ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದುರ್ಬಲ’ ದೂಷಣೆಯಾಚೆಗಿನ ಜಿಗಿತ

ಅಮೆರಿಕದಲ್ಲಿ ಕುಟುಂಬಗಳ ವಿಘಟನೆ ತಪ್ಪಿಸಬೇಕು ಎಂಬುದು ಬುಷ್‌ ಆಶಯವಾಗಿತ್ತು
Last Updated 3 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಅಮೆರಿಕದ 41ನೇ ಅಧ್ಯಕ್ಷರಾಗಿದ್ದ ಜಾರ್ಜ್ ಬುಷ್ ಸೀನಿಯರ್ ತಮ್ಮ ಸಾಹಸಮಯ ಬದುಕಿಗೆ ಪೂರ್ಣವಿರಾಮ ಹಾಕಿದ್ದಾರೆ. ಅವರ 94 ವರ್ಷಗಳ ಬದುಕಿನಲ್ಲಿ ನಾಲ್ಕಾರು ತಿರುವುಗಳಿದ್ದವು. ಅವರ ತಂದೆ ಸೆನೆಟ್ ಸದಸ್ಯರಾಗಿದ್ದರು. ಹಾಗಾಗಿ ರಾಜಕೀಯ ಅಪರಿಚಿತವಾಗಿರಲಿಲ್ಲ. ಕಾಲೇಜು ದಿನಗಳಲ್ಲಿ ಕ್ರೀಡಾಪಟುವಾಗಿ ಗುರುತಿಸಿಕೊಂಡರು. ಎರಡನೇ ವಿಶ್ವ ಸಮರದಲ್ಲಿ, ಯುದ್ಧ ವಿಮಾನ ಒಂದರ ಪೈಲಟ್ ಆಗಿದ್ದರು. ತಮ್ಮ ವಿಮಾನದ ಮೇಲೆ ದಾಳಿಯಾದಾಗ, ಪ್ರತಿದಾಳಿ ನಡೆಸಿ, ಪ್ಯಾರಾಚೂಟ್ ಮೂಲಕ ಸುರಕ್ಷಿತ ಸ್ಥಳದಲ್ಲಿ ಇಳಿದಿದ್ದರು. ಅಮೆರಿಕದ ಗೂಢಚರ ಸಂಸ್ಥೆ ಸಿಐಎನಲ್ಲಿ ಬುಷ್ ಕೆಲಸ ಮಾಡಿದ್ದರು. ಚೀನಾಕ್ಕೆ ಅಮೆರಿಕದ ರಾಯಭಾರಿಯಾಗಿದ್ದರು. ಇಷ್ಟಾಗಿಯೂ ಕೊನೆಗೆ ಅವರು ಶ್ವೇತಭವನದ ಸನಿಹ ಬಂದಾಗ ಅವರನ್ನು ‘ದುರ್ಬಲ ವ್ಯಕ್ತಿ’ ಎಂದು ಕರೆಯಲಾಯಿತು.

ಸಾಮಾನ್ಯವಾಗಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ, ಅಭ್ಯರ್ಥಿ ತನ್ನ ನಾಯಕತ್ವ ಗುಣವನ್ನು ಒರೆಗೆ ಹಚ್ಚಬೇಕಾಗುತ್ತದೆ. ಅದಕ್ಕೆ ಅಭ್ಯರ್ಥಿಗಳ ನಡುವಿನ ಸಂವಾದ ವೇದಿಕೆಯಾಗುತ್ತದೆ. ಪ್ರತೀ ಬಾರಿ ಚುನಾವಣೆಯ ವೇಳೆ ಅಭ್ಯರ್ಥಿಗಳ ನಡುವೆ ಸಂವಾದ ಏರ್ಪಟ್ಟಾಗ, ರಾಜಕೀಯ ವಿಶ್ಲೇಷಕರು 1980ರಲ್ಲಿ ನಡೆದ ರೇಗನ್ ಮತ್ತು ಬುಷ್ ನಡುವಿನ ಚರ್ಚೆಯನ್ನು ಪ್ರಸ್ತಾಪಿಸುತ್ತಾರೆ. 1980ರಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಲು ರೊನಾಲ್ಡ್ ರೇಗನ್ ಮತ್ತು ಬುಷ್ ಸೀನಿಯರ್ ನಡುವೆ ಸ್ಪರ್ಧೆಯಿತ್ತು. ಉಳಿದಂತೆ ವಿವಿಧ ರಾಜ್ಯಗಳ ಸೆನೆಟರ್‌ಗಳೂ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು. 1976ರಲ್ಲಿ ಪಕ್ಷದ ಟಿಕೆಟ್ ತಪ್ಪಿಸಿಕೊಂಡಿದ್ದ ರೇಗನ್, 80ರಲ್ಲಿ ಶತಾಯಗತಾಯ ಅಭ್ಯರ್ಥಿಯಾಗಬೇಕು ಎಂದು ಪ್ರಯತ್ನಿಸುತ್ತಿದ್ದರು. ಆದರೆ ಪತ್ರಿಕೆಗಳು ‘ಬುಷ್ ಜನಪ್ರಿಯತೆ ಏರುತ್ತಿದೆ. ರೇಗನ್ ಹಿಂದಿದ್ದಾರೆ’ ಎಂದು ಬರೆದಿದ್ದವು. ರಿಪಬ್ಲಿಕನ್ ಪಕ್ಷದ ಏಳು ಅಭ್ಯರ್ಥಿಗಳ ನಡುವೆ ಸಂವಾದ ಕೂಡ ನಡೆಯುತ್ತಿತ್ತು. ರೇಗನ್ ಮತ್ತು ಬುಷ್, ಉಳಿದ ನಾಲ್ವರನ್ನು ಪಕ್ಕಕ್ಕೆ ತಳ್ಳಿ, ಹಣಾಹಣಿಯನ್ನು ಇಬ್ಬರ ನಡುವಿನ ಸ್ಪರ್ಧೆಯಾಗಿಸಲು ಒಂದು ಪ್ರತ್ಯೇಕ ಚರ್ಚೆ ಏರ್ಪಡಲಿ ಎಂದು ಬಯಸಿದ್ದರು.

ಪತ್ರಿಕೆಯೊಂದರ ಸಂಪಾದಕರಾಗಿದ್ದ ಜಾನ್ ಬ್ರೀನ್, ಚರ್ಚೆಯ ನಿರ್ವಾಹಕ ಎಂದು ತೀರ್ಮಾನಿಸಲಾಯಿತು. ಇತರ ಅಭ್ಯರ್ಥಿಗಳನ್ನು ಚರ್ಚೆಯಿಂದ ಕೈ ಬಿಡುವುದು ಚುನಾವಣಾ ನಿಯಮದ ಉಲ್ಲಂಘನೆ ಆಗುವುದರಿಂದ, ಅದನ್ನೊಂದು ಖಾಸಗಿ ಚರ್ಚೆಯಾಗಿ ಪರಿವರ್ತಿಸಿ, ರೇಗನ್ ತಾವೇ ಹಣ ಸಂದಾಯ ಮಾಡಿದ್ದರು. ಕೊನೆಗೆ ಎಲ್ಲ ಅಭ್ಯರ್ಥಿಗಳನ್ನೂ ಚರ್ಚೆಗೆ ಆಹ್ವಾನಿಸಿದರು. ಆದರೆ ಬುಷ್ ಒಪ್ಪಲಿಲ್ಲ. ಎಲ್ಲ ಅಭ್ಯರ್ಥಿಗಳೂ ಚರ್ಚೆಯಲ್ಲಿ ಪಾಲ್ಗೊಳ್ಳುವುದಾದರೆ, ತಾವು ಭಾಗವಹಿಸುವುದಿಲ್ಲ ಎಂದು ಬುಷ್ ಹಟ ಹಿಡಿದರು. ಸಂಧಾನ ಸಫಲವಾಗಲಿಲ್ಲ. ಕೊನೆಗೆ ರೇಗನ್ ತಮ್ಮ ‘ಯೋಜನೆ’ಯಂತೆಯೇ ನಡೆದುಕೊಂಡರು. ಬುಷ್ ಮಾತಿಗೆ ಒಪ್ಪಿ, ವೇದಿಕೆಗೆ ಇಬ್ಬರೂ ನಡೆದು ಬಂದರು.

ವೇದಿಕೆಯ ಮೇಲೆ ಎರಡು ಆಸನಗಳನ್ನಷ್ಟೇ ಇಡಲಾಗಿತ್ತು. ಇನ್ನೇನು ಚರ್ಚೆ ಆರಂಭವಾಗಬೇಕು ಎನ್ನುವಷ್ಟರಲ್ಲಿ, ನಾಟಕೀಯ ಸನ್ನಿವೇಶ ಸೃಷ್ಟಿಯಾಯಿತು. ಇತರ ಐವರು ಅಭ್ಯರ್ಥಿಗಳು ವೇದಿಕೆ ಏರಿಬಂದು, ಬುಷ್-ರೇಗನ್ ಹಿಂದೆ ನಿಂತರು. ಜನ ‘Give them Chair' ಎಂದು ಕಿರುಚಲಾರಂಭಿಸಿದರು. ಇದರಿಂದ ವಿಚಲಿತರಾದ ಜಾನ್ ಬ್ರೀನ್, ಉಳಿದ ಅಭ್ಯರ್ಥಿಗಳನ್ನು ವೇದಿಕೆಯಿಂದ ಕಳುಹಿಸಲು ಮುಂದಾದರು. ಅಷ್ಟರಲ್ಲೇ, ರೇಗನ್ ಮೈಕು ಹಿಡಿದು ಗಟ್ಟಿದನಿಯಲ್ಲಿ, ‘I am the sponsor and I suppose I should have some right’ ಎಂದರು. ‘ಆ ಐದು ಜನರನ್ನು ಹೊರಗೆ ಕಳುಹಿಸುವುದು ಸರಿಯಲ್ಲ. ನಾವೆಲ್ಲರೂ ಒಂದೇ ಪಕ್ಷದವರು. ಒಗ್ಗಟ್ಟಿನಿಂದ ಇರಬೇಕು’ ಎಂದು ಮಾತು ಬೆಳೆಸಿದರು. ತಮ್ಮ ಅನುಕೂಲಕ್ಕೆ ತಕ್ಕಂತೆ ಸಂದರ್ಭವನ್ನು ಬಳಸಿಕೊಂಡರು. ಬುಷ್ ಏನಾಗುತ್ತಿದೆ ಎಂದು ತಿಳಿಯದೇ ಬೆಪ್ಪು ನಗೆ ಬೀರುತ್ತಾ ಕುಳಿತೇ ಇದ್ದರು. ಉಳಿದ ನಾಲ್ಕು ಅಭ್ಯರ್ಥಿಗಳನ್ನು ಚರ್ಚೆಯಿಂದ ಹೊರಗಿಡಲು ಹಟ ಹಿಡಿದ ಬುಷ್ ಜನರ ಕಣ್ಣಿನಲ್ಲಿ ಸಣ್ಣವರಾಗಿ ಕಂಡರೆ, ರೇಗನ್ ಹೀರೊ ಆಗಿ ಬದಲಾಗಿದ್ದರು.

ನಂತರವಂತೂ ರೇಗನ್ ಕ್ಯಾಂಪ್, ಬುಷ್ ಒಬ್ಬ ‘ದುರ್ಬಲ ವ್ಯಕ್ತಿ’ ಎಂದೇ ಬಿಂಬಿಸಿಕೊಂಡು ಬಂತು. ‘ನ್ಯೂಸ್ ವೀಕ್’ ಪತ್ರಿಕೆ ತನ್ನ ಸಂಚಿಕೆಗೆ ಬುಷ್ ಮುಖಪುಟ ಬಳಸಿ, ‘Fighting the Wimp Factor’ ಎಂದು ಒಕ್ಕಣೆ ನೀಡಿತು. ‘ಶ್ವೇತ ಭವನದಲ್ಲಿ ಕುಳಿತು ಕಠಿಣ ನಿಲುವು ತಳೆಯಲು ಬುಷ್ ಅವರಿಗೆ ಸಾಧ್ಯವಾಗಲಾರದು’ ಎಂದು ಬರೆಯಿತು. ಬುಷ್ ಮೃದುಭಾಷಿ, ಮಿತಭಾಷಿ ಎನ್ನುವುದನ್ನು ಬಿಟ್ಟರೆ, ಅವರನ್ನು ‘ದುರ್ಬಲ’ ಎನ್ನಲು ಕಾರಣಗಳೇ ಇರಲಿಲ್ಲ. ಅಮೆರಿಕದ ಹಿಂದಿನ ಎಲ್ಲ ಅಧ್ಯಕ್ಷರಿಗಿಂತ ಹೆಚ್ಚಿನ ಸಾಹಸಗಳನ್ನು ಅವರು ಮಾಡಿದ್ದರು.

ಮೇಲೆರಗಿದ ಅಪವಾದ ಅಳಿಸಿ ಹಾಕಲು, ಬುಷ್ ತಂಡ ಪ್ರಯತ್ನಿಸಿತು. ಬುಷ್ ಅವರನ್ನು ‘ಸದೃಢ’ ಎಂದು ಬಿಂಬಿಸಲು, ಅವರು ಜಾಗ್ ಮಾಡುತ್ತಿರುವ, ಜಿಮ್‌ನಲ್ಲಿ ಕಸರತ್ತು ಮಾಡುತ್ತಿರುವ ಛಾಯಾಚಿತ್ರಗಳನ್ನು ಜಾಹೀರಾತಿನಲ್ಲಿ ಬಳಸಿತು. ಆದರೆ ಈ ಪ್ರಯತ್ನಗಳು ಫಲ ನೀಡಲಿಲ್ಲ. ರೇಗನ್ ರಿಪಬ್ಲಿಕನ್ ಪಕ್ಷದ ಅಧಿಕೃತ ಅಭ್ಯರ್ಥಿಯಾದರು, ಆ ಚುನಾವಣೆಯಲ್ಲಿ ಭಾರಿ ಬಹುಮತದಿಂದ ಗೆದ್ದು ಶ್ವೇತಭವನ ಹೊಕ್ಕರು. ರೇಗನ್ ಅವಧಿಯಲ್ಲಿ ಎರಡು ಅವಧಿಗೆ ಉಪಾಧ್ಯಕ್ಷರಾಗಿ ಬುಷ್ ಕಾರ್ಯನಿರ್ವಹಿಸಬೇಕಾಯಿತು. ನಂತರ 1988ರ ಚುನಾವಣೆಯಲ್ಲಿ ಬುಷ್ ಸೀನಿಯರ್ ‘Read my lips: No New Taxes’ ಎಂದು ಜನರಿಗೆ ಭರವಸೆ ನೀಡಿದರು. ಇದೊಂದು ಜನಪ್ರಿಯ ಚುನಾವಣಾ ಘೋಷಣೆಯಾಗಿ ಮಾರ್ಪಟ್ಟಿತು. ಹೊಸ ತೆರಿಗೆ ಹೇರುವುದಿಲ್ಲ, ಇರುವ ಸುಂಕ ಹೆಚ್ಚಿಸುವುದಿಲ್ಲ ಎಂಬ ಮಾತು, ಜನರ ಮತ ಗೆದ್ದಿತ್ತು. ಬುಷ್ ಅಮೆರಿಕದ 41ನೇ ಅಧ್ಯಕ್ಷರಾದರು. ವಿಯಟ್ನಾಂ ಯುದ್ಧದ ಬಳಿಕ ಮುಕ್ಕಾಗಿದ್ದ ಅಮೆರಿಕದ ಆತ್ಮವಿಶ್ವಾಸವನ್ನು ಬುಷ್ ಅವಧಿಯ ಗಲ್ಫ್ ಯುದ್ಧ ಮರಳಿಸಿತು. ಬರ್ಲಿನ್ ಗೋಡೆ ಉರುಳಿದ, ಸೋವಿಯತ್ ಪತನಗೊಂಡ, ಶೀತಲ ಸಮರ ಅಂತ್ಯ ಕಂಡ ಚಾರಿತ್ರಿಕ ಘಟನೆಗಳಿಗೆ ಬುಷ್ ಶ್ವೇತಭವನದಿಂದ ಸಾಕ್ಷಿಯಾದರು. ವಿದೇಶಾಂಗ ನೀತಿಯ ವಿಷಯದಲ್ಲಿ ಬುಷ್ ಹೆಚ್ಚಿನ ಜನಪ್ರಿಯತೆ ಗಳಿಸಿದರಾದರೂ, ಆರ್ಥಿಕ ಕುಸಿತ, ಉದ್ಯೋಗ ನಷ್ಟ ಅವರು ಮುಂದಿನ ಚುನಾವಣೆಯಲ್ಲಿ ಬೆಲೆ ತೆರುವಂತೆ ಮಾಡಿತು.

1992ರ ಚುನಾವಣೆಯಲ್ಲಿ ಬುಷ್ ಎರಡನೇ ಅವಧಿಗೆ ಕ್ಲಿಂಟನ್ ವಿರುದ್ಧ ಸೆಣಸಿದರು. ಬುಷ್ ಸೀನಿಯರ್ ಅವರಿಗಿಂತ ಕ್ಲಿಂಟನ್ 22 ವರ್ಷಕ್ಕೆ ಕಿರಿಯರಾಗಿದ್ದರು. ವಯಸ್ಸಿನ ಅಂತರ ಎದ್ದು ಕಾಣುತ್ತಿತ್ತು ಮತ್ತು ಚರ್ಚೆಯ ವಿಷಯವಾಯಿತು. ಬುಷ್ ಕಳೆಗುಂದಿದಂತೆ ಕಂಡರು. ಆರ್ಥಿಕ ಸಂಕಷ್ಟದ ಬಗ್ಗೆ, ಉದ್ಯೋಗ ನಷ್ಟದ ಬಗ್ಗೆ ಮಾತನಾಡಿದ ಕ್ಲಿಂಟನ್ ಜನರನ್ನು ಒಲಿಸಿಕೊಂಡರು, ಶ್ವೇತಭವನ ಹೊಕ್ಕರು.

2000ನೇ ಇಸವಿಯಲ್ಲಿ ಜೂನಿಯರ್ ಬುಷ್ ಅಧ್ಯಕ್ಷರಾಗಿ ಆಯ್ಕೆಯಾದಾಗ, ಅಮೆರಿಕದ ರಾಜಕೀಯ ಇತಿಹಾಸದಲ್ಲಿ ಅಪ್ಪ ಮತ್ತು ಮಗ ಇಬ್ಬರೂ ಅಧ್ಯಕ್ಷ ಪದವಿಗೆ ಏರಿದ್ದು ಇತಿಹಾಸವಾಯಿತು. ನಂತರ ಸೀನಿಯರ್ ಬುಷ್ ಲವಲವಿಕೆಯ ಖಾಸಗಿ ಬದುಕಿಗೆ ಹೊರಳಿದರು. ಅಮೆರಿಕದಲ್ಲಿ ಕುಟುಂಬಗಳ ವಿಘಟನೆ ತಪ್ಪಿಸಬೇಕು ಎಂಬುದು ಬುಷ್ ಸೀನಿಯರ್ ಆಶಯವಾಗಿತ್ತು. ತಮ್ಮ ರಾಜಕೀಯ ಅಧ್ಯಾಯ ಮುಗಿಸಿದ ತರುವಾಯ ಮೊಮ್ಮಕ್ಕಳೊಂದಿಗೆ ಆಡುತ್ತಾ ಬುಷ್ ಉಳಿದ ಬದುಕನ್ನು ಸವಿದರು. ಸಾಹಸ ಪ್ರವೃತ್ತಿಯನ್ನು ಬದುಕಿನುದ್ದಕ್ಕೂ ಬಿಟ್ಟುಕೊಡದ ಬುಷ್, ತಮ್ಮ 75, 80 ಮತ್ತು ಕೊನೆಯದಾಗಿ 90ನೇ ಹುಟ್ಟುಹಬ್ಬದಂದು ಪ್ಯಾರಾಚೂಟ್ ಕಟ್ಟಿಕೊಂಡು ಆಗಸದಿಂದ ಜಿಗಿದಿದ್ದರು! ‘ದುರ್ಬಲ’ ದೂಷಣೆಯಾಚೆ ಜಿಗಿದು ಸಾಹಸಿ ಎನಿಸಿಕೊಳ್ಳಬೇಕು ಎಂಬುದು ಅವರ ಮನದಿಂಗಿತವಾಗಿದ್ದಿರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT