ಗುರುವಾರ , ಸೆಪ್ಟೆಂಬರ್ 24, 2020
28 °C

ರಫೇಲ್ ಇನ್ನೂ ‘ಬೊಫೋರ್ಸ್’ ಆಗಿಲ್ಲವೇಕೆ?

ಶೇಖರ್‌ ಗುಪ್ತ Updated:

ಅಕ್ಷರ ಗಾತ್ರ : | |

ರಫೇಲ್ ಪ್ರಕರಣ ಇನ್ನೂ ಬೊಫೋರ್ಸ್ ಹಗರಣದಷ್ಟು ವ್ಯಾಪಿಸಿಲ್ಲ ಎಂಬುದನ್ನು ನರೇಂದ್ರ ಮೋದಿ ಅವರ ಕಟು ಟೀಕಾಕಾರರು ಇನ್ನೂ ಒಪ್ಪಿಕೊಳ್ಳುತ್ತಿಲ್ಲ. ಕೆಲವೇ ತಿಂಗಳುಗಳ ಹಿಂದೆ ಅಜೇಯರಂತೆ ಕಾಣುತ್ತಿದ್ದ ಮೋದಿ ಅವರನ್ನು ಪದಚ್ಯುತಗೊಳಿಸಲು ಈ ಪ್ರಕರಣ ಬ್ರಹ್ಮಾಸ್ತ್ರವಾಗಬಹುದು ಎಂದು ಅವರು ಈಗಲೂ ಭಾವಿಸಿದ್ದಾರೆ. ಆದರೆ ಅದು ತಪ್ಪು ಎಣಿಕೆ ಎನ್ನಲು ಕೆಲವಾರು ಕಾರಣಗಳಿವೆ.

ಮೊದಲಿಗೇ ಹೇಳಬೇಕೆಂದರೆ, ನಮ್ಮ ಹಳ್ಳಿಗಳಲ್ಲಿ ಬಹುತೇಕರಿಗೆ ರಫೇಲ್ ಬಗ್ಗೆ ಏನೂ ಗೊತ್ತಿಲ್ಲ. ಇಂಡಿಯಾ ಟುಡೆ ಆ್ಯಕ್ಸಿಸ್- ಮೈ ಇಂಡಿಯಾ ಇತ್ತೀಚೆಗೆ ನಡೆಸಿದ ಸಮೀಕ್ಷೆ ಪ್ರಕಾರ, ಉತ್ತರ ಪ್ರದೇಶದಲ್ಲಿ ಶೇ 21ರಷ್ಟು ಜನರಿಗೆ ಮಾತ್ರ ರಫೇಲ್ ಬಗ್ಗೆ ಗೊತ್ತು. ಇದಕ್ಕಾಗಿ, ಪತ್ರಕರ್ತರಾದ ನಾವು ನಮ್ಮನ್ನೇ ದೂಷಿಸಿಕೊಳ್ಳಬೇಕು.

ಎರಡನೆಯ ಸಂಗತಿಯೆಂದರೆ, ಇದನ್ನು ಮತದಾರರಿಗೆ ಮನಮುಟ್ಟುವಂತೆ ತಲುಪಿಸಲು ವಿ.ಪಿ.ಸಿಂಗ್ ಅವರಂತಹ ನೈತಿಕ ಸ್ಥೈರ್ಯವುಳ್ಳ ಯಾವ ನಾಯಕರೂ ಈಗ ಇಲ್ಲ. ಬೊಫೋರ್ಸ್ ಮತ್ತಿತರ ಹಗರಣಗಳ ಕರಿಛಾಯೆ ಮುಸುಕಿರುವ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರಂತೂ ಇದಕ್ಕೆ ಸೂಕ್ತವೇ ಅಲ್ಲ.

ಮೋದಿ ಅವರ ಎದುರಾಳಿಗಳು, ಅದರಲ್ಲೂವಿಶೇಷವಾಗಿ ರಾಹುಲ್ ಗಾಂಧಿ ಈ ಪ್ರಕರಣವನ್ನು 2019ರ ಲೋಕಸಭಾ ಚುನಾವಣೆಯ ಕೇಂದ್ರ ವಿಷಯವಾಗಿಸಲು ತೀರ್ಮಾನಿಸಿದ್ದಾರೆ. ಈ ಮೂಲಕ, ಸರ್ಕಾರದ ವಿರುದ್ಧ ವ್ಯಾಪಕ ಭ್ರಷ್ಟಾಚಾರ ಮತ್ತು ಪಕ್ಷಪಾತದ ಆರೋಪ ಮಾಡಬಹುದೆಂಬುದು ಅವರ ಲೆಕ್ಕಾಚಾರ. ತೀವ್ರ ಸಂಕಷ್ಟದಲ್ಲಿರುವ ಹಲವಾರು ಉದ್ಯಮಗಳ ವಿವಾದಾತ್ಮಕ ಮಾಲೀಕನೊಂದಿಗೇ ಪಕ್ಷಪಾತ ಹೊಂದಿರುವ ಮೋದಿ, ಅತ್ಯಂತ ಯಶಸ್ವಿ ಹಾಗೂ ಸಿರಿವಂತ ಉದ್ಯಮಿಗೆ ‘ಇಲ್ಲ’ ಎಂದು ಹೇಳುವುದನ್ನು ನಿರೀಕ್ಷಿಸಲಾದೀತೇನು? ಇದೆಲ್ಲವನ್ನೂ ಪ್ರಚುರಪಡಿಸಲು ಅವರಿಗೆ ‘ರಫೇಲ್ ಪ್ರಕರಣ’ ಕೇಂದ್ರಬಿಂದುವಿನಂತೆ ಅತ್ಯಗತ್ಯವಾಗಿದೆ.

ತಮಗೆ ಮಾಧ್ಯಮಗಳ ಬೆಂಬಲವಿಲ್ಲ; ಬೊಫೋರ್ಸ್ ವಿರುದ್ಧ ರಾಮನಾಥ ಗೋಯೆಂಕಾ ನೇತೃತ್ವದ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಖಡಾಖಡಿಯಾಗಿ ನಿಂತಂತೆ ಈಗ ರಫೇಲ್ ವಿರುದ್ಧ ಲೋಕಸಭೆಯಲ್ಲಿ ಧ್ವನಿ ಎತ್ತಲು, ಜನಾಭಿಪ್ರಾಯ ರೂಪಿಸಲು ಯಾವ ಮಾಧ್ಯಮದ ಬೆಂಬಲವೂ ಸಿಗುತ್ತಿಲ್ಲ ಎಂಬುದು ಪ್ರತಿಪಕ್ಷಗಳ ರೋದನವಾಗಿದೆ. ಈಗ ಅವುಗಳ ಬಳಿ ಇರುವುದೇನಿದ್ದರೂ ಇಬ್ಬರು ಕಳಂಕರಹಿತ ವ್ಯಕ್ತಿಗಳಾದ ಅರುಣ್ ಶೌರಿ ಮತ್ತು ಪ್ರಶಾಂತ್ ಭೂಷಣ್ ಮಾತ್ರ.

ಮೊದಲೇ ಹೇಳಿದಂತೆ, ರಾಹುಲ್ ಅವರನ್ನು ಈ ಅಶ್ವಮೇಧ ಯಾಗದ ಮುಖ್ಯ ಕುದುರೆಯನ್ನಾಗಿಸಲು ಸಾಧ್ಯವಿಲ್ಲ. ಜೊತೆಗೆ, ಮೋದಿ ಅವರ ನೇತೃತ್ವದ ಬಿಜೆಪಿಯಲ್ಲಿ ಈ ಬಗ್ಗೆ ಈವರೆಗೆ ಯಾರಿಂದಲೂ ಬಂಡಾಯದ ಧ್ವನಿ ಕೇಳಿಬಂದಿಲ್ಲ. ಬೇಕಾದರೆ ರಾಜಕೀಯ ಚರಿತ್ರೆಯನ್ನೊಮ್ಮೆ ಮಗುಚಿ ಹಾಕಿ ಅವಲೋಕನ ಮಾಡಿ ನೋಡಿ. 1977ರಲ್ಲಿ ಇಂದಿರಾ ಗಾಂಧಿ ಅವರ ನಂಬಿಕಸ್ತ ಧುರೀಣ ಜಗಜೀವನ್ ರಾಂ ಮತ್ತು 1988-89ರಲ್ಲಿ ರಾಜೀವ್ ಅವರ ನಂಬಿಕಸ್ತ ಧುರೀಣ ವಿ.ಪಿ.ಸಿಂಗ್ ಅವರು ಬಂಡಾಯವೆದ್ದಿದ್ದೇ ಆಗಿನ ಸಮೀಕರಣವನ್ನು ಬುಡಮೇಲು ಮಾಡಲು ಮುಖ್ಯ ಕಾರಣವಾಗಿತ್ತು ಎಂಬುದು ಮೇಲ್ನೋಟಕ್ಕೇ ಗೊತ್ತಾಗುತ್ತದೆ.

ಇದೀಗ ಎಲ್ಲಿಂದಲಾದರೂ ವಿ.ಪಿ. ಸಿಂಗ್ ಅವರಂತಹ ನಾಯಕರೊಬ್ಬರು ಉದ್ಭವವಾಗಲಿ ಎಂದು ನಿರೀಕ್ಷಿಸುವುದು ಅವಾಸ್ತವಿಕವಾಗುತ್ತದೆ. ವಿ.ಪಿ. ಸಿಂಗ್ ಅವರು ವೈಯಕ್ತಿಕವಾಗಿ ಭ್ರಷ್ಟಾಚಾರದ ಸೋಂಕಿಲ್ಲದವರೂ ಸಚಿವ ಸಂಪುಟ ಸ್ಥಾನಮಾನವನ್ನು ತ್ಯಜಿಸಿದವರೂ ಆಗಿದ್ದರು. ಅಲ್ಲದೆ, ನರೇಂದ್ರ ಮೋದಿ ಅಥವಾ ವಾಜಪೇಯಿ ಅವರಂತೆ ಸಮ್ಮೋಹಕ ಭಾಷಣಕಾರರಲ್ಲದಿದ್ದರೂ ಸಂಕೀರ್ಣ ರಕ್ಷಣಾ ಒಪ್ಪಂದವನ್ನು 30 ವರ್ಷಗಳ ಹಿಂದೆಯೇ ಚುನಾವಣೆಯ ಪ್ರಮುಖ ನೆಲೆಯಾದ  ಉತ್ತರ ಪ್ರದೇಶದ ಮತದಾರರು ಅರ್ಥ ಮಾಡಿಕೊಳ್ಳಬಲ್ಲಂತಹ ರೂಪಕವಾಗಿ ಮನಗಾಣಿಸುವಲ್ಲಿ ಯಶಸ್ವಿಯಾಗಿದ್ದರು.

ವಿ.ಪಿ. ಸಿಂಗ್ ಅವರು 1987ರಲ್ಲಿ, ಅಂದರೆ ರಾಜೀವ್ ಪತನದ ದಿನಗಳು ಆರಂಭವಾಗಿದ್ದ ಸಂದರ್ಭದಲ್ಲೇ ಸಂಪುಟ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತಮ್ಮ ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡಿದ್ದ ಅವರು ಉಪಚುನಾವಣೆಯಲ್ಲಿ ಅಲಹಾಬಾದ್ ನಿಂದ ಸ್ಪರ್ಧಿಸಲು ನಿರ್ಧರಿಸಿದ್ದರು. ಬೊಫೋರ್ಸ್ ಪ್ರಲೋಭನೆಗೆ ಸಂಬಂಧಿಸಿದ ಆರೋಪಗಳ ಹಿನ್ನೆಲೆಯಲ್ಲಿ ಅಮಿತಾಭ್ ಬಚ್ಚನ್ ಅವರು ಈ ಕ್ಷೇತ್ರವನ್ನು ಆಗಷ್ಟೇ ತೆರವುಗೊಳಿಸಿದ್ದರು. ಹೀಗಾಗಿ ವಿ.ಪಿ. ಸಿಂಗ್ ಅವರಿಗೆ ಅತ್ಯಂತ ಸೂಕ್ತವಾದ ಭೂಮಿಕೆ ಅದಾಗಿಯೇ ಸಿದ್ಧಗೊಂಡಿತ್ತು. ಆದರೆ, ವಿ.ಪಿ. ಸಿಂಗ್ ಅವರಿಗೆ ಬೊಫೋರ್ಸ್ ಹಗರಣವನ್ನು ಒಂದು ಚುನಾವಣಾ ವಿಷಯವನ್ನಾಗಿಸಲು ಸಾಧ್ಯವಿಲ್ಲ ಎಂದು ಅವರ ಗೆಳೆಯರು ಹಾಗೂ ಶತ್ರುಗಳು ಇಬ್ಬರೂ ನಿಶ್ಚಿತವಾಗಿ ನಂಬಿದ್ದರು. ಹೀಗಾಗಿ,ತಮ್ಮ ಬುದ್ಧಿಶಕ್ತಿಗೆ ನಿಲುಕದ ಯಾವುದೋ ಒಂದು ವಿಷಯದ ಬಗ್ಗೆ ಗ್ರಾಮೀಣ ಮತದಾರರು ಸಂಬಂಧ ಬೆಸೆದುಕೊಳ್ಳುವುದಾದರೂ ಹೇಗೆ?

ಆದರೆ, ಸಿಂಗ್ ಅವರು ಈ ಅಡೆತಡೆಗಳನ್ನು ಯಶಸ್ವಿಯಾಗಿ ಭೇದಿಸಿಬಿಟ್ಟರು. ಈಗಿನ ಆಂದೋಲನಾ ರಾಜಕಾರಣಿ ಯೋಗೇಂದ್ರ ಯಾದವ್ ಅವರಂತೆ ಆಗ ಕತ್ತಿನ ಸುತ್ತ ಮಫ್ಲರ್ ಸುತ್ತಿಕೊಂಡು ಮೋಟರ್ ಬೈಕ್‌ನಲ್ಲಿ ಕುಳಿತು, ಬೇಸಿಗೆಯ ಉರಿಬಿಸಿಲನ್ನೂ ಲೆಕ್ಕಿಸದೆ ಅಡ್ಡಾಡಿದ ವಿ.ಪಿ. ಅವರು ಹಳ್ಳಿಗರೊಂದಿಗೆ ಮಾತನಾಡಿ ಸರಳ ಪ್ರಶ್ನೆಯೊಂದನ್ನು ಕೇಳುತ್ತಿದ್ದರು. ‘ರಾಜೀವ್ ಗಾಂಧಿ ಅವರು ನಿಮ್ಮ ಮನೆಗೆ ಕನ್ನ ಹಾಕಿದ್ದಾರೆ ಎಂಬುದು ನಿಮಗೆ ಗೊತ್ತಿದೆಯೇನು’ ಎಂಬುದೇ ಆ ಪ್ರಶ್ನೆಯಾಗಿತ್ತು.

ನಂತರ ತಮ್ಮ ಕುರ್ತಾ ಜೇಬಿನಿಂದ ಬೆಂಕಿ ಪೊಟ್ಟಣ ತೆಗೆದು, ‘ನೋಡಿ, ಇದು ಬೆಂಕಿ ಪೊಟ್ಟಣ. ನಿಮ್ಮ ಬೀಡಿ ಅಥವಾ ಹುಕ್ಕಾ ಹಚ್ಚಲು ಅಥವಾ ಅಡುಗೆ ಮನೆಯ ಒಲೆ ಹೊತ್ತಿಸಲು ಬೇಕಾಗುವ ಈ ಬೆಂಕಿಪೊಟ್ಟಣ ಖರೀದಿಸಲು ನೀವು ನಾಲ್ಕಾಣೆ (25 ಪೈಸೆ) ಕೊಡುತ್ತೀರಿ. ಹೀಗೆ ನೀವು ಕೊಡುವ ಹಣದಲ್ಲಿ ನಾಲ್ಕನೇ ಒಂದು ಭಾಗ ಸರ್ಕಾರಕ್ಕೆ ತೆರಿಗೆ ಎಂದು ಹೋಗುತ್ತದೆ. ಹೀಗೆ ಬರುವ ತೆರಿಗೆ ಹಣದಿಂದ ಸರ್ಕಾರವು ಶಾಲೆಗಳು, ಆಸ್ಪತ್ರೆಗಳು, ನಾಲೆಗಳನ್ನು ನಿರ್ಮಿಸುವುದರ ಜೊತೆಗೆ ರಾಷ್ಟ್ರದ ಸೈನ್ಯಕ್ಕಾಗಿ ಬಂದೂಕುಗಳನ್ನು ಖರೀದಿಸುತ್ತದೆ. ಇದು ನಿಮ್ಮದೇ ಹಣ. ಇದರಲ್ಲಿ ಯಾರಾದರೂ ಕೊಂಚ ಭಾಗವನ್ನು ಕದ್ದರೂ ಸರಿ, ಅದರಲ್ಲೂ ರಾಷ್ಟ್ರದ ಸೈನ್ಯಕ್ಕಾಗಿ ಬಂದೂಕು ತರಿಸುವಾಗ ಕದ್ದರೆ, ಅದು ನಿಮ್ಮ ಮನೆಗೇ ಕನ್ನ ಹಾಕಿದಂತಲ್ಲವೇ?

ಹೀಗೆ, ಸಿಂಗ್ ಅವರು  ಬೊಫೋರ್ಸ್ ಸಂಬಂಧ ಮಾಹಿತಿಗಿಂತ ಹೆಚ್ಚಾಗಿ ಕಥೆಯ ರೂಪದಲ್ಲೇ ವಿಷಯಗಳನ್ನು ಜನರ ಮುಂದಿಡುತ್ತಾ ಹೋದರು. ತನಗೆ ಯಾವುದೇ ಕಮಿಷನ್ ಸಂದಾಯವಾಗಿಲ್ಲ ಎಂದು ಬೊಫೋರ್ಸ್ ಸರ್ಟಿಫಿಕೇಟ್ ಕೊಟ್ಟಿದೆ ಎಂದು ರಾಜೀವ್ ಗಾಂಧಿ ಹೇಳುತ್ತಾರೆ. ಆದರೆ ಹೀಗೆ ಹೇಳುವುದು, ಮನೋಚಿಕಿತ್ಸಾ ಕೇಂದ್ರದ ಪ್ರಮಾಣಪತ್ರ ಪಡೆದ ಹುಚ್ಚನೊಬ್ಬ ತಾನು ಸ್ವಸ್ಥನಾಗಿದ್ದೇನೆ ಎಂದು ಹೇಳಿದಂತಲ್ಲವೇನು?- ಎಂಬ ಪ್ರಶ್ನೆಯನ್ನು ಜನರ ಮುಂದಿಡುತ್ತಿದ್ದರು.

ರಾಜೀವ್ ಅವರು ಬೊಫೋರ್ಸ್ ಕಮಿಷನ್ ಪಡೆದಿದ್ದಾರೆ ಎಂಬುದನ್ನು ಜನರ ಮನಸ್ಸಿಗೆ ನಾಟಿಸಲು ವಿ.ಪಿ.ಸಿಂಗ್ ಹೀಗೆ ಕಥೆ ಹೇಳುತ್ತಿದ್ದರು: ಸರ್ಕಸ್ಸೊಂದರಲ್ಲಿ ಒಂದು ಸಿಂಹ, ಒಂದು ಕುದುರೆ, ಒಂದು ಗೂಳಿ ಮತ್ತು ಬೆಕ್ಕು ಒಡನಾಡಿಗಳಾಗಿ ವಾಸಿಸುತ್ತಿದ್ದವು. ಒಂದು ರಾತ್ರಿ ಯಾರೋ ಪಂಜರಗಳ ಬಾಗಿಲುಗಳನ್ನು ತೆರೆದುಬಿಟ್ಟರು. ಮರುದಿನ ಬೆಳಿಗ್ಗೆ ಕುದುರೆ ಮತ್ತು ಗೂಳಿಯ ಅಳಿದುಳಿದ ಮೂಳೆಯ ತುಣುಕುಗಳು ಸರ್ಕಸ್ ಮಾಲೀಕನ ಕಣ್ಣಿಗೆ ಬಿದ್ದವು. ಅವನ್ನು ತಿಂದಿದ್ದು ಸಿಂಹವೇ ಅಥವಾ ಬೆಕ್ಕೇ ಎಂದು ಯಾರಿಗಾದರೂ ಅನುಮಾನವಿದ್ದೀತೆಂದು ನಿಮಗೆ ಅನ್ನಿಸುತ್ತದೆಯೇ? ಅದೇ ರೀತಿ, ಬೊಫೋರ್ಸ್ ಕಮಿಷನ್ ನಂತಹ ದೊಡ್ಡ ಇಡುಗಂಟನ್ನು ಯಾವುದೇ ಲೆಕ್ಕಕ್ಕಿಲ್ಲದ ಬೆಕ್ಕು ತಿನ್ನಲು ಸಾಧ್ಯವೇ? ಸಿಂಹಗಾತ್ರದ ಲೂಟಿಕೋರರಾದ ರಾಜೀವ್ ಮಾತ್ರ ಅದನ್ನು ಮಾಡಲು ಸಾಧ್ಯ. ಅಂತಿಮವಾಗಿ, ಕಾಂಗ್ರೆಸ್ಸಿನ ಜಾಹೀರಾತು ಫಲಕಗಳಲ್ಲಿ ಹಾಕಿಸಿದ್ದ ರಾಜೀವ್ ಅವರ ನಗೆಮುಖದ ಚಿತ್ರವನ್ನೇ ಬಳಸಿಕೊಂಡು ಅವರು ಎಚ್ಚೆತ್ತುಕೊಳ್ಳಲಾಗದಂತಹ ಪೆಟ್ಟು ಕೊಟ್ಟಿದ್ದರು: ರಾಜೀವ್ ಏನನ್ನು ನೋಡಿ ನಗು ತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ತನ್ನ ವಂಚನಾ ಚಾತುರ್ಯಕ್ಕೆ ಸ್ವಯಂ ಬೆರಗಾಗಿಯೇ? ಅಥವಾ ನಮ್ಮ ದುಃಸ್ಥಿತಿ ನೋಡಿಯೇ ಅಥವಾ ಸ್ವಿಟ್ಜರ್‌ಲೆಂಡ್‌ನಲ್ಲಿ ಅಡಗಿಸಿಟ್ಟಿರುವ ಸಂಪತ್ತಿನ ಬಗ್ಗೆ ಯೋಚಿಸಿಕೊಂಡೇ? ನಾನು ನಿಮಗೆ ನಾಲೆಗಳ ನಿರ್ಮಾಣ ಅಥವಾ ಕೊಳವೆ ಬಾವಿಗಳನ್ನು ಕೊರೆಸುವ ವಾಗ್ದಾನ ನೀಡುವುದಿಲ್ಲ. ಆದರೆ, ನಿಮ್ಮ ಸಂಪತ್ತು ವೃಥಾ ಸೋರಿಕೆಯಾಗುತ್ತಿರುವುದನ್ನು ತಡೆಯುತ್ತೇನೆ ಎಂದಿದ್ದರು.

ಸಿಂಗ್ ಅವರ ಮೇಧಾವಿತನದ ಬಗ್ಗೆ ಯಾವ ಅನುಮಾನವೂ ಇಲ್ಲ. ಆದರೆ, ಅದರ ಜೊತೆಗೆ ಆಗ ಸಿಂಗ್ ಅವರಿಗೆ ಅನುಕೂಲಕರ ವಾತಾವರಣವೂ ಇತ್ತು; ಸಿಂಗ್ ಅವರ ಬತ್ತಳಿಕೆಯಲ್ಲಿ ಒಂದು ಒಳ್ಳೆಯ ಹಗರಣ ಇತ್ತು. ಜೊತೆಗೆ, ಬೊಫೋರ್ಸ್ ಕಳಂಕದ ಹೊರತಾಗಿಯೂ ಕಾಂಗ್ರೆಸ್ ಜನಪ್ರಿಯತೆ ಇಳಿಮುಖಗೊಂಡಿದ್ದ ಅವಧಿ ಅದಾಗಿತ್ತು.

ಈಗ ಪ್ರತಿಪಕ್ಷಗಳ ಬಳಿ ವಿ.ಪಿ. ಸಿಂಗ್ ಅವರಂತಹ ನಾಯಕ ಇಲ್ಲ ಎಂಬುದನ್ನು ಒಪ್ಪಿಕೊಳ್ಳೋಣ. ಆದರೆ, ಮತ್ತೊಂದು ಮಗ್ಗುಲಿನಿಂದ ನೋಡಿದರೆ, ಈ ರಫೇಲ್ ಪ್ರಕರಣ ಯಾವ ಕೋನದಿಂದಲಾದರೂ ಬೊಫೋರ್ಸ್ ಹಗರಣವನ್ನು ಹೋಲುವ ಹಗರಣವೇ ಎಂಬುದನ್ನೂ ಅವಲೋಕಿಸೋಣ.

ಬೊಫೋರ್ಸ್ ಮತ್ತು ರಫೇಲ್ ನಡುವೆ ಮಹತ್ವದ ವ್ಯತ್ಯಾಸವಿದೆ. ಬೊಫೋರ್ಸ್ ಬಂದೂಕುಗಳ ಗುಣಮಟ್ಟದ ಬಗ್ಗೆ ತಗಾದೆ ಇದ್ದಂತೆ ರಫೇಲ್ ಗುಣಮಟ್ಟದ ಬಗ್ಗೆ ಯಾವುದೇ ತಗಾದೆ ಯಾರಿಗೂ ಇದ್ದಂತಿಲ್ಲ. ರಫೇಲ್ ಖರೀದಿಗೆ ಲಗತ್ತಾದ ಅತ್ಯುತ್ತಮ ಯುದ್ಧವಿಮಾನ ಎಂಬುದನ್ನೂಎಲ್ಲರೂ ಒಪ್ಪುತ್ತಾರೆ. ಈ ಖರೀದಿ ಆಯ್ಕೆ ಮಾಡಿದ್ದು ಕಾಂಗ್ರೆಸ್ ಸರ್ಕಾರವೇ. ಈಗ ಇರುವ ಆಪಾದನೆ ಏನೆಂದರೆ, ಮೋದಿ ನೇತೃತ್ವದ ಸರ್ಕಾರವು 126 ಯುದ್ಧವಿಮಾನಗಳಿಗೆ ಬದಲಾಗಿ ಕೇವಲ 36 ವಿಮಾನಗಳನ್ನು ಖರೀದಿಸುತ್ತಿದೆ ಎಂಬುದು. ‘ಬೊಫೋರ್ಸ್ ಬಂದೂಕಿನಿಂದ ಗುಂಡು ಹಾರಿಸಿದಾಗ ಅದು ಹಿಮ್ಮುಖವಾಗಿ ಚಲಿಸಿ ನಮ್ಮ ಸೈನಿಕರನ್ನೇ ಕೊಂದುಹಾಕಿತು’ ಎಂದು ಮುಖಕ್ಕೆ ಹೊಡೆದಂತೆ ಆರೋಪಿಸಲು ವಿ.ಪಿ. ಸಿಂಗ್ ಅವರಿಗೆ ಅವಕಾಶವಿತ್ತು. ಆದರೆ, ರಫೇಲ್ ಬಗ್ಗೆ ಯಾರೇ ಆಗಲಿ ಇಂತಹ ಆಪಾದನೆ ಮಾಡಲು ಸಾಧ್ಯವೇ ಇಲ್ಲ.

ಎರಡನೆಯ ವ್ಯತ್ಯಾಸವೆಂದರೆ, ಟಿ.ಎನ್. ನಿನನ್ ಅವರು ತಮ್ಮ ಅಂಕಣದಲ್ಲಿ ಹೇಳಿರುವಂತೆ, ಸದ್ಯಕ್ಕೆ ಬೊಫೋರ್ಸ್ ನಂತೆ ಇದರಲ್ಲಿ ಲಂಚದ ಹೊಗೆ ಕಂಡುಬರುತ್ತಿಲ್ಲ. ಬೊಫೋರ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಸ್ವಿಟ್ಜರ್‌ಲೆಂಡ್‌ನಲ್ಲಿರುವ ಭಾರತೀಯ ನಂಟಿನ ಮೂರು ಅನುಮಾನಾಸ್ಪದ ಖಾತೆಗಳಿಗೆ ಕಮಿಷನ್ ಸಂದಾಯವಾಗಿದೆ ಎಂದು ಸ್ವೀಡಿಷ್ ರಾಷ್ಟ್ರೀಯ ಲೆಕ್ಕಪರಿಶೋಧಕರು ವರದಿ ನೀಡಿದ್ದರು. ಆದರೆ ಈಗ ಫ್ರಾನ್ಸ್ ಅಧ್ಯಕ್ಷರು ರಫೇಲ್ ಸಂಬಂಧ ನೀಡಿರುವ ಹೇಳಿಕೆಯನ್ನು ಅಷ್ಟು ಅಧಿಕೃತವೆಂದು ಹೇಳಲಾಗದು. ಹೀಗಾಗಿ ರಫೇಲ್‌ಗೆ ಸಂಬಂಧಿಸಿದಂತೆ ಈಗ ಪಕ್ಷಪಾತದ ಆಪಾದನೆಯನ್ನಷ್ಟೇ ಮಾಡಬಹುದು. ರಕ್ಷಣಾ ಸಾಮಗ್ರಿಗಳ ಉತ್ಪಾದನೆಯಲ್ಲಿ ಅನುಭವವಿಲ್ಲದ ಕಾರ್ಪೊರೇಟ್ ಕಂಪನಿಗೆ ಏಕೆ ಆಮದು ಖರೀದಿ ವ್ಯವಹಾರದಲ್ಲಿ ಅನುಕೂಲ ಮಾಡಿಕೊಡಲಾಯಿತು ಎಂದು ಕೇಳಬಹುದು. ಪಕ್ಷಪಾತ ಕೂಡ ಮಾರಕವೇ ಇರಬಹುದು. ಆದರೆ, ಮೋದಿ ಅವರ ಮತದಾರರನ್ನು ಅವರ ವಿರುದ್ಧವೇ ತಿರುಗಿಬೀಳಿಸಲು ಇದು ಸಶಕ್ತವಾದ ಅಸ್ತ್ರವೇ?

ರಫೇಲ್ ಪ್ರಚಾರಾಂದೋಲನದ ಮಿತಿಯೇ ಇದು. ವಿ.ಪಿ. ಸಿಂಗ್ ಬುದ್ಧಿಶಾಲಿಯಾಗಿದ್ದರು. ಆಗ ಅವರೊಂದಿಗೆ ಜನರ ಮುಂದಿಡಲು ‘ದುಡ್ಡು ನುಂಗಲಾಗಿದೆ. ದಲ್ಲಾಳಿ ಯಾರು?’ ಎಂಬ ಪ್ರಶ್ನೆಯ ಬೆಂಬಲವೂ ಇತ್ತು. ‘ಹೌದು, ದುಡ್ಡು ನುಂಗಿರುವುದು ದಿಟ’ ಎಂದು ಜನ ನಂಬಿದ್ದರಿಂದ ಅದು ಫಲ ಕೊಟ್ಟಿತು. ಆದರೆ, ರಫೇಲ್ ವಿಷಯದಲ್ಲಿ ಈಗ ಪ್ರತಿಪಕ್ಷಗಳಿಗೆ ಅಂತಹ ಯಾವ ಅನುಕೂಲಕರ ವಾತಾವರಣವೂ ಕಂಡುಬರುತ್ತಿಲ್ಲ.

ಕೊನೆಯದಾಗಿ, ಮಾಧ್ಯಮಗಳ ಬಗೆಗಿನ ದೂರು. ನಮ್ಮ ಮಾಧ್ಯಮಗಳು ಪ್ರಬಲ ಪ್ರಧಾನಿಯೊಬ್ಬರ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಮೊದಲಿಗೆ ರಾಜೀವ್ ಗಾಂಧಿ ಅವರ ವಿಷಯದಲ್ಲಿಯೇ. ಆಗ ಮಾಧ್ಯಮಗಳು ಈಗಿನಷ್ಟು ಶಕ್ತವಾಗಿರಲಿಲ್ಲ. ಈಗ ಪತ್ರಕರ್ತರೆಲ್ಲರೂ ಮೋದಿ ಅವರೊಂದಿಗೆ ರಾಜಿ ಮಾಡಿಕೊಂಡಿದ್ದಾರೆ ಅಥವಾ ಅವರೆಡೆಗೆ ಭೀತಿ ಹೊಂದಿದ್ದಾರೆ ಎಂದು ಬಿಡುಬೀಸಾದ ಹೇಳಿಕೆ ನೀಡುವುದು ಬಲು ಸುಲಭ. ಹೀಗಾಗಿ, ನೀವು ಏನನ್ನು ನಿರೀಕ್ಷಿಸಬಹುದು?

ಆದರೆ, ಇಂದು ಮಾಧ್ಯಮಗಳ ಮುಂದೆ ಬೊಫೋರ್ಸ್ ನಂತಹ ಪ್ರಕರಣ ಇಲ್ಲ ಎಂಬುದನ್ನು ಒಪ್ಪಿಕೊಳ್ಳುವ ವಿನಮ್ರತೆ ಬೇಕಾಗಿದೆ. ಮತ್ತೊಂದು ಸಂಗತಿ; ಮೋದಿ ಅವರ ಜನಪ್ರಿಯತೆಯ ಗ್ರಾಫ್ ಇಳಿಮುಖವಾಗುತ್ತಿದ್ದರೂ ಅವರು ರಾಜೀವ್ 1988ರಲ್ಲಿ ಜನಪ್ರಿಯತೆ ಕಳೆದುಕೊಂಡ ಮಟ್ಟಕ್ಕೆ ಇಳಿದಿಲ್ಲ. ಹೀಗಾಗಿ ಅವರಿಗೆ ಆರೋಪಗಳು ಇನ್ನೂ ಅಂಟಿಕೊಳ್ಳುತ್ತಿಲ್ಲ. ಮೂರನೆಯದಾಗಿ, ಬಿಜೆಪಿಯಲ್ಲಿ ಆಂತರಿಕ ಬಂಡಾಯ ಕಂಡುಬಂದಿಲ್ಲ. ಯಶವಂತ ಸಿನ್ಹಾ, ಕೀರ್ತಿ ಆಜಾದ್ ಮತ್ತು ಶತ್ರುಘ್ನ ಸಿನ್ಹಾ ಅವರು ವಿ.ಪಿ. ಸಿಂಗ್ ಅವರಂತಹ ನಾಯಕರಲ್ಲ. ಅಂತಿಮವಾಗಿ, ಬೊಫೋರ್ಸ್ ಬಗ್ಗೆ ಬರೆದು ಬರೆದು ಸುಸ್ತಾದ ಮೂರು ದಶಕಗಳಾದ ಮೇಲೂ ಒಂದೇ ಒಂದು ಕಿಲುಬು ಕಾಸನ್ನೂ ವಾಪಸ್ ಪಡೆದಿಲ್ಲವಾದ್ದರಿಂದ ಅಥವಾ ಯಾರನ್ನಾದರೂ ತಪ್ಪಿತಸ್ಥರೆಂದು ಹೇಳಲಾಗದ್ದರಿಂದ ಪತ್ರಕರ್ತರೆಲ್ಲಾ ಒಂದು ಬಗೆಯಲ್ಲಿ ‘ಶಿಕ್ಷೆ’ಗೊಳಗಾದ ಸಂಕಟ ಅನುಭವಿಸುತ್ತಿದ್ದಾರೆ. ರಕ್ಷಣಾ ಹಗರಣಕ್ಕೆ ಸಂಬಂಧಪಟ್ಟಂತೆ ಈಗ ಅನುಮಾನಿಸಲು ಅದರ ಮಟ್ಟ ಮೊದಲಿಗಿಂತ ಎತ್ತರದಲ್ಲಿ ಇರಬೇಕಾಗಿದೆ.

ಲೇಖಕ: ‘ದಿ ಪ್ರಿಂಟ್‌’ನ ಸಂಸ್ಥಾಪಕ
ಮತ್ತು ಪ್ರಧಾನ ಸಂಪಾದಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು