ಕಾಂಗ್ರೆಸ್: ಸುಳಿಗೆ ಸಿಲುಕಿರುವ ಪಕ್ಷ

7
ಪಕ್ಷದಲ್ಲಿ ಭಿನ್ನ ಅಧಿಕಾರ ಕೇಂದ್ರಗಳು ಸೃಷ್ಟಿಯಾಗುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ

ಕಾಂಗ್ರೆಸ್: ಸುಳಿಗೆ ಸಿಲುಕಿರುವ ಪಕ್ಷ

ಸಂದೀಪ್‌ ಶಾಸ್ತ್ರಿ
Published:
Updated:

ಮೇ 12ರ ವಿಧಾನಸಭಾ ಚುನಾವಣೆಯ ನಂತರ ಕಾಂಗ್ರೆಸ್ ಪಕ್ಷವು ಮಹತ್ವದ ಎರಡು ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಜಯ ಗಳಿಸಿದ್ದರೂ ಸ್ಪಷ್ಟ ನಿರ್ದೇಶನ ಅಥವಾ ನಿರ್ಣಾಯಕ ನಾಯಕತ್ವ ನೀಡುವ ಯಾವುದೇ ಪ್ರಯತ್ನ ಮಾಡದೆ ‘ಸ್ವಯಂಚಾಲಿತ ಅವಸ್ಥೆ’ಯಲ್ಲಿ ಇರುವಂತೆ ಮನಸೋಇಚ್ಛೆ ನಡೆಯುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಅನುಭವಿಸಿದ ಹಿನ್ನಡೆಯಿಂದ ಹೊರಬರುತ್ತಿರುವಂತೆ ತೋರುತ್ತಿದ್ದರೂ ಮುಂಬರುವ ಲೋಕಸಭಾ ಚುನಾವಣೆಯ ಸವಾಲುಗಳನ್ನು ಎದುರಿಸಲು ಅದು ಸನ್ನದ್ಧವಾಗುತ್ತಿರುವತೆ ಕಾಣುತ್ತಿಲ್ಲ.  ಅಥವಾ ಮುಂದಿನ ನಿರೀಕ್ಷಿತ ಭಾರಿ ಪ್ರಚಾರಾಂದೋಲನಕ್ಕೆ ತನ್ನ ಕಾರ್ಯಕರ್ತರಲ್ಲಿ ಚೈತನ್ಯ ತುಂಬುತ್ತಿರುವ ಯಾವ ಲಕ್ಷಣವೂ ಕಾಣುತ್ತಿಲ್ಲ.

ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆಯೇ, ಯಾವುದೇ ಏಕೈಕ ಪಕ್ಷಕ್ಕೆ ಸ್ಪಷ್ಟ ಬಹುಮತ ಬಾರದು ಎಂಬುದು ನಿಚ್ಚಳವಾಗುತ್ತಿದ್ದಂತೆಯೇ ಜೆಡಿಎಸ್ ನೇತೃತ್ವದಲ್ಲಿ ಸರ್ಕಾರ ರಚನೆಗೆ ಕಾಂಗ್ರೆಸ್ ಪಕ್ಷವು ಕ್ಷಿಪ್ರವಾಗಿ ಮುಂದಾಗಿ ಕ್ರಮ ಕೈಗೊಂಡಿದ್ದು ಅಚ್ಚರಿಯದಾಗಿತ್ತು.  ಬಿಜೆಪಿ- ಜೆಡಿಎಸ್ ಮೈತ್ರಿಯ ಯಾವುದೇ ಸಾಧ್ಯತೆಯನ್ನು ತಡೆಯುವುದೇ ಅದರ ಮುಖ್ಯ ಉದ್ದೇಶವಾಗಿತ್ತು. ಆ ಸಂದರ್ಭದಲ್ಲಿ ಪಕ್ಷದ ನಿರ್ಧಾರವನ್ನು ಪ್ರಕಟಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮನವೊಲಿಸಿದ ರೀತಿಯು, ಕಾಂಗ್ರೆಸ್ ಹಿಂದೊಮ್ಮೆ ಹೊಂದಿದ್ದ ರಾಜಕೀಯ ಚುರುಕುತನಕ್ಕೆ ನಿದರ್ಶನವಾಯಿತು. ಆದರೆ ಅಂತಿಮವಾಗಿ ಇದು ಪಕ್ಷಕ್ಕೆ ಮುಳುವಾಗಿರುವಂತಿದೆ. ಎಚ್. ಡಿ. ಕುಮಾರಸ್ವಾಮಿ ಅವರ ನೇತೃತ್ವದ ಮೈತ್ರಿ ಸರ್ಕಾರವು ಅಧಿಕಾರ ವಹಿಸಿಕೊಂಡಾಗಿನಿಂದಲೂ ತನ್ನ ಮಿತ್ರ ಪಕ್ಷವನ್ನು ಹೇಗೆ ನಿಭಾಯಿಸಬೇಕೆಂಬ ಹಾಗೂ ತನ್ನದೇ ಆಂತರಿಕ ವೈರುಧ್ಯಗಳನ್ನು ಹೇಗೆ ನೀಗಿಕೊಳ್ಳಬೇಕೆಂಬ ಎರಡು ಸೂಕ್ಷ್ಮ ವಿಷಯಗಳಿಗೆ ಸಂಬಂಧಿಸಿದಂತೆ ಅದು ದಿಕ್ಕುತೋಚದೆ ತೊಳಲಾಡುತ್ತಿರುವಂತೆ ತೋರುತ್ತಿದೆ.

ಮೈತ್ರಿ ಸರ್ಕಾರದ ನಾಯಕತ್ವವನ್ನು ಜೆಡಿಎಸ್‍ಗೆ ವಹಿಸಿಕೊಟ್ಟ ನಂತರ ಕಾಂಗ್ರೆಸ್ ಪಕ್ಷವು ರಾಜಕೀಯ ಚದರಂಗದಾಟದಲ್ಲಿ ಮೈತ್ರಿ ಪಕ್ಷದ ಸಂಭಾವ್ಯ ನಡೆಗಳನ್ನು ಊಹಿಸಿ ಚಾಣಾಕ್ಷತೆಯಿಂದ ಮುಂದಿನ ನಡೆಗಳನ್ನು ಇರಿಸಬೇಕಿತ್ತು. ಆದರೆ ಆ ಪಕ್ಷವು ಇಂತಹ ಯಾವುದೇ ಚಾಣಾಕ್ಷತೆಯನ್ನು ಪ್ರದರ್ಶಿಸದೆ ಸಂಕಷ್ಟದಿಂದ ಸಂಕಷ್ಟದೆಡೆಗೆ ಜಾರುತ್ತಿರುವಂತೆ ತೋರಿತು. ಮಂತ್ರಿಮಂಡಲದಲ್ಲಿ ಪಾಲುದಾರಿಕೆ ನಿರ್ಧಾರವನ್ನು ಬೇಗನೇ ತೆಗೆದುಕೊಳ್ಳಲಾಯಿತಾದರೂ ಸಂಕೀರ್ಣವಾದ ಖಾತೆ ಹಂಚಿಕೆ ಸಂಗತಿಯು ಪಕ್ಷದ ಸಂಧಾನ ಕೌಶಲಗಳಿಗೆ ಅಗ್ನಿಪರೀಕ್ಷೆ ಒಡ್ಡಿತು. ಪಕ್ಷವು ಇದರಲ್ಲಿ ಯಶಸ್ವಿಯಾದ ಯಾವ ಲಕ್ಷಣಗಳೂ ಗೋಚರಿಸಲಿಲ್ಲ.

ಈ ಸೂಕ್ಷ್ಮ ಚೌಕಾಸಿ ವಿದ್ಯಮಾನಕ್ಕೆ ಎರಡು ಆಯಾಮಗಳಿವೆ. ಮೊದಲನೆಯದಾಗಿ, ಸಂಪುಟ ವಿಸ್ತರಣೆ ಪ್ರಕ್ರಿಯೆ ವಿಳಂಬವಾಗಲು ಅವಕಾಶ ಕಲ್ಪಿಸುವ ಮೂಲಕ ಅದು ಎದುರಾಳಿಯು ತನ್ನ ಮೇಲೆ ಹಿಡಿತ ಸಾಧಿಸಲು ಅವಕಾಶ ಮಾಡಿಕೊಟ್ಟಿತು. ಕಾರ್ಯತಂತ್ರದ ದೃಷ್ಟಿಯಿಂದ ಹೇಳುವುದಾದರೆ, ಕಾಂಗ್ರೆಸ್ ಪಕ್ಷವು ತನಗೆ ಏನು ಮುಖ್ಯ ಎಂದು ಪರಿಗಣಿಸುತ್ತದೆಯೋ ಅದನ್ನು ಸೂಕ್ತ ಸಂದರ್ಭದಲ್ಲಿ ಸ್ಪಷ್ಟವಾಗಿ ವಿಷದಪಡಿಸಬೇಕಿತ್ತು. ಎರಡನೆಯದಾಗಿ, ಖಾತೆ ಹಂಚಿಕೆಯಲ್ಲಿ ಆ ಪಕ್ಷವು ಪ್ರಮುಖ ಖಾತೆಗಳನ್ನು ಕಿರಿಯ ಮಿತ್ರ ಪಕ್ಷಕ್ಕೆ ಬಿಟ್ಟುಕೊಟ್ಟಿತು! ಇದು, ಜೆಡಿಎಸ್‍ಗಿಂತ ದುಪ್ಪಟ್ಟು ಸಂಖ್ಯೆಯಲ್ಲಿ ಶಾಸಕರನ್ನು ಹೊಂದಿ ಚಾಲಕ ಸ್ಥಾನದಲ್ಲಿದ್ದರೂ ಅದರ ದುರ್ಬಲ ಸಂಧಾನ ಕೌಶಲವನ್ನು ಸೂಚಿಸುತ್ತದೆ. ಪ್ರಮುಖ ಖಾತೆಗಳಾದ ಹಣಕಾಸು, ಇಂಧನ, ಲೋಕೋಪಯೋಗಿ, ಶಿಕ್ಷಣ (ಉನ್ನತ ಮತ್ತು ಪ್ರಾಥಮಿಕ/ಪ್ರೌಢಶಾಲಾ ಎರಡೂ ಖಾತೆಗಳು) ಮತ್ತು ಸಂಚಾರ ಖಾತೆಗಳನ್ನು ಕಿರಿಯ ಮಿತ್ರ ಪಕ್ಷಕ್ಕೆ ಬಿಟ್ಟುಕೊಡುವುದೆಂದರೆ, ಸ್ಪಷ್ಟವಾಗಿಯೂ ಅದು ಕಿರಿಯ ಮಿತ್ರ ಪಕ್ಷವು ದೊಡ್ಡ ಪಕ್ಷದ ಮೇಲೆ ಹಿಡಿತ ಸಾಧಿಸಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಸಚಿವ ಸಂಪುಟ ವಿಸ್ತರಣೆಯಲ್ಲಿ ಆದ ದೀರ್ಘ ವಿಳಂಬವು ಕಾಂಗ್ರೆಸ್ ಪಕ್ಷವು ಭೂಮಿಕೆ ಸಿದ್ಧಪಡಿಸಿ ಕಾರ್ಯಸೂಚಿಗೆ ಚಾಲನೆ ನೀಡಲು ಅಸಮರ್ಥವಾಗಿದೆ ಎಂಬುದನ್ನು ಪ್ರತಿಫಲಿಸುತ್ತದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಾರ್ವಜನಿಕ ವೇದಿಕೆಗಳಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷದೊಂದಿಗೆ ಒಪ್ಪಂದಕ್ಕೆ ಬರಲು ಸಾಧ್ಯವಾಗದಿರುವುದೇ ಸಚಿವ ಸಂಪುಟ ವಿಸ್ತರಣೆ ವಿಳಂಬಕ್ಕೆ ಕಾರಣ ಎಂದು ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾದರು. ಇದು ಕಾಂಗ್ರೆಸ್ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಿತು. ನಿರ್ಧಾರ ತಳೆಯುವಲ್ಲಿ ವಿಕೇಂದ್ರೀಕರಣದ ಭರವಸೆ ನೀಡಿದ್ದ ಪಕ್ಷದ ಹೊಸ ಅಧ್ಯಕ್ಷರು, ರಾಜಕೀಯ ಸಂಧಾನಗಳನ್ನು ನಿಭಾಯಿಸುವ ರೀತಿಯಲ್ಲಿ ಅದು ವ್ಯಕ್ತವಾಗುತ್ತದೆಂಬ ನಿರೀಕ್ಷೆ ಹುಟ್ಟಿಸಿದರು. ಆದರೆ ಪಕ್ಷದ ‘ಹೈಕಮಾಂಡ್’ನ ಆಣತಿಯಿಲ್ಲದೆ ಪ್ರಾದೇಶಿಕ ಮಟ್ಟದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲಾಗದು ಹಾಗೂ ಪಕ್ಷದ ‘ಸಂಪೂರ್ಣ ಹಿಡಿತ’ ದೆಹಲಿಯವರ ಕೈಯಲ್ಲಿದೆ ಎಂಬುದು ಇದರಿಂದ ಮತ್ತೊಮ್ಮೆ ಸಾಬೀತಾಯಿತು!

ಮಂತ್ರಿಮಂಡಲ ವಿಸ್ತರಣೆಯಾದ ಮೇಲೆ ಕಾಂಗ್ರೆಸ್ ಪಕ್ಷವು ‘ದಿಕ್ಕುದೆಸೆಯಿಲ್ಲದ ಸುಳಿ’ಗೆ ಸಿಲುಕಿದೆ ಎಂಬುದು ಮತ್ತೊಮ್ಮೆ ದೃಢಪಟ್ಟಿತು. ಇದೇ ವೇಳೆ, ಸಚಿವ ಸ್ಥಾನ ವಂಚಿತರು ತಮ್ಮ ಕೋಪಾವೇಶ ಹೊರಹಾಕಿದರು. ಕಾಂಗ್ರೆಸ್ ಪಕ್ಷದಲ್ಲಿ ಸಚಿವ ಸ್ಥಾನಮಾನಕ್ಕಾಗಿ ಅಸಮಾಧಾನ, ಕ್ಷೀಣಸ್ವರದ ಗೊಣಗಾಟ ಸಾಮಾನ್ಯವಾದರೂ ಈ ಬಾರಿ ಅದರ ತೀವ್ರತೆ ಮತ್ತು ಧ್ವನಿ ಹೊರಹೊಮ್ಮಿದ ರೀತಿಯಲ್ಲಿ ವ್ಯತ್ಯಾಸವಿತ್ತು. ಒಂದು ದೃಷ್ಟಿಯಿಂದ ನೋಡಿದರೆ, ಪಕ್ಷದೊಳಗೆ ಮತ್ಸರದಿಂದ ಕೂಡಿದ ಭಿನ್ನ ಬಣಗಳನ್ನು ಇದು ಜಾಗೃತಗೊಳಿಸಿತು. ಚುನಾವಣೆ ಸಂದರ್ಭದಲ್ಲಿ ಆ ಪಕ್ಷವು ಬಲು ಅಪರೂಪಕ್ಕೆಂಬಂತೆ ಒಗ್ಗಟ್ಟನ್ನು ಪ್ರದರ್ಶಿಸಿತ್ತು. ಆದರೆ ಅದರ ಸೋಲಿನೊಂದಿಗೆ ಒಗ್ಗಟ್ಟು ಛಿದ್ರವಾಗಿ ಸೋಲಿಗೆ ಬೇರೆಯವರತ್ತ ಬೆರಳು ತೋರಿಸುವ ಕಾರ್ಯವೂ ನಡೆ
ಯಿತು. ನಿಕಟಪೂರ್ವ ಮುಖ್ಯಮಂತ್ರಿಯನ್ನು ಮೂಲೆಗುಂಪು ಮಾಡದೆ ಶಾಸಕಾಂಗ ಪಕ್ಷ ಮತ್ತು ಸಮನ್ವಯ ಸಮಿತಿಯನ್ನು ಮುನ್ನಡೆಸಲು ಅವರಿಗೆ ಅವಕಾಶ ನೀಡಿರುವುದು ಕಾಂಗ್ರೆಸ್‍ನ ಕೇಂದ್ರ ನಾಯಕತ್ವದ ಶ್ಲಾಘನೀಯ ನಡೆಯೇ ಸರಿ. ಆದರೂ ಪಕ್ಷದಲ್ಲಿ ಭಿನ್ನ ಅಧಿಕಾರ ಕೇಂದ್ರಗಳು ಸೃಷ್ಟಿಯಾಗುತ್ತಿರುವುದು ಸುಸ್ಪಷ್ಟ.

ಉಪ ಮುಖ್ಯಮಂತ್ರಿಯು ಸರ್ಕಾರ ಮತ್ತು ಪಕ್ಷದೊಳಗೆ ತಮ್ಮ ಹೊಸ ಪಾತ್ರ ಏನೆಂಬುದನ್ನು ಸ್ಟಷ್ಟವಾಗಿ ಸೂಚಿಸುತ್ತಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಸಂಬಂಧ ಭುಗಿಲೆದ್ದ ಭಿನ್ನಾಭಿಪ್ರಾಯವು ರಾಜ್ಯ ಮಟ್ಟದಲ್ಲಿ ನಾಯಕತ್ವಕ್ಕಾಗಿ ಉದ್ಭವಿಸಿರುವ ಸಂಘರ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸ್ಥಾನಮಾನ ವಂಚಿತರಾದವರು ಇದಕ್ಕಾಗಿ ರಾಜ್ಯ ಮುಖಂಡರನ್ನು ದೂಷಿಸಿದರು. ಇದು ಪಕ್ಷದೊಳಗೆ ಅಧಿಕಾರಕ್ಕಾಗಿ ನಡೆಯುತ್ತಿರುವ ಸಂಘರ್ಷಕ್ಕೆ ನಿದರ್ಶನವಾಗಿದ್ದು, ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಪಕ್ಷಕ್ಕೆ ದುಬಾರಿಯಾಗಿ ಪರಿಣಮಿಸಬಹುದಾದ ರಾಜಕೀಯ ನಿರ್ವಾತ ಸೃಷ್ಟಿಯಾಗುತ್ತಿರುವುದನ್ನು ಸೂಚಿಸುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ಈ ಹಿಂದೆ ಯಾವ್ಯಾವ ಸಂದರ್ಭಗಳಲ್ಲಿ ಆಂತರಿಕ ಸಂಘರ್ಷ ಭುಗಿಲೆದ್ದಿದೆಯೋ ಹಾಗೂ ರಾಜ್ಯ ಘಟಕವು ರಾಜ್ಯ ಮಟ್ಟದ ನಾಯಕನೊಟ್ಟಿಗೆ ಹೆಗಲೆಣೆಯಾಗಿ ಒಗ್ಗಟ್ಟಿನಿಂದ ನಿಲ್ಲಲು ನಿರಾಕರಿಸಿದೆಯೋ ಅಂತಹ ಸಂದರ್ಭಗಳಲ್ಲೆಲ್ಲಾ ಸಂಕಷ್ಟವನ್ನು ಎದುರಿಸಿದೆ. ಯಾವಾಗ ಪ್ರತಿಯೊಂದು ಬಣವೂ ಅಧಿಕಾರ, ಸ್ಥಾನಮಾನ ಮತ್ತು ಆದ್ಯತೆಗಾಗಿ ಲಾಬಿ ಮಾಡಲು ಮೊದಲಾಗುತ್ತದೋ ಆಗ ಪಕ್ಷದೊಳಗಿನ ಭಿನ್ನ ಬಣಗಳು ಬಹಿರಂಗವಾಗಿ ಪರಸ್ಪರ ಟೀಕಿಸುವುದು, ಜಾತಿ ಹೆಸರಿನಲ್ಲಿ ಸ್ಥಾನಮಾನಕ್ಕೆ ಧ್ವನಿ ಎತ್ತುವುದು ಹಾಗೂ ಅಧಿಕಾರದ ಚುಕ್ಕಾಣಿ ಹಿಡಿದವರ ಮೇಲೆ ವಾಗ್ದಾಳಿ ನಡೆಸುವುದರಲ್ಲಿ ಅದು ವ್ಯಕ್ತಗೊಳ್ಳುವುದು ಸಾಮಾನ್ಯ. ರಾಮನಗರದಲ್ಲಿ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸದಿರುವ ನಿರ್ಧಾರದ ಬಗ್ಗೆ ಹೊರಹೊಮ್ಮಿದ ಆಕ್ರೋಶ, ವಿಧಾನ ಪರಿಷತ್ ನಾಯಕನಿಗೆ ಆದ ಮುಜುಗರ, ಅಲ್ಪಸಂಖ್ಯಾತರನ್ನು ಸೂಕ್ತವಾಗಿ ಪ್ರತಿನಿಧಿಸುತ್ತಿಲ್ಲ ಎಂದು ಆ ಸಮುದಾಯದ ಮಂತ್ರಿಗಳ ಮೇಲೆ ನಡೆದ ತೀವ್ರ ವಾಗ್ದಾಳಿ, ಉಪ ಮುಖ್ಯಮಂತ್ರಿ ಹುದ್ದೆಗಾಗಿ ಹಲವರಿಂದ ಕೇಳಿಬರುತ್ತಿರುವ ಒತ್ತಾಯ- ಇವೆಲ್ಲವೂ ಇದನ್ನು ಪ್ರತಿಫಲಿಸುತ್ತವೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಒಗ್ಗಟ್ಟನ್ನು ಸಾಧಿಸದಿದ್ದರೆ ಮೈತ್ರಿ ಸರ್ಕಾರದಲ್ಲಿನ ಅಸ್ತವ್ಯಸ್ತತೆಗಾಗಿ ಅದು ತೀವ್ರ ಟೀಕೆಗೆ ಗುರಿಯಾಗಬೇಕಾಗುತ್ತದೆ. ಜೊತೆಗೆ, ಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಮುನ್ನಡೆ ಸಾಧಿಸಲು ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ.

 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !