ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರಾಜಕಾರಣ: ನಾಯಕತ್ವ ಅವಕಾಶಕ್ಕಾಗಿ ಕಾಂಗ್ರೆಸ್– ತೃಣಮೂಲ ಕಾಂಗ್ರೆಸ್ ಕಾದಾಟ

Last Updated 17 ಡಿಸೆಂಬರ್ 2021, 19:45 IST
ಅಕ್ಷರ ಗಾತ್ರ

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಎರಡನೇ ಅವಧಿಯ ಅಧಿಕಾರದ ಅವಧಿ ಅರ್ಧದಷ್ಟು ಪೂರೈ ಸುತ್ತಿರುವ ಪ್ರಸಕ್ತ ಸಂದರ್ಭದಲ್ಲಿ, ವಿರೋಧಪಕ್ಷದ ನಾಯಕತ್ವದ ಕೇಂದ್ರಸ್ಥಾನವನ್ನು ಆಕ್ರಮಿಸಿಕೊಳ್ಳುವ ಹೋರಾಟ ಮುನ್ನೆಲೆಗೆ ಬಂದಿರುವುದು ಸೂರ್ಯ ಸ್ಪಷ್ಟ. 2014ರಲ್ಲಿ ಅಧಿಕಾರ ಕಳೆದುಕೊಂಡ ನಂತರ, ಕಾಂಗ್ರೆಸ್ ಪಕ್ಷವು ದಿಕ್ಕು ತಪ್ಪಿದ ಸ್ಥಿತಿಯಲ್ಲಿರುವುದು ಮುಂದುವರಿದಿದೆ.

ಲೋಕಸಭೆಯಲ್ಲಿ ಈಗಲೂ ಅತಿ ದೊಡ್ಡ ವಿರೋಧ ಪಕ್ಷವೆಂದರೆ ಕಾಂಗ್ರೆಸ್. ಆದರೆ,ವಿರೋಧ ಪಕ್ಷದ ಅಧಿಕೃತ ಸ್ಥಾನಮಾನ ಪಡೆದುಕೊಳ್ಳಲು ಅಗತ್ಯವಾದಂತಹ ಸಂಖ್ಯಾಬಲ ಕಾಂಗ್ರೆಸ್ ಬಳಿ ಇಲ್ಲ. ರಾಜ್ಯಗಳ ಮಟ್ಟದಲ್ಲೂ ಕಾಂಗ್ರೆಸ್ ಸಂಖ್ಯಾಬಲ ಇಳಿಮುಖವಾಗಿದೆ. ರಾಷ್ಟ್ರದ ಮೂರು ರಾಜ್ಯಗಳಲ್ಲಷ್ಟೇ ಪ್ರಮುಖ ಪಕ್ಷವಾಗಿ ಈಗ ಕಾಂಗ್ರೆಸ್ ಉಳಿದಿದೆ. ಇನ್ನು ಮೂರು ರಾಜ್ಯಗಳಲ್ಲಿ, ಆಡಳಿತ ಮೈತ್ರಿಕೂಟಗಳಲ್ಲಿ ಕಾಂಗ್ರೆಸ್ ಕಿರಿಯ ಪಾಲುದಾರ ಪಕ್ಷವಾಗಿದೆ. ತನ್ನ ಚುನಾಯಿತ ಶಾಸಕರೇ ಕೈಬಿಟ್ಟು ಹೋದದ್ದರಿಂದ ಕರ್ನಾಟಕ ಹಾಗೂ ಮಧ್ಯಪ್ರದೇಶದಲ್ಲಿ ತನ್ನ ಸರ್ಕಾರಗಳನ್ನು ಹಿಡಿದಿಟ್ಟುಕೊಳ್ಳಲೂ ಅದು ವಿಫಲ ವಾಯಿತು.

ಪಶ್ಚಿಮ ಬಂಗಾಳ, ಜಾರ್ಖಂಡ್, ತೆಲಂಗಾಣ, ಒಡಿಶಾ ಹಾಗೂ ತಮಿಳುನಾಡಿನಲ್ಲಿ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳಿಗೆ ನಿಜವಾದ ವಿರೋಧ ಎದುರಾಗಿರುವುದು ರಾಜ್ಯ ಮಟ್ಟದ ಬಲಿಷ್ಠ ಪಕ್ಷಗಳಿಂದ. ಈ ವಿಸ್ತೃತವಾದ ಹಿನ್ನೆಲೆಯನ್ನಿಟ್ಟುಕೊಂಡು ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷಗಳ ಮಧ್ಯೆ ವಿರೋಧಪಕ್ಷದ ನಾಯಕತ್ವ ಸ್ಥಾನಕ್ಕಾಗಿ ಸೃಷ್ಟಿಯಾಗುತ್ತಿರುವಂತಹ ಸಮರವನ್ನು ಗಮನಿಸಬೇಕು.

ಪಶ್ಚಿಮ ಬಂಗಾಳದಲ್ಲಿ ತಮ್ಮ ಪ್ರಚಂಡ ವಿಜಯ ವಿನ್ನೂ ಹಸಿರಾಗಿರುವ ಈ ಸಂದರ್ಭದಲ್ಲಿ ರಾಷ್ಟ್ರ ಮಟ್ಟದ ರಾಜಕಾರಣದಲ್ಲಿ ತಮ್ಮನ್ನು ತಾವು ಪ್ರಮುಖ ಪಾತ್ರಧಾರಿಯಾಗಿ ಮಮತಾ ಬ್ಯಾನರ್ಜಿ ಗುರುತಿಸಿಕೊಳ್ಳುತ್ತಿದ್ದಾರೆ. ಈ ಪ್ರವೃತ್ತಿಗೆ ಹಲವು ಅಂಶಗಳು ಸೂಚಕವಾಗಿವೆ. ಮೊದಲಿಗೆ, ಈ ಹಿನ್ನೆಲೆಯನ್ನಿಟ್ಟುಕೊಂಡೇ ತ್ರಿಪುರಾ, ಮೇಘಾಲಯ, ಗೋವಾ ಹಾಗೂ ಉತ್ತರಪ್ರದೇಶಕ್ಕೆ ಅವರ ಪಕ್ಷದ ಮುನ್ನುಗ್ಗುವಿಕೆಯನ್ನು ನೋಡಬೇಕು.

ಎರಡನೆಯದಾಗಿ, ಮಮತಾ ಅವರ ಪಕ್ಷಕ್ಕೆ ಕಳೆದ ಕೆಲವು ವಾರಗಳಲ್ಲಿ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಹಲವು ಹಿರಿಯ ನಾಯಕರ ಪ್ರವೇಶವು ಇದೇ ದೊಡ್ಡ ಆಟದ ಯೋಜನೆಯ ಭಾಗವೇ ಆಗಿದೆ. ಮೂರನೆಯದಾಗಿ, ರಾಷ್ಟ್ರ ಮಟ್ಟದಲ್ಲಿ ಎನ್‌ಡಿಎ ವಿರೋಧಿ, ಕಾಂಗ್ರೆಸ್ಸೇತರ ಮೈತ್ರಿಕೂಟವನ್ನು ಕಟ್ಟುವ ತೃಣಮೂಲ ಕಾಂಗ್ರೆಸ್‌ನ ಪ್ರಯತ್ನ, ಇದೇ ದಿಕ್ಕಿನತ್ತ ಇರಿಸಿದ ಹೆಜ್ಜೆಯಾಗಿದೆ.

ಕೊನೆಯದಾಗಿ, ಕಾಂಗ್ರೆಸ್ ಹಾಗೂ ಅದರ ನಾಯಕತ್ವದ ಬಗ್ಗೆ ಮಮತಾ ಬ್ಯಾನರ್ಜಿ ಹಾಗೂ ತೃಣಮೂಲ ಕಾಂಗ್ರೆಸ್ ನಡೆಸುತ್ತಿರುವ ವಾಗ್ದಾಳಿಗಳೂ ಇದೇ ಕಾರ್ಯತಂತ್ರದ ಭಾಗವೇ ಆಗಿವೆ. ತೃಣಮೂಲ ಕಾಂಗ್ರೆಸ್ ಪಕ್ಷವನ್ನು (ಹಾಗೂ ಅದರ ನಾಯಕತ್ವ) ಮೂಲೆಗೆ ತಳ್ಳಲು ಕಾಂಗ್ರೆಸ್ ಹಾಗೂ ಅದರ ನಾಯಕರು ಪ್ರಜ್ಞಾಪೂರ್ವಕವಾಗಿ ಯತ್ನಿಸುತ್ತಿರುವುದೂ ಪರಸ್ಪರ ಸಂಬಂಧ ಹೊಂದಿರುವಂತೆ ಬಿಂಬಿತವಾಗುತ್ತದೆ! ಅನಾವರಣಗೊಳ್ಳುತ್ತಿರುವ ಈ ಬೆಳವಣಿಗೆಗಳ ಬಗ್ಗೆ ಕಾದು ನೋಡುವ ತಂತ್ರವನ್ನು ಅನುಸರಿಸುವ ನಿರ್ಧಾರವನ್ನು ವಿರೋಧ ಪಕ್ಷಗಳ ಪಾಳಯದ ಭಾಗವಾಗಿರುವ ಇತರ ಪಕ್ಷಗಳು ಕೈಗೊಂಡಂತಿವೆ.

ಈ ಹಿನ್ನೆಲೆಯಲ್ಲಿ, ಬಿಜೆಪಿ ನಾಯಕತ್ವಕ್ಕೆ, 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಭಿಯಾನದ ಕೇಂದ್ರಬಿಂದುವಾಗಿದ್ದದ್ದು ಉತ್ತರಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಒಡಿಶಾ ಎಂಬುದನ್ನು ನೆನಪಿಸಿಕೊಳ್ಳುವುದು ಉಪಯುಕ್ತ. ಪ್ರಾಸಂಗಿಕವಾಗಿ, ಈ ರಾಜ್ಯಗಳಲ್ಲಿ ಬಿಜೆಪಿಗೆ ಪ್ರಮುಖ ಪ್ರತಿಸ್ಪರ್ಧಿಗಳಾಗಿದ್ದದ್ದು ರಾಜ್ಯ ಮಟ್ಟದ ಪಕ್ಷಗಳೇ. 2019ರ ಚುನಾವಣೆಗಳಲ್ಲಿ ಕಂಡುಬಂದ ಬಿಜೆಪಿ ಕಾರ್ಯತಂತ್ರವು ಕಳೆದ ಎರಡು ವರ್ಷಗಳಲ್ಲಿ ಮತ್ತಷ್ಟು ವಿಸ್ತೃತಗೊಂಡಿದೆ. ಬಿಜೆಪಿಯ ‘ಕಾಂಗ್ರೆಸ್‌ಮುಕ್ತ ಭಾರತ’ ಕಾರ್ಯಸೂಚಿಯು ಪ್ರಧಾನ ಕೇಂದ್ರಬಿಂದುವಾಗಿ ಉಳಿದಿದ್ದರೂ ರಾಜ್ಯ ಮಟ್ಟದ ಬಲಿಷ್ಠ ಪಕ್ಷಗಳಿರುವ ರಾಜ್ಯಗಳೆಡೆಗೆ ಅದರ ಗಮನ ಹೆಚ್ಚು ಕೇಂದ್ರೀಕೃತಗೊಳ್ಳುತ್ತಿದೆ.

2014ರ ಲೋಕಸಭೆ ಚುನಾವಣೆಯ ಸೋಲಿನಿಂದ ಚೇತರಿಸಿಕೊಳ್ಳುವಲ್ಲಿ ಕಾಂಗ್ರೆಸ್‌ನ ವೈಫಲ್ಯ, 2019ರ ಸಾರ್ವತ್ರಿಕ ಚುನಾವಣೆ ಹಾಗೂ ನಂತರದಲ್ಲೂ ಬದಿಗೇ ಉಳಿಯುವಂತಾದದ್ದು, ವಿರೋಧ ಪಕ್ಷದ ಪ್ರಮುಖ ಪಾತ್ರಧಾರಿಯ ಸ್ಥಾನವನ್ನು ಕಾಂಗ್ರೆಸ್ ಕ್ರಮೇಣ ತೆರವು ಗೊಳಿಸುವಂತಾಗುವ ಸ್ಥಿತಿಗೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ನಿರ್ವಾತ ಹಾಗೂ ಪಕ್ಷದೊಳಗೇ ಇರುವ ತೀವ್ರ ಒಡಕುಗಳು ಪರಿಸ್ಥಿತಿಯನ್ನು ಮತ್ತಷ್ಟು ಕೆಟ್ಟದಾಗಿಸಿವೆ. ರಾಜಸ್ಥಾನ ಹಾಗೂ ಛತ್ತೀಸಗಡ ಬಿಟ್ಟರೆ ರಾಜ್ಯ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಯನ್ನು ನೇರ ಹೋರಾಟಗಳಲ್ಲಿ ಪರಿಣಾಮಕಾರಿಯಾಗಿ ಎದುರಿಸುವಲ್ಲಿಯೂ ಕಾಂಗ್ರೆಸ್ ಅಸಮರ್ಥವಾಗಿದೆ. ಹಲವು ರಾಜ್ಯಗಳಲ್ಲಿ, ರಾಜ್ಯ ಮಟ್ಟದ ಬಲಿಷ್ಠ ಪಕ್ಷ ಹಾಗೂ ಬಿಜೆಪಿ ಮಧ್ಯೆ ಈಗ ಪ್ರಮುಖ ಚುನಾವಣೆ ಸ್ಪರ್ಧೆ ಏರ್ಪಡುತ್ತಿದ್ದು, ಕಾಂಗ್ರೆಸ್ ಹಾಗೂ ಎಡಪಕ್ಷಗಳು ಮೂರನೇ ಸ್ಥಾನಕ್ಕೆ ತಳ್ಳಲ್ಪಡುತ್ತಿವೆ. ಇದು ಪಶ್ಚಿಮ ಬಂಗಾಳ, ತ್ರಿಪುರಾ, ತೆಲಂಗಾಣ, ಉತ್ತರಪ್ರದೇಶಹಾಗೂ ಒಡಿಶಾದಲ್ಲಿ ನಿಜ. ಈ ಎರಡು ಬೆಳವಣಿಗೆಗಳ ಬೆಳಕಲ್ಲಿ, ಬಿಜೆಪಿ ನೇತೃತ್ವದ ಎನ್‌ಡಿಎಗೆ ರಾಷ್ಟ್ರೀಯ ವಿರೋಧಿ ಕೇಂದ್ರವಾಗಿ ಉದಯಿಸಲು ಮಮತಾ ಬ್ಯಾನರ್ಜಿ ಹಾಗೂ ಅವರ ತೃಣಮೂಲ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಪ್ರಯತ್ನಗಳನ್ನು ಗಮನಿಸಬೇಕು.

ಈ ಸಂಬಂಧದಲ್ಲಿ ಎರಡು ವಿಚಾರಗಳು ಮುಖ್ಯ ವಾಗುತ್ತವೆ. ಬಿಜೆಪಿ ವಿರೋಧಿ ನಾಯಕತ್ವವನ್ನು ಕಟ್ಟ ಬೇಕಿರುವುದು ಪರ್ಯಾಯ ನಾಯಕತ್ವದ ಮೂಲಕವೇ ಅಥವಾ ವಾಸ್ತವಿಕ ನೀತಿ ಹಾಗೂ ಕಾರ್ಯಕ್ರಮಗಳ ಮೂಲಕವೇ? ನಾಯಕತ್ವದ ಸುತ್ತಲ ಸ್ಪರ್ಧೆಯನ್ನು ಬಿಜೆಪಿ ಇಷ್ಟಪಡುತ್ತದೆ. ಏಕೆಂದರೆ ಈ ವಿಚಾರದಲ್ಲಿ ಬಿಜೆಪಿಗೆ ನಿಶ್ಚಿತ ಅನುಕೂಲವಿದೆ. ನಾಯಕತ್ವದ ವಿಚಾರದಲ್ಲಿ ವಿರೋಧಪಕ್ಷಗಳು ಒಟ್ಟಾಗುವುದು ಕಠಿಣ ಸಂಗತಿ.

ನಾಯಕತ್ವದ ವಿಚಾರವನ್ನು ಬಗೆಹರಿಸಿ ಕೊಳ್ಳುವುದರಲ್ಲೇ ವಿರೋಧಪಕ್ಷಗಳ ಸಮಯ ಹಾಗೂ ಪ್ರಯತ್ನಗಳು ಚದುರಿ ಹೋಗುತ್ತವೆ ಹಾಗೂ ಈ ಪ್ರಕ್ರಿಯೆಯಲ್ಲಿ ಮುನ್ನೆಲೆಗೆ ಬರಲು ಬಿಜೆಪಿಗೆ ಅವೇ ಅನುವು ಮಾಡಿಕೊಡುವಂತಾಗುತ್ತದೆ. ಆದರೆ ವಾಸ್ತವಿಕ ನೀತಿ ಹಾಗೂ ಕಾರ್ಯಕ್ರಮಗಳ ಆಯ್ಕೆಯ ಪ್ರಶ್ನೆಯ ವಿಚಾರದಲ್ಲಿ ಹೀಗಾಗುವುದಿಲ್ಲ. ನೀತಿ ಆದ್ಯತೆಗಳು ಹಾಗೂ ಕಾರ್ಯಕ್ರಮ ಆಯ್ಕೆಗಳ ಪರ್ಯಾಯ ಕಾರ್ಯ ಸೂಚಿಯೊಂದಿಗೆ ವಿರೋಧ ಪಕ್ಷಗಳು ಒಟ್ಟಾಗಲು ಪ್ರಯತ್ನಿಸುತ್ತವೆಯೇ?

ಇಂತಹದ್ದೊಂದು ಆಯ್ಕೆಯಿಂದ ಸರ್ಕಾರದ ನೀತಿ ಹಾಗೂ ಆಡಳಿತಗಳ ವಾಸ್ತವಿಕ ವಿಚಾರಗಳು ಸ್ಪರ್ಧೆಯ ಕೇಂದ್ರಬಿಂದುವಾಗುತ್ತವೆ. ಸಾಮಾನ್ಯ ಅಭಿವೃದ್ಧಿ ಕಾರ್ಯಕ್ರಮ (ಸಾಮಾನ್ಯ ಕನಿಷ್ಠ ಕಾರ್ಯಕ್ರಮವಲ್ಲ- ಈ ಹಿಂದೆ ಇದ್ದಂತೆ ಕನಿಷ್ಠ ಒಮ್ಮತ ಎಂಬುದಕ್ಕಿಂತ ಗರಿಷ್ಠ ನೆಲೆಗೆ ಒಯ್ಯುವುದಕ್ಕೆ ಗಮನ) ಎಂಬುದು ವ್ಯಕ್ತಿಗಳು ಹಾಗೂ ವ್ಯಕ್ತಿಕೇಂದ್ರಿತ ಚರ್ಚೆಗಳನ್ನು ಜನರ ವಿಚಾರಗಳು, ಆದ್ಯತೆಗಳು ಹಾಗೂ ಪರ್ಯಾಯ ಮಾರ್ಗಗಳತ್ತ ಚರ್ಚೆಯ ದಿಕ್ಕನ್ನು ಬದಲಿಸಬಲ್ಲದು. ಇದಕ್ಕೆ (ಎರಡೂ ಕಡೆಗಳಲ್ಲಿ) ಸಮಗ್ರ ಹಾಗೂ ಗಟ್ಟಿಯಾದ ಅಸ್ತಿಭಾರ ಬೇಕು. ಜೀವನೋಪಾಯ ಹಾಗೂ ಅಭಿವೃದ್ಧಿಯಂತಹ ವಾಸ್ತವಿಕ ವಿಚಾರಗಳ ಮೇಲೆ ರಾಜಕೀಯ ವಿರೋಧಿಗಳ ನಡುವೆ ಹೆಚ್ಚು ಅರ್ಥಪೂರ್ಣ ಸಂವಾದಗಳಿಗೆ ಇದು ಬಹುಶಃ ನಾಂದಿಯಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT