ಮಂಗಳವಾರ, ಮೇ 18, 2021
29 °C

ಪ್ರವಾಹದೊಂದಿಗೆ ಬಂದ ಸುಳ್ಳು ಸುದ್ದಿಯ ಮಹಾಪೂರ

ಎನ್.ಎ.ಎಂ. ಇಸ್ಮಾಯಿಲ್ Updated:

ಅಕ್ಷರ ಗಾತ್ರ : | |

ದುರಂತದ ಕ್ಷಣಗಳು ಮನುಷ್ಯನಲ್ಲಿರುವ ಒಳಿತನ್ನೂ ಕೆಡುಕನ್ನೂ ಏಕಕಾಲದಲ್ಲಿ ಹೊರತರುತ್ತವೆ. ಇದಕ್ಕೆ ಇತ್ತೀಚಿನ ಸಾಕ್ಷಿ ಕೊಡಗು ಮತ್ತು ಕೇರಳದಲ್ಲಿ ಸಂಭವಿಸಿದ ಜಲಪ್ರಳಯ. ಸತತವಾಗಿ ಸುರಿದ ಮಳೆ ಕೇರಳದ ಬಹುತೇಕ ಜಿಲ್ಲೆಗಳನ್ನು ನೀರಿನಲ್ಲಿ ಮುಳುಗಿಸಿತಷ್ಟೇ ಅಲ್ಲದೆ ಗುಡ್ಡಗಳು ಕುಸಿದ ಪರಿಣಾಮವಾಗಿ ನದಿಯ ಹರಿವೇ ಬದಲಾಯಿತು. ಹೆಚ್ಚು ಕಡಿಮೆ ಇಂಥದ್ದೇ ಕರ್ನಾಟಕದ ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಸಂಭವಿಸಿತು. ಈ ಘಟನೆಗಳಿಗೆ ಸಾಮಾಜಿಕ ಮಾಧ್ಯಮಗಳು ಸ್ಪಂದಿಸಿದ ಬಗೆ ಬಹಳ ವಿಶಿಷ್ಟವಾಗಿತ್ತು. ಕರ್ನಾಟಕದ ಒಂದೊಂದು ಊರಿನಿಂದಲೂ ಕೊಡಗಿನ ಸಂತ್ರಸ್ತರಿಗೆ ನೆರವು ನೀಡುವುದಕ್ಕಾಗಿ ಜನರು ಧಾವಿಸಿದರು. ಬಟ್ಟೆ, ದವಸ, ಇತರ ಅಗತ್ಯವಸ್ತುಗಳೊಂದಿಗೆ ಹಲವೆಡೆಗಳಿಂದ ಹೊರಟವರು ತಮ್ಮ ಸಂಘಟಿಸಿಕೊಂಡದ್ದು ಸಾಮಾಜಿಕ ಮಾಧ್ಯಮಗಳ ಮೂಲಕ.

ಕೇರಳಕ್ಕೆ ನೆರವಿನ ಮಹಾಪೂರ ಹರಿದು ಬಂದದ್ದೂ ಹೀಗೆಯೇ. ವಿಶ್ವದ ಎಲ್ಲೆಡೆಗಳಿಂದಲೂ ಮನುಷ್ಯರು ಸ್ಪಂದಿಸಿದರು. ಫೇಸ್‌ಬುಕ್, ಟ್ವಿಟ್ಟರ್‌ಗಳ ಮೂಲಕವೇ ಮಾತನಾಡಿಕೊಂಡು ನೆರವಿಗಾಗಿ ತಾವೇನು ಮಾಡಬಹುದು ಎಂಬ ಯೋಜನೆ ರೂಪಿಸಿದರು. ಅದನ್ನು ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು ಹೊರುವುದಕ್ಕೂ ಹಲವರು ಮುಂದೆ ಬಂದರು. ಕೆಲಸಕ್ಕೆ ರಜೆ ಹಾಕಿ ಪರಿಹಾರಕ್ಕೆ ಅಗತ್ಯವಿರುವ ವಸ್ತುಗಳನ್ನು ಸಂಗ್ರಹಿಸಿಕೊಂಡು ಟ್ರಕ್ಕುಗಳನ್ನು ಹತ್ತಿದವರಿಗೆ ದಾರಿಯುದ್ದಕ್ಕೂ ನೆರವಾಗಿದ್ದೂ ಇವೇ ಸಾಮಾಜಿಕ ಜಾಲತಾಣಗಳು. ಯಾವ ರಸ್ತೆ ಕುಸಿದಿದೆ. ಯಾವ ಮಾರ್ಗದಲ್ಲಿ ವಾಹನಗಳು ಹೆಚ್ಚಿವೆ ಎಂಬಲ್ಲಿಯ ತನಕದ ಮಾಹಿತಿಗಳು ಈ ತಾಣಗಳಲ್ಲಿಯೇ ದೊರೆಯುತ್ತಿದ್ದವು.

ಸಂತ್ರಸ್ತರೂ ಅಷ್ಟೇ. ತಮ್ಮ ಮೊಬೈಲು ಫೋನುಗಳಲ್ಲಿ ಅಳಿದುಳಿದ ಬ್ಯಾಟರಿ ಬಳಸಿ ತಾವೆಲ್ಲಿ ಸಿಲುಕಿಕೊಂಡಿದ್ದೇವೆ ಎಂಬುದನ್ನು ತಿಳಿಸಿದರು. ಇದನ್ನು ವಿಶ್ವದ ಮತ್ತೆಲ್ಲೋ ಕುಳಿತು ನೋಡಿದವರು ಅದನ್ನು ಸಂಬಂಧ ಪಟ್ಟವರಿಗೆ ತಿಳಿಸಿ ಅವರನ್ನು ರಕ್ಷಿಸುವುದಕ್ಕೆ ಕಾರಣರಾದರು. ಎಲ್ಲೋ ಹೊಟ್ಟೆಪಾಡಿಗಾಗಿ ದುಡಿಯುತ್ತಿದ್ದವರು ತಮ್ಮ ಮನೆಯವರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಹೇಳಿದರೆ ಅವರನ್ನು ಭೇಟಿಯಾಗಿ ಬಂದು ಸುರಕ್ಷತತೆಯನ್ನು ಖಾತರಿಪಡಿಸಿದ ಘಟನೆಗಳೂ ಅನೇಕ.

ಇಷ್ಟೆಲ್ಲಾ ಸಕಾರಾತ್ಮಕವಾದ ವಿಚಾರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವಾಗಲೇ ಅತ್ಯಂತ ಹೇಯ ಎಂದು ಕರೆಯಬಹುದಾದ ಮನುಷ್ಯ ಗುಣವೂ ಇಲ್ಲಿಯೇ ಕಾಣಿಸಿಕೊಂಡಿತು. ಪ್ರವಾಹದ ನೀರಿನಂತೆ ಸಾಮಾಜಿಕ ಮಾಧ್ಯಮಗಳ ತುಂಬಾ ಸುಳ್ಳು ಸುದ್ದಿಗಳ ಮಹಾಪೂರವೂ ಉಂಟಾಯಿತು. ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳದ್ದೊಂದು ನಿತ್ಯದ ಹರಿವಿದೆ. ದುರಂತಗಳ ಸಂದರ್ಭದಲ್ಲಿ ಇದರಲ್ಲೂ ಮಹಾಪೂರ ಉಂಟಾಗುತ್ತದೆ. ಕೇರಳ ಮತ್ತು ಕರ್ನಾಟಕ ಅನುಭವಿಸಿದ ಪ್ರವಾಹದ ಸಂದರ್ಭದಲ್ಲಿಯೂ ಇದು ಸಂಭವಿಸಿತು.

ಪ್ರವಾಹದಲ್ಲಿ ಸಿಲುಕಿಕೊಂಡವರನ್ನು ರಕ್ಷಿಸಲು ಪ್ರಾಣದ ಹಂಗು ತೊರೆದು ಹೋರಾಟ ಮಾಡುವವರು ತಮ್ಮವರು ಎಂದು ಹೇಳಿಕೊಳ್ಳಲು ನಡೆದ ಮೇಲಾಟ ಹಾಸ್ಯಾಸ್ಪದವಾಗಿತ್ತು. ಅನೇಕ ಸಂಘಟನೆಗಳು ಈ ಚಟುವಟಿಕೆಯಲ್ಲಿ ತೊಡಗಿದ್ದವು. ಸಂತ್ರಸ್ತರನ್ನು ರಕ್ಷಿಸುವಾಗ ಇವರಾರೂ ನಿಮ್ಮ ಜಾತಿ ಯಾವುದು ಎಂದೋ ನಿಮ್ಮ ಧರ್ಮ ಯಾವುದು ಎಂದೋ ಕೇಳಿ ರಕ್ಷಿಸುತ್ತಿರಲಿಲ್ಲ. ಅವರಿಗೆ ಮಾಹಿತಿ ತಲುಪಿಸುವವರಿಗೂ ಈ ಕಾಳಜಿಗಳಿರಲಿಲ್ಲ. ಆದರೆ ಸುರಕ್ಷಿತ ಸ್ಥಳಗಳಲ್ಲಿ ಕುಳಿತು ಕಮೆಂಟಿಸುವವರಿಗೆ ಇವೆಲ್ಲವೂ ಕಾಣಿಸಿತು. ವಿಶ್ವದ ಅತಿದೊಡ್ಡ ಸ್ವಯಂಸೇವಾ ಸಂಸ್ಥೆ ಎಂದು ಹೇಳಿಕೊಳ್ಳುವ ಸಂಸ್ಥೆಯ ಸದಸ್ಯರು ತಮ್ಮ ಹೆಗ್ಗಳಿಕೆಯನ್ನು ತೋರಿಸಲು ಹಿಂದೆ ಮತ್ತೆಲ್ಲಿಯೋ ನಡೆಸಿದ ರಕ್ಷಣಾ ಕಾರ್ಯಾಚರಣೆಯನ್ನು ಚಿತ್ರವನ್ನು ಕೇರಳದಲ್ಲಿ ಈಗ ನಡೆಯುತ್ತಿರುವ ಚಟುವಟಿಕೆ ಎಂಬಂಥ ಚಿತ್ರಗಳನ್ನು ಹಂಚಿಕೊಂಡರು. ಸಂಸ್ಥೆಯ ಅಧಿಕೃತ ತಾಣಗಳಲ್ಲಿಯೇ ಇಂಥ ಸುಳ್ಳು ಚಿತ್ರಗಳು ಬಂದಾಗ ಏನಾಗಬಹುದೋ ಅದೆಲ್ಲವೂ ಸಂಭವಿಸಿತು. ಸಂಸ್ಥೆಯ ಅಧಿಕೃತರು ತಪ್ಪು ತಿದ್ದಿಕೊಂಡರು. ಆದರೆ ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಪರವಿರೋಧದ ಚರ್ಚೆ ದುರಂತದ ತೀವ್ರತೆಯನ್ನೂ ಮರೆಮಾಚುವಂತೆ ನಡೆಯಿತು.

ದುರಂತಕ್ಕೆ ಪ್ರತಿಕ್ರಿಯಿಸುವಾಗ ಮಾನವೀಯವಾಗಿದ್ದ ಅದೇ ಸಾಮಾಜಿಕ ಜಾಲತಾಣಗಳು ರಾಜಕೀಯ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಅಭಿವ್ಯಕ್ತಿಯಲ್ಲಿ ಮಾನವೀಯತೆ ಕಳೆದುಕೊಂಡಿತು. ಕೇರಳ ಜನರ ಆಹಾರ ಪದ್ಧತಿ. ಅಭಿವೃದ್ಧಿ ಸೂಚ್ಯಂಕದಲ್ಲಿ ಕೇರಳದ ಸ್ಥಾನಗಳೆಲ್ಲವೂ ಕುಟುಕುವುದಕ್ಕೆ ಬಳಕೆಯಾಯಿತು. ‘ಕೇರಳದಲ್ಲಿ ಸಂತ್ರಸ್ತರಾದವರೆಲ್ಲಾ ಉಳ್ಳವರು. ಅವರಿಗೆ ಆಹಾರ ಪದಾರ್ಥಗಳೆಲ್ಲಾ ಬೇಕಿಲ್ಲ. ದೇಣಿಗೆ ಕೊಡುವುದಾದರೆ ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೊಡಬೇಡಿ’ ಎಂಬ ವಾದವೂ ಒಬ್ಬಾತನಿಂದ ಸೃಷ್ಟಿಯಾಗಿ ಅದೂ ಸಾವಿರ ಸಂಖ್ಯೆಯಲ್ಲಿ ಹಂಚಿಕೆಯಾಯಿತು. ದುರಂತದ ಆರಂಭದ ದಿನಗಳಲ್ಲಿ ಮಾನವೀಯವಾಗಿ ಸ್ಪಂದಿಸುತ್ತಿದ್ದವರೆಲ್ಲರೂ ಎಡ-ಬಲವೆಂದು ವಿಭಜಿಸಿ ಹೋಗಿಬಿಟ್ಟರೇ ಎಂಬ ಸಂಶಯ ಬರುವಂತಾಯಿತು. ಈ ಎಲ್ಲಾ ಗೊಂದಲಗಳ ಮಧ್ಯೆಯೂ ಮುಖ್ಯವಾಹಿನಿಯ ಮಾಧ್ಯಮಗಳು ತಮ್ಮ ಎಲ್ಲಾ ಮಿತಿಗಳ ಮಧ್ಯೆಯೂ ವಾಸ್ತವವನ್ನು ತಲುಪಿಸುವುದಕ್ಕೆ ಪ್ರಯತ್ನಿಸಿದವು. ಒಂದು ದೊಡ್ಡ ವಿರಾಮದ ನಂತರ ಸುದ್ದಿಯಿಂದ ಸುಳ್ಳನ್ನು ದೂರವಿಡುವ ದ್ವಾರಪಾಲಕರಂತೆ ಕೆಲಸ ಮಾಡಿದವು.

ಪ್ರಜಾಪ್ರಭುತ್ವವನ್ನು ಕಾಯುವ ದೊಡ್ಡ ಜವಾಬ್ದಾರಿ ಮಾಧ್ಯಮಗಳಿಗಿದೆ. ಇದೇ ಕಾರಣಕ್ಕಾಗಿ ಅವುಗಳನ್ನು ಪ್ರಜಾಪ್ರಭುತ್ವದ ಕಾವಲು ನಾಯಿ ಎಂದೂ ಕರೆಯಲಾಗುತ್ತದೆ. ಇವು ತನ್ನ ಎಲ್ಲಾ ಮಿತಿಗಳ ಮಧ್ಯೆಯೂ ಸುಳ್ಳು-ಸುದ್ದಿಯನ್ನು ಬಹುಮಟ್ಟಿಗೆ ತಡೆ ಹಿಡಿದಿದ್ದವು. ಇಂಟರ್ನೆಟ್ ತೆರೆದಿಟ್ಟ ಸಾಮಾಜಿಕ ಮಾಧ್ಯಮದ ಸಾಧ್ಯತೆ ಅಭಿವ್ಯಕ್ತಿಯ ಸಾಧ್ಯತೆಗಳನ್ನು ವಿಸ್ತರಿಸಿತು. ಅದೇ ವೇಳೆ ಬೇಜವಾಬ್ದಾರಿ ಅಭಿವ್ಯಕ್ತಿಯ ಸಮಸ್ಯೆಯನ್ನೂ ಸೃಷ್ಟಿಸಿತು. ಈ ಸಮಸ್ಯೆಯನ್ನೇ ತನ್ನ ಯಶಸ್ಸಿನ ಸಾಧನವನ್ನಾಗಿ ಮಾಡಿಕೊಂಡದ್ದು ಬಲಪಂಥೀಯ ರಾಜಕಾರಣ. ಇದು ವಿಶ್ವವ್ಯಾಪಿಯಾಗಿ ಕಂಡುಬಂದ ವಿದ್ಯಮಾನ. ಈ ತಂತ್ರದ ಮೊದಲ ಹಂತ ಕಾರ್ಯರೂಪಕ್ಕೆ ಬರುತ್ತಿದ್ದಾಗ ಮುಖ್ಯವಾಹಿನಿಯ ಮಾಧ್ಯಮಗಳು ಮೌನವಾಗಿದ್ದವು. ಭಾರತದಲ್ಲಿ ಇಂಟರ್ನೆಟ್ ವ್ಯಾಪಕವಾಗಲು ತೊಡಗಿದ ಹಂತದಿಂದಲೂ ಈ ಪ್ರಕ್ರಿಯೆ ಆರಂಭವಾಗಿತ್ತು. ಸಂಪೂರ್ಣ ಅವಾಸ್ತವ ಸಂಗತಿಗಳನ್ನು ಪ್ರಚಾರ ಮಾಡುವ ಕ್ರಿಯೆ ಇದು. ಗಾಂಧೀಜಿ ಮತ್ತು ನೆಹರು ಇದರ ಮೊದಲ ಬಲಿಪಶು. ಇ-ಮೇಲ್ ಫಾರ್ವರ್ಡ್‌ಗಳಲ್ಲಿ ಮತ್ತು ತೀವ್ರಬಲಪಂಥೀಯ ವಿಚಾರಧಾರೆಯ ವೆಬ್‌ಸೈಟುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಸಂಗತಿಗಳನ್ನು ಮೊದಲಿಗೆ ನಿರ್ಲಕ್ಷ್ಯ ಮಾಡಿದವರೇ ಹೆಚ್ಚು. 2008ರಿಂದ ಈಚೆಗೆ ಇದೊಂದು ರಾಜಕೀಯ ತಂತ್ರವಾಗಿ ಬದಲಾಯಿತು.

ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುವುದೇ ಸುಳ್ಳು ಸುದ್ದಿ ಎಂಬ ಪ್ರಚಾರ ಆರಂಭವಾಗುವುದು ಈ ಹಂತದಲ್ಲಿ. ಪ್ರತಿಯೊಂದನ್ನೂ ‘ಪರ್ಯಾಯ ಸತ್ಯ’ಗಳ ಮೂಲಕ ಎದುರಾಗುವ ಈ ಪ್ರಕ್ರಿಯೆ ಮುಂದಿನ ಹಂತದಲ್ಲಿ ಸಂಪೂರ್ಣ ಸುಳ್ಳನ್ನೇ ಪ್ರಚಾರ ಮಾಡತೊಡಗಿತು. ಸುಳ್ಳು ಅಂಕಿ-ಅಂಶಗಳು, ಎಲ್ಲೋ ನಡೆದ ಘಟನೆಯನ್ನು ನಮ್ಮೂರಿನಲ್ಲೇ ನಡೆದಿದೆ ಎಂಬು ಬಿಂಬಿಸುವುದು ಎಲ್ಲವುಗಳ ಕಳೆದ ಹತ್ತು ವರ್ಷಗಳಲ್ಲಿ ನಿರಂತರವಾಗಿ ನಡೆಯುತ್ತಲೇ ಬಂದಿದೆ. ಒಂದೆರಡು ವರ್ಷಗಳಿಂದ ಈ ಸುಳ್ಳು ಸುದ್ದಿಗಳನ್ನು ಬಯಲು ಮಾಡುವುದಕ್ಕಾಗಿಯೂ ಮುಖ್ಯವಾಹಿನಿಯ ಮಾಧ್ಯಮಗಳು ಒಂದಷ್ಟು ಸಮಯ ಮತ್ತು ಸ್ಥಳವನ್ನು ಮೀಸಲಿಡಬೇಕಾದ ಸ್ಥಿತಿ ಬಂದಿದೆ.

ಅಮೆರಿಕದ ಡೊನಾಲ್ಡ್ ಟ್ರಂಪ್ ಮಟ್ಟಿಗೆ ನ್ಯೂಯಾರ್ಕ್ ಟೈಮ್ಸ್ ಮತ್ತು ವಾಷಿಂಗ್ಟನ್ ಪೋಸ್ಟ್‌ಗಳಂಥ ಪತ್ರಿಕೆಗಳಲ್ಲಿ ಪ್ರಕಟವಾಗುವುದೆಲ್ಲಾ ಸುಳ್ಳು ಸುದ್ದಿ. ಭಾರತದಲ್ಲೂ ಅಷ್ಟೇ ಪ್ರಧಾನಿ ಮೋದಿಯವರ ಅಭಿಮಾನಿಗಳಿಗೆ ತಮ್ಮ ‘ಪರ್ಯಾಯ ಸತ್ಯ’ಗಳನ್ನು ಅರ್ಥಾತ್ ಸುಳ್ಳುಗಳನ್ನು ಪ್ರಶ್ನಿಸುವವರು ಹೇಳುವುದೆಲ್ಲಾ ಸುಳ್ಳು. ಇದನ್ನು ಹರಡುವುದಕ್ಕೆ ಅವರಿಗೆ ದೊರೆಯುವ ದೊಡ್ಡ ವೇದಿಕೆ ಸಾಮಾಜಿಕ ಮಾಧ್ಯಮಗಳು. ನಾವಿದನ್ನು ‘ಸಾಮಾಜಿಕ ಮಾಧ್ಯಮ’ ಎಂದು ಕರೆಯುತ್ತಿದ್ದರೂ ಈ ಸಂಸ್ಥೆಗಳ್ಯಾವೂ ತಮ್ಮನ್ನು ಮಾಧ್ಯಮ ಎಂದು ಕರೆದುಕೊಳ್ಳುವುದಿಲ್ಲ. ಅವೆಲ್ಲವೂ ತಂತ್ರಜ್ಞಾನ ಕಂಪೆನಿಗಳು. ಮಾಧ್ಯಮಗಳಿಗೆ ಅನ್ವಯಿಸುವ ಯಾವ ಕಾನೂನುಗಳೂ ಅವರಿಗೆ ಅನ್ವಯಿಸುವುದಿಲ್ಲ. ಅಲ್ಲಿ ಪ್ರಕಟವಾಗುವ ಸಂಗತಿಗಳಿಗೆ ಅವು ಜವಾಬ್ದಾರಿಯನ್ನೂ ಹೊತ್ತುಕೊಳ್ಳುವುದಿಲ್ಲ. ಈ ಎಲ್ಲವುಗಳ ಪರಿಣಾಮ ಸುಳ್ಳು ಸುದ್ದಿಗಳ ಮಹಾಪೂರಕ್ಕೆ ಕಾರಣವಾಗಿವೆ.

ಕೇರಳ ಮತ್ತು ಕೊಡಗಿನ ನೆರೆಯ ಸಂದರ್ಭದಲ್ಲಿ ಬಂದ ಸುಳ್ಳು-ಸುದ್ದಿಗಳ ಮಹಾಪೂರಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿಯೇ ಉತ್ತರಗಳೂ ಬಂದವು. ಆದರೆ ಸುಳ್ಳು ಹರಡುವ ವೇಗದಲ್ಲಿ ಅದನ್ನು ಸುಳ್ಳೆಂದು ಸಾಬೀತು ಸಂಗತಿಗಳು ಹರಡುವುದಿಲ್ಲ. ಇದನ್ನು ನಿರ್ವಹಿಸುವುದಕ್ಕೆ ಒಂದು ಮಟ್ಟಿಗಿನ ಆಡಳಿತಾತ್ಮಕ ಮಧ್ಯಪ್ರವೇಶದ ಅಗತ್ಯವಿದೆ. ಸುಳ್ಳು-ಸುದ್ದಿಯ ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಶ್ನೆ ಇರುವುದಿಲ್ಲ. ಇಲ್ಲಿರುವುದು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ. ಇದಕ್ಕೆ ಬೇಕಿರುವುದು ತಂತ್ರಜ್ಞಾನದ ಪರಿಹಾರಗಳಲ್ಲ. ಇದಕ್ಕೆ ಬೇಕಿರುವುದು ಆಡಳಿತಾತ್ಮಕ ಪರಿಹಾರ. ದುರದೃಷ್ಟವಶಾತ್ ಇದನ್ನು ಯಾವ ಸರ್ಕಾರವೂ ಅರ್ಥ ಮಾಡಿಕೊಳ್ಳುತ್ತಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು