7

ಡಿಜಿಟಲ್ ವಸಾಹತೀಕರಣದ ಹಾದಿಯಲ್ಲಿ ಭಾರತ

ಎನ್.ಎ.ಎಂ. ಇಸ್ಮಾಯಿಲ್
Published:
Updated:

‘ವ್ಯಾಪಾರದ ಉದ್ದೇಶದಿಂದ ಭಾರತಕ್ಕೆ ಬಂದ ಬ್ರಿಟಿಷರು ನಿಧಾನವಾಗಿ ಭಾರತದ ರಾಜರನ್ನು ಸೋಲಿಸಿ, ವಂಚಿಸಿ ಆಡಳಿತವನ್ನು ತಮ್ಮ ಕೈಗೆ ತೆಗೆದುಕೊಂಡರು’ ಎಂಬ ಅರ್ಥದ ಸಾಲುಗಳನ್ನು ನಾವೆಲ್ಲಾ ಪ್ರಾಥಮಿಕ ಶಾಲೆಯ ಇತಿಹಾಸ ಪಠ್ಯಪುಸ್ತಕದಲ್ಲಿ ಓದಿರುತ್ತೇವೆ. ಮುಂದೊಂದು ದಿನ ಇವೇ ಇತಿಹಾಸದ ಪುಸ್ತಕಗಳಲ್ಲಿ ಸೇರ್ಪಡೆಯಾಗುವ ಸಾಲು ಹೀಗಿರಬಹುದು ‘ಬ್ರಿಟಿಷರು ಭಾರತ ಬಿಟ್ಟು ತೆರಳಿದ ಏಳು ದಶಕಗಳ ಬಳಿಕ ವ್ಯಾಪಾರದ ಉದ್ದೇಶದಿಂದ ಭಾರತ ಪ್ರವೇಶಿಸಿದ ಅಮೆರಿಕ ಮತ್ತು ಚೀನಾದ ಕಂಪನಿಗಳು ಭಾರತದ ಡಿಜಿಟಲ್ ಕ್ಷೇತ್ರವನ್ನು ತಮ್ಮ ವಸಾಹತನ್ನಾಗಿ ಮಾಡಿಕೊಂಡವು’.

ಕಳೆದ ಕೆಲವು ತಿಂಗಳುಗಳಿಂದ ಭಾರತದ ಡಿಜಿಟಲ್ ಕ್ಷೇತ್ರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡುತ್ತಿದ್ದರೆ ಮೇಲಿನ ಸಾಲುಗಳು ನಿಜವಾಗುವ ಕಾಲ ಹೆಚ್ಚು ದೂರವೇನೂ ಇಲ್ಲ. ಭಾರತದಲ್ಲಿ ನಡೆಯುತ್ತಿರುವ ಅಮೆರಿಕ ಮತ್ತು ಚೀನಾದ ಡಿಜಿಟಲ್ ವಸಾಹತೀಕರಣ ಬಗ್ಗೆ ಎಚ್ಚರಿಕೆ ನೀಡುತ್ತಿರುವುದು ಕೇವಲ ‘ಸಮಾಜವಾದಿ ಅರ್ಥಶಾಸ್ತ್ರಜ್ಞ’ರಲ್ಲ. ಅಥವಾ ‘ಕಮ್ಯುನಿಸ್ಟ್’ ಚಿಂತನೆಯವರಲ್ಲ. ಅಷ್ಟೇಕೆ ಈಗಿರುವ ಸರ್ಕಾರದ ಸಮರ್ಥಕರ ದೃಷ್ಟಿಯಲ್ಲಿರುವ ‘ಸಿಕ್ಯುಲರ್’, ‘ಖಾಂಗಿ’ ಚಿಂತಕರೂ ಅಲ್ಲ.

ಸರಿಯಾಗಿ ನಾಲ್ಕು ತಿಂಗಳ ಹಿಂದೆ ಈ ಬಗ್ಗೆ ಭಾರತದ ಡಿಜಿಟಲ್ ವಸಾಹತೀಕರಣದ ಬಗ್ಗೆ ಹೇಳಿದ್ದು ರಾಘವ್ ಬಹಾಲ್. ಕ್ವಿಂಟ್ ಎಂಬ ಅಂತರ್ಜಾಲ ಸುದ್ದಿ ಮಾಧ್ಯಮದ ಮುಖ್ಯಸ್ಥರಾಗಿರುವ ರಾಘವ್ ಈ ವಿಚಾರವನ್ನು ಹೇಳಿದಾಗ ಅವರೆದುರು ಇದ್ದದ್ದು ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ‘ಓಲಾ’ದ ಶೇಕಡ ಅರವತ್ತರಷ್ಟು ಷೇರುಗಳು ಜಪಾನಿನ ಸಾಫ್ಟ್‌ಪ್ಯಾಂಕ್ ವಶವಾದ ವ್ಯವಹಾರವಿತ್ತು. ಪೇಟಿಎಂನಲ್ಲಿ ಚೀನಾದ ಅಲಿಬಾಬ ಸಂಸ್ಥೆಯ ಪಾಲು ಹೆಚ್ಚಾದ ಕಥೆಯಿತ್ತು. ಬೆಂಗಳೂರು ಮೂಲದ ಫ್ಲಿಪ್‌ಕಾರ್ಟ್ ಸಂಸ್ಥೆಯನ್ನು ಖರೀದಿಸುವುದಕ್ಕೆ ಅಮೆರಿಕದ ವಾಲ್‌ಮಾರ್ಟ್ ಮುಂದಾಗಿರುವ ಸುದ್ದಿ ಇತ್ತು. ‘ಬೈಜೂಸ್’ ಮತ್ತು ‘ಮೇಕ್ ಮೈಟ್ರಿಪ್’‌ಗಳನ್ನು ಖರೀದಿಸಲು ಹಾತೊರೆಯುತ್ತಿರುವ ಸಂಸ್ಥೆಗಳ ಪಟ್ಟಿಯಿತ್ತು.

ಇದಕ್ಕೂ ಎಂಟು ತಿಂಗಳ ಹಿಂದೆ ಅಂದರೆ 2017ರ ಆಗಸ್ಟ್‌ನಲ್ಲಿ ಇನ್ಫೊಸಿಸ್‌ನ ಸ್ಥಾಪಕರಲ್ಲಿ ಒಬ್ಬರಾದ ನಂದನ್ ನಿಲೇಕಣಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ‘ದತ್ತಾಂಶ ವಸಾಹತೀಕರಣ’ದ ಬಗ್ಗೆ ಭಾರತ ಎಚ್ಚರದಿಂದರಬೇಕು ಎಂಬ ಕಿವಿಮಾತು ಹೇಳಿದ್ದರು. ತಮಾಷೆಯೆಂದರೆ ಈ ಬಗೆಯ ವಸಾಹತೀಕರಣಕ್ಕೆ ಹೇತುವಾಗಬಹುದಾದ ‘ಆಧಾರ್’ ಯೋಜನೆಯ ಮುಖ್ಯಸ್ಥ ಹುದ್ದೆಯನ್ನೂ ಅವರೇ ನಿರ್ವಹಿಸಿದ್ದರು.

ಈಗ ಇವೆಲ್ಲವೂ ಭೂತಕಾಲ. ಭಾರತದಲ್ಲಿ ಚಿಲ್ಲರೆ ವ್ಯಾಪಾರದಲ್ಲಿ ತೊಡಗಿರುವವರ 100ಕ್ಕೂ ಹೆಚ್ಚು ಸಂಘಟನೆಗಳ ಒಕ್ಕೂಟವೊಂದಿದೆ. ಇದರ ಹೆಸರು ಅಖಿಲ ಭಾರತ ವ್ಯಾಪಾರ ಸಂಘಟನೆಗಳ ಮಹಾ ಒಕ್ಕೂಟ (ಸಿಎಐಟಿ). ಇದು, ಜುಲೈ ಎರಡರಂದು ದೇಶವ್ಯಾಪಿಯಾಗಿ ಪ್ರತಿಭಟನೆ ನಡೆಸಿತು. ದೇಶವ್ಯಾಪಿಯಾಗಿ ನೂರಕ್ಕೂ ಹೆಚ್ಚು ನಗರಗಳಲ್ಲಿ ಈ ಸಂಘಟನೆಯ ಸದಸ್ಯರು ಪ್ರತಿಭಟನೆ ನಡೆಸಿ ಫ್ಲಿಪ್‌ಕಾರ್ಟ್ ಸಂಸ್ಠೆಯನ್ನು ವಾಲ್‌ಮಾರ್ಟ್ ಖರೀದಿಸುವುದನ್ನು ತಡೆಯಬೇಕು ಎಂದು ಒತ್ತಾಯಿಸಿದರು. ಈ ಪ್ರತಿಭಟನೆ ನಡೆಸಿದವರಾರೂ ಉದ್ದಿಮೆಗಳಲ್ಲಿ ಸರ್ಕಾರದ ನಿಯಂತ್ರಣವನ್ನು ಬಯಸುವವರಾಗಿರಲಿಲ್ಲ. ಇವರೆಲ್ಲರ ಒತ್ತಾಯವಿದ್ದದ್ದು ಭಾರತದ ಸ್ಪರ್ಧಾ ಆಯೋಗ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಬೇಕು ಎಂಬುದಾಗಿತ್ತು.

ಈ ಮಧ್ಯೆ ಮತ್ತೊಂದು ಬೆಳವಣಿಗೆಯೂ ಸಂಭವಿಸಿತು. ತಂತ್ರಜ್ಞಾನ ಮತ್ತು ನೀತಿ ನಿರೂಪಣೆಗೆ ಸಂಬಂಧಿಸಿದ ಚರ್ಚೆಗಳನ್ನು ನಡೆಸುವ ವೇದಿಕೆಗಳಲ್ಲಷ್ಟೇ ಇದು ಕಾಣಿಸಿಕೊಂಡಿತ್ತು. ಮೇ ತಿಂಗಳಲ್ಲಿ ಭಾರತದ ನೀತಿ ಆಯೋಗ ಇಂಟರ್ನೆಟ್ ದೈತ್ಯ ಗೂಗಲ್ ಜೊತೆಗೆ ಒಂದು ಒಪ್ಪಂದಕ್ಕೆ ಸಹಿ ಹಾಕಿತು. ಈ ಒಪ್ಪಂದದಂತೆ ಭಾರತದಲ್ಲಿ ‘ಕೃತಕ ಬುದ್ಧಿಮತ್ತೆ’ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಮತ್ತು ಯಂತ್ರಕಲಿಕೆ (ಮೆಷೀನ್ ಲರ್ನಿಂಗ್) ತಂತ್ರಜ್ಞಾನ ಅಭಿವೃದ್ಧಿಗೆ ಸಂಬಂಧಿಸಿದ ಪರಿಸರವನ್ನು ಸೃಷ್ಟಿಸುವುದಕ್ಕೆ ಗೂಗಲ್ ಸಹಾಯ ಮಾಡುತ್ತದೆ. ಇದಾದ ಒಂದು ತಿಂಗಳ ನಂತರ ನೀತಿ ಆಯೋಗ ‘ಕೃತಕ ಬುದ್ಧಿಮತ್ತೆ’ಗೆ ಸಂಬಂಧಿಸಿದಂತೆ ಭಾರತ ಏನು ಮಾಡಬಹುದು ಎಂಬುದನ್ನು ವಿವರಿಸುವ ‘ಚರ್ಚಾ ಟಿಪ್ಪಣಿ’ಯೊಂದನ್ನು ಬಿಡುಗಡೆ ಮಾಡಿತು.

ಇಲ್ಲೊಂದು ಕುತೂಹಲಕಾರಿ ಸಂಗತಿಯಿದೆ. ನಂದನ್ ನಿಲೇಕಣಿಯವರಂಥ ಮಾಹಿತಿ ಮತ್ತು ಸಂವಹನ ಕ್ಷೇತ್ರದ ಉದ್ದಿಮೆಯ ಆಳ ಮತ್ತು ಆಗಲವನ್ನು ತಿಳಿದವರು ಹಾಗೂ ಇದರ ಬಗ್ಗೆ ಅಂಥ ದೊಡ್ಡ ಅರಿವಿಲ್ಲದೆ ತಮ್ಮ ಪುಟ್ಟ ವ್ಯಾಪಾರವನ್ನು ಕಾಪಾಡಿಕೊಳ್ಳುವ ಉದ್ದೇಶವಿರುವ ಸಿಎಐಟಿಯ ಸದಸ್ಯರು ಒಂದು ನೆಲೆಯಲ್ಲಿ ಆಲೋಚಿಸುತ್ತಿದ್ದರು. ಇದೇ ವೇಳೆ ಭಾರತದ ಪರಿವರ್ತನೆಗಾಗಿ ರೂಪುಗೊಂಡಿರುವ ಸಂಸ್ಥೆಯಾಗಿರುವ ನೀತಿ ಆಯೋಗ ಅದರ ವಿರುದ್ಧ ದಿಕ್ಕಿನಲ್ಲಿ ಆಲೋಚಿಸುತ್ತಿತ್ತು. ಇನ್ನೂ ವಿಚಿತ್ರವೆಂದರೆ ವಾಲ್‌ಮಾರ್ಟ್ ಮತ್ತು ಫ್ಲಿಪ್‌ಕಾರ್ಟ್ ವ್ಯವಹಾರವನ್ನು ವಿರೋಧಿಸುತ್ತಿರುವ ಸಿಎಐಟಿಯ ಸದಸ್ಯರೆಲ್ಲರೂ ನಾಲ್ಕು ವರ್ಷಗಳ ಹಿಂದಿನ ಚುನಾವಣೆಯಲ್ಲಿ ಬೆಂಬಲಿಸಿದ್ದು ನೆಹರೂ ಕಾಲದ ಯೋಜನಾ ಆಯೋಗವನ್ನು ನೀತಿ ಆಯೋಗವಾಗಿ ಬದಲಾಯಿಸಿದವರನ್ನೇ.

ವಸಾಹತೀಕರಣ ನಡೆಯುವುದು ಹೀಗೆಯೇ. ಆರಂಭದಲ್ಲಿ ಇದು ವ್ಯಾಪಾರೀ ಆಸಕ್ತಿ. ಆಮೇಲೆ ಪ್ರಭುತ್ವದ ಆಸಕ್ತಿ. ಪೋರ್ಚುಗೀಸರು, ಡಚ್ಚರು, ಫ್ರೆಂಚರು ಮತ್ತು ಬ್ರಿಟಿಷರಿಗೆ ಇದ್ದದ್ದು ವ್ಯಾಪಾರಿ ಆಸಕ್ತಿಯೇ. ಭಾರತದ ಸಂಬಾರ ಪದಾರ್ಥಗಳ ಅಂತರರಾಷ್ಟ್ರೀಯ ವ್ಯವಹಾರದ ಮೇಲೆ ತಮ್ಮ ನಿಯಂತ್ರಣ ಸಾಧಿಸುವುದು. ಬಳಕೆಯಾದ ತಂತ್ರಗಳೂ ಹಾಗೆಯೇ ಇದ್ದವು. ಮೊದಲಿಗೆ ಸಂಬಾರ ಪದಾರ್ಥಗಳ ಖರೀದಿಯ ಮೇಲೆ ಏಕಸ್ವಾಮ್ಯ ಸಾಧಿಸುವ ಉದ್ದೇಶವಿತ್ತು. ಆಮೇಲೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಮಾರುಕಟ್ಟೆಯಾಗಿ ಭಾರತವನ್ನು ಕಾಣಲಾರಂಭಿಸಿದರು. ಮೊದಲು ಈಸ್ಟ್ ಇಂಡಿಯಾ ಕಂಪನಿ. ಮತ್ತೆ ಮಹಾರಾಣಿಯವರ ಸರ್ಕಾರವೇ ಬಂತು! ಅದು ತುಂಡರಸರ ಕಾಲ. ಒಬ್ಬರ ವಿರುದ್ಧ ಮತ್ತೊಬ್ಬರನ್ನು ಎತ್ತಿಕಟ್ಟಿ ತಮ್ಮ ಉದ್ದೇಶಗಳನ್ನು ಸಾಧಿಸಿಕೊಂಡರು.

ಈಗಿನ ಸ್ಥಿತಿ ಭಿನ್ನ. ವರ್ತಮಾನದ ವಸಾಹತೀಕರಣಕ್ಕೆ ಬೇಕಿರುವ ತಂತ್ರವೇ ಬೇರೆ. ಈಗ ವಸಾಹತೀಕರಣಕ್ಕೆ ಮುಂದಾಗುವುದು ಮತ್ತೊಂದು ದೇಶದ ಪ್ರಭುತ್ವವಲ್ಲ. ಈಗ ಆ ಕೆಲಸಕ್ಕೆ ಮುಂದಾಗುವುದು ಬೃಹತ್ ವಾಣಿಜ್ಯ ಸಂಸ್ಥೆಗಳು. ಆಮೇಲೆ ಇವರಿಗೆ ಬೇಕಿರುವುದು ಮಾರುಕಟ್ಟೆಯ ಪಾಲು ಮಾತ್ರ. ನೀತಿ ನಿರೂಪಣೆ ಮಾಡುವ ಪ್ರಭುತ್ವಗಳು ಅದಕ್ಕೆ ಬೇಕಿರುವ ವ್ಯವಸ್ಥೆ ಮಾಡಿಕೊಟ್ಟರೆ ಸಾಕು. ಅಧಿಕಾರ ಚಲಾಯಿಸುವ ಹುದ್ದೆಗಳು ಈ ಕಂಪನಿಗಳಿಗೆ ಬೇಕಿಲ್ಲ.

‘ಕೃತಕ ಬುದ್ಧಿಮತ್ತೆ’ಯಂಥ ತಾಂತ್ರಿಕತೆಯ ಪರಿಣಾಮ ಬಹಳ ವ್ಯಾಪಕವಾದದ್ದು. ಈ ಕ್ಷೇತ್ರದಲ್ಲಿ ಗೂಗಲ್ ಈಗಾಗಲೇ ಸಾಕಷ್ಟು ಮುಂದೆ ಸಾಗಿದೆ. ಎಷ್ಟು ಮುಂದೆ ಸಾಗಿದೆ ಎಂದರೆ ಮತ್ತೊಂದು ಸಂಸ್ಥೆ ಈ ಕ್ಷೇತ್ರದಲ್ಲಿ ಏನನ್ನಾದರೂ ಮಾಡಿದರೆ ಗೂಗಲ್ ಅದನ್ನು ಖರೀದಿಸುವುದಕ್ಕೆ ತುದಿಗಾಲಲ್ಲಿ ನಿಂತಿರುತ್ತದೆ. ನೀತಿ ಆಯೋಗದ ನೆರಳಲ್ಲಿ ಗೂಗಲ್ ಭಾರತದ ಸ್ಟಾರ್ಟ್ ಅಪ್‌ಗಳಿಗೆ ತರಬೇತಿ ನೀಡುವುದು ಮತ್ತು ಅವುಗಳು ವಿವಿಧ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವುದು ಎಂದರೆ ಅದರ ಅರ್ಥವೇನು? ಇದನ್ನು ನಂದನ್ ನಿಲೇಕಣಿಯವರೇ ಹೇಳಿದ್ದಾರೆ ‘ದತ್ತಾಂಶ ವಸಾಹತೀಕರಣ’. ಅರ್ಥಾತ್ ಭಾರತೀಯ ಸ್ಟಾರ್ಟ್ ಅಪ್‌ಗಳು ಸೃಷ್ಟಿಸಬಹುದಾದ ತಂತ್ರಜ್ಞಾನದ ಮೇಲೆ ಪ್ರತ್ಯಕ್ಷ ಅಥವಾ ಪರೋಕ್ಷ ಏಕಸ್ವಾಮ್ಯವನ್ನು ಸಾಧಿಸುವುದು. ನೀತಿ ಆಯೋಗ ಒಂದು ಬಗೆಯಲ್ಲಿ ಕುರಿ ಕಾಯುವ ಕೆಲಸವನ್ನು ತೋಳಕ್ಕೆ ವಹಿಸಿದೆ!

ಫ್ಲಿಪ್‌ಕಾರ್ಟ್ ಅನ್ನು ಖರೀದಿಸಲು ಮುಂದಾಗಿರುವ ವಾಲ್‌ಮಾರ್ಟ್ ಕೂಡಾ ಹೀಗೆಯೇ. ಅಮೆರಿಕದಲ್ಲಿ ದೊಡ್ಡ ದೊಡ್ಡ ಸೂಪರ್ ಮಾರ್ಕೆಟ್‌ಗಳನ್ನು ಹೊಂದಿರುವ ಈ ಸಂಸ್ಥೆಗೀಗ ಆನ್‌ಲೈನ್ ಅಂಗಡಿಗಳ ಕ್ಷೇತ್ರವನ್ನು ತನ್ನದಾಗಿಸಿಕೊಳ್ಳಬೇಕಿದೆ. ಅಷ್ಟೇ ಅಲ್ಲ ತನ್ನ ಆಫ್‌ಲೈನ್ ಅಂಗಡಿಗಳ ಜಾಲವನ್ನು ಭಾರತದಂಥ ದೇಶಗಳಿಗೂ ವಿಸ್ತರಿಸಬೇಕಿದೆ. ಅಮೆಜಾನ್ ಎಂಬ ಅಮೆರಿಕ ಮೂಲದ ಅಂತರ್ಜಾಲ ಅಂಗಡಿಗೆ ಭಾರತದಲ್ಲಿ ದೊಡ್ಡ ಸವಾಲಾಗಿದ್ದ ಫ್ಲಿಪ್‌ಕಾರ್ಟ್ ಅನ್ನು ಖರೀದಿಸುವುದರ ಹಿಂದೆ ವಾಲ್‌ಮಾರ್ಟ್ ವಿಸ್ತರಣಾ ತಂತ್ರವಿದೆ. ಈ ವ್ಯಾಪಾರಿ ಆಸಕ್ತಿಗಳ ಆಚೆಗಿನ ಮತ್ತೊಂದು ಕಥೆಯೂ ಭಾರತದಲ್ಲಿ ಅನಾವರಣಗೊಳ್ಳುತ್ತಿದೆ. ಅಮೆಜಾನ್‌ಗೆ ಪ್ರತಿಸ್ಪರ್ಧಿಯಾಗಿದ್ದ ಭಾರತೀಯ ಸಂಸ್ಥೆಯೊಂದು ಮತ್ತೊಂದು ಅಮೆರಿಕ ಮೂಲದ ಕಂಪನಿಯ ಪಾಲಾಗುತ್ತಿದೆ. ಅಂದರೆ ಸ್ಪರ್ಧೆ ಇರುವುದು ಎರಡು ಅಮೆರಿಕನ್ ಕಂಪನಿಗಳ ನಡುವೆ. ಅದು ನಡೆಯುವ ಕ್ಷೇತ್ರ ಮಾತ್ರ ಭಾರತ.

ಚಿಲ್ಲರೆ ವ್ಯಾಪಾರಿಗಳು ಇದನ್ನು ವಿರೋಧಿಸುವುದು ನಮಗೆ ತಮಾಷೆಯಾಗಿ ಕಾಣಿಸುತ್ತದೆ. ಈ ಸಣ್ಣ ವ್ಯಾಪಾರಿಗಳು ತಮ್ಮ ಹಿತಕ್ಕಾಗಿ ಇದನ್ನು ಮಾಡುತ್ತಿದ್ದಾರೆ ಎಂದು ‘ಸರ್ಕಾರಿ ತಜ್ಞ’ರು ವಿಶ್ಲೇಷಿಸುತ್ತಾರೆ. ಈ ಅಸಂಗತಗಳನ್ನು ಅರ್ಥ ಮಾಡಿಕೊಳ್ಳಲು ನಾವು ಮತ್ತೊಮ್ಮೆ ಇತಿಹಾಸವನ್ನೇ ಗಮನಿಸಬಹುದು. ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಹೋರಾಡುತ್ತಿದ್ದ ಸಣ್ಣ, ದೊಡ್ಡ ರಾಜರೆಲ್ಲಾ ತಮ್ಮ ತಮ್ಮ ಸಂಸ್ಥಾನಗಳನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದರು ಎಂದು ಆಗ ಅನೇಕರು ಭಾವಿಸಿದ್ದರು.

ಆಗ ಭಾರತವೆಂಬುದು ಕೇವಲ ಅಮೂರ್ತ ಪರಿಕಲ್ಪನೆಯಾಗಿತ್ತು. ಆದರೆ ಇಂದು ಅದನ್ನು ಗ್ರಹಿಸಲು ಸಾಧ್ಯವಿದೆ. ದತ್ತಾಂಶ ಅಥವಾ ಡೇಟಾ ಎಂಬುದು ವರ್ತಮಾನದ ತೈಲ ಎಂಬುದೂ ನಮಗೆ ಗೊತ್ತಿದೆ. ಆದರೆ ಅದನ್ನು ಗ್ರಹಿಸುವ ವಿಚಾರದಲ್ಲಿ ಮಾತ್ರ ಇತಿಹಾಸ ಮರುಕಳಿಸುತ್ತಿದೆ. ರಾಘವ್ ಬಹಾಲ್ ಅವರು ಹೇಳಿದ ಡಿಜಿಟಲ್ ವಸಾಹತೀಕಣ ಅಥವಾ ನಂದನ್ ನಿಲೇಕಣಿಯವರು ಹೇಳುವ ದತ್ತಾಂಶ ವಸಾಹತೀಕರಣಕ್ಕೆ ನಮ್ಮದೇ ಪ್ರಭುತ್ವ ಸಹಕರಿಸುತ್ತಿದೆ. ಇತಿಹಾಸ ಎರಡನೇ ಬಾರಿ ಮರುಕಳಿಸುವಾಗ ಅದು ನಗೆಪಾಟಲಿಗೀಡಾಗುವ ನಡವಳಿಕೆಯಾಗಿರುತ್ತದೆ ಎಂಬ ಮಾತು ನಿಜವಾಗುತ್ತಿದೆ.

ಬರಹ ಇಷ್ಟವಾಯಿತೆ?

 • 32

  Happy
 • 1

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !