ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದ ಮೇಲೆ ದೇಶದ ಕಣ್ಣು

ಪ್ರಚಾರದ ವೇಳೆ ಮುನ್ನೆಲೆಗೆ ಬರುವ ವಿಷಯವನ್ನು ಆಧರಿಸಿದೆ ಸೋಲು–ಗೆಲುವು
Last Updated 8 ಜುಲೈ 2019, 6:38 IST
ಅಕ್ಷರ ಗಾತ್ರ

ಚುನಾವಣಾ ಆಯೋಗವು ಲೋಕಸಭಾ ಚುನಾವಣೆಯ ದಿನಾಂಕ ಘೋ‍ಷಣೆ ಮಾಡಿದ್ದು, ಮತದಾನಕ್ಕೆ ದಿನ
ಗಣನೆ ಆರಂಭವಾಗಿದೆ. ಕರ್ನಾಟಕದಲ್ಲಿ ಈ ಬಾರಿ ನಡೆಯಲಿರುವ ರಾಜಕೀಯ ಹಣಾಹಣಿಯನ್ನು ದೇಶದ ಎಲ್ಲೆಡೆ ಸೂಕ್ಷ್ಮವಾಗಿ ಗಮನಿಸಲಾಗುತ್ತದೆ, ಇದಕ್ಕೆ ಹಲವು ಕಾರಣಗಳಿವೆ. ಬಿಜೆಪಿಯ ಪಾಲಿಗೆ ಕರ್ನಾಟಕವು ದಕ್ಷಿಣ ಭಾರತದ ಏಕೈಕ ಹೆಬ್ಬಾಗಿಲು. 2014ರ ಲೋಕಸಭಾ ಚುನಾವಣೆಯಲ್ಲಿ ವಿಂಧ್ಯ ಪರ್ವತದ ದಕ್ಷಿಣಕ್ಕೆ ಬಿಜೆಪಿಯು ಪ್ರಶಂಸಾರ್ಹ ಸಾಧನೆ ತೋರಿದ ರಾಜ್ಯ ಕರ್ನಾಟಕ.

2014ರಲ್ಲಿ ಲೋಕಸಭೆಯ 44 ಸ್ಥಾನಗಳನ್ನು ಗೆದ್ದುಕೊಂಡ ಕಾಂಗ್ರೆಸ್ಸಿಗೆ, ಅತಿಹೆಚ್ಚಿನ ಸೀಟುಗಳನ್ನು ಕೊಟ್ಟ ರಾಜ್ಯ ಕರ್ನಾಟಕ. ಈಗ ಜೆಡಿಎಸ್‌ ಜೊತೆ ಮೈತ್ರಿ ಸಾಧಿಸಿರುವ ಕಾಂಗ್ರೆಸ್, ತನ್ನ ಸ್ಥಾನಗಳನ್ನು ಹೆಚ್ಚಿಸಿ
ಕೊಳ್ಳುವ ಹವಣಿಕೆಯಲ್ಲಿದೆ. ಹಾಗಾಗಿ ಬಿಜೆಪಿ ಮತ್ತು ಕಾಂಗ್ರೆಸ್–ಜೆಡಿಎಸ್ ಮೈತ್ರಿಕೂಟದ ನಿರೀಕ್ಷೆಗಳು ಈ ಬಾರಿ ಬೃಹತ್ ಆಗಿಯೇ ಇವೆ.

ಚುನಾವಣೆಯ ಗಣಿತವನ್ನು ಮಾತ್ರ ಆಧರಿಸಿ ಹೇಳುವುದಾದರೆ, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್–ಜೆಡಿಎಸ್ ಮೈತ್ರಿಕೂಟದ ಕೈ ಮೇಲಿದೆ ಎಂದು ಕೆಲವರು ವಾದ ಮಾಡಬಹುದು. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಹಿಂದಿನ ಚುನಾವಣೆಗಳಲ್ಲಿ ಪಡೆದ ಒಟ್ಟು ಮತಗಳ ಪ್ರಮಾಣ ಬಿಜೆಪಿಯ ಮತಗಳ ಪ್ರಮಾಣಕ್ಕಿಂತ ಹೆಚ್ಚಿದ್ದಿರಬಹುದು. ಆದರೆ, ಚುನಾವಣಾ ಗೆಲುವು ಎಂಬುದು ಶುದ್ಧ ಲೆಕ್ಕಾಚಾರ
ವನ್ನು ಮಾತ್ರ ಆಧರಿಸಿರುವುದಿಲ್ಲ; ಅದು ತಳಮಟ್ಟದಲ್ಲಿನ ವಾಸ್ತವಗಳನ್ನೂ ಆಧರಿಸಿರುತ್ತದೆ ಎಂಬುದನ್ನು ಒಪ್ಪಿಕೊಳ್ಳಬೇಕು. ಹಳೆ ಮೈಸೂರು ಪ್ರದೇಶದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಇರುವ ರಾಜಕೀಯ ವೈರವನ್ನು ಗಮನಿಸಿದಾಗ, ಮೈತ್ರಿಯು ಕ್ಷೇತ್ರ ಮಟ್ಟದಲ್ಲಿ, ಕಾರ್ಯಕರ್ತರ ನಡುವೆ ಹಾಗೂ ಬೆಂಬಲಿಗರ ನಡುವೆ ಪರಿಣಾಮಕಾರಿಯಾಗಿ ಉಳಿದುಕೊಳ್ಳುತ್ತದೆಯೇ ಎಂಬು
ದನ್ನು ಗಮನಿಸಬೇಕು. ಮೈತ್ರಿಯು ತಾತ್ಕಾಲಿಕವಾದದ್ದು, ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂಬ ಬಯಕೆಯೇ ತಮ್ಮನ್ನು ಒಂದಾಗಿಸಿದ್ದು ಎಂಬುದು ಎರಡೂ ಪಕ್ಷಗಳಿಗೆ ಗೊತ್ತಿರುವ ಕಾರಣ ಈ ಅಂಶ ಮಹತ್ವದ್ದಾಗುತ್ತದೆ.

ಮೈತ್ರಿಯ ವಿಚಾರದಲ್ಲಿ ಇನ್ನೆರಡು ಅಂಶಗಳು ಮಹತ್ವ ಪಡೆದುಕೊಳ್ಳುತ್ತವೆ. ಲೋಕಸಭಾ ಚುನಾವಣೆಗೆ ಹೊಂದಾಣಿಕೆ ಮಾಡಿಕೊಳ್ಳುವ ವಿಚಾರದಲ್ಲಿ ಮೈತ್ರಿ ಪಕ್ಷಗಳ ನಡುವಣ ಬಹಿರಂಗ ಭಿನ್ನಮತವು ಮೈತ್ರಿಯ ಬಗ್ಗೆ ಸಾರ್ವಜನಿಕರ ಮನಸ್ಸಿನಲ್ಲಿ ನಕಾರಾತ್ಮಕ ಚಿತ್ರಣ ಕಟ್ಟಿಕೊಟ್ಟಿರುವುದು ಮೊದಲ ಅಂಶ. ಮೈತ್ರಿ ಪಕ್ಷಗಳ ನಾಯಕರು ಸಂಘಟಿತ ಚುನಾವಣಾ ಅಭಿಯಾನ ಆರಂಭಿಸುವ ಬದಲು ತಮ್ಮ ಸಮಯ ಮತ್ತು ಶಕ್ತಿಯನ್ನು ಮೈತ್ರಿ ಮಾಡಿಕೊಳ್ಳುವುದಕ್ಕೆ ಹಾಗೂ ಸೀಟು ಹಂಚಿಕೆಗೆ ವ್ಯಯಿಸಿದಂತೆ ಭಾಸವಾಗುತ್ತದೆ.

ಕಳೆದ ಹತ್ತು ತಿಂಗಳಲ್ಲಿ ಮೈತ್ರಿ ಸರ್ಕಾರ ನೀಡಿರುವ ಆಡಳಿತ ಎರಡನೆಯ ಅಂಶ. ಈಚೆಗೆ ನಡೆದ ಜನಾಭಿಪ್ರಾಯ ಸಂಗ್ರಹಣೆಯಲ್ಲಿ, ಮೂರನೆಯ ಎರಡಕ್ಕಿಂತ ಹೆಚ್ಚಿನ ಜನ ರಾಜ್ಯದಲ್ಲಿ ಹೊಸದಾಗಿ ಚುನಾವಣೆ ನಡೆಯುವುದರ ಪರ ಇದ್ದರು ಎಂಬುದು ಆಶ್ಚರ್ಯ ತರಿಸುವ ಸಂಗತಿಯೇನೂ ಅಲ್ಲ. ಜನ ಬಿಜೆಪಿಯ ಪರ ಇದ್ದಾರೆ ಎಂಬ ರೀತಿಯಲ್ಲಿ ಇದನ್ನು ನೋಡಬಾರದು. ಆದರೆ, ಚುನಾವಣೆಯ ನಂತರ ರೂಪುಗೊಂಡ ಮೈತ್ರಿಯ ಬಗ್ಗೆ ಜನರಲ್ಲಿ ಅಸಮಾಧಾನ ಇರುವುದನ್ನು ಇಲ್ಲಿ ಕಾಣಬಹುದು. ಮೈತ್ರಿ ಪಕ್ಷಗಳ ನಡುವಣ ತಿಕ್ಕಾಟ, ಸರ್ಕಾರದ ಉಳಿವಿಗೆ ಕಸರತ್ತು ಹಾಗೂ ಸರ್ಕಾರ ಉರುಳಿಸಲು ನಡೆದ ಯತ್ನಗಳೇ ಕಳೆದ ಹತ್ತು ತಿಂಗಳ ಅವಧಿಯಲ್ಲಿ ಸುದ್ದಿಯಲ್ಲಿವೆ.

ಸರ್ಕಾರ ತಳಮಟ್ಟದಲ್ಲಿ ಸಾಧ್ಯವಾಗಿಸಿದ ಸಾಧನೆಯ ಬಗ್ಗೆ ಹೆಚ್ಚಿನ ಚರ್ಚೆ ಆಗಿಲ್ಲ. ಲೋಕಸಭಾ ಚುನಾವಣೆಯಲ್ಲಿ ಇದು ನಿರ್ಣಾಯಕ ಅಂಶ ಆಗಬಹುದು. 2014ರಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಗೆದ್ದುಕೊಂಡರೂ, ಆ ಸಂದರ್ಭದಲ್ಲಿ ಒಂದು ವರ್ಷ ಪೂರೈಸಿದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯ ಇದ್ದಿದ್ದನ್ನು ಲೋಕನೀತಿ ಸಂಸ್ಥೆ ನಡೆಸಿದ ಸಮೀಕ್ಷೆ ಕಂಡುಕೊಂಡಿತ್ತು. ಆದರೆ, ರಾಜ್ಯ ಸರ್ಕಾರಕ್ಕೆ ಒಳ್ಳೆಯ ಹೆಸರು ಇದ್ದರೂ, ಕಾಂಗ್ರೆಸ್ ಪಕ್ಷ ದೊಡ್ಡ ಸಂಖ್ಯೆಯಲ್ಲಿ ಸ್ಥಾನ ಗೆದ್ದುಕೊಳ್ಳುವಲ್ಲಿ ವಿಫಲವಾಯಿತು.

ಬಿಜೆಪಿಯ ಪಾಲಿಗೆ ಆಂತರಿಕ ವೈರುಧ್ಯಗಳನ್ನು ಬಗೆಹರಿಸಿಕೊಳ್ಳುವುದೇ ದೊಡ್ಡ ಸವಾಲಾಗಬಹುದು. ಪುಲ್ವಾಮಾದಲ್ಲಿ ನಡೆದ ದಾಳಿ ಹಾಗೂ ನಂತರದ ನಿರ್ದಿಷ್ಟ ದಾಳಿಯು ಬಿಜೆಪಿಗೆ ರಾಜ್ಯದಲ್ಲಿ ಒಳ್ಳೆಯ ಸಾಧನೆ ತೋರಲು ಸಹಾಯ ಮಾಡುತ್ತವೆ ಎಂದು ಹೇಳುವ ಮೂಲಕ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರು (ಬಿ.ಎಸ್. ಯಡಿಯೂರಪ್ಪ) ರಾಷ್ಟ್ರಮಟ್ಟದಲ್ಲಿ ಸುದ್ದಿಯಾದರು! ಪ್ರಧಾನಿ ನರೇಂದ್ರ ಮೋದಿ ಅವರ ವ್ಯಕ್ತಿತ್ವ, ಅವರಿಗೆ ಇರುವ ಚರಿಷ್ಮಾ ಆಧಾರದಲ್ಲಿ ಕರ್ನಾಟಕದಲ್ಲಿ ಬಿಜೆಪಿಯ ಚುನಾವಣಾ ಪ್ರಚಾರ ನಡೆಯಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. 2014ರ ಲೋಕಸಭಾ ಚುನಾವಣೆಯಲ್ಲಿ ಕೂಡ ಬಿಜೆಪಿಯ ಅಷ್ಟೂ ಅಭ್ಯರ್ಥಿಗಳು ಅಂದಿನ ಪ್ರಧಾನಿ ಅಭ್ಯರ್ಥಿ (ನರೇಂದ್ರ ಮೋದಿ) ಅವರ ಹೆಸರಿನಲ್ಲಿ ಮತ ಕೇಳಿದ್ದರು. ಹಾಗೆ ಮತ ಕೇಳುವ ಪ್ರವೃತ್ತಿ ಈ ಬಾರಿ ಇನ್ನಷ್ಟು ಗಟ್ಟಿಯಾಗಿರಲಿದೆ. ಬಿಜೆಪಿಗೆ ಮತ ಚಲಾಯಿಸಿದ ಪ್ರತಿ ಹತ್ತು ಜನರಲ್ಲಿ ಆರು ಜನ ತಾವು ಬಿಜೆಪಿಗೆ ಮತ ಚಲಾಯಿಸಿದ್ದರ ಹಿಂದೆ ‘ಮೋದಿ’ ಪ್ರಭಾವ ಇತ್ತು ಎಂದು ಹೇಳಿದ್ದನ್ನು 2014ರಲ್ಲಿ ನಡೆದ ಲೋಕನೀತಿ ಸಮೀಕ್ಷೆ ಕಂಡುಕೊಂಡಿತ್ತು.

ರಾಷ್ಟ್ರೀಯ ಭದ್ರತೆ, ಭಯೋತ್ಪಾದನೆ ಮತ್ತು ನಾಯಕತ್ವವು ಚುನಾವಣಾ ಪ್ರಚಾರದ ವೇಳೆ ಪ್ರಮುಖ ಚರ್ಚೆಯ ವಿಷಯಗಳಾಗುವಂತೆ ಮಾಡುವಲ್ಲಿ ಬಿಜೆಪಿ ಯಶಸ್ಸು ಕಂಡರೆ, ಆ ಪಕ್ಷಕ್ಕೆ ಹೆಚ್ಚಿನ ಲಾಭ ಸಿಗುವುದು ಖಚಿತ. ಇದೇ ವೇಳೆ, ನಿರುದ್ಯೋಗ, ಬೆಲೆ ಏರಿಕೆ ಮತ್ತು ಆರ್ಥಿಕ ಸವಾಲುಗಳ ಬಗ್ಗೆ ಚುನಾವಣಾ ಚರ್ಚೆ ನಡೆಯುವಂತೆ ಮಾಡಲು ಕಾಂಗ್ರೆಸ್–ಜೆಡಿಎಸ್ ಮೈತ್ರಿಕೂಟ ಸಫಲವಾದರೆ ಹೆಚ್ಚಿನ ಲಾಭ ಅವರಿಗೆ ಸಿಗಲಿದೆ. ಚುನಾವಣೆಯ ಸಣ್ಣ ಸಣ್ಣ ಅಂಶಗಳನ್ನೂ ಬಿಜೆಪಿಯು ದೆಹಲಿಯಿಂದಲೇ ನಿಯಂತ್ರಿಸಲಿದೆ ಎಂಬುದು ಖಚಿತವಾಗುತ್ತಿದೆ.

ಹೀಗೆ ಮಾಡುವುದರಿಂದ ಪಕ್ಷದ ರಾಜ್ಯ ಘಟಕ ಹಾಗೂ ರಾಷ್ಟ್ರೀಯ ನಾಯಕತ್ವದ ನಡುವೆ ಹೆಚ್ಚಿನ ಸಮನ್ವಯ ಸಾಧ್ಯವಾಗುತ್ತದೆಯೇ ಎಂಬುದು ನಿರ್ಣಾಯಕ ಅಂಶವಾಗಲಿದೆ.

ಇವೆಲ್ಲ ಏನೇ ಇದ್ದರೂ, ಬಿಜೆಪಿ ಮತ್ತು ಕಾಂಗ್ರೆಸ್–ಜೆಡಿಎಸ್‌ ಆಯ್ಕೆ ಮಾಡುವ ಅಭ್ಯರ್ಥಿಗಳು ಬಹುಮುಖ್ಯವಾಗಲಿದ್ದಾರೆ. ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಹಾಲಿ ಸಂಸದರನ್ನು ಬದಲಿಸುವ ಎದೆಗಾರಿಕೆಯನ್ನು ಎರಡೂ ಕಡೆಯವರು ತೋರ
ಲಿದ್ದಾರೆಯೇ? ಪಕ್ಷಗಳ ಮೇಲೆ ‘ಕುಟುಂಬ ರಾಜಕಾರಣ’ದ ಪ್ರಭಾವ ಮುಂದುವರಿದಿರುವುದೇ ಸಮಸ್ಯೆ ತಂದೊಡ್ಡಲಿದೆಯೇ? ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ನಾಯಕರ ನಡುವೆ ಸಮಸ್ಯೆ ತಲೆದೋರಲಿದೆಯೇ? ಈ ಅಂಶಗಳು ಕೂಡ ಪಕ್ಷದ ನಡುವಿನ ಒಗ್ಗಟ್ಟು ಹಾಗೂ ಮೈತ್ರಿಕೂಟದ ಒಗ್ಗಟ್ಟಿನ ಮೇಲೆ ಪ್ರಭಾವ ಬೀರಲಿವೆ. ಭಿನ್ನಮತ ಹಾಗೂ ಪಕ್ಷದ ಆಂತರಿಕ ಕಚ್ಚಾಟವನ್ನು ಹದ್ದುಬಸ್ತಿನಲ್ಲಿ ಇರಿಸಲು ಸಾಧ್ಯವಾಗುವ ಪಕ್ಷಕ್ಕೆ ಹೆಚ್ಚಿನ ಪ್ರಯೋಜನ ಇರಲಿದೆ.

ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚುತ್ತಿರುವುದು ರಾಜಕೀಯ ವಾತಾವರಣ ಏನಾಗಲಿದೆ ಎಂಬುದನ್ನೂ ಸೂಚಿಸುತ್ತಿರಬಹುದು!

ಲೇಖಕ: ಕುಲಪತಿ, ಜೈನ್‌ ವಿಶ್ವವಿದ್ಯಾಲಯ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT