ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗತಿಬಿಂಬ: ಕಾಂಗ್ರೆಸ್‌ಗೆ ಬೇಕಿದೆ ‘ಜೋಡೊ’ ಯಾತ್ರೆ

ಅಧಿಕಾರಕ್ಕಾಗಿ ಸಚಿವ ಬಣಗಳ ದಿಬ್ಬಣ, ನಾಡಿನ ಅಭಿವೃದ್ಧಿ ಗೌಣ
Published 15 ಜನವರಿ 2024, 20:33 IST
Last Updated 15 ಜನವರಿ 2024, 20:33 IST
ಅಕ್ಷರ ಗಾತ್ರ

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ‘ಒಟ್ಟಿಗೆ ನಡೆಯೋಣ; ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯೋಣ’ ಎಂಬ ಒಡಲ ತುಡಿತದ ಕರೆಯೊಂದಿಗೆ ದೇಶದುದ್ದಕ್ಕೂ ‘ಭಾರತ್ ಜೋಡೊ ಯಾತ್ರೆ’ ನಡೆಸಿದ್ದರು. ಹಿಂಸೆಯ ಕುದಿಯಲ್ಲಿ ಬೆಂದಿರುವ ಮಣಿಪುರದಿಂದ ‘ಭಾರತ್ ಜೋಡೊ ನ್ಯಾಯಯಾತ್ರೆ’ ಯನ್ನು ಸಂಕ್ರಾಂತಿಯ ಹಿಂದಿನ ದಿನವಷ್ಟೇ ಆರಂಭಿಸಿದ್ದಾರೆ. ಜೋಡೊ ಯಾತ್ರೆಯು ಭಾರತದ ನೆಲದಲ್ಲಿ ಶಾಂತಿ, ಸಹಿಷ್ಣುತೆ ಬಿತ್ತಿ ಸಹಬಾಳ್ವೆ ಕಟ್ಟಲು ಇತ್ತೀಚಿನ ವರ್ಷಗಳಲ್ಲಿ ನಡೆಸಿದ ಮಹಾಯಾನ ಆಗಿದೆ. ಅದರಿಂದ ಕಾಂಗ್ರೆಸ್‌ಗೆ ವೋಟು ಬರಲಿಲ್ಲವಾದರೂ, ಮನಸ್ಸುಗಳಲ್ಲಿ ಕೆರಳಿಸಲಾಗಿದ್ದ ಸುಡುಬೆಂಕಿ ಮುರುಟಿ, ಸಹಬಾಳ್ವೆ ನಡೆಸುವವರ ಹೃದಯದೊಳಗೆ ಪ್ರೀತಿಯ ಜಿನುಗುವಿಕೆಗೆ ಕಾರಣವಾಯಿತು.

ರಾಜ್ಯದಲ್ಲಿದ್ದ ಬಿಜೆಪಿ ನೇತೃತ್ವದ ಸರ್ಕಾರ ಒಂದೆಡೆ ಧರ್ಮ, ಜನಾಂಗದ ಮಧ್ಯೆ ದ್ವೇಷವನ್ನು ಬಿತ್ತಿ, ಅದನ್ನು ಹುರಿಗಟ್ಟಿಸುತ್ತಿದ್ದರೆ, ಮತ್ತೊಂದೆಡೆ, ಭ್ರಷ್ಟಾಚಾರವನ್ನೇ ಹಾಯಿದೋಣಿಯನ್ನಾಗಿ ಮಾಡಿಕೊಂಡಿತ್ತು. ಅದೇ ಹೊತ್ತಿನೊಳಗೆ ರಾಜ್ಯದಲ್ಲಿ ರಾಹುಲ್ ಪಾದಯಾತ್ರೆ ನಡೆಸಿದರು. ಬಿಜೆಪಿ ಆಡಳಿತವನ್ನು ನೋಡಿ ರೋಸಿಹೋಗಿದ್ದ ಜನ, 2023ರ ಮೇ ತಿಂಗಳಿನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದರು. ಚುನಾವಣೆ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ರಾಹುಲ್, ‘ಕಾಂಗ್ರೆಸ್ ಕಾರ್ಯಕರ್ತರು ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆದಿದ್ದಾರೆ. ಯಾವುದೇ ಜಾತಿ, ಧರ್ಮ ನೋಡದೆ ಎಲ್ಲರೊಂದಿಗೆ ಬೆರೆಯುತ್ತಾರೆ’ ಎಂದು ತಮ್ಮ ಪಕ್ಷದವರ ಭವಿಷ್ಯದ ನಡೆಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದರು.

ಕಾಂಗ್ರೆಸ್‌ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದು ಏಳು ತಿಂಗಳು ಕಳೆದುಹೋಯಿತು. ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ನಿತ್ಯವೂ ಸುದ್ದಿಗಳಾಗುತ್ತಿದ್ದ ಹಿಜಾಬ್, ಆಜಾನ್‌, ದೇವಸ್ಥಾನಗಳ ಆವರಣದಲ್ಲಿ ಅನ್ಯಧರ್ಮೀಯರು ಅಂಗಡಿ ತೆರೆಯಲು ವಿರೋಧ, ಶಿಕ್ಷಣದ ಕೇಸರೀಕರಣದಂತಹವು ಕಡಿಮೆಯಾಗಿವೆ. ಇದರ ಬದಲು, ಜನರ ಕಷ್ಟಗಳಿಗೆ ತುಸು ಆಸರೆಯಾಗುವ ‘ಗ್ಯಾರಂಟಿ’ಗಳ ಜೋಗುಳದ ಮಂದ್ರಸ್ವರ ಕಿವಿಗಾನಿಸು ತ್ತಿದೆ. ಅದೇ ಹೊತ್ತಿನೊಳಗೆ, ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ, ಸಾಮೂಹಿಕ ಅತ್ಯಾಚಾರ, ದಲಿತ ಸಮುದಾಯದವರಿಗೆ ದೇವಸ್ಥಾನ ಪ್ರವೇಶ ನಿಷೇಧ, ಹಲ್ಲೆ–ಬಹಿಷ್ಕಾರದಂತಹ ಅಮಾನವೀಯ ಪ್ರಕರಣಗಳೂ ಕಿವಿಗೆ ಅಪ್ಪಳಿಸುತ್ತಿವೆ. ಗ್ಯಾರಂಟಿಗಳ ಬೆನ್ನಿಗೇರಿ ರಾಜ್ಯವನ್ನು ಅಭಿವೃದ್ಧಿಯೆಡೆಗೆ ಮುನ್ನಡೆಸಬೇಕಾದ ಇತರ ಹಲವು ಯೋಜನೆಗಳು ಬಜೆಟ್ ಪುಸ್ತಕದ ಅಕ್ಷರದೊಳಗೆ ಅವಿತು ಕುಳಿತುಕೊಂಡಿವೆ. ಸಿದ್ದರಾಮಯ್ಯ ನೇತೃತ್ವದ ಎರಡನೇ ಅವಧಿಯ ಸರ್ಕಾರದ ‘ಮಧುಚಂದ್ರ’ದ ಅವಧಿಯು ಗ್ಯಾರಂಟಿಗಳ ಗುಂಗಿನೊಳಗೆ ಕಳೆದುಹೋಗಿದೆ. 

ಹಿಂದಿನ 40 ವರ್ಷಗಳಲ್ಲಿ ಕಾಣದೇ ಇರುವಂತಹ ಬರಗಾಲ ರಾಜ್ಯದ ಎಲ್ಲ ತಾಲ್ಲೂಕುಗಳನ್ನೂ ಆವರಿಸಿದೆ. ಬಿತ್ತಿದ ಬೀಜ ಮೊಳೆಯದೇ ಹಾಗೂಹೀಗೂ ಚಿಗುರಿದ್ದ ಗಿಡ ಬೆಳೆಯದೇ ರೈತ ಸಂಕುಲಕ್ಕೆ ದಿಗಿಲಾಗಿದೆ. ಮನುಷ್ಯರು, ಜಾನುವಾರುಗಳು ಕುಡಿಯುವ ನೀರಿಗೆ ಪರದಾಡುವಂತಹ ಸ್ಥಿತಿ ಇದೆ. ಅನೇಕ ಜಿಲ್ಲೆಗಳ ಜನ ಗುಳೆ ಹೊರಟಿದ್ದಾರೆ. ಜಿಲ್ಲೆಯಲ್ಲೇ ಮೊಕ್ಕಾಂ ಹೂಡಿ, ಬರ ಪರಿಹಾರ ಕಾರ್ಯಕ್ಕೆ ಅಧಿಕಾರಿಗಳನ್ನು ಚುರುಕುಗೊಳಿಸಿ, ಜನರ ನೋವಿಗೆ ಮಿಡಿಯಬೇಕಾದ ಸಚಿವರು ಮಾತ್ರ, ಇವೆಲ್ಲದರ ನೆದರೇ ಇಲ್ಲದಂತೆ ಇದ್ದಾರೆ. ಇಲ್ಲದ ಗಂಜಿಗೆ ಉಪ್ಪು ಕೊಡುವಂತೆ ಪ್ರತಿ ಎಕರೆಗೆ ₹ 2 ಸಾವಿರ ಪರಿಹಾರ ಘೋಷಿಸಿದ್ದರೂ ಅದನ್ನು ರೈತರ ಖಾತೆಗೆ ಹಾಕಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಬಹುತೇಕ ಸಚಿವರಿಗೆ ಈ ಯಾವುದೂ ಆದ್ಯತೆಯಾಗಿಲ್ಲ. ಮತ್ತೆ ಮೂರು ಉಪಮುಖ್ಯಮಂತ್ರಿ ಸ್ಥಾನ ಸೃಷ್ಟಿಗೆ ಬೇಡಿಕೆ, ವರ್ಗಾವಣೆ, ಹಿಂದಿನ ಸರ್ಕಾರದ ಅವಧಿಯಲ್ಲಿನ ಕಾಮಗಾರಿಗಳ ಬಿಲ್ ಪಾವತಿಗೆ ಕಮಿಷನ್‌ ಪಡೆಯುವುದರಲ್ಲೇ ಹೆಚ್ಚಿನ ಸಂಖ್ಯೆಯ ಸಚಿವರು ಮಗ್ನರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ್ಮ ಸಚಿವ ಸಂಪುಟದ ಮೇಲಿನ ಹಿಡಿತ ತಪ್ಪಿರುವುದಕ್ಕೆ ಬೇರೆ ಸಾಕ್ಷ್ಯ ಬೇಕಿಲ್ಲ. 

‘ಮೂರು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಪಕ್ಷದ ಮುಂದಿಲ್ಲ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪದೇಪದೇ ಹೇಳಿದ್ದಾರೆ. ಹಾಗಿದ್ದರೂ 15 ದಿನಗಳಿಗೊಮ್ಮೆ ಕೆಲವು ಸಚಿವರು ಈ ವಿಷಯವೇ ಚರ್ಚೆಯ ಮುಂಚೂಣಿಯಲ್ಲಿ ಇರುವಂತೆ ನೋಡಿಕೊಂಡಿದ್ದಾರೆ. ಎಐಸಿಸಿ ಅಧ್ಯಕ್ಷರ ಮಾತಿಗೆ ಕಿಮ್ಮತ್ತಿಲ್ಲ. ಕಾಂಗ್ರೆಸ್ ಪಕ್ಷದೊಳಗೆ ತಾಂಡವವಾಡುತ್ತಿರುವ ಅರಾಜಕತೆಗೆ ಇದಕ್ಕಿಂತ ಬೇರೆ ನಿದರ್ಶನ ಬೇಕಿಲ್ಲ. 

ಬಿಜೆಪಿಯಲ್ಲಿ ಬಣ ರಾಜಕೀಯವೇ ಮೇಲುಗೈ ಪಡೆದು, ಆಡಳಿತ ಯಂತ್ರ ಹದಗೆಡಲು ಕಾರಣವಾಗಿತ್ತು. ಕಾಂಗ್ರೆಸ್ ಅಧಿಕಾರದ ಅವಧಿಯಲ್ಲೂ ಅದು ಮುಂದು ವರಿದಿದೆ. ಬಿಜೆಪಿಯಲ್ಲಿ ಅಂದು ಮೂರು ಬಣಗಳಿದ್ದರೆ ಕಾಂಗ್ರೆಸ್‌ನಲ್ಲಿ ಐದಾರು ಬಣಗಳಿವೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಇಬ್ಬರೂ ಅಧಿಕಾರಕೇಂದ್ರ ತಮ್ಮ ಬಳಿಯೇ ಇರಬೇಕು ಎಂದು ಪೈಪೋಟಿಗೆ ಇಳಿದಿದ್ದಾರೆ. ಯಾರು ಯಾರನ್ನು ಕೆಡವುತ್ತಾರೆ, ಯಾರಿಗೆ ಯಾರು ಮರ್ಮದೇಟು ಕೊಡುತ್ತಾರೆ ಎಂಬುದನ್ನು ಕಾಲವೇ ಬಲ್ಲದು. ತಾವೊಬ್ಬರೇ ಉಪಮುಖ್ಯಮಂತ್ರಿಯಾಗಿ
ರಬೇಕು ಎಂದು ಪಟ್ಟು ಹಿಡಿದು, ಎರಡನೇ ಶಕ್ತಿಕೇಂದ್ರ ವಾಗಿ ತಮ್ಮ ಪ್ರಭಾವಳಿಯನ್ನು ಬೆಳೆಸಿಕೊಳ್ಳು
ತ್ತಿರುವ ಶಿವಕುಮಾರ್‌ ಅವರಿಗೆ ಎದಿರೇಟು ಕೊಡಲು ಮತ್ತೊಂದು ಬಣ ಸಜ್ಜಾಗಿದೆ. ಸಚಿವರಾದ ಸತೀಶ ಜಾರಕಿಹೊಳಿ, ಜಿ.ಪರಮೇಶ್ವರ, ಎಚ್.ಸಿ.ಮಹದೇವಪ್ಪ, ಕೆ.ಎನ್.ರಾಜಣ್ಣ ಈ ಬಣದ ಮುಂಚೂಣಿಯಲ್ಲಿದ್ದಾರೆ.

ಲೋಕಸಭೆ ಚುನಾವಣೆ ಬಳಿಕ ಮುಖ್ಯಮಂತ್ರಿಗಾದಿಗೆ ಹಟ ತೊಡಬಹುದಾದ ಶಿವಕುಮಾರ್ ಅವರನ್ನು ಕಟ್ಟಿಹಾಕಲು ಹೆಚ್ಚುವರಿ ಉಪಮುಖ್ಯಮಂತ್ರಿ ಸ್ಥಾನಗಳ ಸೃಷ್ಟಿಯ ಬೇಡಿಕೆಯನ್ನು ಮುನ್ನೆಲೆಗೆ ತರಲು ಆರಂಭದಲ್ಲಿ ಸಿದ್ದರಾಮಯ್ಯ ಅವರೇ ಕೆಲವರನ್ನು ಹುರಿದುಂಬಿಸಿದ್ದರು ಎಂಬ ಚರ್ಚೆ ಪಕ್ಷದ ವಲಯದಲ್ಲಿತ್ತು. ಆದರೆ, ಅದೀಗ ಅವರ ಕೈಮೀರಿ, ಮತ್ತೊಂದು ಬಲಿಷ್ಠ ಬಣದ ಸ್ವರೂಪ ಪಡೆಯುವತ್ತ ಹೊರಳಿದೆ. ಯಾರ ಉಸಾಬರಿಯೂ ಬೇಡವೆಂಬ ತಟಸ್ಥ ಬಣವೂ ಇದೆ.

ಬಿಜೆಪಿ ದುರಾಡಳಿತದ ಕಾರಣಕ್ಕೆ ಅನಾಯಾಸವಾಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌, 33 ಜನರಿಗೆ ಸಚಿವಗಿರಿ ಕೊಟ್ಟಿದೆ. ಇರುವ ಅಧಿಕಾರವನ್ನು ಜನಕಲ್ಯಾಣಕ್ಕೆ ಬಳಸಬೇಕಾದವರು, ಅದು ಸಾಲದು,  ಉಪಮುಖ್ಯ ಮಂತ್ರಿ ಸ್ಥಾನ ಬೇಕು ಎಂದು ಕ್ಯಾತೆ ತೆಗೆಯುತ್ತಾ ಕೂರುವುದು ಒಳ್ಳೆಯ ಬೆಳವಣಿಗೆಯಲ್ಲ. ಒಬ್ಬರ ಖಾತೆ ಯಲ್ಲಿ ಮತ್ತೊಬ್ಬರು ಕೈ–ಮೂಗು ತೂರಿಸುವುದು ಸರಿಯಾದುದಲ್ಲ. ಜನಹಿತವೇ ಮುಖ್ಯವಾಗಬೇಕು. ಕಾರ್ಯಕರ್ತರ ಬೆನ್ನಿಗೆ ನಿಲ್ಲಬೇಕು. ಸಚಿವರು ಅಧಿಕಾರದ ಪೈಪೋಟಿಗೆ ಬಿದ್ದಿರುವುದರಿಂದ ಅಭಿವೃದ್ಧಿ ಗೌಣವಾಗಿದೆ. ಸಚಿವರು ಕೈಗೆ ಸಿಗುವುದಿಲ್ಲ ಎಂದು ಅವರ ಪಕ್ಷದ ಶಾಸಕರೇ ತಿರುಗಿಬಿದ್ದಿದ್ದಾರೆ.

ಸಿದ್ದರಾಮಯ್ಯ ಅವರು ಜುಲೈನಲ್ಲಿ ₹ 3,27,747 ಕೋಟಿ ಮೊತ್ತದ ಹೊಸ ಬಜೆಟ್ ಮಂಡಿಸಿದ್ದರು. ಅದರಲ್ಲಿ ನೌಕರರ ವೇತನ, ಸಚಿವರಿಗೆ ಸವಲತ್ತು, ಆಡಳಿತ ವೆಚ್ಚ ಹಾಗೂ ವಿವಿಧ ಯೋಜನೆಗಳಿಗೆ ನೀಡಲೇಬೇಕಾದ ಬದ್ಧ ವೆಚ್ಚದ ಮೊತ್ತ ₹ 2,50,933 ಕೋಟಿಯಷ್ಟಿತ್ತು. ಅಭಿವೃದ್ಧಿ ಕಾಮಗಾರಿಗಳಿಗಾಗಿ ಬಂಡವಾಳ ವೆಚ್ಚದ ರೂಪದಲ್ಲಿ
₹ 54,374 ಕೋಟಿ ತೆಗೆದಿರಿಸಿದ್ದರು. ಅದರಲ್ಲಿ ಬಹುಪಾಲು ಖರ್ಚಾದಂತಿಲ್ಲ. ಗ್ಯಾರಂಟಿಗಳು, ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್‌ಗಳು ಹಸಿದವರು, ಅಬಲರಿಗೆ ರಕ್ತ ಮಾಂಸ ತುಂಬಲು, ಜೀವ ಉಳಿಸಿಕೊಳ್ಳಲು ಬೇಕು. ಇವಕ್ಕೆಲ್ಲ ನಿಯತವಾಗಿ ಆದಾಯ ಬಂದು ಬೊಕ್ಕಸ ತುಂಬಬೇಕಾದರೆ ನೀರಾವರಿ, ಮೂಲಸೌಕರ್ಯದಂತಹ ಅಭಿವೃದ್ಧಿ ಯೋಜನೆಗಳು ಜತೆಜತೆಗೆ ನಡೆಯಬೇಕು. ಆಗ ಮಾತ್ರ ನಾಡಿನ ಸಂಪತ್ತು ವೃದ್ಧಿಯಾದೀತು. ಈ ದಿಸೆಯಲ್ಲಿ ಯೋಚಿಸಿ ಕಾರ್ಯಪ್ರವೃತ್ತವಾಗದಿದ್ದರೆ, ಮುಂಬರುವ ವರ್ಷಗಳಲ್ಲಿ ಸಾಲವೊಂದನ್ನೇ ನೆಚ್ಚಿಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಬಹುದು. 

ಚುನಾವಣೆ ಸೋಲಿನ ನಂತರ ಮಲಗಿದ್ದ ಬಿಜೆಪಿ, ಬಿ.ವೈ.ವಿಜಯೇಂದ್ರ ರಾಜ್ಯ ಘಟಕದ ಅಧ್ಯಕ್ಷರಾದ ಬಳಿಕ ಮೈಕೊಡವಿ ಎದ್ದಿದೆ. 135 ಶಾಸಕ ಬಲದ ಕಾಂಗ್ರೆಸ್‌, ಬಣ ಜಗಳ, ಅಧಿಕಾರದ ಪೈಪೋಟಿಯಲ್ಲಿ ಬಿದ್ದು ಸೊರಗಿದೆ. ದೇಶದ ಜನಪದರನ್ನು ಜೋಡಿಸುವಲ್ಲಿ ತೊಡಗಿರುವ ರಾಹುಲ್ ಗಾಂಧಿ, ತಮ್ಮ ಪಕ್ಷದ ರಾಜ್ಯ ನಾಯಕರನ್ನು ಜೋಡಿಸುವ ಕೆಲಸಕ್ಕೆ ಕೈಹಾಕದಿದ್ದರೆ, ಲೋಕಸಭೆ ಬಳಿಕ ಮುಖ ಉಳಿಸಿಕೊಳ್ಳಲು ಅಧಿಕಾರಸ್ಥರು ಹೆಣಗಾಡಬೇಕಾದೀತು. ಕಾಂಗ್ರೆಸ್‌ನ ರಾಜ್ಯ ಘಟಕದ ಸದ್ಯದ ಸ್ಥಿತಿಗೆ ವಿಶೇಷ ಕನ್ನಡಿಯನ್ನೇನೂ ರಾಹುಲ್ ನೋಡಬೇಕಿಲ್ಲ, ಪಕ್ಷದ ನಾಯಕರ ಮುಖ ನೋಡಿದರೆ ಸಾಕು! 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT