ಸೋಮವಾರ, ಸೆಪ್ಟೆಂಬರ್ 26, 2022
22 °C

ವೇದವ್ಯಾಸರ ಶಿವಪುರಾಣಸಾರ| ಶಿವನ ಒಲಿಸಲು ಹೊರಟ ಮನ್ಮಥ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ಮನ್ಮಥ, ‘ನನ್ನಲ್ಲಿ ಐದೇ ಐದು ಬಾಣಗಳಿವೆ. ಅವು ಹೂವಿನಿಂದ ಮಾಡಿದ ಬಾಣಗಳು. ನನ್ನಲ್ಲಿರುವ ಧನುಸ್ಸುಗಳು ಮೂರು ವಿಧವಾಗಿವೆ. ಅವೂ ಹೂವಿನಿಂದಲೇ ತಯಾರಿಸಲಾಗಿವೆ. ಮೌರ್ವಿ(ಧನುಸ್ಸಿನ ಹಗ್ಗ)ಯು ದುಂಬಿಗಳಿಂದ ಮಾಡಲಾಗಿದೆ. ನನ್ನ ಪತ್ನಿಯಾದ ರತಿಯೇ ನನ್ನ ಬಲವು. ವಸಂತನೇ ಮಂತ್ರಿಯು. ಚಂದ್ರನು ನನ್ನ ಮಿತ್ರನು. ಶೃಂಗಾರರಸವು ನನ್ನ ಸೇನಾಪತಿಯು. ಸುಂದರಿಯಾದ ಹಾವಭಾವಗಳು ನನ್ನ ಸೈನಿಕರು. ಹೀಗೆ ನಾನು ಐದು ವಿಧವಾಗಿ ಬಲವುಳ್ಳವನಾಗಿರುವೆ. ಈ ನನ್ನ ಬಲವೆಲ್ಲವೂ ಮೃದುವಾದುದಾಗಿದೆ. ನಾನೂ ಮೃದುವಾದವನು. ಯಾರು ಯಾವ ಕಾರ್ಯವನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಬಲ್ಲರು ಎಂಬುದನ್ನು ತಿಳಿದುಕೊಂಡು, ಅಂಥವನನ್ನು ಆ ಕಾರ್ಯದಲ್ಲಿ ನಿಯೋಗಿಸಬೇಕು. ಅದರಂತೆ ಈಗ ನನಗೆ ಯೋಗ್ಯವಾದ ಕಾರ್ಯವನ್ನು ನಿಯಮಿಸಲು ನೀನು ಯೋಚಿಸಿರುವೆ. ಅದೇನೆಂಬುದನ್ನು ನನಗೆ ಹೇಳು. ಅದನ್ನು ಶಿರಸ್ಸಾವಹಿಸಿ ಮಾಡುವೆ’ ಎಂದ.

ಮನ್ಮಥನ ಮಾತುಗಳನ್ನು ಕೇಳಿ ಇಂದ್ರನಿಗೆ ತುಂಬಾ ಸಂತೋಷವಾಯಿತು. ‘ಎಲೈ ಮನ್ಮಥನೆ, ನಾನು ಮನಸ್ಸಿನಲ್ಲಿ ಸಂಕಲ್ಪಿಸಿಕೊಂಡಿರುವ ಕಾರ್ಯವನ್ನು ಮಾಡಲು ನೀನೇ ಸಮರ್ಥ. ಯಾವುದನ್ನು ಮಾಡುವುದಕ್ಕಾಗಿ ನೀನು ಆತುರಗೊಂಡಿರುವೆಯೋ ಆ ಕಾರ್ಯ ಏನೆಂದು ಈಗ ಹೇಳುವೆ ಕೇಳು. ತಾರಕನೆಂಬ ಮಹಾದೈತ್ಯನು ಬ್ರಹ್ಮನಿಂದ ಅದ್ಭುತವಾದ ವರವೊಂದನ್ನು ಪಡೆದು ಎಲ್ಲರಿಗೂ ಅಜೇಯನಾಗಿರುವನು. ಎಲ್ಲರನ್ನೂ ಪೀಡಿಸುತ್ತಲಿರುವನು. ಆ ದೈತ್ಯನ ಅಟ್ಟಹಾಸದಿಂದ ಧರ್ಮಗಳೆಲ್ಲವೂ ನಷ್ಟವಾಗಿವೆ. ದೇವತೆಗಳು ಋಷಿಗಳು ಎಲ್ಲರೂ ದುಃಖಿತರಾಗಿರುವರು. ದೇವತೆಗಳೆಲ್ಲರೂ ಆ ದೈತ್ಯನೊಡನೆ ಶಕ್ತಿ ಮೀರಿ ಯುದ್ಧ ಮಾಡಿದರು. ಆದರೆ ಎಲ್ಲರ ಆಯುಧಗಳೂ ವ್ಯರ್ಥವಾದುವು. ವರುಣನ ಪಾಶವು ಭಗ್ನವಾಯಿತು. ವಿಷ್ಣು ಪ್ರಯೋಗಿಸಿದ ಸುದರ್ಶನ ಚಕ್ರ ಆ ದೈತ್ಯನ ಕತ್ತನ್ನ ಅಲಂಕರಿಸಿ ಅಲ್ಲಿಯೇ ಕುಳಿತುಬಿಟ್ಟಿತು. ಈಗ ಆ ದೈತ್ಯನನ್ನು ಸಂಹರಿಸಲು ಪರಮೇಶ್ವರನ ಕುಮಾರನಿಂದ ಮಾತ್ರ ಸಾಧ್ಯವಾಗುವುದೆಂದು ಬ್ರಹ್ಮ ಹೇಳಿದ್ದಾನೆ.

ತಾರಕಾಸುರ ವರವನ್ನು ಬೇಡುವಾಗ ಯಾರಿಂದಲೂ ತನಗೆ ಸಾವು ಬರಬಾರದೆಂದು ಕೇಳಿದ್ದ. ಇದಕ್ಕೆ ಬ್ರಹ್ಮ ಯಾರಿಂದಾದರೂ ನಿನಗೆ ಸಾವು ಬರಲೇ ಬೇಕು ಎಂದಾಗ, ಸತಿವಿಹೀನದಿಂದ ವೈರಾಗಿಯಾದ ಶಿವ ಮತ್ತೆಂದೂ ಮದುವೆಯಾಗಲಾರ ಅಂತ ಭಾವಿಸಿದ ತಾರಕ, ತನಗೆ ಶಿವನ ಪುತ್ರನ ಹೊರತು ಬೇರಾರಿಂದಲೂ ಸಾವು ಬಾರದಿರಲಿ ಎಂದು ಕೋರಿದ. ಇದಕ್ಕೆ ಬ್ರಹ್ಮ ಅಸ್ತು ಎಂದು ಹೇಳಿದ್ದಾನೆ. ಶಂಕರ ಹಿಮಾಲಯದಲ್ಲಿ ವಿರಾಗಿಯಾಗಿ ತಪಸ್ಸನ್ನ ಆಚರಿಸುತ್ತಿದ್ದಾನೆ. ಅವನು ವಿರಕ್ತಭಾವದಿಂದ ಮತ್ತೆ ಅನುರಕ್ತನಾಗುವಂತೆ ಮಾಡಬೇಕು. ಈ ಕಾರ್ಯ ನಿನ್ನಿಂದ ಮಾತ್ರ ಸಾಧ್ಯ. ಈಗ ಶಿವನ ಸಮೀಪದಲ್ಲೇ ಸತಿಯ ಪುನರಾವತಾರವಾದ ಪಾರ್ವತಿಯು ಶಂಕರನನ್ನು ಸೇವೆ ಮಾಡುತ್ತಿದ್ದಾಳೆ. ನಿನ್ನ ಮನ್ಮಥಲೀಲೆಯಿಂದ ಪಾರ್ವತಿಯಲ್ಲಿ ಶಿವನಿಗೆ ಪ್ರೀತಿ ಉಂಟಾಗುವಂತೆ ಮಾಡಬೇಕು. ಹಾಗೆ ಮಾಡಿದರೆ, ನೀನು ಕೃತಕೃತ್ಯನಾಗುವೆ. ಎಲ್ಲರ ದುಃಖವೂ ನಾಶವಾಗುವುದು. ಲೋಕದಲ್ಲಿ ನಿನ್ನ ಪ್ರತಾಪವು ಸ್ಥಿರವಾಗಿ ನಿಲ್ಲುವುದು’ ಎಂದ.

ಇಂದ್ರನ ಮಾತನ್ನು ಕೇಳಿದ ಮನ್ಮಥನ ಮನಸ್ಸು ಹಗುರವಾಯಿತು. ‘ಇಂದ್ರ! ಈ ಕಾರ್ಯ ನನಗೆ ಬಹಳ ಸರಳವಾದುದು. ನೀನು ನಿಶ್ಚಿಂತೆಯಿಂದಿರು’ ಎಂದ ಮನ್ಮಥ, ಪತ್ನಿ ರತಿ ಮತ್ತು ಗೆಳೆಯ ವಸಂತನೊಡನೆ ಪರಮೇಶ್ವರ ತಪಸ್ಸು ಮಾಡುತ್ತಿರುವಲ್ಲಿಗೆ ತೆರಳಿದ. ಇಲ್ಲಿಗೆ ಶ್ರೀಶಿವಮಹಾಪುರಾಣದಲ್ಲಿ ಪಾರ್ವತೀಖಂಡದ ಹದಿನೇಳನೆಯ ಅಧ್ಯಾಯ ಮುಗಿಯಿತು.  l

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು