ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು ಸಾಕ್ಷರತೆ: ಮ್ಯೂಚುವಲ್ ಫಂಡ್‌ಗಳಲ್ಲಿ ವೈವಿಧ್ಯ ಹೀಗಿರಲಿ...

Last Updated 11 ಜುಲೈ 2021, 19:30 IST
ಅಕ್ಷರ ಗಾತ್ರ

‘ಎಲ್ಲಾ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ಇಡಬೇಡಿ’ ಎನ್ನುವುದು ಖ್ಯಾತ ಹೂಡಿಕೆದಾರ ವಾರನ್ ಬಫೆಟ್ ಅವರ ಸಲಹೆ. ಹೂಡಿಕೆಯಲ್ಲಿ ವೈವಿಧ್ಯ ಕಾಯ್ದುಕೊಳ್ಳುವುದು ಬಹಳ ಮುಖ್ಯ ಎನ್ನುವುದು ಈ ಮಾತಿನ ಸಾರ. ಆದರೆ ವಾರನ್ ಬಫೆಟ್ ಅವರ ಸಲಹೆಯನ್ನು ವಿಪರೀತವಾಗಿ ಅರ್ಥ ಮಾಡಿಕೊಳ್ಳುವ ಕೆಲವರು, ಮ್ಯೂಚುವಲ್ ಫಂಡ್‌ಗಳಲ್ಲಿ ಅತಿ ಅನಿಸುವಷ್ಟು ಹೂಡಿಕೆ ವೈವಿಧ್ಯ ಕಾಯ್ದುಕೊಳ್ಳಲು ಮುಂದಾಗುತ್ತಾರೆ.

ವಾಸ್ತವದಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ ವೈವಿಧ್ಯ ಎಷ್ಟು ಮುಖ್ಯವೋ, ಆ ವೈವಿಧ್ಯಕ್ಕೆ ಮಿತಿ ಹಾಕಿಕೊಳ್ಳುವುದು ಕೂಡ ಅಷ್ಟೇ ಮುಖ್ಯ! ವೈವಿಧ್ಯ ಕಾಯ್ದುಕೊಳ್ಳುವುದು ಹಾಗೂ ವೈವಿಧ್ಯಕ್ಕೆ ಮಿತಿ ಹಾಕಿಕೊಳ್ಳುವುದರ ಬಗೆಗಿನ ಕೆಲವು ಮಾಹಿತಿ ಇಲ್ಲಿದೆ.

ಸರಿಯಾಗಿ ಅರ್ಥ ಮಾಡಿಕೊಳ್ಳಿ: ಸ್ನೇಹಿತನೊಬ್ಬ ಕರೆ ಮಾಡಿ, ‘25 ಬಗೆಯ ಮ್ಯೂಚುವಲ್ ಫಂಡ್‌ಗಳಲ್ಲಿ ನಾನು ಹಣ ತೊಡಗಿಸಿದ್ದೇನೆ. ಈಗ ಹೊಸದೊಂದು ಫಂಡ್ ಬಂದಿದೆ. ಅದು ಚೆನ್ನಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆ ಫಂಡ್‌ನಲ್ಲಿ ಹೂಡಿಕೆ ಮಾಡುವುದು ಸೂಕ್ತವೇ’ ಎಂದು ಕೇಳಿದ. ಈ ಪ್ರಶ್ನೆ ಕೇಳಿದ ನಂತರ ನನಗೆ ತಲೆನೋವು ಶುರುವಾಯಿತು. ‘ಫೋನ್‌ನಲ್ಲಿ ನಿನ್ನ ಪ್ರಶ್ನೆಗೆ ಉತ್ತರ ಕೊಡೋದು ಕಷ್ಟ. ಮುಖಾಮುಖಿಯಾಗಿ ಮಾತನಾಡೋಣ’ ಎಂದು ಸ್ನೇಹಿತನಿಗೆ ತಿಳಿಸಿದೆ.

ಇದು ನನ್ನ ಸ್ನೇಹಿತನೊಬ್ಬನ ಕಥೆಯಲ್ಲ, ಬಹುತೇಕರು ಮ್ಯೂಚುವಲ್ ಫಂಡ್‌ಗಳ ಆಯ್ಕೆಯಲ್ಲಿ ಹೀಗೆ ಎಡವಿರುತ್ತಾರೆ.

ಮ್ಯೂಚುವಲ್ ಫಂಡ್ ಅಂದರೇನೇ ವೈವಿಧ್ಯ!: ವಾಸ್ತವದಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆ ಅಂದರೇನೇ ವೈವಿಧ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಉದಾಹರಣೆಗೆ, ನೀವು ಕಂಪನಿಯೊಂದರ ಷೇರಿನಲ್ಲಿ ಹೂಡಿಕೆ ಮಾಡಿದರೆ, ಆ ಕಂಪನಿಯ ಷೇರು ಮಾತ್ರ ನಿಮ್ಮದಾಗುತ್ತದೆ. ಆದರೆ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡಿದರೆ, ಫಂಡ್ ಮ್ಯಾನೇಜರ್ ನಿಮ್ಮ ಹಣವನ್ನು ಹತ್ತಾರು ಕಂಪನಿಗಳಲ್ಲಿ ತೊಡಗಿಸುತ್ತಾರೆ. ಹೀಗಿರುವಾಗ ನಾವು ಮ್ಯೂಚುವಲ್ ಫಂಡ್‌ಗಳಲ್ಲಿ ವೈವಿಧ್ಯದ ವಿಚಾರವನ್ನು ಹೇಗೆ ನಿರ್ಧಾರ ಮಾಡಬೇಕು ಎನ್ನುವ ಸ್ಪಷ್ಟತೆ ನಮ್ಮಲ್ಲಿರಬೇಕು.

ಮ್ಯೂಚುವಲ್ ಫಂಡ್‌ನಲ್ಲಿ ವೈವಿಧ್ಯ ಹೇಗೆ?: ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ವೈವಿಧ್ಯವನ್ನು ಸರಿಯಾಗಿ ಅನುಷ್ಠಾನಕ್ಕೆ ತರುವಲ್ಲಿ ಪ್ರಥಮ ಹೆಜ್ಜೆ, ಎಷ್ಟು ರೀತಿಯ ಮ್ಯೂಚುವಲ್ ಫಂಡ್‌ಗಳು ಇವೆ ಎಂಬುದನ್ನು ತಿಳಿದುಕೊಳ್ಳುವುದು. ಮ್ಯೂಚುವಲ್ ಫಂಡ್‌ಗಳನ್ನು ಪ್ರಮುಖವಾಗಿ ಮೂರು ರೀತಿಗಳಲ್ಲಿ ವರ್ಗೀಕರಿಸಬಹುದು.

1) ಈಕ್ವಿಟಿ ಮ್ಯೂಚುವಲ್ ಫಂಡ್ 2) ಡೆಟ್ (ಸಾಲಪತ್ರ) ಮ್ಯೂಚುವಲ್ ಫಂಡ್ ಮತ್ತು 3) ಹೈಬ್ರೀಡ್ ಫಂಡ್.

ಐದರಿಂದ ಏಳು ವರ್ಷಗಳ ದೀರ್ಘಾವಧಿ ಹೂಡಿಕೆ ಗುರಿಯಿದ್ದರೆ ಹೆಚ್ಚು ರಿಸ್ಕ್ ಇರುವ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳು ಸರಿಹೊಂದುತ್ತವೆ. ಮೂರರಿಂದ ಐದು ವರ್ಷಗಳ ಮಧ್ಯಮ ಅವಧಿಯ ಹೂಡಿಕೆ ಗುರಿ ಇದ್ದರೆ, ಮಧ್ಯಮ ಪ್ರಮಾಣದ ರಿಸ್ಕ್ ಇರುವ ಹೈಬ್ರೀಡ್ ಫಂಡ್‌ಗಳು ಸೂಕ್ತವಾಗುತ್ತವೆ. ಮೂರು ವರ್ಷಗಳು ಅಥವಾ ಅದಕ್ಕಿಂತ ಕಡಿಮೆ ಸಮಯದ ಅಲ್ಪಾವಧಿ ಗುರಿಯಿದ್ದರೆ ಕಡಿಮೆ ರಿಸ್ಕ್ ಇರುವ ಡೆಟ್ ಫಂಡ್‌ಗಳು ಸೂಕ್ತವೆನಿಸುತ್ತವೆ. ಉದಾಹರಣೆಗೆ, ನೀವು ಒಂದು ಲ್ಯಾಪ್ ಟಾಪ್ ಖರೀದಿಸುವುದನ್ನು ಅಲ್ಪಾವಧಿ ಗುರಿ ಎಂದುಕೊಳ್ಳಬಹುದು. ಮಕ್ಕಳ ಶಿಕ್ಷಣಕ್ಕಾಗಿ ಹಣ ಹೊಂದಿಸಿಕೊಳ್ಳುವುದು ಮಧ್ಯಮ ಅವಧಿಯ ಗುರಿ ಎಂದು ಪರಿಗಣಿಸಬಹುದು. ಮನೆ ಕಟ್ಟಿಸುವುದನ್ನು ದೀರ್ಘಾವಧಿ ಗುರಿ ಎಂದು ತಿಳಿಯಬಹುದು. ಹೀಗೆ ಅಗತ್ಯಕ್ಕೆ ಅನುಗುಣವಾಗಿ ಫಂಡ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

ಉಪ ಮಾದರಿಯಲ್ಲಿ ಗರಿಷ್ಠ 2 ಫಂಡ್ ಸಾಕು: ಮ್ಯೂಚುವಲ್ ಫಂಡ್‌ನ ಉಪ ಮಾದರಿಗಳಲ್ಲಿ ಒಂದು ಅಥವಾ ಗರಿಷ್ಠ ಎರಡಕ್ಕಿಂತ ಹೆಚ್ಚು ಫಂಡ್‌ಗಳಲ್ಲಿ ಹೂಡಿಕೆ ಬೇಡ. ‘ಅಯ್ಯೋ, ಇದೇನಿದು ಉಪ ಮಾದರಿ’ ಎಂದು ಗೊಂದಲಕ್ಕೆ ಒಳಗಾಗಬೇಡಿ. ಈಕ್ವಿಟಿ ಮ್ಯೂಚುವಲ್ ಫಂಡ್‌ಗಳನ್ನುಉದಾಹರಣೆಯಾಗಿ ತೆಗೆದುಕೊಂಡರೆ ಅದರಲ್ಲಿ ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್, ಸ್ಮಾಲ್ ಕ್ಯಾಪ್ ಮತ್ತು ಮಲ್ಟಿ ಕ್ಯಾಪ್ ಫಂಡ್‌ಗಳು ಇವೆ. ಇವು ಈಕ್ವಿಟಿ ಫಂಡ್‌ನ ಉಪ ಮಾದರಿಗಳು. ಇಂತಹ ಪ್ರತಿ ಉಪ ಮಾದರಿಯಲ್ಲಿ ನೀವು ಗರಿಷ್ಠ ಎರಡು ಫಂಡ್‌ಗಳಲ್ಲಿ ಹೂಡಿಕೆ ಮಾಡಿದರೆ ಸಾಕು.

ಉದಾಹರಣೆಗೆ, ಲಾರ್ಜ್ ಕ್ಯಾಪ್ ಮ್ಯೂಚುವಲ್ ಫಂಡ್‌ಗಳನ್ನು ಪರಿಗಣಿಸಿದರೆ ಅದರಲ್ಲಿ ಎರಡು ಉತ್ತಮ ಫಂಡ್‌ಗಳನ್ನು ಆಯ್ಕೆ ಮಾಡಿ ಹೂಡಿಕೆ ಮಾಡಬಹುದು. ಒಂದೇ ಮಾದರಿಯ ಎರಡಕ್ಕಿಂತ ಹೆಚ್ಚಿನ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದರಲ್ಲಿ ಅರ್ಥವಿಲ್ಲ.

ಸತತ ಎರಡನೇ ವಾರವೂ ಕುಸಿದ ಷೇರುಪೇಟೆ

ಷೇರುಪೇಟೆ ಸೂಚ್ಯಂಕಗಳು ಸತತ ಎರಡನೇ ವಾರವೂ ಕುಸಿತ ಕಂಡಿವೆ. 52,386 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್ ಮತ್ತು 15,689 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ವಾರದ ಅವಧಿಯಲ್ಲಿ ಶೇ 0.2ರಷ್ಟು ಇಳಿಕೆಯಾಗಿವೆ. ಮಿಡ್ ಕ್ಯಾಪ್ ಸೂಚ್ಯಂಕ ಶೇ 1.5ರಷ್ಟು ಏರಿಕೆಯಾಗಿದೆ. ಕೋವಿಡ್‌ನ ಡೆಲ್ಟಾ ರೂಪಾಂತರಿಯ ಪ್ರಕರಣಗಳು ಹೆಚ್ಚುತ್ತಿದ್ದು, ಈ ಬೆಳವಣಿಗೆ ಜಾಗತಿಕವಾಗಿ ಆರ್ಥಿಕ ಚೇತರಿಕೆ ಮೇಲೆ ಪರಿಣಾಮ ಬೀರಬಹುದು ಎನ್ನುವ ಕಾರಣದಿಂದ ಮಾರುಕಟ್ಟೆಯಲ್ಲಿ ನಕಾರಾತ್ಮಕತೆ ಕಂಡುಬಂದಿದೆ.

ವಲಯವಾರು ಪ್ರಗತಿಯಲ್ಲಿ, ನಿಫ್ಟಿ ಬ್ಯಾಂಕ್ ಶೇ 1ರಷ್ಟು ಏರಿಕೆಯಾಗಿದೆ. ರಿಯಲ್ ಎಸ್ಟೇಟ್ ಮತ್ತು ಲೋಹ ವಲಯ ಉತ್ತಮ ಗಳಿಕೆ ಕಂಡಿವೆ. ಆದರೆ ವಾಹನ ವಲಯ ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಕುಸಿದಿವೆ. ಕಳೆದ ವಾರ ನಿಫ್ಟಿ ಸೂಚ್ಯಂಕ 15,600ರಿಂದ 15,900 ಅಂಶಗಳ ನಡುವೆಯೇ ಸುಳಿದಾಡಿರುವುದು ಮಾರುಕಟ್ಟೆಯಲ್ಲಿ ಏರಿಳಿತ ಮುಂದುವರಿಯಲಿದೆ ಎನ್ನುವುದನ್ನು ಸೂಚಿಸುತ್ತಿದೆ.

ಏರಿಕೆ–ಇಳಿಕೆ: ನಿಫ್ಟಿಯಲ್ಲಿ ಬಜಾಜ್ ಫಿನ್‌ಸರ್ವ್ ಶೇ 9ರಷ್ಟು, ಟಾಟಾ ಸ್ಟೀಲ್ ಶೇ 9ರಷ್ಟು, ಹಿಂಡಾಲ್ಕೋ ಶೇ 4ರಷ್ಟು ಮತ್ತು ಇಂಡಸ್ ಇಂಡ್ ಬ್ಯಾಂಕ್ ಶೇ 3ರಷ್ಟು ಗಳಿಕೆ ಕಂಡಿವೆ. ಏರಿಕೆಯ ಹಾದಿಯಲ್ಲೇ ಇದ್ದ ಟಾಟಾ ಮೋಟರ್ಸ್ ಶೇ 11ರಷ್ಟು ಕುಸಿತ ಕಂಡಿದೆ. ಬಜಾಜ್ ಆಟೋ ಶೇ 4ರಷ್ಟು, ಟಿಸಿಎಸ್ ಶೇ 3ರಷ್ಟು, ಟೆಕ್ ಮಹೀಂದ್ರ ಶೇ 3ರಷ್ಟು ಮತ್ತು ರಿಲಯನ್ಸ್ ಶೇ 3ರಷ್ಟು ಇಳಿಕೆ ದಾಖಲಿಸಿವೆ.

ಮುನ್ನೋಟ: ಕೋವಿಡ್ ಡೆಲ್ಟಾ ಪ್ರಕರಣಗಳು ಎಷ್ಟರ ಮಟ್ಟಿಗೆ ಏರಿಕೆ ಕಾಣಲಿವೆ ಎನ್ನುವ ಅಂಶ ಮಾರುಕಟ್ಟೆ ಮೇಲೆ ನೇರ ಪರಿಣಾಮ ಬೀರಲಿದೆ. ಜಾಗತಿಕ ವಿದ್ಯಮಾನಗಳು, ಕಂಪನಿಗಳ ತ್ರೈಮಾಸಿಕ ಫಲಿತಾಂಶಗಳ ವರದಿಗಳು ಕೂಡ ಮಾರುಕಟ್ಟೆ ದಿಕ್ಕು ನಿರ್ಧರಿಸಲಿವೆ. ಈ ವಾರ ಮೈಂಡ್ ಟ್ರೀ, ಕ್ರಾಫ್ಟ್ಸ್‌ಮೆನ್, ವಿಪ್ರೊ, ಫೈಪೈಸಾ ಕ್ಯಾಪಿಟಲ್, ಟಾಟಾ ಮೆಟಾಲಿಕ್ಸ್, ಹ್ಯಾಟ್ಸನ್, ಏಂಜಲ್ ಬ್ರೋಕಿಂಗ್, ಇನ್ಫೊಸಿಸ್, ದೋಡ್ಲಾ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಜೊಮ್ಯಾಟೋ ಕಂಪನಿಯ ಐಪಿಒ (ಆರಂಭಿಕ ಸಾರ್ವಜನಿಕ ಹೂಡಿಕೆ) ಜುಲೈ 14ರಿಂದ ಜುಲೈ 16ರವರೆಗೆ ನಡೆಯಲಿದೆ.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್ ಪ್ರೈ.ಲಿ.,ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT