ಭಾನುವಾರ, ಸೆಪ್ಟೆಂಬರ್ 26, 2021
21 °C

ಹಣಕಾಸು ಸಾಕ್ಷರತೆ | ಅರಿತು ಹೂಡದಿದ್ದರೆ ಕಾದಿದೆ ಅಪಾಯ

ಪ್ರಮೋದ್ ಬಿ.ಪಿ. Updated:

ಅಕ್ಷರ ಗಾತ್ರ : | |

ಉಳಿತಾಯ ಮತ್ತು ಹೂಡಿಕೆ–ಪ್ರಾತಿನಿಧಿಕ ಚಿತ್ರ

ಬ್ಯಾಂಕ್‌ನಲ್ಲಿ ಕೆಲಸ ಮಾಡುವ ಪರಿಚಯದವರು ಹೇಳಿದರು ಅಂತ ಅಥವಾ ಗೊತ್ತಿರುವ ಇನ್ಶೂರೆನ್ಸ್ ಏಜೆಂಟರ ಮುಲಾಜಿಗೆ ಬಿದ್ದು ಪೂರ್ವಾಪರ ನೋಡದೆ ಕೆಲವು ಹೂಡಿಕೆಗಳನ್ನು ನಾವು ಮಾಡುತ್ತೇವೆ. ಹೀಗೆ ಮಾಡುವ ಹೂಡಿಕೆಗಳು ನಮ್ಮ ಪರಿಶ್ರಮದ ಹಣವನ್ನೇ ಅಳಿಸಿಹಾಕಬಹುದು. ಯೆಸ್ ಬ್ಯಾಂಕ್‌ನ ‘ಎಟಿ 1’ ಬಾಂಡ್‌ ಪ್ರಕರಣ ಇದಕ್ಕೆ ತಾಜಾ ನಿದರ್ಶನ. ಏನಿದು ಯೆಸ್ ಬ್ಯಾಂಕ್‌ನ ‘ಎಟಿ 1’ ಬಾಂಡ್‌ ವಿಚಾರ? ಇದರಿಂದ ಹೂಡಿಕೆದಾರರಿಗೆ ಹೇಗೆ ನಷ್ಟವಾಯಿತು? ಶ್ರೀಸಾಮಾನ್ಯ ಇದರಿಂದ ಕಲಿಯಬೇಕಾದ ಪಾಠ ಏನು ಎಂಬುದರ ಮಾಹಿತಿ ಇಲ್ಲಿದೆ.

ಏನಿದು ಪ್ರಕರಣ?: ಯೆಸ್ ಬ್ಯಾಂಕ್ ಹಣಕಾಸಿನ ಬಿಕ್ಕಟ್ಟಿಗೆ ಸಿಲುಕಿದಾಗ ₹ 8,415 ಕೋಟಿ ರೈಟ್ ಆಫ್ ಮಾಡಲಾಯಿತು. ಈ ವೇಳೆ ಯೆಸ್ ಬ್ಯಾಂಕ್‌ನ ‘ಎಟಿ 1’ ಬಾಂಡ್‌ನಲ್ಲಿ ಹೂಡಿಕೆ ಮಾಡಿದ್ದವರ ಹಣ ಸಂಪೂರ್ಣ ನಷ್ಟವಾಯಿತು. ಎಟಿ 1 ಬಾಂಡ್‌ನಲ್ಲಿ ಹೂಡಿಕೆ ಮಾಡಿದ್ದ ರಿಟೇಲ್ (ಸಾಮಾನ್ಯ) ಮತ್ತು ದೊಡ್ಡ ಕಾರ್ಪೊರೇಟ್ ಹೂಡಿಕೆದಾರರು ನಷ್ಟದ ಹೊರೆ ಹೊರಬೇಕಾಗಿ ಬಂತು. ಆಗ ಅನೇಕ ಹೂಡಿಕೆದಾರರು ಆರ್‌ಬಿಐ ಮತ್ತು ಯೆಸ್ ಬ್ಯಾಂಕ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದರು. ಇದಕ್ಕೆ ಪ್ರತಿಯಾಗಿ ಆರ್‌ಬಿಐ, ‘ಹೆಚ್ಚು ಲಾಭ ನೀಡುವ ಹೂಡಿಕೆಗಳಲ್ಲಿ ಹೆಚ್ಚು ಅಪಾಯ ಇದ್ದೇ ಇರುತ್ತದೆ. ಲಾಭ ಸಿಗುವಾಗ ಸುಮ್ಮನಿದ್ದು ನಷ್ಟವಾದಾಗ ನಿಯಂತ್ರಣ ಸಂಸ್ಥೆಗಳನ್ನು ದೂರುವುದು ತರವಲ್ಲ. ಯೆಸ್ ಬ್ಯಾಂಕ್‌ನ ಎಟಿ 1 ಬಾಂಡ್‌ಗಳಲ್ಲಿ ಹೂಡಿಕೆಯ ರಿಸ್ಕ್ ಬಗ್ಗೆ ಸ್ಪಷ್ಟವಾಗಿ ತಿಳಿಸಲಾಗಿದೆ’ ಎಂದು ಹೇಳಿತು. ಆದರೆ ಹೂಡಿಕೆದಾರರು, ‘ಯೆಸ್ ಬ್ಯಾಂಕ್ ಎಟಿ1 ಬಾಂಡ್‌ಗಳನ್ನು ಮಾರಾಟ ಮಾಡುವಾಗ ಹೂಡಿಕೆ ಹಣಕ್ಕೂ ರಿಸ್ಕ್‌ ಇದೆ ಎನ್ನುವುದನ್ನು ತಿಳಿಸಿಲ್ಲ, ಮೋಸದ ಮಾರಾಟ ಮಾಡಿದೆ’ ಎಂದು ದೂರಿದ್ದಾರೆ. ಅರಿತು ಹೂಡಿಕೆ ಮಾಡಿದರಷ್ಟೇ ನಮ್ಮ ಹಣಕ್ಕೆ ಸುರಕ್ಷತೆ ಸಿಗುತ್ತದೆ ಎನ್ನುವುದನ್ನು ಈ ಪ್ರಕರಣ ಮತ್ತೆ ನೆನಪಿಸಿದೆ.

ಸಮಸ್ಯೆಯಾಗುತ್ತಿರುವುದು ಎಲ್ಲಿ?: ‘ಅರಿತು ಹೂಡಿಕೆ ಮಾಡಬೇಕು’ ಎಂಬ ಆರ್‌ಬಿಐ ವಾದ ಸರಿ. ಆದರೆ, ಹಣಕಾಸು ಹೂಡಿಕೆ ಉತ್ಪನ್ನದ ದಾಖಲೆಗಳನ್ನು ಅರ್ಥೈಸಿಕೊಂಡು ಮುನ್ನಡೆಯುವ ಶಕ್ತಿ ಎಲ್ಲರಿಗೂ ಇದೆಯೇ ಎನ್ನುವ ಪ್ರಶ್ನೆ ಏಳುತ್ತದೆ. ಭಾರತದಲ್ಲಿ ಬಹುಪಾಲು ಜನರಿಗೆ ಹೂಡಿಕೆ ಮತ್ತು ಹಣಕಾಸು ಉತ್ಪನ್ನಗಳ ಬಗ್ಗೆ ಅರಿವಿಲ್ಲ. ಹೂಡಿಕೆ ಉತ್ಪನ್ನಗಳಲ್ಲಿ ಬಳಕೆಯಾಗುವ ಭಾಷೆ ಸರಳವಾಗಿ ಇಲ್ಲ. ಜನಸಾಮಾನ್ಯರ ಪಾಲಿಗೆ ಬ್ಯಾಂಕ್  ಏಜೆಂಟರು ಹೇಳುವುದೇ ಸತ್ಯ. ಪರಿಸ್ಥಿತಿ ಹೀಗಿರುವಾಗ ಹೂಡಿಕೆ ಉತ್ಪನ್ನವೊಂದರ ಬಗ್ಗೆ ಅದರ ಮಾರಾಟಗಾರು ಸಕಾರಾತ್ಮಕ ಅಂಶಗಳನ್ನಷ್ಟೇ ಹೇಳಿ, ನಕಾರಾತ್ಮಕ ಅಂಶಗಳನ್ನು ಮರೆಮಾಚುವ ಸಾಧ್ಯತೆಯೇ ಹೆಚ್ಚು. ದೊಡ್ಡ ಮಟ್ಟದ ಕಾರ್ಪೊರೇಟ್ ಹೂಡಿಕೆದಾರರು ಯಾವುದೇ ಹೂಡಿಕೆಗೆ ಮುನ್ನ ಕಾನೂನು ಮತ್ತು ಹೂಡಿಕೆ ತಜ್ಞರ ಅಭಿಪ್ರಾಯ ಪಡೆದು ಮುನ್ನಡೆಯಬಹುದು. ಆದರೆ ಸಾಮಾನ್ಯ ಹೂಡಿಕೆದಾರರಿಗೆ ಈ ಸವಲತ್ತು ಹೊಂದಲು ಸಾಧ್ಯವಿಲ್ಲ.

ಹಾಗಾಗಿ, ಆರ್‌ಬಿಐ ಮತ್ತು ಇತರ ನಿಯಂತ್ರಣ ಸಂಸ್ಥೆಗಳು ಯಾವ ರೀತಿಯ ಹಣಕಾಸು ಉತ್ಪನ್ನಗಳಲ್ಲಿ ಯಾವ ರೀತಿಯ ಹೂಡಿಕೆದಾರರು ಹಣ ಹೂಡಬಹುದು ಎನ್ನುವುದನ್ನು ಗೊತ್ತುಪಡಿಸುವುದು ಉತ್ತಮ.

ಉದಾರಣೆಗೆ: ಸಾಮಾನ್ಯ ನಿಶ್ಚಿತ ಠೇವಣಿಯಲ್ಲಿ ಅಸಲು ಮತ್ತು ಬಡ್ಡಿ ಮೊತ್ತಕ್ಕೆ ಪೂರ್ಣ ಖಾತರಿ ಇರುತ್ತದೆ. ಆದರೆ ಕಾರ್ಪೊರೇಟ್ ನಿಶ್ಚಿತ ಠೇವಣಿಯಲ್ಲಿ ರಿಸ್ಕ್ ಇರುತ್ತದೆ. ಈ ಅಂಶವನ್ನು ಮರೆಮಾಚುವ ಕೆಲವು ಬ್ಯಾಂಕ್ ಏಜೆಂಟರು ಬಡ್ಡಿ ಆಸೆ ತೋರಿಸಿ ಅಲ್ಪಸ್ವಲ್ಪ ಗಳಿಸುವ ಜನಸಾಮಾನ್ಯರಿಗೂ ಹೆಚ್ಚಿನ ರಿಸ್ಕ್ ಇರುವ ಕಾರ್ಪೊರೇಟ್ ನಿಶ್ಚಿತ ಠೇವಣಿಯಲ್ಲಿ ಹೂಡಿಕೆ ಮಾಡುವಂತೆ
ಪ್ರೇರೇಪಿಸುತ್ತಾರೆ. ಕೊನೆಗೆ ಗ್ರಾಹಕರು ತೊಂದರೆಗೆ ಸಿಲುಕುತ್ತಾರೆ.


ಪ್ರಮೋದ್ ಬಿ.ಪಿ.

* ನಿಖರ ದಾಖಲೆ ಪರಿಶೀಲಿಸದೆ ಗಾಳಿ ಗೋಪುರದ ಮಾತು ನಂಬಿ ಹೂಡಿಕೆ ಬೇಡ.

* ಇನ್ಶೂರೆನ್ಸ್ ಖರೀದಿಸಿದ ಮೇಲೆ ಅದು ಸರಿಯಿಲ್ಲ ಅನ್ನಿಸಿದರೆ, 15 ದಿನಗಳ ಒಳಗೆ ಅದನ್ನು ಹಿಂದಿರುಗಿಸಿ ಹಣ ವಾಪಸ್ ಪಡೆಯಲು ಅವಕಾಶವಿದೆ.

* ಇನ್ಶೂರೆನ್ಸ್, ಬ್ಯಾಂಕಿಂಗ್, ಮ್ಯೂಚುವಲ್ ಫಂಡ್ ಸೇರಿ ಹಣಕಾಸಿನ ಉತ್ಪನ್ನಗಳನ್ನು ಕೊಳ್ಳುವ ಮುನ್ನ 10ರಿಂದ 12 ದಿನಗಳ ಕಾಲಾವಕಾಶ ಪಡೆದುಕೊಳ್ಳಿ. ನೀವು ಮಾಡಬೇಕಿರುವ ಹೂಡಿಕೆಯ ಪೂರ್ವಾಪರ ಅರಿಯಿರಿ.

* ಹಣಕಾಸು ಉತ್ಪನ್ನಗಳನ್ನು ಖರೀದಿಸುವಾಗ ಭರ್ತಿ ಮಾಡದ ಅರ್ಜಿಗೆ ಸಹಿ ಮಾಡಬೇಡಿ. ಹೀಗೆ ಮಾಡಿದಾಗ ನೀವು ಮೋಸದ ಮಾರಾಟಕ್ಕೆ ಸಿಲುಕುವ ಸಾಧ್ಯತೆ ಹೆಚ್ಚು.

ಲಾಭ ಗಳಿಕೆಯ ಒತ್ತಡದಲ್ಲಿ ಷೇರುಪೇಟೆ

ಸತತ ಆರು ವಾರಗಳ ಕಾಲ ಗಳಿಕೆ ಕಂಡಿದ್ದ ಷೇರುಪೇಟೆ ಸೂಚ್ಯಂಕಗಳು ಜುಲೈ 31ಕ್ಕೆ ಕೊನೆಗೊಂಡ ವಾರದಲ್ಲಿ ಕುಸಿತ ಕಂಡಿವೆ. ಜಾಗತಿಕ ವಿದ್ಯಮಾನಗಳು, ವಸೂಲಾಗದ ಸಾಲದ ಪ್ರಮಾಣದಲ್ಲಿ ಹೆಚ್ಚಳ ಸಾಧ್ಯತೆ, ಕೊರೊನಾ ಪ್ರಕರಣಗಳಲ್ಲಿ ಹೆಚ್ಚಳ ಸೇರಿದಂತೆ ಅನೇಕ ಕಾರಣಗಳಿಂದ ಮಾರುಕಟ್ಟೆಯು ಲಾಭ ಗಳಿಕೆಯ ಒತ್ತಡಕ್ಕೆ ಸಿಲುಕಿತು. 37,606 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿದ ಸೆನ್ಸೆಕ್ಸ್, ವಾರಾಂತ್ಯಕ್ಕೆ ಶೇಕಡ 1.3ರಷ್ಟು ಕುಸಿತ ಕಂಡಿದ್ದರೆ, 11,073 ಅಂಶಗಳಲ್ಲಿ ವಹಿವಾಟು ಮುಗಿಸಿದ ನಿಫ್ಟಿ (50) ಸೂಚ್ಯಂಕವು ಶೇ 1ರಷ್ಟು ತಗ್ಗಿದೆ.

ವಾರದ ಗಳಿಕೆ ಲೆಕ್ಕಾಚಾರಕ್ಕೆ ಬಂದರೆ ನಿಫ್ಟಿ ಫಾರ್ಮಾ ವಲಯ ಅತಿ ಹೆಚ್ಚು ಗಳಿಕೆ ಕಂಡಿದೆ. ನಿಫ್ಟಿ ಸೂಚ್ಯಂಕದಲ್ಲಿರುವ ಟಾಪ್ ಐದು ಕಂಪನಿಗಳ ಪೈಕಿ ಮೂರು ಫಾರ್ಮಾ ಕಂಪನಿಗಳಿವೆ. ನಿಫ್ಟಿ–50ರಲ್ಲಿ ಡಾ. ರೆಡ್ಡಿಸ್ ಶೇ 11.19ರಷ್ಟು, ಸನ್ ಫಾರ್ಮಾ ಶೇ 9.49ರಷ್ಟು, ಅಲ್ಟ್ರಾಟೆಕ್ ಸಿಮೆಂಟ್ ಶೇ 8.85ರಷ್ಟು, ಗ್ರಾಸಿಮ್ ಇಂಡಸ್ಟ್ರೀಸ್ ಶೇ 8.64ರಷ್ಟು, ಸಿಪ್ಲಾ ಶೇ 8.12ರಷ್ಟು ಗಳಿಸಿವೆ. ಇನ್ನು ಐಸಿಐಸಿಐ ಶೇ 9.17ರಷ್ಟು, ಜೀ ಎಂಟರ್‌ಟೇನ್ಮೆಂಟ್ ಶೇ 8.54ರಷ್ಟು, ಬಿಪಿಸಿಎಲ್ ಶೇ 7.72ರಷ್ಟು, ಎಚ್‌ಡಿಎಫ್‌ಸಿ ಬ್ಯಾಂಕ್ ಶೇ 7.71ರಷ್ಟು ಮತ್ತು ಇಂಡಿಯನ್ ಆಯಿಲ್ ಶೇ 4.23ರಷ್ಟು ಕುಸಿದಿವೆ. ಜುಲೈ ತಿಂಗಳನ್ನು ಒಟ್ಟಾರೆಯಾಗಿ ಪರಿಗಣಿಸಿದಾಗ ಸೆನ್ಸೆಕ್ಸ್ ಶೇ 8ರಷ್ಟು ಮತ್ತು ನಿಫ್ಟಿ ಶೇ 8ರಷ್ಟು ಗಳಿಸಿಕೊಂಡಿವೆ. ವಲಯವಾರು ಪ್ರಗತಿಯಲ್ಲಿ ನಿಫ್ಟಿ ಐ.ಟಿ. ವಲಯ ಶೇ 25ರಷ್ಟು ಗಳಿಸಿದೆ. ನಿಫ್ಟಿ ಮಾಧ್ಯಮ, ರಿಯಲ್ ಎಸ್ಟೇಟ್ ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ವಲಯಗಳು ತಲಾ ಶೇ 7ರಷ್ಟು ಕುಸಿದಿವೆ.

ಮುನ್ನೋಟ: ಬ್ಯಾಂಕ್ ಆಫ್ ಇಂಡಿಯಾ, ನಾರಾಯಣ ಹೃದಯಾಲಯ, ಸನ್ ಫಾರ್ಮಾ, ಕೆನರಾ ಬ್ಯಾಂಕ್, ಅದಾನಿ ಎಂಟರ್‌ಪ್ರೈಸಸ್, ಎಚ್‌ಪಿಸಿಎಲ್, ಪಿಡಿಲೈಟ್, ಬೆಮೆಲ್, ಬಾಟಾ, ಮಹೀಂದ್ರಾ & ಮಹೀಂದ್ರಾ ಲಿ., ಸಿಪ್ಲಾ ಸೇರಿ ಪ್ರಮುಖ ಕಂಪನಿಗಳು ಈ ವಾರ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಜಾಗತಿಕ ವಿದ್ಯಮಾನಗಳು, ಕೊರೊನಾ ಪ್ರಕರಣಗಳು, ತ್ರೈಮಾಸಿಕ ಫಲಿತಾಂಶಗಳು ಮಾರುಕಟ್ಟೆ ಸೂಚ್ಯಂಕಗಳ ಗತಿ ನಿರ್ಧರಿಸಲಿವೆ.

(ಲೇಖಕ ಸುವಿಷನ್ ಹೋಲ್ಡಿಂಗ್ಸ್ ಪ್ರೈವೇಟ್‌ ಲಿಮಿಟೆಡ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು