ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ಸಂಗ್ರಹಕ್ಕೆ ಬಂದಿದೆ ಟಿಪ್ಪರ್‌

ಚಿಟಗುಪ್ಪ ಪುರಸಭೆ ಹೊಸ ಯೋಜನೆ: ಸ್ವಚ್ಛ ಪಟ್ಟಣ ಗುರಿ
Last Updated 26 ಮೇ 2018, 9:26 IST
ಅಕ್ಷರ ಗಾತ್ರ

ಚಿಟಗುಪ್ಪ: ಪಟ್ಟಣದಲ್ಲಿ ಉತ್ಪಾದನೆಯಾಗುವ ತ್ಯಾಜ್ಯದ ವಿಲೇವಾರಿಗೆ ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿ ಅಗತ್ಯ ವ್ಯವಸ್ಥೆ ಮಾಡಲು ಯೋಜನೆ ರೂಪಿಸಲಾಗಿದೆ. ತ್ಯಾಜ್ಯ ಮರುಬಳಕೆ ಸೇರಿದಂತೆ ಶೂನ್ಯ ಕಸ ನಿರ್ವಹಣೆಗಾಗಿ ಪಟ್ಟಣದ ಹೊರವಲಯದಲ್ಲಿ ತ್ಯಾಜ್ಯದ ಪಾರ್ಕ್‌ ನಿರ್ಮಾಣ ಮಾಡಲಾಗಿದೆ.

‘ಪುರಸಭೆ ಸಿಬ್ಬಂದಿ ನಿತ್ಯ  ಮನೆ ಮನೆಗೆ ಭೇಟಿ ನೀಡಿ ಹಸಿ, ಒಣ ಕಸ ಸಂಗ್ರಹಿಸಿಕೊಂಡು ಹೋಗುವ ನೂತನ ವ್ಯವಸ್ಥೆ ಜಾರಿಗೆ ತರಲಾಗಿದೆ. ಆರಂಭದಲ್ಲಿ ಕೊಳಚೆ ಪ್ರದೇಶದ ನಿವಾಸಿಗಳಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ’ ಎಂದು ಆರೋಗ್ಯ ನಿರೀಕ್ಷಕ ಉಮೇಶ್ ಗುಡ್ಡದ್ ಪ್ರಜಾವಾಣಿ ಗೆ ತಿಳಿಸಿದರು.

2017–18ನೇ ಸಾಲಿನ 14ನೇ ಹಣಕಾಸು ಯೋಜನೆ ಅಡಿಯಲ್ಲಿ ₹ 2 ಲಕ್ಷ 40 ಸಾವಿರ ಮೊತ್ತದಲ್ಲಿ  ಹಸಿ,ಒಣ ಕಸ ಸಂಗ್ರಹಿಸಿಡುವ ಒಟ್ಟು 3500 ಕಸದ ಬುಟ್ಟಿಗಳು ಖರೀದಿಸಿ ವಿತರಿಸಲಾಗಿದೆ. ಕಸ ಸಂಗ್ರಹಿಸಿ ತ್ಯಾಜ್ಯದ ಪಾರ್ಕ್‌ಗೆ ಕೊಂಡೊಯ್ಯಲು ₹ 19 ಲಕ್ಷದಲ್ಲಿ 4 ಟಿಪ್ಪರ್‌ ಖರೀದಿಸಲಾಗಿದೆ ಎಂದು ಮುಖ್ಯಾಧಿಕಾರಿ ಹುಸಾಮೋದ್ದಿನ್ ಹೇಳುತ್ತಾರೆ.

ಪ್ರತಿ ಮನೆಗೆ ಹಸಿ, ಒಣ ಕಸ ಹಾಕಲು ಎರಡು ಬುಟ್ಟಿಯನ್ನು ಪುರಸಭೆ ನೀಡಿದೆ. ಪಡೆದ ಬುಟ್ಟಿಗಳಲ್ಲಿ ನಾಗರಿಕರು ಅಡುಗೆ ಮನೆಯಲ್ಲಿ ಉತ್ಪತ್ತಿಯಾಗುವ ಎಲ್ಲ ರೀತಿಯ ದ್ರವರೂಪದ ವಸ್ತುಗಳು, ಅನ್ನ, ಸೊಪ್ಪು, ತರಕಾರಿ, ಹಣ್ಣು, ಹಣ್ಣಿನ ಸಿಪ್ಪೆ ಇನ್ನಿತರ ತ್ಯಾಜ್ಯ ಗಳನ್ನು ಹಸಿ ಕಸದ ಬುಟ್ಟಿಯಲ್ಲಿ ಮತ್ತು ಪ್ಲಾಸ್ಟಿಕ್, ಪೇಪರ್, ಗ್ಲಾಸ್‌ಪೀಸು, ಬಾಟಲಿಗಳು, ಕಬ್ಬಿಣದ ತುಂಡು, ನ್ಯಾಪ್‌ಕಿನ್ಸ್, ಪ್ಯಾಡ್ಸ್, ಟೂತ್‌ಪೇಸ್ಟ್ ಕವರ್, ಪ್ಲಾಸ್ಟಿಕ್ ಕಂಟೈನರ್, ಪಾತ್ರೆಗಳು, ಹಳೆ ಬಟ್ಟೆ, ಚಾಪೆ, ಕಡ್ಡಿ, ಸೋಪ್ ಕವರ್, ಎಲ್ಲ ರೀತಿಯ ಪ್ಯಾಕಿಂಗ್ ಕವರ್ ಹಾಗೂ ಇನ್ನಿತರ ಘನ ತ್ಯಾಜ್ಯವನ್ನು ಒಣ ಕಸದ ಬುಟ್ಟಿಯಲ್ಲಿ ಹಾಕಿ ನಿತ್ಯ ಮನೆಗಳ ಬಾಗಿಲಿಗೆ ಬರುವ ಟಿಪ್ಪರ್‌ ನಲ್ಲಿ ಹಾಕಬೇಕು. ಈ ಟಿಪ್ಪರ್ ನಲ್ಲಿ ಹಸಿ, ಒಣ ಕಸ ಹಾಕಲು ಪ್ರತ್ಯೇಕ ವ್ಯವಸ್ಥೆ ಮಾಡಿರುವುದು ಮತ್ತೊಂದು ವಿಶೇಷ ಎನ್ನುತ್ತಾರೆ ಮುಖ್ಯಾಧಿಕಾರಿ ಹುಸಾಮೋದ್ದಿನ್.

ಮನೆಗಳಿಂದ ನಿತ್ಯ ಘನತ್ಯಾಜ್ಯ ಕಸ ಸಂಗ್ರಹಿಸುವುದಕ್ಕೆ ಎರಡು ಹಳೆಯ ಹಾಗೂ ನಾಲ್ಕು ಹೊಸ ಟಿಪ್ಪರ್ ಗಳು ನಿತ್ಯ ಪಟ್ಟಣದಲ್ಲಿ ಸಂಚರಿಸಲಿವೆ. ಪ್ರತಿ ವಾಹನದ ಜೊತೆಗೆ ಇಬ್ಬರು ಪೌರ ಕಾರ್ಮಿಕರು ಇರುತ್ತಾರೆ.

ಕಸವನ್ನು ವೈಜ್ಞಾನಿಕವಾಗಿ ವಿಂಗಡಿಸಿ ವಿಲೇವಾರಿ ಮಾಡುವುದು ಈ ಯೋಜನೆ ಮೂಲ ಉದ್ದೇಶ. ಇದರ ನಿರ್ವಹಣೆಗಾಗಿ ನಾಗರಿಕರ ಮನೆ ಕರ ವಸೂಲಿ ಜೊತೆಗೆ ಕಸ ವಿಲೆವಾರಿ ಶುಲ್ಕವಾಗಿ ಪ್ರತಿ ಮನೆಗೆ ವಾರ್ಷಿಕ
₹ 180, ವಾಣಿಜ್ಯ ಅಂಗಡಿ ಮಾಲೀಕರಿಗೆ ವಾರ್ಷಿಕ ₹ 240 ಹೆಚ್ಚುವರಿ ಶುಲ್ಕ ಪಡೆಯಲಾಗುವುದು.

ಜಾಗೃತಿ ಅಭಿಯಾನ: ಶುಚಿತ್ವಕ್ಕೆ ಸಂಬಂಧಿಸಿದಂತೆ ಪುರಸಭೆಯಿಂದ ಮಾಹಿತಿ, ಶಿಕ್ಷಣ, ಸಹಭಾಗಿತ್ವ ಕಾರ್ಯಕ್ರಮದ ಅಡಿ ಪಟ್ಟಣದ 23 ವಾರ್ಡ್‌ಗಳಲ್ಲಿ ಹಸಿ ಕಸ ಮತ್ತು ಒಣ ಕಸ ಬೇರ್ಪಡಿಸುವುದು, ಮನೆಗೊಂದು ಶೌಚಾಲಯ ನಿರ್ಮಾಣ, ಪಟ್ಟಣದಲ್ಲಿ ಶುಚಿತ್ವ ಕಾಪಾಡುವುದು ಮತ್ತಿತರ ಅರಿವು ಮೂಡಿಸುವ ಜಾಗೃತಿ ಅಭಿಯಾನ ಮಾಡಲಾಗುವುದು ಎಂದು  ತಿಳಿಸಿದರು.

ಸಾರ್ವಜನಿಕರಲ್ಲಿ ಈ ಕುರಿತು ಅರಿವು ಮೂಡಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಿದ್ದೇವೆ. ಕಸ ಸಂಗ್ರಹಣೆಗಾಗಿ ಮನೆ ಮನೆಗೆ ತೆರಳುವ ಪೌರಕಾರ್ಮಿಕರು ಕಸ ವಿಂಗಡಿಸಿ ಕೊಡುವಂತೆ ಮನವರಿಕೆ ಮಾಡುತ್ತಿದ್ದು, ಸಾರ್ವಜನಿಕರು ಇದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸ್ಪಂದಿಸಬೇಕಿದೆ ಎಂಬುದು ಪುರಸಭೆ ಅಧಿಕಾರಿಗಳ ಆಶಯ.

‘ವಾರ್ಡ್‌ಗಳಿಗೆ ಟಿಪ್ಪರ್‌ ತೆರಳುವ ವೇಳಾಪಟ್ಟಿ ಇನ್ನೂ ಸಿದ್ಧಗೊಂಡಿಲ್ಲ. ಪುರಸಭೆ ಅಧ್ಯಕ್ಷೆ ಗೌರಮ್ಮ ಹಾಗೂ ಎಲ್ಲ ಸದಸ್ಯರ ಸೂಚನೆಯಂತೆ ವೇಳಾಪಟ್ಟಿ ತಯಾರಿಸಿ ಕಸ ಸಂಗ್ರಹಿಸುವ ಕೆಲಸ ಬೇಗ ಆರಂಭವಾಗಲಿದೆ’ ಎಂದು ಮುಖ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.

***
ಮನೆಗಳಲ್ಲಿಯೇ ಹಸಿ,ಒಣ ಕಸ ಬೇರ್ಪಡಿಸಿ ತ್ಯಾಜ್ಯ ವಿಂಗಡಣೆ ಮಾಡುವ ಮೂಲಕ ಎಲ್ಲೆಡೆ ಸ್ವಚ್ಛತೆ ಮೂಡಿಸುವ ಯೋಜನೆಯ ಪ್ರಯೋಜನವನ್ನು ನಾಗರಿಕರು ಪಡೆಯಬೇಕು –  ಹುಸಾಮೋದ್ದೀನ್, ಮುಖ್ಯಾಧಿಕಾರಿ

– ವೀರೇಶ್ ಕುಮಾರ.ಎನ್.ಮಠಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT