ಮಂಗಳವಾರ, ಮೇ 18, 2021
23 °C

ಮಾಹಿತಿಯ ಮಾರುಕಟ್ಟೆಯಲ್ಲಿ ಸರ್ಕಾರವೂ ವ್ಯಾಪಾರಿ

ಎನ್. ಎ. ಎಂ. ಇಸ್ಮಾಯಿಲ್ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ಖಾಸಗಿತನ ಎಂಬುದು ವ್ಯಕ್ತಿ ಬದುಕಿನ ಹಕ್ಕಿನ ಜೊತೆಗೇ ಹೆಣೆದುಕೊಂಡಿರುವ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ಸ್ಪಷ್ಟ ಮಾತುಗಳಲ್ಲಿ ಹೇಳಿ ಒಂದು ವರ್ಷ ಕಳೆಯಿತು. ಈ ಅವಧಿಯಲ್ಲಿ ಸರ್ಕಾರಗಳು ಈ ‘ಮೂಲಭೂತ ಹಕ್ಕ’ನ್ನು ಖಾತರಿ ಪಡಿಸುವ ನಿಟ್ಟಿನಲ್ಲಿ ಇಟ್ಟ ಒಂದೇ ಒಂದು ಸಕಾರಾತ್ಮಕ ಹೆಜ್ಜೆ ಎಂದರೆ ನ್ಯಾಯಮೂರ್ತಿ ಬಿ.ಎನ್.ಕೃಷ್ಣ ಸಮಿತಿಯನ್ನು ನೇಮಿಸಿ ದತ್ತಾಂಶ ಸುರಕ್ಷತೆ ಕುರಿತಂತೆ ಒಂದು ವಿವರವಾದ ವರದಿಯನ್ನು ಪಡೆದುಕೊಂಡದ್ದು. ಜೊತೆಗೆ ಖಾಸಗಿ ಮಾಹಿತಿಯ ಸಂರಕ್ಷಣೆಗೆ ಸಂಬಂಧಿಸಿದಂತೆ ಒಂದು ಕರಡು ಮಸೂದೆಯನ್ನು ರೂಪಿಸಿದ್ದು. ಇವೆರಡು ಸಣ್ಣ ಕೆಲಸಗಳೇನೂ ಅಲ್ಲ. ವ್ಯಕ್ತಿಗೆ ಖಾಸಗಿತನದ ಹಕ್ಕೇ ಇಲ್ಲ ಎಂದು ನ್ಯಾಯಾಲಯದಲ್ಲಿ ವಾದಿಸಿದ ಸರ್ಕಾರ ಇಷ್ಟನ್ನು ಮಾಡಿದ್ದು ನಿಜಕ್ಕೂ ದೊಡ್ಡ ವಿಚಾರವೇ.

ಆದರೆ ಈ ಅವಧಿಯಲ್ಲಿ ‘ಸರ್ವೇಲೆನ್ಸ್ ಸ್ಟೇಟ್’ ಎಂದು ಗುರುತಿಸಲಾಗುವ ಜನಸಾಮಾನ್ಯರ ಪ್ರತಿಯೊಂದು ಚಟುವಟಿಕೆಯ ಮೇಲೂ ಕಣ್ಗಾವಲಿಡುವ ಹಲವು ಕೆಲಸಗಳಲ್ಲಿ ಸರ್ಕಾರ ತೊಡಗಿಕೊಂಡದ್ದೂ ನಿಜವೇ. ಸಾಮಾಜಿಕ ಮಾಧ್ಯಮಗಳ ಮೇಲೆ ನಿರಂತರ ನಿಗಾ ಇಟ್ಟು ‘ರಾಷ್ಟ್ರೀಯತೆಯನ್ನು ಉದ್ದೀಪಿಸುವ’ ಮತ್ತು ‘ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುವ’ ಕೆಲಸ ಮಾಡುವುದಕ್ಕಾಗಿ ಒಂದು ಸಾಮಾಜಿಕ ಮಾಧ್ಯಮ ಹಬ್ ರೂಪಿಸುವ ಕೆಲಸಕ್ಕೆ ಕೈ ಹಾಕಿದ್ದು ಇದರಲ್ಲಿ ಒಂದು. ಇದನ್ನು ತಡೆಯುವುದಕ್ಕೂ ನ್ಯಾಯಾಲಯ ಮಧ್ಯ ಪ್ರವೇಶಿಸಬೇಕಾಯಿತು. ಆದರೆ ಸರ್ಕಾರ ಈ ಪ್ರಯತ್ನವನ್ನು ನಿಲ್ಲಿಸಲಿಲ್ಲ ಎಂಬುದು ಇತ್ತೀಚೆಗೆ ಬಯಲಾಯಿತು.

‘ಆಧಾರ್’ ಅಥವಾ ವಿಶಿಷ್ಟ ಗುರುತು ಸಂಖ್ಯೆ ಯೋಜನೆಯನ್ನು ನಿರ್ವಹಿಸುತ್ತಿರುವ ವಿಶಿಷ್ಟ ಗುರುತು ಸಂಖ್ಯೆ ಪ್ರಾಧಿಕಾರ (ಯುಐಡಿಎಐ) ಕೂಡಾ ಸಾಮಾಜಿಕ ಮಾಧ್ಯಮಗಳ ಮೇಲೆ ನಿಗಾ ಇಡುವುದಕ್ಕಾಗಿ ಒಂದು ವ್ಯವಸ್ಥೆ ರೂಪಿಸಲು ಹೊರಟಿತ್ತು. ಆಧಾರ್ ಯೋಜನೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ ಚರ್ಚೆ ಯಾವ ದಿಕ್ಕಿನಲ್ಲಿದೆ ಎಂದು ಅರಿತು ಪ್ರತಿಕ್ರಿಯಿಸಲು ಈ ವ್ಯವಸ್ಥೆ ಎಂದು ಯುಐಡಿಎಐ ಹೇಳಿಕೊಂಡಿತ್ತು. ಈ ವಿಚಾರಕ್ಕೂ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ಯುಐಡಿಎಐಗೆ ಛೀಮಾರಿ ಹಾಕಿದೆ.

ಈ ಹಿಂದೆ ಕೇಂದ್ರ ಸರ್ಕಾರ ರೂಪಿಸಲು ಹೊರಟಿದ್ದ ಸಾಮಾಜಿಕ ಮಾಧ್ಯಮ ಹಬ್ ಅಥವಾ ಯುಐಡಿಎಐ ರೂಪಿಸಲು ಹೊರಟಿದ್ದ ನಿಗಾ ವ್ಯವಸ್ಥೆಗಳ ಉದ್ದೇಶ ಒಂದೇ. ಕೇಂಬ್ರಿಜ್ ಅನಲಿಟಿಕಾ ಅಮೆರಿಕ ಅಧ್ಯಕ್ಷೀಯ ಚುನಾವಣೆ ಮತ್ತು ಬ್ರೆಕ್ಸಿಟ್‌ನ ಸಂದರ್ಭದಲ್ಲಿ ಬಳಸಿದ ತಂತ್ರಕ್ಕಿಂತ ಇದು ಭಿನ್ನವೇನೂ ಅಲ್ಲ. ಅಮೆರಿಕದ ಚುನಾವಣೆ ಮತ್ತು ಬ್ರೆಕ್ಸಿಟ್‌ನ ಸಂದರ್ಭದಲ್ಲಿ ಇದನ್ನು ಬಳಸಿದ್ದು ರಾಜಕೀಯ ಪಕ್ಷಗಳು. ಭಾರತದ ಸಂದರ್ಭದಲ್ಲಿ ಸರ್ಕಾರವೇ ಅಧಿಕೃತವಾಗಿ ಈ ತಂತ್ರವನ್ನು ಬಳಸಲು ಹೊರಟಿತ್ತು ಎಂಬುದಷ್ಟೇ ವ್ಯತ್ಯಾಸ.

ಒಂದೆಡೆ ಖಾಸಗಿತನದ ರಕ್ಷಣೆಗೆ ಬೇಕಿರುವ ಕಾಯ್ದೆಯ ಕರಡನ್ನು ರೂಪಿಸುತ್ತಲೇ ಮತ್ತೊಂದೆಡೆ ‘ಸಂಪೂರ್ಣ ನಿಗಾವಣೆ’ಯ ವ್ಯವಸ್ಥೆಯೊಂದನ್ನು ರೂಪಿಸುವುದಕ್ಕೆ ಹೊರಡುವ ಕ್ರಿಯೆ ವಿರೋಧಾಭಾಸದಂತೆ ಕಾಣಿಸುತ್ತದೆ. ಆದರೆ ಪ್ರಭುತ್ವದ ಆಲೋಚನಾ ವಿಧಾನವನ್ನು ಅರಿತರೆ ಇದರಲ್ಲಿ ವಿರೋಧಾಭಾಸವೇನೂ ಇಲ್ಲ ಎಂಬುದು ಅರಿವಾಗುತ್ತದೆ. ಇದು ಪ್ರಭುತ್ವ ಆಲೋಚಿಸುವ ರೀತಿ. ಪ್ರಜೆ ತನಗಿಂತ ಹೆಚ್ಚು ಪ್ರಬಲನಾಗಿಬಿಡಬಹುದೇ ಎಂಬ ಭಯ ಅದನ್ನು ಈ ಬಗೆಯ ಚಟುವಟಿಕೆಗಳಿಗೆ ಪ್ರೇರೇಪಿಸುತ್ತದೆ.

ಆಧಾರ್ ಯೋಜನೆಯ ವಿಚಾರವನ್ನೇ ಸೂಕ್ಷ್ಮವಾಗಿ ಗಮನಿಸಿದರೆ ಇದು ಅರ್ಥವಾಗುತ್ತದೆ. ಇದನ್ನು ಜಾರಿಗೊಳಿಸಿದ್ದು ಯುಪಿಎ ಸರ್ಕಾರ. ಆಗ ವಿರೋಧ ಪಕ್ಷದಲ್ಲಿ ಎನ್‌ಡಿಎ ಇದನ್ನು ಖಂಡತುಂಡವಾಗಿ ವಿರೋಧಿಸಿತ್ತು. ಖಾಸಗಿತನಕ್ಕೆ ಒದಗುವ ಅಪಾಯದ ಬಗ್ಗೆ ಹೇಳುತ್ತಿತ್ತು. ‘ಸಂಪೂರ್ಣ ನಿಗಾವಣೆ’ಯ ಪ್ರಭುತ್ವ ಸ್ಥಾಪನೆಯಾಗುವ ಭಯವನ್ನು ವ್ಯಕ್ತಪಡಿಸಿತ್ತು. ಆದರೆ ಎನ್‌ಡಿಎ ಅಧಿಕಾರಕ್ಕೆ ಬಂದ ನಂತರ ಆಧಾರ್ ಯೋಜನೆಯನ್ನು ಇನ್ನಿಲ್ಲದಂತೆ ಬೆಂಬಲಿಸಲು ಆರಂಭಿಸಿತು. ಆಧಾರ್ ಯೋಜನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಚರ್ಚೆಗಳನ್ನು ಗಮನಿಸಿ ಅದಕ್ಕೆ ಪ್ರತಿಕ್ರಿಯಿಸುವ ಮತ್ತು ಆಧಾರ್ ಪರವಾದ ಅಭಿಪ್ರಾಯ ರೂಪಿಸುವುದಕ್ಕಾಗಿ ಒಂದು ವ್ಯವಸ್ಥೆ ಬೇಕು ಎಂಬ ಆಲೋಚನೆ ಬಂದದ್ದು ಒಂದು ಕಾಲದಲ್ಲಿ ಆಧಾರ್ ವಿರೋಧಿಸಿದವರಿಗೆ. ಹಿಂದೆ ಎನ್‌ಡಿಎ ಬಳಸಿದ್ದ ಎಲ್ಲಾ ಮಾತುಗಳನ್ನೂ ಈಗ ಕಾಂಗ್ರೆಸ್ ಬಳಸುತ್ತಿದೆ. ಸುಪ್ರೀಂ ಕೋರ್ಟ್‌ನಲ್ಲಿ ಈ ಸಂಬಂಧ ದಾಖಲಾಗಿರುವ ಮೊಕದ್ದಮೆಯಲ್ಲಿ ವಾದಿಸುತ್ತಿರುವವರೂ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದ ವಕೀಲರೇ.

ಯುಪಿಎ ಆಡಳಿತದ ಅವಧಿಯಲ್ಲಿ ಚಾರಿತ್ರಿಕ ಎಂದು ಕರೆಯಬಹುದಾದ ಮಸೂದೆಯೊಂದನ್ನು ಅಂಗೀಕರಿಸುವ ಮೂಲಕ ಭಾರತ ಪೌರರಿಗೆ ಮಾಹಿತಿ ಹಕ್ಕನ್ನು ನೀಡಿತು. ಇದರ ಹಿಂದೆಯೇ ಆಧಾರ್‌ನಂಥ ಯೋಜನೆಯನ್ನು ರೂಪಿಸಿ ಆ ಗುರುತನ್ನು ವ್ಯಕ್ತಿಯ ಆದಾಯ ತೆರಿಗೆ ಖಾತೆಯಿಂದ ತೊಡಗಿ ಪ್ರತಿಯೊಂದು ವ್ಯವಹಾರಕ್ಕೂ ತಳುಕು ಹಾಕುವ ವ್ಯವಸ್ಥೆಯನ್ನೂ ಜಾರಿಗೆ ತರಲು ಮುಂದಾಯಿತು. ಅಂದರೆ ಒಂದೆಡೆ ಸರ್ಕಾರವನ್ನು ಪಾರದರ್ಶಕಗೊಳಿಸುವ ಪ್ರಯತ್ನ ನಡೆಸುತ್ತಿರುವಂತೆ ತೋರಿಸಿಕೊಳ್ಳುತ್ತಲೇ ಜನರ ವೈಯಕ್ತಿಕ ಮಾಹಿತಿಗೆ ಕೈಹಾಕುವ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವುದು.

ಈಗ ಎನ್‌ಡಿಎ ಸರ್ಕಾರ ಮಾಡುತ್ತಿರುವುದು ಇದಕ್ಕಿಂತ ಭಿನ್ನವಾದುದೇನೂ ಅಲ್ಲ. ದತ್ತಾಂಶ ಸಂರಕ್ಷಣೆಗೆ ಸಂಬಂಧಿಸಿದ ಕಾನೂನು ರೂಪಿಸುವ ಕೆಲಸ ಈಗಷ್ಟೇ ಚಾಲನೆಯಾಗಿದೆ. ಆದರೆ ಪ್ರಜೆಗಳ ವೈಯಕ್ತಿಕ ವಿವರಗಳನ್ನು ಸಂಗ್ರಹಿಸುವ ಕೆಲಸ ಬಹುತೇಕ ಮಟ್ಟಿಗೆ ಮುಗಿದಿದೆ. ಆಧಾರ್‌ನ ಸಾಂವಿಧಾನಿಕ ಮಾನ್ಯತೆಯ ಕುರಿತ ಮೊಕದ್ದಮೆಯೊಂದು ಸುಪ್ರೀಂ ಕೋರ್ಟ್‌ನಲ್ಲಿ ಇರುವಾಗಲೇ ಮೊಬೈಲ್ ಫೋನುಗಳು, ಬ್ಯಾಂಕ್ ಖಾತೆ ಇತ್ಯಾದಿಗಳಿಗೆ ಹಿಂಬಾಗಿಲಿನಿಂದ ಆಧಾರ್ ಸಂಖ್ಯೆಯನ್ನು ಕಡ್ಡಾಯಗೊಳಿಸಲಾಗಿದೆ. ಎಷ್ಟರ ಮಟ್ಟಿಗೆ ಎಂದರೆ ಸುಪ್ರೀಂ ಕೋರ್ಟ್‌ ಈ ಮೊಕದ್ದಮೆಯ ವಿಚಾರಣೆಯ ಸಂದರ್ಭದಲ್ಲಿ ನೀಡಿದ ತಾತ್ಕಾಲಿಕ ಆದೇಶವೊಂದನ್ನು ತಪ್ಪಾಗಿ ವ್ಯಾಖ್ಯಾನಿಸಿ ಈ ಮಾಹಿತಿಯನ್ನು ಸಂಗ್ರಹಿಸಲು ಸರ್ಕಾರ ಮುಂದಾಯಿತು.

ಹಿಂದಿನ ಯುಪಿಎ ಸರ್ಕಾರವಾಗಲಿ ಈಗಿನ ಎನ್‌ಡಿಎ ಸರ್ಕಾರವಾಗಲಿ ಸಕಲ ಸೇವೆಗಳಿಗೆ ಆಧಾರ್ ಅನ್ನು ಕಡ್ಡಾಯಗೊಳಿಸುವುದಕ್ಕೆ ಇಷ್ಟೊಂದು ಆತುರ ತೋರುತ್ತಿರುವುದೇಕೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ. ಇದರ ಜೊತೆ ಜೊತೆಗೇ ಇನ್ನಷ್ಟು ಇಂಥದ್ದೇ ಯೋಜನೆಗಳು ಬರುತ್ತಿವೆ. ವಿಮಾನ ನಿಲ್ದಾಣಗಳ ಚೆಕ್-ಇನ್‌ಗಾಗಿ ಛಾಯಾಚಿತ್ರಗಳ ದತ್ತಸಂಚಯವೊಂದನ್ನು ರೂಪಿಸುವುದೂ ಇಂಥದ್ದೇ ಒಂದು ಯೋಜನೆ. ದತ್ತಾಂಶ ಸಂರಕ್ಷಣೆಗೆ ಸಂಬಂಧಿಸಿದ ಕಾನೂನೊಂದು ಇನ್ನೂ ರೂಪುಗೊಳ್ಳದಿರುವ ಸಂದರ್ಭದಲ್ಲಿ ಇವುಗಳನ್ನು ಆತುರಾತುರವಾಗಿ ಏಕೆ ಜಾರಿಗೆ ತರಲಾಗುತ್ತಿದೆ?

‘ಆಯುಷ್ಮಾನ್‌ ಭಾರತ್’ ಯೋಜನೆಯಲ್ಲೂ ಇಂಥದ್ದೇ ಅಂಶಗಳಿವೆ. ಎಲ್ಲಾ ರೋಗಿಗಳ, ಚಿಕಿತ್ಸೆಯ, ಔಷಧೋಪಚಾರದ ದತ್ತಸಂಚಯವನ್ನು ರೂಪಿಸುವುದು. ಮೇಲ್ನೋಟಕ್ಕೆ ಈ ಯೋಜನೆಗಳೆಲ್ಲವೂ ನಿರುಪದ್ರವಿಗಳಂತೆ, ಜನರಿಗೆ ಉಪಯೋಗ ಕಲ್ಪಿಸಲು ಮಾಡುತ್ತಿರುವಂತೆ ಕಾಣಿಸುತ್ತವೆ. ಈ ಬಗೆಯ ದತ್ತಸಂಚಯದಲ್ಲಿರುವ ಮಾಹಿತಿಯ ದುರುಪಯೋಗವಾಗದಂತೆ ತಡೆಯಲು ಒಂದು ಕಾಯ್ದೆಯೂ ಇಲ್ಲದ ಸಂದರ್ಭದಲ್ಲಿ ಇದನ್ನು ಜಾರಿಗೆ ತರಲು ಹೊರಟ ಆತುರ ಮಾತ್ರ ಸಂಶಯಕ್ಕೆ ಎಡೆ ಮಾಡುತ್ತದೆ.

ಒಂದು ಕಾಯ್ದೆ ಬಂದು ಮಾಹಿತಿಯನ್ನು ಯಾಕೆ, ಹೇಗೆ ಮತ್ತು ಎಲ್ಲೆಲ್ಲಿ ಬಳಸಬಹುದು ಎಂಬುದನ್ನು ವ್ಯಾಖ್ಯಾನಿಸುವ ಮುನ್ನ ಮಾಹಿತಿ ಸಂಗ್ರಹಿಸಬೇಕು ಎಂಬ ಆತುರವನ್ನು ಹೊರತು ಪಡಿಸಿದರೆ ಇಲ್ಲಿ ಬೇರೇನೂ ಕಾಣಿಸುವುದಿಲ್ಲ. ಆರೋಗ್ಯವಿಮೆಯನ್ನು ನೀಡುವ ಕಂಪೆನಿಗಳು ಈ ಬಗೆಯ ದತ್ತಸಂಚಯಕ್ಕಾಗಿ ಹಾತೊರೆಯುತ್ತಿರುವುದು ನಿಜ. ಏಕೆಂದರೆ ವ್ಯಕ್ತಿಯ ಆರೋಗ್ಯದ ಇತಿಹಾಸ ಒಂದೆಡೆ ಸಿಕ್ಕರೆ ಅವನು ಪಾವತಿಸಬೇಕಾದ ಪ್ರೀಮಿಯಂ ನಿರ್ಧರಿಸುವುದು ಅವುಗಳಿಗೆ ಸುಲಭ. ಆದರೆ ಇದರಿಂದ ಬಳಕೆದಾರನಿಗೆ ಪ್ರಯೋಜನಕ್ಕಿಂತ ನಷ್ಟವೇ ಹೆಚ್ಚು.

ಸರ್ಕಾರ ಸಂಗ್ರಹಿಸುವ ವೈಯಕ್ತಿಕ ಮಾಹಿತಿಯ ವಿಚಾರವನ್ನು ಬದಿಗಿಟ್ಟು ಆಲೋಚಿಸಿದರೂ ಭಯಪಡುವುದಕ್ಕೆ ಹಲವು ಕಾರಣಗಳಿವೆ. ಫೇಸ್‌ಬುಕ್, ಅಮೆಝಾನ್, ಮೈಕ್ರೋಸಾಫ್ಟ್, ಗೂಗಲ್‌ನಂಥ ಸಂಸ್ಥೆಗಳ ಬಳಿ ಇರುವ ಜನರ ವೈಯಕ್ತಿಕ ಮಾಹಿತಿ ಬೃಹತ್ತಾದುದು. ಈ ಎಲ್ಲಾ ಕಂಪೆನಿಗಳು ಬಹಳ ಸ್ಪಷ್ಟವಾಗಿಯೇ ಈ ಮಾಹಿತಿಯನ್ನು ನಾವು ವ್ಯಾಪಾರಿ ಉದ್ದೇಶಕ್ಕಾಗಿ ಬಳಸಿಕೊಳ್ಳತ್ತೇವೆ ಎಂದೂ ಹೇಳಿಕೊಳ್ಳುತ್ತವೆ. ಇವುಗಳನ್ನು ನಿಯಂತ್ರಿಸುವುದಕ್ಕಾಗಿಯಾದರೂ ಒಂದು ಪ್ರಬಲ ಖಾಸಗಿ ಮಾಹಿತಿ ಸಂರಕ್ಷಣೆಯ ಕಾಯ್ದೆ ಬೇಕಾಗಿದೆ. ಆದರೆ ಜನರ ಮೇಲೆ ನಿಗಾ ಇರಿಸುವುದಕ್ಕೆ ಈ ವ್ಯಾಪಾರಿಗಳಷ್ಟೇ ಹಾತೊರೆಯುತ್ತಿರುವ ಸರ್ಕಾರಗಳಿಗೆ ಈ ತುರ್ತನ್ನು ಅರ್ಥಮಾಡಿಸುವುದಾದರೂ ಹೇಗೆ?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು