ಗುರುವಾರ , ಏಪ್ರಿಲ್ 15, 2021
21 °C

ಪ್ರೀತಿ ತಂದ ಆವಿಷ್ಕಾರ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಬ್ರಹ್ಮದತ್ತ ವಾರಾಣಸಿಯನ್ನು ಆಳುತ್ತಿದ್ದಾಗ ಬೋಧಿಸತ್ವ ಅವನ ಪಟ್ಟದ ಮಹಿಷಿಯ ಮಗನಾಗಿ ಹುಟ್ಟಿ, ಸಕಲವಿದ್ಯೆಗಳನ್ನು ಕಲಿತು ನಂತರ ತಂದೆ ಮರಣ ಹೊಂದಿದ ಮೇಲೆ ತಾನೇ ರಾಜನಾದ. ಅವನಿಗೊಬ್ಬಳು ಸುಂದರಿಯಾದ ಮಗಳಿದ್ದಳು. ರಾಜನ ಸೋದರಿಯ ಮಗನೂ ಅರಮನೆಯಲ್ಲೇ ಇದ್ದ. ರಾಜ ಅಮಾತ್ಯರೊಂದಿಗೆ ಒಂದು ದಿನ ಹೇಳಿದ, ‘ನನ್ನ ಸೋದರಳಿಯನಿಗೇ ಮಗಳನ್ನು ಕೊಟ್ಟು ಮದುವೆ ಮಾಡುತ್ತೇನೆ. ಆಗ ಮಗಳೂ ಇಲ್ಲಿಯೇ ಉಳಿಯುತ್ತಾಳೆ, ರಾಜ್ಯವೂ ಭದ್ರವಾಗಿರುತ್ತದೆ’ ಮಗಳು ಹಾಗೂ ಸೋದರಳಿಯ ಇದನ್ನು ಕೇಳಿಸಿಕೊಂಡರು. ತಾವು ಮುಂದೆ ಮದುವೆಯಾಗುವವರು ಎಂದುಕೊಂಡಾಗ ಪ್ರೇಮ ಬೆಳೆದು ಬಲಿಯಿತು.

ಅವರು ಬೆಳೆದು ಪ್ರಾಪ್ತವಯಸ್ಕರಾದಾಗ ರಾಜ ಮನಸ್ಸನ್ನು ಬದಲಾಯಿಸಿದ. ಸೋದರಳಿಯನಿಗೆ ಬೇರೆ ರಾಜ್ಯದ ರಾಜಕುಮಾರಿಯನ್ನು ಮದುವೆ ಮಾಡಿಸಿ, ತನ್ನ ಮಗಳಿಗೆ ಬೇರೆ ದೇಶದ ರಾಜಕುಮಾರನ್ನು ಮದುವೆ ಮಾಡಿದರೆ ಮತ್ತಿಬ್ಬರು ರಾಜರು ಸಂಬಂಧಿಕರಾಗಿ ತನ್ನ ದೇಶ ಭದ್ರವಾಗುತ್ತದೆ ಎಂದು ತೀರ್ಮಾನ ಮಾಡಿದ. ಆಗಲೇ ಸೋದರಳಿಯ ಹಾಗೂ ರಾಜಕುಮಾರಿಯರು ಬಿಟ್ಟಿರಲಾರದಷ್ಟು ಪ್ರೇಮಿಗಳಾಗಿದ್ದರು. ರಾಜ ಸೋದರಳಿಯನಿಗೆ ಬೇರೆ ಮನೆಮಾಡಿಕೊಟ್ಟು ಕಳುಹಿಸಿದ. ಮಗಳನ್ನು ತನ್ನ ಜೊತೆಗೆ ಇಟ್ಟುಕೊಂಡು ಅವರಿಬ್ಬರೂ ಭೇಟಿಯಾಗದಂತೆ ಭದ್ರತೆಯನ್ನು ಮಾಡಿದ.

ಸೋದರಳಿಯ ಚಿಂತಿತನಾದ. ಅವನ ದಾದಿ ಕಾರಣ ಕೇಳಿದಾಗ ತನ್ನ ಸಂಕಟವನ್ನು ಹೇಳಿಕೊಂಡ. ಆಕೆ ಬುದ್ಧಿವಂತೆ ಅರಮನೆಯನ್ನು ಸೇರಿ ರಾಜಕುಮಾರಿಯ ಸೇವೆ ಮಾಡುವಂತೆ ಹೋಗಿ ಈ ವಿಷಯವನ್ನು ಆಕೆಗೆ ತಿಳಿಸಿದಳು. ಹುಡುಗಿ ಇನ್ನೂ ಬುದ್ಧಿವಂತೆ. ಆಕೆ ಹೇಳಿದಳು, ‘ಅತ್ಯಂತ ಕೋಮಲವಾದ ಕೈಯುಳ್ಳ ಹುಡುಗ ಮತ್ತು ಒಂದು ಆನೆ ಇದ್ದು ಮಳೆಯ ದಿನ ನನ್ನ ಬಚ್ಚಲಮನೆಯ ಕಿಟಕಿಯ ಹತ್ತಿರ ಬಂದರೆ ಸಾಕು, ಅವನ ಆಸೆ ಈಡೇರುತ್ತದೆ’. ವಿಷಯ ಸೋದರಳಿಯನಿಗೆ ಮುಟ್ಟಿತು. ಆತ ಅತ್ಯಂತ ಚೆಂದದ, ಕೋಮಲ ಕೈಗಳನ್ನುಳ್ಳ ಸೇವಕನನ್ನು ಕರೆದುಕೊಂಡು ಒಂದು ಆನೆಯ ಮೇಲೇರಿ ಅರಮನೆಯಲ್ಲಿ ರಾಜಕುಮಾರಿಯ ಬಚ್ಚಲಮನೆಯ ಕಿಟಕಿಯ ಕೆಳಗೆ ಬಂದು ನಿಂತ. ಮಳೆ ಸುರಿಯತೊಡಗಿತು.

ರಾಜನೂ ರಾಜಕುಮಾರಿಯ ಕೊಠಡಿಯಲ್ಲೇ ಮಲಗಿ ಆಕೆಯನ್ನು ಕಾಯುತ್ತಿದ್ದ. ಮಗಳು, ‘ಅಪ್ಪಾ, ಶಕೆಯಿಂದ ಮೈ ನೆನೆದಿದೆ. ಸ್ನಾನ ಮಾಡಬೇಕು’ ಎಂದಳು. ಆತ ಆಕೆಯನ್ನು ಬಚ್ಚಲುಮನೆಗೆ ಕರೆದೊಯ್ದು ಅವಳ ಒಂದು ಕೈಹಿಡಿದುಕೊಂಡು ಬಾಗಿಲಹೊರಗೆ ನಿಂತ. ಆಕೆ ಒಳಗೆ ಹೋಗಿ ಸನ್ನೆ ಮಾಡಿದಾಗ ಸೋದರಳಿಯ ಮೃದುವಾದ ಕೈ ಇದ್ದ ಹುಡುಗನನ್ನು ಕಿಟಕಿಯಿಂದ ಒಳಗೆ ಕಳುಹಿಸಿದ. ರಾಜಕುಮಾರಿ ತನ್ನ ಒಂದು ಕೈಯಲ್ಲಿದ್ದ ಆಭರಣಗಳನ್ನು ಅವನಿಗೆ ಕೊಟ್ಟು ಹಾಕಿಕೊಳ್ಳಲು ಹೇಳಿದಳು. ನಂತರ ತಂದೆಗೆ ಅಲಂಕೃತವಾದ ಹುಡುಗನ ಕೈ ಕೊಟ್ಟು ಇನ್ನೊಂದು ಕೈಯ ಆಭರಣಗಳನ್ನು ಅವನ ಕೈಗೆ ತೊಡಿಸಿ, ತನ್ನ ಇನ್ನೊಂದು ಜೊತೆ ಬಟ್ಟೆಗಳನ್ನೇ ಅವನಿಗೆ ತೊಡಿಸಿ ಕಿಟಕಿಯ ಮೂಲಕ ನಿಧಾನವಾಗಿ ಆನೆಯ ಮೇಲಿಳಿದು ತನ್ನ ಪ್ರಿಯಕರನೊಂದಿಗೆ ಹೊರಟು ಹೋದಳು. ರಾಜ ಕತ್ತಲೆಯಲ್ಲಿ ಆ ಹುಡುಗನನ್ನೇ ತನ್ನ ಮಗಳೆಂದು ತಿಳಿದು ತಂದು ಮಲಗಿಸಿದ. ಮರುದಿನ ಬೆಳಿಗ್ಗೆ ವಿಷಯ ತಿಳಿದು ರಾಜ ಆಶ್ಚರ್ಯಪಟ್ಟ. ಮೊದಲು ಅವರು ಪ್ರೇಮಿಗಳಾಗುವುದಕ್ಕೆ ಅವಕಾಶ ಕೊಟ್ಟು ನಂತರ ಅವರನ್ನು ಬೇರ್ಪಡಿಸಲು ಮಾಡಿದ ತಪ್ಪನ್ನು ಅರಿತು ಅವರಿಗೆ ಮದುವೆ ಮಾಡಿದ.

ಪ್ರೀತಿ ತನ್ನ ಗುರಿ ತಲುಪುವುದಕ್ಕೆ ಅತ್ಯಂತ ಸೃಜನಶೀಲವಾದ ವಿಧಾನಗಳನ್ನು ಸೃಷ್ಟಿಸಿಕೊಳ್ಳುತ್ತದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.