾವು ಸಜ್ಜಾಗಿದ್ದುದರಿಂದ ಅವರು ಓಡಿರಬಹುದು.

ಈ ಸೆಣಸಾಟದಲ್ಲಿ ನನಗೆ ಇನ್ನಷ್ಟು ಮುಂದುವರೆಯಲು ಆದೇಶ ಬಂತು. ಏಳೆಂಟು ಕಿಲೊಮೀಟರ್‌ನಲ್ಲಿ ಶ್ರೀಲಂಕನ್‌ ಪೋಸ್ಟ್‌ನಲ್ಲಿ ನಮ್ಮ ಸೇನೆಯ ತಂಡ ಸಿಕ್ಕಿಹಾಕಿಕೊಂಡಿತು. ಈ ರಸ್ತೆ ಕ್ಲಿಯರ್‌ ಮಾಡಿ ಸುರಕ್ಷಿತ ಮಾರ್ಗ ಮಾಡಿ ಕರೆದುಕೊಂಡು ಬರುವಂತೆ ನನಗೆ ಸೂಚಿಸಲಾಯಿತು. ಸುಮಾರು 10 ಕಿಮೀ ದೂರದ ರಸ್ತೆಯನ್ನು ತೆರವು ಮಾಡಿ ಸುರಕ್ಷಿತತೆಯನ್ನು ಖಚಿತ ಮಾಡಿಕೊಳ್ಳುತ್ತ ನಾನು ಮುಂದುವರೆದ. ಅಲ್ಲಿ ಸಿಕ್ಕಿ ಹಾಕಿಕೊಂಡ ತಂಡ ಬರಲು ನಾನು ಅನುವು ಮಾಡಿಕೊಡಬೇಕಿತ್ತು. ಐಇಡಿ ಇದೆಯೇ ಎಂದು ತಪಾಸಣೆ ಮಾಡುತ್ತ ಹೋಗುವುದು ಕಷ್ಟದ ವಿಷಯ. ಒಂದು ಸ್ಫೋಟಕ ಒಡೆದರೂ ಎಲ್ಲ ಕೆಲಸ ಕೆಟ್ಟ ಹಾಗೆ. ಸ್ಫೋಟಕಕ್ಕೆ ನಾನು ಬಲಿಯಾಗಂತೆ ನಾನು ರಕ್ಷಿಸಿಕೊಳ್ಳಬೇಕು. ನಮ್ಮವರನ್ನೂ ರಕ್ಷಿಸುತ್ತ ಸಾಗಬೇಕು. ಹಾಗೆ ಒಂದೊಂದೇ ಬಾಂಬುಗಳನ್ನು ನಿಷ್ಕ್ರಿಯಗೊಳಿಸುತ್ತಾ ನಾನು ಅಲ್ಲಲ್ಲಿ ನಮ್ಮ ಸೈನಿಕರನ್ನು ಸುರಕ್ಷಿತತೆಗೆ ನೇಮಿಸುತ್ತಾ ಮುಂದುವರೆದೆ. ಹೀಗೆ ನಾನು ಶ್ರೀಲಂಕನ್‌ ಪೋಸ್ಟ್‌ವರೆಗೆ ಹೋದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT