ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಶವ ಎಚ್. ಕೊರ್ಸೆ ಅಂಕಣ| ಕರುಳು ಹೇಳಬಲ್ಲದು ಆರೋಗ್ಯದ ಗುಟ್ಟು!

ಕರುಳಿನ ನರತಂತುಗಳ ಸಂಶೋಧನೆಯು ವೈದ್ಯಕೀಯ ಲೋಕದಲ್ಲಿ ಕ್ರಾಂತಿ ಮಾಡುತ್ತಿದೆ
Last Updated 9 ಸೆಪ್ಟೆಂಬರ್ 2022, 20:52 IST
ಅಕ್ಷರ ಗಾತ್ರ

ನಮ್ಮ ಜೀವಿತಾವಧಿಯ ನಂತರವೂ ಮಕ್ಕಳು- ಮೊಮ್ಮಕ್ಕಳಲ್ಲಿ ತನ್ನ ಅಸ್ತಿತ್ವ ತೋರುತ್ತಲೇ ಇರುವ ವಿಶಿಷ್ಟ ಜೈವಿಕ ರಚನೆಗಳೆಂದರೆ ವಂಶವಾಹಿಗಳು. ಅವುಗಳ ಸ್ವರೂಪ ಅಭ್ಯಸಿಸುವುದೇ ತಳಿಶಾಸ್ತ್ರ ಅಥವಾ ಅನುವಂಶಶಾಸ್ತ್ರದ ಉದ್ದೇಶ. ಬರೀ ಒಂದೂವರೆ ಶತಮಾನದ ಇತಿಹಾಸವಿರುವ ಈ ಜ್ಞಾನಶಾಖೆಯು ಬೆಳೆದುನಿಂತ ಪರಿಯೇ ವಿಸ್ಮಯಕಾರಿ.

ಡಾ. ಕೇಶವ ಎಚ್. ಕೊರ್ಸೆ
ಡಾ. ಕೇಶವ ಎಚ್. ಕೊರ್ಸೆ

ದೇಹದ ಪ್ರತೀ ಜೀವಕೋಶದ ಕೋಶಕೇಂದ್ರದಲ್ಲಿ ಇರುವ ವರ್ಣತಂತುಗಳಲ್ಲಿ ರೈಲುಹಳಿಗಳಂತೆ ಜೋಡಣೆಯಾಗಿರುವ ವಂಶವಾಹಿ ಅಥವಾ ಜೀನ್‌ಗಳನ್ನು ಗುರುತಿಸಿ, ಪ್ರತ್ಯೇಕಿಸಿ, ರಾಸಾಯನಿಕ ಸ್ವರೂಪ ಅರ್ಥೈಸಿ, ಅದರ ಕಾರ್ಯವನ್ನು ನಿಶ್ಚಯಿಸಲು, ಅಂತರರಾಷ್ಟ್ರೀಯ ವ್ಯಾಪ್ತಿಯ ಬೃಹತ್ ಸಂಶೋಧನಾ ಯೋಜನೆಯೊಂದನ್ನು ತೊಂಬತ್ತರ ದಶಕದಲ್ಲಿ ಕೈಗೊಳ್ಳಲಾಗಿತ್ತು. ವರ್ಣತಂತುಗಳನ್ನೆಲ್ಲ ಜಾಲಾಡಿ ‘ಮನುಷ್ಯನ ಸಂಪೂರ್ಣ ವಂಶವಾಹಿ ನಕ್ಷೆ’ಯನ್ನು ರಚಿಸಿದ ಈ ಯೋಜನೆಯು ಕಳೆದ ಜನವರಿಯಲ್ಲಿ ಅಂತಿಮಘಟ್ಟ ತಲುಪಿತು. ಮಾನವನ ಗುಣಾವಗುಣಗಳನ್ನೆಲ್ಲ ನಿರ್ಧರಿಸುವ ಸುಮಾರು ಇಪ್ಪತ್ತೈದು ಸಾವಿರ ವಂಶವಾಹಿಗಳ ಜಾತಕವನ್ನು ನಿಖರವಾಗಿ ತೆರೆದಿಟ್ಟ ಈ ಸಂಶೋಧನೆಯು ವಿಜ್ಞಾನದ ಮಹತ್ವದ ಮೈಲಿಗಲ್ಲೇ ಸರಿ.

ಇದರ ಜೊತೆಜೊತೆಯಲ್ಲೇ ಕಳೆದ ಒಂದೂವರೆ ದಶಕದಲ್ಲಿ ಜರುಗಿದ ಇನ್ನೊಂದು ಮಹತ್ವದ ‘ತಳಿನಕ್ಷೆ’ಯು ಬಹುಜನರಿಗೆ ತಿಳಿದಿರಲಾರದು. ಮಾನವ ದೇಹದ ಅಂಗಾಂಗಗಳನ್ನೇ ಆಶ್ರಯಿಸಿ ಕೋಟ್ಯಂತರ ಸೂಕ್ಷ್ಮಾಣುಜೀವಿಗಳು ಬದುಕಿರುವುದು ಇತ್ತೀಚಿನ ದಶಕಗಳಲ್ಲಿ ಅರಿವಿಗೆ ಬಂದಿತ್ತಷ್ಟೇ. ಅಮೆರಿಕದ ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಆಶ್ರಯದಲ್ಲಿ ನಡೆದ ವಿಸ್ತೃತ ಸಂಶೋಧನಾ ಯೋಜನೆಯೊಂದು, ಮನುಷ್ಯ ದೇಹದ ಸೂಕ್ಷ್ಮಾಣುಜೀವಿಗಳನ್ನೆಲ್ಲ ಹುಡುಕಿ, ಅವುಗಳ ವರ್ಣತಂತುಗಳಿಂದ ವಂಶವಾಹಿಗಳನ್ನು ಬೇರ್ಪಡಿಸಿ ನಕ್ಷೆ ರಚಿಸುವಲ್ಲಿ ಯಶಸ್ವಿಯಾಗಿದೆ. ಅಚ್ಚರಿಯ ಸಂಗತಿಯೆಂದರೆ, ಮಾನವ ದೇಹದಲ್ಲಿ ಆತನ ಜೀವಕೋಶಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಈ ಸೂಕ್ಷ್ಮಾಣುಜೀವಿಗಳಿವೆ. ಅಷ್ಟೇ ಅಲ್ಲ, ಆಶ್ರಯ ನೀಡಿದ ಮಾನವದೇಹದ ಸ್ವಂತ ವಂಶವಾಹಿ
ಗಳಿಗಿಂತ ಹಲವುಪಟ್ಟು ಅಧಿಕ ವಂಶವಾಹಿಗಳು ಈ ಸೂಕ್ಷ್ಮಾಣುಜೀವಿಗಳದ್ದಾಗಿವೆ! ವೈದ್ಯಕೀಯ ಲೋಕದಲ್ಲಿ ಸಂಚಲನ ಮೂಡಿಸಿರುವ ಸಂಶೋಧನೆಗಳಿವು.

ಹೀಗೆ ಅಸಂಖ್ಯ ಸೂಕ್ಷ್ಮಾಣುಜೀವಿಗಳನ್ನು ಹೊತ್ತಿರುವ ಮಾನವನ ಪ್ರಮುಖ ಅಂಗವೆಂದರೆ ಕರುಳು. ಇದನ್ನು ಆಳವಾಗಿ ಅರಿಯಲು ಪ್ರತ್ಯೇಕವಾದ ‘ಕರುಳು ಅಧ್ಯಯನಶಾಸ್ತ್ರ’ವೇ ಇಂದು ರೂಪುಗೊಂಡಿದೆ. ದೇಹದ ರಚನೆ, ಕಾರ್ಯವಿಧಾನ ಹಾಗೂ ಆರೋಗ್ಯ ನಿರ್ವಹಣೆಯಲ್ಲಿ ಕರುಳಿನ ಜೀವಿಗಳು ಹಾಗೂ ಅವುಗಳ ವಂಶವಾಹಿಗಳ ಪಾತ್ರದ ಅರಿವು ಹಲವು ಆಯಾಮಗಳಲ್ಲಿ ತೆರೆದುಕೊಳ್ಳುತ್ತಿದೆ. ಇದನ್ನು ಅರ್ಥೈಸಿಕೊಳ್ಳುವ ದಿಸೆಯಲ್ಲಿ, ಎರಡು ಮಹತ್ವದ ಅಂಶಗಳನ್ನು ಇಲ್ಲಿ ಗಮನಿಸಬಹುದು.

ಮೊದಲಿನದು, ಈಗಾಗಲೇ ಪ್ರಸ್ತಾಪಿಸಿದ ಕರುಳಿನ ಸೂಕ್ಷ್ಮಾಣುಜೀವಿಲೋಕದ ಅಗಾಧತೆ. ಈಗ ಲೆಕ್ಕಹಾಕಿರುವಂತೆ, ಕರುಳಿನಲ್ಲಿರುವ ಸೂಕ್ಷ್ಮಾಣುಜೀವಿಗಳುಹಲವು ಸಹಸ್ರಕೋಟಿಗಳಷ್ಟು! ಅವುಗಳಲ್ಲಿ ಶೇ 93.5ಕ್ಕೂ ಹೆಚ್ಚಿನವು ವಿವಿಧ ತೆರನ ಬ್ಯಾಕ್ಟೀರಿಯಾಗಳು. ಈವರೆಗೆ ಸುಮಾರು 12 ಗುಂಪುಗಳಿಗೆ ಸೇರಿದ 2,172 ಪ್ರಭೇದಗಳ ಬ್ಯಾಕ್ಟೀರಿಯಾಗಳನ್ನು ಗುರುತಿಸಲಾಗಿದೆ. ಇನ್ನೂ ಗುರುತಿಸಬೇಕಿರುವುದು ಅದೆಷ್ಟೋ? ಇವೆಲ್ಲ ಕರುಳಿನ ಜೀವಕೋಶಗಳೊಂದಿಗೆ ಸಾವಯವ ಸಂಬಂಧ ಬೆಸೆದು, ಪರಸ್ಪರ ಸಹಕರಿಸುತ್ತ ಬದುಕುತ್ತಿರುವ ಪರೋಪಕಾರಿಗಳು. ಅಂದರೆ, ನಮ್ಮ ಕರುಳಿನಲ್ಲಿ ‘ಸೂಕ್ಷ್ಮಾಣುಜೀವಿಗಳ ಗ್ಯಾಲಕ್ಸಿ’ ಎನ್ನಬಹುದಾದ ಮತ್ತೊಂದು ಜೀವಲೋಕವೇ ಇದೆ!

ಅವುಗಳ ಮಹತ್ವವಾದರೂ ಎಂಥದ್ದು? ರೋಗನಿರೋಧಕತೆ ಹೆಚ್ಚಿಸುವುದು, ವೈವಿಧ್ಯಮಯ ಪ್ರೋಟೀನ್- ವಿಟಮಿನ್ ಉತ್ಪಾದನೆ, ರೋಗಗಳನ್ನು ನಿಯಂತ್ರಿಸುವುದು, ಆಹಾರದ ಜೀರ್ಣಕ್ರಿಯೆ ಇತ್ಯಾದಿಗಳಲ್ಲೆಲ್ಲ ಅವುಗಳ ಪಾತ್ರವಿದೆ. ಅವುಗಳಿಗೆ ಧಕ್ಕೆಯಾದಾಗ, ಬೊಜ್ಜು, ಮಧುಮೇಹ, ಸಂಧಿವಾತ, ಹೆಪಟೈಟಿಸ್, ಕ್ಯಾನ್ಸರ್‌ನಂತಹ ಕಾಯಿಲೆಗಳಿಗೂ ಅವು ಕಾರಣವಾದಾವು. ಮಾನವನ ಹಲವಾರು ವಂಶವಾಹಿಗಳ ಗುಣ ಪ್ರಕಟವಾಗುವುದಕ್ಕೂ ಈ ಬ್ಯಾಕ್ಟೀರಿಯಾಗಳ ಸಹಾಯ ಬೇಕು. ಅಂದರೆ, ಪೂರ್ವಜರಿಂದ ನಮ್ಮ ವಂಶವಾಹಿಗಳನ್ನಷ್ಟೇ ಅಲ್ಲ, ಈ ವಿಶಿಷ್ಟ ಬ್ಯಾಕ್ಟೀರಿಯಾ ಲೋಕವನ್ನೂ ನಾವು ಬಳುವಳಿಯಾಗಿ ಪಡೆದಿದ್ದೇವೆ. ಮುಂದಿನ ತಲೆಮಾರಿನ ‘ಕರುಳಿನ ಕುಡಿ’ಗಳ ಭವಿಷ್ಯ ರೂಪಿಸುವಲ್ಲೂ ಅವುಗಳ ಕಾಣಿಕೆಯಿದೆ. ಹೀಗಾಗಿ, ‘ಕರುಳಿನ ಕರೆ’, ‘ಕರುಳಬಳ್ಳಿ ಸಂಬಂಧ’ ಇತ್ಯಾದಿ ಜನಪದರ ಮಾತುಗಳಿಗೆಲ್ಲ ಇದೀಗ ವಿಶೇಷ ಅರ್ಥ ಮೂಡುತ್ತಿದೆ ಎನ್ನಬೇಕು!

ಆರೋಗ್ಯಶಾಸ್ತ್ರದಲ್ಲಿ ಕರುಳಿನ ಸೂಕ್ತ ನಿರ್ವಹಣೆಗೆ ಮಹತ್ವ ಹೆಚ್ಚುತ್ತಿರುವುದು ಈ ಕಾರಣಕ್ಕಾಗಿ. ಆರೋಗ್ಯ ಕಾಪಾಡಿಕೊಳ್ಳುವುದೆಂದರೆ, ಕರುಳು ಹಾಗೂ ಕರುಳಿನ ಮಕ್ಕಳಂತಿರುವ ಬ್ಯಾಕ್ಟೀರಿಯಾ ಲೋಕವನ್ನು ಪೋಷಿಸುವುದೂ ಆಗಿದೆ. ಸಸ್ಯಜನ್ಯ ನಾರಿನಂಶ ಹಾಗೂ ಪೋಷಕಾಂಶಗಳು ಈ ಉಪಕಾರಿ ಬ್ಯಾಕ್ಟೀರಿಯಾಗಳ
ಪೋಷಣೆಗೆ ಅಗತ್ಯವಾದ್ದರಿಂದ, ಆಹಾರದಲ್ಲಿ ಕಾಳು-ಬೇಳೆ, ಬೇರು-ಸೊಪ್ಪುಗಳ ಮಹತ್ವ ಹೆಚ್ಚುತ್ತಿದೆ. ಕರುಳನ್ನು ಸೊಂಪಾಗಿಡಬಲ್ಲ ಮೂಲಿಕಾ ಕಷಾಯ, ಲೇಹ್ಯ, ರಸಗಳತ್ತ ಗಮನಹರಿಯುತ್ತಿದೆ. ಸೂಕ್ಷ್ಮಾಣುಜೀವಿ ಗಳನ್ನು ಪೊರೆಯಬಲ್ಲ ಈ ಬಗೆಯ ಸಸ್ಯಜನ್ಯ ‘ಪ್ರೀ-ಬಯೋಟಿಕ್’ಗಳನ್ನು ನೀಡಿಯೇ ರೋಗ ಗುಣಪಡಿಸುವ ಹೊಸ ಚಿಕಿತ್ಸಾ ಕ್ರಮಗಳು ವೈದ್ಯಕೀಯ ಕ್ಷೇತ್ರದಲ್ಲಿ ಪ್ರಚಲಿತವಾಗುತ್ತಿವೆ. ಜೊತೆಗೆ, ಮನುಷ್ಯನ ವಂಶವಾಹಿಗಳ ರಚನೆಯಲ್ಲೇ ಕೈಯಾಡಿಸಿ ರೋಗಗಳನ್ನೆಲ್ಲ ಗುಣಪಡಿಸಿಯೇವು ಎಂದು ಅತಿಶಯದ ತೀರ್ಮಾನಕ್ಕೆ ಬರುವುದರಲ್ಲಿದ್ದ ‘ಜೆನೆಟಿಕ್ ಎಂಜಿನಿಯರಿಂಗ್’ ಕ್ಷೇತ್ರಕ್ಕೆ, ಸಂಕೀರ್ಣವಾದ ಈ ಬ್ಯಾಕ್ಟೀರಿಯಾಲೋಕದ ಅರಿವು, ವಿವೇಕ ಮೂಡುತ್ತಿದೆ!

ಕರುಳಿನ ಕುರಿತು ಅರಿಯಲೇಬೇಕಾದ ಎರಡನೆಯ ಅಂಶವೆಂದರೆ, ಅದರಲ್ಲಿ ವಿಶೇಷವಾಗಿ ರೂಪುಗೊಂಡಿ
ರುವ ನರಮಂಡಲ. ಆಧುನಿಕ ಜೀವಶಾಸ್ತ್ರವು ಕಂಡುಕೊಳ್ಳುತ್ತಿರುವ ಕೌತುಕವಿದು. ಮಿದುಳಿನಲ್ಲಿ ‘ಕೇಂದ್ರ ನರಮಂಡಲ’ ಇರುವಂತೆ, ಕರುಳಿನ ಮೆದುವಾದ ಒಳಪದರಿನಲ್ಲಿ ಕೋಟ್ಯಂತರ ನರತಂತುಗಳ ಜಾಲ ಪಸರಿಸಿದೆ. ಅಂದರೆ, ಕರುಳಿಗೇ ವಿಶಿಷ್ಟವಾದ ನರಮಂಡಲವಿದೆ. ಸಂತಸ-ದುಃಖ, ಭಯ-ಆಯಾಸದಂತಹ ಭಾವಪ್ರಕೋಪದ ಸಂದರ್ಭಗಳಲ್ಲೆಲ್ಲ, ಮಿದುಳಿನಂತೆಯೇ ಕರುಳೂ ಮಿಡಿಯುವುದು ಈ ನರತಂತುಗಳಿಂದಾಗಿ. ಮನದಲ್ಲಿ ಭಾವನೆಗಳು ಚಿಮ್ಮಿದಾಗಲೆಲ್ಲ ‘ಕರುಳು ಕಿವುಚಿದಂತಾಗುವುದು’ ಅಥವಾ ‘ಹೊಟ್ಟೆಯಲ್ಲಿ ಪಾತರಗಿತ್ತಿ ಕುಣಿಯುವುದು’ ಸಹ ಇದಕ್ಕಾಗಿಯೇ. ಕರುಳನ್ನು ‘ಎರಡನೇ ಮಿದುಳು’ ಎಂದು ಹೆಸರಿಸುವಷ್ಟು ಇದಕ್ಕೆ ಪ್ರಾಮುಖ್ಯ ಬರುತ್ತಿದ್ದು, ‘ಮಿದುಳು- ಕರುಳಿನ ಸಂಬಂಧ’ಗಳು ಪ್ರತ್ಯೇಕ ಅಧ್ಯಯನಶಾಸ್ತ್ರವಾಗಿ ರೂಪುಗೊಳ್ಳುತ್ತಿವೆ!

ಇದೆಲ್ಲದರ ಅರ್ಥವೇನು? ನಮ್ಮ ಆಲೋಚನೆ, ನಡವಳಿಕೆ ಹಾಗೂ ಭಾವಾವೇಶಗಳೆಲ್ಲ ಕರುಳಿನ ನರತಂತುಗಳ ಕಾರ್ಯಶೈಲಿಯ ಮೇಲೆ ಪರಿಣಾಮ ಬೀರುತ್ತವೆ. ಅಂತೆಯೇ, ಕರುಳಿನ ವಿದ್ಯಮಾನಗಳು ಸಹ ನಮ್ಮ ಯೋಚನಾಕ್ರಮಗಳನ್ನು ಪ್ರಭಾವಿಸುತ್ತವೆ. ಹೀಗಾಗಿ, ಮನೋದೈಹಿಕ ಕಾಯಿಲೆಗಳ ಚಿಕಿತ್ಸೆಗಳಲ್ಲಿ, ಮನದ ಪ್ರಶಾಂತತೆ ಹಾಗೂ ಕರುಳಿನ ಆರೋಗ್ಯ– ಇವೆರಡಕ್ಕೂ ಒಮ್ಮೆಲೇ ವಿಶೇಷ ಮಹತ್ವ ಬರುತ್ತಿದೆ. ‘ಒಡಲು ತಂಪಾಗಿರಲಿ’ ಎಂಬ ಜನಪದರ ಹಾರೈಕೆಗೆ ಜೀವವಿಜ್ಞಾನ ಕಂಡುಕೊಳ್ಳುತ್ತಿರುವ ಆಧುನಿಕ ಭಾಷ್ಯವಿದು.

ಒಟ್ಟಿನಲ್ಲಿ, ವೈದ್ಯಕೀಯಶಾಸ್ತ್ರದ ಈ ಹೊಸ ತಿಳಿವಳಿಕೆಗಳು ‘ಆಹಾರ ಬಲ್ಲವನಿಗೆ ರೋಗವಿಲ್ಲ’ ಎಂಬ ಮಾತನ್ನು ಪರಿಷ್ಕರಿಸಿ ‘ಕರುಳು ಅರಿತವನಿಗೆ ರೋಗವಿಲ್ಲ’ ಎಂದು ಸಾರುತ್ತಿರುವಂತಿವೆ. ಸೂಕ್ತ ಆಹಾರ- ವಿಹಾರ- ವಿಚಾರಗಳ ಮೂಲಕ ಕರುಳಿನ ಪರೋಪಕಾರಿ ಬ್ಯಾಕ್ಟೀರಿಯಾ ಜಗತ್ತನ್ನು ಪೋಷಿಸಬೇಕು. ಜೊತೆಗೆ, ಕರುಳಂಚಿನ ಕೋಟಿಕೋಟಿ ನರತಂತುಗಳ ಭಾವನೆಯನ್ನು ಕೆರಳಿಸದಂತೆ, ಮನದಲ್ಲಿ ಶಾಂತಿ-ಸಂತಸವನ್ನೂ ಸದಾ ತುಂಬಿಕೊಳ್ಳಬೇಕು. ಬ್ಯಾಕ್ಟೀರಿಯಾ ಹಾಗೂ ನರತಂತುಗಳಿಂದ ಆವೃತವಾದ ಕರುಳು ಆಗ ಒಲಿಯಬಲ್ಲದು; ಆರೋಗ್ಯ ಸದಾ ನಮ್ಮದಾಗಬಲ್ಲದು. ತನ್ನದೇ ಆರೋಗ್ಯ ಪಾಲನೆ, ತನ್ನ ಕರುಳಿನಕುಡಿಗಳ ಭವಿಷ್ಯದ ಲಾಲನೆ- ಇವೆರಡಕ್ಕೂ, ಮನುಷ್ಯ ತನ್ನ ಕರುಳನ್ನು ಎಷ್ಟು ಜತನದಿಂದ ನೋಡಿಕೊಳ್ಳಬೇಕು, ನೋಡಿ!

ಲೇಖಕ: ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT