ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವಿಎಂಗಳ ಬಗ್ಗೆ ಸುಳ್ಳು ವರದಿ ಪ್ರಕಟಿಸಿದರೆ ಕ್ರಮ

Last Updated 28 ಫೆಬ್ರುವರಿ 2018, 20:15 IST
ಅಕ್ಷರ ಗಾತ್ರ

ಬೆಂಗಳೂರು: ಬೇರೆ ರಾಜ್ಯಗಳಿಂದ ತರಿಸುತ್ತಿರುವ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಕುರಿತು ಆಧಾರ ರಹಿತ, ಕಪೋಲಕಲ್ಪಿತ ಸುದ್ದಿಗಳನ್ನು ಪ್ರಕಟಿಸಿದರೆ ಕ್ರಮ ಜರುಗಿಸುವುದಾಗಿ ಕೇಂದ್ರ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದರು.

ಇವಿಎಂಗಳ ಸಾಗಣೆ ಮತ್ತು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಹಸ್ತಾಂತರಿಸುವ ಪ್ರಕ್ರಿಯೆ ಬಗ್ಗೆ ಕನಿಷ್ಠ ಅರಿವು ಇಲ್ಲದೆ, ಒಂದೆರಡು ಮಾಧ್ಯಮಗಳು ಆಯೋಗದ ವಿರುದ್ಧ ಆರೋಪ ಮಾಡುವ ಧಾಟಿಯಲ್ಲಿ ವರದಿಗಳು ಪ್ರಸಾರ ಮಾಡಿವೆ. ಇದರ ವಿರುದ್ಧ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ದಾಖಲಿಸಲು ಅವಕಾಶ ಇದೆ ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಕೆಲವು ರಾಜಕೀಯ ಪಕ್ಷಗಳ ನಾಯಕರು ಇಂತಹ ಆಪಾದನೆ ಮಾಡುತ್ತಿರುವುದರ ಬಗ್ಗೆ ಅವರ ಗಮನ ಸೆಳೆದಾಗ, ರಾಜಕೀಯ ಪಕ್ಷಗಳು ಮಾಡಿದ ಟೀಕೆಗಳು ಮತ್ತು ಆರೋಪಗಳನ್ನು ವರದಿ ಮಾಡುವುದರಲ್ಲಿ ತಪ್ಪಿಲ್ಲ. ಆದರೆ, ತಾವೇ ನೋಡಿದಂತೆ ಭಾವಿಸಿ ದೃಶ್ಯ ಮಾಧ್ಯಮಗಳು ಕಾರ್ಯಕ್ರಮ ಪ್ರಸಾರ ಮಾಡುವುದು ಸರಿಯಲ್ಲ. ಚುನಾವಣಾ ಆಯೋಗವು ಕಾನೂನಿಗೆ ಬದ್ಧವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.

ಶೇ.85 ರಷ್ಟು ಹೊಸ ಇವಿಎಂ ಬಳಕೆ:

ಈ ಚುನಾವಣೆಯಲ್ಲಿ ಶೇ. 85 ರಷ್ಟು ಹೊಸ ವಿವಿಪ್ಯಾಟ್‌ (ಮತ ಖಾತರಿ ಚೀಟಿ) ಒಳಗೊಂಡ ಇವಿಎಂಗಳನ್ನು ಬಳಸಲಾಗುತ್ತದೆ. ಇವುಗಳನ್ನು ಬೆಂಗಳೂರಿನ ಬಿಇಎಲ್‌ ಸಂಸ್ಥೆಯಲ್ಲಿ ತಯಾರಿಸಲಾಗಿದೆ ಎಂದು ಸಂಜೀವ್‌ ಕುಮಾರ್‌ ತಿಳಿಸಿದರು.

ರಾಜ್ಯಕ್ಕೆ ಒಟ್ಟು 73,700 ವಿವಿಪ್ಯಾಟ್‌ಗಳು ಅಗತ್ಯವಿದೆ. ಇದರಲ್ಲಿ 60,700 ಹೊಸ ವಿವಿಪ್ಯಾಟ್‌ಗಳನ್ನು ಬಿಇಎಲ್‌ ತಯಾರಿಸಿ ಕೊಟ್ಟಿದೆ. 13,000 ಗುಜರಾತ್‌ನಿಂದ ತರಿಸಲಾಗಿದೆ. ಅಲ್ಲದೆ, ಬ್ಯಾಲೆಟ್‌ ಯುನಿಟ್‌ ಮತ್ತು ಕಂಟ್ರೋಲ್‌ ಯುನಿಟ್‌ಗಳನ್ನು ಬಿಇಎಲ್‌ ಅಲ್ಲದೆ, ಗುಜರಾತ್‌, ಜಾರ್ಖಂಡ್‌, ಮಹಾರಾಷ್ಟ್ರ, ತಮಿಳುನಾಡು ಮತ್ತು ಉತ್ತರ ಪ್ರದೇಶದಿಂದ ತರಿಸಲಾಗುತ್ತಿದೆ. ಈಗಾಗಲೇ ಆರರಿಂದ ಏಳು ಜಿಲ್ಲೆಗಳಲ್ಲಿ ಇವಿಎಂಗಳ ಕಾರ್ಯಕ್ಷಮತೆಯ ಮೊದಲ ಹಂತದ ಪರಿಶೀಲನೆ ಆರಂಭಿಸಲಾಗಿದೆ. ಈ ಕಾರ್ಯ ಮಾರ್ಚ್‌ 15 ರವರೆಗೆ ನಡೆಯುತ್ತದೆ ಎಂದರು.

ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು ರಾಜ್ಯವಾರು ಹಂಚಿಕೆ ಮಾಡುವ ಪದ್ಧತಿ ಇಲ್ಲ. ದೇಶದಲ್ಲಿ ಲಭ್ಯವಿರುವ ಮತ ಯಂತ್ರಗಳನ್ನೇ ಹಂಚಿಕೆ ಮಾಡಲಾಗುತ್ತದೆ. ಚುನಾವಣೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರೆ, ಅಂತಹ ಮತ ಯಂತ್ರಗಳನ್ನು ಬೇರೆ ರಾಜ್ಯಗಳಿಗೆ ಕಳುಹಿಸದೇ ಅದೇ ರಾಜ್ಯಗಳಲ್ಲಿ ಉಳಿಸಿಕೊಳ್ಳಲಾಗುತ್ತದೆ ಎಂದರು.

ಶೇ.25 ರಷ್ಟು ಹೆಚ್ಚು ಸಿಬ್ಬಂದಿ:

ಎಲ್ಲ ಮತಗಟ್ಟೆಗಳಲ್ಲೂ ವಿವಿಪ್ಯಾಟ್‌ ಬಳಸುವುದರಿಂದ ಹೆಚ್ಚಿನ ಸಿಬ್ಬಂದಿ ಬೇಕಾಗುತ್ತಾರೆ. ಪ್ರತಿ ಮತಗಟ್ಟೆಗೆ ಐವರು ಚುನಾವಣಾಧಿಕಾರಿಗಳಂತೆ ಶೇ. 25 ರಷ್ಟು ಹೆಚ್ಚು ಸಿವಿಲ್‌ ಸಿಬ್ಬಂದಿ ನಿಯೋಜಿಸಲು ಉದ್ದೇಶಿಸಲಾಗಿದೆ. ಆದ್ದರಿಂದ, ಈ ಬಾರಿ ಚುನಾವಣಾ ಕಾರ್ಯಕ್ಕೆ 3.25 ಲಕ್ಷ ಸಿಬ್ಬಂದಿ ಬೇಕಾಗುತ್ತಾರೆ. ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ 2.75 ಲಕ್ಷ ಸಿಬ್ಬಂದಿ ಬಳಸಿಕೊಳ್ಳಲಾಗಿತ್ತು ಎಂದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಎಂ3 ಇವಿಎಂ:

ಬಿಬಿಎಂಪಿ ವ್ಯಾಪ್ತಿಯ ಕೆಲವು ಕ್ಷೇತ್ರಗಳಲ್ಲಿ ಮೂರನೇ ತಲೆಮಾರಿನ ಎಂ3 ಇವಿಎಂಗಳನ್ನು ಬಳಸಲಾಗುತ್ತದೆ. ಈ ಯಂತ್ರಗಳ ಈಗ ಬಳಕೆಯಲ್ಲಿರುವ ಎಂ2 ಗಿಂತಲೂ ಹಗುರ ಮತ್ತು ತೆಳುವಾಗಿರುತ್ತವೆ ಎಂದು ಅವರು ತಿಳಿಸಿದರು.

ಸಂಶಯ ನಿವಾರಣೆಗೆ ಅವಕಾಶ:

ತನ್ನ ಮತ ಸರಿಯಾಗಿ ಚಲಾವಣೆ ಆಗಿದೆಯೇ ಎಂಬುದನ್ನು ವಿವಿಪ್ಯಾಟ್‌ ಮೂಲಕ ಖಾತರಿಪಡಿಸಿಕೊಳ್ಳಬಹುದು. ಚಲಾಯಿಸಿದ ಮತ ಸರಿಯಾಗಿದೆಯೇ ಎಂಬುದನ್ನು ಏಳು ಸೆಕೆಂಡುಗಳಲ್ಲಿ ಚೀಟಿಯಲ್ಲಿ ನೋಡಬಹುದು. ಅದರಲ್ಲೂ ದೋಷ ಇದೆ ಎಂಬ ಸಂಶಯ ಬಂದರೆ ಸೆಕ್ಷನ್‌ 49 ರ ಪ್ರಕಾರ ಅಹವಾಲು ಸಲ್ಲಿಸಬಹುದು. ದುರುದ್ದೇಶದಿಂದ ಅಹವಾಲು ಸಲ್ಲಿಸಿದರೆ ಅಂತಹ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ ಎಂದು ಸಂಜೀವ್‌ ಕುಮಾರ್‌ ತಿಳಿಸಿದರು.

ವೆಚ್ಚ ₹ 224 ಕೋಟಿ ಮೀರಲಿದೆ:

ಚುನಾವಣೆಯ ಎರಡು ದಿನಗಳಲ್ಲಿ 224 ಕ್ಷೇತ್ರಗಳಿಗೆ ಆಗುವ ಖರ್ಚು ₹224 ಕೋಟಿ ಮೀರಲಿದೆ ಎಂದು ಸಂಜೀವ್‌ ಕುಮಾರ್‌ ತಿಳಿಸಿದರು.

ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಪ್ರತಿಯೊಂದು ಕ್ಷೇತ್ರಕ್ಕೆ ಆಯೋಗಕ್ಕೆ ಆದ ಖರ್ಚು–ವೆಚ್ಚ ತಲಾ ₹ 1.1 ಕೋಟಿ. ಈ ಬಾರಿ ಕೊಂಚ ಹೆಚ್ಚಾಗಬಹುದು. ಇಲ್ಲಿಯವರೆಗೆ ಚುನಾವಣೆ ಉದ್ದೇಶಕ್ಕಾಗಿ ₹ 30 ಕೋಟಿ ಖರ್ಚಾಗಿದೆ ಎಂದು ವಿವರಿಸಿದರು.

ಎಲ್ಲೆಲ್ಲಿಂದ ಎಷ್ಟು ಮತಯಂತ್ರ

––––––––––––––––

ಎಲ್ಲಿಂದ       ಯುನಿಟ್‌ಗಳು

ಬ್ಯಾಲೆಟ್‌ ಯುನಿಟ್‌  ಕಂಟ್ರೋಲ್‌ ಯುನಿಟ್‌  ವಿವಿಪ್ಯಾಟ್‌

ಬಿಇಎಲ್‌  2000   3000   60,700

ಗುಜರಾತ್‌ 27,000  20,000  13,000

ಜಾರ್ಖಂಡ್‌ 5000 3000

ಮಹಾರಾಷ್ಟ್ರ 0 6000

ತಮಿಳುನಾಡು 11,000 3000

ಉತ್ತರಪ್ರದೇಶ 40,650 31,700

––––––––––––––––––––––

ಒಟ್ಟ 85,650 66,700 73,700

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT