ಕೈಗೆಟುಕಬಲ್ಲ ಉತ್ತಮ ಫೋನ್

7
ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ 6

ಕೈಗೆಟುಕಬಲ್ಲ ಉತ್ತಮ ಫೋನ್

ಯು.ಬಿ. ಪವನಜ
Published:
Updated:

ಸ್ಯಾಮ್‌ಸಂಗ್ ಎ6+ ಫೋನ್ ವಿಮರ್ಶೆ ಬರೆಯುವಾಗ ನಾನು ಒಂದು ವಿಷಯ ಬರೆದಿದ್ದೆ. ಅದೇನೆಂದರೆ ಸ್ಯಾಮ್‌ಸಂಗ್ ಫೋನ್‌ಗೆ ಅದರದೇ ಆದ ಭಕ್ತಗಣವಿದೆ, ಸ್ಯಾಮ್‌ಸಂಗ್ ಫೋನ್ ದುಬಾರಿ ಅದರೂ ಅದನ್ನೇ ಕೊಳ್ಳುವವರು, ಎಂದು. ಸ್ಯಾಮ್‌ಸಂಗ್‌ನವರ ಹಲವು ದುಬಾರಿ ಉತ್ಪನ್ನಗಳನ್ನು ಈ ಅಂಕಣದಲ್ಲಿ ವಿಮರ್ಶೆ ಮಾಡಲಾಗಿತ್ತು. ಸ್ಯಾಮ್‌ಸಂಗ್‌ನವರು ಕಡಿಮೆ ಅಥವಾ ಮಧ್ಯಮ ಬೆಲೆಯ ಫೋನ್‌ಗಳನ್ನೂ ತಯಾರಿಸುತ್ತಾರೆ. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಅಂತಹ ಒಂದು ಫೋನನ್ನು. ಅದುವೇ ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ 6 (Samsung Galaxy J6) ಎಂಬ ಫೋನನ್ನು.

ರಚನೆ ಮತ್ತು ವಿನ್ಯಾಸದಲ್ಲಿ ವಿಶೇಷವಿಲ್ಲ. ಚೆನ್ನಾಗಿದೆ ಎಂದು ಖಂಡಿತ ಹೇಳಬಹುದು. ನನಗೆ ವಿಮರ್ಶೆಗೆ ಬಂದುದು ಕಪ್ಪು ಬಣ್ಣದ್ದು. ಹಿಂಭಾಗದ ಕವಚ ತೆಗೆಯಲು ಬರುವುದಿಲ್ಲ. ಈ ಕವಚ ಸ್ವಲ್ಪ ದೊರಗಾಗಿದೆ. ಆದುದರಿಂದಾಗಿ ಅದು ಕೈಯಿಂದ ಜಾರಿ ಬೀಳುವ ಭಯವಿಲ್ಲ. ಬಲಭಾಗದಲ್ಲಿ ಆನ್/ಆಫ್ ಸ್ವಿಚ್, ಎಡಭಾಗದಲ್ಲಿ ವಾಲ್ಯೂಮ್ ಬಟನ್‌ಗಳಿವೆ. ಬಲಭಾಗದಲ್ಲಿ ವಾಲ್ಯೂಮ್ ಬಟನ್‌ನ ಮೇಲ್ಭಾಗದಲ್ಲಿ ಚಿಕ್ಕ ಕಿಂಡಿಯಲ್ಲಿ ಸ್ಪೀಕರ್ ಇದೆ. ಇದು ಸ್ಪೀಕರಿಗೆ ಖಂಡಿತವಾಗಿಯೂ ಹೇಳಿದ ಸ್ಥಳವಲ್ಲ. ವಿಡಿಯೊ ನೋಡುವಾಗ ಎಚ್ಚರವಹಿಸದಿದ್ದರೆ ಅದನ್ನು ಬೆರಳು ಮುಚ್ಚಬಹುದು. ಎಡಗಡೆ ಸಿಮ್ ಕಾರ್ಡ್ ಹಾಗೂ ಮೆಮೊರಿ ಕಾರ್ಡ್ ಹಾಕಲು ಹೊರಬರುವ ಟ್ರೇಗಳು ಇವೆ. ಇದರಲ್ಲಿ ಎರಡು ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕಬಹುದು. ಕೆಳಭಾಗದಲ್ಲಿ ಮೈಕ್ರೊಯುಎಸ್‌ಬಿ ಕಿಂಡಿ ಮತ್ತು 3.5 ಮಿ.ಮೀ. ಇಯರ್‌ಫೋನ್ ಕಿಂಡಿ ನೀಡಿದ್ದಾರೆ. ಹಿಂದೆ ಮಧ್ಯಭಾಗದಲ್ಲಿ ಸ್ವಲ್ಪ ಮೇಲೆ ಕ್ಯಾಮೆರಾ ಇದೆ. ಅದರ ಕೆಳಗೆ ಬೆರಳಚ್ಚು ಸ್ಕ್ಯಾನರ್ ಇದೆ. ಈ ಎಲ್ಲ ವಾಕ್ಯಗಳನ್ನು ಸ್ಯಾಮ್‌ಸಂಗ್ ಎ6+ ಬಗ್ಗೆ ಬರೆದಿದ್ದೆ. ಇಲ್ಲೂ ಅದೇ ವಿನ್ಯಾಸ ಮತ್ತು ರಚನೆ ಇದೆ.

ಇದರಲ್ಲಿರುವುದು ಸ್ಯಾಮ್‌ಸಂಗ್‌ನವರದೇ ಪ್ರೊಸೆಸರ್‌. ಅದು ಅತಿ ವೇಗದ್ದಲ್ಲ. ಸ್ವಲ್ಪ ಹಳೆಯದು ಕೂಡ. ಇದರ ಅಂಟುಟು ಬೆಂಚ್‌ಮಾರ್ಕ್ 62,559 ಇದೆ. ಅಂದರೆ ಮಧ್ಯಮ ವೇಗದ್ದು ಎನ್ನಬಹುದು. ಕೆಲವು ಆಟಗಳನ್ನು ತೃಪ್ತಿದಾಯಕವಾಗಿ ಆಡಬಹುದು. ಕಡಿಮೆ ಶಕ್ತಿಯನ್ನು ಬೇಡುವ ಮೂರು ಆಯಾಮದ ಆಟಗಳನ್ನೂ ಆಡಬಹುದು. ಆದರೆ ಅಧಿಕ ಶಕ್ತಿಯನ್ನು ಬೇಡುವ ಆಸ್ಫಾಲ್ಟ್ 8 ನಮೂನೆಯ ಆಟಗಳನ್ನು ಈ ಫೋನಿನಲ್ಲಿ ಆಡಿದರೆ ಒಂದು ಮಟ್ಟಿನ ತೃಪ್ತಿ ಮಾತ್ರ ದೊರೆಯಬಹುದು. ನೀಡುವ ಹಣಕ್ಕೆ ಹೋಲಿಸಿದರೆ ವೇಗ ತೃಪ್ತಿದಾಯಕ ಎನ್ನಬಹುದು.

13 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಕ್ಯಾಮೆರಾ ಇದೆ. ಜೊತೆಗೆ ಎಲ್‌ಇಡಿ ಫ್ಲಾಶ್ ಇದೆ. ಇದರ ಕ್ಯಾಮೆರಾದ ಗುಣಮಟ್ಟ ನೀಡುವ ಹಣಕ್ಕೆ ಹೋಲಿಸಿದರೆ ಒಂಡು ಮಟ್ಟಿಗೆ ತೃಪ್ತಿದಾಯಕವಾಗಿದೆ ಎನ್ನಬಹುದು. ಉತ್ತಮ ಬೆಳಕಿನಲ್ಲಿ ಉತ್ತಮ ಚಿತ್ರ ಮೂಡಿಬರುತ್ತದೆ. ಕಡಿಮೆ ಬೆಳಕಿನ ಫೋಟೊಗ್ರಫಿ ಮಾತ್ರ ಅಷ್ಟೊಂದು ತೃಪ್ತಿದಾಯಕವಾಗಿಲ್ಲ. ಇದು ಹೈಡೆಫಿನೇಷನ್‌ ವಿಡಿಯೊ ರೆಕಾರ್ಡಿಂಗ್ ಮಾಡಬಲ್ಲುದು. ಆದರೆ ಈ ಫೋನಿನಲ್ಲಿ ಅಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಇಲ್ಲ. ಅಂದರೆ ವಿಡಿಯೊ ಚಿತ್ರೀಕರಣ ಮಾಡುವಾಗ ಫೋನ್ ಅಲುಗಾಡಬಾರದು. ಸ್ವಂತೀ ಕ್ಯಾಮೆರಾಕ್ಕೆ ಕೂಡ ಫ್ಲಾಶ್ ಇದೆ. ಸ್ವಂತೀ ಫಲಿತಾಂಶ ಪರವಾಗಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ ನೀಡುವ ಹಣಕ್ಕೆ ಹೋಲಿಸಿದರೆ ಕ್ಯಾಮೆರಾಕ್ಕೆ ಪಾಸು ಮಾರ್ಕು ನೀಡಬಹುದು.

ಇದರ ಆಡಿಯೊ ಎಂಜಿನ್ ಕೂಡ ತೃಪ್ತಿದಾಯಕವಾಗಿದೆ. ಅಂದರೆ ತುಂಬ ಚೆನ್ನಾಗಿದೆ ಎಂದಲ್ಲ. ನೀಡುವ ಹಣಕ್ಕೆ ತಕ್ಕುದಾಗಿದೆ ಎನ್ನಬಹುದು. ಇಯರ್‌ಬಡ್ ಅಲ್ಲ ಇಯರ್‌ಫೋನ್ ನೀಡಿದ್ದಾರೆ. ಆಶ್ಚರ್ಯವೆಂದರೆ ಇದರ ಗುಣಮಟ್ಟ ಕೂಡ ತೃಪ್ತಿದಾಯಕವಾಗಿದೆ. ನಿಮ್ಮಲ್ಲಿ ಉತ್ತಮ ಹೆಡ್‌ಫೋನ್ ಇದ್ದಲ್ಲಿ ಅದನ್ನು ಜೋಡಿಸಿ ಉತ್ತಮ ಸಂಗೀತ ಆಲಿಸಬಹುದು. ಪರದೆಯ ಗುಣಮಟ್ಟವೂ ಚೆನ್ನಾಗಿದೆ. ಹೈಡೆಫಿನೇಷನ್‌ ವಿಡಿಯೊ ಪ್ಲೇ ಆಗುತ್ತದೆ. ಅದರೆ 4k ವಿಡಿಯೊ ಪ್ಲೇ ಆಗುವುದಿಲ್ಲ. ಒಂದು ಪ್ರಮುಖ ಕೊರತೆಯೆಂದರೆ ಪರದೆಯ ಪ್ರಖರತೆಯನ್ನು ಹೊರಗಿನ ಬೆಳಕಿಗನುಗುಣವಾಗಿ ಸ್ವಯಂಚಾಲಿತವಾಗಿ ಹೆಚ್ಚುಕಡಿಮೆ ಮಾಡುವ ಆಯ್ಕೆ ಇಲ್ಲ. ನಾವೇ ಹೆಚ್ಚು ಕಡಿಮೆ ಮಾಡಿಕೊಳ್ಳಬೇಕು. ಎಫ್‌ಎಂ ರೇಡಿಯೊ ನೀಡಿಲ್ಲ.

ಇದರ ಬೆರಳಚ್ಚು ಸ್ಕ್ಯಾನರ್ ತೃಪ್ತಿದಾಯಕವಾಗಿದೆ. ನಿಮ್ಮ ಬೆರಳಚ್ಚನ್ನೇ ನೀವು ಪಾಸ್‌ವರ್ಡ್ ಮಾಡಿಟ್ಟುಕೊಳ್ಳಬಹುದು. ಮುಖವನ್ನೇ ಪತ್ತೆ ಹಚ್ಚಿ ಅದನ್ನೇ ಪಾಸ್‌ವರ್ಡ್ ಮಾಡಿಟ್ಟುಕೊಳ್ಳುವ ಸವಲತ್ತೂ ಇದೆ. ಬೆರಳಚ್ಚು ಮತ್ತು ಮುಖಚಹರೆ ಪತ್ತೆಹಚ್ಚುವಿಕೆ ಎರಡೂ ತೃಪ್ತಿದಾಯಕವಾಗಿ ಕೆಲಸ ಮಾಡುತ್ತವೆ. ಕನ್ನಡದ ತೋರುವಿಕೆ ಸರಿಯಾಗಿದೆ ಹಾಗೂ ಯೂಸರ್ ಇಂಟರ್‌ಫೇಸ್ ಇದೆ. ಅವರದೇ ಕೀಲಿಮಣೆ ಅಷ್ಟೇನೂ ಚೆನ್ನಾಗಿಲ್ಲ. ನೀವು ಜಸ್ಟ್‌ಕನ್ನಡ ಅಥವಾ ನಿಮಗಿಷ್ಟವಾದ ಯಾವುದಾದರೂ ಕೀಲಿಮಣೆ ಹಾಕಿಕೊಂಡರೆ ಉತ್ತಮ.

ಸ್ಯಾಮ್‌ಸಂಗ್‌ನವರು ತಮ್ಮದೇ ಕೆಲವು ಉಪಯುಕ್ತ ಕಿರುತಂತ್ರಾಂಶಗಳನ್ನು (ಆ್ಯಪ್‌) ಸೇರಿಸಿದ್ದಾರೆ. ನಡೆಯುವ, ಮೋಟರ್ ಬೈಕ್‌ನಲ್ಲಿ ಸವಾರಿ ಮಾಡುತ್ತಿರುವ ಮೋಡ್‌ಗಳಿವೆ. ಇವು ನಿಜಕ್ಕೂ ಚೆನ್ನಾಗಿವೆ. ಬ್ಯಾಟರಿ ಬಾಳಿಕೆ ಚೆನ್ನಾಗಿದೆ.

ಒಟ್ಟಿನಲ್ಲಿ ಹೇಳುವುದಾದರೆ ನೀಡುವ ಹಣಕ್ಕೆ ತೃಪ್ತಿ ನೀಡುವ ಫೋನ್ ಎನ್ನಬಹುದು.

***

ವಾರದ ಆಪ್ (app)
ಬೈಕ್ ಸವಾರರಿಗೆ (Smart bike mode Auto Responder) 

ನೀವು ದ್ವಿಚಕ್ರ ವಾಹನ ಚಲಾಯಿಸುವವರೋ? ವಾಹನ ಚಲನೆಯಲ್ಲಿದ್ದಾಗ ಮಧ್ಯೆ ಮಧ್ಯೆ ಫೋನ್ ಕರೆ ಬಂದರೆ ಏನು ಮಾಡುತ್ತೀರಿ? ವಾಹನ ಚಾಲನೆ ಮಾಡುತ್ತ ಫೋನಿನಲ್ಲಿ ಮಾತನಾಡುವುದು ಒಳ್ಳೆಯದಲ್ಲ. ಕಾನೂನು ಪ್ರಕಾರ ಅಪರಾಧ ಕೂಡ. ಕರೆ ಮಾಡಿದವರಿಗೆ ‘ನಾನು ವಾಹನ ಚಲಾವಣೆಯಲ್ಲಿದ್ದೇನೆ’ ಎಂದು ತನ್ನಿಂದತಾನೆ ಒಂದು ಸಂದೇಶ ಕಳುಹಿಸುವಂತಿದ್ದರೆ ಉತ್ತಮವಲ್ಲವೇ? ಇಂತಹ ಒಂದು ಕಿರುತಂತ್ರಾಂಶ (ಆ್ಯಪ್‌) ಬೇಕಿದ್ದಲ್ಲಿ ಗೂಗಲ್‌ ಪ್ಲೇ ಸ್ಟೋರಿಗೆ ಭೇಟಿ ನೀಡಿ Smart bike mode Auto Responder ಎಂದು ಹುಡುಕಿ ಅಥವಾ http://bit.ly/gadgetloka344 ಜಾಲತಾಣಕ್ಕೆ ಭೇಟಿ ನೀಡಿ. ಅತಿ ಅಗತ್ಯದವರ ಕರೆ ಬಂದರೆ ಮಾತ್ರ ಸ್ವೀಕರಿಸುವ ವ್ಯವಸ್ಥೆಯೂ ಇದೆ. ನೀವು ಯಾರನ್ನು ನೋಡಲು ಹೋಗುತ್ತಿದ್ದೀರೋ ಅವರು ಕರೆ ಮಾಡಿದರೆ ಅದು ತಾನೇ ಇಂತಿಷ್ಟು ಹೊತ್ತಿನಲ್ಲಿ ಅಲ್ಲಿರುತ್ತೇನೆ ಎಂಬ ಸಂದೇಶವನ್ನೂ ಅವರಿಗೆ ಕಳುಹಿಸಬಲ್ಲುದು.

ಗ್ಯಾಜೆಟ್ ಪದ: Flight mode (Airplane mode) = ಏರ್‌ಪ್ಲೇನ್ ಮೋಡ್
ವಿಮಾನದಲ್ಲಿ ಪ್ರಯಾಣಿಸುವಾಗ ಫೋನ್ ಕರೆಗಳನ್ನು ಸ್ವೀಕರಿಸಲು ಮತ್ತು ಮಾಡಲು, ಸಂದೇಶ ಕಳುಹಿಸಲು ಮತ್ತು ಸ್ವೀಕರಿಸಲು ಹಾಗೂ ಮೊಬೈಲ್ ಡೇಟಾ ಅಸಾಧ್ಯವಾಗುವಂತೆ ಮಾಡುವ ಆಯ್ಕೆ. ಫೋನಿನ ಸಂಪರ್ಕ ಸಂವಹನ ವ್ಯವಸ್ಥೆಯು ವಿಮಾನದ ಸಂಪರ್ಕ ಸಂವಹನ ವ್ಯವಸ್ಥೆಗೆ ತೊಂದರೆಯನ್ನುಂಟುಮಾಡಬಾರದು ಎಂದು ಈ ಆಯ್ಕೆಯನ್ನು ನೀಡಲಾಗಿದೆ.
*

ಗ್ಯಾಜೆಟ್ ಸುದ್ದಿ: ಝೆಬ್ರೋನಿಕ್ಸ್ ಪ್ರಿಸ್ಮ್ ಸ್ಪೀಕರ್
ಕಡಿಮೆ ಬೆಲೆಗೆ ಹಲವು ಎಲೆಕ್ಟ್ರಾನಿಕ್ ಸಾಧನಗಳನ್ನು ನೀಡುತ್ತಿರುವ ಝೆಬ್ರೋನಿಕ್ಸ್ ಕಂಪನಿ ಪ್ರಿಸ್ಮ್ ಹೆಸರಿನಲ್ಲಿ ನಿಸ್ತಂತು (Wireless) ಸ್ಪೀಕರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದನ್ನು ಎಲ್‌ಇಡಿ ದೀಪದಂತೆ ವಿನ್ಯಾಸ ಮಾಡಲಾಗಿದೆ. ಇದರಲ್ಲಿ ಸ್ಪರ್ಶದ ಮೂಲಕ ಕೆಲಸ ಮಾಡಿಸಬಹುದಾದ ಬಟನ್‌ಗಳಿವೆ. ಇದು ಮೊಬೈಲ್, ಟ್ಯಾಬ್ಲೆಟ್ ಅಥವಾ ಲ್ಯಾಪ್‌ಟಾಪ್ ಜೊತೆ ಬ್ಲೂಟೂತ್ ವಿಧಾನದಲ್ಲಿ ಸಂಪರ್ಕಗೊಳ್ಳುತ್ತದೆ. ಈ ಸ್ಪೀಕರಿನಲ್ಲಿ ಎಫ್‌ಎಂ ರೇಡಿಯೊ ಕೂಡ ಇದೆ. ಮೈಕ್ರೊಎಸ್‌ಡಿ ಮೆಮೊರಿ ಕಾರ್ಡಿನಿಂದ ಅಥವಾ ಆಕ್ಸಿಲಿಯರಿ ಕೇಬಲ್ ಮೂಲಕವೂ ಇದು ಕೆಲಸ ಮಾಡಬಲ್ಲುದು. ಈ ಸ್ಪೀಕರಿನ ಬೆಲೆ ₹ 2,499.

ಗ್ಯಾಜೆಟ್ ಸಲಹೆ
ಮಹೇಶ ಲೋಕೇಶಮೂರ್ತಿಯವರ ಪ್ರಶ್ನೆ: Mobile Encryption ಎಂದರೇನು? 

ಉ: ಅದನ್ನು ಕನ್ನಡದಲ್ಲಿ ಗೂಢಲಿಪೀಕರಣ ಎಂದು ಹೇಳಬಹುದು. ಮಾಹಿತಿಯನ್ನು ಇನ್ನೊಬ್ಬರು ಓದದಂತೆ ಗೂಢವಾಗಿ ಅದರ ಸಂಕೇತಗಳನ್ನು ಬದಲಿಸಿ ಸಂಗ್ರಹಿಸಿಡುವುದು ಹಾಗೂ ವರ್ಗಾವಣೆ ಮಾಡುವುದು. ಸ್ಮಾರ್ಟ್‌ಫೋನಿನಲ್ಲಿರುವ ಮಾಹಿತಿಗಳನ್ನು ಗೂಢಲಿಪೀಕರಿಸಿಟ್ಟರೆ ಅದು ಇನ್ನೊಬ್ಬರಿಗೆ ದೊರೆತರೂ ಅವರಿಗೆ ಅದರಲ್ಲಿರುವ ಮಾಹಿತಿಯನ್ನು ಅರ್ಥೈಸಿಕೊಳ್ಳಲಾಗುವುದಿಲ್ಲ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !