ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು ಸಾಕ್ಷರತೆ | ಅಲ್ಪಾವಧಿ ಗುರಿ: ಹೂಡಿಕೆ ಹೇಗೆ?

Last Updated 28 ನವೆಂಬರ್ 2021, 19:30 IST
ಅಕ್ಷರ ಗಾತ್ರ

ನಿವೃತ್ತಿ ನಂತರದ ಜೀವನಕ್ಕೆ, ಮನೆ ಖರೀದಿಗೆ, ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ... ಹೀಗೆ ವಿವಿಧ ದೀರ್ಘಾವಧಿ ಗುರಿಗಳ ಈಡೇರಿಕೆಗೆ ನಾವು ಹೂಡಿಕೆ ಯೋಜನೆ ರೂಪಿಸುತ್ತೇವೆ. ಇದೇ ರೀತಿಯಲ್ಲಿ ಫೋನ್, ಲ್ಯಾಪ್‌ಟಾಪ್ ಖರೀದಿ, ಬೈಕ್ ಖರೀದಿ, ಸಾಲ ಮರುಪಾವತಿ ಮಾಡುವುದು ಸೇರಿದಂತೆ ಇತರ ಅಲ್ಪಾವಧಿ ಗುರಿಗಳನ್ನು ಈಡೇರಿಸಿಕೊಳ್ಳುವುದಕ್ಕೂ ನಾವು ಯೋಜನೆ ರೂಪಿಸಿಕೊಳ್ಳಬೇಕು.

ಬನ್ನಿ ಅಲ್ಪಾವಧಿ ಗುರಿಗಳು ಅಂದರೆ ಏನು, ಅಲ್ಪಾವಧಿಯಲ್ಲಿ ಹಣಕಾಸು ನಿರ್ವಹಣೆ ಮಾಡುವುದು ಹೇಗೆ, ಯಾವ ಹೂಡಿಕೆ ಅಲ್ಪಾವಧಿಗೆ ಸೂಕ್ತ ಎನ್ನುವ ಬಗ್ಗೆ ತಿಳಿದು ಕೊಳ್ಳೋಣ.

ಅಲ್ಪಾವಧಿ ಗುರಿ ವಿಂಗಡಣೆ ಹೇಗೆ?: ಗುರಿ ಈಡೇರಿಕೆಗೆ ಇರುವ ಕಾಲಾವಕಾಶ ಮತ್ತು ಗುರಿಗೆ ಇರುವ ಪ್ರಾಮುಖ್ಯ ಆಧರಿಸಿ ಅಲ್ಪಾವಧಿ ಗುರಿಗಳನ್ನು ವಿಂಗಡಿಸಬಹುದು. ಮೂರು ತಿಂಗಳಿಗೂ ಕಡಿಮೆ ಕಾಲಾವಧಿ ಇರುವ ಗುರಿಯನ್ನು ತುರ್ತು ಗುರಿ ಎಂದು ಪರಿಗಣಿಸಲಾಗುತ್ತದೆ. ಆಸ್ಪತ್ರೆ ವೆಚ್ಚ, ತುರ್ತಾಗಿ ಆಗಬೇಕಾದ ಮನೆ ರಿಪೇರಿ ಈ ರೀತಿಯ ಗುರಿಗಳಿಗೆ ಉತ್ತಮ ಉದಾಹರಣೆ.

ಹಾಗೆಯೇ ನಾಲ್ಕರಿಂದ 12 ತಿಂಗಳ ಕಾಲಾವಕಾಶವಿರುವ ಗುರಿಗಳನ್ನು ಅತ್ಯಂತ ಅಲ್ಪಾವಧಿ ಗುರಿ ಎಂದು ಕರೆಯಲಾಗುತ್ತದೆ. ಶಾಲೆಯ ಶುಲ್ಕ ಪಾವತಿ, ಮುಂಗಡ ತೆರಿಗೆ ಪಾವತಿ ಈ ರೀತಿಯ ಅತ್ಯಂತ ಅಲ್ಪಾವಧಿ ಗುರಿಗೆ ಸೂಕ್ತ ಉದಾಹರಣೆ. ಇನ್ನು 13ರಿಂದ 36 ತಿಂಗಳ ಅವಧಿಯ ಗುರಿಗಳನ್ನು ಅಲ್ಪಾವಧಿ ಗುರಿ ಎನ್ನಲಾಗುತ್ತದೆ. ಪ್ರವಾಸಕ್ಕೆ ತೆರಳುವುದು, ಬೈಕ್ ಕೊಳ್ಳುವುದು ಇದಕ್ಕೆ ಒಳ್ಳೆಯ ಉದಾಹರಣೆ.

ನಿಮ್ಮ ಅಲ್ಪಾವಧಿ ಗುರಿಗಳನ್ನು ಹೀಗೆ ವಿಂಗಡಿಸಿ: ನಿಮ್ಮ ಗುರಿಗಳಲ್ಲಿ ತುರ್ತು, ಅತ್ಯಂತ ಅಲ್ಪಾವಧಿ ಮತ್ತು ಅಲ್ಪಾವಧಿ ಗುರಿಗಳು ಯಾವುವು ಎಂದು ಮೊದಲಿಗೆ ಗುರುತಿಸಿಕೊಳ್ಳಬೇಕು. ನಂತರ ಆದ್ಯತೆ ಯಾವುದು ಎಂದು ನೋಡಿಕೊಳ್ಳಬೇಕು. ಉದಾಹರಣೆಗೆ, ಆಸ್ಪತ್ರೆ ವೆಚ್ಚವನ್ನು ಮುಂದೂಡಲು ಸಾಧ್ಯವಿಲ್ಲ, ಆದರೆ ಬೈಕ್ ಖರೀದಿಯನ್ನು ಮುಂದೂಡಬಹುದು. ಯಾವ ಗುರಿ ಸಮೀಪದಲ್ಲಿದೆಯೋ ಆ ಗುರಿಗೆ ನೀವು ಹೆಚ್ಚು ಹಣ ಮೀಸಲಿಡಬೇಕಾಗುತ್ತದೆ. ಅದನ್ನು ಆಧರಿಸಿ ನೀವು ಹೂಡಿಕೆ ಸಾಧನ ಆಯ್ದುಕೊಳ್ಳಬೇಕಾಗುತ್ತದೆ.

ಅಲ್ಪಾವಧಿ ಹೂಡಿಕೆ ಸಾಧನಗಳ ಆಯ್ಕೆ ಲೆಕ್ಕಾಚಾರ: ಅಲ್ಪಾವಧಿ ಹೂಡಿಕೆ ಮಾಡುವಾಗ ಪ್ರಮುಖವಾಗಿ ಮೂರು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಬಂಡವಾಳದ ಸುರಕ್ಷತೆ, ಅಗತ್ಯ ಎಂದಾಗ ಬಂಡವಾಳದ ಲಭ್ಯತೆ ಮತ್ತು ಬಂಡವಾಳದ ಮೇಲಿನ ಗಳಿಕೆ. ಸುರಕ್ಷತೆಯ ವಿಚಾರಕ್ಕೆ ಬರುವುದಾದರೆ ಉಳಿತಾಯ ಖಾತೆಯಲ್ಲಿನ ಹೂಡಿಕೆ, ನಿಶ್ಚಿತ ಠೇವಣಿ ಮೇಲಿನ ಹೂಡಿಕೆ ಮತ್ತು ಲಿಕ್ವಿಡ್ ಫಂಡ್ ಆಯ್ಕೆಗಳನ್ನು ಅಗ್ರವಾಗಿ ಪರಿಗಣಿಸಬಹುದು. ಇನ್ನು, ಅಗತ್ಯವಾದಾಗ ಬಂಡವಾಳದ ಲಭ್ಯತೆ ಯಾವುದರಲ್ಲಿ ಹೆಚ್ಚು ಎಂಬ ಪ್ರಶ್ನೆ ಬಂದಾಗ, ಮೊದಲು ಸೇವಿಂಗ್ಸ್ ಬ್ಯಾಂಕ್, ನಂತರದಲ್ಲಿ ಫಿಕ್ಸೆಡ್ ಡೆಪಾಸಿಟ್ ಮತ್ತು ಡೆಟ್ ಮ್ಯೂಚುಯಲ್ ಫಂಡ್ ನಿಲ್ಲುತ್ತವೆ. ಲಾಭಾಂಶ ಅಂತ ಬಂದಾಗ ಡೆಟ್ ಹೂಡಿಕೆಗಳಲ್ಲಿ ಉಳಿತಾಯ ಖಾತೆ ಮತ್ತು ಫಿಕ್ಸೆಡ್ ಡೆಪಾಸಿಟ್‌ಗಿಂತ ಹೆಚ್ಚು ಲಾಭಾಂಶ ಸಿಕ್ಕರೆ ಒಳ್ಳೆಯದು ಎಂದು ಎಲ್ಲರೂ ನಿರೀಕ್ಷೆ ಮಾಡು ತ್ತಾರೆ. ಆದರೆ ಡೆಟ್ ಹೂಡಿಕೆಗಳಲ್ಲಿ ಲಾಭಾಂಶ ಆರ್‌ಬಿಐ ಬಡ್ಡಿ ದರದ ಮೇಲೆ ನಿಂತಿದೆ.

ಆರ್‌ಬಿಐ ಬಡ್ಡಿ ದರಗಳನ್ನು ಹೆಚ್ಚಳ ಮಾಡಿದಾಗ ಫಿಕ್ಸೆಡ್ ಡೆಪಾಸಿಟ್ ಮತ್ತು ಕಿರು ಅವಧಿಯ ಡೆಟ್ ಫಂಡ್‌ಗಳು ಹೆಚ್ಚು ಲಾಭಾಂಶ ಕೊಡುತ್ತವೆ. ಆರ್‌ಬಿಐ ಬಡ್ಡಿ ದರ ತಗ್ಗಿಸಿದಾಗ ಗಳಿಕೆಯೂ ಇಳಿಕೆಯಾಗುತ್ತದೆ. 2020-21ರಲ್ಲಿ ಆರ್‌ಬಿಐ ಬಡ್ಡಿ ದರ ತಗ್ಗಿಸಿದಾಗ ಡೆಟ್ ಹೂಡಿಕೆಗಳು ಹೂಡಿಕೆದಾರರ ನಿರೀಕ್ಷೆಗೆ ತಕ್ಕಂತೆ ಲಾಭಾಂಶ ಕೊಡಲು ಸಾಧ್ಯವಾಗಲಿಲ್ಲ.

ಪ್ರಮೋದ್ ಬಿ.ಪಿ.
ಪ್ರಮೋದ್ ಬಿ.ಪಿ.

ವೈರಾಣುವಿನ ಆತಂಕಕ್ಕೆ ಕುಸಿದ ಸೂಚ್ಯಂಕಗಳು

ಷೇರುಪೇಟೆಯಲ್ಲಿ ಗೂಳಿ ಓಟ ನಿಂತಿದ್ದು, ಕರಡಿ ಹಿಡಿತ ಶುರುವಾಗುವ ಲಕ್ಷಣಗಳು ಕಾಣುತ್ತಿವೆ. ನವೆಂಬರ್ 26ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಕುಸಿತ ಕಂಡಿವೆ. 57,107 ಅಂಶಗಳಲ್ಲಿ ವಹಿವಾಟು ಮುಗಿಸಿದ ಸೆನ್ಸೆಕ್ಸ್ ಮತ್ತು 17,026 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ನಿಫ್ಟಿ ವಾರದ ಅವಧಿಯಲ್ಲಿ ತಲಾ ಶೇ 4ರಷ್ಟು ಕುಸಿತ ದಾಖಲಿಸಿವೆ.

ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೊನಾ ವೈರಾಣುವಿನ ಹೊಸ ರೂಪಾಂತರಿ ತಳಿ ಕುರಿತ ಆತಂಕ, ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡು ಬಂದ ನಕಾರಾತ್ಮಕತೆ, ಹಣದುಬ್ಬರ ಸೇರಿ ಹಲವು ಅಂಶಗಳು ಷೇರುಪೇಟೆ ಕುಸಿತಕ್ಕೆ ಕಾರಣವಾಗಿವೆ.

ದಾಖಲೆ ಮಟ್ಟದಿಂದ ಕುಸಿದ ಸೂಚ್ಯಂಕಗಳು: ಅಕ್ಟೋಬರ್ 19ರಂದು ಸೆನ್ಸೆಕ್ಸ್ ಸಾರ್ವಕಾಲಿಕ ದಾಖಲೆ ಮಟ್ಟವಾದ 62,245 ಅಂಶಗಳಿಗೆ ಜಿಗಿದಿತ್ತು. ನಿಫ್ಟಿ ಕೂಡ 18,604 ಅಂಶಗಳಿಗೆ ಹೆಚ್ಚಳ ಕಂಡಿತ್ತು. ಅಂದಿನಿಂದ ಈವರೆಗೆ ಎರಡೂ ಸೂಚ್ಯಂಕಗಳು ಶೇ 8ರಷ್ಟು ಇಳಿಕೆಯಾಗಿವೆ. ಇದರಿಂದ ಸುಮಾರು ₹ 16 ಲಕ್ಷ ಕೋಟಿ ಹೂಡಿಕೆದಾರರ ಹಣ ಕರಗಿದೆ.

ವಲಯವಾರು ಸೂಚ್ಯಂಕಗಳ ಪ್ರಗತಿ ನೋಡಿದಾಗಲೂ ಈ ಅವಧಿಯಲ್ಲಿ ಭಾರೀ ಕುಸಿತವಾಗಿರುವುದು ಕಂಡುಬಂದಿದೆ. ಬಿಎಸ್‌ಇ ಲೋಹ ಸೂಚ್ಯಂಕ ಶೇ 13.6ರಷ್ಟು ಕುಸಿದಿದೆ. ಇಂಧನ ವಲಯದ ಸೂಚ್ಯಂಕ ಶೇ 10ರಷ್ಟು, ಬ್ಯಾಂಕ್ ಸೂಚ್ಯಂಕ ಶೇ 8.2ರಷ್ಟು, ಫೈನಾನ್ಸ್ ಸೂಚ್ಯಂಕ ಶೇ 7.37ರಷ್ಟು, ಎಫ್‌ಎಂಸಿಜಿ ಶೇ 7.04ರಷ್ಟು, ಐ.ಟಿ. ವಲಯ ಶೇ 6.68ರಷ್ಟು, ತೈಲ ಮತ್ತು ನೈಸರ್ಗಿಕ ಅನಿಲ ವಲಯ ಶೇ 6.1ರಷ್ಟು, ಆಟೊಮೊಬೈಲ್ ವಲಯ ಶೇ 6.01ರಷ್ಟು, ರಿಯಲ್ ಎಸ್ಟೇಟ್
ಶೇ 5.74ರಷ್ಟು, ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಕ್ರಮವಾಗಿ ಶೇ 5.65 ಮತ್ತು 4.6ರಷ್ಟು ಇಳಿಕೆ ಕಂಡಿವೆ.

ಇಳಿಕೆ: ಈ ವಾರ ಮಾರುತಿ ಶೇ 11.66ರಷ್ಟು, ಇಂಡಸ್ ಇಂಡ್ ಬ್ಯಾಂಕ್ ಶೇ 10.58ರಷ್ಟು, ಟಾಟಾ ಮೋಟರ್ಸ್ ಶೇ 9.71ರಷ್ಟು , ಬಜಾಜ್ ಫೈನಾನ್ಸ್ ಶೇ 9.06ರಷ್ಟು , ಟಾಟಾ ಕನ್ಸ್ಯೂಮರ್ ಶೇ 7.85ರಷ್ಟು, ಮಹಿಂದ್ರ ಆ್ಯಂಡ್ ಮಹಿಂದ್ರ ಶೇ 7.57ರಷ್ಟು, ಟೈಟನ್ ಶೇ 7.50ರಷ್ಟು, ಬಿಪಿಸಿಎಲ್ ಶೇ 7.02ರಷ್ಟು ಮತ್ತು ಬಜಾಜ್ ಫಿನ್‌ಸರ್ವ್ ಶೇ 6.91ರಷ್ಟು ಕುಸಿತ ಕಂಡಿವೆ.

ಮುನ್ನೋಟ: ಕೋವಿಡ್ ಲಸಿಕೆಗಳ ಪ್ರಭಾವವನ್ನು ಮೀರಬಹುದಾದ ಹೊಸ ಸ್ವರೂಪದ ಕೊರೊನಾ ವೈರಾಣು ತಳಿಯು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವುದು ಷೇರು ಮಾರುಕಟ್ಟೆಯ ಮೇಲೆ ಈಗಾಗಲೇ ಪರಿಣಾಮ ಉಂಟುಮಾಡಿದೆ. ಮುಂದಿನ ದಿನಗಳಲ್ಲಿ ಹೊಸ ಪ್ರಭೇದದ ವೈರಾಣು ಯಾವ ರೀತಿ ವರ್ತಿಸಲಿದೆ ಎನ್ನುವುದು ಮಾರುಕಟ್ಟೆಯ ದಿಕ್ಕನ್ನು ನಿರ್ಧರಿಸಲಿದೆ.

ಲಾಕ್‌ಡೌನ್, ಪ್ರಯಾಣ ನಿರ್ಬಂಧ ಮುಂತಾದ ತೀರ್ಮಾನಗಳನ್ನು ಎಲ್ಲ ದೇಶಗಳು ಅನುಸರಿಸಿದರೆ ಏನು ಮಾಡುವುದು ಎನ್ನುವ ಆತಂಕ ಹೂಡಿಕೆದಾರರಲ್ಲಿ ಮನೆ ಮಾಡಿದೆ. ಇದರ ಜೊತೆಗೆ ಹಣದುಬ್ಬರ ದತ್ತಾಂಶ, ಅಮೆರಿಕ ಸೇರಿದಂತೆ ವಿವಿಧ ದೇಶಗಳ ಕೇಂದ್ರ ಬ್ಯಾಂಕ್‌ಗಳು ಬಡ್ಡಿ ದರ ಕುರಿತಾಗಿ ಕೈಗೊಳ್ಳಲಿರುವ ನಿರ್ಣಯಗಳು ಸಹ ಸೂಚ್ಯಂಕಗಳ ಮೇಲೆ ಪರಿಣಾಮ ಬೀರಲಿವೆ. ತೈಲ ಬೆಲೆ ಮತ್ತು ಲೋಹ ದರಗಳಲ್ಲಿ ಹೆಚ್ಚಳವಾಗುತ್ತಿರುವುದು ಸಹ ಸಮಸ್ಯೆ ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್ ಪ್ರೈ.ಲಿ.,ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT