ಆಷಾಢದಲ್ಲೂ ದಾಖಲೆಯ ವಹಿವಾಟು

7

ಆಷಾಢದಲ್ಲೂ ದಾಖಲೆಯ ವಹಿವಾಟು

ಕೆ. ಜಿ. ಕೃಪಾಲ್
Published:
Updated:

ಆಷಾಢ ಮಾಸದಲ್ಲಿ ವ್ಯವಹಾರಗಳು ಕ್ಷೀಣಿಸುತ್ತವೆ ಎಂಬುದು ಹಿಂದಿನಿಂದ ಬಂದ ಪರಿಕಲ್ಪನೆ. ಆದರೆ, ಈ ಬಾರಿ ಹಾಗಾಗಿಲ್ಲ. ಸಂವೇದಿ ಸೂಚ್ಯಂಕ ಅಥವಾ ನಿಫ್ಟಿ ಕುಸಿತ ಕಾಣದೇ ಸಾರ್ವಕಾಲಿಕ ದಾಖಲೆಯ ಮಟ್ಟಕ್ಕೆ ಜಿಗಿತ ಕಂಡಿವೆ. ಅಗ್ರಮಾನ್ಯ ಶ್ರೇಣಿಯ ಅನೇಕ ಕಂಪನಿಗಳು ಈಗಾಗಲೇ ಗರಿಷ್ಠದಲ್ಲಿರುವ ಕಾರಣ ವಹಿವಾಟುದಾರರು ತಮ್ಮ ಆಸಕ್ತಿಯನ್ನು ಒಂದು ಕಂಪನಿಯಿಂದ ಮತ್ತೊಂದಕ್ಕೆ ಪಲ್ಲಟಗೊಳಿಸುವುದು ಸಹ ಇತ್ತೀಚಿಗೆ ಹೆಚ್ಚಾಗಿ ಕಂಡುಬರುತ್ತಿದೆ. ಈ ವಾರದ ಆರಂಭದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅತಿ ಹೆಚ್ಚಿನ ಬಂಡವಾಳ ಮೌಲ್ಯದ ಕಂಪನಿ ಪಟ್ಟಕ್ಕೆ ಏರಿ, ನಂತರ ಕುಸಿತಕ್ಕೊಳಗಾಯಿತು. 

ಪೇಟೆಯಲ್ಲಿ  ಫಲಿತಾಂಶ ಮಾತ್ರ  ಅಪೂರ್ವ ಅವಕಾಶಗಳನ್ನು ಒದಗಿಸುತ್ತದೆ ಎಂಬುದಕ್ಕೆ ಗುರುವಾರ ದಿನದ ಆರಂಭಿಕ ಚಟುವಟಿಕೆಯಲ್ಲಿ ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್‌ ಕಂಪನಿ ಪ್ರದರ್ಶಿಸಿದ  ಭಾರಿ ಏರಿಳಿತವು ಉತ್ತಮ ಉದಾಹರಣೆಯಾಗಿದೆ.

ಅಂದು ಈ ಕಂಪನಿಯ ಫಲಿತಾಂಶ ತೃಪ್ತಿದಾಯಕವಾಗಿಲ್ಲ ಎಂಬ ಕಾರಣಕ್ಕೆ ಷೇರಿನ ಬೆಲೆ ₹373 ರ ಸಮೀಪಕ್ಕೆ ಕುಸಿಯಿತು. ಅಲ್ಲಿಂದ ಮಧ್ಯಾಹ್ನದವರೆಗೆ ಸ್ಥಿರತೆಯಲ್ಲಿತ್ತು. ನಂತರ ಏಕ ಮುಖವಾಗಿ ಏರಿಕೆ ಕಂಡು ₹408 ರವರೆಗೂ ಏರಿಕೆ ಕಂಡು ₹402 ರ ಸಮೀಪ ದಿನದ ಅಂತ್ಯ ಕಂಡಿತು.

ಗುರುವಾರ 356 ಅಂಶಗಳ ಕುಸಿತ ಕಂಡ ಸಂವೇದಿ ಸೂಚ್ಯಂಕದ ಹಿಂದೆ ಬ್ಯಾಂಕಿಂಗ್ ವಲಯದ ಕೋಟಕ್ ಬ್ಯಾಂಕ್, ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್, ಯೆಸ್‌ ಬ್ಯಾಂಕ್, ಎಸ್‌ಬಿಐ, ಐಸಿಐಸಿಐ ಬ್ಯಾಂಕ್‌ಗಳೆಲ್ಲವೂ ಕುಸಿತದಲ್ಲಿದ್ದವು. ಸಂವೇದಿ ಸೂಚ್ಯಂಕದಲ್ಲಿರುವ ಇಂಡಸ್ ಇಂಡ್ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್‌ಗಳು ಮಾತ್ರ ಅಲ್ಪ ಮಟ್ಟಿನ ಏರಿಕೆ ಕಂಡಿದ್ದವು. ಈ ಬೆಳವಣಿಗೆಗೆ ಜಾಗತಿಕ ಮಟ್ಟದ ಸೂಚ್ಯಂಕಗಳು ಕುಸಿತಕ್ಕೊಳಗಾಗಿರುವುದು ಸಹ ಕಾರಣವಾಗಿದೆ.

ಷೇರುಪೇಟೆಯಲ್ಲಿ ದಾಖಲೆಗಳು ಹೆಚ್ಚಾಗಿವೆ. ಮಂಗಳವಾರ ರಿಲಯನ್ಸ್ ಇಂಡಸ್ಟ್ರೀಸ್ ಷೇರಿನ ಬೆಲೆ ವಾರ್ಷಿಕ ಗರಿಷ್ಠ  ತಲುಪಿದಾಗ ಭಾರತದ ಕಂಪನಿಗಳಲ್ಲಿ ಅತಿ ಹೆಚ್ಚಿನ ಪೇಟೆಯ ಬಂಡವಾಳ ಮೌಲ್ಯದ ಕಂಪನಿಯಾಗಿ ಹೊರಹೊಮ್ಮಿದೆ. ಟಿಸಿಎಸ್‌ ಅನ್ನು ಹಿಂದಿಕ್ಕಿ ಈ ಸಾಧನೆ ಮಾಡಿತು. ಬುಧವಾರ ಮತ್ತೆ ಟಿಸಿಎಸ್ ಮೊದಲನೇ ಸ್ಥಾನಕ್ಕೆ ಮರಳಿದೆ. ಅಲ್ಲದೆ ಷೇರುಪೇಟೆಯ ಹೆಗ್ಗುರುತಾದ  ಸಂವೇದಿ ಸೂಚ್ಯಂಕ ಸಾರ್ವಕಾಲಿಕ ದಾಖಲೆಯ ಮಟ್ಟಕ್ಕೆ ಜಿಗಿತ ಕಂಡಿತು.    

ಇದುವರೆಗೂ ನಿರ್ಲಕ್ಷಕ್ಕೊಳಗಾಗಿದ್ದ ಸರ್ಕಾರಿ ವಲಯದ ಕಂಪನಿಗಳಾದ ಪಿಎಫ್‌ಸಿ, ಆರ್‌ಇಸಿ, ಬಿಎಚ್‌ಇಎಲ್‌,  ಬಿಪಿಸಿಎಲ್, ಎಚ್‌ಪಿಸಿಎಲ್‌, ಐಒಸಿ, ಚೆನ್ನೈ ಪೆಟ್ರೊ,  ಬಿಇಎಲ್ ಎಂಜಿನಿಯರ್ಸ್‌ ಮುಂತಾದವುಗಳು ಪುಟಿದೆದ್ದಂತಹ ರೀತಿ ವ್ಯಾಲ್ಯೂ ಪಿಕ್ ಪ್ರಭಾವ ಎಷ್ಟು ಗಣನೀಯವಾಗಿರುತ್ತದೆ ಎಂಬುದನ್ನು ಬಿಂಬಿಸುತ್ತದೆ.  ಹಾಗೆಯೇ ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್, ಎಸ್‌ಬಿಐ,  ಬ್ಯಾಂಕ್ ಆಫ್ ಬರೋಡಾ ಹೆಚ್ಚಿನ ಏರಿಕೆ ಕಂಡಿವೆ. ಕಾರಣಗಳೇನೇ ಇದ್ದರೂ ಅದರ ಹಿಂದೆ ಈ ಕಂಪನಿಗಳ ಷೇರಿನ ಬೆಲೆಗಳು ಕಂಡಿದ್ದಂತಹ ಅಗಾಧವಾದ ಕುಸಿತವೇ ಪ್ರೇರಣೆಯಾಗಿದೆ.

ಸಂವೇದಿ ಸೂಚ್ಯಂಕದ ಏರಿಳಿತಗಳಲ್ಲಿ ಪ್ರಮುಖವಾದ ಪಾತ್ರವನ್ನು ಹೀರೊ ಮೋಟೊ ಕಾರ್ಪ್, ಮಾರುತಿ ಸುಜುಕಿ, ಎಚ್‌ಡಿಎಫ್‌ಸಿ, ಎಸ್‌ಬಿಐ, ಆ್ಯಕ್ಸಿಸ್‌ ಬ್ಯಾಂಕ್, ಐಸಿಐಸಿಐ ಬ್ಯಾಂಕ್,  ಹಿಂದುಸ್ತಾನ್ ಯೂನಿಲಿವರ್‌ಗಳೂ ಪ್ರಮುಖ ಪಾತ್ರ ವಹಿಸಿವೆ.

ಷೇರುಗಳ ದರಗಳಲ್ಲಾಗುವ ಚಲನೆಯನ್ನು ನಿರೀಕ್ಷಿಸಲಾಗದಂತಹ ಗಜನಡೆಯನ್ನು ಪೇಟೆ ಪ್ರದರ್ಶಿಸುತ್ತಿದೆ.ಕಂಪನಿಗಳು ಆಕರ್ಷಕ ಲಾಭಾಂಶ ದೊಂದಿಗೆ ನಿಗದಿತ ದಿನವನ್ನು  ಪ್ರಕಟಿಸಿದಾಗ ಷೇರಿನ ಬೆಲೆಗಳಲ್ಲಿ ಏರಿಕೆ ಕಂಡುಬರುವುದು ಸಾಮಾನ್ಯ.   ಆದರೆ ಈ ವಾರ ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ ಪ್ರತಿ ಷೇರಿಗೆ ₹18.50 ರಂತೆ ಲಾಭಾಂಶ ವಿತರಿಸಲು ಈ ತಿಂಗಳ 14 ನಿಗದಿತ ದಿನವೆಂದು ಪ್ರಕಟಿಸಿದ ಮೇಲೆ ಷೇರಿನ ಬೆಲೆ ₹326 ರ ಸಮೀಪದಿಂದ ₹313 ರವರೆಗೂ ಕುಸಿದಿದೆ.  ಮತ್ತೊಂದು ಕಂಪನಿ ಕಮ್ಮಿನ್ಸ್ ಇಂಡಿಯಾ ಲಿಮಿಟೆಡ್  ಪ್ರತಿ ಷೇರಿಗೆ ₹10 ರ ಲಾಭಾಂಶ ರಹಿತ ವಹಿವಾಟಿನಲ್ಲಿ ಷೇರಿನ ಬೆಲೆ ಒಂದು ಹಂತದಲ್ಲಿ  ₹62 ರಷ್ಟು ಏರಿಕೆ ಕಂಡು ₹48 ರಷ್ಟು ಏರಿಕೆಯಿಂದ ಕೊನೆಗೊಂಡಿದೆ. 

ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಕಂಪನಿ ವಿತರಿಸಲಿರುವ ಪ್ರತಿ ಷೇರಿಗೆ ₹7 ರ ಲಾಭಾಂಶಕ್ಕೆ ಸೆಪ್ಟೆಂಬರ್ 4 ನಿಗದಿತ ದಿನವೆಂದು ಪ್ರಕಟಿಸಿದ ಮೇಲೆ ಷೇರಿನ ಬೆಲೆ ₹386 ರ ಸಮೀಪದಿಂದ ₹406 ರವರೆಗೂ ಚೇತರಿಕ ಕಂಡಿತು. ವಾಹನಗಳ ಸಾಗಾಣಿಕೆಯ ಭಾರದ ಮಿತಿಯನ್ನು ಹೆಚ್ಚಿಸಿದ ಕಾರಣ ಅಶೋಕ್ ಲೇಲ್ಯಾಂಡ್ಸ್‌ ಷೇರಿನ ಬೆಲೆ ಇತ್ತೀಚೆಗಷ್ಟೇ ₹105 ರ ಸಮೀಪಕ್ಕೆ ಕುಸಿದಿತ್ತು. ಆದರೆ, ಈ ವಾರ ಕಂಪನಿ ಪ್ರಕಟಿಸಿದ ಜುಲೈ ಮಾಸದ ಮಾರಾಟದ ಅಂಕಿ ಅಂಶಗಳು ಉತ್ತೇಜಕರವಾಗಿದ್ದ ಕಾರಣ ಉತ್ತಮ ಚೇತರಿಕೆ ಕಂಡು ₹123 ರ ಗಡಿ ದಾಟಿತಾದರೂ, ₹118 ರ ಸಮೀಪ ವಾರಾಂತ್ಯ ಕಂಡಿತು.

ಸಾಮಾನ್ಯವಾಗಿ ಕಂಪನಿಗಳ ವಾರ್ಷಿಕ ಸಭೆ ಮುಗಿದ ನಂತರ ಷೇರಿನ ಬೆಲೆ ಇಳಿಕೆ ಕಾಣುತ್ತವೆ. ವಿಶೇಷವಾಗಿ ಕೆಳಮಧ್ಯಮ ಶ್ರೇಣಿ ಈ ಚಲನೆ ಪ್ರದರ್ಶಿಸುವುದು. ಜೆ ಬಿ ಎಫ್ ಇಂಡಸ್ಟ್ರೀಸ್ ಷೇರು, ಈ ಚಿಂತನೆಯಿಂದ ಹೊರಬಂದು ಶುಕ್ರವಾರ ವಿಭಿನ್ನ ರೀತಿಯ ಬದಲಾವಣೆ  ಪ್ರದರ್ಶಿಸಿದೆ.  ಅಂದು ಈ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆ ನಡೆಯಿತು. ಮುಂಜಾನೆಯಿಂದ ಷೇರಿನ ಬೆಲೆ ₹24.85 ರಂತೆ ಕನಿಷ್ಠ ಅವರಣಮಿತಿಯಲ್ಲಿದ್ದು ಖರೀದಿದಾರರಿಲ್ಲದ ಪರಿಸ್ಥಿತಿಯಲ್ಲಿತ್ತು. ಆದರೆ ಮಧ್ಯಾಹ್ನದ ನಂತರ ಪರಿಸ್ಥಿತಿಯು ಪಲ್ಲಟಗೊಂಡು ₹27.45 ರಲ್ಲಿ ಮಾರಾಟಗಾರರಿಲ್ಲದೆ ಕೇವಲ ಖರೀದಿದಾರರಿದ್ದ ಗರಿಷ್ಟ ಆವರಣ ಮಿತಿಯಲ್ಲಿ ಬಂಧಿಸಲ್ಪಟ್ಟಿತ್ತು.

ಹೊಸ ಷೇರು: ಇತ್ತೀಚಿಗೆ ಪ್ರತಿ ₹5 ರ ಮುಖಬೆಲೆಯ ಷೇರಿಗೆ ₹1,100 ರಂತೆ ಆರಂಭಿಕ ಷೇರು ವಿತರಣೆ ಮಾಡಿದ ಎಚ್‌ಡಿಎಫ್‌ಸಿ ಅಸೆಟ್ ಮ್ಯಾನೇಜ್‌ಮೆಂಟ್‌ ಲಿಮಿಟೆಡ್ ಕಂಪನಿ ಷೇರುಗಳು ಈ ತಿಂಗಳ 6 ರಿಂದ ಬಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿವೆ.

ಕ್ರೆಡಿಟ್ ಅಕ್ಸೆಸ್ ಗ್ರಾಮೀಣ್ ಲಿಮಿಟೆಡ್ ಕಂಪನಿ ಈ ತಿಂಗಳ 8 ರಿಂದ 10 ರವರೆಗೂ ಪ್ರತಿ ಷೇರಿಗೆ ₹418 ರಿಂದ ₹422 ರ ಅಂತರದಲ್ಲಿ ಆರಂಭಿಕ ಷೇರು ವಿತರಣೆ ಮಾಡಲಿದೆ. ಅರ್ಜಿಯನ್ನು 35 ಮತ್ತು ಅದರ ಗುಣಕಗಳಲ್ಲಿ ಸಲ್ಲಿಸಬಹುದಾಗಿದೆ.

ಮುಖಬೆಲೆ ಸೀಳಿಕೆ: ಡಿಐಎಲ್ ಲಿಮಿಟೆಡ್ ಷೇರಿನ ಮುಖಬೆಲೆಯನ್ನು ₹10 ರಿಂದ ₹5 ಕ್ಕೆ ಸೀಳಲು ಈ ತಿಂಗಳ 9 ನಿಗದಿತ ದಿನ. ತಿರುಮಲೈ ಕೆಮಿಕಲ್ಸ್ ಲಿಮಿಟೆಡ್ ಕಂಪನಿ ಷೇರಿನ ಮುಖಬೆಲೆಯನ್ನು ₹10 ರಿಂದ ₹1 ಕ್ಕೆ ಸೀಳಲು ಈ ತಿಂಗಳ 17 ನಿಗದಿತ ದಿನ.

ನಿಯಮ ಬದಲು: ಷೇರು ವಿನಿಮಯ ಕೇಂದ್ರಗಳು ಅಧಿಕೃತ ವ್ಯಕ್ತಿ (Authorised Person) ಎಂಬ ನಾಮಧೇಯದೊಂದಿಗೆ ಷೇರುಪೇಟೆ ಚಟುವಟಿಕೆಯನ್ನು, ಸಬ್-ಬ್ರೋಕರ್‌ತರಹ ನಡೆಸಲು ಅವಕಾಶ ಕಲ್ಪಿಸಿಕೊಟ್ಟಿವೆ. ಇದುವರೆಗೂ ಸಬ್-ಬ್ರೋಕರ್ ಆಗಿರುವವರು ಮಾರ್ಚ್ 31, 2019 ರೊಳಗೆ  ಅಧಿಕೃತ ವ್ಯಕ್ತಿ ಎಂದು ಅಪೇಕ್ಷಿತ ಷೇರು ವಿನಿಮಯ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡು ಚಟುವಟಿಕೆ  ಮುಂದುವರೆಸಬಹುದು.

(ಮೊ: 98863 13380 (ಸಂಜೆ 4.30 ರನಂತರ)

ವಾರದ  ಮುನ್ನೋಟ:  ವಾರದ ಷೇರುಪೇಟೆ ವಹಿವಾಟಿನ ಮೇಲೆ ತ್ರೈಮಾಸಿಕ ಫಲಿತಾಂಶಗಳು ಪ್ರಭಾವ ಬೀರಲಿದೆ. ಹೀಂದ್ರಾ ಆ್ಯಂಡ್ ಮಹೀಂದ್ರಾ, ಪಂಜಾಬ್ ನ್ಯಾಷನಲ್‌ ಬ್ಯಾಂಕ್‌, ಅದಾನಿ ಪೋರ್ಟ್ಸ್‌, ಅದಾನಿ ಪ‍ವರ್‌, ಸಿಐಎಲ್‌, ಬಿಪಿಸಿಎಲ್‌, ಸಿಪ್ಲಾ, ಲುಪಿನ್‌ ಕಂಪನಿಗಳು ತಮ್ಮ ಆರ್ಥಿಕ ಸಾಧನೆ ಪ್ರಕಟಿಸಲಿವೆ. ಮುಂಗಾರು ಸಹ ಮಾರುಕಟ್ಟೆ ದಿಕ್ಕನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !