ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರುದ್ಧ ಪರಿಣಾಮಗಳು

Last Updated 27 ಡಿಸೆಂಬರ್ 2018, 4:50 IST
ಅಕ್ಷರ ಗಾತ್ರ

ವಾರಣಾಸಿಯಲ್ಲಿ ಬ್ರಹ್ಮದತ್ತ ರಾಜ್ಯಭಾರ ಮಾಡುವಾಗ ಅವನ ಬಳಿ ಒಬ್ಬ ಕತ್ತಿಯ ಲಕ್ಷಣವನ್ನು ಹೇಳುವ ಬ್ರಾಹ್ಮಣನಿದ್ದ. ಆತ ಯಾವುದೇ ಹೊಸ ಕತ್ತಿ ಬಂದರೆ ಅದನ್ನು ಮೂಸಿ ನೋಡಿ ಅದರ ಗುಣವನ್ನು ಹೇಳುತ್ತಿದ್ದ.

ಒಮ್ಮೆ ಒಬ್ಬ ಅತ್ಯಂತ ಹರಿತವಾದ ಕತ್ತಿಯನ್ನು ತಂದ. ಆದರೆ, ಆತ ಅದನ್ನು ತರುವಾಗ ಕೈಗೆ ಮೆಣಸಿನಕಾಯಿ ಪುಡಿ ಹತ್ತಿದ್ದರಿಂದ ಈ ಬ್ರಾಹ್ಮಣ ಮೂಸಿ ನೋಡುವಾಗ ಜೋರಾಗಿ ಸೀನು ಬಂತು. ಕತ್ತಿ ಮೂಗಿಗೆ ತಗುಲಿ ಕತ್ತರಿಸಿಹೋಯಿತು. ರಾಜ ವೈದ್ಯರಿಂದ ಚಿಕಿತ್ಸೆ ಮಾಡಿಸಿ ಅರಗಿನ ಮೂಗನ್ನು ಕೂಡ್ರಿಸಿದ.

ರಾಜನಿಗೆ ಒಬ್ಬಳೇ ಮಗಳು. ರಾಜನೊಂದಿಗೆ ಸೋದರಳಿಯನೂ ಇದ್ದ. ಅವರಿಬ್ಬರಲ್ಲಿ ಪ್ರೇಮವಿತ್ತು. ಆದರೆ, ರಾಜನ ಯೋಚನೆ ಬೇರೆಯಾಗಿತ್ತು. ಮಗಳನ್ನು ಬೇರೆ ರಾಜಕುಮಾರನಿಗೆ ಕೊಟ್ಟು, ಸೋದರಳಿಯನಿಗೆ ಮತ್ತೊಬ್ಬ ರಾಜಕುಮಾರಿಯನ್ನು ತಂದರೆ ಎರಡು ರಾಜ್ಯಗಳು ದೊರೆಯತ್ತವೆ. ಅದಕ್ಕಾಗಿ ಸೋದರಳಿಯನನ್ನು ಬೇರೆ ಮನೆಯಲ್ಲಿ ಇಟ್ಟು ಅವರಿಬ್ಬರೂ ಬೆಟ್ಟಿಯಾಗದಂತೆ ಮಾಡಿದ. ರಾಜಕುಮಾರ, ಮಾವನ ಮಗಳನ್ನು ಅರಮನೆಯಿಂದ ಹೇಗೆ ಹೊರಗೆ ತರಿಸುವುದು ಎಂದು ಯೋಚನೆ ಮಾಡಿ ಒಬ್ಬ ಕೊರವಂಜಿಯನ್ನು ಕರೆಸಿದ. ಆಕೆ ಪ್ರಚಂಡ ಬುದ್ಧಿವಂತೆ. ಆಕೆಗೆ ತನ್ನ ವಿಚಾರವನ್ನು ತಿಳಿಸಿದಾಗ ಸಾವಿರ ನಾಣ್ಯಗಳನ್ನು ಪಡೆದು ಒಂದು ಯೋಜನೆಯನ್ನು ಹಾಕಿದಳು.

ಅದರ ಪ್ರಕಾರ ಅವಳು ರಾಜನ ಬಳಿಗೆ ಹೋಗಿ ರಾಜಕುಮಾರಿಗೆ ಭಯಂಕರ ಗ್ರಹದೋಷವಿದೆ. ಅದರ ಪರಿಹಾರಕ್ಕಾಗಿ ಅವಳನ್ನು ಭದ್ರವಾದ ಕಾವಲಿನಲ್ಲಿ ಸ್ಮಶಾನಕ್ಕೆ ಕರೆದೊಯ್ದು ಒಂದು ಹೆಣದ ಮೇಲೆ ಹಾಕಿದ್ದ ಮಂಚದ ಮೇಲೆ ಕುಳ್ಳಿರಿಸಿ ಮಂಗಲಸ್ನಾನ ಮಾಡಿಸಿ ಕರೆತರಬೇಕು ಎಂದು ಹೇಳಿದಳು.

ಅವಳ ಮೇಲೆ ವಿಶ್ವಾಸವಿದ್ದ ರಾಜ ಒಪ್ಪಿದ. ಕೊರವಂಜಿ ಗುಟ್ಟಾಗಿ ಈ ವಿಷಯವನ್ನು ರಾಜಕುಮಾರಿಗೆ ತಿಳಿಸಿ ಕೆಳಗೆ ಹೆಣದಂತೆ ಮಲಗಿದವನು ನಿನ್ನ ಗಂಡನಾಗುವ ರಾಜಕುಮಾರ. ಅವನು ಸೀನುತ್ತಾನೆ. ಆಗ ಎಲ್ಲ ಭದ್ರತಾಪಡೆಯವರು ಓಡಿಹೋಗುತ್ತಾರೆ. ನೀನು ರಾಜಕುಮಾರನೊಂದಿಗೆ ಹೋಗಿ ಬಿಡು ಎಂದಳು. ಅದರಂತೆಯೇ ರಾಜಕುಮಾರನಿಗೆ ಮೊದಲೇ ಸ್ಮಶಾನಕ್ಕೆ ಹೋಗಿ ಹೆಣದಂತೆ ಮಲಗಲು ಸೂಚನೆ ನೀಡಿದಳು.

ನಿಗದಿತ ದಿನ ರಾತ್ರಿ ಭದ್ರತಾ ಪಡೆಯವರೊಂದಿಗೆ ರಾಜಕುಮಾರಿಯನ್ನು ಕರೆದುಕೊಂಡು ಸ್ಮಶಾನಕ್ಕೆ ಹೊರಟಳು. ದಾರಿಯಲ್ಲಿ ಸೈನಿಕರಿಗೆ ಹೇಗೆ ಕೆಲವೊಮ್ಮೆ ಹೆಣಗಳಿಗೆ ಜೀವ ಬಂದುಬಿಡುತ್ತದೆ ಮತ್ತೆ ಎದ್ದೊಡನೆ ಹೇಗೆ ಹತ್ತಿರವಿದ್ದವರನ್ನು ತಿಂದೇ ಬಿಡುತ್ತವೆ ಎಂದು ವರ್ಣಿಸಿ ಹೆದರಿಸಿದಳು. ಅಂಥ ಸಂದರ್ಭ ಬಂದರೆ ಓಡಿ ಜೀವ ಉಳಿಸಿಕೊಳ್ಳುವುದು ಒಂದೇ ದಾರಿ ಎಂದು ಹೇಳಿದಳು. ಅವರೆಲ್ಲ ಗಾಬರಿಯಾಗಿದ್ದರು. ಯೋಜಿಸಿದಂತೆ ರಾಜಕುಮಾರ ಹೆಣದಂತೆ ಅಲ್ಲಿ ಮಲಗಿದ್ದ. ಅವನ ಮೇಲೆ ಒಂದು ಮಂಚವನ್ನು ಹಾಕಿಸಿ ಅದರ ಮೇಲೆ ರಾಜಕುಮಾರಿಯನ್ನು ಕೂಡ್ರಿಸಿ ಒಂದು ಕೊಡ ನೀರು ಹಾಕಿದ ತಕ್ಷಣ ಮೊದಲೇ ಯೋಜಿಸಿದಂತೆ ರಾಜಕುಮಾರ ಭಯಂಕರವಾಗಿ ಸೀನಿ ಎದ್ದು ಕುಳಿತ.

ಕೊರವಂಜಿ ಭಾರಿ ಭಯಪಟ್ಟವಳಂತೆ, 'ಅಯ್ಯೋ ಹೆಣಕ್ಕೆ ಜೀವ ಬಂತು, ಓಡಿ, ಓಡಿ' ಎಂದು ಚೀರುತ್ತ ಓಡಿದಳು. ಮೊದಲೇ ಭಯಪಟ್ಟಿದ್ದ ಸೈನಿಕರು ಕಿರಿಚುತ್ತ ಸ್ಮಶಾನದಿಂದ ಓಡಿಹೋದರು. ರಾಜಕುಮಾರ ತನ್ನ ಪ್ರಿಯೆಯನ್ನು ಕರೆದುಕೊಂಡು ಹೋಗಿ ಮದುವೆಯಾದ. ನಂತರ ವಾರಣಾಸಿಯ ರಾಜ ಅವರಿಬ್ಬರನ್ನು ಕರೆದು ವಿಜ್ರಂಭಣೆಯಿಂದ ಆರತಕ್ಷತೆ ಮಾಡಿ ರಾಜಕುಮಾರನನ್ನು ಸಿಂಹಾಸನದಲ್ಲಿ ಕೂಡ್ರಿಸಿದ. ಅವನ ಆಡಳಿತದಲ್ಲಿ ಕತ್ತಿಯ ಲಕ್ಷಣ ಹೇಳುವ ಬ್ರಾಹ್ಮಣನೂ ಇದ್ದ. ಒಂದು ದಿನ ಬಿಸಿಲಿನಲ್ಲಿ ನಿಂತಾಗ ಅವನ ಅರಗಿನ ಮೂಗು ಕರಗಿ ಕೆಳಗೆ ಬಿತ್ತು. ಆತ ತುಂಬ ಮುಜಗರ ಪಟ್ಟ. ಆಗ ರಾಜ ಹೇಳಿದ, 'ಬೇಜಾರು ಬೇಡ. ನಿನಗೆ ಸೀನು ಬಂದರೆ ಮೂಗು ಹೋಯಿತು. ಆದರೆ, ನಾನು ಸೀನಿದಾಗ ರಾಜಕುಮಾರಿ ದೊರಕಿದಳು'.

ಯಾವ ಘಟನೆಯೂ ಒಳ್ಳೆಯದು ಅಥವಾ ಕೆಟ್ಟದ್ದಾಗಿರುವುದಿಲ್ಲ. ಒಂದೇ ಘಟನೆ ಕೆಲವರಿಗೆ ನೋವು ತಂದರೆ ಮತ್ತೆ ಕೆಲವರಿಗೆ ಕಲ್ಯಾಣಕಾರಕವಾಗಿರುತ್ತದೆ. ಅದು ಅವರವರ ಅನುಭವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT