ಶುಕ್ರವಾರ, ಜುಲೈ 1, 2022
21 °C

ತೂರಬೇಡಿ ಗಾಳಿಗೆ ಹೆಣ್ತನದ ಘನತೆಯ...

ರೇಣುಕಾ ನಿಡಗುಂದಿ Updated:

ಅಕ್ಷರ ಗಾತ್ರ : | |

Deccan Herald

ನಾಚಬೇಡಿ ಹೆಣ್ತನಕೆ ತಲೆಯೆತ್ತಿ ನಿಲ್ಲಿರಿ/ ನಾಚ
ಬೇಕು ತುಳಿದವರು ಮನು
ಜಾತಿಗೆ ಸೇರಿದವರು– ವಿಜಯಾ ದಬ್ಬೆ.

ಸಹಸ್ರಮಾನದಿಂದಲೂ ಹೆಣ್ಣನ್ನು ತನ್ನ ದರ್ಪದ ಕೋಡುಗಳಿಂದ ತಿವಿ ತಿವಿದು ಹದ್ದುಬಸ್ತಿನಲ್ಲಿಟ್ಟುಕೊಳ್ಳುತ್ತಲೇ ಬಂದ ಗಂಡುಲೋಕದ ಧಿಮಾಕಿನ ಕೋಡುಗಳಿಗೀಗ ಸಿಂಗಾರವೆಂಬಂತೆ ವಿಶ್ವವಿದ್ಯಾಲಯವೊಂದು ‘ಆದರ್ಶ ಸೊಸೆ’ ಹೇಗಿರಬೇಕೆಂದು ಕಲಿಸುವ ಕೋರ್ಸನ್ನು ಪಠ್ಯದಲ್ಲಿ ಅಳವಡಿಸಹೊರಟಿದೆ! ದಿನಕ್ಕೊಬ್ಬ ಮಹಿಳೆ ಮತ್ತು ಹೆಂಗೂಸಿನ ಮೇಲೆ ಬರ್ಬರ ಅತ್ಯಾಚಾರ, ಹಿಂಸಾಚಾರ ಹೆಚ್ಚುತ್ತಿರುವ ಕೇಡುಗಾಲದಲ್ಲಿ ಮೊದಲು ಗಂಡುಮಕ್ಕಳಿಗೆ ‘ಸನ್ನಡತೆ’ಯ ಕೋರ್ಸ್‌ ಅಗತ್ಯವಿದೆಯೆಂಬ ವಿಚಾರವೇಕೆ ಹೊಳೆಯಲಿಲ್ಲ ಈ ಪುಣ್ಯಾತ್ಮರಿಗೆ?

ಇದೇ ಸೆ. 14ರಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂದೋರಿನ ಸೈಫೀ ಮಸೀದಿಯಲ್ಲಿ ದಾವೂದಿ ಬೊಹರಾ ಸಮಾಜ ಆಯೋಜಿಸಿದ ‘ಆಶೂರಾ ಮುಬಾರಕಾ’ ದಲ್ಲಿ (ಹುತಾತ್ಮ ಇಮಾಮ್ ಹುಸೇನ್ ಸ್ಮರಣಾರ್ಥ ಶಿಯಾ ಪಂಥೀಯರು ಮೊಹರಂ ತಿಂಗಳಲ್ಲಿ ಆಚರಿಸುವ ಕಾರ್ಯಕ್ರಮ) ಭಾಗವಹಿಸಿದ್ದರು. 2016ರಲ್ಲಿ ದೆಹಲಿಯ ವಿಜ್ಞಾನ ಭವನದಲ್ಲಿ ಜರುಗಿದ ವಿಶ್ವ ಇಸ್ಲಾಮಿಕ್ ಸೂಫಿ ಸಮಾವೇಶದಲ್ಲಿ ಮೋದಿ ಅವರ ಭಾಗವಹಿಸುವಿಕೆಯನ್ನು ಮುಸ್ಲಿಂ ಚಿಂತಕರು ‘ಒಡೆದು ಆಳುವ’ ನೀತಿಯೆಂದು ಜರೆದಿದ್ದರು. ಸುದ್ದಿ ಇದಲ್ಲ.

ದಾವೂದಿ ಬೊಹರಾ ಮುಸ್ಲಿಂ ಸಮುದಾಯ ತೆರೆಮರೆಯಲ್ಲಿ ಆಚರಿಸಿಕೊಂಡು ಬಂದಿದ್ದ ಮಹಿಳೆಯ ಖತ್ನಾ, ಸುನ್ನತಿ ಎಂಬ ಯೋನಿವಿರೂಪದಂಥ ಪದ್ಧತಿಯನ್ನು ಖಂಡಿಸುತ್ತಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,  ಭಾರತದಲ್ಲಿ ಈ ಪದ್ಧತಿಗೆ ಯಾವ ಪುರಾವೆಯೂ ಇಲ್ಲವೆಂದು ಸುಪ್ರೀಂ ಕೋರ್ಟಿಗೆ ಇತ್ತೀಚೆಗೆ ತಿಳಿಸಿದೆಯೆಂಬುದು ಅಚ್ಚರಿ ಹುಟ್ಟಿಸುತ್ತಿದೆ! ಇದೆಂಥ ಧರ್ಮ ರಾಜಕಾರಣ!

ನಮ್ಮ ದೇಶದ ದಾವೂದಿ ಬೊಹರಾ ಮುಸ್ಲಿಂ ಸಮಾಜದ ಮಹಿಳೆಯರು ಖತ್ನಾ, ಸುನ್ನತಿ, (Female Genital Mutilation–FGM) ಯೋನಿವಿರೂಪದಂಥ ಅನಾಗರಿಕ ಪದ್ಧತಿಗೊಳಪಡುವುದನ್ನು ಖಂಡಿಸಿ ಅಂಥ ಅನಾಗರಿಕ ಪದ್ಧತಿಯನ್ನು ನಿಷೇಧಿಸುವಂತೆ ಕೋರಿ ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಇದೇ ಏಪ್ರಿಲ್‌ನಲ್ಲಿ ಕೋರ್ಟ್‌ ಅದನ್ನು ವಿಚಾರಣೆಗೆ ತೆಗೆದುಕೊಂಡು ಹೆಚ್ಚಿನ ವಿವರಗಳನ್ನು ಸಲ್ಲಿಸುವಂತೆ ಆದೇಶಿಸಿತ್ತು.

ಜುಲೈ 9ರಂದು ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ‘ಮಹಿಳೆಯ ದೇಹದ ಅಖಂಡತೆ ಧರ್ಮದ ಹಿಡಿತದಲ್ಲಿ ಯಾಕಿರಬೇಕು? ಮನುಷ್ಯನ ಖಾಸಗಿ ಅಂಗಗಳನ್ನು ಸ್ಪರ್ಶಿಸುವ ಹಕ್ಕನ್ನು ಯಾರಾದರೂ ಯಾಕೆ ಹೊಂದಿರಬೇಕು?’ ಎಂದು ತರಾಟೆಗೆ ತೆಗೆದುಕೊಂಡಿತ್ತು. ‘ಎಫ್‌.ಜಿ.ಎಂ. ಎಂಬ ಯೋನಿವಿರೂಪ ಕ್ರಿಯೆ ಕಾನೂನುಬಾಹಿರ, ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಉಲ್ಲಂಘನೆ’ ಎನ್ನುತ್ತಿದ್ದ ಸಚಿವೆ ಮೇನಕಾ ಗಾಂಧಿ ಅವರ ಕಚೇರಿ, ‘ಅಂಥ ಯಾವ ದಾಖಲೆಗಳೇ ಇಲ್ಲ’ ಎಂದು ಹೇಳಿದ್ದೇಕೆ?

ತಲೆತಲಾಂತರದಿಂದಲೂ ಈ ಲೋಕದ ಹೆಣ್ಣಿಗೆ ಸ್ವತಂತ್ರವಾದ ಅಸ್ತಿತ್ವ ಇಲ್ಲ. ಹೆಣ್ಣೆಂದರೆ ದೇಹ ಮಾತ್ರ! ಆಕೆಯ ಲೈಂಗಿಕತೆಯೂ ಅವನ ಸೊತ್ತು. ಮಿಲನ ಸುಖದ ಬಗ್ಗೆ ಯೋಚಿಸುವುದೂ ಪಾಪ. ಆ ಸುಖದ ಕೀಲಿಕೈ ಆಕೆಗೆ ಸಿಗದಿರಲೆಂದೇ ದಾವೂದಿ ಬೊಹರಾ ಮುಸ್ಲಿಂ ಸಮುದಾಯದ ಪುರುಷಲೋಕ ಮಿಲನ ಸುಖವನ್ನು ಉತ್ತುಂಗಕ್ಕೊಯ್ಯುವ ಭಗಾಂಕುರ ಮತ್ತು ಒಳದುಟಿಗಳು ’ಪಾಪದ ಮುದ್ದೆ’ಗಳು (ಹರಾಮ್ ಕಿ ಬೋಟಿ) ಎಂದು ನಂಬಿಸಿ ಹೆಣ್ಣುಮಕ್ಕಳ ‘ಬ್ರೈನ್‌ವಾಶ್’ ಮಾಡಿ ಅವನ್ನು ಎಳವೆಯಲ್ಲಿಯೇ ಕತ್ತರಿಸಿ ಒಗೆಯುತ್ತಾರೆ.

ಧರ್ಮದ ಮುಸುಕಿನಲ್ಲಿ ಬಾಲಕಿಯರು 5 ರಿಂದ 7 ವರ್ಷಗಳ ಎಳವೆಯಲ್ಲಿರುವಾಗಲೇ ’ಸುನ್ನತಿ, ಖತ್ನಾ’ದಂಥ ಕ್ರೂರವಿಧಾನಗಳು
ನಡೆಯುತ್ತವೆ. ಅದನ್ನು ಮನೆಯಲ್ಲಿನ ಅಜ್ಜಿ, ತಾಯಂದಿರೇ ರಹಸ್ಯವಾಗಿ ನಡೆಸುತ್ತಾರೆ. ಮುಂಬೈಯಂಥ ಶಹರಿನಲ್ಲಿ ’ಖತ್ನಾ’ ನಡೆಸುವ ಆಸ್ಪತ್ರೆಗಳೂ ಇವೆ. ಇದೊಂದು ವ್ಯವಸ್ಥಿತ ಜಾಲ. ಬೊಹರಾ ಮಹಿಳೆಯರೂ ಮೈಚಳಿಬಿಟ್ಟು ಅಂತರ್ಜಾಲದ ಮೂಲಕ ದನಿಯೆತ್ತಿದ್ದಾರೆ. ಈ ಅನಿಷ್ಟ ಪದ್ಧತಿಯನ್ನು ತೊಲಗಿಸುವಂತೆ ವಕೀಲೆ ಸುನಿತಾ ತಿವಾರಿ ಹಾಗೂ ’ಸಹಿಯೊ’ ಎಂಬ ಸಂಘಟನೆಯು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯದಲ್ಲಿ ದಾಖಲಿಸಿದೆ.

ಖತ್ನಾ ಆಚರಣೆ ಅನಾಗರಿಕವಾದುದು, ಸ್ತ್ರೀ ಅಸ್ಮಿತೆಗೆ ಅವಮಾನಕರವಾದುದು ಎಂದು ತೀವ್ರವಾಗಿ ಭಾವಿಸಿದ ಐವರು ಮಹಿಳೆಯರ ನಡುವಿನ ಸಂಭಾಷಣೆಯೇ ‘ಸಹಿಯೊ’ ಸಂಘಟನೆಯಾಗಿ 2015ರಲ್ಲಿ ಪ್ರಾರಂಭವಾಯಿತು.  ಸಾಮಾಜಿಕ ಕಾರ್ಯಕರ್ತೆಯರು, ಸಂಶೋಧಕರು, ಚಲನಚಿತ್ರ ನಿರ್ಮಾಪಕರು ಮತ್ತು ಪತ್ರಕರ್ತೆಯರು ಈ ಗುಂಪಿನಲ್ಲಿದ್ದಾರೆ. ಎಲ್ಲರೂ ಈಗಾಗಲೇ ತಮ್ಮದೇ ರೀತಿಯಲ್ಲಿ ಖತ್ನಾ ಪದ್ಧತಿಯ ವಿರುದ್ಧ ದನಿಯೆತ್ತಿದ್ದಾರೆ. ಅವರಲ್ಲಿ ಕೆಲವರು ಬಾಲ್ಯದಲ್ಲಿ ’ಖತ್ನಾ’ಕ್ಕೊಳಗಾದ ಬೊಹರಾ ಸಮುದಾಯದ ಮಹಿಳೆಯರೂ ಇದ್ದಾರೆ. ’ಖತ್ನಾ’ದಂಥ ಅನಿಷ್ಟವನ್ನು ಅಂತ್ಯಗೊಳಿಸಲು ಸಂಘಟಿತವಾದ ತಿಳಿವಳಿಕೆಯುಳ್ಳ ವೇದಿಕೆಯ ಅಗತ್ಯವಿದೆ ಎಂದು ಅರಿತು ಒಂದು ಚಳವಳಿಗೆ ಚಾಲನೆಯನ್ನು ನೀಡಲು ಹುಟ್ಟಿಕೊಂಡ ಸಂಸ್ಥೆಯೇ ಈ ‘ಸಹಿಯೊ’. ಬೊಹರಾ ಗುಜರಾತಿ ಭಾಷೆಯಲ್ಲಿ ಸಹಿಯೊ ಅಂದರೆ ‘ಸಹೇಲಿಯೋಂ’ ಅಥವಾ ’ಗೆಳತಿಯರು’.

ದೆಹಲಿ ಮೂಲದ ಪ್ರಿಯಾ ಗೋಸ್ವಾಮಿ 2013ರಲ್ಲಿ ತಯಾರಿಸಿದ, 'ದ ಪಿಂಚ್ ಆಫ್ ಸ್ಕಿನ್' ಎಂಬ ಸಾಕ್ಷ್ಯಚಿತ್ರವು ದಾವೂದಿ ಬೊಹರಾ ಸಮುದಾಯದಲ್ಲಿ ಯೋನಿವಿರೂಪದಂಥ ಪದ್ಧತಿಯ ಗಂಭೀರತೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದ ಮೊದಲ ಸಾಕ್ಷ್ಯಚಿತ್ರ.

ಭಾರತದಲ್ಲಿ ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಕೇರಳ, ತೆಲಂಗಾಣದಲ್ಲಿ ವಾಸಿಸುವ ಶಿಯಾ ಪಂಥದ ದಾವೂದಿ ಬೊಹರಾ ಮುಸ್ಲಿಂ ಸಮುದಾಯದಲ್ಲಿ ಈ ಅನಾಗರಿಕ ಪದ್ಧತಿ ಇನ್ನೂ ಉಳಿದಿದೆ ಎಂದು ಸಮೀಕ್ಷೆಗಳು ಹೇಳುತ್ತವೆ. ಮುಂಬೈನ ಆಪ್ತ ಗೆಳತಿಯೊಬ್ಬಳಿಗೆ ಈ ಕುರಿತು ವಿವರಿಸಿದಾಗ ಆಕೆ ನಂಬಲಿಲ್ಲ. ಅವಳು ಕಂಡ ಬೊಹರಾ ಸಮಾಜದ ಮುಸ್ಲಿಮರು ಸುನ್ನಿ ಮತ್ತಿತರ ಮುಸ್ಲಿಮರಿಗಿಂತ ಆಧುನಿಕರು, ಅಕ್ಷರಸ್ಥರು. ಪಾರಸಿಗಳಂತೆ ತುಂಬಾ ಧನಿಕರೂ, ಉದ್ಯೋಗಪತಿಗಳೂ ಆಗಿದ್ದಾರೆ. ಅವರ ವಿದ್ಯಾವಂತ ಮಕ್ಕಳು ವಿದೇಶಗಳಲ್ಲಿ ಒಳ್ಳೆಯ ಉದ್ಯೋಗಗಳಲ್ಲಿದ್ದಾರೆ. ಬೊಹರಾ ಸಮುದಾಯದ ಗೆಳತಿಯರಿದ್ದರೆ ಈ ಬಗ್ಗೆ ವಿಚಾರಿಸಲು ಕೋರಿದಾಗ ಆಕೆ ಸುತರಾಂ ಒಪ್ಪಲಿಲ್ಲ. ದೌರ್ಜನ್ಯ, ದಬ್ಬಾಳಿಕೆಯ ಬಗ್ಗೆ ಮಾತನಾಡುವ ಮಹಿಳೆಯರು ದೇಹದ ಉಲ್ಲಂಘನೆ, ಅಸ್ಮಿತೆಯನ್ನೇ ಸಂಕಷ್ಟಕ್ಕೊಡ್ಡುವ ಅನಿಷ್ಟ ಪದ್ಧತಿಗಳ ಕುರಿತು ಮಾತನಾಡಲು ಹಿಂಜರಿಯುತ್ತಾರೆ.

ಎಫ್‌ಜಿಎಂ ಮಾಡಿಸಿಕೊಂಡ ಬಹುಪಾಲು ಹೆಣ್ಣುಮಕ್ಕಳು ತುಕ್ಕುಹಿಡಿದ ಬ್ಲೇಡು, ಕತ್ತರಿಯ ಪರಿಣಾಮವಾಗಿ ಸೋಂಕಿಗೆ ತುತ್ತಾಗಿ ಅಸುನೀಗಿದರೆ, ಇನ್ನುಳಿದ ಪಾಲು ಟೆಟಾನಸ್ ಸೋಂಕು, ಲೈಂಗಿಕ ತೊಂದರೆಗಳು, ಕಿಡ್ನಿ ಮತ್ತು ಮೂತ್ರ ಸಂಬಂಧಿ ಸಮಸ್ಯೆಗಳು, ಗರ್ಭಧಾರಣಾ ಸಮಸ್ಯೆಗಳು, ಋತುಚಕ್ರದಲ್ಲಿ ಅಸಾಧ್ಯವಾದ ನೋವು ಹೀಗೆ ಹತ್ತು ಹಲವು ಸಮಸ್ಯೆಗಳನ್ನು, ನೋವನ್ನು ಒಡಲಾಳದಲ್ಲಿ ಹೊತ್ತು ಜೀವನವಿಡೀ ಅವಡುಗಚ್ಚಿ ನರಳುತ್ತಿರುತ್ತಾರೆ.

ಈ ಪದ್ಧತಿಯ ಮೂಲಗಳು ನಿಗೂಢವಾಗಿವೆ. ಇಸ್ಲಾಂ ಧರ್ಮದ ಬೆಳವಣಿಗೆಗೆ ಮುಂಚೆಯೇ, ಮೇರೊಯೈಟಿಕ್ ನಾಗರಿಕತೆಯಲ್ಲಿ ಯೋನಿಚ್ಛೇದ ಕ್ರಿಯೆ ಆರಂಭವಾಗಿದ್ದಿರಬಹುದು ಎನ್ನುತ್ತಾರೆ ತಜ್ಞರು. ಈಜಿಪ್ಟಿನ ಮ್ಯೂಸಿಯಂನಲ್ಲಿ ದೊರೆತ ಸಾರ್ಕೊಫಾಗಸ್‌ನಲ್ಲಿ ಈ ಚಿತ್ರಲಿಪಿಯ ಕಾಗುಣಿತ ಕಂಡುಬಂದಿದೆ. ಬ್ರಿಟಿಷ್ ಮ್ಯೂಸಿಯಂನಲ್ಲಿರುವ ಗ್ರೀಕ್ ಪ್ಯಾಪಿರಸ್‌ನಲ್ಲಿ ಟಾಥೆಮಿಸ್ ಎಂಬ ಈಜಿಪ್ಷಿಯನ್ ಬಾಲೆಯ ಖತ್ನಾದ ಪ್ರಸ್ತಾಪವಿದೆಯಂತೆ. ಹೆಣ್ಣುಮಕ್ಕಳ ಲೈಂಗಿಕ ಬಯಕೆಗಳನ್ನು ಅದುಮಿಡುವುದರ ಮೂಲಕ ಅವಳನ್ನು ತಮ್ಮ ಹದ್ದುಬಸ್ತಿನಲ್ಲಿಟ್ಟುಕೊಳ್ಳುವ ಪುರುಷ ವ್ಯವಸ್ಥೆಯು ಗ್ರೀಕರ ಕಾಲದಿಂದಲೂ ನಡೆದು ಬಂದಿದ್ದಂತೂ ನಿಜ!

ಎಫ್‌ಜಿಎಂ ಎಂಬ ಯೋನಿವಿರೂಪ ಕ್ರಿಯೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 324/326ರ ಅಡಿಯಲ್ಲಿ ಅಪರಾಧ. ಮಹಿಳಾ ಮತ್ತು ಮಕ್ಕಳ ಹಕ್ಕು ಕಾನೂನಿನ ಉಲ್ಲಂಘನೆ. ಕುರಾನಿನಲ್ಲಿ ಸ್ತ್ರೀ ಸುನ್ನತಿಯ ಕುರಿತು ಯಾವ ಉಲ್ಲೇಖವೂ ಇಲ್ಲ ಎನ್ನುತ್ತಾರೆ. ಮಹಿಳೆಯ ಪರಾಧೀನತೆಗೆ ಆರ್ಥಿಕ, ರಾಜಕೀಯ, ಸಾಮಾಜಿಕ, ಧಾರ್ವಿುಕ ಕಾರಣಗಳಿರುವಂತೆ ಪುರುಷನಿರ್ವಿುತ ಭಾಷೆಯೂ ಕಾರಣ ಎಂಬ ವಾದವಿದೆ. ಪುರುಷ ಪ್ರಧಾನ ಸಮಾಜವು ಹೆಣ್ಣಿನ ಪ್ರಕೃತಿ ಸಹಜ ಕಾಮವನ್ನೂ ತನ್ನ ಹದ್ದುಬಸ್ತಿನಲ್ಲೇ ಬೀಗ ಹಾಕಿಟ್ಟು ಶುದ್ಧತೆ, ಪಾವಿತ್ರ್ಯ, ದೈವದ ಬೆದರಿಕೆಯಲ್ಲಿ ಅವರನ್ನು ಮೌಢ್ಯದ ಕತ್ತಲಲ್ಲೇ ಉಳಿಯುವಂತೆ ಮಾಡಿದೆ.

‘ಹೆಣ್ಣು ಬದುಕುವುದು ತನ್ನ ಬಗ್ಗೆ ಇರುವ ಗಂಡಿನ ಕಲ್ಪನೆಗಳನ್ನು ಸಾಕಾರ ಮಾಡಲಿಕ್ಕೆ. ತನ್ನದಲ್ಲದ ಬದುಕನ್ನು ಬದುಕುವುದಕ್ಕೆ, ತನ್ನ ದೇಹದ ಬಗ್ಗೆ ಸುಳ್ಳು ಹೇಳುವುದನ್ನು ಪ್ರಜ್ಞಾಪೂರ್ವಕವಾಗಿ ನಿಲ್ಲಿಸಲು ನಡೆಸುವ ಪ್ರಯತ್ನದ ಗಳಿಗೆಯಲ್ಲಿ, ಆತ ಹೇಳುವ ಸುಳ್ಳುಗಳನ್ನು ನಂಬಲು ನಿರಾಕರಿಸುವ ಪ್ರಯತ್ನದ ಕ್ಷಣದಲ್ಲಿ ಪ್ರಾಮಾಣಿಕ ಹೆಣ್ಣೊಬ್ಬಳು ಹುಟ್ಟುತ್ತಾಳೆ’ ಎನ್ನುವ ಎಡ್ರಿಯನ್ ರಿಚ್‌ಳ ಮಾತು ಪ್ರಸ್ತುತವೆನಿಸುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.