ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಕೊಲೆ: ಒಂದಕ್ಕಷ್ಟೇ ‘ಮತ’ದ ಬಲೆ

ಬಿಜೆಪಿಗೆ ರಾಜಕೀಯ ಅಸ್ತ್ರವಾದ ನೇಹಾ ಪ್ರಕರಣ: ಮೀನಾಗೆ ಮೌನ?
Published 15 ಮೇ 2024, 19:48 IST
Last Updated 15 ಮೇ 2024, 19:48 IST
ಅಕ್ಷರ ಗಾತ್ರ

ಲೋಕಸಭೆಗೆ ಕರ್ನಾಟಕದಲ್ಲಿ ಮತದಾನ ನಡೆಯುವುದರ ಆಸುಪಾಸಿನೊಳಗೆ ಇಬ್ಬರು ಅಮಾಯಕ ಹೆಣ್ಣುಮಕ್ಕಳ ಬರ್ಬರ ಹತ್ಯೆ ನಡೆಯಿತು. ಕೊಲೆಗಳಿಗೆ ಕಾರಣ, ಕೃತ್ಯದ ಭೀಕರತೆ, ಕೊಲೆಗಡುಕರು ಮೆರೆದ ಕ್ರೌರ್ಯ ಎಲ್ಲದರಲ್ಲೂ ಸಾಮ್ಯ ಇದೆ. ಈ ಭೀಕರ ಹತ್ಯೆಗಳು ನಡೆದ ಬಗೆಯನ್ನು ತಿಳಿದರೆ ಎಂತಹವರ ಎದೆಯೂ ನಡುಗುತ್ತದೆ. ಹೆಣ್ಣು ಹೆತ್ತವರಿಗಂತೂ ರಾತ್ರಿಯೆಲ್ಲ ದುಃಸ್ವಪ್ನಗಳೇ ಕಾಡಿ ನೆಮ್ಮದಿಯನ್ನು ಕಸಿಯುತ್ತವೆ.

ಎರಡು ಹತ್ಯೆಗಳು ನೆನಪಿನಂಗಳದಿಂದ ಮರೆಗೆ ಸರಿಯುವ ಮುನ್ನವೇ ಹುಬ್ಬಳ್ಳಿಯಲ್ಲಿ ಇಂತಹುದೇ ಮತ್ತೊಂದು ಕೊಲೆ ನಡೆದಿದೆ. ಈ ಮೂರೂ ದುಷ್ಕೃತ್ಯಗಳ ಹಿಂದೆ ಇರುವುದು ಪ್ರೇಮವೇ.

ರಾಜ್ಯದಲ್ಲಿ ಮೊದಲ ಹಂತದ ಮತದಾನಕ್ಕೂ ಮೊದಲು, ಹುಬ್ಬಳ್ಳಿಯ ಕಾಂಗ್ರೆಸ್ ಮುಖಂಡ ನಿರಂಜನ ಹಿರೇಮಠ ಅವರ ಮಗಳು ನೇಹಾ ಹಿರೇಮಠ ಅವರನ್ನು ಕಾಲೇಜಿನ ಕ್ಯಾಂಪಸ್‌ನೊಳಗೆ ಫಯಾಜ್ ಎಂಬಾತ 14 ಬಾರಿ ಚುಚ್ಚಿ ಕೊಲೆಗೈದಿದ್ದ ಎನ್ನಲಾಗಿದ್ದು, ಹಿಂಸಾಕೃತ್ಯದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. ವಿದ್ಯುನ್ಮಾನ ಮಾಧ್ಯಮಗಳು ದಿನವಿಡೀ ವಿಡಿಯೊ ತುಣುಕುಗಳನ್ನು ಬಿತ್ತರಿಸಿ, ಉನ್ಮಾದದ ಅಲೆ ಎಬ್ಬಿಸಿದವು.

ಎರಡೂ ಹಂತದ ಮತದಾನ ಮುಗಿದ ಬೆನ್ನಲ್ಲೇ, ಕೊಡಗು ಜಿಲ್ಲೆಯ ಸೋಮವಾರಪೇಟೆಯ ಸೂರ್ಲಬ್ಬಿಯ 16 ವರ್ಷದ ವಿದ್ಯಾರ್ಥಿನಿ ಮೀನಾ ಮನೆಗೆ ನುಗ್ಗಿದ ಪ್ರಕಾಶ ಎಂಬಾತ, ಮೀನಾಳ ತಲೆಯನ್ನು ಕಡಿದು, ಅದನ್ನು ದಟ್ಟ ಕಾಡಿನ ಪೊದೆಯೊಳಗೆ ಬಚ್ಚಿಟ್ಟು ಪರಾರಿಯಾಗಿದ್ದ ಎಂದು ವರದಿಯಾಗಿದೆ.

ಹುಬ್ಬಳ್ಳಿಯ ವೀರಾಪುರ ಓಣಿಯ ಮೂರನೇ ಕ್ರಾಸ್ ನಿವಾಸಿ ಅಂಜಲಿ ಅಂಬಿಗೇರ ಅವರ ಮನೆಗೆ ನುಗ್ಗಿದ ಗಿರೀಶ ಸಾವಂತ ಎಂಬಾತ, ಅಂಜಲಿಯವರನ್ನು ಇರಿದು ಕೊಲೆ ಮಾಡಿದ ಆರೋಪಕ್ಕೆ ಒಳಗಾಗಿದ್ದಾನೆ.

ಮೂರೂ ಕೊಲೆಗಳಿಗೆ ‘ಪ್ರೇಮ ವೈಫಲ್ಯ ಅಥವಾ ಮದುವೆಗೆ ನಕಾರವೇ ಕಾರಣ’ ಎಂಬುದು ತನಿಖಾನಿರತ ಪೊಲೀಸರ ಹೇಳಿಕೆ. ನೇಹಾ ಹತ್ಯೆಗೀಡಾದ ಬಳಿಕ ಹರಿದಾಡಿದ ವಿಡಿಯೊಗಳು, ಇಬ್ಬರ ಪೋಷಕರ ಹೇಳಿಕೆಗಳೂ ಇದನ್ನೇ ಧ್ವನಿಸುತ್ತವೆ. ಮೀನಾ ಪ್ರಕರಣದ ಕತೆಯೂ ಹೀಗೆಯೇ ಇದೆ. ಮೀನಾ ಮತ್ತು ಕೊಲೆಗೈದ ಆರೋಪಿಗೆ ಮದುವೆ ನಿಶ್ಚಯವಾಗಿತ್ತು. ಮೀನಾಗೆ 18 ವರ್ಷ ತುಂಬದೇ ಇದ್ದುದರಿಂದ, ಬಾಲ್ಯವಿವಾಹ ತಡೆಗೆ ಮುಂದಾಗಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಮದುವೆ ನಡೆಯುವುದಕ್ಕೆ ತಡೆಯೊಡ್ಡಿದ್ದರು. ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ನಡೆದ ಸಭೆಯಲ್ಲಿ ಪ್ರಕಾಶ ಮುಚ್ಚಳಿಕೆ ಬರೆದುಕೊಟ್ಟಿದ್ದಲ್ಲದೆ, ಎರಡು ವರ್ಷ ಆಕೆಯನ್ನು ಓದಿಸಿ ಬಳಿಕ ಮದುವೆಯಾಗುವುದಕ್ಕೆ ಒಪ್ಪಿದ್ದ. ಮೀನಾಳ ಅಕ್ಕನೇ ಮದುವೆಗೆ ಅಡ್ಡಿಪಡಿಸಿದ್ದಳೆಂದು ಸಿಟ್ಟಾದ ಆತ, ಮೀನಾ ಮನೆಗೆ ಹೋಗಿ, ಕೈಗೆ ಸಿಕ್ಕಿದ್ದ ಮಚ್ಚಿನಿಂದ ಕೊಚ್ಚಿ ಕೊಂದ ಎನ್ನಲಾಗಿದೆ.

ಪರಸ್ಪರ ಪ್ರೀತಿಸುತ್ತಿದ್ದ ಅಂಜಲಿ ಮತ್ತು ಗಿರೀಶ ಅವರ ಮಧ್ಯೆ ವೈಮನಸ್ಸು ಉಂಟಾಗಲು ಕಾರಣ ಬೇರೆ ಇದ್ದಿರಬಹುದಾದರೂ ಕೊಲೆಗೆ ಕಾರಣವಾಗಿದ್ದು ಮಾತ್ರ ಪ್ರೇಮವೈಫಲ್ಯವೇ ಎಂದೂ ಹೇಳಲಾಗಿದೆ.

ಈ ಮೂರೂ ಕೊಲೆ ಪ್ರಕರಣಗಳ ಹಿಂದಿನ ಕಾರಣ ಒಂದೇ ಆದರೂ ಅವುಗಳಿಗೆ ರಾಜಕೀಯ, ಸಾಮಾಜಿಕ ವಲಯದಲ್ಲಿ ವ್ಯಕ್ತವಾದ ಪ್ರತಿಕ್ರಿಯೆ ಭಿನ್ನ. ಕೊಲೆಯಾದವರ ಜಾತಿ ಮತ್ತು ಕೊಲೆಗೈದವನ ಧರ್ಮದ ಆಧಾರದ ಮೇಲೆ ಕೊಲೆಯೊಂದು ದೇಶವ್ಯಾಪಿ ಪ್ರತಿಕ್ರಿಯೆಗೆ ಕಾರಣವಾಗುವುದು ಧರ್ಮಾಂಧತೆಯ ಅಮಲನ್ನು ತುಂಬಿಕೊಂಡ ನಾಡಿನಲ್ಲಿ ಸಹಜವೆಂಬಂತೆ ಆಗಿದೆ.

ಕಿತ್ತೂರು, ಕಲ್ಯಾಣ ಮತ್ತು ಮಧ್ಯ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳ ಮತದಾನಕ್ಕೆ ಮೊದಲು ನಡೆದ ನೇಹಾ ಕೊಲೆ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದರ ಬಗ್ಗೆ ಪ್ರತಿಯೊಬ್ಬರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ. ನೇಹಾ ಹಿರೇಮಠ ಅವರನ್ನು ಕೊಂದಾತ ಮುಸ್ಲಿಂ ಧರ್ಮದವನಲ್ಲದೆ, ಹಿಂದೂ ಆಗಿದ್ದರೆ ಯಾರೊಬ್ಬರೂ ಚಕಾರವನ್ನೇ ಎತ್ತುತ್ತಿರಲಿಲ್ಲ. ಚುನಾವಣೆ ಮುಗಿದ ಬಳಿಕ ಆಗಿದ್ದರೂ ಇಷ್ಟರಮಟ್ಟಿಗೆ ಅದು ದೇಶವ್ಯಾಪಿ ಸುದ್ದಿಯ ವಸ್ತುವೂ ಆಗುತ್ತಿರಲಿಲ್ಲ. ನೇಹಾ ಎಂಬ ಮುಗ್ಧ ಹೆಣ್ಣುಮಗಳನ್ನು ಹತ್ಯೆ ಮಾಡಿದ ಆರೋಪಿ ಫಯಾಜ್, ಮನುಷ್ಯನಂತೂ ಅಲ್ಲವೇ ಅಲ್ಲ; ಆತನೊಳಗಿನ ಮೃಗೀಯತೆ ಹಾಗೆ ಮಾಡಿಸಿರಬಹುದು. ಪ್ರಕಾಶ್ ಮತ್ತು ಗಿರೀಶ್ ಅವರಲ್ಲೂ ಅದೇ ಬಗೆಯ ಮೃಗೀಯತೆ ಇದ್ದಿರಬಹುದು.

ನೇಹಾ ಕೊಲೆಯಾಗುತ್ತಿದ್ದಂತೆಯೇ ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಲ್ಹಾದ ಜೋಶಿ, ಹಾವೇರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿಯ ಸಾಲು ಸಾಲು ಮುಖಂಡರು ಅವರ ಮನೆಗೆ ಧಾವಿಸಿದರು. ನೇಹಾ ಅವರ ಶೋಕತಪ್ತ ತಂದೆ–ತಾಯಿಯ ಜತೆ ನಿಂತು, ಧೈರ್ಯ ತುಂಬುವ ಕೆಲಸ ಮಾಡಬೇಕಾದುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಕೂಡ. ಆದರೆ, ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ವರ್ತನೆಗಳು ರಾಜಕೀಯಪ್ರೇರಿತ ಆಗಿದ್ದವೇ ವಿನಾ ಪ್ರೀತಿಯೆರೆದು ಬೆಳೆಸಿದ ಮಗಳನ್ನು ಕಳೆದುಕೊಂಡು ಶೋಕಿಸುತ್ತಿದ್ದ ಹೆತ್ತವರ ನೋವಿಗೆ ಮಿಡಿಯುವ ಪರಿಶುದ್ಧ ಕಾಳಜಿಯಂತೂ ಆಗಿರಲಿಲ್ಲ.

ಇದು ಅಷ್ಟಕ್ಕೇ ನಿಲ್ಲಲಿಲ್ಲ. ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರೂ ಇದನ್ನೇ ಪ್ರಸ್ತಾಪಿಸಿ, ಹೆಣ್ಣುಮಕ್ಕಳಿಗೆ ರಾಜ್ಯದಲ್ಲಿ ರಕ್ಷಣೆ ಇಲ್ಲ ಎಂದು ಅಬ್ಬರಿಸಿದ್ದಲ್ಲದೆ, ಹೊರ ರಾಜ್ಯಗಳ ಭಾಷಣದಲ್ಲೂ ಈ ಪ್ರಕರಣವನ್ನು ಬಳಸಿಕೊಂಡರು. ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡಲು ಕರ್ನಾಟಕ ಸರ್ಕಾರಕ್ಕೆ ಆಗದಿದ್ದರೆ ನಾವೇ ಮುಂದೆ ನಿಂತು ಕೊಡುತ್ತೇವೆ’ ಎಂದರು. ಮತ್ತೊಂದು ಹೆಜ್ಜೆ ಮುಂದೆ ಹೋದ ಜೋಶಿ–ಬೊಮ್ಮಾಯಿ, ‘ಇದರ ಹಿಂದೆ ದೊಡ್ಡ ಷಡ್ಯಂತ್ರ ಇದ್ದು, ಬೇರೆ ಬೇರೆ ಶಕ್ತಿಗಳು ಕೆಲಸ ಮಾಡಿವೆ’ ಎಂದು ಘೋಷಿಸಿದರು. ಪ್ರಲ್ಹಾದ ಜೋಶಿ, ಜಗದೀಶ ಶೆಟ್ಟರ್ ಸೇರಿದಂತೆ ಕಿತ್ತೂರು ಕರ್ನಾಟಕ ಭಾಗದ ಅನೇಕ ಬಿಜೆಪಿ ಅಭ್ಯರ್ಥಿಗಳಿಗೆ ನೇಹಾ ಕೊಲೆ ಪ್ರಕರಣ ಚುನಾವಣಾ ಅಸ್ತ್ರವಾಗಿ ಒದಗಿಬಂದಿತು.

ಕಾಂಗ್ರೆಸ್ಸಿನವರೇನೂ ಹಿಂದೆ ಬೀಳಲಿಲ್ಲ. ತಮ್ಮ ಮಗ ಮೃಣಾಲ್‌ ಸ್ಪರ್ಧೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಗೊತ್ತಾಗಿದ್ದೇ ತಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ, ನೇಹಾ ಕುಟುಂಬದವರನ್ನು ಭೇಟಿಯಾಗಿ, ತಮ್ಮ ಬೆಂಬಲ ಮೃಣಾಲ್‌ಗೆ ಎಂಬ ಹೇಳಿಕೆಯನ್ನೇ ಅವರಿಂದ ಕೊಡಿಸಿಬಿಟ್ಟರು.

ಕೊಡಗಿನ ಕೊಲೆ ಪ್ರಕರಣವೂ ಇದೇ ಮಾದರಿಯದು. ಆದರೆ, ಮೋದಿ–ಶಾ ಅವರಿರಲಿ, ರಾಜ್ಯದವರೇ ಆದ ಪ್ರಲ್ಹಾದ ಜೋಶಿ, ಬೊಮ್ಮಾಯಿ, ವಿಜಯೇಂದ್ರ, ಅಶೋಕ, ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿಯ ಯಾರೊಬ್ಬರೂ ತುಟಿ ಬಿಚ್ಚಲಿಲ್ಲ. ಈ ದೇಶ, ಈ ನಾಡಿನಲ್ಲಿ ಒಬ್ಬ ಹಿಂದೂವನ್ನು ಮತ್ತೊಬ್ಬ ಹಿಂದೂ ಕೊಲೆ ಮಾಡಿದರೆ ಅದು ಕೊಲೆಯೇ ಅಲ್ಲ, ಮುಸ್ಲಿಂ ವ್ಯಕ್ತಿಯೊಬ್ಬ ವ್ಯಕ್ತಿಗತ ಕಾರಣಗಳಿಗಾಗಿ ಹಿಂದೂ ವ್ಯಕ್ತಿಯ ಕೊಲೆ ಎಸಗಿದರೂ ಅದು ಘೋರಪಾತಕ. ಇಡೀ ಮುಸ್ಲಿಂ ಸಮುದಾಯವೇ ಅದರ ಹೊಣೆ ಹೊರಬೇಕು ಎಂಬಷ್ಟರ ಮಟ್ಟಿಗೆ ರಾಜಕೀಯ ವ್ಯಾಧಿಯನ್ನು ಹಬ್ಬಿಸಲಾಗುತ್ತದೆ.

ಈ ಬೆಳವಣಿಗೆಗಳ ಬೆನ್ನಲ್ಲೇ, ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಎಸಗಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯದ ವಿಡಿಯೊಗಳು ಹರಿದಾಡಿದವು. ಅದನ್ನು ಹಂಚಿದವರು, ಅದರಲ್ಲೂ ಮಹಿಳೆಯರ ಮುಖ ಮಸುಕುಗೊಳಿಸದೆ ಪೆನ್‌ಡ್ರೈವ್‌ಗಳು ಎಲ್ಲೆಂದರಲ್ಲಿ ಹರಿದಾಡುವಂತೆ ಮಾಡಿದವರು ಶಿಕ್ಷಾರ್ಹರು. ಆದರೆ, ಈ ಲೈಂಗಿಕ ದೌರ್ಜನ್ಯದಿಂದ ಜೀವನಪರ್ಯಂತ ಹಿಂಸೆ ಅನುಭವಿಸಬೇಕಾದ, ತಮ್ಮ ಕುಟುಂಬದವರು–ಮಕ್ಕಳಿಗೆ ಉತ್ತರ ಕೊಡಲಾಗದ ಅಸಹಾಯಕ ಸ್ಥಿತಿಯಲ್ಲಿರುವ ಸಂತ್ರಸ್ತೆಯರಲ್ಲಿ ಬಹುಸಂಖ್ಯಾತರು ಹಿಂದೂಗಳೇ. ನೇಹಾ ಕೊಲೆ ಪ್ರಕರಣದಷ್ಟೇ ಬರ್ಬರವಾಗಿದೆ ಈ ‘ಲೈಂಗಿಕ ಹಿಂಸಾಕಾಂಡ’. ಅದನ್ನು ಖಂಡಿಸುವುದು ಹೋಗಲಿ, ಸಂತ್ರಸ್ತೆಯರಿಗೆ ನ್ಯಾಯ ದೊರಕಿಸುವ ದಿಸೆಯಲ್ಲಿ ಧ್ವನಿ ಎತ್ತುವ ಕನಿಷ್ಠ ಮನುಷ್ಯತ್ವವನ್ನೂ ನಮ್ಮ ರಾಜಕೀಯ ನಾಯಕರು ತೋರಿಸಲಿಲ್ಲ; ರಾಜಕೀಯ ಎಂಬುದು ಇಲ್ಲಿಗೆ ಬಂದು ನಿಂತಿದೆ!

ಕೊನೆಯದಾಗಿ; ಜೋಶಿ ಮತ್ತು ಶೆಟ್ಟರ್ ಅವರ ಗೆಲುವು–ಸೋಲು ಮತದಾರರ ತೀರ್ಮಾನ. ‘ಕೆಲವೊಂದು ಕೊಲೆಗಳು ಹೇಗೆ ರಾಜಕೀಯವಾಗಿ ಅನುಕೂಲ ಮಾಡಿಕೊಡುತ್ತವೆ ನೋಡಿ. ನೇಹಾ ಕೊಲೆ ಪ್ರಕರಣವನ್ನೂ ಕೆಲವರು ಚುನಾವಣೆಗೆ ಪೂರಕವಾಗಿ ಬಳಸಿಕೊಂಡರು. ಚುನಾವಣೆಯಲ್ಲಿ ಶೆಟ್ಟರ್, ಜೋಶಿ ಗೆದ್ದರೆ ಮೊದಲು ಫಯಾಜ್ ಎಲ್ಲಿದ್ದಾನೆ ಎಂದು ಹುಡುಕಿಕೊಂಡು ಹೋಗಿ ಸನ್ಮಾನ ಮಾಡಬೇಕಾಗುತ್ತದೆ. ಅದಂತೂ ಸತ್ಯ’ ಎಂದು ಬಿಜೆಪಿಯ ಪ್ರಭಾವಿ ನಾಯಕರೊಬ್ಬರು ಹೇಳಿದ್ದುಂಟು. ಅಲ್ಲಿಗೆ ಅಸಲು ವಿಷಯ ಏನೆಂದು ಅರ್ಥವಾಯಿತಷ್ಟೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT