ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ್ ಎಂಬ ಸಾಮೂಹಿಕ ಕಣ್ಗಾವಲು?

Last Updated 3 ಏಪ್ರಿಲ್ 2017, 2:53 IST
ಅಕ್ಷರ ಗಾತ್ರ

ನಾಗರಿಕರಿಗೆ ಗುರುತು ಸಂಖ್ಯೆಗಳನ್ನು ನೀಡುವ ವಿಶ್ವದ ಬಹುದೊಡ್ಡ ಯೋಜನೆ ಆಧಾರ್. ಭಾವಚಿತ್ರಗಳು, ಬೆರಳಚ್ಚುಗಳು, ಅಕ್ಷಿಪಟಲ ಅಚ್ಚುಗಳಂತಹ ಬಯೊಮೆಟ್ರಿಕ್ ಮತ್ತು ಹೆಸರು, ವಿಳಾಸ, ಹುಟ್ಟಿದ ದಿನಾಂಕಗಳಂತಹ ವಿವರಗಳ ಬೃಹತ್ ಮಾಹಿತಿ ಭಂಡಾರ ಸೃಷ್ಟಿಯಾಗಿದೆ. ಅಮೆರಿಕೆಯ ಸಾಮಾಜಿಕ ಭದ್ರತೆ ಸಂಖ್ಯೆಯ ಮಾದರಿಯಲ್ಲಿ ಭಾರತೀಯ ನಾಗರಿಕರಿಗೆ ಹನ್ನೆರಡು ಅಂಕಿಗಳ ವಿಶಿಷ್ಟ ಗುರುತು ಸಂಖ್ಯೆಯನ್ನು ನೀಡಲಾಗಿದೆ.

ಆಧಾರ್ ನೋಂದಣಿ ಕಡ್ಡಾಯ ಅಲ್ಲ ಎಂದು ಮಾತಿನಲ್ಲಿ ಹೇಳುತ್ತಲೇ ಕೃತಿಯಲ್ಲಿ ಕಡ್ಡಾಯ ಮಾಡುವ ಎಲ್ಲ ಕ್ರಮಗಳನ್ನು ಜರುಗಿಸಿರುವ ಕೇಂದ್ರ ಸರ್ಕಾರದ ನಡೆ ವಿವಾದ ಹುಟ್ಟಿಸಿದೆ. ಸರ್ಕಾರಿ ಯೋಜನೆಗಳಿಗೆ ಮಾತ್ರವೇ ಅಲ್ಲದೆ ಸೇವೆಗಳಿಗೂ ಆಧಾರ್ ವ್ಯವಸ್ಥೆಯನ್ನು ಜೋಡಿಸಲಾಗಿದೆ. ಆರಂಭದಲ್ಲಿ ಆಧಾರ್ ಬಳಕೆ ನ್ಯಾಯಬೆಲೆ ಪಡಿತರ ವಿತರಣೆ ಮತ್ತು ಅಡುಗೆ ಅನಿಲ ಪೂರೈಕೆಗೆ ಸೀಮಿತ ಆಗಿತ್ತು.

ಆಧಾರ್ ನಂಬರ್ ಒದಗಿಸದಿದ್ದರೆ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಇಲ್ಲ. ಎಚ್‌ಐವಿ ಸೋಂಕಿತರು, ವೇಶ್ಯಾವಾಟಿಕೆ ಕೂಪದಿಂದ ಪಾರಾದ ಹೆಣ್ಣುಮಕ್ಕಳು ಮತ್ತು ಮಲಬಾಚುವ ಕರ್ಮದಿಂದ ಮುಕ್ತಿ ಬೇಡುವ ಬಡಪಾಯಿಗಳಿಗೆ ಚಿಕಿತ್ಸೆ- ಮರುವಸತಿ ಸೌಲಭ್ಯಗಳು ಇಲ್ಲ.

ಮಲಬಾಚುವವರು ಇಲ್ಲವೇ ಬಾಚುತ್ತಿದ್ದವರು ಮತ್ತು ವೇಶ್ಯಾವಾಟಿಕೆ ಜಾಲದಲ್ಲಿದ್ದವರು ಎಂಬ ಅವಮಾನದ ಬೆಂಕಿಯಲ್ಲಿ ಸಾಯುವ ತನಕ ನರಳಬೇಕಾದೀತು ಎಂಬ ಇವರ ಚಿಂತೆ ಯಾರಿಗೆ ಅರ್ಥ ಆಗಬೇಕು? ಬೆದರಿ ಬಚ್ಚಿಟ್ಟುಕೊಳ್ಳಲು ಕತ್ತಲೆಗೆ ಸರಿದರೂ ಬೆನ್ನಟ್ಟಿ ಕೋರೈಸುವ ಕ್ರೂರ ಹೊನಲು ಬೆಳಕು. ಅಜ್ಞಾತದ ಅನುಕೂಲವನ್ನು ಕಿತ್ತುಕೊಂಡಿದೆ ಆಧಾರ್.

ಈ ಗುರುತಿನ ಸಂಖ್ಯೆ ಇಲ್ಲದೆ ಹೋದರೆ ಭೋಪಾಲ ಅನಿಲ ದುರಂತದ ಸಂತ್ರಸ್ತರು ನಡುನೀರಿನಲ್ಲಿ ಉಸಿರುಕಟ್ಟಿ ಕೈ ಕಾಲು ಬಡಿಯಬೇಕಾದ ದುಃಸ್ಥಿತಿ. ಅಂಗವಿಕಲರಿಗೆ ನೈಪುಣ್ಯ ತರಬೇತಿ ದೊರೆಯದು. ಸಾಧನ ಸಲಕರಣೆಗಳ ಸಂಚಿಯೂ ಕೈ ತಪ್ಪುವುದು ಖಚಿತ.

ಪರಿಣಾಮವಾಗಿ ಈ ವ್ಯವಸ್ಥೆಯಿಂದ ಹೊರಗೆ ಉಳಿಯುವ ಆಯ್ಕೆ ಜನರಿಗೆ ಇಲ್ಲವಾಗಿದೆ. ತಮ್ಮ ಬೇಕು ಬೇಡಗಳನ್ನು ನಿರ್ಧರಿಸುವ ವಿವೇಚನೆ ಇಲ್ಲದ ಮಕ್ಕಳನ್ನೂ ಈ ವ್ಯವಸ್ಥೆಗೆ ಕಟ್ಟಿ ಹಾಕತೊಡಗಿದೆ. ವಯಸ್ಕರಾಗಿ ವಿವೇಚನೆ ಬೆಳೆದ ನಂತರ ಹೊರಬರುವ ಯಾವ ಆಯ್ಕೆಯೂ ಮಕ್ಕಳಿಗೆ ಇಲ್ಲ. ಹುಟ್ಟಿನ ಹೊತ್ತಿನಲ್ಲಿ ಆಸ್ಪತ್ರೆಯಲ್ಲೇ ಶಿಶುಗಳನ್ನು ಹಿಡಿದು ಆಧಾರ್‌ಗೆ ನೋಂದಣಿ ಮಾಡಿಕೊಳ್ಳಲಾಗುತ್ತಿದೆ.

ಮೊನ್ನೆ ಮೊನ್ನೆ ರಾಜಸ್ತಾನದ ಖಾಜುವಾಲ ಗ್ರಾಮದ ಶಿಶುವೊಂದು ಹುಟ್ಟಿದ ಐದು ನಿಮಿಷಗಳಲ್ಲೇ ಆಧಾರ್ ಮಾಹಿತಿ ಕೋಶಕ್ಕೆ ಸೇರಿ ಹೋಯಿತು. ಹನ್ನೆರಡು ಅಂಕಿಗಳ ಆಧಾರ್ ಗುರುತು ಪಡೆದ ಭಾರತದ ಅತಿ ಕಿರಿಯ ನಿವಾಸಿ ಈ ಶಿಶು. ವಯಸ್ಕರ ಪೈಕಿ ಶೇ 98ರಷ್ಟು ಮಂದಿ ದೇಶವಾಸಿಗಳು ಈಗಾಗಲೇ ಆಧಾರ್ ಗುರುತು ವ್ಯವಸ್ಥೆಯಡಿ ನೋಂದಾಯಿತರು. ಶಿಶುಗಳು ಮತ್ತು ಮಕ್ಕಳನ್ನು ಈ ವ್ಯವಸ್ಥೆಗೆ ಜೋಡಿಸುವ ಕೆಲಸ ಸಮರ ವೇಗದಲ್ಲಿ ಜರುಗಿದೆ. ಮಕ್ಕಳಿಗೆಂದೇ ಮೀಸಲಾದ ಐದು ಯೋಜನೆಗಳನ್ನು ಆಧಾರ್‌ಗೆ ಜೋಡಿಸಲಾಗಿದೆ.

ಇವುಗಳ ಪೈಕಿ ಮಧ್ಯಾಹ್ನದ ಬಿಸಿಯೂಟ ಯೋಜನೆಯೂ ಸೇರಿದೆ. ಸುಮಾರು ಹತ್ತು ಕೋಟಿ ಶಾಲಾ ಮಕ್ಕಳು ಈ ಬಿಸಿಯೂಟ ಯೋಜನೆಯ ಫಲಾನುಭವಿಗಳು. ಶಾಲಾ ಮಕ್ಕಳ ಸಂಖ್ಯೆಯನ್ನು ಸುಳ್ಳು ಸುಳ್ಳೇ ಏರಿಸಿ ಹೇಳಿ ಶಿಕ್ಷಕರು ಮತ್ತಿತರರು ಸರ್ಕಾರಿ ಸಂಪನ್ಮೂಲಗಳನ್ನು ದುರುಪಯೋಗ ಮಾಡುತ್ತಿದ್ದಾರೆ.

ಇಂತಹ ಭ್ರಷ್ಟಾಚಾರ ತಡೆಯಲು ಶಾಲಾ ಮಕ್ಕಳಿಗೆ ಆಧಾರ್ ಕಡ್ಡಾಯ ಮಾಡಲಾಗಿದೆ ಎಂಬುದು ಸರ್ಕಾರದ ವಿವರಣೆ. ಆಧಾರ್ ಕಡ್ಡಾಯ ಮಾಡಿ ಬಡಮಕ್ಕಳು ಉಣ್ಣುವ ಅನ್ನವನ್ನು ಕಸಿಯುವ ಕ್ರೌರ್ಯವಿದು ಎಂಬ ಟೀಕೆಯಲ್ಲಿ ಹುರುಳಿದೆಯೇ ಎಂಬುದನ್ನು ಪುಟ್ಟ ಉದಾಹರಣೆಯ ಮೂಲಕ ಪರಿಶೀಲಿಸೋಣ. ಬಿಸಿಯೂಟ ಯೋಜನೆಗೆ ಕೇಂದ್ರ ಸರ್ಕಾರ ಮಾಡುತ್ತಿರುವ ವಾರ್ಷಿಕ ವೆಚ್ಚ ಕೇವಲ ₹ 10 ಸಾವಿರ ಕೋಟಿ.

2016ರ ಮಾರ್ಚ್ ತಿಂಗಳಿನಲ್ಲಿ ಸಂಸತ್ತಿನಲ್ಲಿ ಮಂಡಿಸಲಾಗಿದ್ದ ಸಿ.ಎ.ಜಿ. ವರದಿ ಹೇಳಿದ್ದ ಈ ಅಂಶವನ್ನು ಗಮನಿಸಬೇಕು. ಕೇಂದ್ರ ಸರ್ಕಾರಕ್ಕೆ ಉದ್ಯಮ ವಲಯದಿಂದ ₹ 7 ಲಕ್ಷ ಕೋಟಿಯಷ್ಟು  ನೇರ ತೆರಿಗೆಗಳ ಬಾಕಿ ಬರಬೇಕಿದೆ.

ಈ ಪೈಕಿ ₹ 6.73 ಲಕ್ಷ ಕೋಟಿಯಷ್ಟು ಬಾಕಿಯ ‘ವಸೂಲಿ ಕಷ್ಟ’. ಬಾಕಿ ವಸೂಲು ಮಾಡಿಕೊಳ್ಳುವಷ್ಟು ಆಸ್ತಿಪಾಸ್ತಿಯೇ ಉಳಿದಿಲ್ಲದಿರುವುದು, ಪ್ರಕರಣಗಳು ಪರಿಸಮಾಪ್ತಿ (ಲಿಕ್ವಿಡೇಷನ್) ಪ್ರಕ್ರಿಯೆಯಲ್ಲಿರುವುದು, ತೆರಿಗೆ ಬಾಕಿ ಉಳಿಸಿಕೊಂಡಿರುವವರು ತಲೆಮರೆಸಿಕೊಂಡಿರುವುದು ಹಾಗೂ ತೆರಿಗೆ ಪಾವತಿಗೆ ಹಲವು ಪ್ರಾಧಿಕಾರಗಳು ತಡೆ ನೀಡಿರುವ ಕಾರಣಗಳಿಂದಾಗಿ ಬಾಕಿ ವಸೂಲಿ ಕಠಿಣವಾಗಿದೆ ಎಂದೂ ಸಿ.ಎ.ಜಿ. ವಿವರಿಸಿತ್ತು.

₹ 10 ಸಾವಿರ ಕೋಟಿ ಮತ್ತು ಆರೂಮುಕ್ಕಾಲು ಲಕ್ಷ ಕೋಟಿ ರೂಪಾಯಿ ನಡುವೆ ಆನೆ ಮತ್ತು ಆಡಿನ ಅಂತರವಿದೆ ಎಂದು ಹೇಳಲು ಹಣಕಾಸು ಪಂಡಿತರ ಅಗತ್ಯ ಇಲ್ಲ. ₹ 10 ಸಾವಿರ ಕೋಟಿಯಲ್ಲಿ ದುರುಪಯೋಗ ನಡೆಯುತ್ತಿದೆ ಎಂದು ಬಡ ಶಾಲಾ ಮಕ್ಕಳ ಅನ್ನಕ್ಕೆ ಸಂಚಕಾರ ತರಲು ಹಿಂಜರಿಯದ ಸರ್ಕಾರ, ಲಕ್ಷಾಂತರ ಕೋಟಿ ರೂಪಾಯಿಗಳ ವಸೂಲಿಗೆ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳೇನು ಎಂಬ ಪ್ರಶ್ನೆಗೆ ಜವಾಬು ಹೇಳಬೇಕಾಗುತ್ತದೆ.

ನಗದು ರೂಪದಲ್ಲಿ ಬ್ಯಾಂಕ್ ಖಾತೆಗಳಿಗೆ ಅಡುಗೆ ಅನಿಲ ಸಬ್ಸಿಡಿಯ ನೇರ ವರ್ಗಾವಣೆ ಮತ್ತು ಅನುಕೂಲಸ್ಥರ ಸಬ್ಸಿಡಿ ತ್ಯಾಗದ ಕ್ರಮಗಳಿಂದ ಎರಡು ವರ್ಷಗಳ ಅವಧಿಯಲ್ಲಿ ₹ 22 ಸಾವಿರ ಕೋಟಿ  ಉಳಿತಾಯ ಆಗಿದೆ ಎಂದು ಸರ್ಕಾರ ಹೇಳಿಕೊಂಡಿತ್ತು. ಆದರೆ ಸಂಸತ್ತಿನ ಮುಂದೆ ಸಿ.ಎ.ಜಿ. ವರದಿ ಹೇಳಿದ ಸತ್ಯವೇ ಬೇರೆ. ಈ ಎರಡೂ ಬಾಬ್ತುಗಳಿಂದ ಆಗಿರುವ ಉಳಿತಾಯದ ಮೊತ್ತ ₹ 2000 ಕೋಟಿಗಿಂತಲೂ ಕಡಿಮೆ.

ಉಳಿದ ಸುಮಾರು ₹20 ಸಾವಿರ ಕೋಟಿ  ಉಳಿತಾಯ ಆದದ್ದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಡುಗೆ ಅನಿಲ ದರಗಳ ಭಾರೀ ಕುಸಿತದಿಂದ. 2014-15ರ ಒಂದೇ ಸಾಲಿನಲ್ಲಿ ದರ ಕುಸಿತದ ಕಾರಣ ಆದ ಉಳಿತಾಯದ ಮೊತ್ತ ₹ 10,945 ಕೋಟಿ ಎಂದು ಪೆಟ್ರೋಲಿಯಂ ಪ್ಲ್ಯಾನಿಂಗ್ ಅಂಡ್ ಅನಾಲಿಸಿಸ್ ಸೆಲ್‌ನ ಅಂಕಿ ಅಂಶಗಳು ಹೇಳಿವೆ.

ಹಾಗೆ ನೋಡಿದರೆ ಆಧಾರ್ ಜಾರಿಗೆ ಬರುವ ಬಲು ಮುನ್ನವೇ ಸರ್ಕಾರಿ ಇಲಾಖೆಗಳು ಹತ್ತು ಹಲವು ಬಗೆಯಲ್ಲಿ ನಾಗರಿಕರ ವ್ಯಕ್ತಿಗತ ವಿವರಗಳನ್ನು ಕಲೆ ಹಾಕಿರುವುದು ಉಂಟು. ಪಾಸ್‌ಪೋರ್ಟ್ ನೀಡಲೆಂದು ಕಲೆ ಹಾಕಿದ ಮಾಹಿತಿ, ಡ್ರೈವಿಂಗ್ ಲೈಸೆನ್ಸ್ ನೀಡಲೆಂದು ಪಡೆದ ಮಾಹಿತಿ ಎಲ್ಲ ಕಾಲಕ್ಕೂ ಆಯಾ ಇಲಾಖೆಯಲ್ಲೇ ಉಳಿದು ಅಳಿಯುತ್ತಿದ್ದವು. ಆದರೆ ಆಧಾರ್ ವ್ಯವಸ್ಥೆ ಈ ಎಲ್ಲ ಇಲಾಖೆಗಳ ಮಾಹಿತಿಗಳಿಗೆ ಪರಸ್ಪರ ಸಂಪರ್ಕ ಹೆಣೆದು ಅವುಗಳನ್ನು ಒಂದು ನೆಲೆಯಲ್ಲಿ ವ್ಯವಸ್ಥಿತವಾಗಿ ಕಲೆ ಹಾಕತೊಡಗಿದೆ.

ನೂರು ಕೋಟಿಗಿಂತ ಹೆಚ್ಚು ದೇಶವಾಸಿಗಳು ಈಗಾಗಲೇ ಆಧಾರ್ ವ್ಯಾಪ್ತಿಯಡಿ ಬಂದಿದ್ದಾರೆ. ಕಂಪ್ಯೂಟರ್ ಗುಂಡಿಯೊಂದನ್ನು ಅದುಮಿದರೆ ಎಲ್ಲ ವಿವರಗಳೂ ತೆರೆಯ ಮೇಲೆ ಬಂದು ಬೀಳುವಷ್ಟು ಸುಲಲಿತ ಮಾಹಿತಿ ಭಂಡಾರವೊಂದು ಬಹುತೇಕ ರೂಪು ತಳೆದಿದೆ.

ಆಧಾರ್ ಯೋಜನೆಯನ್ನು ಸರ್ಕಾರ ಸಾಮೂಹಿಕ ಕಣ್ಗಾವಲು ತಂತ್ರಜ್ಞಾನವಾಗಿ ಬಳಸಲು ಹವಣಿಸಿದೆ ಎಂಬ ವ್ಯಾಪಕ ಟೀಕೆಗಳು ಕೇಳಿಬಂದಿವೆ. ರಾಷ್ಟ್ರೀಯ ಭದ್ರತೆಗಾಗಿ ನಿರ್ದಿಷ್ಟ ವ್ಯಕ್ತಿಗಳ ಚಲನವಲನದ ಮೇಲೆ ಕಣ್ಗಾವಲು ಇಡುವುದಕ್ಕೆ ದೊಡ್ಡ ಆಕ್ಷೇಪಣೆ ಇರಲಾರದು. ಆದರೆ ಇಡೀ ದೇಶದ ಜನಸಮೂಹಗಳನ್ನೇ ಕಣ್ಗಾವಲಿಗೆ ಗುರಿ ಮಾಡುವುದು ಜನತಾಂತ್ರಿಕ ವ್ಯವಸ್ಥೆಯಲ್ಲಿ ಒಪ್ಪಿತ ಅಲ್ಲ.

ಕಾನೂನಿನ ಚೌಕಟ್ಟಿನಲ್ಲಿ ಬದುಕು ಸಾಗಿಸುವ ಜನರ ನಿತ್ಯ ವ್ಯವಹಾರಗಳ ಮೇಲೆ ಪ್ರಭುತ್ವ ಭೂತ ಕನ್ನಡಿ ಇಡುವುದು ನಾಗರಿಕ ಸಮಾಜದ ಲಕ್ಷಣವಲ್ಲ. ‘ರಾಷ್ಟ್ರೀಯ ಭದ್ರತೆ’ ಎಂಬುದು ಏನೇನೆಂದು ನಿರ್ದಿಷ್ಟವಾಗಿ ಹೇಳದೆ ಅಸ್ಪಷ್ಟಗೊಳಿಸಿ ಇಟ್ಟಿರುವ ಸರ್ಕಾರದ ನಡೆಯೇ ಅನುಮಾನ ಹುಟ್ಟಿಸುತ್ತದೆ. ಈ ಹೆಸರಿನಲ್ಲಿ ಆಧಾರ್ ಮಾಹಿತಿ ಭಂಡಾರಕ್ಕೆ ಕೈ ಹಾಕಲು ಸರ್ಕಾರ ತನಗೆ ಕೊಟ್ಟುಕೊಂಡಿರುವ ಅಧಿಕಾರಗಳು ಅಳತೆ ಮೀರಿದ ಗಾತ್ರದವು ಎನ್ನಲಾಗಿದೆ.

ಪ್ರಭುತ್ವವೆಂಬ ದೊಡ್ಡಣ್ಣ ನಿಮ್ಮ ಎಲ್ಲ ಚಟುವಟಿಕೆಗಳನ್ನೂ ಬಣ್ಣ ಬಳಿದ ಗಾಜಿನ ತೆರೆಯ ಹಿಂದೆ ಅದೃಶ್ಯನಾಗಿ ಕುಳಿತು ಗಮನಿಸುತ್ತಿರುತ್ತಾನೆ. ನಿಮ್ಮ ರೀತಿ- ನೀತಿ, ಖರ್ಚು-ವೆಚ್ಚ, ಆಚಾರ- ವ್ಯವಹಾರ, ವರ್ತನೆ- ವೈಖರಿ, ಆರೋಗ್ಯ ಸ್ಥಿತಿ-ಗತಿ, ಯಾವ ಕಾಯಿಲೆಯಿತ್ತು, ಶಸ್ತ್ರಚಿಕಿತ್ಸೆ ಮಾಡಿಸಿದಿರಾ, ಹಣಕಾಸು ಸಾಮರ್ಥ್ಯ, ಅಭಿರುಚಿಗಳು, ಕಡೆಗೆ ನಿತ್ಯ ಎಲ್ಲಿಂದ ಎಲ್ಲಿಗೆ ಪ್ರಯಾಣಿಸಿದಿರಿ, ಪ್ರಯಾಣಕ್ಕೆ ಬಳಸಿದ್ದು ಮೆಟ್ರೊ ರೈಲೇ, ಟ್ಯಾಕ್ಸಿಯೇ ಎಲ್ಲವೂ ಅದರಲ್ಲಿ ಒಳಗೊಳ್ಳುತ್ತವೆ.

ಇಂಥ ಮಾಹಿತಿಗಳು, ನಿಮಗೆ ಸರಕು ಸರಂಜಾಮು ರೂಪಿಸಿ ಬಿಕರಿಗಿಟ್ಟು ಲಾಭ ಮಾಡುವ ಖಾಸಗಿ ಕಂಪೆನಿಗಳಿಗೂ ಬೇಕು. ದಿನದ 24 ತಾಸೂ ನೆರಳಿನಂತೆ ಹಿಂಬಾಲಿಸುತ್ತವೆ ಭಿನ್ನ ಬಗೆಯ ‘ಬೇಹುಗಾರಿಕೆ’ಯ ಕಣ್ಣುಗಳು. ನಮ್ಮನ್ನು ದಶದಿಕ್ಕುಗಳಿಂದ ಆವರಿಸಿ ಕವಿದಿರುವ ‘ಡಿಜಿಟಲ್ ಆವರಣ’ ಈ ಅದೃಶ್ಯ ಬೇಹುಗಾರಿಕೆಯನ್ನು ಸುಲಿದ ಬಾಳೆಯಷ್ಟು ಸಲೀಸು ಮಾಡಿದೆ.

ವ್ಯಕ್ತಿಗತ ಸ್ವಾತಂತ್ರ್ಯಹರಣದ ಈ ಘೋರ ಅಪಾಯಕ್ಕೆ ಭಾರತೀಯ ಮೆದುಳು- ಮನಸುಗಳು ಇನ್ನೂ ಎಚ್ಚರಗೊಂಡಿರುವ ಲಕ್ಷಣಗಳಿಲ್ಲ. ಭ್ರಷ್ಟಾಚಾರ ನಿವಾರಣೆ, ಕಾರ್ಯದಕ್ಷತೆ, ದುಂದುವೆಚ್ಚ ತಡೆಯುವ ತಂತ್ರಜ್ಞಾನವಿದು ಎಂದು ಆಳುವ ವರ್ಗ ಉತ್ಪ್ರೇಕ್ಷೆಯ ಮುಸುಕನ್ನು ಹೊದಿಸುತ್ತಿದೆ. ಈ ಮುಸುಕನ್ನು ಹರಿದು ನೋಡುವಷ್ಟು ಅಪನಂಬಿಕೆ ಮತ್ತು ಡಿಜಿಟಲ್ ಸಾಕ್ಷರತೆ ನಮ್ಮ ಜನವರ್ಗಗಳಲ್ಲಿ ಬೆಳೆಯಲು ಇನ್ನೂ ಬಹಳ ಕಾಲ ಬೇಕಾದೀತು. ಆದರೆ ಅಷ್ಟು ಹೊತ್ತಿಗೆ ನಡುನೀರು ಮತ್ತು ದಡದ ನಡುವಿನ ದೂರ ಮರಳಲಾರದಷ್ಟು ದೀರ್ಘ ಆದೀತು.

ನಮ್ಮ ಪ್ರಭುತ್ವ ಇರಲಿ, ಭಾರತ ದೇಶವಾಸಿಗಳ ಬಯೊಮೆಟ್ರಿಕ್‌ ಮಾಹಿತಿ ಭಂಡಾರಕ್ಕೆ ಪಾತಕಿಗಳು, ಭಯೋತ್ಪಾದಕರು ಹಾಗೂ ವಿದೇಶಿ ಸರ್ಕಾರಗಳು ಕೂಡ ಕನ್ನ ಹಾಕಬಹುದು. ತಂತ್ರಜ್ಞಾನವೊಂದನ್ನು ಅಳೆದು ತೂಗುವಾಗ ಇದನ್ನು ಇಂದು ಯಾವ ಉದ್ದೇಶಕ್ಕೆ ಬಳಸಲಾಗುತ್ತದೆ ಎಂದು ಕೇಳಬೇಡಿರಿ.

ಬದಲಾಗಿ ನಾಳೆ ಯಾವುದಕ್ಕೆ ಬಳಕೆ ಮಾಡಿಯಾರು ಮತ್ತು ಹಾಗೆ ಬಳಕೆ ಮಾಡುವವರು ಯಾರು ಎಂಬ ಪ್ರಶ್ನೆಯನ್ನು ಕೇಳಬೇಕು ಎನ್ನುತ್ತಾರೆ ಸಿಐಎಸ್‌ನ ಸುನಿಲ್ ಅಬ್ರಹಾಂ. ಭಾರತವೂ ಸೇರಿದಂತೆ ಹಲವಾರು ದೇಶಗಳ ಜನರ ಬಯೊಮೆಟ್ರಿಕ್ ಮಾಹಿತಿಯನ್ನು ಅಮೆರಿಕ ಸರ್ಕಾರ ಕದಿಯುತ್ತಿದೆ ಎಂಬುದು ಎಡ್ವರ್ಡ್ ಸ್ನೋಡೆನ್ ಬಯಲು ಮಾಡಿದ್ದ ಸತ್ಯ.

ಆಧಾರ್ ದುರುಪಯೋಗ ತಡೆಯುವ ಕಾನೂನುಗಳಿವೆ. ಆದರೆ ಅವು ಸಾಲವು ಎನ್ನುತ್ತಾರೆ ತಜ್ಞರು. ಈ ತಂತ್ರಜ್ಞಾನವನ್ನು ಬಹುವಾಗಿ ಬೆಂಬಲಿಸುವವರು ಕೂಡ ಮಾಹಿತಿಯ ಖಾಸಗಿತನ ಮತ್ತು ಮಾಹಿತಿಯ ಬಲವತ್ತರ ಸಂರಕ್ಷಣೆ ಬಲು ಮುಖ್ಯ ಎನ್ನುತ್ತಾರೆ.

ಅಂತರ್ಜಾಲ ಬಳಕೆ ನಿತ್ಯ ಬದುಕನ್ನು ಹಾಸುಹೊಕ್ಕಾಗಿ ಹೆಣೆದುಕೊಳ್ಳುತ್ತಿರುವ ದಿನಗಳಲ್ಲಿಯೂ ಸೈಬರ್ ಸುರಕ್ಷತೆಯ ಮಜಬೂತು ಕಾನೂನುಗಳು ಇನ್ನೂ ರೂಪುಗೊಂಡಿಲ್ಲ ಎಂಬ ಮಾತು ಹೇಳಿರುವವರು ಖುದ್ದು ಸೈಬರ್ ಕಾನೂನು ಕ್ಷೇತ್ರದ ಹೆಸರಾಂತ ಪರಿಣತ ಪವನ್ ದುಗ್ಗಲ್.

ಆಧಾರ್ ಸುರಕ್ಷಿತ ಎಂಬ ಮಾತೇ ಪೊಳ್ಳು. ಸಾಕಷ್ಟು ಕಾನೂನು ಪೂರ್ವಸಿದ್ಧತೆ ಇಲ್ಲದೆ ಆಧಾರ್ ವ್ಯವಸ್ಥೆಯನ್ನು ನಾನಾ ಯೋಜನೆಗಳಿಗೆ ಜೋಡಿಸುವುದು ದೊಡ್ಡ ಎಲೆಕ್ಟ್ರಾನಿಕ್ ವಿನಾಶಕ್ಕೆ ದಾರಿ ಮಾಡೀತು ಎಂಬುದು ದುಗ್ಗಲ್ ನೀಡಿರುವ ಎಚ್ಚರಿಕೆ.

ಯುಪಿಎ ತರಲು ಯತ್ನಿಸಿದ್ದ ಆಧಾರ್ ವ್ಯವಸ್ಥೆಯನ್ನು ಅಂದಿನ ಬಿಜೆಪಿ ನಾಯಕ ಯಶವಂತ ಸಿನ್ಹಾ ನೇತೃತ್ವದ ಸಂಸದೀಯ ಸಮಿತಿ 2011ರಲ್ಲೇ ತಿರಸ್ಕರಿಸಿತ್ತು. ತಿಪ್ಪರಲಾಗ ಹಾಕಿರುವ ಬಿಜೆಪಿ ಇಂದು ತಂದಿರುವ ಆಧಾರ್ ವ್ಯವಸ್ಥೆ ಯುಪಿಎ ತಂದಿದ್ದ ವ್ಯವಸ್ಥೆಗಿಂತ ತುಸು ಉತ್ತಮ ಇದ್ದೀತು. ಆದರೆ ಗಂಡಾಂತರದ ಗುಣಗಳು ಹೆಚ್ಚು ಕಡಿಮೆ ಹಾಗೆಯೇ ಉಳಿದುಕೊಂಡಿವೆ.

ಮಹತ್ವದ ಈ ಆಧಾರ್ ವಿವಾದ ಸುಪ್ರೀಂ ಕೋರ್ಟ್ ಮುಂದೆ ವಿಚಾರಣೆಗೆ ಕಾದಿದೆ. ಸರ್ಕಾರ, ಆಧಾರ್ ಯೋಜನೆಗೆ ‘ಅಳಿಸಲಾಗದ ವಿಧಿಬರೆಹ’ದ ರೂಪ ನೀಡುವ ಮೊದಲೇ ನ್ಯಾಯಾಲಯ ನಾಗರಿಕರ ರಕ್ಷಣೆಗೆ ಧಾವಿಸಬೇಕೆಂಬುದು ಮಾನವ ಹಕ್ಕುಗಳ ಪ್ರತಿಪಾದಕರ ಕೂಗು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT