7

ವಿದೇಶ ನೀತಿಯ ತಪ್ಪು ಹೆಜ್ಜೆಗಳು

Published:
Updated:

ಮಿತ್ರ ದೇಶಗಳ ಜತೆಗಿನ ಭಾರತದ ಬಾಂಧವ್ಯವು ಈಗ ರೈ‌ಲ್ವೆ ಅಪಘಾತದಂತೆ ಕಂಡು ಬರುತ್ತಿದೆ. ತನ್ನ ಜತೆಗಿನ ‘2+2’ ಮಾತುಕತೆಯನ್ನು ಮೂರನೇ ಬಾರಿಗೆ ಮುಂದೂಡಿರುವ ಅಮೆರಿಕದ ಅವಮಾನಕರ ಕ್ರಮಗಳಿಗಷ್ಟೇ ಇದು ಸೀಮಿತವಾಗಿಲ್ಲ. ಇತರ ದೇಶಗಳ ಜತೆಗಿನ ವರ್ಷದ ಹಿಂದಿನ ಸುಮಧುರ ಬಾಂಧವ್ಯವನ್ನೂ ನಾವೀಗ ಕಾಣುತ್ತಿಲ್ಲ. ಅಂದು ಮೋದಿ ಅವರು ರಾಜಧಾನಿಯಿಂದ ರಾಜಧಾನಿಗೆ ಜಿಗಿಯುತ್ತ, ರಾಷ್ಟ್ರ ಪ್ರಮುಖರನ್ನು ಆತ್ಮೀಯವಾಗಿ ಅಪ್ಪಿಕೊಂಡು ಗಮನ ಸೆಳೆಯುತ್ತ ಮಾಧ್ಯಮಗಳಲ್ಲಿ ಮಿಂಚುತ್ತಿದ್ದರು. ಭಾರತವು ಪ್ರವರ್ಧಮಾನಕ್ಕೆ ಬರುವ ಆರ್ಥಿಕ ಶಕ್ತಿಯಾಗಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಸಮರ್ಥ, ಉಲ್ಲಸಿತ, ಸದಾ ಕ್ರಿಯಾಶೀಲತೆಯ ಹೊಸ ನಾಯಕನಾಗಿ ವಿಶ್ವದ ಭೂಪಟದಲ್ಲಿ ಮಿಂಚುತ್ತಿದ್ದರು.

ತಮ್ಮ ನಿರ್ಣಾಯಕ ಮತ್ತು ಸಕಾರಾತ್ಮಕ ವ್ಯಕ್ತಿತ್ವದ ಪ್ರಭಾವ ಬಳಸಿ ಪ್ಯಾರಿಸ್‌ನಲ್ಲಿ ನಡೆದ ಸಮ್ಮೇಳನದಲ್ಲಿ ಹಮಾಮಾನ ಒ‍ಪ್ಪಂದ ಏರ್ಪಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ ಮೋದಿ ಅವರತ್ತ ಇಡೀ ವಿಶ್ವವೇ ಅಚ್ಚರಿಯಿಂದ ನೋಡಿತ್ತು.

ಇತ್ತೀಚಿನ ಆರು ತಿಂಗಳಲ್ಲಿ ಅವರ ವ್ಯಕ್ತಿತ್ವದ ಮಾಂತ್ರಿಕತೆ ಮಾಸುತ್ತಿದೆ. ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆ ಕಡಿಮೆಯಾಗುತ್ತಿದೆ. ಕೆಲ ವರ್ಷಗಳಿಂದೀಚೆಗೆ ಜಾಗತಿಕವಾಗಿ ಭಾರತದ ವರ್ಚಸ್ಸು ಸುಸ್ಥಿರ ಮತ್ತು ಸುಸೂತ್ರವಾಗಿ ಏರಿಕೆ ಕಂಡಿತ್ತು. ಈಗ ಅದಕ್ಕೆ ಅಪವಾದ ಎಂಬಂತೆ ಕುಂದು ಉಂಟಾಗುತ್ತಿರುವುದು ಆತಂಕ ಮೂಡಿಸುವ ವಿದ್ಯಮಾನವಾಗಿದೆ.

ಜಾಗತಿಕ ವಿದ್ಯಮಾನಗಳಲ್ಲಿ ಪ್ರಭಾವಿ ದೇಶವಾಗುವ ಹಕ್ಕು ಸ್ಥಾಪಿಸಲು ಹೊರಟಿದ್ದ ಭಾರತದ ಪ್ರಯತ್ನ ವಿಫಲವಾಗಿದ್ದೇಕೆ ಎನ್ನುವುದನ್ನು ನಾವು ಪರಿಶೀಲಿಸಬೇಕಾಗಿದೆ. ಕೆಲ ಬೆಳವಣಿಗೆಗಳು ಭಾರತದ ನಿಯಂತ್ರಣ ಮೀರಿ ಘಟಿಸಿವೆ. ಜಾಗತಿಕ ವಿದ್ಯಮಾನಗಳಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪ್ರಭಾವ ಹೆಚ್ಚುತ್ತಿರುವುದೂ ಸೇರಿದಂತೆ ನಡೆದ ಹಲವಾರು ಅನಿರೀಕ್ಷಿತ ಘಟನೆಗಳು ದೂರಗಾಮಿ ಪ್ರಭಾವ ಬೀರುತ್ತಿವೆ. ಇದಕ್ಕೆ ಪೂರಕ ಎಂಬಂತೆ, ಭಾರತ ಎಸಗಿದ ಕೆಲ ಪ್ರಮಾದಗಳೂ ವಿದೇಶಗಳ ಜತೆಗಿನ ಸಂಬಂಧ ಹದಗೆಡಲು ಕಾರಣವಾಗಿವೆ.

ರಾಜತಾಂತ್ರಿಕ ಬಾಂಧವ್ಯ ಬೆಸೆಯುವಲ್ಲಿ ಸರ್ಕಾರದ ಪ್ರಮುಖರು ತಮ್ಮದೇ ಆದ ವಿಶಿಷ್ಟ ವಿಧಾನ ಅನುಸರಿಸುತ್ತಾರೆ. ಮೋದಿ ಅವರ ರಾಜತಾಂತ್ರಿಕ ವೈಖರಿಯು ವ್ಯಾವಹಾರಿಕ ಸ್ವರೂಪದ್ದು ಆಗಿದೆ ಎಂದು ಅವರ ಬೆಂಬಲಿಗರು ಸಂಭ್ರಮಿಸುತ್ತ ಬಂದಿದ್ದರು. ಇದಕ್ಕೆ ಬಿಜೆಪಿ ಮತ್ತು ಅದರ ಮಿತ್ರ ವೃಂದ ಬೆಂಬಲಿಸುತ್ತಲೂ ಬಂದಿತ್ತು. ಈ ಎಲ್ಲ ಬೆಳವಣಿಗೆಗಳ ಬಗ್ಗೆಯೇ ಈಗ ಸಂದೇಹ ಪಡುವಂತಾಗಿದೆ.

ಮೋದಿ ಅವರ ಅಧಿಕಾರಾವಧಿಯ ಮೊದಲ ಮೂರು ವರ್ಷಗಳಲ್ಲಿನ ರಾಜತಾಂತ್ರಿಕ ಗೆಲುವುಗಳ ಬಗ್ಗೆ ಕೇಂದ್ರ ಸರ್ಕಾರವು  ಸಂಭ್ರಮಿಸಿತ್ತು. ಅಣ್ವಸ್ತ್ರ ಕ್ಷಿಪಣಿ ತಂತ್ರಜ್ಞಾನದ ಮೂರು ದೇಶಗಳ ಅಪರೂಪದ ಸಾಲಿಗೆ ಸೇರಿದ್ದ ಭಾರತವು ಜವಾಬ್ದಾರಿಯುತ ಶಕ್ತ ರಾಷ್ಟ್ರವಾಗಿ ಗಮನ ಸೆಳೆದಿತ್ತು.

ಅಮೆರಿಕ ಅಧ್ಯಕ್ಷರಾಗಿದ್ದ ಬಿಲ್‌ ಕ್ಲಿಂಟನ್‌ ಅವರ ಎರಡನೆ ಬಾರಿಯ ಅಧಿಕಾರಾವಧಿಯಲ್ಲಿ ಭಾರತದ ವಿದೇಶಾಂಗ ನೀತಿಯಲ್ಲಿ ವ್ಯಾಪಕ ಸುಧಾರಣೆ ಕಂಡು ಬರತೊಡಗಿತ್ತು. 15 ವರ್ಷಗಳ ಆರ್ಥಿಕ ಪ್ರಗತಿಯ ಜತೆ, ಜತೆಗೆ ಈ ಧೋರಣೆಯನ್ನೇ ಮುಂದುವರೆಸಿಕೊಂಡು ಬರಲಾಗಿತ್ತು. ಮೋದಿ ಅವರು ತಮ್ಮ ಕಾರ್ಯಕ್ಷಮತೆ, ವಿಭಿನ್ನ ವೈಯಕ್ತಿಕ ಶೈಲಿ, ಸಂಪೂರ್ಣ ಬಹುಮತದ ಬೆಂಬಲದಿಂದ ಇದಕ್ಕೆ ನಯನಾಜೂಕಿನಿಂದಲೇ ವೇಗ ನೀಡಿದ್ದರು. ಹಾಗಿದ್ದರೆ, ಓಡುಗತಿಯಲ್ಲಿದ್ದ ಈ ಜನಪ್ರಿಯತೆಯ ವರ್ಚಸ್ಸಿಗೆ ಧಕ್ಕೆ ಒದಗಿದ್ದಾದರೂ ಎಲ್ಲಿಂದ ಎನ್ನುವ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ.

ಜಾಗತಿಕ ಮಟ್ಟದಲ್ಲಿ ಘಟಿಸಿದ ಎರಡು ವಿದ್ಯಮಾನಗಳಲ್ಲಿ ಮೋದಿ ಸರ್ಕಾರದ ತಪ್ಪೇನೂ ಇಲ್ಲ. ಇತ್ತೀಚಿನ ದಿನಗಳಲ್ಲಿ ಡೊನಾಲ್ಡ್‌ ಟ್ರಂಪ್‌ ಅವರ ವರ್ಚಸ್ಸು ವೃದ್ಧಿಯಾಗಿರುವುದು ಮತ್ತು ಚೀನಾದ ಹಟಮಾರಿತನ ಧೋರಣೆ ಹೆಚ್ಚಿರುವುದರಲ್ಲಿ ಭಾರತದ ಪಾತ್ರ ಏನೂ ಇಲ್ಲ. ಇರಾನ್‌ಗೆ ಸಂಬಂಧಿಸಿದಂತೆ ಟ್ರಂಪ್‌ ಅವರ ನೀತಿ ಬದಲಾಗಿದೆ. ಇದರಿಂದ ಕಚ್ಚಾ ತೈಲದ ಬೆಲೆ ಮೇಲೆ ನೇರ ಪರಿಣಾಮ ಉಂಟಾಗಿದೆ. ಇದರ ಫಲವಾಗಿ ಭಾರತದ ಆರ್ಥಿಕತೆ ಮತ್ತು ರಾಜಕೀಯ ಪರಿಸ್ಥಿತಿಯಲ್ಲಿ ಅಸ್ಥಿರತೆ ಕಂಡು ಬರುತ್ತಿದೆ.

ಭಾರತದ ವಿರೋಧದ ಹೊರತಾಗಿಯೂ, ‘ಪಾಕಿಸ್ತಾನ – ಚೀನಾ ಆರ್ಥಿಕ ಕಾರಿಡಾರ್‌ (ಸಿಪಿಇಸಿ) ನಿರ್ಮಾಣಕ್ಕೆ ಚೀನಾ ಒತ್ತು ನೀಡಿದೆ. ಶ್ರೀಲಂಕಾ, ನೇಪಾಳ, ಮಾಲ್ಡೀವ್‌ ಮತ್ತು ಬಾಂಗ್ಲಾದೇಶದ ಜತೆಗೆ ತನ್ನ ಬಾಂಧವ್ಯ ವೃದ್ಧಿಸಿಕೊಂಡಿದೆ. ಈ ಉಪ ಖಂಡವು ಭಾರತದ ಪ್ರಭಾವದ  ವ್ಯಾಪ್ತಿಯಲ್ಲಿ ಇರದಂತೆ ನೋಡಿಕೊಳ್ಳಲು ಚೀನಾ ಹವಣಿಸುತ್ತಿದೆ.

ಅಮೆರಿಕದ ಜಾರ್ಜ್‌ ಡಬ್ಲ್ಯು ಬುಷ್‌ ಅವರು ಚೀನಾದ ಅಧ್ಯಕ್ಷ ಹು ಜಿಂಟಾವೊ ಅವರ ಜತೆ ಮಾತನಾಡಿ, ಪರಮಾಣು ಪೂರೈಕೆ ಗುಂಪಿಗೆ ಭಾರತವನ್ನು ಸೇರ್ಪಡೆ ಮಾಡಲು ರಿಯಾಯ್ತಿ ನೀಡಲು ಅವರ ಮನವೊಲಿಸಿದ ದಿನಗಳು ಈಗ ಕೊನೆಗೊಂಡಿವೆ. ಚೀನಾದ ಈಗಿನ ಅಧ್ಯಕ್ಷ ಷಿ. ಜಿನ್‌ಪಿಂಗ್‌ ಅವರು ಯಾರೊಬ್ಬರ ಮಾತೂ ಕೇಳುತ್ತಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಟ್ರಂಪ್‌ ಅವರು ಇಂತಹ ಪ್ರಯತ್ನವನ್ನು ಮಾಡುವುದೂ ಇಲ್ಲ. ರಾಜತಾಂತ್ರಿಕ ವಿಷಯದಲ್ಲಿ ಮೋದಿ ಅವರು ವ್ಯಾವಹಾರಿಕವಾಗಿದ್ದರೆ, ಟ್ರಂಪ್‌ ಅವರು ಅವರಿಗಿಂತ ಇನ್ನೂ ಹೆಚ್ಚು ವ್ಯಾವಹಾರಿಕವಾಗಿದ್ದಾರೆ.

ವಿದೇಶಗಳ ಜತೆಗಿನ ತುಂಬ ಸೂಕ್ಷ್ಮ ಸ್ವರೂಪದ ಬಾಂಧವ್ಯವನ್ನು ದೇಶಿ ರಾಜಕೀಯದಲ್ಲಿ ಬಳಕೆ ಮಾಡಿಕೊಳ್ಳಲು ಮುಂದಾಗಿರುವುದು ಮೋದಿ ಸರ್ಕಾರದ ಅತಿದೊಡ್ಡ ಪ್ರಮಾದವಾಗಿದೆ. ಇತಿಹಾಸದ ಪುಟಗಳಲ್ಲಿ ಯಶಸ್ವಿ ಮುಖಂಡರು ಎಂದೇ ದಾಖಲಾದ ವ್ಯಕ್ತಿಗಳಲ್ಲಿ ಪ್ರಮುಖವಾಗಿ ಸಹನಶೀಲತೆ ಗುಣವು ಹೆಚ್ಚಾಗಿ ಕಂಡು ಬರುತ್ತದೆ. ಅವರೆಲ್ಲ ದೃಢ ನಿರ್ಧಾರದಿಂದ ಮುನ್ನಡೆಯುತ್ತಿದ್ದರು. ಆದರೆ, ತಮ್ಮ ಧೋರಣೆಯಲ್ಲಿನ ಬದಲಾವಣೆ ಬಗ್ಗೆ ಅವರು ಯಾವತ್ತೂ ಬಹಿರಂಗವಾಗಿ ಹೇಳಿಕೊಳ್ಳುತ್ತಿರಲಿಲ್ಲ. ವಿದೇಶಗಳ ಜತೆಗಿನ ಬಾಂಧವ್ಯ ವೃದ್ಧಿಯಲ್ಲಿ ಮುಖಂಡನೊಬ್ಬ ಸುನಿಲ್‌ ಗಾವಸ್ಕರ ತರಹ ಬ್ಯಾಟಿಂಗ್‌ ಮಾಡಬೇಕೆ ಹೊರತು, ವಿರೇಂದ್ರ ಸೆಹ್ವಾಗ್‌ ಅವರಂತೆ ಬ್ಯಾಟ್‌ ಬೀಸಬಾರದು.

ಪ್ರಮುಖ ರಾಜ್ಯಗಳ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಮೋದಿ ಅವರು ತಮ್ಮ ವಿದೇಶ ನೀತಿಯಲ್ಲಿನ ಗೆಲುವನ್ನು ಪ್ರಮುಖವಾಗಿ ಪ್ರಸ್ತಾಪಿಸುತ್ತಿದ್ದರು. ಬಿಜೆಪಿಗೆ ಅದು ಸಾಕಷ್ಟು ಫಲವನ್ನೂ ನೀಡಿದೆ. ವಿದೇಶ ನೀತಿಯಲ್ಲಿನ ತಮ್ಮ ಯಶಸ್ಸನ್ನು ಅವಸರದಲ್ಲಿ ಘೋಷಿಸುವುದರಿಂದ ಕೆಲ ಆಪತ್ತೂಗಳೂ ಎದುರಾಗುತ್ತವೆ. ಇದರಿಂದ ಪ್ರಚಾರ ಕಾರ್ಯತಂತ್ರದ ವ್ಯಾಪ್ತಿ ಸೀಮಿತಗೊಳ್ಳುತ್ತದೆ. 1984ರಲ್ಲಿ ಸಿಯಾಚಿನ್‌ ಪ್ರದೇಶವನ್ನು ವಶಪಡಿಸಿಕೊಂಡಾಗ ಇಂದಿರಾ ಗಾಂಧಿ ಅವರು ಆ ಬಗ್ಗೆ ಚಕಾರ ಎತ್ತಿರಲಿಲ್ಲ.  ನಿಮ್ಮ ಕೆಲ ರಹಸ್ಯ ಕಾರ್ಯತಂತ್ರಗಳನ್ನು ನೀವು ತಕ್ಷಣದ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಮುಂದಾದರೆ ಅದರಿಂದ ಅನೇಕ ಅಪಾಯಗಳನ್ನು ನಿರೀಕ್ಷಿಸಬೇಕಾಗುತ್ತದೆ. ನಿಮ್ಮ ವೈರಿಗಳು ನಿಮ್ಮ ನಡೆಯನ್ನು ಮುಂಚಿತವಾಗಿಯೇ ಊಹಿಸುತ್ತಾರೆ. ಉತ್ತರ ಪ್ರದೇಶ ಚುನಾವಣೆಯಲ್ಲಿನ ಫಲಿತಾಂಶದಿಂದ ಉತ್ತೇಜನಗೊಂಡವರು ಇಂತಹ ಇತರ ಕಾರ್ಯತಂತ್ರಗಳ ಬಗ್ಗೆ ಬೇಜವಾಬ್ದಾರಿಯಿಂದ ಹಗುರವಾಗಿ ಮಾತನಾಡಲು ಅವಕಾಶ ಮಾಡಿಕೊಡಲಾಗಿತ್ತು.

ಸಣ್ಣ ಪುಟ್ಟ ಸಂಘರ್ಷಗಳಲ್ಲಿ ಗೆಲುವು ಸಾಧಿಸಲಾಗಿದೆ ಎಂದು ಹೇಳಿಕೊಳ್ಳಬಹುದು. ಆದರೆ, ಡೋಕ್ಲಾಮ್‌ಗೆ ಸಂಬಂಧಿಸಿದಂತೆ ಭಾರತ ತಳೆದ ಧೋರಣೆಗೆ ಚೀನಾ ವ್ಯತಿರಿಕ್ತವಾಗಿ ಪ್ರತಿಕ್ರಿಯಿಸಿತ್ತು. ನಿರ್ದಿಷ್ಟ ಹಂತದ ಆಚೆ ಭಾರತವು ತನ್ನ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಅವಕಾಶ ನೀಡಬಾರದು ಎನ್ನುವ ನಿರ್ಧಾರಕ್ಕೆ ಚೀನಾ ಬಂದಂತೆ ಕಾಣುತ್ತಿದೆ. ಪಾಕಿಸ್ತಾನಕ್ಕೆ ಚೀನಾದ ಅಭಯ ಹಸ್ತ ಇರುವುದು ಈಗ ಗುಟ್ಟಾಗಿ ಏನೂ ಉಳಿದಿಲ್ಲ.

ವಿದೇಶ ವ್ಯಾಪಾರ ವಿಷಯದಲ್ಲಿಯೂ ಭಾರತ ಇದೇ ಬಗೆಯ ತಪ್ಪು ಎಸಗಿದೆ. ವೈದ್ಯಕೀಯ ಸಾಧನಗಳ ಬೆಲೆ ನಿಯಂತ್ರಣ ವಿಷಯದಲ್ಲಿ ಅದರಲ್ಲೂ ವಿಶೇಷವಾಗಿ ಸ್ಟೆಂಟ್ಸ್‌ಗಳಿಗೆ ಸಂಬಂಧಿಸಿದ ನಿರ್ಧಾರವನ್ನೂ ಚುನಾವಣಾ ವಿಷಯವನ್ನಾಗಿ ಮಾಡಲಾಗಿದೆ. ಇದಕ್ಕೆ ಟ್ರಂಪ್‌ ಅವರು ಹೆಚ್ಚು ವ್ಯಾವಹಾರಿಕವಾಗಿ ಪ್ರತಿಕ್ರಿಯಿಸಿದಾಗ, ಸರ್ಕಾರದ ಮುಂದೆ ಹೊಸ ಆಯ್ಕೆಗಳೇ ಇಲ್ಲದಂತಾಯಿತು.

ಹ್ಯಾರ್ಲೆ ಡೇವಿಡ್ಸನ್‌ ಬೈಕ್‌ಗಳ ಮೇಲಿನ ಆಮದು ಸುಂಕ ತಗ್ಗಿಸಬೇಕೆಂಬ ಟ್ರಂಪ್‌ ಅವರ ನಿಲುವು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಭಾರತದಲ್ಲಿ ಬೃಹತ್‌ ಎಂಜಿನ್ನಿನ ಬೈಕ್‌ಗಳು ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿ ಮಾರಾಟಗೊಳ್ಳುತ್ತಿವೆ. ಹೀಗಾಗಿ ಸೀಮಿತ ಸಂಖ್ಯೆಯಲ್ಲಿ ಆಮದು ಮಾಡಿಕೊಳ್ಳುವ ಇಂತಹ ಬೈಕ್‌ಗಳಿಂದ ದೇಶಿ ತಯಾರಕರ ಮೇಲೆ ಹೆಚ್ಚಿನ ಪ್ರತಿಕೂಲತೆಯೇನೂ ಉಂಟಾಗಲಾರದು.
ನೋಟು ರದ್ದತಿಯ ನಿರ್ಧಾರದಿಂದ ಚೇತರಿಸಿಕೊಳ್ಳದ ದೇಶಿ ಆರ್ಥಿಕತೆಯ ಪ್ರಗತಿ ನಿಧಾನಗೊಂಡಿರುವಾಗ ಬೆಲೆ ಏರಿಕೆ ಮೇಲೆ ನಿರೀಕ್ಷಿಸಿದ ಮಟ್ಟದಲ್ಲಿ ಕಡಿವಾಣ ವಿಧಿಸಲು ಸಾಧ್ಯವಾಗುವುದಿಲ್ಲ. ಶೇ 8ರ ಹತ್ತಿರದ ಆರ್ಥಿಕ ವೃದ್ಧಿ ದರದ ದಶಕದ ಸಾಧನೆಯನ್ನು ಭಾರತ ವ್ಯರ್ಥ ಮಾಡಿದೆ.

ಹಿಂದಿನ ವರ್ಷದ ನವೆಂಬರ್‌ 13ರಂದು ಮನಿಲಾದಲ್ಲಿ ನಡೆದ ಮೋದಿ ಮತ್ತು ಟ್ರಂಪ್‌ ಭೇಟಿ ಸಂದರ್ಭದಲ್ಲಿನ ಬೆಳವಣಿಗೆಗಳನ್ನು ಗುಟ್ಟಾಗಿ ಇರಿಸುವಲ್ಲಿನ ರಾಜತಾಂತ್ರಿಕ ವೈಫಲ್ಯವು ಹೆಚ್ಚು ಚರ್ಚೆಗೆ ಒಳಗಾಗಿದೆ. ಆ ಸಭೆಯಲ್ಲಿ ಟ್ರಂಪ್‌ ಅವರ ನಡವಳಿಕೆಯಲ್ಲಿ ಹಿಂದಿನ ಆತ್ಮೀಯತೆ ಕಂಡು ಬಂದಿರಲಿಲ್ಲ. ಮೋದಿ ಅವರ ಮಾತನಾಡುವ ಶೈಲಿಯನ್ನು ಅಣಕಿಸುವ ವಿಡಿಯೊ ಸೋರಿಕೆಯು ಅವರ ಬದಲಾದ ವರ್ತನೆಗೆ ಕನ್ನಡಿ ಹಿಡಿದಿತ್ತು. ಆನಂತರ ಟ್ರಂಪ್‌ ಅವರು ಭಾರತದ ಜತೆಗಿನ ವ್ಯಾಪಾರದ ಮೇಲೆ ಕಾಕದೃಷ್ಟಿ ಬೀರಿದರು. ವೀಸಾಕ್ಕೆ ಸಂಬಂಧಿಸಿದಂತೆ ಬ್ರಿಟನ್ನಿನ ಬದಲಾದ ನಿಲುವು ಕೂಡ ಇದೇ ಸಂದರ್ಭದಲ್ಲಿ ಪ್ರಕಟವಾಯಿತು.

ಅಮೆರಿಕವು ಭಾರತವನ್ನು ನಿರ್ಲಕ್ಷಿಸಲು ಆರಂಭಿಸಿದೆ. ಈ ಬಗ್ಗೆ ಭಾರತ ಅಜಾಗರೂಕತೆಯಿಂದ ಇರದೆ ಎಚ್ಚರಿಕೆಯಿಂದ ಪ್ರತಿಕ್ರಿಯಿಸಬೇಕಾಗಿದೆ. ಸ್ವತಃ ಬೆನ್ನು ಚೆಪ್ಪರಿಸಿಕೊಳ್ಳುವುದು ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸುತ್ತಿದೆ.

ನಾಲ್ಕು ವರ್ಷಗಳಿಂದ ಭಾರತವು ಅಮೆರಿಕದ ಸಹಜ ಮಿತ್ರ ದೇಶವಾಗಿ ಗಮನ ಸೆಳೆದಿತ್ತು. ಇದೇ ಹೊತ್ತಿನಲ್ಲಿ ದೇಶದ ಸೇನಾ ಬಲ ಕಡಿಮೆಯಾಗುತ್ತಿದೆ. ಈ ಅವಧಿಯಲ್ಲಿ ದೇಶವು ನಾಲ್ವರು ರಕ್ಷಣಾ ಸಚಿವರನ್ನು ಕಂಡಿದೆ. ಎರಡು ವರ್ಷಗಳಲ್ಲಿ ರಕ್ಷಣಾ ವಲಯದಲ್ಲಿನ ಪಿಂಚಣೆ ಬಜೆಟ್‌, ವೇತನ ಬಜೆಟ್ ಅನ್ನೂ ಮೀರಿಸಿದೆ. ಇವೆರಡೂ ರಕ್ಷಣಾ ಕ್ಷೇತ್ರಕ್ಕೆ ಮಾಡುವ ವೆಚ್ಚಕ್ಕಿಂತ ಹೆಚ್ಚಾಗಿದೆ. ಈ ಕಾರಣಕ್ಕೆ ದೇಶದ ರಕ್ಷಣಾ ವಲಯವು ಗಾತ್ರದಲ್ಲಿ ದೊಡ್ಡದಿದ್ದರೂ, ಈ ಸಂದರ್ಭದಲ್ಲಿ ತನ್ನ ಮಹತ್ವ ಕಳೆದುಕೊಂಡಂತೆ ಕಂಡು ಬರುತ್ತಿದೆ.

ಏಷ್ಯಾ ಪೆಸಿಫಿಕ್‌ ವಲಯವನ್ನು ಅಮೆರಿಕವು, ‘ಭಾರತ – ಪೆಸಿಫಿಕ್‌’ ವಲಯ ಎಂದು ಘೋಷಿಸಿದಾಗ ಭಾರತೀಯರು ಸಂಭ್ರಮಪಟ್ಟಿದ್ದರು. ಮಿತ್ರ ದೇಶಗಳ ನೌಕಾ ಸಮರಾಭ್ಯಾಸಕ್ಕೆ ಕೆಲ ನೌಕೆಗಳನ್ನು ಕಳಿಸುವುದರಿಂದಷ್ಟೇ ಸೇನಾ ಬಲವನ್ನು ಸಮರ್ಥವಾಗಿ ಪ್ರದರ್ಶಿಸಲು ಸಾಧ್ಯವಾಗಲಾರದು. 

ಚೀನಾ, ಪ್ರತಿ ವರ್ಷ ಮೂರು ಯುದ್ಧ ನೌಕೆಗಳನ್ನು ನಿರ್ಮಿಸುತ್ತದೆ. ಮೂರು ವರ್ಷಗಳಲ್ಲಿ ಒಂದು ಯುದ್ಧ ನೌಕೆ ನಿರ್ಮಿಸಲು ನಾವು ತಿಣುಕುತ್ತೇವೆ. ಕೆಲ ನೌಕೆಗಳ ಮೇಲೆ ಕ್ಷಿಪಣಿಗಳನ್ನೂ ಅಳವಡಿಸುತ್ತೇವೆ. ‘ಭಾರತದಲ್ಲಿಯೇ ತಯಾರಿಸಿ’ ಆಂದೋಲನದ ಬಗ್ಗೆ, ಖಾಸಗಿ ವಲಯದ ಪ್ರಗತಿ ಬಗ್ಗೆ ಸಾಕಷ್ಟು ಗದ್ದಲ ಕಂಡು ಬಂದರೂ  ಈ ವಿಷಯದಲ್ಲಿ ನಮ್ಮ ಸಾಧನೆ ತುಂಬ ನಗಣ್ಯ. ನಾನು ಹೀಗೆ ಹೇಳುತ್ತಿರುವುದಕ್ಕೆ ಅನೇಕರು ನನ್ನ ವಿರುದ್ಧ ಕಿಡಿಕಾರಬಹುದು. ಆದರೆ, ನಮ್ಮಲ್ಲಿ ಏನಾಗುತ್ತಿದೆ ಎನ್ನುವುದು ಇಡೀ ವಿಶ್ವಕ್ಕೆ ಗೊತ್ತಿದೆ. ನಮ್ಮ ಕಳಪೆ ಸಾಧನೆ ನೋಡಿ ವಿಶ್ವ ಸಮುದಾಯ ನಗುತ್ತಿದೆ.

ಕುಂಠಿತ ಆರ್ಥಿಕ ಪ್ರಗತಿಯು ನಮ್ಮ ಸೇನಾ ಸಾಮರ್ಥ್ಯವನ್ನೂ ಕುಂದಿಸಿದೆ. ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಲೆಕ್ಕಹಾಕುವುದನ್ನು ಬದಲಿಸಿ ಜನರನ್ನು ಮೂರ್ಖರನ್ನಾಗಿಸಬಹುದು. ಅದನ್ನು ನಂಬುವುದು ಅಪಾಯಕಾರಿಯಾಗಿ ಪರಿಣಮಿಸಲಿದೆ. ಭಾರತದ ಆರ್ಥಿಕತೆ ತ್ವರಿತವಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಬಗ್ಗೆ ಮತ್ತು ಜಾಣತನ ಹಾಗೂ ಮಾರ್ಗದರ್ಶನಕ್ಕಾಗಿ ಇಡೀ ವಿಶ್ವ ನಮ್ಮತ್ತ ನೋಡುತ್ತಿರುವುದರ ಬಗ್ಗೆ ನಾವು ನಮ್ಮ ಬೆನ್ನು ತಟ್ಟಿಕೊಳ್ಳುತ್ತಿದ್ದೇವೆ. ಭಾರತದ ಆಧ್ಯಾತ್ಮ ಮತ್ತು ಸಾತ್ವಿಕ ಶಕ್ತಿಗೆ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಮೂಲಕ ಜಾಗತಿಕವಾಗಿ ಮನ್ನಣೆ ಸಿಗುತ್ತಿದೆ. ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಭಾಗವಹಿಸಿದ್ದ ಸಮಾರಂಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು, ಭಾರತವು ವಿಶ್ವಗುರು ಆಗುವ ನಿಟ್ಟಿನಲ್ಲಿ ಸಾಗಿರುವ ಬಗ್ಗೆ ಆಡಿದ ಮಾತು ಇಲ್ಲಿ ಉಲ್ಲೇಖನೀಯ.

ಒಂದು ವೇಳೆ ಭಾರತವು ವಿಶ್ವಗುರು ಆಗುವ ನಿಟ್ಟಿನಲ್ಲಿ ದಾಪುಗಾಲು ಹಾಕುತ್ತಿದ್ದರೆ, ನಮ್ಮ ಎಲ್ಲ ಕಾಲದ ಮಿತ್ರ ದೇಶ ಖ್ಯಾತಿಯ ಅಮೆರಿಕದ ಜತೆಗಿನ ಬಾಂಧವ್ಯ ಹಳಸಲು ಕಾರಣ ಏನು. ಬಾಂಗ್ಲಾದೇಶ ಹೊರತುಪಡಿಸಿ ಉಳಿದೆಲ್ಲ ನೆರೆಹೊರೆ ದೇಶಗಳು ಭಾರತದ ಬಗ್ಗೆ ಹಗೆ ಸಾಧಿಸುತ್ತ, ಸಂಶಯಪಡುತ್ತ ಚೀನಾದತ್ತ  ವಾಲಿರುವುದು ಏಕೆ. ಈ ವಿಶ್ವಗುರುವಿನ ಪ್ರಧಾನಿ ಬಗ್ಗೆ ಟ್ರಂಪ್‌ ಕಠಿಣ ನಿಲುವು ತಳೆದಿರುವುದು ಏಕೆ ಮತ್ತಿತರ ಪ್ರಶ್ನೆಗಳು ಕಾಡುತ್ತವೆ.

ವಿಶ್ವಸಂಸ್ಥೆಯಲ್ಲಿನ ಅಮೆರಿಕದ ರಾಯಭಾರಿ ನಿಕ್ಕಿ ಹ್ಯಾಲೆ ಅವರು ಭಾರತಕ್ಕೆ ಬಂದು, ಇರಾನ್‌ ಕುರಿತ ಧೋರಣೆ ಬದಲಿಸುವಂತೆ ಪ್ರಭಾವ ಬೀರಿದ್ದು ಏಕೆ. ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರ ಜತೆಗೆ ಮೋದಿ ಅವರ ಮಾತಿನ ಧಾಟಿ ಬದಲಾಗಿದ್ದನ್ನೂ ನಾವಿಲ್ಲಿ ಗಮನಿಸಬೇಕು. ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಆರ್ಥಿಕ ಕಾರಿಡಾರ್‌ ಹಾದು ಹೋಗುವುದನ್ನು ಪ್ರತಿಭಟಿಸುವುದನ್ನು ಭಾರತದ ಮುಖಂಡರು ಎಂದಿನಿಂದ ನಿಲ್ಲಿಸಿದ್ದಾರೆ ಎನ್ನುವುದನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ಭಾರತ ಸಕಾರಣವಿಲ್ಲದೆ ಸಂಭ್ರಮಾಚರಣೆಯಲ್ಲಿ ತೊಡಗುವುದಕ್ಕೆ ಕಡಿವಾಣ ಹಾಕಲು ಇದು ಸಕಾಲವಾಗಿದೆ. ವಾಸ್ತವತೆ ಮನದಟ್ಟು ಮಾಡಿಕೊಳ್ಳಲು ಮತ್ತು ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲವಾಗಿದೆ.

ಬರಹ ಇಷ್ಟವಾಯಿತೆ?

 • 17

  Happy
 • 0

  Amused
 • 3

  Sad
 • 0

  Frustrated
 • 2

  Angry

Comments:

0 comments

Write the first review for this !