ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರದ ಕಣ್ಣಿಗೆ ಪೆಲೆಟ್ ಗುಂಡು

ಈ ಅಪಾಯಕಾರಿ ಗುಂಡಿನ ವಿರುದ್ಧ ಸಾಕಷ್ಟು ಪ್ರತಿಭಟನೆ ನಡೆದರೂ ಬಳಕೆ ನಿಂತಿಲ್ಲ
Last Updated 29 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಕಾಶ್ಮೀರದ ಕಣ್ಣಿಗೆ ಮತ್ತೊಮ್ಮೆ ಗಾಸಿಯಾಗಿದೆ. ಕುರುಡುತನದ ಭೀತಿ ಮತ್ತೊಂದು ಅಮಾಯಕ ಮಗುವನ್ನು ಮುತ್ತಿಕೊಳ್ಳುತ್ತಿದೆ.

ಈ ಬಾರಿ ಪೆಟ್ಟು ಬಿದ್ದಿರುವುದು ಒಂದೂವರೆ ವರ್ಷದ ಹಸುಳೆಗೆ. ಕಣ್ಣಿನ ಪಟ್ಟಿ ಕಿತ್ತುಕೊಳ್ಳಲು ಹವಣಿಸುವ ಪುಟ್ಟ ಕೈಗಳನ್ನು ಅಮ್ಮ ಮಸರತ್ ನಿಸಾರ್ ಕೆಳಗೆ ಇಳಿಸುತ್ತ ಹನಿಗಣ್ಣಾಗುತ್ತಾರೆ. ಇದರೊಂದಿಗೆ, ‘ಪೆಲೆಟ್‌ ಗನ್ ದಾಳಿಗೆ ಗುರಿಯಾದ ಅತ್ಯಂತ ಕಿರಿಯ ಕಾಶ್ಮೀರಿ’ ಎಂದು ಹೀಬಾ ನಿಸಾರ್ ಹೆಸರು ದಾಖಲಾಗುತ್ತದೆ.

ಇದು ಈ ವರ್ಷದ ಶರದೃತುವಿನ ದುರಂತ.

ಈ ಚಳಿಗಾಲದಲ್ಲಿ ಕಾಶ್ಮೀರ ಮತ್ತೊಮ್ಮೆ ಕಾವೇರಿದೆ. ಕಳೆದ ಕೆಲವು ದಿನಗಳಿಂದ ಉಗ್ರಗಾಮಿಗಳು ಮತ್ತು ಭದ್ರತಾ ಪಡೆಯ ನಡುವೆ ಘರ್ಷಣೆ ನಡೆಯುತ್ತಿದ್ದು, ಒಬ್ಬ ಯೋಧ ಹುತಾತ್ಮನಾಗಿದ್ದಾರೆ. ಈವರೆಗಿನ ಲೆಕ್ಕದಂತೆ ಐವರು ಉಗ್ರಗಾಮಿಗಳನ್ನು ಕೊಲ್ಲಲು ಸಾಧ್ಯವಾಗಿದೆ. ಆದರೆ, ಕಾರ್ಯಾಚರಣೆಯ ಭಾಗವಾಗಿ ಭದ್ರತಾ ಪಡೆ ಮತ್ತೊಮ್ಮೆ ಪೆಲೆಟ್‌ ಗನ್ ಬಳಸಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಇದಕ್ಕೆ ಅಮಾಯಕರು ಬಲಿಯಾಗಿರುವುದು ದುರಂತ.

ಕಾಶ್ಮೀರದಲ್ಲಿ ಪೆಲೆಟ್‌ ಗನ್ ಬಳಸಲು ಭದ್ರತಾ ಪಡೆಗೆ ವಿಶೇಷ ಆಸಕ್ತಿ. ಚರ್ಮವನ್ನು ಹೊಕ್ಕು ದೇಹವನ್ನು ಶಾಶ್ವತವಾಗಿ ಊನಗೊಳಿಸುವ, ಮುಖದ ತುಂಬ ತೂತು ಬೀಳಿಸಿ ವಿಕೃತಗೊಳಿಸುವ, ಕಣ್ಣು ಹೊಕ್ಕು ದೃಷ್ಟಿಯನ್ನೇ ಕಸಿದುಬಿಡುವ ಈ ಅಪಾಯಕಾರಿ ಗುಂಡಿನ ವಿರುದ್ಧ ಸಾಕಷ್ಟು ಪ್ರತಿಭಟನೆ ನಡೆದಿದೆ. ಆದರೂ ಅದರ ಬಳಕೆ ನಿಂತಿಲ್ಲ.

2016ರಲ್ಲಿ ಪೆಲೆಟ್‌ ವಿರುದ್ಧ ಕೂಗು ಜೋರಾದಾಗ, ಭಾರತ ಸರ್ಕಾರ ಅದಕ್ಕೆ ಪರ್ಯಾಯ ರೂಪಿಸಲು ಏಳು ಜನರ ಸಮಿತಿ ರಚಿಸಿತ್ತು. ಈ ಸಮಿತಿ ಪೆಲೆಟ್‌ ಬದಲು ‘ಪಾವಾ ಶೆಲ್’ (ಖಾರದಪುಡಿಯ ಬಾಂಬ್) ಬಳಸುವಂತೆ ಸೂಚಿಸಿತ್ತು. ಇದು ಗಲಭೆಕೋರರನ್ನು ತಕ್ಷಣ ನಿಷ್ಕ್ರಿಯಗೊಳಿಸುತ್ತದೆ, ಆದರೆ ಮಾರಣಾಂತಿಕವಲ್ಲ ಎಂದು ಸಮಿತಿ ಶಿಫಾರಸು ಮಾಡಿತ್ತು.

ಆದರೆ ಈ ಶಿಫಾರಸು, ಕಾಗದಕ್ಕೆ ಸೀಮಿತವಾಯಿತು. ಸಮಿತಿಯ ಸಲಹೆಗಳನ್ನು ಗಾಳಿಗೆ ತೂರಿದ ಭದ್ರತಾ ಪಡೆ, ಕಾಶ್ಮೀರದಲ್ಲಿ ಪೆಲೆಟ್‌ ಬಳಕೆ ಮುಂದುವರಿಸಿತು. ಅದರ ಗುಂಡಿನಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಹೇಳಿದ್ದರೂ, ಗುಂಡೇಟಿನ ತೀವ್ರತೆ ಮಾತ್ರ ಹಾಗೆಯೇ ಉಳಿಯಿತು.

ಪರಿಣಾಮವಾಗಿ, ಕಾಶ್ಮೀರದಲ್ಲಿ ಪೆಲೆಟ್‌ ಗನ್ ಬಳಸುವ ಸಂಗತಿ ವಿಶ್ವ ಸಂಸ್ಥೆಯಲ್ಲೂ ಚರ್ಚೆಯಾಗುವಂತಾಯಿತು. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗದ ನೂತನ ಹೈ ಕಮಿಷನರ್, ಭಾರತ ಸರ್ಕಾರವನ್ನು ಪ್ರಶ್ನಿಸಿದ್ದರು. ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿದ್ದರು. ಆದರೆ ಭಾರತ ಸರ್ಕಾರ, ಇದು ಪೂರ್ವಗ್ರಹಪೀಡಿತ ವರದಿ ಎಂದು ತಳ್ಳಿ ಹಾಕಿತು.

ವಿಶ್ವ ಸಂಸ್ಥೆಯನ್ನು ತಲುಪಿದ ವರದಿ ಸತ್ಯವೆಂದು ಸಾರಲು ಈಗ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. ಮೊದಲನೆಯದಾಗಿ, ಸರ್ಕಾರದ ಪ್ರಕಾರವೇ ಪೆಲೆಟ್‌ ಗನ್ ಬಳಕೆ ‘ತೀರಾ ವಿರಳ ಸಂದರ್ಭ’ದಲ್ಲಿ ಆಗಬೇಕು.

ಎರಡನೆಯದಾಗಿ, ಜನನಿಬಿಡ– ವಸತಿ ಪ್ರದೇಶಗಳಲ್ಲಿ ಅದನ್ನು ಪ್ರಯೋಗಿಸಕೂಡದು. ಆದರೆ, ಮಸರತ್ ನಿಸಾರ್ ಹೇಳುವಂತೆ, ಆಕೆ ಮತ್ತು ಮಗು ಗುಂಡೇಟು ತಿಂದಿದ್ದು ತಮ್ಮದೇ ಮನೆಯ ಬಾಗಿಲಲ್ಲಿ! ‘ಮನೆಯ ಸುತ್ತ ಗಲಭೆ ನಡೆಯುತ್ತಿದೆ, ಮಕ್ಕಳು ಹೆದರುತ್ತವೆ ಎಂದು ಅವನ್ನು ಕರೆದುಕೊಂಡು ಸಂಬಂಧಿಕರ ಮನೆಗೆ ಹೊರಟೆ. ಬಾಗಿಲು ತೆರೆದ ಕೂಡಲೇ ಭದ್ರತಾ ಪಡೆಯ ಗುಂಡು ನಮ್ಮತ್ತ ತೂರಿ ಬಂತು. ತಕ್ಷಣ ಮಗುವಿನ ಮುಖಕ್ಕೆ ಕೈ ಅಡ್ಡ ಹಿಡಿದೆ. ನನ್ನ ಕೈಗೆ ಮೂರು ಗುಂಡುಗಳು ತಗುಲಿ, ನಾಲ್ಕನೆಯ ಗುಂಡು ಮಗುವಿನ ಕಣ್ಣು ಸವರಿಕೊಂಡು ಹೋಯಿತು’ (‘ಫಸ್ಟ್ ಪೋಸ್ಟ್’ ವರದಿ) ಎಂದಿದ್ದಾರೆ ಮಸರತ್.

ಪೆಲೆಟ್‌ ದಾಳಿಯ ಅನಿವಾರ್ಯಗಳೇನೇ ಇರಲಿ; ಅದನ್ನು ಜನಸಾಮಾನ್ಯರು ಇರುವಲ್ಲಿ ಪ್ರಯೋಗಿಸುವುದು, ಅದರಿಂದ ಅವರಿಗೆ ಹಾನಿಯಾಗದಂತೆ ಕ್ರಮ ಕೈಗೊಳ್ಳದಿರುವುದು ಮಾನವ ಹಕ್ಕುಗಳ ಉಲ್ಲಂಘನೆಯಲ್ಲವೇ?

ಇಷ್ಟಕ್ಕೂ ಇದು ಮೊದಲ ಪ್ರಕರಣವೇನೂ ಅಲ್ಲ. ಮನೆ ಮುಂದೆ ಆಡುವ, ಶಾಲೆಗೆ ಹೋಗುವ, ಅಂಗಡಿಯಲ್ಲಿ ಕುಳಿತ ಮಕ್ಕಳು ಕೂಡಾ ಪೆಲೆಟ್‌ ಗುಂಡೇಟು ತಿಂದು ಅಂಗಾಂಗ ಊನಕ್ಕೆ ತುತ್ತಾಗಿದ್ದಾರೆ. ಅಂಕಿ ಅಂಶಗಳ ಪ್ರಕಾರ, 2016ರ ಒಂದು ವರ್ಷದಲ್ಲೇ (ಬುರ್ಹಾನ್ ವಾನಿ ಸಾವಿನ ಸಂದರ್ಭ) 1,065 ಮಂದಿ ಪೆಲೆಟ್‌ ದಾಳಿಗೆ ಒಳಗಾಗಿದ್ದಾರೆ.

ಅದರಲ್ಲಿ 523 ಮಂದಿ 20 ವರ್ಷಕ್ಕಿಂತ ಕೆಳಗಿನವರು ಹಾಗೂ 101 ಮಂದಿ 15ಕ್ಕಿಂತ ಕಡಿಮೆ ವಯಸ್ಸಿನವರು. ಇನ್ನು 370 ಮಂದಿ 20- 25 ವರ್ಷಗಳ ಆಸುಪಾಸಿನವರು. ಈವರೆಗೆ ಪೆಲೆಟ್‌ ಸಂತ್ರಸ್ತರಲ್ಲಿ 4 ವರ್ಷದ ಜುಹ್ರಾ ಮಜೀದ್ ಅತ್ಯಂತ ಕಿರಿಯ ವಯಸಿನವಳಾಗಿದ್ದಳು.

2017ರ ಏಪ್ರಿಲ್ ತಿಂಗಳಲ್ಲಿ, ಈ ವರ್ಷ ಆಗಸ್ಟ್ ತಿಂಗಳಲ್ಲಿ ಕೂಡಾ ಪೆಲೆಟ್‌ ದಾಳಿ ಕಾಶ್ಮೀರವನ್ನು ವಿಚಲಿತಗೊಳಿಸಿತ್ತು. ಈಗ ಹೀಬಾ ಪ್ರಕರಣ, ಕಣಿವೆಯನ್ನು ಮತ್ತೊಮ್ಮೆ ಕೆರಳಿಸಿದೆ.

ಪೆಲೆಟ್‌ ಗುಂಡುಗಳು ಕಾಶ್ಮೀರದ ಮಕ್ಕಳನ್ನು, ಮನುಷ್ಯರನ್ನು ಕೇವಲ ದೈಹಿಕವಾಗಿ ಗಾಸಿಗೊಳಿಸುತ್ತಿಲ್ಲ. ಅವರ ಆತ್ಮವಿಶ್ವಾಸವನ್ನೇ ಕಸಿಯುತ್ತಿವೆ. ಇದರ ಸಂತ್ರಸ್ತರಲ್ಲಿ ಬಹುಪಾಲು ಜನ ಅಮಾಯಕರು. ಅದರಲ್ಲೂ ಮಹಿಳೆಯರು ಕೊನೆಪಕ್ಷ ಪ್ರತಿಭಟನೆಯಲ್ಲೂ
ಕಾಣಿಸಿಕೊಂಡವರಲ್ಲ. ಹಾಗಿದ್ದೂ ಗುಂಡಿನ ದಾಳಿಗೆ ತುತ್ತಾಗಿದ್ದಾರೆ. ಕಣ್ಣು, ಕೈ– ಕಾಲುಗಳು ನಿಷ್ಕ್ರಿಯವಾಗಿ ಸಾವಿಗೆ ಕಾಯುತ್ತಿದ್ದಾರೆ. ಅಷ್ಟೇ ಅಲ್ಲ, ಈ ದಾಳಿಗಳಿಂದ ಕಾಶ್ಮೀರಿಗಳ ಮಾನಸಿಕ ಆರೋಗ್ಯವೂ ಹದಗೆಡುತ್ತಿದೆ.

2016ರಿಂದೀಚೆಗೆ ಕಾಶ್ಮೀರಿ ಯುವಜನರ ಮಾನಸಿಕ ಆರೋಗ್ಯ ದೊಡ್ಡ ಪ್ರಮಾಣದಲ್ಲಿ ಕುಸಿದಿದೆ ಎಂದು ಶ್ರೀನಗರದ ಮಾನಸಿಕ ತಜ್ಞ ಡಾ. ಅರ್ಷದ್ ಹುಸೇನ್ ಹೇಳುತ್ತಾರೆ. ‘ಹಿಂದೆಲ್ಲಾ ಕಾಶ್ಮೀರ ಕಣಿವೆಯಲ್ಲಿ ಭಯದ ಪರಿಣಾಮವಾಗಿ ಮಾನಸಿಕ ಸಮಸ್ಯೆ ಕಾಣಿಸುತ್ತಿತ್ತು, ಈಗಿನ ತಲೆಮಾರು ಭಯವನ್ನು ಮೀರಿದೆ. ಅದು ಕೋಪದಿಂದ ವಿಚಲಿತಗೊಂಡಿದೆ. ವ್ಯವಸ್ಥೆಯ ಮೇಲಿನ ಕೋಪವೇ ಯುವಜನರ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ’ (Scroll.in ವರದಿ) ಅನ್ನೋದು ಡಾ. ಹುಸೇನ್ ವಿವರಣೆ.

ಅವರ ಪ್ರಕಾರ, ಪೆಲೆಟ್‌ ಗನ್ ಬಳಕೆ ಕಾಶ್ಮೀರಿಗಳ ಮನದಲ್ಲಿ ಅಳಿಸಲಾಗದ ಗಾಯ ಮೂಡಿಸಿದೆ. ಇದನ್ನು ಭರಿಸಲಾಗದ ಕನಲಿಕೆ, ಅವರನ್ನು ಮತ್ತಷ್ಟು ಹಿಂಸಾಚಾರಕ್ಕೆ ಪ್ರಚೋದಿಸಬಹುದು.

ಕಾಶ್ಮೀರದ ರಾಜಕಾರಣ, ಪ್ರತ್ಯೇಕತಾ ಹೋರಾಟ, ಕಲ್ಲು ಬೀಸುವ ಬಂಡುಕೋರರು – ಇವೆಲ್ಲವೂ ಪ್ರತ್ಯೇಕ ಚರ್ಚೆ. ಪರ್ಯಾಯ ಕಡೆಗಣಿಸಿ, ಪೆಲೆಟ್‌ ಗುಂಡು ಬಳಸುವುದಕ್ಕೆ ಅವನ್ನು ಸಮರ್ಥನೆಯಾಗಿ ನೀಡಬಾರದು. ಕಾಶ್ಮೀರಿಗಳ ಪ್ರಶ್ನೆ ಎತ್ತಿದ ಕೂಡಲೇ ಹುತಾತ್ಮ ಸೈನಿಕರ ಲೆಕ್ಕ ಮುಂದಿಡುವುದು ಅಮಾನುಷ ತಂತ್ರ. ಹಾಗೆಯೇ; ಅಮಾಯಕ ಕಾಶ್ಮೀರಿಗಳ ಪರ ನಿಲ್ಲುವವರೆಲ್ಲ ಸೇನೆಯ ವಿರೋಧಿಗಳು ಎಂದು ಬಿಂಬಿಸುವುದು ಮತ್ತೊಂದು ಕೊಳಕು ಚಿಂತನೆ.

ದೂರದ ಕಾಶ್ಮೀರದ ಪುಟ್ಟ ಮಗುವಿನ ಒಂಟಿ ಕಣ್ಣು ನಮ್ಮನ್ನು ಎಷ್ಟು ಕಾಡುತ್ತದೋ ಬಿಡುತ್ತದೋ… ಕೊನೆಪಕ್ಷ ಇಂಥಾ ಸಮರ್ಥನೆಗೆ ಇಳಿಯದಿರುವಷ್ಟು ಮಾನವೀಯತೆ ನಮ್ಮಲ್ಲಿ ಉಳಿದರೆ ಸಾಕು. ಏಕೆಂದರೆ, ನಮ್ಮಂಥ ಕೋಟ್ಯಂತರ ಜನಸಾಮಾನ್ಯರ ಒಳ ಬಯಕೆಯೇ ಕಾಶ್ಮೀರದಲ್ಲಿ ಸರ್ಕಾರದ ನಡೆಗಳನ್ನು ನಿರ್ದೇಶಿಸುತ್ತಿರುವುದು.

ಚೇತನಾ ತೀರ್ಥಹಳ್ಳಿ
ಚೇತನಾ ತೀರ್ಥಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT