ಸೋಮವಾರ, ಮಾರ್ಚ್ 30, 2020
19 °C

ಮೋದಿ ಪಾಲಿನ ‘ಉಪಯೋಗಕರ ಮೂರ್ಖರು’

ಶೇಖರ್‌ ಗುಪ್ತ Updated:

ಅಕ್ಷರ ಗಾತ್ರ : | |

ಕಮ್ಯುನಿಸ್ಟೇತರ ಉದಾರವಾದಿಗಳನ್ನು ‘ಉಪಯೋಗಕರ ಮೂರ್ಖರು’ ಎಂದು ಬಣ್ಣಿಸುವ ಚುಚ್ಚು ಪದಗುಚ್ಛವನ್ನು ಲೆನಿನ್ ಬಳಕೆಗೆ ತಂದ ಎನ್ನಲಾಗುತ್ತದೆಯಾದರೂ ಇದನ್ನು ಯಾರು ಕಂಡುಹಿಡಿದರು ಎಂಬುದು ಗೊತ್ತಿಲ್ಲ. ಈ ನುಡಿಗುಚ್ಛಕ್ಕೂ ಲೆನಿನ್‍ಗೂ ಯಾವುದೇ ಸಂಬಂಧ ಇಲ್ಲ ಎನ್ನುತ್ತಾರೆ ಅಮೆರಿಕದ ಲೇಖಕ ವಿಲಿಯಂ ಸಫೈರ್. ಆದರೆ, ಇದಂತೂ ಕನ್‍ಫ್ಯೂಷಿಯಸ್, ಕೌಟಿಲ್ಯ ಅಥವಾ ಸುನ್ ತ್ಸು ಅವರ ನುಡಿವಾಣಿಗಳಂತೆಯೇ ಜನಜನಿತವಾಗಿಬಿಟ್ಟಿದೆ. ಭಾರತದಲ್ಲಿ, ಕಳೆದ ಎರಡು ದಶಕಗಳ ಅವಧಿ
ಯಿಂದ ಹಿಂದುತ್ವ ಅಭಿಯಾನದ ಬುದ್ಧಿಜೀವಿ ಬೆಂಬಲಿಗರು ಇದನ್ನು ಎಡಪಂಥೀಯ ಧೋರಣೆಯುಳ್ಳವರು, ಉದಾರವಾದಿಗಳು, ನಗರದ ಬುದ್ಧಿಜೀವಿಗಳನ್ನು ಉದ್ದೇಶಿಸಿ ಬಳಸುತ್ತಿದ್ದಾರೆ. ಇದೇ ವೇಳೆ ಈ ಪಾಳಯಗಳ ಬುದ್ಧಿಜೀವಿಗಳ ನಡುವಿನ ಹ್ಯಾಷ್‍ಟ್ಯಾಗ್ ಸಮರವು ತಾರಕಕ್ಕೇರಿದ್ದರೂ ಉದಾರವಾದಿ ಎಡಪಂಥೀಯರಿಗೆ ‘ನಗರದ ನಕ್ಸಲರು’ ಎಂದು ಹಣೆಪಟ್ಟಿ ಹಚ್ಚಬೇಕೆಂಬ ಯೋಜನೆಗೆ ಅಂತಹ ಯಶಸ್ಸು ಇನ್ನೂ ಸಿಕ್ಕಿಲ್ಲ.

ನನ್ನ ಈ ಮಾತುಗಳು ಎರಡೂ ಬಣದವರನ್ನು ಗೊಂದಲಕ್ಕೆ ದೂಡಬಹುದು. ಆದರೆ, ನಗರದ ನಕ್ಸಲರೋ ಅಥವಾ ಅಲ್ಲವೋ,ಅವರನ್ನು ‘ಉಪಯೋಗಕರ ಮೂರ್ಖರು’ ಎಂದು ಬಿಂಬಿಸುವುದು ಸೂಕ್ತವೇ ಆಗಿದೆ ಎಂಬುದಕ್ಕೆ ಇತ್ತೀಚೆಗೆ ಪುರಾವೆಗಳು ಹೊರಬರುತ್ತಿವೆ. ಆದರೆ ಇದರಲ್ಲಿ ಪ್ರಮುಖ ತಿರುವು ಇದೆ. ಅದೇನೆಂದರೆ ಬಿಜೆಪಿ ಪಾಲಿಗೆ, ಕೆಲವು ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿ ಉಳಿದಿರುವ ನಿರುಪದ್ರವಿಗಳಾಗಲೀ ಮತ್ತು ಬಸ್ತಾರ್‍ನ ಬುಡಕಟ್ಟು ಪ್ರದೇಶಗಳಲ್ಲಿರುವ, ಕೊಂಚ ಅಪಾಯಕಾರಿಗಳು ಎನ್ನಬಹುದಾದ ಇವರ್ಯಾರೂ ‘ಭಾರತದ ಮಹಾನ್ ಕ್ರಾಂತಿ’ಯ ‘ಉಪಯೋಗಕರ ಮೂರ್ಖ’ರಲ್ಲ. ಇದಕ್ಕೆ ಬದಲಾಗಿ, ಇವರಲ್ಲಿ ಬಿಜೆಪಿಯು ತನಗೆ ಲಾಭಕರವಾದ ಮೂರ್ಖರನ್ನು ಕಂಡುಕೊಂಡಿದೆ.

ನಗರದ ನಕ್ಸಲ ಅಥವಾ ಹಳ್ಳಿಗಾಡಿನ ನಕ್ಸಲ ಎಂಬ ಭಿನ್ನ ಪ್ರಕಾರಗಳೇನೂ ಇಲ್ಲ. ನಕ್ಸಲ ಎಂದರೆ ನಕ್ಸಲ ಅಷ್ಟೆ. ಜತೆಗೆ ಆತ/ಆಕೆ ಮಾವೊವಾದಿಯೂ ಆಗಿರಬಹುದು. ವ್ಯಕ್ತಿ ಇವೆರಡರಲ್ಲಿ ಯಾವುದೇ ಆಗಿದ್ದರೂ ಆತ ಕ್ರಿಮಿನಲ್ ಎಂದೇನೂ ಅರ್ಥವಲ್ಲ. ಈ ಸಂಬಂಧದ ನಂಬಿಕೆಗಳನ್ನು ಹೊಂದಿದ ಅಥವಾ ಅವುಗಳ ಬಗ್ಗೆ ಮುಕ್ತವಾಗಿ ಮಾತನಾಡುವ ಯಾವುದೇ ಭಾರತೀಯನನ್ನು ಯುಎಪಿಎ ಸೇರಿದಂತೆ ಯಾವುದೇ ಕಾನೂನು ಬಳಸಿ ಜೈಲಿಗೆ ಕಳುಹಿಸಲಾಗದು. ಅಷ್ಟೇ ಏಕೆ, ‘ಭಾರತವು ಕಾಶ್ಮೀರವನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದೆ’ ಎಂದೂ ಅಥವಾ, ‘ನಮ್ಮ ಪ್ರಜಾತಂತ್ರವು ಅತಂತ್ರವಾಗಿದ್ದು ಇದೊಂದು ಸವರ್ಣೀಯ ಪಿತೂರಿ’ ಎಂದೂ ಸಾರ್ವಜನಿಕವಾಗಿ ಪ್ರತಿಪಾದಿಸಲು ಅವಕಾಶವಿದೆ. ಇದಕ್ಕಾಗಿ ಸರ್ಕಾರವು ಯಾರನ್ನಾದರೂ ಜೈಲಿಗೆ ದೂಡಲು ಸಾಧ್ಯವೇ? ಖಂಡಿತಾ ಇಲ್ಲ.

ಆದರೆ ಬಿಜೆಪಿ ಸಮಸ್ಯೆಯೇ ಬೇರೆಯದು. ಬಿಜೆಪಿಯು ಏನೇ ಢಾಣಾ ಡಂಗೂರ ಬಾರಿಸಿಕೊಂಡರೂ ತಾನು ಬಿಂಬಿಸುತ್ತಿರುವ ‘ಅಭಿವೃದ್ಧಿ- ಯಶೋಗಾಥೆ’ಯು ಅಬ್ಬಾಬ್ಬಾ ಎಂದರೆ ಬಿ ಪ್ಲಸ್ ಶ್ರೇಣಿಯ ಮಟ್ಟದಲ್ಲಿರಬಹುದು ಎಂಬುದು ಆ ಪಕ್ಷಕ್ಕೆ ಚೆನ್ನಾಗಿ ಗೊತ್ತಿದೆ. ಇಂತಹ ಸಂದರ್ಭದಲ್ಲಿ ಅದಕ್ಕೆ ಮತ ಕೇಳಲು ‘ವಿರೋಧಿ ಭೂತ’ವೊಂದು ಬೇಕಾಗಿದೆ. ಜತೆಗೆ, ಈ ‘ವಿರೋಧಿ ಭೂತ’ವು ಹೇಗಿರಬೇಕೆಂದರೆ, ರಾಷ್ಟ್ರದ ಜನತೆಗೆ ಆ ಸರ್ಕಾರದ ವೈಫಲ್ಯಗಳನ್ನು ಮರೆತುಬಿಡುವಷ್ಟು ಅಪಾಯಕಾರಿ ಎನ್ನಿಸಬೇಕು; ಅಂತಿಮವಾಗಿ, ಅವರೆಲ್ಲರಿಗೂ ‘ಮೊದಲಿಗೆ ರಾಷ್ಟ್ರ ಉಳಿದರೆ ತಾನೇ ಉಳಿದಿದ್ದೆಲ್ಲವೂ’ ಎಂಬ ಭಾವನೆ ಮೂಡಿ, ಅದು ಅವರಿಗೆ ಮತಗಳನ್ನು ತಂದುಕೊಡಬೇಕು. ಹೆಚ್ಚುಕಡಿಮೆ ಇದು 1984ರಲ್ಲಿ ರಾಜೀವ್ ಗಾಂಧಿ ಅವರ ‘ರಾಜೀವ್ ಗಾಂಧಿ ಕಾ ಐಲಾನ್- ನಹೀ ಬನೇಗಾ ಖಲಿಸ್ತಾನ್?’ ಎಂಬ ಘೋಷವಾಕ್ಯವನ್ನೇ ಹೋಲುತ್ತದೆ.

ಮುಸ್ಲಿಮರನ್ನು ಶತ್ರುಗಳು ಎಂದು ಬಿಂಬಿಸುವ ಸೂತ್ರ ಈಗ ಸವಕಲಾಗಿ ಸತ್ವ ಕಳೆದುಕೊಂಡಿದೆ. ಮುಸ್ಲಿಮ್ ಎಂದರೆ ಪಾಕಿಸ್ತಾನಿ, ಹಾಗೆಂದರೆ ಕಾಶ್ಮೀರಿ ಪ್ರತ್ಯೇಕತಾವಾದಿ, ಹಾಗೆಂದರೆ ಭಯೋತ್ಪಾದಕ, ಹಾಗೆಂದರೆ ಎಲ್‍ಇಟಿ, ಅಲ್‍ಖೈದಾ, ಐಎಸ್ ಎಂಬುದು ಸುಸ್ಥಿರ ಸಮೀಕರಣ ಆಗಿದ್ದಿದ್ದರೆ ಮಾತ್ರ ಈ ಮೇಲಿನದು ಜಾದೂ ಮಾಡುತ್ತಿತ್ತೇನೋ. ಆದರೆ, ಈಗಿನ ಸನ್ನಿವೇಶ ಗಮನಿಸಿದರೆ ಅಂತಹ ವಾತಾವರಣ ಕಂಡುಬರುತ್ತಿಲ್ಲ. ಭಾರತದ ಬಹುಭಾಗದ ಮುಸ್ಲಿಮರು ಶಾಂತಿಪ್ರಿಯರಾಗಿ ಬದುಕುತ್ತಿರುವುದು ಇದಕ್ಕೆ ಭಾಗಶಃ ಕಾರಣವಾಗಿದೆ. ಎರಡನೆಯದಾಗಿ, ಹಿಂದೂಗಳೆಲ್ಲರೂ ತಮ್ಮ ಅಸ್ಮಿತೆಯ ಇತರ ಮಾನದಂಡಗಳನ್ನು, ವಿಶೇಷವಾಗಿ ಜಾತಿಯ ಆಯಾಮವನ್ನು ಕಡೆಗಣಿಸಿ ಮುಸ್ಲಿಮರೆಡೆಗೆ ಭೀತಿ ಹೊಂದಿದವರಲ್ಲ. ಮೂರನೆಯದಾಗಿ, ಈ ಸಂಬಂಧದ ಉದ್ವಿಗ್ನತೆಯನ್ನು ನಿರಂತರವಾಗಿ ಕಾಯ್ದುಕೊಳ್ಳಬೇಕೆಂದರೆ ಗಡಿ ನಿಯಂತ್ರಣ ರೇಖೆಯ ಗುಂಟಲೂ ಸತತವಾಗಿ ಗುಂಡಿನ ಚಕಮಕಿಗಳು ನಡೆದು, ಅದು ಅಂತಿಮವಾಗಿ ‘ಬೃಹತ್ ನಿರ್ದಿಷ್ಟ ದಾಳಿ’ಯಲ್ಲಿ (ಮೆಗಾ ಸರ್ಜಿಕಲ್ ಸ್ಟ್ರೈಕ್) ಪರ್ಯವಸಾನವಾಗಬೇಕು. ತನ್ನ ಆಪ್ತ ರಾಷ್ಟ್ರವಾದ ಪಾಕಿಸ್ತಾನದ ಮೇಲೆ ದಾಳಿ ನಡೆದರೆ ತಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಚೀನಾ ಈಗಾಗಲೇ ಸ್ಪಷ್ಟಪಡಿಸಿದೆ. ಅಮೆರಿಕದಲ್ಲಿನ ಟ್ರಂಪ್ ಆಡಳಿತದ ನಡೆಯನ್ನು ಯಾರೂ ಅವಲಂಬಿಸಲಾಗದ ಸ್ಥಿತಿ ಇದೆ. ನ್ಯಾಟೊವನ್ನೂ ಅಥವಾ ಜಪಾನ್ ಅನ್ನೂ ಅಥವಾ ದಕ್ಷಿಣ ಕೊರಿಯಾವನ್ನೂ ನಂಬಲಾಗದು.

ಆದ್ದರಿಂದ ಭಾರತದ ಅಸ್ವಿತ್ವ ಉಳಿಯಬೇಕೆಂದರೆ ಈಗ ಹೊಸ ಎದುರಾಳಿಯನ್ನು ಹುಡುಕಬೇಕಾಗಿದೆ. ಮಾವೊವಾದ ಈ ಹೊಸ ಶತ್ರುವಿನ ಜಾಗ ತುಂಬುವ ಸಾಧ್ಯತೆ ಇದೆ. ಇದಕ್ಕೆ ಇಸ್ಲಾಮತ್ವದ ತಳಕು ಹಾಕಿಬಿಟ್ಟರೆ ಅದು ಇನ್ನೂ ಉತ್ತಮವಾಗಿಬಿಡುತ್ತದೆ. ಜಾಗತಿಕ ಹಾಗೂ ಆಂತರಿಕ ದುಷ್ಟಶಕ್ತಿಗಳೆಲ್ಲಾ ಭಾರತವನ್ನು ಧ್ವಂಸಗೊಳಿಸಲು ಹೊಂಚು ಹಾಕುತ್ತಿರುವಾಗ, ನೀವು ಉದ್ಯೋಗ ಸೃಷ್ಟಿಯ ಮಾತುಗಳನ್ನು ಆಡುತ್ತೀರೇನು? ಎಲ್ಲಿ ಹೋಯಿತು ನಿಮ್ಮ ದೇಶಭಕ್ತಿ?

ಹೀಗಾಗಿ, ಮಾವೊವಾದದೊಂದಿಗೆ ಮುಸ್ಲಿಮ್ ಸಮುದಾಯವನ್ನು ಸೇರಿಸಿಬಿಟ್ಟರೆ ಅದು ಚೆನ್ನಾಗಿ ಪೋಣಿಸಿಕೊಂಡು ಬಿಡುತ್ತದೆ. 2019ರ ಬೇಸಿಗೆಯ ಹೊತ್ತಿಗೆ ‘ರಾಷ್ಟ್ರವು ಗಂಭೀರ ಅಪಾಯದಲ್ಲಿದೆ’ ಎಂಬ ಕಥೆಯೂ ರೆಕ್ಕೆಪುಕ್ಕಗಳೊಂದಿಗೆ ಗರಿಗೆದರಬಹುದು.

ಬರಿಯ ‘ಮಾವೊವಾದಿ’ ಎಂಬ ಪದವು ನಮ್ಮ ಜನಸಮೂಹವನ್ನು ಅಷ್ಟಾಗಿ ಭೀತಗೊಳಿಸದು. ನಮ್ಮಲ್ಲಿ ಬಹುತೇಕರು, ಸಮಾಜಕ್ಕೆ ಯಾವ ರೀತಿಯಲ್ಲೂ ಉಪದ್ರವಿಗಳಲ್ಲದ ಮಾವೊವಾದಿಗಳನ್ನು ಕಾಲೇಜುಗಳಲ್ಲಿ ನೋಡಿದ್ದೇವೆ. ಆದರೆ ‘ನಕ್ಸಲರು’ ಶಸ್ತ್ರಸಜ್ಜಿತರಾದವರಾದ್ದರಿಂದ ಆ ಪದ ಹೆಚ್ಚು ಭಯಭೀತಗೊಳಿಸುತ್ತದೆ. ಆದರೆ ಅವರು ಕಣ್ಣೆದುರಿಗೆ ಇಲ್ಲವಾದ್ದರಿಂದ ಮನಸ್ಸಿನಲ್ಲೂ ಉಳಿಯುವುದಿಲ್ಲ. ಅವರು ನಮ್ಮ ಟಿ.ವಿ. ಪರದೆಗಳ ಮೇಲೆ, ಟ್ವಿಟರ್ ಖಾತೆಗಳ ಮೂಲಕ ಕಾಣಿಸಿಕೊಳ್ಳುವುದಿಲ್ಲ. ಹೀಗಾಗಿ ಇವರ ಹೆಸರಿನಲ್ಲಿ ಮಹಾರಾಷ್ಟ್ರ ಅಥವಾ ಮಧ್ಯಪ್ರದೇಶದ ಮತದಾರನ ಮನಸ್ಸಿನಲ್ಲಿ ಭೀತಿ ಮೂಡಿಸಲಾಗದು. ಅದಕ್ಕಾಗಿಯೇ ‘ನಗರದ ನಕ್ಸಲೀಯ’ ಎಂಬ ‘ಭೂತ’ವನ್ನು ಮುಂದಿಡಲಾಗುತ್ತಿದೆ.

ಮೊದಲ ಬಾರಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಈ ಬಗೆಯ ‘ತುಕಡೆ- ತುಕಡೆ’ ಪರಿಕಲ್ಪನೆ ಜನ್ಮತಾಳಿದ್ದನ್ನು ಒಮ್ಮೆ ಅವಲೋಕಿಸೋಣ. ವಿಶೇಷವಾಗಿ, ಎಡಪಂಥೀಯ ಬುದ್ಧಿಜೀವಿಗಳು ಆರಾಧಿಸುವ ಅದ್ಭುತ ಉರ್ದು ಕವಿ ಆಗಾ ಶಾಹಿದ್ ಅಲಿ ಸ್ಮರಣಾರ್ಥ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದು ‘ಕಾಶ್ಮೀರಿ ಆಜಾದಿ’ಯ ಕುರಿತು ಚರ್ಚಿಸುವ ಮತ್ತು ಬೆಂಬಲಿಸುವ ಸಮಾವೇಶವೂ ಆಗಿರುತ್ತದೆ ಎಂಬ ಕರಪತ್ರಗಳನ್ನು ಆಗ ಹಂಚಲಾಗಿತ್ತು. ನಂತರ, ‘ಭಾರತ್ ತೇರೆ ತುಕಡೇ ಹೋಂಗೆ, ಇನ್‍ಶಾಅಲ್ಲಾಹ್ ಇನ್‍ಶಾಅಲ್ಲಾಹ್’ ಎಂಬ ಘೋಷಣೆಗಳಿರುವ ವಿಡಿಯೊಗಳು ಹರಿದಾಡಿದವು. ಆ ಸಂದರ್ಭದಲ್ಲಿ, ಒಬ್ಬರಿಗಿಂತ ಒಬ್ಬರು ಪ್ರಖರವೆನ್ನಿಸುವಂತಹ ವಿಚಾರವಾದಿಗಳಾದ ಇಬ್ಬರು ಎಡಪಂಥೀಯ ಮುಸ್ಲಿಂ ವಿದ್ಯಾರ್ಥಿಗಳ ಮೇಲೆ ರಾಷ್ಟ್ರದ್ರೋಹದ ಸುಳ್ಳು ದೂರುಗಳನ್ನು ಹೊರಿಸಲಾಯಿತು.

ಇನ್ನಷ್ಟು ವಿಡಿಯೊಗಳು ಹರಿದಾಡಲಾರಂಭಿಸಿದವು. ಮಹಿಳಾ ಪ್ರೊಫೆಸರ್ ಒಬ್ಬರು ಜೆಎನ್‍ಯು ಚೌಕದಲ್ಲಿ ‘ಕಾಶ್ಮೀರಿ ಆಜಾದಿ’ ಪರ ವಿದ್ಯಾರ್ಥಿಗಳ ಬಗ್ಗೆ ಮೆಚ್ಚುಗೆ ಸೂಚಿಸುವ ಹಾಗೂ ‘ಭಾರತವು ಕಾಶ್ಮೀರ ಭೂಭಾಗದ ಮೇಲೆ ತನ್ನ ಹಿಡಿತ ಸಾಧಿಸಿದೆ ಎಂಬುದನ್ನು ಇಡೀ ಜಗತ್ತು ಒಪ್ಪುತ್ತದೆ’ ಎನ್ನುವ ವಿಡಿಯೊ ಕೂಡ ಇದರಲ್ಲಿತ್ತು. ಇದಾಗುತ್ತಿದ್ದಂತೆ ಹೊಸ ಕಥೆಯೊಂದು ಅದಾಗಲೇ ಸಿದ್ಧಗೊಂಡಿತ್ತು: ‘ಭಾರತ ದೇಶವನ್ನು ಛಿದ್ರಗೊಳಿಸುವ ಸಲುವಾಗಿ ವೈಚಾರಿಕ ಬುದ್ಧಿಜೀವಿ ಎಡಪಂಥೀಯರು ರಾಷ್ಟ್ರದ್ರೋಹಿ ಮುಸ್ಲಿಮರೊಂದಿಗೆ ಕೈಜೋಡಿಸಿದ್ದಾರೆ’ ಎಂಬುದೇ ಈ ಕಥೆ. ದೂರದ ಕಾಶ್ಮೀರ ಮತ್ತು ಬಸ್ತಾರ್‍ನ ಕೂಗನ್ನು ನವದೆಹಲಿ, ಹೈದರಾಬಾದ್, ಮುಂಬೈ ಮತ್ತು ಪುಣೆಗಳಿಗೆ ತಲುಪಿಸುವ ಸಲುವಾಗಿ ನಗರದ ನಕ್ಸಲೀಯರು ಮತ್ತು ಪ್ರತ್ಯೇಕತಾವಾದಿ
ಮುಸ್ಲಿಮರು ಪರಸ್ಪರ ಕೈಜೋಡಿಸಿದ್ದಾರೆ ಎಂಬ ಕಥೆ ಹೆಣೆಯಲಾಯಿತು. ಜೆಎನ್‍ಯು ಈ ಸಂಚಿನ ಅಡ್ಡೆ ಎಂದು ಪ್ರತಿಪಾದಿಸಿ ಆ ವಿಶ್ವವಿದ್ಯಾಲಯವನ್ನು ಖಳನಾಯಕನ ಜಾಗದಲ್ಲಿ ನಿಲ್ಲಿಸಲಾಯಿತು.

ಪ್ರತ್ಯೇಕ ಕಾಶ್ಮೀರ ಆಂದೋಲನಕ್ಕೆ ಧುಮುಕುವ ಮೂಲಕ ಎಡಪಂಥೀಯ ಬುದ್ಧಿಜೀವಿಗಳು ಅರ್ಧಕಾರ್ಯವನ್ನು ಮಾಡಿ ಪೂರೈಸಿದ್ದಾರೆ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ತಮ್ಮೊಂದಿಗೆ ಸಲುಗೆಯಿಂದಿರುವ ಟಿ.ವಿ. ಚಾನೆಲ್‍ಗಳ ಮೂಲಕ, ಆಗಬೇಕಿರುವ ಉಳಿದರ್ಧ ವಿಧಿಯನ್ನು ಪೂರೈಸುತ್ತಾರೆ ಎಂಬುದರಲ್ಲಿ ಅನುಮಾನವಿಲ್ಲ. ಈ ಮೂಲಕ, ಹೊಸದಾದ ‘ರಾಷ್ಟ್ರವು ಅಪಾಯದಲ್ಲಿದೆ’ ಎಂಬ ಕಟ್ಟುಕಥೆ ಮೈದಾಳುತ್ತದೆ. ಆದರೆ ಭಾರತ ರಾಷ್ಟ್ರವು ಪಿಂಗಾಣಿಯಿಂದ ನಿರ್ಮಾಣವಾಗಿಲ್ಲ. ಘೋಷಣೆಗಳು, ಕಟ್ಟುಕಥೆಗಳು, ಲೇಖನಗಳು, ಕವನಗಳು, ಬುಡಕಟ್ಟು ಕುಗ್ರಾಮಗಳು ಮತ್ತು ಒಂದಷ್ಟು ಕಾಶ್ಮೀರಿಗಳಿಗೆ ಬಂದೂಕುಗಳನ್ನು ಕೊಟ್ಟು ಈ ರಾಷ್ಟ್ರವನ್ನು ಒಡೆಯಲಾಗದು. ಆದರೆ, ಯಾವುದೇ ಒಂದು ಪಕ್ಷಕ್ಕೆ ಅಂಟಿಕೊಂಡಿಲ್ಲದ ಮತದಾರರಿಗೆ ಇದು ಕುತೂಹಲ ಮೂಡಿಸಬಹುದು. ಧ್ರುವೀಕರಣದ ಸನ್ನಿವೇಶದಲ್ಲಿ, ಒಂದೆರಡು ಶೇಕಡಾವಾರು ಪ್ರಮಾಣ ಕೂಡ ಗೆಲುವನ್ನು ನಿರ್ಧರಿಸಿಬಿಡುತ್ತದೆ.

ಶಸ್ತ್ರಸಜ್ಜಿತ ನಕ್ಸಲರನ್ನು ಮತ್ತು ಕಾಶ್ಮೀರದಲ್ಲಿ ಜನಮತಗಣನೆಯನ್ನು ಬೆಂಬಲಿಸುವ ಎಡಪಂಥೀಯ ಬುದ್ಧಿಜೀವಿಗಳ ಆಲೋಚನಾ ಸ್ವಾತಂತ್ರ್ಯವನ್ನು ಸಮರ್ಥಿಸಿಕೊಳ್ಳುವುದೇನೋ ಸರಿ. ಎಲ್ಲಿಯವರೆಗೆ ಬಂದೂಕು ಕೈಗೆತ್ತಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಅವರು ತಮಗೆ ಸರಿ ಎನಿಸಿದ್ದನ್ನು ಪ್ರತಿಪಾದಿಸಬಹುದು. ಆದರೆ ಬಂದೂಕು ಕೈಗೆತ್ತಿಕೊಳ್ಳುತ್ತಿದ್ದಂತೆ ಗೊಂದಲ ಶುರುವಾಗುತ್ತದೆ. ಏಕೆಂದರೆ, ನೀವು ಯಾರ ಪರವಾಗಿ ಇರುತ್ತೀರೋ ಅವರು ಬಂದೂಕುಗಳನ್ನು ಬಳಸಿ ಕೊಲ್ಲುವ ಜೊತೆಗೆ ತಾವೂ ಹತರಾಗುತ್ತಾರೆ. ಆಗ ನೀವು ಪಾಕಿಸ್ತಾನಿ- ಕಾಶ್ಮೀರಿ- ಐಎಸ್‍ ಕಾರ್ಯನಿರ್ವಾಹಕ ಹಾಗೂ ಅಮೆರಿಕದಿಂದ ಸೆರೆವಾಸಕ್ಕೆ ಗುರಿಯಾಗಿರುವ ಗುಲಾಮ್ ನಬಿ ಫಾಯಿಯ ಆತಿಥ್ಯವನ್ನು ಸ್ವೀಕರಿಸುತ್ತೀರಿ. ಜತೆಗೆ, ಆತನನ್ನು ಕಾಶ್ಮೀರಿ ಭಕ್ತ ಎಂದು ಶ್ಲಾಘಿಸುತ್ತೀರಿ. ಇದು ಪ್ರತಿಯೊಬ್ಬ ಕಾಶ್ಮೀರಿಯನ್ನೂ ಸಂಚುಗಾರ ಎಂದು ಬಿಂಬಿಸಲು ಪ್ರಭುತ್ವಕ್ಕೆ ಅವಕಾಶ ಮಾಡಿಕೊಡುತ್ತದೆ.

ವೈಚಾರಿಕ ಮುಸ್ಲಿಮತ್ವವು ಇದೀಗ ಅಮೆರಿಕನ್ ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡಿ ಅದನ್ನು ಸೋಲಿಸುವ ಮೂಲಕ ಸೋವಿಯತ್ ಒಕ್ಕೂಟದ ಕೈಯಲ್ಲಿ ಆಗದೇ ಇದ್ದುದನ್ನು ಮಾಡುವಷ್ಟು ಸಶಕ್ತವಾಗಿದೆ ಎಂಬ ವಿಶ್ವಾಸವನ್ನು ಜಾಗತಿಕ ಮಟ್ಟದಲ್ಲಿ ಕೆಲವು ಎಡಪಂಥೀಯರು ಹೊಂದಿದ್ದಾರೆ. ಅಂತಹದ್ದೊಂದು ವಿಶ್ವಾಸವನ್ನು ರಮ್ಯವಾದಿಗಳು ಭಾರತದಲ್ಲಿಯೂ ಪಸರಿಸುತ್ತಿದ್ದಾರೆ. ಆದರೆ ಅದಕ್ಕಾಗಿ ನಿಜವಾಗಿಯೂ ಹೋರಾಡುತ್ತಿರುವ ಕಾಶ್ಮೀರಿಗರು ಮತ್ತು ಬಸ್ತಾರ್ ಬುಡಕಟ್ಟು ಜನರು ಬಂದೂಕಿನ ನಳಿಕೆಯ ತುದಿಯಲ್ಲಿ ಅನಾಮಿಕರಂತೆ, ಅನಾಥರಂತೆ, ಸಂತಾಪ ಸೂಚಿಸುವವರೂ ಇಲ್ಲದಂತೆ, ಸಮರ್ಥಿಸಿಕೊಳ್ಳಲೆಂದು ನರಪಿಳ್ಳೆಗಳೂ ಇಲ್ಲದ ಕ್ಷುದ್ರಜೀವಿಗಳಂತೆ ಹೆಣವಾಗುತ್ತಿದ್ದಾರೆ. ಬಂದೂಕನ್ನು ಕೈಗೆತ್ತಿಕೊಂಡ ಕ್ಷಣದಲ್ಲೇ ನಿಮ್ಮನ್ನು ಹತ್ಯೆ ಮಾಡಿದ್ದಕ್ಕೆ ಸೂಕ್ತ ಸಮರ್ಥನೆ ಪ್ರಭುತ್ವಕ್ಕೆ ದಕ್ಕಿಬಿಡುತ್ತದೆ. ಪ್ರಭುತ್ವ ಗೆಲುವು ಸಾಧಿಸುತ್ತದೆ. ಪ್ರಭುತ್ವದ ಬಲ ಜಾಸ್ತಿ ಎಂಬ ಕಾರಣಕ್ಕೆ ಈ ವಿಜಯ ಸಿಗುವುದಿಲ್ಲ. ಬದಲಾಗಿ, ರಾಷ್ಟ್ರದ ಜನತೆಯು ಅತ್ಯಧಿಕ ಪ್ರಮಾಣದಲ್ಲಿ ಈ ‘ಧರ್ಮ ಸಮರ’ವನ್ನು ಬೆಂಬಲಿಸುವುದರಿಂದ ಅದಕ್ಕೆ ಈ ಪರಿಯ ಶಕ್ತಿ ಬಂದುಬಿಡುತ್ತದೆ. ನಮ್ಮ ರಾಷ್ಟ್ರದೊಂದಿಗೆ ಬೇರೆಯವರು ಕದನಕ್ಕಿಳಿಯುವುದೇಕೆ ಎಂದು ಬೇರು ಮಟ್ಟಕ್ಕಿಳಿದು ಕಾರಣಗಳನ್ನು ಹುಡುಕುವಷ್ಟು ಬೌದ್ಧಿಕ ವಿಕಸನ ಬಹುತೇಕ ಭಾರತೀಯರಿಗೆ ಇಲ್ಲ. ಇದರ ಮಧ್ಯೆ, ಆರೋಪಕ್ಕೆ ಗುರಿಯಾದವರು ನ್ಯಾಯಾಲಯಗಳಿಂದ ಯಥೋಚಿತವಾಗಿ ಖುಲಾಸೆಗೊಳ್ಳುತ್ತಾರೆ. ಮೋದಿ ಅವರ ಸರ್ಕಾರವು ಕಾನೂನು ಮತ್ತು ನೈತಿಕ ದೃಷ್ಟಿಯಿಂದ ನಿಶ್ಚಿತವಾಗಿಯೂ ಸೋಲುಣ್ಣುತ್ತದೆ. ಆದರೆ ಅವರು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.

ಕ್ರಾಂತಿಯ ಬಗೆಗಿನ ರಮ್ಯಕಲ್ಪನೆಯು ನಿಮಗೆ 15 ನಿಮಿಷಗಳ ಕಾಲ ತಂದುಕೊಡುವ ಹೆಸರಿಗಾಗಿ ಯಾರಿಗೆ ಲಾಭ ಎಂಬುದನ್ನು ನೀವು ಯೋಚಿಸಿನೋಡಿ. ನೀವು ಮಾಡುವ ಉಪಕಾರಕ್ಕಾಗಿ ‘ಅವರು’ ನಿಮಗೆ ಪವಿತ್ರ ದಾರಗಳಿಂದ ಕಟ್ಟಿದ ಮತ್ತು ಚುಂಬನಗಳನ್ನು ಹುದುಗಿಸಿಟ್ಟ ದೊಡ್ಡ ಧನ್ಯವಾದ ಪತ್ರಗಳನ್ನು ಕಳುಹಿಸಲಿದ್ದಾರೆ. ಅವರ ಪಾಲಿಗೆ ನೀವು ತಮ್ಮ ಉದ್ದೇಶ ಈಡೇರಿಸಿಕೊಳ್ಳಲು ಅನುವು ಮಾಡಿಕೊಡುವ ‘ಉಪಯೋಗಕರ ಮೂರ್ಖರು’. ಒಂದೊಮ್ಮೆ, ಲೆನಿನ್ ಈ ಪದಗುಚ್ಛವನ್ನು ಕಂಡುಹಿಡಿದಿದ್ದರೆ ಆತನೂ ಬಸವಳಿಯುತ್ತಿದ್ದನೇನೋ.

ಲೇಖಕ: ‘ದಿ ಪ್ರಿಂಟ್‌’ನ ಸಂಸ್ಥಾಪಕ  ಮತ್ತು ಪ್ರಧಾನ ಸಂಪಾದಕ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು