ವಿಜಯಪುರ ಜಿಲ್ಲೆ: ನವರಾತ್ರಿ ರಂಗು; ಸಂಭ್ರಮದ ಗುಂಗು..!

7
ಶಕ್ತಿ ದೇವತೆಯ ಶ್ರದ್ಧಾ–ಭಕ್ತಿಯ ಆರಾಧನೆ; ಪಾರಾಯಣ, ವಿಶೇಷ ಪೂಜೆ

ವಿಜಯಪುರ ಜಿಲ್ಲೆ: ನವರಾತ್ರಿ ರಂಗು; ಸಂಭ್ರಮದ ಗುಂಗು..!

Published:
Updated:
Deccan Herald

ವಿಜಯಪುರ ನಗರವೂ ಸೇರಿದಂತೆ ಜಿಲ್ಲೆಯ ಪಟ್ಟಣ, ಗ್ರಾಮೀಣ ಪ್ರದೇಶದಲ್ಲಿ ಇದೀಗ ಎಲ್ಲೆಡೆ ನವರಾತ್ರಿಯ ಸಂಭ್ರಮ ಮೇಳೈಸಿದೆ. ದೇವಿಯ ಆರಾಧನೆ ಶ್ರದ್ಧಾ ಭಕ್ತಿಯಿಂದ ನಡೆದಿದೆ. ಮಹಾಲಯ ಅಮಾವಾಸ್ಯೆ ಬಳಿಕ ಶಕ್ತಿ ದೇವತೆ, ನಾಡ ದೇವತೆ, ಅಂಬಾ ಭವಾನಿ, ದುರ್ಗಾ ಮಾತೆ ಹೆಸರಿನಲ್ಲಿ ದೇವಿ ಪ್ರತಿಷ್ಠಾಪನೆ ನಡೆದಿದ್ದು, ಕೆಲವೆಡೆ ಶನಿವಾರವೂ ಮುಂದುವರೆಯಿತು. 

ಪ್ರತಿಷ್ಠಾಪನೆಗೂ ಮುನ್ನ ನಾಡ ದೇವಿಯ ವೈಭವೋಪೇತ ಮೆರವಣಿಗೆ ನಡೆದಿದೆ. ಕೆಲವೆಡೆ ಆನೆಯೂ ಭಾಗಿಯಾಗಿ ಗಂಭೀರ ಹೆಜ್ಜೆ ಹಾಕಿದೆ. ಕಲಾ ತಂಡಗಳು ನೀಡಿದ ಪ್ರದರ್ಶನಕ್ಕೆ ಶ್ಲಾಘನೆಯೂ ವ್ಯಕ್ತವಾಗಿದೆ. ಒಟ್ಟಾರೆ ನವರಾತ್ರಿ ನಿತ್ಯೋತ್ಸವವಾಗಿ ಮಾರ್ಪಟ್ಟಿದೆ.

ವಿದ್ಯುತ್‌ ದೀಪಾಲಂಕಾರದಿಂದ ಝಗಮಗಿಸುವ ಭವ್ಯ ವೇದಿಕೆಯಲ್ಲಿ ನಾಡ ದೇವಿಯ ಮೂರ್ತಿ ಪ್ರತಿಷ್ಠಾಪನೆಗೊಂಡಿದ್ದು, ತ್ರಿಕಾಲ ಪೂಜೆ ನಡೆದಿದೆ. ಸಹಸ್ರ, ಸಹಸ್ರ ಸಂಖ್ಯೆಯ ಭಕ್ತ ಸಮೂಹ ಮುಂಜಾನೆ–ಮುಸ್ಸಂಜೆ ತಪ್ಪದೇ ದರ್ಶನ ಪಡೆಯುತ್ತಿದೆ. ಕೆಲವೆಡೆ ನಿತ್ಯ ಅನ್ನ ಸಂತರ್ಪಣೆಯೂ ನಡೆದಿದೆ.

ನಾಡದೇವಿ ಪ್ರತಿಷ್ಠಾಪನೆಗೊಂಡಿರುವ ಭವ್ಯ ವೇದಿಕೆ ಪಕ್ಕದಲ್ಲೇ ಸಾಂಸ್ಕೃತಿಕ ಕಲರವವೂ ಮೇಳೈಸಿದೆ. ಹಿಂದಿನ ವರ್ಷಗಳಷ್ಟು ಸಾಂಸ್ಕೃತಿಕ ಸಿರಿವಂತಿಕೆ ಗೋಚರಿಸದಿದ್ದರೂ; ಕೆಲ ಮಂಡಳಿಗಳು ವಿವಿಧ ಕಾರ್ಯಕ್ರಮ ಆಯೋಜಿಸಿವೆ. ದೇವಿಯ ದರ್ಶನ ಪಡೆಯಲು ಕುಟುಂಬ ಸಮೇತರಾಗಿ ಜನಸ್ತೋಮ ವಿವಿಧೆಡೆ ಭೇಟಿ ನೀಡಿದ್ದು, ಶನಿವಾರ ಸಂಜೆ ಎಲ್ಲೆಡೆ ಗೋಚರಿಸಿತು.

ಗ್ರಾಮೀಣ ಪ್ರದೇಶದಲ್ಲೂ ದಸರಾ ವೈಭವ ಮನೆ ಮಾಡಿದೆ. ನಿತ್ಯವೂ ಒಂದೊಂದು ಕಾರ್ಯ ಚಟುವಟಿಕೆ ಹಮ್ಮಿಕೊಳ್ಳುವ ಮೂಲಕ ನವರಾತ್ರಿಯ ರಂಗನ್ನು ಹೆಚ್ಚಿಸುವ ಕೆಲಸ ವ್ಯವಸ್ಥಿತವಾಗಿ ನಡೆದಿದೆ. ಮನೆ–ಮನೆಗಳಲ್ಲೂ ನವರಾತ್ರಿಯ ನಂದಾದೀಪ ಬೆಳಗುತ್ತಿದೆ. ನಾರಿಯರು ಮುಂಜಾನೆ–ಮುಸ್ಸಂಜೆ ತಪ್ಪದೇ ದೇವಿ ಆರಾಧನೆ ನಡೆಸಿದ್ದಾರೆ.

ನವರಾತ್ರಿಯ ರಂಗು ಕಣ್ತುಂಬಿಕೊಳ್ಳಲು ರಾತ್ರಿ ವೇಳೆ ನಾಡದೇವಿ ಪ್ರತಿಷ್ಠಾಪನಾ ಮಂಟಪಗಳ ಬಳಿ ಹೆಜ್ಜೆ ಹಾಕುತ್ತಿರುವ ಕುಟುಂಬಗಳ ಸಂಖ್ಯೆ ದಿನ ಕಳೆದಂತೆ ಹೆಚ್ಚುತ್ತಿದೆ. ಪುಟಾಣಿಗಳ ಸಂಭ್ರಮ ಮೇರೆ ಮೀರಿದೆ. ಎಲ್ಲೆಡೆ ವಿದ್ಯುತ್‌ ದೀಪಾಲಂಕಾರ ವೈಭವಯುತದಿಂದ ಕಣ್ಣಿಗೆ ಕೋರೈಸುತ್ತಿದೆ.

‘ನವರಾತ್ರಿ ಆಚರಣೆ ಶ್ರದ್ಧಾ–ಭಕ್ತಿಯಿಂದ ನಡೆದರೂ; ಸಂಭ್ರಮಕ್ಕೆ ಕೊರತೆಯಿಲ್ಲ. ನಾಡದೇವಿ ಪ್ರತಿಷ್ಠಾಪನೆ ಓಣಿಯ ಒಗ್ಗಟ್ಟನ್ನು ಬಿಂಬಿಸುತ್ತಿದೆ. ಒಂಭತ್ತು ದಿನ ಮನೆ–ಮನದಲ್ಲಿ ದೇವಿಯ ಆರಾಧನೆ ನಡೆಯಲಿದೆ. ಪಾರಾಯಣ ನಡೆದಿದೆ. ದೇವಿಯ ಆರಾಧನೆಯಿಂದ ಮನಸ್ಸು ಪ್ರಸನ್ನವಾಗಿದೆ’ ಎಂದು ಎಸ್.ಕೆ.ಹಿರೇಮಠ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !