ಮಂಗಳವಾರ, ಜುಲೈ 5, 2022
21 °C
ಅರ್ಥಪೂರ್ಣ ಕಲಿಕಾ ಸನ್ನಿವೇಶವನ್ನು ರೂಪಿಸುವ ಕಡೆಗೆ ಚಿಂತಿಸಬೇಕಾದುದು ಇಂದಿನ ಅಗತ್ಯ

ವಿಶ್ಲೇಷಣೆ| ಕಲಿಕಾ ಪರಿಸರ ಮತ್ತು ಶೈಕ್ಷಣಿಕ ಪರಿಣಾಮ

ಅರವಿಂದ ಚೊಕ್ಕಾಡಿ Updated:

ಅಕ್ಷರ ಗಾತ್ರ : | |

ವಿದ್ಯಾರ್ಥಿಗಳಲ್ಲಿ ಕಲಿಕೆ ಚೆನ್ನಾಗಿ ನಡೆಯಬೇಕಾದರೆ ಕಲಿಕಾ ಪರಿಸರ ಮತ್ತು ಕಲಿಕಾ ಸಿದ್ಧತೆ ಈ ಎರಡೂ ಪೂರಕವಾಗಿರಬೇಕು ಎಂಬುದು ಶೈಕ್ಷಣಿಕ ಮನೋವಿಜ್ಞಾನವು ನೀಡುವ ತಿಳಿವಳಿಕೆಯಾಗಿದೆ. ಅದರ ಆಧಾರದಲ್ಲಿ ಯಾವ ಪರಿಸರದಲ್ಲಿ ಶಾಲೆ ಇರಬೇಕು, ಶಾಲಾ ಕಟ್ಟಡದ ವಿನ್ಯಾಸ ಹೇಗಿರಬೇಕು ಎಂಬ ಮಾರ್ಗಸೂಚಿಗಳು ಇವೆ. ಕಾರ್ಪೊರೇಟ್ ಶೈಲಿಯ ಶಾಲೆಗಳು ಬರುವವರೆಗೆ ಈ ಮಾರ್ಗಸೂಚಿಗಳನ್ನು ತಕ್ಕಮಟ್ಟಿಗೆ ಪಾಲಿಸಲಾಗಿದೆ. ಬೇಕಾದರೆ ಗಮನಿಸಿ; ಹಳೆಯ ಶಾಲೆಗಳು ಶಬ್ದಮಾಲಿನ್ಯ ಇರುವ ಸ್ಥಳದಲ್ಲಿ ಇರುವುದಿಲ್ಲ. ಪಂಚತಾರಾ ಹೋಟೆಲ್‌ನಂತೆಯೂ ಇರುವುದಿಲ್ಲ. ಮೈದಾನವಿಲ್ಲದೆ ಶಾಲಾ– ಕಾಲೇಜುಗಳು ಇರುವುದಿಲ್ಲ. ಇದು ಭೌತಿಕ ಪರಿಸರಕ್ಕೆ ಸಂಬಂಧಿಸಿದ ಸಂಗತಿಯಾದರೆ, ಬೌದ್ಧಿಕ ಪರಿಸರದಲ್ಲಿಯೂ ಕಲಿಕೆಗೆ ಪೂರಕವಾದ ಸಂಗತಿಗಳಿವೆ. ಶಿಕ್ಷಕರು ಯಾವ ಉಡುಪನ್ನು ಧರಿಸಬೇಕು, ಅಧ್ಯಾಪಕರ ನಡವಳಿಕೆ ಹೇಗಿರಬೇಕು, ಪೋಷಕರು ಮಕ್ಕಳನ್ನು ಹೇಗೆ ನಿರ್ವಹಿಸಬೇಕು ಎಂಬಿತ್ಯಾದಿ ವಿಷಯಗಳು ಬೌದ್ಧಿಕ ಪರಿಸರಕ್ಕೆ ಸಂಬಂಧಿಸಿವೆ. ಇವೆಲ್ಲವೂ ಕಲಿಕೆಯ ಮೇಲೆ ಪ್ರಭಾವವನ್ನು ಬೀರುತ್ತವೆ.


ಅರವಿಂದ ಚೊಕ್ಕಾಡಿ

ವರ್ತಮಾನದ ಶಿಕ್ಷಣದಲ್ಲಿ ಕಲಿಕೆಯ ಉತ್ಪನ್ನವಾಗಿ ಅಂಕಗಳನ್ನು ಪರಿಗಣಿಸುವ ಪದ್ಧತಿ ಇದೆ. ಯಾವತ್ತಾದರೂ ಕಾಲೇಜು ವಿದ್ಯಾರ್ಥಿಗಳು ತಪ್ಪು ಮಾಡಿದಾಗ, ‘ನಿಮಗೆ ಶಿಕ್ಷಕರು ಕಲಿಸಿದ್ದೇನು?’ ಎಂದು ಗೊಣಗಿಕೊಳ್ಳುವಿಕೆಯನ್ನು ಬಿಟ್ಟರೆ ಅಂಕಗಳ ಆಚೆಗೆ ಕಲಿಕೆ ಇದೆ ಎಂಬ ಚಿಂತನೆ ಸಮಾಜದಿಂದ ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲಿ ಶಾಲಾ-ಕಾಲೇಜುಗಳಿಗೆ ಸಂಬಂಧಿಸಿದಂತೆ ನಡೆಯುವ ಚರ್ಚೆಯ ದಿಕ್ಕು ಕಲಿಕಾ ಸನ್ನಿವೇಶವನ್ನು ಪರಿಗಣನೆಗೇ ತೆಗೆದುಕೊಳ್ಳುವುದಿಲ್ಲ ಎಂಬುದು ಕಲಿಕಾ ಸಾಧ್ಯತೆಗಳನ್ನು ತೀವ್ರವಾಗಿ ಕುಸಿಯು ವಂತೆ ಮಾಡುತ್ತದೆ.

ಉದಾಹರಣೆಗೆ ಇತ್ತೀಚೆಗೆ ಸಮವಸ್ತ್ರದ ವಿಚಾರವು ಧಾರ್ಮಿಕ ಹಕ್ಕಿನ ದೃಷ್ಟಿಯಲ್ಲಿ, ಸಮಾನತೆಯ ದೃಷ್ಟಿಯಲ್ಲಿ, ಕಾನೂನಿನ ದೃಷ್ಟಿಯಲ್ಲಿ, ನಂಬಿಕೆಯ ದೃಷ್ಟಿಯಲ್ಲಿ, ಸ್ತ್ರೀ ಸ್ವಾತಂತ್ರ್ಯದ ದೃಷ್ಟಿಯಲ್ಲೆಲ್ಲ ಚರ್ಚೆಗೆ ಒಳಗಾಗಿದೆ. ಆದರೆ ವಿದ್ಯಾರ್ಥಿಗಳು ಶಾಲಾ ಆಡಳಿತ ಹಾಗೂ ತಮಗೆ ಬೋಧಿಸುವ ಅಧ್ಯಾಪಕರನ್ನು ನಿರಾಕರಿಸಿ ನಡೆಯಬಹುದಾದ ಒಂದು ಸನ್ನಿವೇಶ ಮತ್ತು ಆ ಸನ್ನಿವೇಶದಲ್ಲಿ ವಿದ್ಯಾರ್ಥಿಗಳ ನಿರಾಕರಣಾ ನಡವಳಿಕೆಗಳಿಗೆ ಬೆಂಬಲ ಉಂಟಾಗುವ ಸ್ಥಿತಿಯಲ್ಲಿ ಕಲಿಕಾ ಶಿಸ್ತು ಹೇಗೆ ಉಳಿಯುತ್ತದೆ ಎಂಬುದರ ಬಗ್ಗೆ ಸಾರ್ವಜನಿಕ ಚರ್ಚೆಗಳು ಗಮನಿಸಿಲ್ಲ. ಹಾಗೆಯೇ, ತನ್ನ ಪ್ರೀತಿಯನ್ನು‌ ಪಡೆಯುವ ಹಕ್ಕು ಇರುವ ವಿದ್ಯಾರ್ಥಿಗಳ ಮೇಲೆ ಕಲಿಕಾ ಅಗತ್ಯಗಳಿಗೆ ಹೊರತಾದ ವಿಚಾರಗಳ ಆಧಾರದಲ್ಲಿ ಕ್ರಮ ತೆಗೆದುಕೊಳ್ಳಬೇಕಾದ ಸ್ಥಿತಿ ಅಧ್ಯಾಪಕರಿಗೆ ಉಂಟಾಗುವುದು ಅಧ್ಯಾಪಕರನ್ನೂ ದುರ್ಬಲಗೊಳಿಸುತ್ತದೆ. ಇದರಿಂದ ಅಧ್ಯಾಪಕ- ವಿದ್ಯಾರ್ಥಿ ಸಂಬಂಧಗಳು ಕುಸಿಯುತ್ತವೆ. ಅಧ್ಯಾಪಕ- ವಿದ್ಯಾರ್ಥಿ ಸಂಬಂಧಗಳು ದುರ್ಬಲವಾದರೆ ಅಧ್ಯಾಪಕರ ಬೋಧನೆಯು ವಿದ್ಯಾರ್ಥಿಗಳ ಮೇಲೆ ಉಂಟು ಮಾಡಬೇಕಾದ ಪರಿಣಾಮ ಕಡಿಯಾಗುತ್ತದೆ. ಅಂತಿಮವಾಗಿ ಅದು ಶಿಕ್ಷಣವನ್ನು ದುರ್ಬಲಗೊಳಿಸುತ್ತದೆ. ಆಗ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳು ಬಂದರೂ ಕಲಿಕೆ ನಡೆದಿರುವುದಿಲ್ಲ.

ಕಲಿಕೆ ಯಶಸ್ವಿಯಾಗಿ ನಡೆಯಲು ಕಲಿಕಾ ಸನ್ನಿವೇಶವು ಪ್ರಜಾಸತ್ತಾತ್ಮಕವಿರಬೇಕು. ಕಲಿಕಾ ಶಿಸ್ತು ಇರಬೇಕು. ಬಹುಮಟ್ಟಿಗೆ ನಾವು ಪ್ರಜಾಸತ್ತೆ ಮತ್ತು ಕಲಿಕಾ ಸನ್ನಿವೇಶ ಎರಡನ್ನೂ ಅರ್ಥ ಮಾಡಿಕೊಂಡದ್ದರಲ್ಲಿ ದೋಷವಿದೆ. ಪ್ರಜಾಪ್ರಭುತ್ವ ಎಂದರೆ ‘ಅಶಿಸ್ತು’ ಎಂದು ಅರ್ಥವಲ್ಲ.‌ ಸಾರ್ವಜನಿಕ ಶಿಸ್ತನ್ನು ಶಿಕ್ಷೆಯ ಭಯವು ರೂಪಿಸದೆ, ಪರಸ್ಪರ ಸಂವಾದದಿಂದ ಹುಟ್ಟಿಕೊಂಡ ಜ್ಞಾನವು ರೂಪಿಸುತ್ತದೆ ಎಂದು ಅರ್ಥ. ಶಿಸ್ತಂತೂ ಇದ್ದೇ ಇರುತ್ತದೆ. ಅದು ಸ್ವಯಂ ಶಿಸ್ತಾಗಿದ್ದಷ್ಟೂ ಶಿಸ್ತಿನ ದಕ್ಷತೆ ಜಾಸ್ತಿ ಇರುತ್ತದೆ.

ಅದೇ ರೀತಿ, ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯವಿದೆ ಎಂದರೆ ವಿದ್ಯಾರ್ಥಿಗಳನ್ನು ಹೇಳುವವರು, ಕೇಳುವವರು ಯಾರೂ ಇರುವುದೇ ಇಲ್ಲ, ಅವರು ಬೇಕಾದ ಹಾಗೆ ವರ್ತಿಸಬಹುದು ಎಂದು ಅರ್ಥ ಅಲ್ಲ. ಕಲಿಕಾ ಸನ್ನಿವೇಶದಲ್ಲಿ ಅಧ್ಯಾಪಕರ ಅವಲೋಕನದ ಒಳಗೆ, ಶೈಕ್ಷಣಿಕ ಆಡಳಿತದ ಸನ್ನಿವೇಶದಲ್ಲಿ ಶಾಲಾ ಆಡಳಿತದ ಅವಲೋಕನದ ಒಳಗೆ ವಿದ್ಯಾರ್ಥಿಗಳು ಸ್ವತಂತ್ರರಾಗಿರುತ್ತಾರೆ ಎಂದು ಅರ್ಥ. ವಿದ್ಯಾರ್ಥಿಗಳ ಅವಲೋಕನದ ಅಧಿಕಾರವು ಅಧ್ಯಾಪಕರಿಗೂ ಆಡಳಿತಕ್ಕೂ ಇರುವುದಿಲ್ಲವಾದರೆ ವಿದ್ಯಾರ್ಥಿಗಳಿಗೆ ಏನಾದರೂ ತೊಂದರೆಯಾದಾಗ ಹೊಣೆಗಾರಿಕೆಯನ್ನು ಅಧ್ಯಾಪಕರು‌ ಮತ್ತು ಶಾಲಾ ಆಡಳಿತ ಹೇಗೆ ವಹಿಸಿಕೊಳ್ಳಲು ಬರುತ್ತದೆ. ‘ನಾನು ಜೊತೆಯಲ್ಲಿಲ್ಲದೆ ನದಿಗೆ ಹೋಗಬೇಡ’ ಎಂದು ವಿದ್ಯಾರ್ಥಿಗಳಿಗೆ ಅಧ್ಯಾಪಕರು ಹೇಳಿದಾಗ ಅದನ್ನು ವಿದ್ಯಾರ್ಥಿಗಳು ಪಾಲಿಸಬೇಕು ಎಂಬುದನ್ನು ಸಮಾಜ ಒಪ್ಪಿಕೊಂಡಾಗ ಮಾತ್ರ ವಿದ್ಯಾರ್ಥಿ ನದಿಯಲ್ಲಿ ಯಾವುದಾದರೂ ಅವಘಡಕ್ಕೆ ಒಳಗಾದರೆ ಸಮಾಜ ಅಧ್ಯಾಪಕರನ್ನು ಪ್ರಶ್ನಿಸಲು ಬರುತ್ತದೆ. ಶಾಲಾ ವ್ಯವಸ್ಥೆಯ ಮೇಲೆ ಹರಿಹಾಯುವಾಗ ಇಷ್ಟು ಪ್ರಜ್ಞೆ ಇರಬೇಕಾಗಿದೆ. ಆಡಳಿತಾತ್ಮಕ ವ್ಯವಸ್ಥೆಗೆ ತನ್ನ ಅಧೀನದಲ್ಲಿರುವವರ ಮೇಲೆ ಕೆಲವು ಅಧಿಕಾರಗಳಿದ್ದಾಗ ಮಾತ್ರ ಕೆಲಸ ಮಾಡಲು ಸಾಧ್ಯವಾಗುವುದು.

ಮೂರನೆಯದಾಗಿ ಶಾಲಾ ಸನ್ನಿವೇಶಗಳು ಜಾಗತೀ ಕರಣದ ನಂತರದ ದಿನಗಳಲ್ಲಿ ತೀವ್ರವಾಗಿ ಸಾಂಸ್ಕೃತಿಕ ರಾಜಕಾರಣಕ್ಕೆ ಒಳಗಾದವು. ಜಾಗತೀಕರಣಕ್ಕೆ ಹಿಂದಿನ ಕಾಲಾವಧಿಯ 20 ಅಂಶಗಳ ಕಾರ್ಯಕ್ರಮಗಳು, ಜನತಾ ಕಾಲೊನಿ ಯೋಜನೆ, ವಿದ್ಯಾರ್ಥಿಗಳಿಗೆ ಸಮವಸ್ತ್ರ ಯೋಜನೆ ಇಂತಹವುಗಳೆಲ್ಲ ಜಾತ್ಯತೀತವಾಗಿ ಎಲ್ಲ ಬಡವರಿಗೂ ಅನುಕೂಲ‌ ಮಾಡಿಕೊಡುವ ಬಡತನ‌ ನಿರ್ಮೂಲನಾ ಕಾರ್ಯಕ್ರಮಗಳಾಗಿದ್ದವು.‌ ಸಾಮಾಜಿಕ ನ್ಯಾಯಕ್ಕಾಗಿನ ಯೋಜನೆಗಳು ಬೇರೆ ಇರುತ್ತಿದ್ದವು. ಉದಾಹರಣೆಗೆ ಮೀಸಲಾತಿಯ ಉದ್ದೇಶ ಸಾಮಾಜಿಕ ನ್ಯಾಯ. ಅದಕ್ಕೂ ಬಡತನ ನಿರ್ಮೂಲನಾ ಕಾರ್ಯಕ್ರಮಗಳಿಗೂ ನಡುವೆ ವ್ಯತ್ಯಾಸವಿದೆ. ಜಾಗತೀಕರಣದ ನಂತರದ ದಿನಗಳಲ್ಲಿ ಬಡತನ ನಿರ್ಮೂಲನಾ ಕಾರ್ಯಕ್ರಮಗಳು ಬಹುಮಟ್ಟಿಗೆ ಪ್ರತ್ಯೇಕ‌ ಅಸ್ತಿತ್ವವನ್ನು ಕಳೆದುಕೊಂಡು ಸಾಮಾಜಿಕ ನ್ಯಾಯಕ್ಕಾಗಿನ ವ್ಯವಸ್ಥೆಯ ಭಾಗವಾದವು. ಆಗ ಹುಟ್ಟಿಕೊಂಡದ್ದೇ ಎಲ್ಲ ಜಾತಿಗಳಲ್ಲೂ ಬಡವರು ಇಲ್ಲವೇ ಎಂಬ ಪ್ರಶ್ನೆ.

ಹೀಗೆ ಶಿಕ್ಷಣ ಸಂಸ್ಥೆಗಳಿಗೂ ಪ್ರವೇಶಿಸಿದ ಸಾಂಸ್ಕೃತಿಕ ರಾಜಕಾರಣವು ಅದರ ಎರಡನೆಯ ಹಂತದಲ್ಲಿ ಭಿನ್ನ ಧರ್ಮಗಳ ನಡುವಿನ ಸಾಂಸ್ಕೃತಿಕ‌ ಸಂಘರ್ಷವಾಗಿ ವರ್ತಮಾನದಲ್ಲಿ‌ ಮುಂದುವರಿಯುತ್ತಿದೆ. ಪ್ರಜಾಪ್ರಭುತ್ವದಲ್ಲಿ ಭಿನ್ನ ನೆಲೆಯ ರಾಜಕಾರಣವೂ ಸಹಜವೇ. ವಿದ್ಯಾರ್ಥಿಗಳಲ್ಲೂ ಅದರ ಅರಿವು ಸಹಜವೇ. ಆದರೆ ವಿದ್ಯಾಸಂಸ್ಥೆಗಳಲ್ಲಿ‌ ರಾಜಕಾರಣವು ಅರಿವಾಗಿ ಬರಬೇಕೆ ಹೊರತು ಕಲಿಕಾ ಅಡಚಣೆಯಾಗಿ ಬರಬಾರದು ಎಂಬುದು ಎಲ್ಲ‌ ನೆಲೆಯ ರಾಜಕಾರಣಗಳಿಗೆ ಇರಬೇಕಾದ ಬದ್ಧತೆಯಾಗಿದೆ. ಈಗ ಆ ಬದ್ಧತೆ ಉಳಿದಿಲ್ಲ.

ಕಲಿಕಾ ಸನ್ನಿವೇಶ ಹೀಗಿರಬೇಕು ಎಂಬ ಕುರಿತ ಶೈಕ್ಷಣಿಕ ಸಂಶೋಧನೆಗಳನ್ನು ಎಲ್ಲರೂ ಒಪ್ಪುತ್ತಾರೆ. ಆದರೆ ಅವರವರ ಹಿತಾಸಕ್ತಿಯ ವಿಚಾರ ಬಂದಾಗ ಕಲಿಕಾ ಸನ್ನಿವೇಶ ತನ್ನ ಮೂಗಿನ ನೇರಕ್ಕೆ ಇರಬೇಕು ಎನ್ನುವುದೇ ಎಲ್ಲರ ವಾದವೂ ಆಗುತ್ತದೆ. ಆಗ ಶೈಕ್ಷಣಿಕ ಕಾಳಜಿಗಳಿಗೆ ಮಹತ್ವ ಇರುವುದಿಲ್ಲ. ಸಾಹಿತಿಗಳು ಕೂಡ ಈ ವಿಷಯದಲ್ಲಿ ಕಲಿಕಾ ಸನ್ನಿವೇಶವನ್ನು ಪರಿಗಣಿಸದೆಯೇ, ತಾವು ಯಾವುದರ ಪರವಾಗಿದ್ದೇವೋ ಅದನ್ನು ಗೆಲ್ಲಿಸಿಕೊಳ್ಳಲು ಪ್ರತಿಪಾದನೆ ನಡೆಸುವವರೇ ಆಗಿದ್ದಾರೆ. ಆದರೆ, ಸಂವಾದಗಳು ಶಿಕ್ಷಣವನ್ನು ಬೆಳೆಸುತ್ತವೆ. ಪ್ರತಿಪಾದನೆಗಳು ಶಿಕ್ಷಣವನ್ನು ಸಾಯಿಸುತ್ತವೆ. ಭವಿಷ್ಯ ಖಾಸಗೀಕರಣದ ಯುಗದ್ದಾಗಿದೆ. ಖಾಸಗೀಕರಣದಲ್ಲಿ ಸಾಮಾಜಿಕ ನ್ಯಾಯದ ಸಾಧನೆ ಕೂಡ ಪ್ರತಿಭೆ ಮತ್ತು ಪರಿಶ್ರಮವನ್ನು ಅವಲಂಬಿಸಿರುತ್ತದೆಯೆ ವಿನಾ ವ್ಯಕ್ತಿಯ ಸ್ಥಿತಿ ಅಲ್ಲ. ಆದ್ದರಿಂದ ವಿದ್ಯಾರ್ಥಿಗಳು ಪ್ರತಿಭೆಯನ್ನು ವಿಕಾಸಗೊಳಿಸಿಕೊಳ್ಳದೆ ಕೇವಲ ಅಂಕಗಳು ಮತ್ತು ಪುಡಿ ಜಗಳಗಳಿಗೆ ತಮ್ಮ ಕಲಿಕಾ ವರ್ಷಗಳನ್ನು ಸೀಮಿತಗೊಳಿಸಿದರೆ ಭವಿಷ್ಯವನ್ನು ಅವರು ಕಳೆದುಕೊಳ್ಳಬಹುದಾದ ಪ್ರಮೇಯವಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ಪಾಲಕರು, ಶೈಕ್ಷಣಿಕ ಆಡಳಿತಗಳು ಅರ್ಥಪೂರ್ಣ ಕಲಿಕಾ ಸನ್ನಿವೇಶವನ್ನು ರೂಪಿಸುವ ಕಡೆಗೆ ಚಿಂತಿಸಬೇಕಾದ ಅಗತ್ಯವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು