ಸೋಮವಾರ, ಮಾರ್ಚ್ 27, 2023
32 °C
ಸರ್ಕಾರ ಉರುಳಿಸಿದವರು ‘ಕೈ’ಗೆ ಹಿತ, ರೌಡಿಶೀಟರ್‌ಗಳಿಗೆ ‘ಕೇಸರಿ’ ಪಥ

ಗತಿಬಿಂಬ ಅಂಕಣ | ಮತ ಮಾಟ: ಅಧಿಕಾರದ ಕಡೆ ಓಟ

ವೈ.ಗ.ಜಗದೀಶ್ Updated:

ಅಕ್ಷರ ಗಾತ್ರ : | |

Prajavani

ನಾಲ್ಕೂವರೆ ವರ್ಷಗಳ ಕಾಲ ಮತದಾರರ ಕಡೆ ಸುಳಿಯದಿದ್ದ, ಕೋವಿಡ್‌ನ ದುರಿತ ಕಾಲದಲ್ಲೂ ಮನೆಯೊಳಗೆ ಬಚ್ಚಿಟ್ಟುಕೊಂಡು ಕುಳಿತಿದ್ದ ಬಹುತೇಕ ರಾಜಕಾರಣಿಗಳಿಗೆ ದಿಢೀರನೆ ಜನರ ಮೇಲೆ ಮಮಕಾರ ಉಕ್ಕಲಾರಂಭಿಸಿದೆ. ಅಕ್ಕಿ–ಬೇಳೆ, ಸೀರೆ–ಟಿ.ವಿ, ಬೆಳ್ಳಿ ಗಣಪತಿ–ಚಿನ್ನದ ನತ್ತು... ಹೀಗೆಲ್ಲ ಆಮಿಷವೊಡ್ಡಿ ಮತ ಸೆಳೆಯುವ ಹುನ್ನಾರ ನಡೆಸಿದ್ದಾರೆ.

ಕರ್ನಾಟಕದ ಭವಿಷ್ಯ ಬರೆಯಲಿರುವ ಚುನಾವಣೆ ತಿಂಗಳೊಪ್ಪತ್ತಿನಲ್ಲಿ ಬರಲಿದೆ. ಮಳೆ ಬರುವ ಮುನ್ಸೂಚನೆ ಸಿಗುತ್ತಿದ್ದಂತೆ ನೆಲದಡಿಯಿಂದ ಪುಟಿದೆದ್ದು ಹಾರಿ, ಮನೆಯನ್ನೆಲ್ಲ ತುಂಬಿಕೊಳ್ಳುವ ಹಾತೆಗಳಂತೆ (ಮಳೆಹುಳು) ರಾಜಕಾರಣಿಗಳು ಮನೆಮನೆಗೆ ಮುಗಿಬೀಳುತ್ತಿದ್ದಾರೆ. ಇಳೆಗೆ ಮಳೆ ಸುರಿಯುತ್ತಿದ್ದಂತೆ ಮಾಯವಾಗುವ ಈ ಹಾತೆಗಳಂತೆ ಫಲಿತಾಂಶದ ಮರುದಿನವೇ ಪೇರಿ ಕೀಳುವ ಜಾಯಮಾನ ಚುನಾಯಿತ ಪ್ರತಿನಿಧಿಗಳದ್ದಾಗಿದೆ.

ಒಂದೂವರೆ ದಶಕದ ಹಿಂದೆ ಚುನಾವಣೆಗೆ ನಿಲ್ಲುತ್ತಿದ್ದವರು, ಜನರಿಗೆ ಸಲ್ಲುತ್ತಿದ್ದವರಲ್ಲಿ ಜನಪರ ಕಾಳಜಿ ಗುಲಗಂಜಿಯಷ್ಟಾದರೂ ಇರುತ್ತಿತ್ತು. ಯಾವುದಾದರೂ ಹೋರಾಟದ ಪರಂಪರೆಯೂ ಬೆನ್ನಿಗೆ ಇರುತ್ತಿತ್ತು. ತಾವು ಪ್ರತಿನಿಧಿಸುವ ಪಕ್ಷದ ಸಿದ್ಧಾಂತಕ್ಕೆ, ಆಶಯಕ್ಕೆ ದುಡಿಯುವ ಛಲವೂ ಇರುತ್ತಿತ್ತು. ಆದರೆ, ಈಚಿನ ದಿನಮಾನಗಳಲ್ಲಿ ಗೆಲ್ಲುವುದು, ಬಳಿಕ ಗೆದ್ದೆತ್ತಿನ ಬಾಲ ಹಿಡಿಯುವುದು ಮಾಮೂಲು ವರಸೆಯಾಗಿದೆ. ಗೆಲ್ಲುವವರೆಗೆ ಒಂದು ಪಕ್ಷ, ಗೆದ್ದ ಮೇಲೆ ಅಧಿಕಾರ ಹಿಡಿಯುವವರ ಪಕ್ಷ ಎಂಬುದು ಬಹುಪಾಲು ರಾಜಕಾರಣಿಗಳ ನಡೆಯಾಗಿದೆ. ರಾಷ್ಟ್ರೀಯವಾದ, ಪ್ರಖರ ಹಿಂದುತ್ವ ಪ್ರತಿಪಾದಿಸುವ ಬಿಜೆಪಿಯಾಗಲಿ, ಎಲ್ಲ ಪಕ್ಷಗಳನ್ನೂ ನುಂಗಿ ನೊಣೆಯುತ್ತಿದ್ದ ಕಾಂಗ್ರೆಸ್ ಆಗಲಿ, ಹಾರುವವರನ್ನು ಹಿಡಿದು ತುಂಬಿಕೊಳ್ಳುವ ಜೆಡಿಎಸ್‌ ಆಗಲಿ ಯಾರೊಬ್ಬರೂ ಇದಕ್ಕೆ ಹೊರತಲ್ಲ. ಬಿಜೆಪಿ ಇವತ್ತು ಅರ್ಧ ದೇಶದಲ್ಲಿ ಅಧಿಕಾರ ಹಿಡಿದಿದ್ದರೆ, ಕರ್ನಾಟಕದಲ್ಲಿ ಆಳ್ವಿಕೆ ನಡೆಸುತ್ತಿದ್ದರೆ ಅದು ತನ್ನ ಸ್ವಂತ ಬಲದ ಮೇಲಲ್ಲ, ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸಿನ ಪ್ರಭಾವಳಿಯಿಂದಲೂ ಅಲ್ಲ, ಅಮಿತ್ ಶಾ ಅವರ ‘ಚಾಣಕ್ಯ’ ನೀತಿಯ ಫಲವೂ ಅಲ್ಲ, ಅದು ಪಕ್ಷಾಂತರವೆಂಬ ಕುಟಿಲತೆಯ ಹಾದಿಯ ಗೆಲುವಷ್ಟೆ.

ಐದಾರು ತಿಂಗಳ ಹಿಂದೆ ತೀರಿಕೊಂಡ ಬಿಜೆಪಿ ಶಾಸಕ ಉಮೇಶ ಕತ್ತಿ ಅವರನ್ನು 2013ರ ಚುನಾವಣೆ ಹೊತ್ತಿನಲ್ಲಿ, ‘ಈ ಬಾರಿ ಯಾವ ಪಕ್ಷದಿಂದ ಸ್ಪರ್ಧೆ’ ಎಂದು ಕೇಳಿದಾಗ, ‘ಈಗ ನೋಡ್ರೀ, ನಾನು ಬಿಜೆಪಿಯಲ್ಲಿ ಇದೀನ್ರೀ. ಯಡಿಯೂರಪ್ಪನವರು ಕೆಜೆಪಿ ಕಟ್ಟಿದ್ದಾರೆ. ಯಡಿಯೂರಪ್ಪಗೂ ಜೈ ಅನ್ನಬಹುದು. ಕಾಂಗ್ರೆಸ್‌, ಜೆಡಿಎಸ್‌ ಪಕ್ಷದ ಪ್ರಚಾರದ ಸಿ.ಡಿಗಳೂ ಇವೆ. ಯಾವುದಾದರೂ ಸಿ.ಡಿ. ಹಾಕ್ಕೊಂಡು ಯಾವ ಪಕ್ಷದ ನಾಯಕರಿಗಾದರೂ ಜೈ ಅಂದ್ಕೊಂಡು ಚುನಾವಣೆಗೆ ಹೋಗುದ್ರೀ. ಯಾವ ಪಕ್ಷ ಆದ್ರೇನು... ’ ಎಂದು ನಗುತ್ತಲೇ ಹೇಳಿದ್ದರು.

ಚುನಾವಣೆ ಹತ್ತಿರವಾಗುತ್ತಿದ್ದಂತೆ, ಯಾವ ಪಕ್ಷದ ಪರ ಜನರ ಒಲವು ಇದೆ ಎಂಬ ವಾಸನೆಯನ್ನು ಗ್ರಹಿಸುವ ಶಕ್ತಿ ರಾಜಕಾರಣಿಗಳಿಗೆ ಇರುತ್ತದೆ. ಅದರ ಆಧಾರದ ಮೇಲೆ ಪಕ್ಷ ಬದಲಿಸುವ ಚಾಳಿಯನ್ನು ಅವರು ಅನುಸರಿಸುತ್ತಿದ್ದಾರೆ. ತಾವು ಇದ್ದ ಪಕ್ಷ ಟಿಕೆಟ್ ಕೊಡದೇ ಇದ್ದರೆ ಮತ್ತೊಂದು ಪಕ್ಷಕ್ಕೆ ಸಲೀಸಾಗಿ ಜಿಗಿಯುವ ಜಾಣ್ಮೆಯೂ ಅವರಿಗೆ ಕರಗತ. ಹಿಂದೆ ಬಿಜೆಪಿಯಲ್ಲಿದ್ದವರು ಈಗ ಕಾಂಗ್ರೆಸ್, ಕಾಂಗ್ರೆಸ್‌ನಿಂದ ಸ್ಪರ್ಧಿಸಿದವರು ಜೆಡಿಎಸ್‌, ಜೆಡಿಎಸ್‌ನಿಂದ ಗೆದ್ದವರು ಬಿಜೆಪಿ... ಹೀಗೆ, ವಿದೇಶಕ್ಕೆ ಹೋಗುವವರು ವಿಮಾನವನ್ನು ಬದಲಿಸುವಂತೆ ರಾಜಕಾರಣಿಗಳು ಪಕ್ಷ ಬದಲಿಸುವಲ್ಲಿ ನಿಸ್ಸೀಮರು. ಹಾಗಂತ ಇದು ಎಲ್ಲರಿಗೂ ಅನ್ವಯವಾಗದು.

2008ರಿಂದೀಚೆಗೆ ಕರ್ನಾಟಕದಲ್ಲಿ ಹೊಸದಾಗಿ ಶುರುವಾಗಿದ್ದು, ‘ಸರ್ಕಾರ ರಚನೆಗಾಗಿ ಆಪರೇಷನ್‌’. ನಂತರ ಇದನ್ನು ಇಡೀ ದೇಶಕ್ಕೆ ವಿಸ್ತರಿಸಿದ್ದು ಅಮಿತ್ ಶಾ ಮತ್ತು ಜೆ.ಪಿ.ನಡ್ಡಾ ಜೋಡಿ. ಆಶೀರ್ವಾದ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ. ಚುನಾವಣೆಗೆ ಮೊದಲು ಪಕ್ಷಾಂತರವಾದರೆ ಆ ಪಕ್ಷದ ಚಿಹ್ನೆಯಿಂದ ಸ್ಪರ್ಧಿಸಿದವರನ್ನು ಆಯ್ಕೆ ಮಾಡಬೇಕೇ ಎಂಬ ವಿವೇಚನಾಧಿಕಾರ ಮತದಾರರಿಗೆ ಇರುತ್ತದೆ. ಈಗಿನ ಹೊಸ ಪದ್ಧತಿ ಎಂದರೆ, ಫಲಿತಾಂಶದ ನಂತರ ಅಥವಾ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಶಾಸಕರನ್ನು ಸೆಳೆದು ಅಧಿಕಾರ ಹಿಡಿಯುವ ವಾಮಮಾರ್ಗ.

2018ರ ಚುನಾವಣೆಯಲ್ಲಿ ಯಾರಿಗೂ ಬಹುಮತ ಬಂದಿರಲಿಲ್ಲ. ಚಲಾವಣೆಯಾದ ಒಟ್ಟು ಮತಗಳ ಪೈಕಿ ಶೇ 38.04ರಷ್ಟು ಕಾಂಗ್ರೆಸ್‌, ಶೇ 36.22ರಷ್ಟು ಬಿಜೆಪಿ ಹಾಗೂ ಶೇ 18.36ರಷ್ಟನ್ನು ಜೆಡಿಎಸ್ ಪಡೆದಿದ್ದವು. ‘ಆಪರೇಷನ್ ಕಮಲ’ದ ತಜ್ಞರಾದ ಬಿ.ಎಸ್‌. ಯಡಿಯೂರಪ್ಪ ಅವರು, ಬಹುಮತ ಇಲ್ಲದಿದ್ದರೂ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದರು. ಆದರೆ, ಬಹುಮತ ಸಾಬೀತುಪಡಿಸಲು ಆಗಲಿಲ್ಲ. ಚುನಾವಣೆ ಹಾದಿ–ಬೀದಿ ರಂಪ ಮಾಡಿಕೊಂಡು ಕಚ್ಚಾಡಿಕೊಂಡು, ‘ಅಪ್ಪನಾಣೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲ್ಲ’ ಎಂದು ಅಬ್ಬರಿಸಿದ್ದ ಸಿದ್ದರಾಮಯ್ಯನವರು, ಕುಮಾರಸ್ವಾಮಿಯವರನ್ನೇ ಮುಖ್ಯಮಂತ್ರಿ ಮಾಡಲು ‘ಕೈಕಟ್ಟಿಕೊಂಡು’ ನಿಲ್ಲುವ ಪರಿಸ್ಥಿತಿಯನ್ನು ಕಾಂಗ್ರೆಸ್ ಹೈಕಮಾಂಡ್ ಸೃಷ್ಟಿಸಿಬಿಟ್ಟಿತ್ತು. ಅವಸರದ ಕೂಸು ಹೆಚ್ಚುಕಾಲ ಬಾಳಲಿಲ್ಲ.

ಸದ್ಯವೇ ನಡೆಯಲಿರುವ ಚುನಾವಣೆಯಲ್ಲಿ ಯಾರಿಗೆ ಅಧಿಕಾರ ಸಿಗುತ್ತದೆ ಎಂಬುದು ನಿಚ್ಚಳವಿಲ್ಲ. ಭವಿಷ್ಯತ್ತಿನ ಕುರ್ಚಿ ಯಾರ ಕೈಯಲ್ಲಿರುತ್ತದೆ ಅಥವಾ ‘ಆಪರೇಷನ್’ ಮಾಡುವಲ್ಲಿ ಯಾರು ಮೊದಲಾಗುತ್ತಾರೆ ಎಂಬ ಲೆಕ್ಕಾಚಾರದ ಮೇಲೆ ಅಲ್ಲಿಂದಿಲ್ಲಿಗೆ ನೆಗೆತವನ್ನು ಶಾಸಕರು ಹಾಗೂ ಆಕಾಂಕ್ಷಿಗಳು ಮಾಡುತ್ತಿದ್ದಾರೆ.

ಹಿಂದೆ ಅಧಿಕಾರದಲ್ಲಿದ್ದಾಗ ಕಚ್ಚಾಡಿಕೊಂಡು, ಬಾಯಿಗೆ ಬಂದಂತೆ ಬೈದಾಡಿಕೊಂಡವರು ಈಗ ‘ಅಪ್ಪುಗೆ’ಯ ರಾಜಕಾರಣ ಶುರು ಮಾಡಿಕೊಂಡಿದ್ದಾರೆ.

ಹಾಸನ ಜಿಲ್ಲೆ ರಾಜಕಾರಣದಲ್ಲಿ ಹಾವು–ಮುಂಗುಸಿಯಂತೆ ಆಡುತ್ತಿದ್ದವರು ಎಚ್.ಡಿ. ರೇವಣ್ಣ ಮತ್ತು ಎ. ಮಂಜು. ಕಾಂಗ್ರೆಸ್‌ ನೇತೃತ್ವದ ಸರ್ಕಾರದಲ್ಲಿ ಮಂಜು ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ, ದಿನವೂ ಇಬ್ಬರ ರಂಪಾಟ ನಡೆಯುತ್ತಿತ್ತು. 2019ರ ಚುನಾವಣೆಯಲ್ಲಿ ಬಿಜೆಪಿ ಸೇರಿದ ಮಂಜು, ಲೋಕಸಭೆಗೆ ಸ್ಪರ್ಧಿಸಿದರು. ರೇವಣ್ಣ ಅವರ ಪುತ್ರ ಪ್ರಜ್ವಲ್ ವಿರುದ್ಧ ಸೋತು, ಕೋರ್ಟ್ ಮೊರೆ ಹೋದರು. ಅದಿನ್ನೂ ವಿಚಾರಣೆ ಹಂತದಲ್ಲಿರುವಾಗಲೇ ಜೆಡಿಎಸ್‌ ಸೇರಿದ್ದಾರೆ ಮಂಜು.

ಜೆಡಿಎಸ್–ಕಾಂಗ್ರೆಸ್‌ ಮೈತ್ರಿ ಸರ್ಕಾರ ಉರುಳಿಸುವಲ್ಲಿನ ಪ್ರಧಾನ ಪಾತ್ರಧಾರಿಗಳಲ್ಲಿ ಒಬ್ಬರು ಮದ್ದೂರಿನ ಕದಲೂರು ಉದಯ್‌ ಗೌಡ. ಅದೇ, ಗೌಡರನ್ನು ಈಗ ಕಾಂಗ್ರೆಸ್ ಸೇರಿಸಿಕೊಂಡಿದೆ. ಹಾಗೆಯೇ, ಮೈತ್ರಿ ಸರ್ಕಾರ ಬೀಳಿಸುವುದಕ್ಕೆ ಜೆಡಿಎಸ್‌ಗೆ ಕೈಕೊಟ್ಟವರು ಈಗಿನ ಸಚಿವ ಕೆ.ಸಿ. ನಾರಾಯಣಗೌಡ. ಅವರೀಗ ಕಾಂಗ್ರೆಸ್ ಸೇರುವ ತಯಾರಿಯಲ್ಲಿದ್ದಾರೆ. ಹೀಗೆ, ಪಕ್ಷದ ಟಿಕೆಟ್‌ಗಾಗಿ ಅತ್ತಿಂದಿತ್ತ ಜಿಗಿನೆಗೆದಾಟ ಬಿರುಸುಗೊಂಡಿದೆ.

ಎಲ್ಲ ಕ್ಷೇತ್ರಗಳಲ್ಲೂ ಐದಾರು ಅಭ್ಯರ್ಥಿಗಳಿದ್ದಾರೆ ಎಂದು ಬಿಜೆಪಿ–ಕಾಂಗ್ರೆಸ್‌ ನಾಯಕರು ಹೇಳಿಕೊಳ್ಳುತ್ತಿದ್ದಾರೆ. ಚುನಾವಣೆ ಘೋಷಣೆ ದಿನ ಸಮೀಪಿಸುತ್ತಿದ್ದರೂ ಎರಡೂ ಪಕ್ಷಗಳಿಗೆ ಅಭ್ಯರ್ಥಿ ಪಟ್ಟಿ ಆಖೈರು ಮಾಡಲು ಸಾಧ್ಯವಾಗಿಲ್ಲ. ಯಾರು ಎಲ್ಲಿರುತ್ತಾರೆ, ಎಲ್ಲಿಗೆ ಹಾರುತ್ತಾರೆ ಎಂಬ ಸ್ಪಷ್ಟತೆ ಇಲ್ಲದೇ ನಾಯಕರು ಪರದಾಡುತ್ತಿದ್ದಾರೆ. ಟಿಕೆಟ್ ಘೋಷಿಸಿದರೆ, ಪ್ರಬಲ ಅಭ್ಯರ್ಥಿಯನ್ನು ಎದುರಾಳಿಗಳು ಸೆಳೆದುಕೊಂಡುಬಿಟ್ಟರೆ ಎಂಬ ಭಯವೂ ಇದ್ದಂತಿದೆ.

‌‘ಸುಸಂಸ್ಕೃತ’ರಿರುವ, ರಾಷ್ಟ್ರೀಯವಾದಿ ಸಿದ್ಧಾಂತವನ್ನು ನಂಬಿದ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿ, ಸೈಲೆಂಟ್ ಸುನಿಲ್, ಫೈಟರ್ ರವಿ ಅವರಂತಹ ರೌಡಿ ಶೀಟರ್‌ಗಳಿಗೆ ಮಣೆ ಹಾಕುತ್ತಿರುವುದು ಆ ಪಕ್ಷದ ನಿಷ್ಠರನ್ನೇ ಕಂಗೆಡಿಸಿದೆ. ಪ್ರಧಾನಿ ಮೋದಿಯವರು ಮಂಡ್ಯಕ್ಕೆ ಭೇಟಿ ನೀಡಿದಾಗ, ರೌಡಿಶೀಟರ್ ಫೈಟರ್ ರವಿಗೆ ಬಾಗಿ ನಮಸ್ಕರಿಸಿರುವುದಂತೂ ಆ ಪಕ್ಷದ ಪರ ಒಲವುಳ್ಳವರಲ್ಲೇ ನಾಚಿಕೆ ಹುಟ್ಟಿಸಿದೆ. ಫೈಟರ್ ರವಿ ಯಾರೆಂದು ಮೋದಿಯವರಿಗೆ ಗೊತ್ತಿರಲಿಲ್ಲ ಎಂಬುದು ಸರಿ. ಆದರೆ, ದೇಶ ಕಟ್ಟುವ ಪಕ್ಷವು ದ್ವೇಷವನ್ನು ಉಸಿರಾಡುವವರು, ಕೊಚ್ಚು–ಕೊಲ್ಲು ಎಂಬುವವರನ್ನು ಸೇರಿಸಿಕೊಂಡು ಮೆರೆಸಲು ಆರಂಭಿಸಿರುವುದಕ್ಕೆ ಸಂಘದ ಸಂಸ್ಥಾಪಕ ಕೆ.ಬಿ. ಹೆಡಗೇವಾರ್, ದೀನ ದಯಾಳ್‌ ಉಪಾಧ್ಯಾಯರಂತಹವರ ಆತ್ಮಗಳು ಎಷ್ಟು ವಿಲವಿಲ ಒದ್ದಾಡುತ್ತಿರಬಹುದು ಎಂಬ ಚರ್ಚೆ ಸಂಘದೊಳಗೆ ಶುರುವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು