ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಎಸ್ಎಂಇ ಉದ್ಯಮ ಸಲಹೆ

Last Updated 2 ಸೆಪ್ಟೆಂಬರ್ 2020, 20:48 IST
ಅಕ್ಷರ ಗಾತ್ರ

ಪ್ರಶ್ನೆ: ಪ್ಯಾಕೇಜಿಂಗ್‌ನಲ್ಲಿ ಬಳಸುವ, ಅಂಟುಹೊಂದಿರುವ ಟೇಪ್‌ಗಳನ್ನು ತಯಾರಿಸುವ ಘಟಕವನ್ನು ನಡೆಸುತ್ತಿದ್ದೇನೆ. ನನ್ನ ಎರಡು ಪ್ರಮುಖ ಗ್ರಾಹಕರು ನನ್ನ ಉತ್ಪನ್ನದಲ್ಲಿ ದೋಷಗಳಿವೆಯೆಂಬ ಕಾರಣದಿಂದಾಗಿ ನನಗೆ ಹಣ ನೀಡಲು ನಿರಾಕರಿಸುತ್ತಿದ್ದಾರೆ. ಅವರದೇ ತಂಡವು ಗುಣಮಟ್ಟ ಪರೀಕ್ಷಿಸಿದ ನಂತರ ಸದರಿ ಗ್ರಾಹಕರು ಸರಕನ್ನು ಡೆಲಿವರಿ ಮಾಡಲು ಸಮ್ಮತಿಸಿದ್ದರು. ಆದರೆ, ಅವರೇ ಈಗ ನನ್ನ ಸರಕಿನಲ್ಲಿ ದೋಷಗಳಿವೆ ಎಂದು ಹೇಳುತ್ತಿದ್ದಾರೆ. ಕಳೆದ ಆರು ತಿಂಗಳಿನಿಂದ ನನಗೆ ಅವರು ಹಣ ಪಾವತಿಸಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಲು ಏನು ಮಾರ್ಗವಿದೆ?

ರಾಮ್, ಬೆಂಗಳೂರು

ಉತ್ತರ:ಅತಿಸಣ್ಣ ಮತ್ತು ಸಣ್ಣ ಉದ್ಯಮಗಳಿಗೆ ಹಣ ಪಾವತಿ ಮಾಡಲು ವಿಳಂಬವಾದಲ್ಲಿ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ‘ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳ ಅಭಿವೃದ್ಧಿಕಾಯ್ದೆ– 2006’ರಲ್ಲಿ ವಿವರ ಇದೆ. ಭಾರತ ಸರ್ಕಾರವು https://samadhaan.msme.gov.in ಎಂಬ ವಿಶಿಷ್ಟವಾದ ಜಾಲತಾಣವನ್ನು ಪ್ರಾರಂಭಿಸಿದ್ದು, ವಿಳಂಬ ಹಣ ಪಾವತಿಗೆ ಸಂಬಂಧಿಸಿದ ಯಾವುದೇ ದೂರುಗಳನ್ನು ಈ ಜಾಲತಾಣದಲ್ಲಿ ಸಲ್ಲಿಸಬಹುದಾಗಿದೆ. ನಿಮ್ಮ ದೂರನ್ನು ದಯವಿಟ್ಟು ಈ ಜಾಲತಾಣದಲ್ಲಿ ದಾಖಲಿಸಿ.

ಸದರಿ ಕಂಪನಿಯ ಶಾಸನಬದ್ಧ ಲೆಕ್ಕಪರಿಶೋಧಕರಿಗೂ ಕಂಪನಿಯು ನಿಮಗೆ ಹಣ ಬಾಕಿ ಇರಿಸಿರುವ ಕುರಿತು (ವಿವರಗಳು ವಾರ್ಷಿಕ ವರದಿಯಲ್ಲಿ ಲಭ್ಯವಿರುತ್ತವೆ) ಪತ್ರ ಬರೆದು ಈ ನಿಟ್ಟಿನಲ್ಲಿ ಲೆಕ್ಕಪರಿಶೋಧನಾ ವರದಿಯಲ್ಲಿ ವಿವರ ಕೇಳುವಂತೆ ತಿಳಿಸಿರಿ. ಹೀಗೆ ಮಾಡಿ, ಕಂಪನಿಯ ಮೇಲೆ ನೀವು ಒತ್ತಡ ಹೇರಬಹುದು.

ಪ್ರಶ್ನೆ: 2018ರ ಜನವರಿಯಲ್ಲಿ ನಾನು ಮಂಗಳೂರಿನಲ್ಲಿ ಆಹಾರ ಸಂಸ್ಕರಣೆ ಮಾಡುವ ಘಟಕವನ್ನು ಪ್ರೊಪ್ರೈಟರ್‌ಷಿಪ್ ಉದ್ಯಮವಾಗಿ ಪ್ರಾರಂಭಿಸಿದೆ. ನನ್ನ ಪತ್ನಿಯೂ ನನ್ನೊಂದಿಗೆ ಉದ್ಯಮ ನಡೆಸುವಲ್ಲಿ ಸಹಕರಿಸುತ್ತಾರೆ. ನನ್ನ ಕಂಪನಿಯನ್ನು ಎಲ್‌ಎಲ್‌ಪಿ ಅಥವಾ ಪ್ರೈವೇಟ್ ಲಿಮಿಟೆಡ್ ಕಂಪನಿಯಾಗಿ ಪರಿವರ್ತಿಸಿ, ನನ್ನ ಪತ್ನಿಯನ್ನು ನಿರ್ದೇಶಕಿಯನ್ನಾಗಿ ನೇಮಿಸಬೇಕೆಂಬುದು ನನ್ನ ಯೋಜನೆ. ನನ್ನ ಪತ್ನಿಯನ್ನು ಮೆಜಾರಿಟಿ ಷೇರ್ ಹೋಲ್ಡರ್ ಮಾಡಬೇಕೇ? ಹಾಗೆ ಮಾಡುವುದರ ಅನುಕೂಲಗಳೇನು?

ಲಲಿತ್, ಮಂಗಳೂರು

ಉತ್ತರ:ಯಾವುದೇ ಸಣ್ಣ ಉದ್ಯಮದಲ್ಲಿ ಮಹಿಳೆಯರು ಶೇಕಡಾ 50ಕ್ಕಿಂತ ಹೆಚ್ಚು ಷೇರು ಹೊಂದಿದ್ದಲ್ಲಿ, ಅವರಿಗೆ ಬಡ್ಡಿದರದಲ್ಲಿ ಕಡಿತ, ಕೆಲವು ಯೋಜನೆಗಳ ಅಡಿಯಲ್ಲಿ ಹೆಚ್ಚಿನ ಸಬ್ಸಿಡಿ, ಹೆಚ್ಚಿನ ಸಿಜಿಟಿಎಂಎಸ್ಇ ಕವರೇಜ್ ದೊರೆಯುತ್ತದೆ. ಮಹಿಳಾ ಉದ್ಯಮಿಗಳಿಗೆ ಉತ್ತೇಜನ ನೀಡಲು ಹಲವಾರು ಬ್ಯಾಂಕುಗಳು ವಿಶೇಷ ಯೋಜನೆಗಳನ್ನು ಹೊಂದಿವೆ.

ಮದನ್ ಪದಕಿ

ಪ್ರಶ್ನೆ: ನನ್ನ ಸಿಬಿಲ್ ಸ್ಕೋರ್ ಅಷ್ಟೇನೂ ಉತ್ತಮವಾಗಿಲ್ಲ. ಹಾಗಾಗಿ ನಾನು ಬ್ಯಾಂಕಿನಿಂದ ಸಾಲ ಪಡೆಯಲು ಅನರ್ಹನಾಗಿದ್ದೇನೆ. ವ್ಯವಹಾರಕ್ಕಾಗಿ ಸಾಲ ಪಡೆಯಲು ಅನ್ಯ ಮಾರ್ಗಗಳಿವೆಯೇ?

ಪುಷ್ಕರ್, ಹುಬ್ಬಳ್ಳಿ

ಉತ್ತರ: ನಿಮ್ಮ ಸಿಬಿಲ್ ಸ್ಕೋರ್ ಕಡಿಮೆಯಿದ್ದಲ್ಲಿ ನೀವು ಬ್ಯಾಂಕುಗಳಿಗೆ ಸಾಲಕ್ಕಾಗಿ ಅರ್ಜಿಯನ್ನು ಸಲ್ಲಿಸದಿರುವುದು ಕ್ಷೇಮಕರ. ಪ್ರತಿ ಬ್ಯಾಂಕಿಗೆ ನೀವು ಸಲ್ಲಿಸುವ ಸಾಲದ ಅರ್ಜಿಗೆ ಸಂಬಂಧಿಸಿದಂತೆ ವಿಚಾರಣೆ ಮಾಡಿದಾಗ ನಿಮ್ಮ ಕುರಿತು ಋಣಾತ್ಮಕ ಅಭಿಪ್ರಾಯ ವ್ಯಕ್ತವಾದಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ನಿಮ್ಮ ಸಿಬಿಲ್ ಸ್ಕೋರ್ ಕೂಡ ಇದರಿಂದ ಕಡಿಮೆಯಾಗಬಹುದು. ನಿಮ್ಮ ಬಳಿ ಹಣದ ಸುಭದ್ರ ಮೂಲವಿದ್ದು ಯಶಸ್ವಿಯಾಗಬಲ್ಲ ಮತ್ತು ಪ್ರಾಯೋಗಿಕ ಬಿಸಿನೆಸ್ ಮಾಡೆಲ್ ಇದ್ದಲ್ಲಿ, ನೀವು ಎನ್‌ಬಿಎಫ್‌ಸಿಗಳನ್ನು ಸಾಲಕ್ಕಾಗಿ ಮೊರೆ ಹೋಗಿ. ಎನ್‌ಬಿಎಫ್‌ಸಿಗಳು ಸಾಲ ಅರ್ಜಿಯನ್ನು ಬೇರೆಯೇ ಮಾನದಂಡಗಳಿಂದ ಪರಿಗಣಿಸುತ್ತವೆ. ಕೆಲವು ಎನ್‌ಬಿಎಫ್‌ಸಿಗಳು/ಬ್ಯಾಂಕುಗಳು ಅಡಮಾನದ ಆಧಾರದ ಮೇಲೆ ಸಾಲ ನೀಡುತ್ತವೆ. ನೀವು ಸಾಲ ಮರುಪಾವತಿಗಾಗಿ ಯಾವುದೇ ಆಧಾರವನ್ನು/ಜಾಮೀನು ಒದಗಿಸಬಹುದಾಗಿದೆ.

ಆದರೆ ಕಡಿಮೆ ಸಿಬಿಲ್ ಅಂಕಕ್ಕೆ ಕಾರಣಗಳನ್ನು ಪತ್ತಹಚ್ಚಿ ಅದನ್ನು ಸರಿ ಮಾಡಿಕೊಳ್ಳುವುದು ಭವಿಷ್ಯದ ದೃಷ್ಟಿಯಿಂದ ಸೂಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT