ಜಾತ್ರೆಯೊಳಗೊಂದು ಜಾತ್ರೆ; ಶತಮಾನದ ನಂಟಿನ ಯಾತ್ರೆ

7
ಕಣ್ಣು ಕೋರೈಸುವ ಕೃಷಿ–ರಾಸುಗಳ ಪರಿಕರ; ದುಬಾರಿ ದುನಿಯಾದಲ್ಲೂ ನಡೆದಿದೆ ವ್ಯವಹಾರ

ಜಾತ್ರೆಯೊಳಗೊಂದು ಜಾತ್ರೆ; ಶತಮಾನದ ನಂಟಿನ ಯಾತ್ರೆ

Published:
Updated:
Prajavani

ವಿಜಯಪುರ: ಉತ್ತರ ಕರ್ನಾಟಕದ ‘ನಮ್ಮೂರ ಜಾತ್ರೆ’ ಎಂದೇ ಖ್ಯಾತವಾದ ವಿಜಯಪುರದ ಸಿದ್ಧೇಶ್ವರರ ಜಾತ್ರೆಗೆ ವಿಧ್ಯುಕ್ತ ಚಾಲನೆ ಸಿಕ್ಕಿದೆ. ಇದರ ಬೆನ್ನಿಗೆ ಗ್ರಾಮ್ಯ ಚಿತ್ರಣವೂ ಅನಾವರಣಗೊಂಡಿದೆ.

ಸಿದ್ಧೇಶ್ವರ ಗುಡಿ ಸುತ್ತಲೂ ಈಗಾಗಲೇ ನಾಡಿನ ವಿವಿಧೆಡೆಯ ವ್ಯಾಪಾರಿಗಳ ಅಂಗಡಿಗಳು ತೆರೆದುಕೊಂಡಿವೆ. ಮಕ್ಕಳ ಮನರಂಜನೆಯ ಆಟೋಟ ಪಾರ್ಕ್‌ ಸಹ ಚಿಣ್ಣರ ಕಲರವಕ್ಕೆ ಸಜ್ಜಾಗಿದೆ.

ವಿಜಯಪುರದ ಹೊರ ವಲಯ ತೊರವಿ ಬಳಿ ಜಾನುವಾರು ಜಾತ್ರೆ ನಡೆದಿದೆ. ಸಹಸ್ರ, ಸಹಸ್ರ ಸಂಖ್ಯೆಯಲ್ಲಿ ರೈತರು, ಜಾನುವಾರು ಜಮಾಯಿಸಿದ್ದು, ಕಣ್ಣು ಹಾಯಿಸಿದಷ್ಟು ದೂರ ರಾಸುಗಳು ಗೋಚರಿಸುತ್ತಿವೆ.

ಈ ಜಾನುವಾರು ಜಾತ್ರೆಯೊಳಗೆ ಗ್ರಾಮೀಣ ಬದುಕಿನ ಸೊಗಡು ಅನಾವರಣಗೊಂಡಿದೆ. ವಿಶಾಲ ಬಯಲಿನಲ್ಲಿ ನೆರಳಿನಾಸರೆಗೆ ರೈತರು ಬಂಡಿಗಳನ್ನೇ ಪುಟ್ಟ ಗುಡಿಸಲನ್ನಾಗಿಸಿಕೊಂಡಿದ್ದಾರೆ. ಇನ್ನೂ ಕೆಲವರು ಜಾನುವಾರು ಮೇವಾದ ಕಬ್ಬಿನ ವಾಡಿ, ಜೋಳದ ಕಣಕಿಯಲ್ಲೇ ಗುಡಿಸಲು ಹಾಕಿಕೊಂಡು, ತಮಗೆ ನೆರಳು ಮಾಡಿಕೊಂಡಿರುವ ಚಿತ್ರಣ ಕಣ್ಣಿಗೆ ಕೋರೈಸಲಿದೆ.

ಈ ಜಾತ್ರೆಯೊಳಗೆ ಒಂದು ಸುತ್ತು ಸಂಚರಿಸಿದರೆ ಸಾಕು. ಸಹಸ್ರಾರು ಬದುಕಿನ ಚಿತ್ರಣದ ಪುಟಗಳು ತೆರೆದು ಕೊಳ್ಳಲಿವೆ. ಎತ್ತುಗಳ ಕಾಲಿಗೆ ಲಾಳ ಕಟ್ಟುವುದು, ಕೊಂಬು ಹಸನುಗೊಳಿಸುವುದು, ರಾಸುಗಳ ಮೈ ತೊಳೆದು ಸ್ವಚ್ಛಗೊಳಿಸುವುದು... ವಿಭಿನ್ನ ಚಿತ್ರಣವೇ ಕಣ್ಣಿಗೆ ಕೋರೈಸಲಿದೆ.

ಜಾನುವಾರು ಜಾತ್ರೆ ಆವರಣದಲ್ಲಿ ರಾಸುಗಳ ಅಲಂಕಾರ ಸಾಮಗ್ರಿ, ಕೃಷಿ ಉಪಕರಣಗಳು, ಒಕ್ಕಲುತನಕ್ಕೆ ಪೂರಕವಾದ ಪರಿಕರಗಳನ್ನೊಳಗೊಂಡ 30ಕ್ಕೂ ಹೆಚ್ಚು ಅಂಗಡಿಗಳು ಜಾತ್ರಾ ಬೀದಿಯ ಎರಡೂ ಕಡೆ ತೆರೆದು ತಮ್ಮ ವಹಿವಾಟು ನಡೆಸಿವೆ.

ಅಲ್ಲಲ್ಲೇ ರೈತರ ಹಸಿವು ತಣಿಸಲು ಹೋಟೆಲ್‌ಗಳು ಇವೆ. ಕಬ್ಬಿನ ಹಾಲಿನ ವಾಹನಗಳಿಗೆ ಲೆಕ್ಕವಿಲ್ಲ. ಬಿಸಿಲ ಧಗೆ ಕಡಿಮೆ ಮಾಡಲು ಮಧ್ಯಾಹ್ನದ ವೇಳೆ ಐಸ್‌ ಕ್ರೀಂ ವ್ಯಾಪಾರಿಗಳು ಜಾತ್ರೆ ತುಂಬಾ ಸಂಚರಿಸಿ, ತಮ್ಮ ಭರ್ಜರಿ ವಹಿವಾಟು ನಡೆಸುವ ಚಿತ್ರಣ ಇದೀಗ ಸಿದ್ಧೇಶ್ವರ ಜಾನುವಾರು ಜಾತ್ರೆಯಲ್ಲಿ ಕಂಡು ಬರುತ್ತಿದೆ.

ಜಾನುವಾರುಗಳ ಜತೆಯೇ ಊರಿಂದ ಬುತ್ತಿ ಹೊತ್ತು ಬಂದಿರುವ ರೈತರು, ಗುಂಪು ಗುಂಪಾಗಿ ಒಂದೆಡೆ ಬೀಡು ಬಿಟ್ಟಿದ್ದಾರೆ. ಒಂದೊಂದೂರಿನ ಜನರು ಒಂದೆಡೆಯೇ ಮೊಕ್ಕಾಂ ಹೂಡಿದ್ದಾರೆ. ಕೆಲವೆಡೆ ಆಸುಪಾಸಿನ ಊರುಗಳ ರೈತರು ಜತೆಯಲ್ಲಿದ್ದಾರೆ. ಈ ಎಲ್ಲರೂ ಒಟ್ಟಾಗಿ ತಮ್ಮ ಮನೆಯ ಬುತ್ತಿ ಬಿಚ್ಚಿ, ಪರಸ್ಪರ ಹಂಚಿ ತಿನ್ನುವ ಚಿತ್ರಣ ಜಾತ್ರಾ ಬೀದಿಯಲ್ಲಿ ಎತ್ತ ಸಂಚರಿಸಿದರೂ ಕಣ್ಣಿಗೆ ಕಾಣುತ್ತಿದೆ.

ಮೂರು ತಲೆಮಾರಿನ ನಂಟು

‘ಜಾತ್ರೆಗೂ ನಮಗೂ ಮೂರು ತಲೆಮಾರಿನ ನಂಟಿದೆ. ನಮ್ಮ ಮುತ್ಯಾನ ಕಾಲದಿಂದಲೂ ಇಲ್ಲಿ ರಾಸುಗಳ ಅಲಂಕಾರ ಸಾಮಗ್ರಿಯ ಅಂಗಡಿ ಹಾಕುತ್ತಿದ್ದೇವೆ. ಒಮ್ಮೆಯೂ ತಪ್ಪಿಲ್ಲ. ಕುಟುಂಬ ಸಮೇತರಾಗಿ ಇಲ್ಲಿಗೆ ಬರುತ್ತೇವೆ. ವಾರಕ್ಕೂ ಹೆಚ್ಚಿನ ಅವಧಿ ಇಲ್ಲಿಯೇ ಬೀಡು ಬಿಟ್ಟು ವಹಿವಾಟು ನಡೆಸುತ್ತೇವೆ’ ಎಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಹನಗಂಡಿಯ ಕುಮಾರ ಜೋಗದಂಡೆ ತಿಳಿಸಿದರು.

‘ನಮ್ಮಲ್ಲಿ ರಾಸುಗಳ ಅಲಂಕಾರ ಸೇರಿದಂತೆ ಅತ್ಯಗತ್ಯ ಬಳಕೆಗೆ ಅಗತ್ಯವಿರುವ ಪರಿಕರಗಳಿವೆ. ಗುಣಮಟ್ಟದ ಮೇಲೆ ಬೆಲೆ ಇರಲಿದೆ. ಕೆಲವರು ದುಬಾರಿಯಾದರೂ ಗುಣಮಟ್ಟದ ವಸ್ತುಗಳನ್ನೇ ಖರೀದಿಸುತ್ತಾರೆ. ಇನ್ನೂ ಹಲವರು ಮುಂದಿನ ಜಾತ್ರೆ ತನಕ ಬಾಳಿಕೆ ಬಂದರೇ ಸಾಕು ಎಂಬ ಮನೋಭಾವನೆಯಿಂದ ಖರೀದಿ ನಡೆಸುತ್ತಾರೆ’ ಎಂದು ಸದಾಶಿವ ಜೋಗದಂಡೆ ಹೇಳಿದರು.

‘ಎತ್ತುಗಳ ಕೊರಳಿಗೆ ಕಟ್ಟುವ ಗೆಜ್ಜೆಸರದ ಜೋಡಿ ₹ 3000ದಿಂದ ₹ 10000ದ ತನಕವಿದೆ. ಜತ್ತಿಗೆ ಬೆಲೆ ₹ 4000. ಹಣೆಪಟ್ಟಿ ₹ 200ರಿಂದ ₹ 2500. ಬಾರಕೋಲ ₹ 150, ₹ 200ರಿಂದ ₹ 1500ರವರೆಗೂ ಇವೆ. ಮಗಾಡದ ಮೌಲ್ಯ ₹ 1000ದಿಂದ ₹ 2000, ಜಾಂಜಪತೆ ಜೋಡಿಗೆ ₹ 500, ಬಾರ ಕನಿಷ್ಠ ಧಾರಣೆ ₹ 200 ಇದೆ. ರೈತರು ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಖರೀದಿಸುತ್ತಾರೆ’ ಎಂದು ಜೋಗದಂಡೆ ಸಹೋದರರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಎರಡು ದಶಕದಿಂದ ಈ ಜಾತ್ರೆಗೆ ತಪ್ಪದೇ ಬರುತ್ತಿರುವೆ. ಇಚಲಕರಂಜಿಯಿಂದ ಕಚ್ಚಾ ಸಾಮಗ್ರಿ ತಂದು ಮನೆಯಲ್ಲೇ ಉತ್ಪನ್ನ ತಯಾರಿಸುತ್ತೇವೆ. ಇನ್ನೂರಕ್ಕೂ ತರಹೇವಾರಿ ವಸ್ತುಗಳು ನಮ್ಮಲ್ಲಿವೆ. ರಾಸುಗಳನ್ನು ಕಟ್ಟಲು ಬಳಸುವ ಹಗ್ಗ ಜೋಡಿಗೆ ₹ 250ರಿಂದಲೂ ಸಿಗಲಿದೆ.

ಮಗಾಡ ₹ 100 ಇದ್ದರೆ, ಕೊರಳಗಂಟೆ ₹ 300, ಜತ್ತಿಗೆ ₹ 400ರ ಧಾರಣೆಯಿದೆ. ನಮ್ಮಲ್ಲಿ ತುಟ್ಟಿ ಎಂಬುದು ಕಡಿಮೆ. ರೈತರ ಕೈಗೆಟುಕುವ ಧಾರಣೆಯಲ್ಲೇ ಉದ್ಯೋಗ ಮಾಡಿ, ವಸ್ತು ತಯಾರಿಸುತ್ತೇವೆ’ ಎಂದು ಕೊಲ್ಹಾರದ ಶಬ್ಬೀರ್ ಕೊಲ್ಹಾರ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !