ಗುರುವಾರ , ಸೆಪ್ಟೆಂಬರ್ 24, 2020
21 °C

ಸಹಾರನಪುರದ ಸಾಮಾಜಿಕ ಬದಲಾವಣೆ

ಆಕಾರ್ ಪಟೇಲ್ Updated:

ಅಕ್ಷರ ಗಾತ್ರ : | |

ನಾನು ಕೆಲಸ ಮಾಡುವುದು ಮಾನವ ಹಕ್ಕುಗಳಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ. ಈ ಕ್ಷೇತ್ರದಲ್ಲಿ ಭಾರತೀಯ ನಾಗರಿಕರ ಹಕ್ಕುಗಳಿಗೆ ಸ್ಪಷ್ಟ ಜಯ ಎಲ್ಲ ಸಂದರ್ಭಗಳಲ್ಲಿಯೂ ಸಿಗುವುದಿಲ್ಲ. ಆದರೆ, ಸೆಕ್ಷನ್ 377 ಕೆಲವು ದಿನಗಳ ಹಿಂದೆ ರದ್ದಾಗಿದ್ದು ಅಂತಹ ಜಯಗಳಲ್ಲಿ ಒಂದು. ಇದಾದ ಕೆಲವು ದಿನಗಳ ನಂತರ, ಸಹಾರನಪುರದ ದಲಿತ ನಾಯಕ ಚಂದ್ರಶೇಖರ ಆಜಾದ್ ಅವರ ಬಿಡುಗಡೆ ರೂಪದಲ್ಲಿ ಇನ್ನೊಂದು ಜಯ ದೊರೆಯಿತು.

ಆಜಾದ್ ಅವರು ತಮ್ಮನ್ನು 'ರಾವಣ' ಎಂದು ಕರೆದುಕೊಳ್ಳುತ್ತಾರೆ. ಇತರರ ಮನಸ್ಸಿನಲ್ಲಿ ಜುಗುಪ್ಸೆ ಮೂಡಿಸಬಹುದಾದ, ನಮ್ಮ ಸಂಸ್ಕೃತಿಯ ಭಾಗವೇ ಆದ ಕೆಲವು ಅಂಶಗಳ ಜೊತೆ ತಮ್ಮನ್ನು ಗುರುತಿಸಿಕೊಳ್ಳಲು ಅವರು ಹೀಗೆ ಕರೆದುಕೊಳ್ಳುತ್ತಾರೆ. ನಾವು ಬದುಕುತ್ತಿರುವುದು ಬಹು ಸಂಸ್ಕೃತಿಗಳ ನಾಡಿನಲ್ಲಿ, ಇಲ್ಲಿನ ಎಲ್ಲ ಸಂಸ್ಕೃತಿಗಳೂ ಸ್ವೀಕಾರಾರ್ಹವೇ ಎಂಬುದನ್ನು ನಾವು ಬಲವಂತವಾಗಿಯಾದರೂ ಒಪ್ಪಿಕೊಳ್ಳಲಿ ಎಂಬ ಕಾರಣಕ್ಕೆ ಅವರು ಹೀಗೆ ಕರೆದುಕೊಳ್ಳುತ್ತಿದ್ದಾರೆ.

ಸಹಾರನಪುರಕ್ಕೆ ದೆಹಲಿಯಿಂದ ಐದು ತಾಸು ಪ್ರಯಾಣ ಮಾಡಬೇಕು. ಈ ಊರು ದೇವಬಂದ್‌ ನಗರದ ಸಮೀಪ ಇದೆ. ಇಲ್ಲಿನ ದಲಿತರು ತಮ್ಮ ಅಸ್ಮಿತೆಯನ್ನು ಗಟ್ಟಿ ದನಿಯಲ್ಲಿ ಪ್ರತಿಪಾದಿಸುವ ತೀರ್ಮಾನವನ್ನು ಕಳೆದ ವರ್ಷ ಕೈಗೊಂಡರು. ದಲಿತರು ತಮ್ಮ ಆಸ್ತಿ ಇರುವ ಕಡೆಗಳಲ್ಲಿ ದೇವನಾಗರಿ ಲಿಪಿಯಲ್ಲಿ 'ಮಹಾ ಚಮ್ಮಾರ' ಎಂದು ಬರೆದಿರುವ ಫಲಕ ನೆಟ್ಟರು. ಇದು ಅಲ್ಲಿನ ಠಾಕೂರರಿಗೆ ಅಪರಾಧದಂತೆ ಕಂಡಿತು. ಏಕೆಂದರೆ, ಚಮ್ಮಾರರನ್ನು ಅವರ ಜಾಗದಲ್ಲೇ ಇರಿಸಬೇಕು ಎಂಬುದು ಠಾಕೂರರ ಹಟ. ಆ ಫಲಕಗಳನ್ನು ತೆಗೆಯುವ ಯತ್ನವನ್ನು ಠಾಕೂರರು ಮಾಡಿದರು. ಆಗ ಹಿಂಸೆ ಉಂಟಾಯಿತು.

ಇದಾದ ನಂತರ ಚಂದ್ರಶೇಖರ ಆಜಾದ್ ಅವರನ್ನು ಐದು ತಿಂಗಳುಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಇರಿಸಲಾಯಿತು. ಅವರಿಗೆ 2017ರ ನವೆಂಬರ್‌ನಲ್ಲಿ ಜಾಮೀನು ದೊರೆಯಿತು. ಆದರೆ, ಜಾಮೀನು ಸಿಕ್ಕ ತಕ್ಷಣ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯ ಅಡಿ ಪುನಃ ಜೈಲಿಗೆ ತಳ್ಳಲಾಯಿತು. ಈ ಕಾಯ್ದೆಯ ಅಡಿ ಸರ್ಕಾರವು ವ್ಯಕ್ತಿಯನ್ನು ವಿಚಾರಣೆಯೇ ಇಲ್ಲದೆ ಒಂದು ವರ್ಷದವರೆಗೆ ಜೈಲಿನಲ್ಲಿ ಇರಿಸಬಹುದು. ಇಂತಹ ಕಾನೂನನ್ನು ಯಾವ ನಾಗರಿಕ ಸಮಾಜವೂ ಹೊಂದಿರಬಾರದು. ಈ ಕಾನೂನಿನ ಅಡಿ ದಲಿತ ನಾಯಕರೊಬ್ಬರನ್ನು ಜೈಲಿಗೆ ಕಳುಹಿಸಿದ್ದು ದೌರ್ಜನ್ಯದ ಕ್ರಮ. 'ವ್ಯಕ್ತಿಯೊಬ್ಬ ಭಾರತದ ಭದ್ರತೆಗೆ ಯಾವುದೇ ರೀತಿಯಲ್ಲಿ ಧಕ್ಕೆ ತಾರದಂತೆ ತಡೆಯಲು, ಭಾರತವು ಬೇರೆ ದೇಶಗಳ ಜೊತೆ ಹೊಂದಿರುವ ಸಂಬಂಧಕ್ಕೆ ಧಕ್ಕೆ ತಾರದಂತೆ ತಡೆಯಲು ಆ ವ್ಯಕ್ತಿಯನ್ನು ಬಂಧಿಸಬಹುದು' ಎಂದು ರಾಷ್ಟ್ರೀಯ ಭದ್ರತಾ ಕಾಯ್ದೆ ಹೇಳುತ್ತದೆ.

ಈ ಕಾಯ್ದೆಯು ಅದೆಷ್ಟು ಅಸ್ಪಷ್ಟವಾಗಿದೆ ಎಂದರೆ, ನಮ್ಮಲ್ಲಿ ಯಾರೊಬ್ಬರನ್ನು ಬೇಕಿದ್ದರೂ, ಯಾವುದೇ ಅಪರಾಧವನ್ನು ನಾವು ಎಸಗದಿದ್ದರೂ, ಈ ಕಾಯ್ದೆಯ ಅಡಿ ಜೈಲಿಗೆ ನೂಕಬಹುದು. 'ಯಾವುದೇ ವ್ಯಕ್ತಿಯು ದೇಶದ ಭದ್ರತೆಗೆ ಯಾವುದೇ ಧಕ್ಕೆ ತಾರದಂತೆ ತಡೆಯಲು, ಆತ ಸಾರ್ವಜನಿಕ ಸುವ್ಯವಸ್ಥೆಗೆ ಯಾವುದೇ ಧಕ್ಕೆ ತಾರದಂತೆ ತಡೆಯಲು, ಆತ ಸಮುದಾಯಕ್ಕೆ ಅಗತ್ಯವಿರುವ ವಸ್ತುಗಳ ಹಾಗೂ ಸೇವೆಗಳ ಪೂರೈಕೆಗೆ ಧಕ್ಕೆ ತಾರದಂತೆ ತಡೆಯಲು ಆತನ ಬಂಧನ ಅಗತ್ಯವೆಂದು ಸರ್ಕಾರ ಭಾವಿಸಿದರೆ ಅವನನ್ನು ಬಂಧಿಸುವಂತೆ ಆದೇಶ ಹೊರಡಿಸಬಹುದು' ಎಂದು ಈ ಕಾಯ್ದೆಯಲ್ಲಿ ಹೇಳಲಾಗಿದೆ.

ಇಂತಹ ಜಾಳುಜಾಳಾದ ಪದಗಳನ್ನು ಬಳಸಿ ಬರೆದಿರುವ ಕಾನೂನುಗಳನ್ನು ಎಲ್ಲಾ ಪ್ರಭುತ್ವಗಳು, ತಮಗೆ ಒಪ್ಪಿಗೆಯಾಗದ ವ್ಯಕ್ತಿಗಳನ್ನು ಬಂಧಿಸಲು ಉಪಯೋಗಿಸಿಕೊಳ್ಳುತ್ತವೆ. ದುರದೃಷ್ಟವೆಂದರೆ, ಈ ರೀತಿ ಜೈಲಿಗೆ ತಳ್ಳುವುದಕ್ಕೆ ನಮ್ಮ ನ್ಯಾಯಾಲಯಗಳು ಹಲವು ಸಂದರ್ಭಗಳಲ್ಲಿ ಅವಕಾಶ ನೀಡುತ್ತವೆ. ಆಜಾದ್ ಅವರನ್ನು ನಾನು ಸೆಪ್ಟೆಂಬರ್‌ 10ರಂದು ಸಹಾರನಪುರದ ಜೈಲಿನಲ್ಲಿ ಭೇಟಿ ಮಾಡಿದೆ. ಜೈಲಿನ ಆವರಣದಲ್ಲಿ ಉದ್ಯಾನದಂತಹ ಸ್ಥಳ ಇದೆ. ಅಲ್ಲಿ ಕೈದಿಗಳು ಹಾಗೂ ಅವರನ್ನು ನೋಡಲು ಬಂದವರು ಮುಕ್ತವಾಗಿ ಭೇಟಿಯಾಗಬಹುದು. ಕೈದಿಗಳ ಭೇಟಿಗೆ ಬಂದವರ ಕೈಮೇಲೆ ಜೈಲಿನ ಒಳಗೆ ಹೋಗುವಾಗ ನಾಲ್ಕು ಬಾರಿ ಠಸ್ಸೆ ಒತ್ತಲಾಗುತ್ತದೆ. ವೃತ್ತಾಕಾರದ ಠಸ್ಸೆಯೊಂದನ್ನು ಬಳಸಿ ಭೇಟಿಯ ದಿನ ನಮೂದಿಸಲಾಗುತ್ತದೆ. ನಾವು ಭೇಟಿಗೆ ಹೋಗಿದ್ದು ಸೋಮವಾರ. ಆದರೆ, ಠಸ್ಸೆಯಲ್ಲಿ 'ಗುರುವಾರ' ಎಂದಿತ್ತು. ತ್ರಿಕೋನಾಕಾರದ ಠಸ್ಸೆಯು 'ಗೇಟ್‌ ಭೇಟಿ' ಎಂಬ ಅಚ್ಚು ಒತ್ತಿತು. ಅದಾದ ನಂತರ ಕೆಂಪು ಬಣ್ಣದ ವೃತ್ತಾಕಾರದ ಇನ್ನೊಂದು ಠಸ್ಸೆ.

ಭೇಟಿಗೆ ಬಂದ ವ್ಯಕ್ತಿ ಜೈಲಿನಿಂದ ವಾಪಸ್ ಹೋಗುವಾಗ ಠಸ್ಸೆಯನ್ನು ಪರಿಶೀಲಿಸಲಾಗುತ್ತದೆ. ಒಳಗೆ ಹೋಗುವಾಗ ಅಲ್ಲ. ವಿಚಾರಣಾಧೀನ ಕೈದಿಗಳಿಗೆ ಠಸ್ಸೆ ಒತ್ತಿರುವುದಿಲ್ಲ. ಅವರು ಭೇಟಿಗೆ ಬಂದವರ ಜೊತೆ ತಪ್ಪಿಸಿಕೊಳ್ಳದಿರಲಿ ಎಂಬ ಕಾರಣಕ್ಕೆ ಹೀಗೆ ಪರಿಶೀಲಿಸಲಾಗುತ್ತದೆ. 'ಸೋಮವಾರ'ದ ಬದಲು 'ಗುರುವಾರ' ಎಂದು ಠಸ್ಸೆ ಒತ್ತಿದ್ದಕ್ಕೆ ಕಾರಣ, ಕೈದಿಗಳು ಠಸ್ಸೆಯನ್ನು ನಕಲು ಮಾಡದಿರಲಿ ಎಂಬುದು. ಆಜಾದ್ ಅವರು 30 ವರ್ಷ ವಯಸ್ಸಿನ ಯುವಕ. ನೋಡಲು ಲಕ್ಷಣವಾಗಿದ್ದಾರೆ.

ಗುಜರಾತಿ ರಜಪೂತ, ಕ್ರಿಕೆಟಿಗ ರವೀಂದ್ರ ಜಡೇಜಾ ಅವರಿಗೆ ಇರುವಂತಹ ಮೀಸೆ (ಮೇಲಕ್ಕೆ ತಿರುವಿದ ಮೀಸೆ) ಆಜಾದ್ ಅವರಿಗೂ ಇದೆ. ಈ ಮೀಸೆ ಇನ್ನೊಬ್ಬರಿಗೆ ಒಂದು ಸಂದೇಶವನ್ನೂ ರವಾನಿಸುತ್ತದೆ. ನಾವು ಭೇಟಿ ಮಾಡಿದ 'ಭೀಮ್ ಆರ್ಮಿ ಭಾರತ್ ಏಕತಾ ಮಿಷನ್‌'ನ ಬಹುತೇಕ ನಾಯಕರು ಇದೇ ರೀತಿ ಮೀಸೆ ಬಿಟ್ಟಿದ್ದರು. ಅವರು ತಮ್ಮ ಬಲಗೈಗೆ ಉಕ್ಕಿನ, ದಪ್ಪ ಕೈಖಡಗ ಹಾಕಿಕೊಂಡಿದ್ದರು. ಆದರೆ, ಯಾರೊಬ್ಬರೂ ಧಾರ್ಮಿಕ ಸಂಕೇತದ ದಾರ ಧರಿಸಿರಲಿಲ್ಲ. ಆಜಾದ್ ಅವರನ್ನು ಭೇಟಿ ಮಾಡಲು ಪ್ರತಿದಿನ ಜೈಲಿಗೆ ಬರುತ್ತಿದ್ದವರಲ್ಲಿ ಹಲವಾರು ಯುವಕ, ಯುವತಿಯರೂ ಇದ್ದರು. ಆಜಾದ್ ಅವರನ್ನು ಬೆಂಬಲಿಸಿ ದಲಿತರು ರ‍್ಯಾಲಿ ನಡೆಸಿದರು. ಆಜಾದ್ ಅವರನ್ನು ಏಕಾಂಗಿಯಾಗಿಸುವ ಉತ್ತರ ಪ್ರದೇಶ ಸರ್ಕಾರದ ಉಪಾಯ ಫಲಿಸಲಿಲ್ಲ. ಸೆಪ್ಟೆಂಬರ್ 13ರ ರಾತ್ರಿ ಅವರನ್ನು ಬಿಡುಗಡೆ ಮಾಡಬೇಕಾಯಿತು.

ಜೈಲು ಭೇಟಿಯ ನಂತರ ನಾನು, ಭೀಮ್ ಆರ್ಮಿ ತಳಮಟ್ಟದಲ್ಲಿ ಮಾಡಿರುವ ಕೆಲಸಗಳನ್ನು ನೋಡಲು ಸಹಾರನಪುರದಲ್ಲಿ ಅಡ್ಡಾಡಿದೆ. ದಲಿತರ ಮಕ್ಕಳಿಗಾಗಿ ಈ ಸಂಘಟನೆ ಅಂದಾಜು ಮುನ್ನೂರು ಶಾಲೆಗಳನ್ನು ನಡೆಸುತ್ತದೆ. ಇಲ್ಲಿ ಸ್ವಯಂಸೇವಕರು, ಮಾಮೂಲಿ ಶಾಲಾ ಸಮಯದ ನಂತರ ಪಾಠ ಹೇಳಿಕೊಡುತ್ತಾರೆ. ಒಂದು ಶಾಲೆಯನ್ನು ಯಾರದೋ ಒಬ್ಬರ ಮನೆಯಲ್ಲಿ ನಡೆಸಲಾಗುತ್ತಿತ್ತು.

ಅಲ್ಲಿ ಅಂದಾಜು 35 ಮಕ್ಕಳನ್ನು ಮೂರು ಸಾಲುಗಳಲ್ಲಿ, ವರಾಂಡಾದಲ್ಲಿ ಕೂರಿಸುವಷ್ಟು ದೊಡ್ಡದಾದ ಜಾಗ ಇತ್ತು. ಅಲ್ಲಿ ಕನಿಷ್ಠ 5 ವರ್ಷದಿಂದ ಗರಿಷ್ಠ 10 ವರ್ಷ ವಯಸ್ಸಿನವರೆಗಿನ ಮಕ್ಕಳು ಇದ್ದರು. ಅವರಿಗೆ ಪಾಠ ಹೇಳುವ ಹೊಣೆಯನ್ನು ಯುವತಿಯೊಬ್ಬಳಿಗೆ, ಹರೆಯದವನೊಬ್ಬನಿಗೆ ವಹಿಸಲಾಗಿತ್ತು. ‘ಜೈ ಭೀಮ್' ಎಂದು ಹೇಳಿ ಮಕ್ಕಳು ತಮ್ಮ ನಡುವೆ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದರು. ಅವರಿಗೆ ಬಿ.ಆರ್. ಅಂಬೇಡ್ಕರ್ ಜೀವನಗಾಥೆಯನ್ನು ಹೇಳಲು ಬರುತ್ತಿತ್ತು.

ನಾನು ಕಂಡಂತೆ, ಆಜಾದ್ ಅವರು ಸಮೂಹ ನಾಯಕ ಆಗಿದ್ದಾರೆ. ಭೀಮ್ ಆರ್ಮಿ ಭಾರತ್ ಏಕತಾ ಮಿಷನ್ ತನ್ನದೇ ಆದ ನೆಲೆ ಹೊಂದಿರುವ ರಾಜಕೀಯ ಶಕ್ತಿ ಆಗುತ್ತದೆ. 'ಮಹಾ ಚಮ್ಮಾರ' ಎಂಬ ಫಲಕ ಹೊಂದಿರುವ ಸ್ಥಳಗಳು ಇಂದು ಎಷ್ಟಿವೆ ಎಂದು ನಾನು ಕೇಳಿದೆ. ಸಹಾರನಪುರದ ಹಳ್ಳಿಗಳಲ್ಲಿ ಇಂತಹ 160 ಸ್ಥಳಗಳು ಇವೆ ಎಂಬ ಉತ್ತರ ದೊರೆಯಿತು. ಸಾಮಾಜಿಕ ಬದಲಾವಣೆ ಆಗುವ ರೀತಿ ಇದು. ತುಳಿತಕ್ಕೆ ಒಳಗಾದವರು ತಮ್ಮ ಹಕ್ಕುಗಳಿಗಾಗಿ ಎದ್ದು ನಿಂತಾಗ ಮಾತ್ರ ಸಮಾಜ ಅನಿವಾರ್ಯವಾಗಿ ಅವರಿಗೆ ಒಂದು ಅವಕಾಶ ನೀಡುತ್ತದೆ.
 

(ಲೇಖಕ: ಅಂಕಣಕಾರ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು